ಮೊದಲನೇ ವಾಚನ: 2 ತಿಮೊಥೇಯನಿಗೆ 1:1-8
ನನ್ನ ಪ್ರೀತಿಯ ಪುತ್ರ ತಿಮೊಥೇಯನಿಗೆ ಪೌಲನು ಬರೆಯುವ ಪತ್ರ. ಕ್ರಿಸ್ತಯೇಸುವಿನಲ್ಲಿರುವವರಿಗೆ ಲಭಿಸುವ ಅಮರ ಜೀವದ ವಾಗ್ದಾನವನ್ನು ಸಾರಲು ದೈವಚಿತ್ತಾನುಸಾರ ಪ್ರೇಷಿತನಾದ ನಾನು ತಿಳಿಸುವುದೇನೆಂದರೆ: ಪಿತನಾಗಿರುವ ದೇವರೂ ಒಡೆಯರಾದ ಕ್ರಿಸ್ತಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ! ನಾನು ಹಗಲಿರುಳೂ ನನ್ನ ಪ್ರಾರ್ಥನೆಯಲ್ಲಿ ತಪ್ಪದೆ ನಿನ್ನನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಪೂರ್ವಿಕರ ಹಾಗೆ ಶುದ್ಧಮನಸ್ಸಾಕ್ಷಿಯಿಂದ ನನ್ನ ಆರಾಧ್ಯ ದೇವರಿಗೆ ನಿನ್ನ ವಿಷಯವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಂದು ನೀನು ಸುರಿಸಿದ ಕಣ್ಣೀರನ್ನು ನಾನು ಇನ್ನೂ ಮರೆತಿಲ್ಲ. ನಿನ್ನನ್ನು ಪುನಃ ನೋಡಿ ಆನಂದ ಪಡಬೇಕೆಂದು ಹಂಬಲಿಸುತ್ತಿದ್ದೇನೆ. ನಿನ್ನ ದೃಢವಿಶ್ವಾಸವು ನನ್ನ ನೆನಪಿನಲ್ಲಿದೆ. ನಿನ್ನ ಅಜ್ಜಿ ಲೋವಿಯಳಲ್ಲೂ ತಾಯಿ ಯೂನಿಸಳಲ್ಲೂ ನೆಲೆಗೊಂಡಿದ್ದ ವಿಶ್ವಾಸ ಈಗ ನಿನ್ನಲ್ಲೂ ಪೂರ್ಣವಾಗಿ ನೆಲೆಗೊಂಡಿದೆಯೆಂದು ನಾನು ನಂಬಿದ್ದೇನೆ. ನಾನು ನಿನ್ನ ಮೇಲೆ ಹಸ್ತ ನಿಕ್ಷೇಪಮಾಡಿ ಪ್ರಾರ್ಥಿಸಿದಾಗ ನೀನು ಪಡೆದಂಥ ವರದಾನವನ್ನು ಪುನಃ ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಫಿಸುತ್ತೇನೆ. ದೇವರು ನಮಗೆ ಪ್ರದಾನಮಾಡಿರುವ ಪವಿತ್ರಾತ್ಮ ನಮ್ಮನ್ನು ಹೇಡಿಗಳನ್ನಾಗಿ ಮಾಡುವುದಿಲ್ಲ; ನಮ್ಮಲ್ಲಿ ದೈವೀಶಕ್ತಿ, ಪ್ರೀತಿ ಹಾಗೂ ಸಂಯಮಗಳು ಪ್ರವರ್ಧಿಸುವಂತೆ ಮಾಡುತ್ತಾರೆ. ಆದ್ದರಿಂದ ಕ್ರಿಸ್ತಯೇಸುವಿಗೆ ಸಾಕ್ಷಿ ಆಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ ವಿಷಯದಲ್ಲೂ ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು.
ಕೀರ್ತನೆ: 96: 1-3, 7-8, 10. v .3
ಶ್ಲೋಕ: ಪ್ರಸಿದ್ಧಪಡಿಸಿರಿ ಆತನ ಘನತೆಯನ್ನು ರಾಷ್ಟ್ರಗಳಿಗೆ, ಆತನದ್ಭುತಾಕಾರ್ಯಗಳನು ಸಕಲ ಜನಾಂಗಗಳಿಗೆ
ಶುಭಸಂದೇಶ: ಲೂಕ 10: 1- 9
ಆ ಕಾಲದಲ್ಲಿ ಯೇಸುಸ್ವಾಮಿ ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, “ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ‘ಈ ಮನೆಗೆ ಶಾಂತಿ,’ ಎಂದು ಆಶೀರ್ವಾದ ಮಾಡಿ, ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. “ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ‘ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ,’ ಎಂದು ತಿಳಿಸಿರಿ.
No comments:
Post a Comment