ಮೊದಲನೇ ವಾಚನ: 1 ಯೋವಾನ್ನ 4:7-10
ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿ ದೇವರಿಂದ ಉಗಮವಾದುದು. ಪ್ರೀತಿಸುವವನು ದೇವರ ಮಗನು. ಅವನು ದೇವರನ್ನು ಬಲ್ಲವನು. ಪ್ರೀತಿಸದವನು ದೇವರನ್ನು ಬಲ್ಲವನಲ್ಲ. ಏಕೆಂದರೆ, ದೇವರು ಪ್ರೀತಿಸ್ವರೂಪಿ. ತಮ್ಮ ಏಕೈಕ ಪುತ್ರನ ಮುಖಾಂತರ ನಾವು ಸಜ್ಜೀವವನ್ನು ಪಡೆಯುವಂತೆ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ನಮ್ಮ ಮೇಲೆ ದೇವರಿಗಿರುವ ಪ್ರೀತಿ ಹೀಗೆ ವ್ಯಕ್ತವಾಯಿತು. ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಅವರು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತಮ್ಮ ಪುತ್ರನನ್ನು ಕಳುಹಿಸಿದ್ದರಲ್ಲಿಯೇ ಪ್ರೀತಿಯ ನಿಜ ಗುಣ ತೋರಿಬರುತ್ತದೆ.
ಕೀರ್ತನೆ: 72:1-4, 7-8 v.11
ಶ್ಲೋಕ: ರಾಷ್ಟ್ರಗಳು ಸಾಷ್ಟಾಂಗವೆರಾಗಲಿ ಸರ್ವೇಶ್ವರಸ್ವಾಮಿಗೆ.
ಶುಭಸ೦ದೇಶ: ಮಾರ್ಕ 6:34-44
ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು, ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು. ಅಷ್ಟರಲ್ಲಿ ಸಂಜೆಯಾಗುತ್ತಾ ಬಂದಿತು. ಶಿಷ್ಯರು ಯೇಸುವಿನ ಬಳಿಗೆ ಬಂದು, “ಈಗಾಗಲೇ ಹೊತ್ತು ವಿೂರಿಹೋಯಿತು; ಇದು ನಿರ್ಜನ ಪ್ರದೇಶ; ಇನ್ನು ಜನರನ್ನು ಕಳುಹಿಸಿಬಿಡಿ. ಅವರು ಸವಿೂಪದ ಊರುಕೇರಿಗಳಿಗೆ ಹೋಗಿ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ,” ಎಂದರು. ಆಗ ಯೇಸು, “ನೀವೇ ಅವರಿಗೆ ಊಟಕ್ಕೇನಾದರೂ ಕೊಡಿ,” ಎಂದರು ಅದಕ್ಕೆ ಶಿಷ್ಯರು “ನಾವು ಹೋಗಿ ಇನ್ನೂರು ದೆನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುತಂದು ಅವರಿಗೆ ಊಟಕ್ಕೆ ಬಡಿಸೋಣವೇನು?” ಎಂದರು. ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ, ಹೋಗಿ ನೋಡಿಕೊಂಡು ಬನ್ನಿ,” ಎಂದರು. ಅವರು ವಿಚಾರಿಸಿಕೊಂಡು ಬಂದು, “ನಮ್ಮಲ್ಲಿ ಐದುರೊಟ್ಟಿ ಮತ್ತು ಎರಡು ವಿೂನುಗಳಿವೆ,” ಎಂದು ತಿಳಿಸಿದರು. ಎಲ್ಲರು ಪಂಕ್ತಿಪಂಕ್ತಿಯಾಗಿ ಹಸಿರು ಹುಲ್ಲಿನ ಮೇಲೆ ಊಟಕ್ಕೆ ಕುಳಿತುಕೊಳ್ಳಬೇಕೆಂದು ಯೇಸು ಅಪ್ಪಣೆಮಾಡಿದರು. ಅವರು ಐವತ್ತರಂತೆಯೂ ನೂರರಂತೆಯೂ ಪಂಕ್ತಿಯಲ್ಲಿ ಕುಳಿತರು. ಯೇಸು ಆ ಐದು ರೊಟ್ಟಿಗಳನ್ನೂ ಎರಡು ವಿೂನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ಆ ರೊಟ್ಟಿಗಳನ್ನು ಮುರಿದು ಜನರಿಗೆ ಬಡಿಸುವಂತೆ ಅವನ್ನು ಶಿಷ್ಯರಿಗೆ ಕೊಟ್ಟರು. ಅಂತೆಯೇ ಎರಡು ವಿೂನುಗಳನ್ನು ಜನರೆಲ್ಲರಿಗೆ ಹಂಚುವಂತೆ ಮಾಡಿದರು. ಎಲ್ಲರೂ ಹೊಟ್ಟೆ ತುಂಬಾ ತಿಂದು ತೃಪ್ತರಾದರು. ಇನ್ನೂ ಉಳಿದಿದ್ದ ರೊಟ್ಟಿ ಮತ್ತು ವಿೂನಿನ ತುಂಡುಗಳನ್ನು ಒಟ್ಟುಗೂಡಿಸಿದಾಗ, ಅವು ಹನ್ನೆರಡು ಬುಟ್ಟಿ ತುಂಬ ಆದವು. ಊಟ ಮಾಡಿದವರಲ್ಲಿ ಗಂಡಸರ ಸಂಖ್ಯೆಯೇ ಐದು ಸಾವಿರ.
No comments:
Post a Comment