ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 2:5-12
ಸಹೋದರರೇ, ನಾವು ಪ್ರಸ್ತಾಪಿಸುತ್ತಿರುವ ನೂತನ ಸಾಮ್ರಾಜ್ಯವನ್ನು ದೇವರು ತಮ್ಮ ದೂತರಿಗೆ ಅಧೀನಪಡಿಸಲಿಲ್ಲ. ಅದಕ್ಕೆ ಬದಲಾಗಿ, ಪವಿತ್ರಗ್ರಂಥದಲ್ಲಿ ಒಂದೆಡೆ ಹೀಗೆಂದು ಸ್ಪಷ್ಟವಾಗಿ ಹೇಳಲಾಗಿದೆ: “ಓ ದೇವಾ,ಹುಲುಮಾನವನೆಷ್ಟರವನು ನೀನವನ ಗಮನಿಸಲು? ನರಪುತ್ರನು ಎನಿತರವನು ನೀನವನ ಅರಸಿಬರಲು?ದೇವದೂತರಿಗಿಂತಲೂ ಆತನನು ತುಸುವೇ ತಗ್ಗಿಸಿದೆ ಘನಗೌರವವನು, ಸಿರಿಮಹಿಮೆಯನು ಮುಕುಟವಾಗಿ ಮುಡಿಸಿದೆ; ಆತನಿಗೆ ನೀನೆಲ್ಲವನು ಅಧೀನವಾಗಿಸಿದೆ.”ಹೀಗೆ ದೇವರು ಎಲ್ಲವನ್ನು ಆತನಿಗೆ ಅಧೀನಪಡಿಸಿರುವುದರಿಂದ ಆತನಿಗೆ ಅಧೀನವಲ್ಲದ್ದು ಏನೂ ಇಲ್ಲವೆಂದಾಯಿತು. ಆದರೂ ಸದ್ಯಕ್ಕೆ ಎಲ್ಲವೂ ಆತನಿಗೆ ಅಧೀನವಾಗಿರುವುದನ್ನು ನಾವು ಕಾಣುತ್ತಿಲ್ಲ. ದೇವದೂತರಿಗಿಂತ ಕೊಂಚಕಾಲವೇ ತುಸು ತಗ್ಗಿಸಲಾದ ಒಬ್ಬರನ್ನು, ಅಂದರೆ ಯೇಸುವನ್ನು ಮಾತ್ರ ನಾವು ಕಾಣುತ್ತೇವೆ. ಇವರು ಯಾತನಾ ಮರಣವನ್ನು ಅನುಭವಿಸಿದ್ದರಿಂದ ‘ಘನಗೌರವವನ್ನೂ ಸಿರಿಮಹಿಮೆಯನ್ನೂ ಮುಕುಟವಾಗಿ’ ಪಡೆದುದನ್ನು ನಾವು ಕಾಣುತ್ತೇವೆ. ದೈವಾನುಗ್ರಹದಿಂದ ಎಲ್ಲಾ ಮಾನವರ ಕಲ್ಯಾಣಕ್ಕಾಗಿ ಅವರು ಸಾವನ್ನು ಅನುಭವಿಸಬೇಕಾಗಿತ್ತು. ಸಮಸ್ತವನ್ನೂ ಸೃಷ್ಟಿಸಿ ಪರಿಪಾಲಿಸಿಕೊಂಡುಬರುವ ದೇವರು ತಮ್ಮ ಮಹಿಮೆಯಲ್ಲಿ ಪಾಲುಗೊಳ್ಳಲು ಮಕ್ಕಳನೇಕರನ್ನು ಕರೆತರುವಂತೆ ಉದ್ಧಾರ ಪ್ರವರ್ತಕರಾದ ಯೇಸುವನ್ನು ಹಿಂಸೆಬಾಧೆಗಳ ಮೂಲಕ ಪರಿಪೂರ್ಣವಾಗಿಸಿದ್ದು ಯುಕ್ತವೇ ಸರಿ. ಪವಿತ್ರಗೊಳಿಸುವವನಿಗೂ ಪವಿತ್ರರಾಗುವವರಿಗೂ ಒಬ್ಬನೇ ತಂದೆ. ಈ ಕಾರಣ, ಪವಿತ್ರಗೊಳಿಸುವ ಯೇಸು, ಪವಿತ್ರರಾಗುವವರನ್ನು ‘ಸಹೋದರರು’ ಎಂದು ಕರೆಯಲು ನಾಚಿಕೆಪಡಲಿಲ್ಲ. “ಸಾರುವೆನು ನನ್ನ ಸೋದರರಿಗೆ ನಿನ್ನ ಮಹಿಮೆಯನು ಮಾಡುವೆನು ಸಭಾಮಧ್ಯೆ ನಿನ್ನ ಗುಣಗಾನವನು,” ಎಂದೂ ಹೇಳುತ್ತಾರೆ.
ಕೀರ್ತನೆ: 8:2, 5, 6-7, 8-9
ಶ್ಲೋಕ: ಪ್ರಭೂ, ಮಾನವನನ್ನು ಒಡೆಯನಾಸಿದೆ ನಿನ್ನಯ ಕರಕೃತಿಗಳಿಗೆ.
ವಿರೋಧಿಗಳ ಬಾಯನು ಮುಚ್ಚಿಸಿದೆ ಬಾಲ ಬಾಲೆಯರ ಬಾಯಿಂದಲೆ I
ಹಗೆಗಳನು ದುರ್ಗದಂತೆ ತಡೆದೆ ಮೊಲೆಗೂಸುಗಳ ನಾಲಿಗೆಯಿಂದಲೆ II
ಆದರೆ ದೇವದೂತರಿಗಿಂತ ಕಿಂಚಿತ್ತೆ ಕೀಳಾಗಿಸಿದೆ ಮನುಜನನು I
ಮುಡಿಸಿದೆ ಮುಕುಟವಾಗವನಿಗೆ ಘನಮಾನವನು, ಸಿರಿಹಿರಿಮೆಯನು II
ಒಡೆಯನಾಗಿಸಿದೆ ನಿನ್ನಯ ಕರಕೃತಿಗಳಿಗೆ I
ಒಳಪಡಿಸಿದೆ ಸಕಲವನು ಅವನ ಪಾದದಡಿಗೆ II
ಕುರಿಗಳನು, ಕರುಗಳನು, ಕಾಡುಮೃಗಗಳನು I
ಗರಿಗಳನು, ಮೀನುಗಳನು, ಜಲಚರಗಳನು I
ಕರಗತ ಮಾಡಿದೆ ನೀ ಅವನಿಗೆಲ್ಲವನು II
ಪ್ರಭು, ಓ ಎಮ್ಮ ಪ್ರಭು, ನಿನ್ನ ನಾಮಾಮೃತ I
ಬೆಳಗಿದೆ ತನ್ನ ಮಹಿಮೆಯನು ಭುವನ ಪರ್ಯಂತ II
ಮಾರ್ಕನು ಬರೆದ ಶುಭಸ೦ದೇಶ 1:21-28
ಆ ಕಾಲದಲ್ಲಿ ಯೇಸು ಶಿಷ್ಯರೊಂದಿಗೆ ಕಫೆರ್ನವುಮ್ ಎಂಬ ಊರನ್ನು ಸೇರಿದರು. ಸಬ್ಬತ್‍ದಿನ ಬಂದ ಕೂಡಲೇ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಬೋಧಿಸತೊಡಗಿದರು. ಅವರ ಉಪದೇಶವನ್ನು ಕೇಳಿ ಜನರು ಬೆರಗಾದರು. ಏಕೆಂದರೆ ಯೇಸು, ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಾಣಿಯಿಂದ ಪ್ರಬೋಧಿಸುತ್ತಿದ್ದರು. ಅಲ್ಲಿ ದೆವ್ವ ಹಿಡಿದ ಒಬ್ಬನಿದ್ದನು. ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು. ದೇವರಿಂದ ಬಂದ ಪರಮಪೂಜ್ಯರು ನೀವು,” ಎಂದು ಕಿರುಚಿದನು. ಆದರೆ ಯೇಸುಸ್ವಾಮಿ ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ಆ ದೆವ್ವಕ್ಕೆ ಆಜ್ಞಾಪಿಸಿದರು. ದೆವ್ವವು ಆ ಮನುಷ್ಯನನ್ನು ಒದ್ದಾಡಿಸಿ, ಗಟ್ಟಿಯಾಗಿ ಚೀರುತ್ತಾ ಅವನನ್ನು ಬಿಟ್ಟುಹೋಯಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. “ಇದೇನು ಹೊಸ ಬೋಧನೆ!? ಈತ ದೆವ್ವಗಳಿಗೆ ಕೂಡ ಅಧಿಕಾರದಿಂದ ಆಜ್ಞಾಪಿಸುತ್ತಾನೆ; ಅವು ಈತ ಹೇಳಿದ ಹಾಗೆ ಕೇಳುತ್ತವೆಯಲ್ಲ!” ಎಂದು ಪರಸ್ಪರ ಮಾತಾಡಿಕೊಂಡರು. ಕೂಡಲೇ ಗಲಿಲೇಯ ಪ್ರಾಂತ್ಯದ ಎಲ್ಲೆಡೆಗೂ ಯೇಸುವಿನ ಸಮಾಚಾರ ಹಬ್ಬಿ ಹರಡಿತು.
No comments:
Post a Comment