ಮೊದಲನೇ ವಾಚನ: ಸಿರಾಖನು 27:30--28:7
ಸಿಟ್ಟು ಸಿಡುಕು ಸಿಟ್ಟುಸಿಡುಕುಗಳು ಹೇಯವಾದವುಗಳು ಅವೆರಡೂ ಇರುವುವು ಪಾಪಾತ್ಮನೊಳು. ಪ್ರತೀಕಾರ ಮಾಡುವವನು ಸರ್ವೇಶ್ವರನಿಂದ ಪ್ರತೀಕಾರ ಹೊಂದುವನು ಅವನ ಪಾಪಗಳನ್ನು ಸರ್ವೇಶ್ವರ ಸದಾ ಮನಸ್ಸಿನಲ್ಲಿ ಇಟ್ಟುಕೊಳ್ಳುವರು. ಕ್ಷಮೆನೀಡು ನಿನ್ನ ನೆರೆಯವನು ಮಾಡಿದ ತಪ್ಪಿಗೆ ನೀನು ಪ್ರಾರ್ಥಿಸುವಾಗ ಕ್ಷಮೆ ದೊರಕುವುದು ನಿನ್ನ ಪಾಪಗಳಿಗೆ. ನೆರೆಯವನ ಮೇಲೆ ಮುನಿಸಿಟ್ಟುಕೊಂಡರೆ ದೇವರಿಂದ ಕ್ಷಮೆಹೊಂದಲು ಆದೀತೆ? ತನ್ನಂಥ ಮನುಷ್ಯನ ಮೇಲೆ ಅವನಿಗೆ ಕರುಣೆಯಿಲ್ಲದಿರೆ ಬೇಡಿಕೊಂಡರೆ ಪಾಪಮನ್ನಣೆ ಪಡೆಯುವನೆ? ಕೇವಲ ನರಮಾನವನಾದವನು ಇಂಥ ಸಿಡುಕಿಟ್ಟುಕೊಂಡರೆ ಇವನ ಪಾಪಗಳಿಗೆ ದೋಷಪರಿಹಾರ ಮಾಡುವವರು ಯಾರಿದ್ದಾರೆ? ನಿನ್ನ ಅಂತ್ಯಕಾಲವನ್ನು ಸ್ಮರಿಸಿಕೊಂಡು ಹಗೆತನವನು ತೊರೆದುಬಿಡು ಸಾವು ಮರಣಗಳನ್ನು ನೆನೆದು ದೇವರ ಆಜ್ಞೆಗಳನ್ನು ಪಾಲನೆಮಾಡು. ದೇವರ ಆಜ್ಞೆಗಳನ್ನು ಸ್ಮರಿಸಿಕೊಂಡು ನೆರೆಯವನ ಮೇಲೆ ಮುನಿಸಬೇಡ ಮಹೋನ್ನತನ ಒಡಂಬಡಿಕೆಯನ್ನು ನೆನಸಿ ಕೊಂಡು ತಪ್ಪು ನೆಪ್ಪುಗಳನ್ನು ವೀಕ್ಷಿಸಬೇಡ.ಕೀರ್ತನೆ: 103:1-2, 3-4, 9-10, 11-12
ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು, ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ
ಎರಡನೇ ವಾಚನ: ರೋಮನರಿಗೆ14:7-9
ಸಹೋದರರೇ, ನಮ್ಮಲ್ಲಿ ಯಾರೂ ತನಗಾಗಿಯೇ ಬದುಕುವುದಿಲ್ಲ; ತನಗಾಗಿಯೇ ಸಾಯುವುದಿಲ್ಲ. ನಾವು ಬದುಕಿದರೂ ಪ್ರಭುವಿಗಾಗಿಯೇ; ಸತ್ತರೂ ಅವರಿಗಾಗಿಯೇ. ನಾವು ಬದುಕಿದರೂ ಸತ್ತರೂ ಪ್ರಭುವಿಗೆ ಸೇರಿದವರು. ಏಕೆಂದರೆ, ಸತ್ತವರಿಗೂ ಬದುಕುವವರಿಗೂ ಪ್ರಭುವಾಗಬೇಕೆಂಬ ಉದ್ದೇಶದಿಂದಲೇ ಕ್ರಿಸ್ತಯೇಸು ಸತ್ತು ಜೀವಂತರಾದದ್ದು.ಶುಭಸಂದೇಶ: ಮತ್ತಾಯ18:21-35
ಅನಂತರ ಪೇತ್ರನು ಯೇಸುವಿನ ಬಳಿಗೆ ಬಂದು, “ಸ್ವಾಮೀ, ನನಗೆ ವಿರುದ್ಧ ದ್ರೋಹಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?” ಎಂದು ಕೇಳಿದನು. “ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ,” ಎಂದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, “ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ‘ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: ‘ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮೀ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅಂಗಲಾಚಿದ. ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿಬಿಟ್ಟ. “ಆದರೆ ಅದೇ ಸೇವಕ ಹೊರಗೆಬಂದದ್ದೇ ತನಗೆ ಕೇವಲ ನೂರು ‘ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ. ಅವನನ್ನು ಹಿಡಿದು, ‘ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ‘ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,’ ಎಂದು ಕಾಲಿಗೆ ಬಿದ್ದು ಕೇಳಿಕೊಂಡ. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಯಿಸಿ, ‘ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. ನಾನು ನಿನಗೆ ದಯೆತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆತೋರಿಸಬೇಕಿತ್ತು ಅಲ್ಲವೇ?’ ಎಂದು ಸಿಟ್ಟುಗೊಂಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,” ಎಂದರು.
No comments:
Post a Comment