ಮೊದಲನೆಯ ವಾಚನ: ಯೆಶಾಯ 56:1-3, 6-8
ಸರ್ವೇಶ್ವರನಸ್ವಾಮಿ ಹೇಳುವುದು ಏನೆಂದರೆ: ನ್ಯಾಯವನ್ನು ಅನುಸರಿಸಿರಿ. ನೀತಿಯನ್ನು ಆಚರಿಸಿರಿ. ಏಕೆಂದರೆ ನಾ ನೀಡುವ ಮುಕ್ತಿಯು ಬೇಗನೆ ಬರುವುದು; ನಾನು ತರುವ ಸತ್ಸಂಬಂಧವು ಕೂಡಲೆ ಬೆಳಗುವುದು. ಅದನ್ನು ಕೈಗೊಳ್ಳುವವನು ಧನ್ಯನು! ಅದನ್ನು ಸುಭದ್ರವಾಗಿ ಕಾದಿರಿಸಿಕೊಂಡು ಸಬ್ಬತ್ ದಿನವನ್ನು ಹೊಲೆಮಾಡದೆ ಆಚರಿಸುತ್ತಾ ಬರುವವನು ಹಾಗೂ ಯಾವ ಕೇಡಿಗೂ ಕೈ ಹಾಕದವನು ಭಾಗ್ಯವಂತನು! ಸರ್ವೇಶ್ವರನನ್ನು ಅವಲಂಬಿಸುವ ವಿದೇಶಿಯನು, 'ಸರ್ವೇಶ್ವರ ತನ್ನ ಜನರಿಂದ ನನ್ನನ್ನು ಖಂಡಿತವಾಗಿ ಬಹಿಷ್ಕರಿಸುವನು' ಎಂದು ಹೇಳದಿರಲಿ. ಅನ್ಯದೇಶಿಯರಲ್ಲಿ ಯಾರು 'ಸರ್ವೇಶ್ವರ' ಎಂದು ನನ್ನನ್ನು ಅವಲಂಬಿಸಿ, ಪೂಜಿಸಿ, ನನ್ನ ನಾಮವನ್ನು ಪ್ರೀತಿಸಿ, ನನಗೆ ದಾಸನಾಗಿ, ಸಬ್ಬತ್ ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ, ಜೊತೆಗೆ ನನ್ನ ಒಡಂಬಡಿಕೆಯನ್ನು ಸುಭದ್ರವಾಗಿ ಪಾಲಿಸುತ್ತಾರೋ, ಅವರೆಲ್ಲರನ್ನು ನನ್ನ ಪವಿತ್ರ ಪರ್ವತಕ್ಕೆ ಬರಮಾಡುವೆನು; ನನ್ನ ಪ್ರಾರ್ಥನಲಯದಲ್ಲಿ ಅವರನ್ನು ಆನಂದಗೊಳಿಸುವೆನು; ನನ್ನ ಬಲಿಪೀಠದ ಮೇಲೆ ಅವರು ನೀಡುವ ದಹನಬಲಿಗಳನ್ನೂ ಅರ್ಪಣೆಗಳನ್ನೂ ಸಂತೋಷದಿಂದ ಸ್ವೀಕರಿಸುವೆನು. ನನ್ನ ಆಲಯ ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು. ಇಸ್ರಯೇಲಿನ ಸೆರೆಹೋದ ಜನರನ್ನು ಬರಮಾಡಿಕೊಳ್ಳುವ ದೇವರಾದ ಸರ್ವೇಶ್ವರ, " ನಾನು ಕೂಡಿಸಿಕೊಂಡ ಇಸ್ರಾಯೇಲ ಜನರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು " ಎಂದಿದ್ದಾರೆ.
ಕೀರ್ತನೆ 67:1-2, 3-4, 6-7
ಶ್ಲೋಕ: ನಿನ್ನ ಕೀರ್ತಿಸಲಿ ದೇವಾ, ಜನರು, ಸಂಕೀರ್ತಿಸಲಿ ಅವರೆಲ್ಲರೂ.
ಹರಸು ದೇವಾ, ನಮ್ಮನ್ನಾಶೀರ್ವದಿಸು|
ನಿನ್ನ ಮುಖಕಾಂತಿಯಿಂದೆಮ್ಮನು ಬೆಳಗಿಸು||
ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ|
ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತೆಗೆಲ್ಲ||
ನಿನ್ನ ಕೀರ್ತಿಸಲಿ ದೇವಾ, ಜನರು|
ಸಂಕೀರ್ತಿಸಲಿ ಅವರೆಲ್ಲರೂ||
ನ್ಯಾಯದ ಪ್ರಕಾರ ತೀರ್ಪಿಡುತಿ ಜನತೆಗೆ|
ಆದರ್ಶ ನೀಡುತಿ ಜಗದ ರಾಷ್ಟ್ರಗಳಿಗೆ|
ಹರ್ಷಾನಂದವಾಗಲಿ ಜನಾಂಗಗಳಿಗೆ||
ಇತ್ತನೆಮ್ಮ ದೇವನು ಆಶೀರ್ವಾದವನು|
ಕೊಟ್ಟಿತ್ತೆಮ್ಮ ಭೂಮಿಯು ಸಂತುಷ್ಟ ಬೆಳೆಯನು||
ನಮ್ಮೆಲ್ಲರನು ದೇವನು ಹರಸಲಿ|
ಎಲ್ಲೆಡೆ ಆತನ ಭಯಭಕ್ತಿಯಿರಲಿ||
ಶುಭಸಂದೇಶ: ಯೊವಾನ್ನ 5:33-36
ಆ ಕಾಲದಲ್ಲಿ ಯೇಸು ಯೆಹೂದ್ಯರಿಗೆ ಹೀಗೆಂದರು: ನೀವೇ ಯೊವಾನ್ನನ ಬಳಿಗೆ ದೂತರನ್ನು ಕಳುಹಿಸಿದ್ದಿರಿ. ಆತನು ಸತ್ಯವನ್ನು ಕುರಿತು ಸಾಕ್ಷಿ ಹೇಳಿದ್ದಾನೆ. ನನಗೆ ಮಾನವಸಾಕ್ಷಿ ಬೇಕೆಂದು ಅಲ್ಲ ; ಆದರೆ ಇದನ್ನೆಲ್ಲಾ ನಿಮ್ಮ ಉದ್ಧಾರಕ್ಕೆಂದು ನಾನು ಹೇಳುತ್ತಿದ್ದೇನೆ. ಯೊವಾನ್ನನು ಉಜ್ವಲವಾಗಿ ಉರಿಯುವ ದೀಪದಂತೆ ಇದ್ದನು. ಆ ಬೆಳಕಿನಲ್ಲಿ ನೀವು ಸ್ವಲ್ಪಕಾಲ ನಲಿದಾಡಿದಿರಿ. ಯೊವಾನ್ನನು ನೀಡಿದ ಸಾಕ್ಷ್ಯಕ್ಕಿಂತಲೂ ಮಿಗಿಲಾದ ಸಾಕ್ಷ್ಯ ನನಗುಂಟು : ನಾನು ಸಾಧಿಸುತ್ತಿರುವ ಸುಕೃತ್ಯಗಳೇ. ಅಂದರೆ, ಪಿತನು ನನಗೆ ಮಾಡಿಮುಗಿಸಲು ಕೊಟ್ಟ ಕಾರ್ಯಗಳೇ ನಾನು ಪಿತನಿಂದ ಬಂದವನೆಂದು ನನ್ನ ಪರವಾಗಿ ಸಾಕ್ಷಿಕೊಡುತ್ತವೆ.
No comments:
Post a Comment