ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.09.20 - ಸ್ನಾನಿಕ ಯೊವಾನ್ನನು ಧರ್ಮಮಾರ್ಗವನ್ನು ತೋರಿಸಲು

ಮೊದಲನೇ ವಾಚನ:  ಯೆಜೆಕಿಯೇಲ 18:25-28


ಕರ್ತರು ಇಂತೆನ್ನುತ್ತಾರೆ: ನೀವು, ‘ಸರ್ವೇಶ್ವರನ ಕ್ರಮ ಸರಿಯಲ್ಲ’ ಎಂದು ಹೇಳುತ್ತಿದ್ದೀರಿ; ಇಸ್ರಯೇಲ್ ವಂಶದವರೇ, ನನ್ನ ಕ್ರಮವು ಸರಿಯಲ್ಲವೆ? ನಿಮ್ಮ ಕ್ರಮವೇ ಸರಿಯಲ್ಲವಷ್ಟೆ.  ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿಂದಲೇ ಸಾಯಬೇಕಾಯಿತು.  ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.  ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯನು, ಖಂಡಿತ ಜೀವಿಸುವನು."

ಕೀರ್ತನೆ: 25:4-5, 6-7, 8-9

ಶ್ಲೋಕ: ನೆನಸಿಕೋ ಪ್ರಭೂ,  ನಿನ್ನ ನಿರಂತರ ಕರುಣೆಯನು 

ಎರಡನೇ ವಾಚನ: ಫಿಲಿಪ್ಪಿಯರಿಗೆ 2:1-11

ಸಹೋದರರೇ, ಕ್ರಿಸ್ತ ಯೇಸುವಿನಲ್ಲಿ ನಿಮಗೆ ಉತ್ಸಾಹ, ಉತ್ತೇಜನ, ಪ್ರೀತಿ, ಪ್ರೇರಣೆ, ಪವಿತ್ರಾತ್ಮ ಅವರ ಅನ್ಯೋನ್ಯತೆ, ದೀನದಯಾಳತೆ ಇರುವುದಾದರೆ ಐಕಮತ್ಯದಿಂದ ಬಾಳಿರಿ.  ಒಂದೇ ಮನಸ್ಸು, ಒಂದೇ ಪ್ರೀತಿ ಇರಲಿ. ನಿಮ್ಮ ಗುರಿ ಧ್ಯೇಯಗಳು ಒಂದೇ ಆಗಿರಲಿ. ಆಗ ನನ್ನ ಸಂತೋಷವು ಸಂಪೂರ್ಣಗೊಳ್ಳುವುದು. ಸ್ವಾರ್ಥಸಾಧನೆಗಾಗಲಿ, ಡಂಭಾಚಾರಕ್ಕಾಗಲಿ ಏನನ್ನೂ ಮಾಡಬೇಡಿ. ಪರಸ್ಪರ ನಮ್ರತೆಯಿಂದ ನಡೆದುಕೊಳ್ಳಿ; ಇತರರು ನಿಮಗಿಂತಲೂ ಶ್ರೇಷ್ಠರೆಂದು ಪರಿಗಣಿಸಿರಿ. ಸ್ವಹಿತವನ್ನೇ ಗಮನಿಸದೆ ಪರರ ಹಿತವನ್ನೂ ಬಯಸಿರಿ. ಕ್ರಿಸ್ತಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲಸಿರಲಿ: ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ  ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನ್ನೇ ಬರಿದುಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನ್ನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು. ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು. ‘ಕ್ರಿಸ್ತಯೇಸುವೇ ಪ್ರಭು' ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಮತ್ತಾಯ 21:28-32


ಯೇಸುಸ್ವಾಮಿ ಮುಖ್ಯಯಾಜಕರಿಗೂ ಪ್ರಜಾಪ್ರಮುಖರಿಗೂ  “ಈ ಬಗ್ಗೆ ನಿಮಗೇನು ಅನಿಸುತ್ತದೆ? ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಒಮ್ಮೆ ಆತ ಮೊದಲನೆಯ ಮಗನ ಹತ್ತಿರ ಬಂದು, ‘ಮಗನೇ, ಈ ಹೊತ್ತು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸಮಾಡು’ ಎಂದ.  ಅದಕ್ಕೆ ಅವನು, ‘ನಾನು ಹೋಗುವುದಿಲ್ಲ’ ಎಂದು ಉತ್ತರವಿತ್ತ. ಆದರೂ ಅನಂತರ ಪಶ್ಚಾತ್ತಾಪಪಟ್ಟು ಅವನು ತೋಟಕ್ಕೆ ಹೋದ.  ತಂದೆ ಎರಡನೆಯ ಮಗನ ಹತ್ತಿರ ಹೋಗಿ ಅಂತೆಯೇ ತೋಟಕ್ಕೆ ಹೋಗಲು ಹೇಳಿದ. ಅವನು, ‘ಇಗೋ, ಹೋಗುತ್ತೇನಪ್ಪಾ’, ಎಂದು ಹೇಳಿದ. ಆದರೆ ಹೋಗಲೇ ಇಲ್ಲ.  ಇವರಿಬ್ಬರಲ್ಲಿ ತಂದೆಯ ಇಷ್ಟದಂತೆ ನಡೆದವನು ಯಾರು?” ಎಂದು ಯೇಸು ಕೇಳಿದರು. “ಮೊದಲನೆಯ ಮಗನೇ,” ಎಂದು ಉತ್ತರಿಸಿದರು ಅವರು. ಆಗ ಯೇಸುಸ್ವಾಮಿ, “ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲೇ ದೇವರಸಾಮ್ರಾಜ್ಯವನ್ನು ಪ್ರವೇಶಿಸುವರು ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.  ಸ್ನಾನಿಕ ಯೊವಾನ್ನನು ಧರ್ಮಮಾರ್ಗವನ್ನು ತೋರಿಸಲು ಬಂದನು. ನೀವು ಆತನನ್ನು ನಂಬಲಿಲ್ಲ. ಆದರೆ ಸುಂಕದವರೂ ವೇಶ್ಯೆಯರೂ ಆತನನ್ನು ನಂಬಿದರು. ಇದನ್ನು ಕಂಡ ಮೇಲೂ ನೀವು ಪಶ್ಚಾತ್ತಾಪಪಡಲಿಲ್ಲ, ಯೊವಾನ್ನನನ್ನು ನಂಬಲೂ ಇಲ್ಲ.



No comments:

Post a Comment