ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

02.01.21 - "ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ. ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,”

 ಮೊದಲನೇ ವಾಚನ: 1 ಯೋವಾನ್ನ 2:22-28

ಪ್ರಿಯ ಮಕ್ಕಳೇ, ಅಸತ್ಯವಾದಿ ಎಂದರೆ ಯಾರು? ಯೇಸುವೇ ಕ್ರಿಸ್ತ ಎಂಬುದನ್ನು ಯಾರು ಅಲ್ಲಗಳೆಯುತ್ತಾನೋ ಅವನೇ ಅಸತ್ಯವಾದಿ; ಅವನೇ ಕ್ರಿಸ್ತವಿರೋಧಿ. ಅವನು ಪಿತನನ್ನು ಮತ್ತು ಪುತ್ರನನ್ನು ತಿರಸ್ಕರಿಸುತ್ತಾನೆ. ಪುತ್ರನನ್ನು ತಿರಸ್ಕರಿಸುವವನು ಪಿತನನ್ನೂ ತಿರಸ್ಕರಿಸುತ್ತಾನೆ. ಪುತ್ರನನ್ನು ಅಂಗೀಕರಿಸುವವನು ಪಿತನನ್ನೂ ಅಂಗೀಕರಿಸುತ್ತಾನೆ. ಮೊದಲಿನಿಂದಲೂ ನೀವು ಯಾವ ಸಂದೇಶವನ್ನು ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಸಲಿ. ಮೊದಲಿನಿಂದಲೂ ನೀವು ಕೇಳಿದ ಸಂದೇಶ ನಿಮ್ಮಲ್ಲಿ ನೆಲೆಸಿದರೆ ಪುತ್ರನಲ್ಲಿಯೂ ಪಿತನಲ್ಲಿಯೂ ನೀವು ನೆಲೆಸುತ್ತೀರಿ. ಕ್ರಿಸ್ತಯೇಸು ನಮಗೆ ವಾಗ್ದಾನ ಮಾಡಿರುವ ನಿತ್ಯಜೀವ ಇದೇ ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸಬೇಕೆಂದಿರುವವರನ್ನು ಕುರಿತು ಇದನ್ನು ನಿಮಗೆ ಬರೆದಿದ್ದೇನೆ. ನೀವು ಕ್ರಿಸ್ತಯೇಸುವಿನಿಂದ ಅಭಿಷಿಕ್ತರಾಗಿದ್ದೀರಿ. ಆ ಅಭಿಷೇಕವು ನಿಮ್ಮಲ್ಲಿ ನೆಲೆಸಿದೆ. ಆದ್ದರಿಂದ ಯಾರೂ ನಿಮಗೆ ಬೋಧಿಸುವ ಅವಶ್ಯಕತೆಯಿಲ್ಲ. ಆ ಅಭಿಷೇಕವೇ ನಿಮಗೆ ಎಲ್ಲವನ್ನೂ ಬೋಧಿಸುತ್ತಾ ಬರುತ್ತದೆ. ಈ ಬೋಧನೆ ಸತ್ಯವಾದುದು, ಮಿಥ್ಯವಾದುದಲ್ಲ. ಅದರ ಪ್ರಕಾರವೇ ಕ್ರಿಸ್ತಯೇಸುವಿನಲ್ಲಿ ನೆಲೆಸಿರಿ. ಹೌದು ಪ್ರಿಯ ಮಕ್ಕಳೇ, ಕ್ರಿಸ್ತಯೇಸು ಪ್ರತ್ಯಕ್ಷರಾಗುವಾಗ, ಅವರ ಪುನರಾಗಮನದ ಪ್ರಯುಕ್ತ ಅವರ ಮುಂದೆ ನಾವು ನಾಚಿಕೆ ಪಡದೆ ಧೈರ್ಯದಿಂದಿರುವಂತೆ ಅವರಲ್ಲಿ ನೆಲೆಗೊಂಡಿರೋಣ. 

ಕೀರ್ತನೆ: 98:1, 2-3, 3-4
ಶ್ಲೋಕ: ಕಂಡುಬಂದಿತು ಜಗದ ಎಲ್ಲೆಗೆ ನಮ್ಮ ದೇವ ಸಾಧಿಸಿದ ಜಯಗಳಿಕೆ. 

ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು /
ಎಸಗಿಹನಾತನು ಪವಾಡಕಾರ್ಯಗಳನು / 
ಗಳಿಸಿತಾತನ ಕೈ ಪೂತಭುಜ ಗೆಲುವನು //

ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು /
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು // 
ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ / 
ನಮ್ಮ ದೇವ ಸಾಧಿಸಿದ ಜಯಗಳಿಕೆ //

ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು /
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು // 
ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ /  
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ //

ಶುಭಸ೦ದೇಶ: ಯೋವಾನ್ನ 1:19-28


ಆ ಕಾಲದಲ್ಲಿ ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳಿಸಿದರು. ಇವರು, “ನೀನು ಯಾರು?” ಎಂದು ಪ್ರಶ್ನಿಸಿದರು. ಯೊವಾನ್ನನು ಅದಕ್ಕೆ ಉತ್ತರವಾಗಿ, “ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ,” ಎಂದು ಸ್ಪಷ್ಟವಾಗಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ. ಹಾಗಾದರೆ, “ನೀನು ಎಲೀಯನೋ?” ಎಂದು ಕೇಳಲು ‘ಅಲ್ಲ’ ಎಂದನು. “ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ?” ಎಂದು ಅವರು ಮತ್ತೆ ಕೇಳಲು, “ಅದೂ ಅಲ್ಲ,” ಎಂದು ಮರುನುಡಿದನು. “ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು. ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ. ನಿನ್ನನ್ನು ಕುರಿತು ನೀನು ಏನು ಹೇಳುತ್ತೀ?” ಎಂದು ಅವರು ಮತ್ತೊಮ್ಮೆ ಕೇಳಿದರು. ಅದಕ್ಕೆ ಯೊವಾನ್ನನು, “ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು,” ಎಂದು ಯೆಶಾಯ ಪ್ರವಾದಿಯ ಮಾತುಗಳಲ್ಲೇ ಉತ್ತರಕೊಟ್ಟನು. ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು, “ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ?” ಎಂದು ಪ್ರಶ್ನಿಸಿದರು. ಪ್ರತ್ಯುತ್ತರವಾಗಿ ಯೊವಾನ್ನನು, “ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ. ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,” ಎಂದನು. ಯೊವಾನ್ನನು ಸ್ನಾನದೀಕ್ಷೆ ಕೊಡತ್ತಿದ್ದ ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿಯ ಎಂಬಲ್ಲಿ ಇದೆಲ್ಲವೂ ನಡೆಯಿತು. 

No comments:

Post a Comment