ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

17.01.21 - ‘ಮೆಸ್ಸೀಯ’ ಸಿಕ್ಕಿದ್ದಾರೆ,”

ಮೊದಲನೇ ವಾಚನ: 1 ಸಮುವೇಲ  3:3-10, 19 


ಸಮುವೇಲನು ಸರ್ವೇಶ್ವರನ ಮಂದಿರದಲ್ಲಿ, ದೇವರ ಮಂಜೂಷವಿದ್ದ ಸ್ಥಳದಲ್ಲಿ ಮಲಗಿದ್ದನು. ದೇವರ ದೀಪ ಇನ್ನೂ ಉರಿಯುತ್ತಿತ್ತು. ಆಗ ಸರ್ವೇಶ್ವರಸ್ವಾಮಿ ಸಮುವೇಲನನ್ನು ಕರೆದರು. ಸಮುವೇಲನು, “ಇಗೋ ಬಂದೇ,” ಎಂದು ಉತ್ತರಕೊಟ್ಟು, ಒಡನೆ ಏಲಿಯ ಬಳಿಗೆ ಹೋಗಿ, “ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೆ?” ಎಂದನು. ಏಲಿ, “ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ,” ಎಂದನು. ಸಮುವೇಲನು ಹೋಗಿ ಮಲಗಿದನು. ಸರ್ವೇಶ್ವರ ಪುನಃ, “ಸಮುವೇಲನೇ,” ಎಂದು ಕರೆದರು. ಸಮುವೇಲನು ಕೂಡಲೆ ಎದ್ದು ಏಲಿಯ ಬಳಿಗೆ ಹೋಗಿ, “ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೆ?” ಎಂದನು. ಅವನು, “ಮಗನೇ, ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ,” ಎಂದನು. ಈವರೆಗೂ ಸಮುವೇಲನಿಗೆ ಸರ್ವೇಶ್ವರನ ನೇರ ಅನುಭವ ಆಗಿರಲಿಲ್ಲ. ದೇವರ ವಾಣಿ ಅವನಿಗೆ ಕೇಳಿಸಿರಲಿಲ್ಲ. ಸರ್ವೇಶ್ವರ ಸಮುವೇಲನನ್ನು ಮೂರನೆಯ ಸಾರಿ ಕರೆದರು. ಅವನು ತಟ್ಟನೆ ಏಲಿಯ ಹತ್ತಿರ ಓಡಿ, “ಇಗೋ, ಬಂದಿದ್ದೇನೆ, ನನ್ನನ್ನು ಕರೆದಿರಲ್ಲಾ,” ಎಂದನು. ಹುಡುಗನನ್ನು ಕರೆದವರು ಸರ್ವೇಶ್ವರನೇ ಎಂದು ಏಲಿಗೆ ತಿಳಿಯಿತು. ಅವನು ಸಮುವೇಲನಿಗೆ, “ಹೋಗಿ ಮಲಗಿಕೋ; ಮತ್ತೆ ಅವರು ನಿನ್ನನ್ನು ಕರೆದರೆ, ‘ಸರ್ವೇಶ್ವರಾ, ಅಪ್ಪಣೆಯಾಗಲಿ; ತಮ್ಮ ದಾಸ ಕಾದಿದ್ದಾನೆ,’ ಎಂದು ಹೇಳು,” ಎಂದನು. ಸಮುವೇಲನು ಹಿಂದಿರುಗಿ ಹೋಗಿ ತನ್ನ ಸ್ಥಳದಲ್ಲೇ ಮಲಗಿಕೊಂಡನು. ಸರ್ವೇಶ್ವರ ಪ್ರತ್ಯಕ್ಷರಾಗಿ ಹಿಂದಿನಂತೆಯೇ, “ಸಮುವೇಲನೇ, ಸಮುವೇಲನೇ,” ಎಂದರು. ಸಮುವೇಲನು, “ಅಪ್ಪಣೆಯಾಗಲಿ, ತಮ್ಮ ದಾಸನಾದ ನಾನು ಕಾದಿದ್ದೇನೆ,” ಎಂದನು. ಸಮುವೇಲನು ದೊಡ್ಡವನಾಗುತ್ತಾ ಬಂದನು. ಸರ್ವೇಶ್ವರ ಅವನೊಡನೆ ಇದ್ದರು. ಆದುದರಿಂದಲೆ ಅವನು ಪ್ರವಾದನೆ ಮಾಡಿದವುಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ.
ಪ್ರಭುವಿನ ವಾಕ್ಯ

ಕೀರ್ತನೆ: 40:2, 4, 7-8, 8-9, 10 
ಶ್ಲೋಕ: ಪ್ರಭೂ, ನಿನ್ನ ಚಿತ್ತಾನುಸಾರ ನೆಡೆವುದೇ ನನಗೆ ಪರಮಾವೇಶ. 

ಮೇಲೆತ್ತಿದನು ವಿನಾಶದ ಕೆಸರಿಂದ, ಕರಾಳ ಕೂಪದಿಂದ I
ಗೋರ್ಕಲ್ಲ ಮೇಲಿರಿಸಿ ಹೆಜ್ಜೆಯಿಡಿಸಿದನು ಅತಿ ಧೈರ್ಯದಿಂದ II
ಪ್ರಭುವಿನಲ್ಲೆ ಭರವಸೆ ಇಟ್ಟು ನಡೆವಾತನು ಧನ್ಯನು I
ಗರ್ವಿಗಳನು, ಸುಳ್ಳುದೇವರನು, ಹಿಂಬಾಲಿಸನವನು II

ನಾನೋಗೊಡುತ ಇಂತೆಂದೆ : “ಇಗೋ ನಾನೇ ಬರುತ್ತಿರುವೆ I
ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? II
ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ I
ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ” II

ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ I
ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ II
ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು I
ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು I
ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು II

ಎರಡನೇ ವಾಚನ: 1 ಕೊರಿಂಥಿಯರಿಗೆ 6:13-15, 17-20


ಸಹೋದರರೇ, “ಊಟ ಹೊಟ್ಟೆಗಾಗಿ, ಹೊಟ್ಟೆ ಊಟಕ್ಕಾಗಿ,” ಎಂದು ಹೇಳುವುದುಂಟು. ದೇವರು ಎರಡನ್ನೂ ನಾಶಗೊಳಿಸುವರು. ಆದರೆ ದೇಹವಿರುವುದು ದುರಾಚಾರಕ್ಕಲ್ಲ; ಪ್ರಭುವಿನ ಸೇವೆಗಾಗಿ. ಪ್ರಭುವೇ ದೇಹದ ಪರಿಪಾಲಕ. ಪ್ರಭುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನೂ ತಮ್ಮ ಪರಾಕ್ರಮದಿಂದ ಎಬ್ಬಿಸುವರು. ನಿಮ್ಮ ದೇಹಗಳು ಕ್ರಿಸ್ತಯೇಸುವಿನ ಅಂಗಗಳೆಂದು ನಿಮಗೆ ತಿಳಿಯದೇ? ಹಾಗಾದರೆ ನಾನು ಕ್ರಿಸ್ತಯೇಸುವಿನ ಅಂಗಗಳನ್ನು ತೆಗೆದು ವೇಶ್ಯೆಯ ಅಂಗಗಳನ್ನಾಗಿ ಮಾಡಬಹುದೇ? ಎಂದಿಗೂ ಇಲ್ಲ. ಆದರೆ ಪ್ರಭುವಿನ ಅನ್ಯೋನ್ಯತೆಯಲ್ಲಿ ಇರುವವನು ಅವರೊಂದಿಗೆ ಆಧ್ಯಾತ್ಮಿಕವಾಗಿ ಒಂದಾಗಿರುತ್ತಾನೆ. ವ್ಯಭಿಚಾರದಿಂದ ದೂರ ಸರಿಯಿರಿ. ಮಾನವನು ಮಾಡುವ ಇತರ ಪಾಪಗಳು ದೇಹಕ್ಕೆ ಬಾಹಿರವಾದವುಗಳು. ವ್ಯಭಿಚಾರ ಮಾಡುವಾತನು ತನ್ನ ದೇಹಕ್ಕೇ ದ್ರೋಹ ಬಗೆಯುತ್ತಾನೆ. ದೇವರು ನಿಮಗೆ ಅನುಗ್ರಹಿಸಿರುವ ಪವಿತ್ರಾತ್ಮರಿಗೆ ನಿಮ್ಮ ದೇಹ ಗರ್ಭಗುಡಿಯಾಗಿದೆ; ಆ ಪವಿತ್ರಾತ್ಮ ನಿಮ್ಮಲ್ಲಿ ವಾಸಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿಲ್ಲವೇ? ನೀವು ನಿಮ್ಮ ಸ್ವಂತ ಸೊತ್ತಲ್ಲ. ಏಕೆಂದರೆ, ನೀವು ಕ್ರಯಕ್ಕೆ ಕೊಳ್ಳಲಾದವರು. ಆದ್ದರಿಂದ ನಿಮ್ಮ ದೇಹದಲ್ಲಿ ಆ ದೇವರ ಮಹಿಮೆ ಬೆಳಗುವಂತೆ ಮಾಡಿರಿ. 
ಪ್ರಭುವಿನ ವಾಕ್ಯ


ಶುಭಸ೦ದೇಶ: ಯೊವಾನ್ನ 1:35-42 


ಮಾರನೆಯ ದಿನ ಯೊವಾನ್ನನು ತನ್ನಿಬ್ಬರು ಶಿಷ್ಯರ ಸಂಗಡ ನಿಂತುಕೊಂಡಿರುವಾಗ, ಯೇಸು ಸ್ವಾಮಿ ಆ ಮಾರ್ಗವಾಗಿ ಹೋಗುತ್ತಿದ್ದರು. ಅವರನ್ನು ನೋಡುತ್ತಲೇ ಯೊವಾನ್ನನು ತನ್ನ ಆ ಶಿಷ್ಯರಿಗೆ, “ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ,” ಎಂದು ಹೇಳಿದನು. ಇದನ್ನು ಕೇಳಿದ ಆ ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. ಯೇಸು ಸ್ವಾಮಿ, ತಮ್ಮನ್ನು ಹಿಂಬಾಲಿಸಿ ಬರುತ್ತಿರುವುದನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಿದರು. ಅವರು, “ರಬ್ಬೀ, ತಾವು ವಾಸಮಾಡುವುದೆಲ್ಲಿ?” ಎಂದು ವಿಚಾರಿಸಿದರು. (’ರಬ್ಬಿ’ ಎಂದರೆ ಗುರುದೇವ ಎಂದು ಅರ್ಥ.) ಯೇಸು ಉತ್ತರವಾಗಿ, “ಬಂದು ನೋಡಿ” ಎನ್ನಲು ಅವರು ಹೋಗಿ ಯೇಸು ಸ್ವಾಮಿ ಇದ್ದ ಸ್ಥಳವನ್ನು ಕಂಡು ಆ ದಿನವನ್ನು ಅವರೊಡನೆ ಕಳೆದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು. ಯೊವಾನ್ನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ್ದ ಇಬ್ಬರು ಶಿಷ್ಯರಲ್ಲಿ ಸಿಮೋನ ಪೇತ್ರನ ಸಹೋದರನಾದ ಅಂದ್ರೆಯನು ಒಬ್ಬನು. ಇವನು ಮೊದಲು ತನ್ನ ಸಹೋದರ ಸಿಮೋನನನ್ನು ಕಂಡು, “ನಮಗೆ ‘ಮೆಸ್ಸೀಯ’ ಸಿಕ್ಕಿದ್ದಾರೆ,” ಎಂದು ತಿಳಿಸಿ ಅವನನ್ನು ಯೇಸುವಿನ ಬಳಿಗೆ ಕರತಂದನು. (’ಮೆಸ್ಸೀಯ’ ಎಂದರೆ ಅಭಿಷಿಕ್ತನಾದ ಲೋಕೋದ್ಧಾರಕ ಎಂದು ಅರ್ಥ). ಯೇಸು ಸಿಮೋನನನ್ನು ನೋಡಿ, “ಯೊವಾನ್ನನ ಮಗನಾದ ಸಿಮೋನನೇ, ಇನ್ನು ಮುಂದೆ ನಿನ್ನನ್ನು ಕೇಫನೆಂದು ಕರೆಯುವರು,” ಎಂದು ನುಡಿದರು. (’ಕೇಫ’ ಎಂದರೆ ‘ಪೇತ್ರ’ ಇಲ್ಲವೇ ‘ಬಂಡೆ’ ಎಂದರ್ಥ).
ಪ್ರಭುಕ್ರಿಸ್ತರ ಶುಭಸ೦ದೇಶ

No comments:

Post a Comment