ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

15.12.22

ಮೊದಲನೆಯ ವಾಚನ: ಪ್ರವಾದಿ ಯೆಶಾಯ 54:1-10

ಆನಂದ ಗೀತೆಯನು ಹಾಡು ಹೆರದವಳೇ, ಬಂಜೆಯಾಗಿದ್ದವಳೇ; ಉಲ್ಲಾಸದಿಂದ ಅರಚು, ಬೇನೆಯನು ಅನುಭವಿಸದವಳೇ. ‘ಗಂಡನುಳ್ಳವಳಿಗಿಂತ ಹೆಚ್ಚು ಮಕ್ಕಳನ್ನು ಹೆರುವೆ’ ಎಂದು ಹೇಳುತ್ತಾರೆ ಸರ್ವೇಶ್ವರಸ್ವಾಮಿ ನಿನಗೆ. ವಿಸ್ತರಿಸು ನಿನ್ನ ಗುಡಾರವನು, ಚಾಚು ಮುಂದಕೆ ಗುಡಾರದ ಬಟ್ಟೆಗಳನು, ಹೆದರಬೇಡ; ಉದ್ದಮಾಡು ಹಗ್ಗಗಳನು, ಬಲಪಡಿಸು ಗೂಟಗಳನು. ಏಕೆಂದರೆ ಹಬ್ಬಿಕೊಳ್ಳುವೆ ನೀನು ಎಡಬಲದೊಳು ಎಲ್ಲೆಲ್ಲು, ವಶಮಾಡಿಕೊಳ್ಳುವರು ನಿನ್ನ ಸಂತಾನದವರು ಜನಾಂಗಗಳನು. ಜನಭರಿತವಾಗುವಂತೆ ಮಾಡುವರು ಪಾಳುಬಿದ್ದ ಪಟ್ಟಣಗಳನು. ಅಂಜಬೇಡ, ನಿನಗಾಗುವುದಿಲ್ಲ ಅವಮಾನ ನಾಚಬೇಡ, ನಿನಗಾಗದು ಆಶಾಭಂಗ. ಮರೆವೆ ಯೌವನದಲ್ಲಿ ನಿನಗಾದ ಅವಮಾನವನು ವೈಧವ್ಯದಲ್ಲಾದ ನಿಂದೆ ನೆನಪಿಗೆ ಬಾರದಿನ್ನು. ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ. ಗಂಡಬಿಟ್ಟು ಮನನೊಂದಿರುವ ಪತ್ನಿ ನೀನು ಹೌದು, ತ್ಯಜಿಸಲಾದ ಯೌವನದ ಪತ್ನಿ ನೀನು. ಸರ್ವೇಶ್ವರ ಕನಿಕರಿಸಿ ಕರೆದಿಹನು ನಿನ್ನನು. ಆ ನಿನ್ನ ದೇವರ ನುಡಿಯಿದು: ಬಿಟ್ಟಿದ್ದೆನು ನಿನ್ನನು ಕ್ಷಣಮಾತ್ರ ಪ್ರೀತಿಯಿಂದ ಸೇರಿಸಿಕೊಳ್ಳುವೆ ಹತ್ತಿರ. ತಟ್ಟನೆ ಉಕ್ಕಿ ಹರಿಯುವ ಕೋಪದಿಂದ ಕ್ಷಣಮಾತ್ರ ಮುಖಮರೆಸಿಕೊಂಡೆ ನಿನ್ನಿಂದ ಕರುಣಿಸುವೆನು ನಿನ್ನನು ಶಾಶ್ವತ ಕೃಪೆಯಿಂದ.” ಇಂತೆನ್ನುತಿಹನು ನಿನ್ನ ಉದ್ಧಾರಕ ಸರ್ವೇಶ್ವರ. ಶಪಥಮಾಡಿದೆ ನಾನು ನೋಹನ ದಿನದಂದು: ಜಲಪ್ರಳಯವು ಭೂಮಿಯನು ಇನ್ನು ಮುಳುಗಿಸದೆಂದು. ಶಪಥಮಾಡುವೆ ಈಗ ‘ ಕೋಪಮಾಡೆನು’ ಎಂದು ‘ಇನ್ನು ನಿನ್ನನು ಗದರಿಸೆನು’ ಎಂದು. ಬಿರುಕುಬಿಟ್ಟಾವು ಬೆಟ್ಟಗಳು, ಕದಲಿಯಾವು ಗುಡ್ಡಗಳು, ನನ್ನ ಅಚಲ ಪ್ರೀತಿಯಾದರೊ ಬಿಟ್ಟುಹೋಗದು ನಿನ್ನನು. ಶಾಂತಿಸಮಾಧಾನದ ನನ್ನೀ ಒಪ್ಪಂದವು ಕದಲದು. ನಿನ್ನ ಮೇಲೆ ಕರುಣೆಯಿಟ್ಟಿರುವ ಸರ್ವೇಶ್ವರನ ನುಡಿಯಿದು.”

ಕೀರ್ತನೆ: 30: 1-3, 4-5, 10-12
ಶ್ಲೋಕ: ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ಧರಿಸಿದೆ.

ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ಧರಿಸಿದೆ|
ಶತ್ರುಗಳನ್ನು ಕುರಿತು ಹಿಗ್ಗದಂತೆ ಮಾಡಿದೆ||
ಪಾತಾಳದಿಂದೆನ್ನ ಪ್ರಾಣವನು ಮೇಲೆತ್ತಿದೆ |
ಎನ್ನ ಬದುಕಿಸಿದೆ ದೇವಾ, ಸಮಾಧಿ ಸೇರಗೊಡದೆ||

ಭಕ್ತರೇ, ಸಂಕೀರ್ತಿಸಿರಿ ಪ್ರಭುವನು, | ಮಾಡಿರಿ ಆತನ ನಾಮಸ್ಮರಣೆಯನು||
ಆತನ ಕೋಪ ಕ್ಷಣಮಾತ್ರ| ಆತನ ಕೃಪೆ ಜೀವನ ಪರಿಯಂತ||
ಇರುಳು ಬರಲು ಇರಬಹುದು ಅಳಲು|
ನಲಿವು ಉಲಿವುದು ಹಗಲು ಹರಿಯಲು||

“ಆಲಿಸು ಪ್ರಭು, ಕರುಣಿಸು, ನೆರವಾಗು ಬೇಗ”|
ಎಂದು ಪ್ರಭು ನಾನಿನ್ನನು ಪ್ರಾರ್ಥಿಸಿದಾಗ||
ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ|
ಎನ್ನ ಗೋಣಿತಟ್ಟನು ಹರ್ಷಾಭರಣವಾಗಿಸಿದೆ||
ಹೇ ಪ್ರಭೂ, ಎನ್ನ ದೇವ, ನಿನಗೆನ್ನ ಅನಂತ ಧನ್ಯವಂದನೆ||

ಶುಭಸಂದೇಶ: ಲೂಕ 7:24-30

ಆ ಕಾಲದಲ್ಲಿ ಯೇಸು ಜನಸಮೂಹಕ್ಕೆ ಯೊವಾನ್ನನನ್ನು ಕುರಿತು ಹೀಗೆಂದರು : " ಬೆಂಗಾಡಿನಲ್ಲಿ ನೀವು ಏನನ್ನು ನೋಡಲೆಂದು ಹೋದಿರಿ? ಗಾಳಿಗೆ ಓಲಾಡುವ ಜೊಂಡನ್ನೇ? ಇಲ್ಲವಾದರೆ ಮತ್ತೇನನ್ನು ನೋಡಹೋದಿರಿ? ನಯವಾದ ರೇಷ್ಮೆ ಉಡುಪನ್ನು ಧರಿಸಿರುವ ವ್ಯಕ್ತಿಯನ್ನೇ? ಅಂಥ ಶೃಂಗಾರವಾದ ಉಡುಗೆ ತೊಡುಗೆಯನ್ನು ಧರಿಸಿ, ಭೋಗಜೀವನ ನಡೆಸುವವರು ಅರಮನೆಗಳಲ್ಲಿರುತ್ತಾರಷ್ಟೆ ! ಹಾಗಾದರೆ ನೀವು ಇನ್ನೇನನ್ನು ನೋಡಲು ಹೋದಿರಿ? ಪ್ರವಾದಿಯನ್ನೇ? ಹೌದು, ಪ್ರವಾದಿಗಿಂತಲೂ ಶ್ರೇಷ್ಠನಾದವನನ್ನು ನೋಡಿದಿರಿ, ಎಂಬುದು ನಿಜ. " ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ ಕಳುಹಿಸುವೆನು. ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ದಗೊಳಿಸುವನು, -- ಎಂದು ಪವಿತ್ರಗ್ರಂಥದಲ್ಲಿ ಪ್ರಸ್ತಾಪಿಸಿರುವುದು ಈ ಯೊವಾನ್ನನನ್ನು ಕುರಿತೇ. ಮಾನವನಾಗಿ ಜನಿಸಿದ ಯಾವನೂ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಆದರೂ ದೇವರ ಸಾಮ್ರಾಜ್ಯದಲ್ಲಿ ಕನಿಷ್ಟನು ಕೂಡ ಅವನಿಗಿಂತ ಶ್ರೇಷ್ಠನೇ ಸರಿ, " ಎಂದರು. ಯೊವಾನನ್ನ ಉಪದೇಶವನ್ನು ಜನಸಾಮಾನ್ಯರೆಲ್ಲರೂ ಕೇಳಿದರು. ಅವರು, ವಿಶೇಷವಾಗಿ ಸುಂಕದವರು, ದೇವಯೋಜನೆಗೆ ತಲೆಬಾಗಿ ಆತನಿಂದ ಸ್ನಾನದೀಕ್ಷೆಯನ್ನು ಪಡೆದರು. ಆದರೆ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು ತಮ್ಮನ್ನು ಕುರಿತಾದ ದೈವೇಚ್ಛೆಯನ್ನು ಅಲ್ಲಗಳೆದು, ಯೊವಾನ್ನನಿಂದ ಸ್ನಾನದೀಕ್ಷೆಯನ್ನು ಪಡೆಯದೆ ಹೋದರು.

No comments:

Post a Comment