ಮೊದಲನೇ ವಾಚನ: ದಾನಿಯೇಲನು 7:9-10, 13-14
ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು. ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದುಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪುನೀಡಲು ಕುಳಿತುಕೊಂಡರು. ಪಟ್ಟಿಪುಸ್ತಕಗಳನ್ನು ತೆರೆಯಲಾಯಿತು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!
ಕೀರ್ತನೆ: 138:1-2, 2-3, 4-5
ಶ್ಲೋಕ: ಹೃದಯಪೂರ್ವಕ ವಂದನೆ ಪ್ರಭೂ ನಿನಗೆ, ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ.
ಶುಭಸಂದೇಶ: ಯೋವಾನ್ನ 1:47-51
ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, “ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ,” ಎಂದು ನುಡಿದರು. ನತಾನಿಯೇಲನು, “ನನ್ನ ಪರಿಚಯ ನಿಮಗೆ ಹೇಗಾಯಿತು?” ಎಂದು ಕೇಳಲು ಯೇಸು, “ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ,” ಎಂದು ಉತ್ತರಕೊಟ್ಟರು. ಅದಕ್ಕೆ ನತಾನಿಯೇಲನು, “ಗುರುದೇವಾ’ ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,” ಎಂದನು. ಆಗ ಯೇಸು, “ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ,” ಎಂದು ನುಡಿದರು. ತಮ್ಮ ಮಾತನ್ನು ಮುಂದುವರೆಸುತ್ತಾ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ,” ಎಂದು ಹೇಳಿದರು.
No comments:
Post a Comment