ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.12.22 - "ಜಕರೀಯಾ, ಭಯ ಪಡಬೇಡ! ನಿನ್ನ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾರೆ"

 ಮೊದಲನೇ ವಾಚನ: ನ್ಯಾಯಸ್ಥಾಪಕರು 13:2-7, 24-25

ಚೊರ್ಗಾ ಎಂಬ ಊರಲ್ಲಿ ದಾನ್ ಕುಲದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿ ಬಂಜೆಯಾಗಿದ್ದುದರಿಂದ ಅವನಿಗೆ ಮಕ್ಕಳಿರಲಿಲ್ಲ. ಒಂದಾನೊಂದು ದಿನ ಸರ್ವೇಶ್ವರನ ದೂತ ಆಕೆಗೆ ಪ್ರತ್ಯಕ್ಷನಾಗಿ, "ಇಗೋ, ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು  ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಈ ಕಾರಣ ಜಾಗರೂಕತೆಯಿಂದಿರು; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು. ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇ ಬಾರದು. ಅವನು ಹುಟ್ಟಿನಿಂದ ದೇವರಿಗೆ ಪ್ರತಿಷ್ಠಿತನಾಗುವನು. ಅವನು ಇಸ್ರಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವುದಕ್ಕೆ ಪ್ರಾರಂಭಿಸುವನು," ಎಂದನು. ತರುವಾಯ ಆ ಸ್ತ್ರೀ ತನ್ನ ಗಂಡನ ಬಳಿಗೆ ಹೋಗಿ, "ಒಬ್ಬ ದೇವಪುರುಷ ನನ್ನ ಹತ್ತಿರ ಬಂದಿದ್ದನು. ಅವನ ರೂಪ ದೇವದೂತನ ರೂಪದಂತೆ ಘನಗಂಭೀರವಾಗಿತ್ತು. 'ಎಲ್ಲಿಂದ ಬಂದಿರಿ? ಎಂದು ನಾನು ಅವನನ್ನು ಕೇಳಲಿಲ್ಲ; ಅವನು ತನ್ನ ಹೆಸರನ್ನು ತಿಳಿಸಲಿಲ್ಲ. ಆದರೆ ಆತ ನನಗೆ, 'ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಆದ್ದರಿಂದ ನೀನು ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು. ಯಾವ ನಿಷಿದ್ಧಾಹಾರವನ್ನೂ ಮುಟ್ಟಬೇಡ; ಆ ಮಗು ಹುಟ್ಟಿದಂದಿನಿಂದ ಸಾಯುವವರೆಗೆ ಪ್ರತಿಷ್ಠಿತನಾಗಿರುವನು.' ಎಂದು ಹೇಳಿದನು," ಎಂದಳು. ಆ ಮಹಿಳೆ ಒಬ್ಬ ಮಗನನ್ನು ಹೆತ್ತು ಅವನಿಗೆ 'ಸಂಸೋನ' ಎಂದು ಹೆಸರಿಟ್ಟಳು. ಹುಡುಗ ಬೆಳೆದು ದೊಡ್ಡವನಾದ. ಸರ್ವೇಶ್ವರನ ಆಶೀರ್ವಾದ ಅವನ ಮೇಲಿತ್ತು. ಇದಲ್ಲದೆ, ಅವನು ಚೊರ್ಗಕ್ಕೂ ಎಷ್ಟಾವೋಲಿಗೂ ಮದ್ಯದಲ್ಲಿರುವ ದಾನ್ ಕುಲದ ಪಾಳೆಯದಲ್ಲಿದ್ದಾಗ ಸರ್ವೇಶ್ವರನ ಆತ್ಮ ಅವನನ್ನು ಚೇತನಗೊಳಿಸ ತೊಡಗಿತು.

ಕೀರ್ತನೆ: 71:3-4, 5-6, 16-17

ಶ್ಲೋಕ: ನಿನ್ನ ಗುಣಗಾನ ನನ್ನ ಬಾಯ್ತುಂಬ ನಿನ್ನ ಘೋಷಣೆ ನನಗೆ ದಿನದಾದ್ಯಂತ.

 ಶುಭಸಂದೇಶ: ಲೂಕ 1:5-25

ಜುದೇಯ ಪ್ರಾಂತ್ಯದ ಅರಸನಾಗಿದ್ದ ಹೆರೋದನ ಕಾಲದಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಇವನ ಪತ್ನಿಯ ಹೆಸರು ಎಲಿಜಬೇತ್. ಇವಳೂ ಆರೋನನ ಯಾಜಕವಂಶಕ್ಕೆ ಸೇರಿದವಳು. ದಂಪತಿಗಳಿಬ್ಬರೂ ದೇವರ ದೃಷ್ಟಿಯಲ್ಲಿ ಭಯಭಕ್ತಿಯುಳ್ಳವರಾಗಿದ್ದರು. ಸರ್ವೇಶ್ವರನ ವಿಧಿ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದರು. ಎಲಿಜಬೇತಳು ಬಂಜೆ ಆದುದರಿಂದ ಅವರಿಗೆ ಮಕ್ಕಳಿರಲಿಲ್ಲ. ಅಲ್ಲದೆ ಅವರಿಬ್ಬರೂ ಮುದುಕರಾಗಿದ್ದರು. ಒಮ್ಮೆ ತನ್ನ ವರ್ಗದ ಸರದಿ ಬಂದಾಗ ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕ ವಿಧಿಯನ್ನು ನೆರವೇರಿಸುತ್ತಿದ್ದನು. ಮಹಾದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಧೂಪಾರತಿಯನ್ನು ಅರ್ಪಿಸುವ ಸರದಿಗೆ, ಯಾಜಕರ ಸಂಪ್ರದಾಯದ ಪ್ರಕಾರ, ಚೀಟು ಹಾಕಿದಾಗ ಅದು ಜಕರೀಯನ ಪಾಲಿಗೆ ಬಂದಿತು. ಅಂತೆಯೇ,  ಅವನು ಧೂಪಾರತಿಯನ್ನು ಅರ್ಪಿಸುತ್ತಿದ್ದಾಗ ಭಕ್ತಸಮೂಹವು ಹೊರಗೆ ನಿಂತು ಪ್ರಾರ್ಥನೆ ಮಾಡುತ್ತಿತ್ತು. ಆಗ ಧೂಪಪೀಠದ ಬಲಗಡೆ ಅವನಿಗೆ ದೇವದೂತನೊಬ್ಬನು ಪ್ರತ್ಯಕ್ಷನಾದನು. ಅವನನ್ನು ಕಾಣುತ್ತಲೇ ತತ್ತರಗೊಂಡ ಜಕರೀಯನು ಭಯಭ್ರಾಂತನಾದನು. ದೂತನು ಅವನಿಗೆ, "ಜಕರೀಯಾ, ಭಯಪಡಬೇಡ! ನಿನ್ನ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾರೆ. ನಿನ್ನ ಪತ್ನಿ ಎಲಿಜಬೇತಳಲ್ಲಿ ನಿನಗೆ ಒಂದು ಗಂಡು ಮಗು ಹುಟ್ಟುವುದು. ನೀನು ಅವನಿಗೆ 'ಯೊವಾನ್ನ' ಎಂದು ನಾಮಕರಣ ಮಾಡಬೆಕು. ಆ ಮಗುವಿನ ಜನನವು ನಿಮಗೆ ಹರ್ಷಾನಂದವನ್ನು ಉಂಟುಮಾಡುವುದು; ಬಹು ಜನಕ್ಕೆ ಸಂತಸವನ್ನು ತರುವುದು. ಸರ್ವೇಶ್ವರನ ದೃಷ್ಟಿಯಲ್ಲಿ ಅವನು ಮಹಾತ್ಮನಾಗುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಸೇವಿಸನು; ತಾಯಿಯ ಉದರದಿಂದಲೇ ಪವಿತ್ರಾತ್ಮಭರಿತನಾಗುವನು. ಇಸ್ರಯೇಲರಲ್ಲಿ ಅನೇಕರನ್ನು ಅವರ ದೇವರಾದ ಸರ್ವೇಶ್ವರನ ಕಡೆಗೆ ಮರಳಿ ತಿರುಗಿಸುವನು. ಎಲೀಯನಂತೆ ಶಕ್ತಿಪ್ರಭಾವಗಳಿಂದ ಕೂಡಿದವನಾಗಿ ಪ್ರಭುವಿನ ಮುಂದೂತನಾಗುವನು.  ತಂದೆ ಮಕ್ಕಳನ್ನು ಪುನಃ ಒಂದಾಗಿಸುವನು. ಸತ್ಪರುಷರ ಸನ್ಮಾರ್ಗಕ್ಕೆ ಅವಿಧೇಯರು ಹಿಂದಿರುಗುವಂತೆ ಮಾಡುವನು. ಹೀಗಾಗಿ ಪ್ರಭುವಿಗೆ ಯೋಗ್ಯ ಪ್ರಜೆಯನ್ನು ಸಿದ್ಧಗೊಳಿಸುವನು," ಎಂದನು. ಅದಕ್ಕೆ ಜಕರೀಯನು, "ಈ ಮಾತು ನಿಜವಾಗುವುದೆಂದು ನಾನು ತಿಳಿಯುವುದಾದರೂ ಹೇಗೆ? ನಾನೋ ಮುದುಕ; ನನ್ನ ಪತ್ನಿಗೂ ಮುಪ್ಪು," ಎಂದನು. ಆಗ ದೇವದೂತನು, "ನಾನು ದೇವರ ಸನ್ನಿಧಿಯಲ್ಲಿ ಸೇವೆಮಾಡುವ  ಗಬ್ರಿಯೇಲನು; ಈ ಶುಭಸಮಾಚಾರವನ್ನು ನಿನಗೆ ತಿಳಿಸುವುದಕ್ಕಾಗಿ ದೇವರ ಅಪ್ಪಣೆಯ ಪ್ರಕಾರ ಬಂದವನು. ನಾನು ತಿಳಿಸಿದ ಸಂದೇಶವು ಸಕಾಲದಲ್ಲಿ ನೆರವೇರುವುದು. ಆದರೆ ನೀನು ಅದನ್ನು ನಂಬದೆ ಹೋದ ಕಾರಣ ಅದೆಲ್ಲಾ ಈಡೇರುವ ತನಕ ಮಾತನಾಡಲಾಗದೆ ಮೂಕನಾಗಿರುವೆ," ಎಂದನು. ಇತ್ತ ಭಕ್ತಜನರು ಜಕರೀಯನಿಗಾಗಿ ಎದುರು ನೋಡುತ್ತಾ ದೇವಾಲಯದಲ್ಲಿ ಅವನು ಇಷ್ಟು ತಡಮಾಡಲು ಕಾರಣವೇನಿರಬಹುದೆಂದು ಆಶ್ಚರ್ಯಪಡುತ್ತಿದ್ದರು. ಅಷ್ಟರಲ್ಲಿ ಜಕರೀಯನು ಹೊರಗೆ ಬಂದು ಮಾತನಾಡಲೆತ್ನಿಸಿದರೂ ಅವನ ಬಾಯಿಂದ ಮಾತೇ ಹೊರಡಲಿಲ್ಲ. ಬರೀ ಕೈಸನ್ನೆ ಮಾಡುತ್ತಿದ್ದ ಅವನಿಗೆ ದೇವಾಲಯದಲ್ಲಿ ಏನೋ ದಿವ್ಯದರ್ಶನ ಆಗಿರಬೇಕೆಂದು ಜನರು ಅರಿತುಕೊಂಡರು. ಅಂದಿನಿಂದ ಅವನು ಮೂಕನಾಗಿಯೇ ಇದ್ದನು. ತನ್ನ ಯಾಜಕ ಸೇವಾಸರದಿಯು ಮುಗಿದ ನಂತರ ಜಕರೀಯನು ಮನೆಗೆ ಹಿಂದಿರುಗಿ ಹೋದನು. ಕೆಲವು ದಿನಗಳಾದ ಬಳಿಕ ಅವನ ಪತ್ನಿ ಎಲಿಜಬೇತಳು ಗರ್ಭಿಣಿಯಾಗಿ, ಐದು ತಿಂಗಳು ಮನೆಯಲ್ಲಿ ಮರೆಯಾಗಿದ್ದಳು. "ಕಟ್ಟಕಡೆಗೆ ಸರ್ವೇಶ್ವರ ನನಗೆ ಕರುಣೆ ತೋರಿದ್ದಾರೆ; ಜನರ ನಡುವೆ ನನಗಿದ್ದ ಅವಮಾನವನ್ನು ತೊಲಗಿಸಿದ್ದಾರೆ," ಎಂದುಕೊಳ್ಳುತ್ತಿದ್ದಳು.

No comments:

Post a Comment