ಮೊದಲನೇ ವಾಚನ: ಯೆಶಾಯ 55:6-9
ಅರಸಿರಿ ಸರ್ವೇಶ್ವರನನು ಆತ ದೊರಕುವ ವೇಳೆಯಲಿ ವಿನಂತಿಸಿರಿ ಆತನಿರುವಾಗಲೆ ಸಮೀಪದಲಿ. ಬಿಟ್ಟುಬಿಡಲಿ ದುಷ್ಟನು ತನ್ನ ದುರ್ಮಾರ್ಗವನು ತೊರೆದುಬಿಡಲಿ ದುರುಳನು ದುರಾಲೋಚನೆಗಳನು. ಹಿಂದಿರುಗಿ ಬರಲಿ ಸರ್ವೇಶ್ವರನ ಬಳಿಗೆ ಕರುಣೆ ತೋರುವನು ಆತನು ಅವನಿಗೆ. ಆಶ್ರಯಪಡೆಯಲಿ ಅವನು ನಮ್ಮ ದೇವರಿಂದ ಕ್ಷಮಿಸುವನಾತನು ಮಹಾಕೃಪೆಯಿಂದ. “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಂಥಲ್ಲ ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಂಥಲ್ಲ” ಎಂದಿಹನು ಸರ್ವೇಶ್ವರ. “ಎಷ್ಟೋ ಉನ್ನತ ಆಕಾಶವು ಭೂಮಿಯಿಂದ ಅಷ್ಟೂ ಉನ್ನತ ನನ್ನ ಮಾರ್ಗ ನಿಮ್ಮ ಮಾರ್ಗಗಳಿಗಿಂತ, ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತ.
ಕೀರ್ತನೆ:145:2-3, 8-9, 17-18
ಶ್ಲೋಕ: ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ
ಎರಡನೇ ವಾಚನ: ಫಿಲಿಪ್ಪಿಯರಿಗೆ 1:20-24, 27
ಸಹೋದರರೇ, ನನ್ನ ಕರ್ತವ್ಯಪಾಲನೆಯಲ್ಲಿ ನಾಚುವಂಥ ಸಂದರ್ಭವು ನನಗೆಂದಿಗೂ ಬರದೆಂದು ಬಲ್ಲೆ; ನಾನು ಬದುಕಿದರೂ ಸರಿ, ಸತ್ತರೂ ಸರಿ; ನನ್ನ ದೇಹದ ಮೂಲಕ ಕ್ರಿಸ್ತಯೇಸುವಿಗೆ ಎಂದಿನಂತೆ ಈಗಲೂ ಮಹಿಮೆ ಉಂಟಾಗಬೇಕೆಂಬುದೇ ನನ್ನ ಉತ್ಕಟ ಆಕಾಂಕ್ಷೆ ಹಾಗೂ ನಿರೀಕ್ಷೆ. ನನಗಂತೂ ಬದುಕುವುದೆಂದರೆ ಕ್ರಿಸ್ತಯೇಸುವೇ; ಸಾಯುವುದು ಲಾಭವೇ. ದೈಹಿಕವಾಗಿ ಬದುಕುವುದು ಫಲಪ್ರದವಾಗಿದ್ದರೆ, ನಾನು ಬದುಕುವುದು ಉತ್ತಮವೋ ಅಥವಾ ಸಾಯುವುದು ಸೂಕ್ತವೋ ನನಗೆ ತಿಳಿಯದು. ಉಭಯ ಸಂಕಟಕ್ಕೆ ಸಿಲುಕಿದ್ದೇನೆ. ಒಂದು ಕಡೆ, ಈ ಬದುಕನ್ನು ತೊರೆದು ಕ್ರಿಸ್ತಯೇಸುವಿನೊಡನೆ ಒಂದಾಗಿರಬೇಕೆಂಬುದೇ ನನ್ನ ಬಯಕೆ. ಇದು ಎಷ್ಟೋ ಮೇಲಾದುದು. ಮತ್ತೊಂದು ಕಡೆ, ನಿಮಗೋಸ್ಕರ ಇಹದಲ್ಲಿದ್ದು ಜೀವಿಸುವುದು ಅತ್ಯವಶ್ಯಕವಾಗಿದೆ. ಅದೇನೇ ಇರಲಿ, ನೀವು ಮಾತ್ರ ಕ್ರಿಸ್ತಯೇಸುವಿನ ಶುಭಸಂದೇಶಕ್ಕೆ ಯೋಗ್ಯರಾಗಿ ನಡೆದುಕೊಳ್ಳಿರಿ. ನಾನು ನಿಮ್ಮಲ್ಲಿಗೆ ಬಂದರೂ ಸರಿ, ಬಾರದಿದ್ದರೂ ಸರಿ, ಇದು ಮುಖ್ಯವಲ್ಲ. ಶುಭಸಂದೇಶವು ನೀಡುವ ವಿಶ್ವಾಸಕ್ಕಾಗಿ ನೀವು ಒಮ್ಮನಸ್ಸಿನಿಂದ, ಕೆಚ್ಚಿನಿಂದ ಹೋರಾಡುವುದೇ ಮುಖ್ಯ. ಇದು ನನಗೆ ತಿಳಿದುಬಂದರೆ ಅಷ್ಟೇ ಸಾಕು.
ಶುಭಸಂದೇಶ: ಮತ್ತಾಯ 20:1-16

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಸ್ವರ್ಗಸಾಮ್ರಾಜ್ಯವು ಹೀಗಿದೆ: ಒಬ್ಬ ಯಜಮಾನನಿಗೆ ಒಂದು ದ್ರಾಕ್ಷಿತೋಟವಿತ್ತು. ಅದರಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಾರರನ್ನು ಗೊತ್ತುಮಾಡಲು ಅವನು ಬೆಳಗಿನ ಜಾವದಲ್ಲೇ ಹೊರಟ. ಆಳಿಗೆ ಒಂದು ಬೆಳ್ಳಿ ನಾಣ್ಯದಂತೆ ದಿನಕೂಲಿಯನ್ನು ಮಾತಾಡಿ ತೋಟಕ್ಕೆ ಕಳುಹಿಸಿದ. ಸುಮಾರು ಬೆಳಿಗ್ಗೆ ಒಂಭತ್ತು ಗಂಟೆಗೆ ಅವನು ಪುನಃ ಸಂತೆಬೀದಿಯ ಕಡೆ ಹೋದ. ಕೆಲಸವಿಲ್ಲದೆ ಸುಮ್ಮನೆ ನಿಂತುಕೊಂಡಿದ್ದ ಕೆಲವು ಕೂಲಿಗಾರರನ್ನು ಅಲ್ಲಿ ಕಂಡ. ನೀವೂ ನನ್ನ ದ್ರಾಕ್ಷಿತೋಟಕ್ಕೆ ಹೋಗಿರಿ; ನ್ಯಾಯವಾದ ಕೂಲಿಯನ್ನು ನಿಮಗೆ ಕೊಡುತ್ತೇನೆ,’ ಎಂದ. ಅವರೂ ಹೋದರು. ಬಳಿಕ ಸುಮಾರು ಹನ್ನೆರಡು ಗಂಟೆಗೊಮ್ಮೆ, ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ. ಐದು ಗಂಟೆಗೆ ಹೋದಾಗಲೂ ಬೇರೆ ಕೆಲವರು ಅಲ್ಲಿ ನಿಂತಿರುವುದನ್ನು ಕಂಡು, ‘ದಿನವಿಡೀ ಕೆಲಸಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲಾ, ಏಕೆ?’ ಎಂದು ಕೇಳಿದ. ಅದಕ್ಕೆ ಅವರು, ‘ನಮ್ಮನ್ನು ಯಾರೂ ಕೂಲಿಗೆ ಕರೆಯಲಿಲ್ಲ,’ ಎಂದರು. ‘ಹಾಗಾದರೆ ನೀವೂ ಕೂಡ ನನ್ನ ದ್ರಾಕ್ಷಿತೋಟಕ್ಕೆ ಹೋಗಿ ಕೆಲಸಮಾಡಿ,’ ಎಂದು ಹೇಳಿ ಅವರನ್ನೂ ಕಳುಹಿಸಿದ. “ಸಂಜೆಯಾಯಿತು, ತೋಟದ ಯಜಮಾನ ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿಕೊಡು,’ ಎಂದ. ಅದರಂತೆ ಐದು ಗಂಟೆಗೆ ಗೊತ್ತುಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. ಮೊತ್ತಮೊದಲು ಗೊತ್ತುಮಾಡಿದವರು ತಮ್ಮ ಸರದಿ ಬಂದಾಗ, ತಮಗೆ ಹೆಚ್ಚು ಸಿಗುವುದೆಂದು ಭಾವಿಸಿದರು. ಆದರೆ ಅವರಿಗೂ ಒಂದೊಂದೇ ಬೆಳ್ಳಿನಾಣ್ಯ ದೊರಕಿತು. ಅದನ್ನು ತೆಗೆದುಕೊಂಡಾಗ ಅವರು ದಣಿಯ ವಿರುದ್ಧ ಗೊಣಗಲಾರಂಭಿಸಿದರು. ‘ಕಡೇಹೊತ್ತಿನಲ್ಲಿ ಬಂದ ಇವರು ಒಂದೇ ಒಂದು ಗಂಟೆ ಕೆಲಸಮಾಡಿದ್ದಾರೆ, ಬಿಸಿಲಲ್ಲಿ ಬೆಂದು, ದಿನವೆಲ್ಲಾ ದುಡಿದ ನಮ್ಮನ್ನು ಇವರಿಗೆ ಸರಿಸಮಮಾಡಿದ್ದೀರಲ್ಲಾ!’ ಎಂದರು. ಅದಕ್ಕೆ ಯಜಮಾನ ಅವರಲ್ಲಿ ಒಬ್ಬನಿಗೆ, ‘ಅಯ್ಯಾ, ನಿನಗೆ ನಾನು ಅನ್ಯಾಯಮಾಡಿಲ್ಲ. ದಿನಕ್ಕೊಂದು ಬೆಳ್ಳಿನಾಣ್ಯದಂತೆ ನೀನು ನನ್ನೊಡನೆ ಒಪ್ಪಂದಮಾಡಿಕೊಳ್ಳಲಿಲ್ಲವೆ? ನಿನ್ನ ಕೂಲಿ ಏನೋ ಅದನ್ನು ತೆಗೆದುಕೊಂಡು ಹೋಗು. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ. ನನ್ನದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೆ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?’ ಎಂದ. ಹೀಗೆ, ಕಡೆಯವರು ಮೊದಲಿನವರಾಗುವರು; ಮೊದಲಿನವರು ಕಡೆಯವರಾಗುವರು.”
No comments:
Post a Comment