ಮೊದಲನೇ ವಾಚನ: ಜೆಕರ್ಯ 8:1-8
ಸೇನಾಧೀಶ್ವರ ಸರ್ವೇಶ್ವರ ಜೆಕರ್ಯನಿಗೆ ಪುನಃ ಕೊಟ್ಟ ಸಂದೇಶವಿದು "ಸಿಯೋನಿನ ವಿಷಯದಲ್ಲಿ ನನಗೆ ತುಂಬಾ ಅಭಿಮಾನವಿದೆ. ಅದರ ಶತ್ರುಗಳ ವಿಷಯದಲ್ಲಿ ಅಧಿಕ ರೋಷವಿದೆ," ಸರ್ವೇಶ್ವರ ಇಂತೆನ್ನುತ್ತಾರೆ: "ಸಿಯೋನಿಗೆ ಹಿಂದಿರುಗುವೆನು. ಜೆರುಸಲೇಮಿನ ನಡುವೆ ವಾಸಮಾಡುವೆನು. ಆಗ ಜೆರುಸಲೇಮ್ "ನಿಷ್ಠಾವಂತ ನಗರ" ಎನಿಸಿಕೊಳ್ಳುವುದು. ಅದಕ್ಕೆ ಸೇನಾಧೀಶ್ವರ ಸರ್ವೇಶಶ್ವರನ ಪರ್ವತ ಎಂಬ ಹೆಸರು ಬರುವುದು. ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ; "ಮುದುಕರು, ಮುದುಕಿಯರು ಮತ್ತೆ ಜೆರುಸಲೇಮಿನ ಚೌಕಗಳಲ್ಲಿ ಕುಳಿತುಕೊಳ್ಳುವರು. ವೃದ್ಧಾಪ್ಯದ ಪ್ರಯುಕ್ತ ಒಬ್ಬೊಬ್ಬರ ಕೈಯಲ್ಲಿ ಊರುಗೋಲು ಇರುವುದು. ಪಟ್ಟಣದ ಹಾದಿಬೀದಿಗಳಲ್ಲಿ ಮಕ್ಕಳು ತುಂಬಿಕೊಂಡಿರುವರು," ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: "ಅಳಿದುಳಿದಿರುವ ಜನರಿಗೆ ಇಂಥ ಪರಿಸ್ಥತಿ ಅತಿಶಯವಾಗಿ ಕಾಣಬಹುದು. ಆದರೆ ನನಗೆ ಅದೇನೂ ಅತಿಶಯವಲ್ಲ." ಇದು ಸರ್ವೇಶ್ವರನ ನುಡಿ. ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ. "ಇಗೋ, ನಾನು ನನ್ನ ಜನರನ್ನು ಪೂರ್ವ ಪಶ್ಚಿಮ ನಾಡುಗಳಂದ ಬಿಡುಗಡೆಮಾಡಿ, ಇಲ್ಲಿಗೆ ಬರಮಾಡುವೆನು. ಅವರು ಜೆರುಸಲೇಮಿನಲ್ಲೇ ವಾಸವಾಗಿರುವರು. ನಾನು ಅವರಿಗೆ ದೇವರಾಗಿರುವೆನು; ಅವರು ನನಗೆ ಸತ್ಸಂಬಂಧವುಳ್ಳ, ಸದ್ಧರ್ಮದ ಪ್ರಜೆಗಳಾಗಿರುವರು.
ಕೀರ್ತನೆ: 102:15-17, 18-20, 21, 22
ಶ್ಲೋಕ: ಪುನರುದ್ಧರಿಸುವನು ಪ್ರಭು ಸಿಯೋನನು
ಶುಭಸಂದೇಶ: ಲೂಕ 9:46-50
ಒಮ್ಮೆ, ತಮ್ಮಲ್ಲಿ ಅತಿ ಶ್ರೇಷ್ಟನು ಯಾರೆಂಬ ವಾದ ಶಿಷ್ಯರಲ್ಲಿ ಎದ್ದಿತು. ಅವರ ಮನಸ್ಸಿನ ಆಲೋಚನೆಗಳನ್ನು ಅರಿತ ಯೇಸು, ಒಂದಿ ಚಿಕ್ಕ ಮಗುವನ್ನು ತಂದು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು, "ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ; ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ. ನಿಮ್ಮೆಲ್ಲರಲ್ಲಿ ಅತ್ಯಲ್ಪನಾದವನೇ ಅತ್ಯುತ್ತಮನು," ಎಂದರು. ಆಗ ಯೊವಾನ್ನನು ಯೇಸುವಿಗೆ, "ಗುರುವೇ, ಯಾವನೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲದ ಕಾರಣ ಅವನನ್ನು ತಡೆದೆವು," ಎಂದನು ಅದಕ್ಕೆ ಯೇಸು, "ಅವನನ್ನು ತಡೆಯಬೇಡಿ, ನಿಮ್ಮ ವಿರೋಧಿ ಅಲ್ಲದವನು ನಿಮ್ಮ ಪರವಾಧಿ," ಎಂದು ಉತ್ತರಕೊಟ್ಟರು.
No comments:
Post a Comment