ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 11:21-26; 13:1-3

ಪ್ರಭುವಿನ ಶಕ್ತಿ ಅವರೊಡನೆ ಇತ್ತು. ಜನರು ಬಹುಸಂಖ್ಯೆಯಲ್ಲಿ ಪ್ರಭುವಿನಲ್ಲಿ ವಿಶ್ವಾಸವಿಟ್ಟು ಅವರ ಭಕ್ತರಾದರು. ಈ ಸಮಾಚಾರ ಜೆರುಸಲೇಮಿನ ಧರ್ಮಸಭೆಗೆ ತಲುಪಿತು. ಬಾರ್ನಬನನ್ನು ಅಂತಿಯೋಕ್ಯಕ್ಕೆ ಅವರು ಕಳುಹಿಸಿದರು. ಬಾರ್ನಬನು ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ಕಂಡು ಸಂತೋಷಪಟ್ಟನು. ಪ್ರಭುವಿಗೆ ದೃಢಮನಸ್ಸಿನಿಂದ ಪ್ರಾಮಾಣಿಕರಾಗಿರುವಂತೆ ಪ್ರೋತ್ಸಾಹಿಸಿದನು. ಬಾರ್ನಬನು ಸತ್ಪುರುಷನು, ಪವಿತ್ರಾತ್ಮಭರಿತನು ಹಾಗೂ ಅಗಾಧ ವಿಶ್ವಾಸವುಳ್ಳವನು. ಅನೇಕ ಜನರು ಪ್ರಭುವಿನ ಅನುಯಾಯಿಗಳಾದರು. ಅನಂತರ ಬಾರ್ನಬನು ಸೌಲನನ್ನು ಹುಡುಕಿಕೊಂಡು ತಾರ್ಸಕ್ಕೆ ಹೋದನು. ಅವನನ್ನು ಅಲ್ಲಿ ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಅವರಿಬ್ಬರೂ ಬಂದು ವರ್ಷವಿಡೀ ಧರ್ಮಸಭೆಯೊಂದಿಗೆ ಇದ್ದು ಬಹುಜನರಿಗೆ ಉಪದೇಶ ಮಾಡಿದರು. ಭಕ್ತಾದಿಗಳನ್ನು ಮೊದಲಬಾರಿಗೆ ‘ಕ್ರೈಸ್ತರು’ ಎಂದು ಕರೆದದ್ದು-ಅಂತಿಯೋಕ್ಯದಲ್ಲೇ. ಅಂತಿಯೋಕ್ಯದ ಧರ್ಮಸಭೆಯಲ್ಲಿ ಕೆಲವು ಪ್ರವಾದಿಗಳೂ ಬೋಧಕರೂ ಇದ್ದರು. ಅವರಾರೆಂದರೆ: ಬಾರ್ನಬ, ಕಾಳನೆಂದು ಕರೆಯಲಾದ ಸಿಮೆಯೋನ್, ಸಿರೇನಿನ ಲೂಸಿಯಸ್, ಸಾಮಂತ ಹೆರೋದನ ಬಾಲ್ಯಸ್ನೇಹಿತ ಮೆನಹೇನ ಮತ್ತು ಸೌಲ ಒಂದು ದಿನ ಅವರು ದೇವಾರಾಧನೆಯಲ್ಲೂ ಉಪವಾಸ ವ್ರತದಲ್ಲೂ ನಿರತರಾಗಿದ್ದಾಗ ಪವಿತ್ರಾತ್ಮ, “ಬಾರ್ನಬ ಮತ್ತು ಸೌಲರನ್ನು ನಾನು ಯಾವ ಕಾರ್ಯಕ್ಕಾಗಿ ಕರೆದಿದ್ದೇನೋ ಆ ಕಾರ್ಯಕ್ಕಾಗಿ ವಿೂಸಲಾಗಿಡಿ,” ಎಂದರು. ಅಂತೆಯೇ ಅವರು ಉಪವಾಸವಿದ್ದು, ಪ್ರಾರ್ಥನೆ ಮಾಡಿ, ಇವರಿಬ್ಬರ ಮೇಲೆ ಹಸ್ತನಿಕ್ಷೇಪಮಾಡಿ ಕಳುಹಿಸಿಕೊಟ್ಟರು.
ಕೀರ್ತನೆ: 98:1, 2-3, 3-4, 5-6
ಶ್ಲೋಕ: ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ದಾರಕಾ ಶಕ್ತಿಯನು
ಶುಭಸಂದೇಶ: ಮತ್ತಾಯ 10: 7-13
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: " ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ. ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ. ಜೇಬಿನಲ್ಲಿ ಚಿನ್ನ, ಬೆಳ್ಳಿ, ತಾಮ್ರವನ್ನಾಗಲಿ, ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ. ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು. "ನೀವು ಒಂದು ಪಟ್ಟಣಕ್ಕಾಗಲಿ, ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡುಹಿಡಿಯಿರಿ. ಅಲ್ಲಿಂದ ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ. ನೀವು ಒಂದು ಮನೆಗೆ ಹೋದಾಗ, "ಈ ಮನೆಗೆ ಶುಭವಾಗಲಿ!" ಎಂದು ಹರಸಿರಿ. ಆ ಮನೆಯವರು ನಿಮ್ಮನ್ನು ಸ್ವಾಗತಿಸಿದರೆ, ನಿಮ್ಮ ಆಶೀರ್ವಾದ ಅವರ ಮೇಲೆ ನೆಲಸಲಿ. ನಿಮ್ಮನ್ನು ಸ್ವಾಗತಿಸದೆ ಹೋದರೆ, ನಿಮ್ಮ ಆಶೀರ್ವಾದ ನಿಮಗೇ ಹಿಂದಿರುಗಲಿ."