ಮೊದಲನೇ ವಾಚನ: ಪರಮಗೀತೆ 2:8-14
ಅಗೋ, ನನ್ನ ಕಾಂತನ ಸಪ್ಪಳ! ಹಾರಿ ಬರುತಿಹನು ಬೆಟ್ಟಗಳ ಮೇಲೆ, ಜಿಗಿದು ಬರುತಿಹನು ಗುಡ್ಡಗಳ ಮೇಲೆ. ನನ್ನ ಪ್ರಿಯನು ಇಹನು ಜಿಂಕೆಯಂತೆ, ಎಳೆಯ ಹುಲ್ಲಿನಂತೆ. ಇಗೋ, ನಿಂತಿಹನು ಗೋಡೆಯ ಹಿಂಭಾಗದಲೆ, ದೃಷ್ಟಿಸಿ ನೋಡುತಿಹನು ಕಿಟಕಿಗಳಲಿ, ಇಣುಕು ಹಾಕುತಿಹನು ಜಾಲಾಂತರಗಳಲಿ. ನನ್ನ ನಲ್ಲನು ನನ್ನೊಡನೆ ಮಾತಾಡಿ ಹೀಗೆಂದನು: 'ಎದ್ದು ಬಾ, ಪ್ರಿಯತಮೆ, ಬಾ ನನ್ನೊಂದಿಗೆ, ಸುಂದರಿಯೇ, ಇಗೋ, ಚಳಿಗಾಲ ಕಳೆಯಿತು, ಮಳೆಗಾಲ ಮುಗಿಯಿತು. ಧರೆಯಲ್ಲೆಲ್ಲ ಹೂಗಳು ಅರಳಿವೆ, ನಲಿದು ಹಾಡುವ ಕಾಲ ಬಂದಿದೆ, ಬೆಳವಕ್ಕಿಯ ಕೂಗು ನಾಡಿನಲ್ಲಿ ಕೇಳಿಸುತ್ತಿದೆ; ಅಂಜೂರದ ಕಾಯಿಗಳು ಹಣ್ಣಾಗಿವೆ, ದ್ರಾಕ್ಷಾಬಳ್ಳಿಗಳು ಹೂ ಬಿಟ್ಟಿವೆ, ಅದರ ಪರಿಮಳ ಹರಡುತ್ತಿದೆ." ಎದ್ದು ಬಾ, ನನ್ನ ಪ್ರೆಯಸಿಯೇ, ಬಾ ನನ್ನೂಂದಿಗೆ, ಸುಂದರಿಯೇ. ಬಂಡೆಯ ಬಿರುಕುಗಳಲ್ಲಿ, ಸಂದುಗಳ ಮರೆಯಲ್ಲಿ ತಂಗಿರುವ ಪಾರಿವಾಳವೇ ಬಾ. ನಿನ್ನ ರೂಪವನು ನನಗೆ ಕಾಣಿಸು, ನಿನ್ನ ದನಿಯನು ನನಗೆ ಕೇಳಿಸು. ನಿನ್ನ ದನಿ ಎನಿತೋ ಇಂಪು!ನಿನ್ನ ರೂಪ ಎನಿತೋ ತಂಪು!
ಕೀರ್ತನೆ: 33:2-3, 11-12, 20-21
ಶ್ಲೋಕ: ಸಜ್ಜನರೇ, ಮಾಡಿರಿ ಪ್ರಭುವಿನ ಗುಣಗಾನ, ಹಾಡಿರಿ ಆತನಿಗೆ ಕೀರ್ತನೆಯನು ನೂತನ.
ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ|
ಕೀರ್ತಿಸಿ ದಶತಂತಿ ವೀಣೆಯನು ಭಾರಿಸುತ ||
ನೂತನ ಕೀರ್ತನೆಯನು ಆತನಿಗೆ ಹಾಡಿರಿ|
ಇಂಪಾಗಿ ಭಾರಿಸಿ, ಸೊಂಪಾಗಿ ಭಜಿಸಿರಿ||
ಪ್ರಭುವಿನ ಯೋಜನೆ ಶಾಶ್ವತ|
ಆತನ ಸಂಕಲ್ಪ ಅನವರತ||
ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ|
ಸಜ್ಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ||
ಕಾದಿದೆ ಎನ್ನ ಮನ ಪ್ರಭುವಿಗಾಗಿ|
ಆತನಿಹನು ಎನಗೆ ಗುರಾಣಿಯಾಗಿ||
ನೆಮ್ಮದಿಯಿಂದಿದೆ ಎನ್ನ ಮನ ಆತನಲಿ|
ನಂಬಿರುವೆನು ಆತನ ಶ್ರೀ ನಾಮದಲಿ||
ಅಲ್ಲೆಲೂಯ, ಅಲ್ಲೆಲೂಯ!
ಮೋಕ್ಕರಾಜ್ಯದ ಬಾಗಿಲನ್ನು ತೆರೆಯುವ ಓ ದಾವೀದನ ಬೀಗದಕೈಗಳೇ, ಕಾರ್ಗತ್ತಲೆಯ ಸೆರೆಮನೆಯಲ್ಲಿ ಬಂಧಿತರಾದವರನ್ನು ಬಿಡುಗಡೆ ಮಾಡಲು ಬನ್ನಿ !
ಅಲ್ಲೆಲೂಯ!
ಶುಭಸಂದೇಶ: ಲೂಕ 1:39-45
ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ, ಹರ್ಷೋದ್ಗಾರದಿಂದ ಹೀಗೆಂದಳು: "ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು."
No comments:
Post a Comment