ಮೊದಲನೇ ವಾಚನ: 1 ಕೊರಿಂಥಿಯರಿಗೆ 4: 6-15

ಸಹೋದರರೇ, ನಿಮ್ಮ ಪ್ರಯೋಜನಕ್ಕಾಗಿ ಇದೆಲ್ಲವನ್ನು ನನಗೂ ಅಪೊಲೋಸನಿಗೂ ಅನ್ವಯಿಸಿ ಹೇಳಿದ್ದೇನೆ. ನೀವು ನಮ್ಮ ಆದರ್ಶವನ್ನು ಅನುಸರಿಸಬೇಕು. ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ವಿೂರಬಾರದು. ನಿಮ್ಮಲ್ಲಿ ಯಾರೂ ಒಬ್ಬನ ಪಕ್ಷವಹಿಸಿ ಜಂಬ ಕೊಚ್ಚಿಕೊಂಡು ಮತ್ತೊಬ್ಬನನ್ನು ಕಡೆಗಣಿಸಬಾರದು. ಇತರರಿಗಿಂತಲೂ ನಿನ್ನನ್ನು ಶ್ರೇಷ್ಠನನ್ನಾಗಿಸಿದವರು ಯಾರು? ದೇವರಿಂದ ಪಡೆಯದೆ ಇರುವುದು ನಿನ್ನಲ್ಲಿ ಯಾವುದಾದರೂ ಇದೆಯೆ? ಹೀಗೆ ಎಲ್ಲವನ್ನೂ ದೇವರಿಂದ ಪಡೆದ ಮೇಲೆ, ಪಡೆಯದವನಂತೆ ಜಂಬ ಕೊಚ್ಚಿಕೊಳ್ಳುವುದೇಕೆ? ಈಗಾಗಲೇ ನೀವು ಸಂತೃಪ್ತರಾಗಿಬಿಟ್ಟಿರೋ? ಇಷ್ಟಕ್ಕೇ ಶ್ರೀಮಂತರಾಗಿಬಿಟ್ಟಿರೋ? ನಮ್ಮನ್ನು ಬಿಟ್ಟು ನೀವು ಸಿಂಹಾಸನವೇರಿಬಿಟ್ಟಿರೋ? ನೀವು ನಿಜವಾಗಿಯೂ ರಾಜರಾಗಿದ್ದರೆ ಚೆನ್ನಾಗಿರುತ್ತಿತ್ತು! ಆಗ ನಾವೂ ನಿಮ್ಮ ಜೊತೆ ರಾಜ್ಯ ಆಳಬಹುದಿತ್ತು! ಬದಲಿಗೆ, ಪ್ರೇಷಿತರಾದ ನಮ್ಮನ್ನು ದೇವರು ಕಟ್ಟಕಡೆಯವರನ್ನಾಗಿಸಿದ್ದಾರೆಂದು ತೋರುತ್ತದೆ. ಎಲ್ಲರ ಮುಂದೆ ಮರಣದಂಡನೆಗೆ ಎಳೆದೊಯ್ಯಲಾಗುವವರಂತೆ ನಾವು ದೂತರಿಗೂ ಮಾನವರಿಗೂ ಇಡೀ ಜಗತ್ತಿಗೂ ಹಾಸ್ಯಾಸ್ಪದವಾದ ನೋಟವಾಗಿದ್ದೇವೆ. ಕ್ರಿಸ್ತಯೇಸುವಿನ ನಿಮಿತ್ತ ನಾವಂತೂ ಹುಚ್ಚರು, ನೀವಾದರೋ ಕ್ರಿಸ್ತಯೇಸುವಿನಲ್ಲಿ ಬುದ್ದಿವಂತರು; ನಾವು ಬಲಹೀನರು, ನೀವು ಬಲಾಢ್ಯರು; ನಾವು ಅವಮಾನಿತರು, ನೀವು ಸನ್ಮಾನಿತರು! ಈ ಗಳಿಗೆಯವರೆಗೂ ನಾವು ಹಸಿದು ಬಾಯಾರಿದವರು, ಬಟ್ಟೆಬರೆ ಇಲ್ಲದವರು, ಏಟುಪೆಟ್ಟು ತಿನ್ನುವವರು ಮತ್ತು ಮನೆಮಠವಿಲ್ಲದೆ ಅಲೆಯುವವರು ಆಗಿದ್ದೇವೆ. ಸ್ವಂತ ದುಡಿಮೆಯಿಂದ ಜೀವಿಸುತ್ತೇವೆ; ನಮ್ಮನ್ನು ಶಪಿಸುವವರನ್ನು ಆಶೀರ್ವದಿಸುತ್ತೇವೆ; ಹಿಂಸೆಗೊಳಗಾದಾಗ ಸಹಿಸಿಕೊಳ್ಳುತ್ತೇವೆ. ಅಪವಾದ ಹೊರಿಸಿದವರೊಡನೆ ವಿನಯದಿಂದ ವರ್ತಿಸುತ್ತೇವೆ; ಪ್ರಪಂಚದ ಪಾಲಿಗೆ ನಾವೀಗ ಕಸಕ್ಕಿಂತಲೂ ಕಡೆ; ವಿಶ್ವಕ್ಕೇ ಹೊಲಸು! ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಬರೆಯಲಿಲ್ಲ. ನಮ್ಮ ನೆಚ್ಚಿನ ಮಕ್ಕಳಾದ ನಿಮ್ಮನ್ನು ಎಚ್ಚರಿಸಲೆಂದು ಬರೆದೆನು. ನಿಮಗೆ ಕ್ರಿಸ್ತಯೇಸುವಿನಲ್ಲಿ ಸಾವಿರಾರು ಮಂದಿ ಶಿಕ್ಷಕರು ಇರಬಹುದು. ಆದರೆ ನಿಮಗೆ ನಾನೊಬ್ಬನೇ ತಂದೆ. ಶುಭಸಂದೇಶದ ಮೂಲಕ ನಾನೇ ನಿಮ್ಮನ್ನು ಕ್ರಿಸ್ತಯೇಸುವಿನಲ್ಲಿ ಪಡೆದ ತಂದೆ.
ಕೀರ್ತನೆ: 145:17-18, 19-20, 21
ಶ್ಲೋಕ: ಹತ್ತಿರ ಇಹನು ಪ್ರಭು ಕರೆಯುವಾವರೆಲ್ಲರಿಗೆ
ಶುಭಸಂದೇಶ: ಲೂಕ 6:1-5
ಒಂದು ಸಬ್ಬತ್ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಶಿಷ್ಯರು ಕೆಲವು ತೆನೆಗಳನ್ನು ಕಿತ್ತು ಕೈಗಳಲ್ಲಿ ಹೊಸಕಿ ತಿನ್ನಲಾರಂಭಿಸಿದರು. ಅದನ್ನು ಕಂಡ ಫರಿಸಾಯರಲ್ಲಿ ಕೆಲವರು, “ಸಬ್ಬತ್ತಿನ ದಿನದಲ್ಲಿ ನಿಷಿದ್ಧವಾದುದನ್ನು ನೀವು ಮಾಡುವುದೇಕೆ?” ಎಂದು ಅವರನ್ನು ಆಕ್ಷೇಪಿಸಿದರು. ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೆ? ದಾವೀದನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತೆಗೆದುಕೊಂಡು ತಿಂದುದಲ್ಲದೆ ತನ್ನ ಸಂಗಡಿಗರಿಗೂ ಕೊಟ್ಟನು ಅಲ್ಲವೆ? ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ,” ಎಂದು ಉತ್ತರಕೊಟ್ಟರು.
No comments:
Post a Comment