ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

14.06.2020 - "ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು"

ಮೊದಲನೇ ವಾಚನ: ಧರ್ಮೋಪದೇಶಕಾಂಡ 8:2-3, 14-16

ಮೋಶೆ ಇಸ್ರಯೇಲರನ್ನು ಕರೆದು ಅವರಿಗೆ ಹೀಗೆಂದು ಹೇಳಿದನು: ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಈ ನಲವತ್ತು ವರ್ಷ ಮರುಭೂಮಿಯಲ್ಲಿ ನಡೆಸಿದ್ದನ್ನು ಹಾಗು ನೀವು ಅವರ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದು ಕೊಳ್ಳುವುದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನು ನೆನಪಿಗೆ ತಂದುಕೊಳ್ಳಿರಿ. ಮಾನವರು ಆಹಾರ ಮಾತ್ರದಿಂದಲ್ಲ, ಸರ್ವೇಶ್ವರ ಆಡುವ ಪ್ರತಿಯೊಂದು ನುಡಿಯಿಂದಲೂ ಜೀವಿಸುತ್ತಾರೆಂಬುದು ನಿಮಗೆ ತಿಳಿಯುವಂತೆ ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿದರು. ಹಸಿವೆಯಿಂದ ಬಳಲಿಸಿದರು. ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದರು. ನೀವು ಗರ್ವಗೊಂಡು ನಿಮ್ಮ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟೀರಿ! ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಪರೀಕ್ಷಿಸಿದನಂತರ ನಿಮಗೆ ಒಳಿತನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದರು. ವಿಷಸರ್ಪಗಳೂ ಚೇಳುಗಳೂ ಇದ್ದ ಆ ಘೋರವಾದ ಮಹಾಮರುಭೂಮಿಯನ್ನೂ ನೀರು ಬತ್ತಿಹೋಗಿದ್ದ ಭೂಮಿಗಳನ್ನೂ ದಾಟಿಸಿದರು; ಗಟ್ಟಿಯಾದ ಬಂಡೆಯೊಳಗಿಂದ ನೀರನ್ನು ಹೊರಡಿಸಿಕೊಟ್ಟರು. ನಿಮ್ಮ ಪೂರ್ವಿಕರಿಗೆ ತಿಳಿಯದೆ ಇದ್ದ ಮನ್ನವನ್ನು ಕೊಟ್ಟು ಪೋಷಿಸಿದರು. 

ಕೀರ್ತನೆ: 147:12-13, 14-15, 19-20

ಶ್ಲೋಕ: ಜೆರುಸಲೇಮೇ, ಕೀರ್ತಿಸು ಪ್ರಭುವನು

ಎರಡನೇ ವಾಚನ: 1 ಕೊರಿಂಥಿಯರಿಗೆ 10:16-17

ಸಹೋದರರೇ, ನಾವು ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತಯೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತಯೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿ ಒಂದೇ; ಆದ್ದರಿಂದ ನಾವು ಅನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ.

ಶುಭಸಂದೇಶ: ಯೊವಾನ್ನ 6:51-58


ಯೇಸುಸ್ವಾಮಿ ಜನರಿಗೆ ಬೋಧಿಸುತ್ತಾ: "ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೋಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ,” ಎಂದು ಹೇಳಿದರು. ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉಂಟಾಯಿತು. “ಈತನು ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು?” ಎಂದು ಕೇಳತೊಡಗಿದರು. ಅದಕ್ಕೆ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ. ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯಜೀವ ಇರುತ್ತದೆ. ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ. ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ. ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ. ನಾನು ಅವನಲ್ಲಿ ನೆಲೆಸಿರುತ್ತೇನೆ. ಜೀವಸ್ವರೂಪಿ ಆದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು. ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವನು ನನ್ನಿಂದಲೇ ಜೀವಿಸುತ್ತಾನೆ. ಸ್ವರ್ಗದಿಂದ ಇಳಿದು ಬಂದ ರೊಟ್ಟಿ ಇದೇ. ನಿಮ್ಮ ಪೂರ್ವಜರು ‘ಮನ್ನಾ’ವನ್ನು ತಿಂದರೂ ಸಾವಿಗೆ ತುತ್ತಾದರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು,” ಎಂದು ಹೇಳಿದರು.

No comments:

Post a Comment