19.06.2020 - "ನನ್ನ ನೊಗ ಹಗುರ, ನನ್ನ ಹೊರೆ ಸುಗಮ"

ಯೇಸುವಿನ ಪವಿತ್ರ ಹೃದಯದ ಮಹೋತ್ಸವ

ಮೊದಲನೇ ವಾಚನ: ಧರ್ಮೋಪದೇಶಕಾಂಡ 7:6-11


ಮೋಶೆಯು ಜನರಿಗೆ ಹೇಳಿದ್ದೇನೆಂದರೆ: "ನೀವು ನಿಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲಾದ ಜನರು; ಜಗದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನರಾಗಲು ಅವರು ಆಯ್ದುಕೊಂಡಿದ್ದಾರೆ. “ನೀವು ಸಂಖ್ಯೆಯಲ್ಲಿ ಜನಾಂಗಗಳಿಗೆಲ್ಲಾ ಹೆಚ್ಚುಮಂದಿ ಎಂದು ಪ್ರೀತಿಸಿ, ಆಯ್ದುಕೊಳ್ಳಲಿಲ್ಲ; ನಿಜವಾಗಿಯೂ ನೀವು ಎಲ್ಲಾ ಜನಾಂಗಗಳಿಗಿಂತ ಅಲ್ಪಸಂಖ್ಯಾತರು. ಆದರೂ ಸರ್ವೇಶ್ವರ ನಿಮ್ಮನ್ನು ಪ್ರೀತಿಸಿ, ತಾವು ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ನೆರವೇರಿಸಬೇಕೆಂದು, ಈಜಿಪ್ಟಿನ ರಾಜ ಫರೋಹನ ಕೈಕೆಳಗೆ ಗುಲಾಮರಾಗಿದ್ದ ನಿಮ್ಮನ್ನು ಬಿಡುಗಡೆಮಾಡಿ, ತಮ್ಮ ಭುಜಬಲ ಪ್ರಯೋಗಿಸಿ, ಆ ದೇಶದಿಂದ ಬರಮಾಡಿದ್ದಾರೆ. ಆದುದರಿಂದ ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯೊಬ್ಬರೇ ದೇವರೆಂದು ತಿಳಿದುಕೊಳ್ಳಬೇಕು. ಅವರೇ ನಂಬಿಕಸ್ತರಾದ ದೇವರು; ತಮ್ಮನ್ನು ಪ್ರೀತಿಸಿ ತಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ತಾವು ಮಾಡಿದ ವಾಗ್ದಾನವನ್ನು ನೆರವೇರಿಸಿ, ತಮ್ಮ ಅಚಲಪ್ರೀತಿಯನ್ನು ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ತೋರಿಸುವರು. ತಮ್ಮನ್ನು ತಿರಸ್ಕರಿಸಿದವರಿಗೆ ಪ್ರತಿಯಾಗಿ ನಾಶವನ್ನು ಉಂಟುಮಾಡುವರು. ಇದನ್ನು ನೀವು ತಿಳಿದುಕೊಳ್ಳಬೇಕು. ಹಗೆಯವರ ವಿಷಯದಲ್ಲಿ ಅವರು ತಡಮಾಡದೆ ಆಗಲೇ ಮುಯ್ಯಿತೀರಿಸುವರು. ಆದಕಾರಣ ನಾನು ಈ ದಿನ ನಿಮಗೆ ಬೋಧಿಸುವ ಧರ್ಮೋಪದೇಶವನ್ನೂ ಆಜ್ಞಾವಿಧಿಗಳನ್ನೂ ನೀವು ಅನುಸರಿಸಿ ನಡೆಯಬೇಕು.

ಕೀರ್ತನೆ: 103:1-2, 3-4, 6-7 8, 10

ಶ್ಲೋಕ: ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು

ಎರಡನೇ ವಾಚನ: 1 ಯೊವಾನ್ನನು 4:7-1 

ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿ ದೇವರಿಂದ ಉಗಮವಾದುದು. ಪ್ರೀತಿಸುವವನು ದೇವರ ಮಗನು. ಅವನು ದೇವರನ್ನು ಬಲ್ಲವನು. ಪ್ರೀತಿಸದವನು ದೇವರನ್ನು ಬಲ್ಲವನಲ್ಲ. ಏಕೆಂದರೆ, ದೇವರು ಪ್ರೀತಿಸ್ವರೂಪಿ. ತಮ್ಮ ಏಕೈಕ ಪುತ್ರನ ಮುಖಾಂತರ ನಾವು ಸಜ್ಜೀವವನ್ನು ಪಡೆಯುವಂತೆ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ನಮ್ಮ ಮೇಲೆ ದೇವರಿಗಿರುವ ಪ್ರೀತಿ ಹೀಗೆ ವ್ಯಕ್ತವಾಯಿತು. ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಅವರು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತಮ್ಮ ಪುತ್ರನನ್ನು ಕಳುಹಿಸಿದ್ದರಲ್ಲಿಯೇ ಪ್ರೀತಿಯ ನಿಜಗುಣ ತೋರಿಬರುತ್ತದೆ. ಪ್ರಿಯರೇ, ದೇವರೇ ನಮ್ಮನ್ನು ಇಷ್ಟಾಗಿ ಪ್ರೀತಿಸಿರುವಲ್ಲಿ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸಲೇಬೇಕು. ದೇವರನ್ನು ಯಾರೂ ಎಂದೂ ನೋಡಿಲ್ಲ. ಆದರೂ ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಸಿರುತ್ತಾರೆ. ಅವರ ಪ್ರೀತಿ ನಮ್ಮಲ್ಲಿ ಸಿದ್ಧಿಗೆ ಬರುತ್ತದೆ. ದೇವರು ನಮಗೆ ತಮ್ಮ ಆತ್ಮವನ್ನು ನೀಡಿರುವುದರಿಂದಲೇ ನಾವು ಅವರಲ್ಲಿಯೂ ಅವರು ನಮ್ಮಲ್ಲಿಯೂ ನೆಲೆಸಿರುವುದನ್ನು ತಿಳಿದುಕೊಳ್ಳುತ್ತೇವೆ. ಪಿತನು ತಮ್ಮ ಪುತ್ರನನ್ನು ಲೋಕೋದ್ಧಾರಕನನ್ನಾಗಿ ಕಳುಹಿಸಿಕೊಟ್ಟದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇದರ ವಿಷಯವಾಗಿ ಸಾಕ್ಷಿ ಹೇಳುತ್ತೇವೆ. ಯೇಸುವೇ ದೇವರ ಪುತ್ರನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನಲ್ಲಿ ದೇವರು ನೆಲೆಸಿದ್ದಾರೆ; ಅವನೂ ದೇವರಲ್ಲಿ ನೆಲೆಸಿದ್ದಾನೆ. ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿ ನಮಗೆ ಗೊತ್ತಿದೆ. ಅದರಲ್ಲಿ ನಮಗೆ ವಿಶ್ವಾಸವಿದೆ.

ಶುಭಸಂದೇಶ: ಮತ್ತಾಯ11:25-30

ಆ ಸಮಯದಲ್ಲಿ ಯೇಸುಸ್ವಾಮಿ, “ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು, ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. “ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ಪುತ್ರನು ಯಾರೆಂಬುದನ್ನು ಪಿತನೇ ಹೊರತು ಬೇರಾರೂ ಅರಿಯರು. ಪಿತನು ಯಾರು ಎಂಬುದನ್ನು ಪುತ್ರನು ಮತ್ತು ಯಾವನಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ, ಅವರೇ ಹೊರತು ಮತ್ತಾರೂ ಅರಿಯರು. “ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ,” ಎಂದರು.

No comments:

Post a Comment

11.01.26 - "ಅವರು ನಮಗೆ ಪವಿತ್ರಾತ್ಮ ಅವರಿಂದಲೂ ಅಗ್ನಿಯಿಂದಲೂ ದಿಕ್ಷಾಸ್ನಾನ ಕೊಡುವರು"

ಮೊದಲನೇ ವಾಚನ: ಯೆಶಾಯ 40:1-5, 9-11 (ಯೆಶಾಯ: 41:1-4, 6-7) ನಿಮ್ಮ ದೇವರು ಇಂತೆನ್ನುತ್ತಾರೆ: "ಸಂತೈಸಿ, ನನ್ನ ಜನರನ್ನು ಸಂತೈಸಿರಿ. ಜೆರುಸಲೇಮಿನೊಡನೆ ಪ್ರೀತಿಯ...