ಮೊದಲನೇ ವಾಚನ: ಕೊಲೊಸ್ಸೆಯರಿಗೆ 3:12-17
ಸಹೋದರರೇ, ನೀವು ದೇವರಿಂದ ಆಯ್ಕೆಯಾದವರು. ದೇವರಿಗೆ ಪ್ರಿಯವಾದವರು, ದೇವರ ಸ್ವಂತ ಜನರು. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳೇ ನಿಮ್ಮ ಆಭರಣವಾಗಿರಲಿ. ಒಬ್ಬರನೊಬ್ಬರು ಸೈರಿಸಿಕೊಳ್ಳಿ. ಒಬ್ಬನ ಮೇಲೆ ತಪ್ಪು ಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ. ಪ್ರಭು ಯೇಸು ನಿಮ್ಮನ್ನು ಕ್ಷಮಿಸಿದಂತೆ ನೀವೂ ಇತರರನ್ನು ಕ್ಷಮಿಸಿರಿ. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯೇ ಸಮಸ್ತವನ್ನು ಸಂಪೂರ್ಣಗೊಳಿಸುವ ಬಂಧನ. ನಿಮ್ಮ ಹೃನ್ಮನಗಳು ಕ್ರಿಸ್ತ ಯೇಸುವಿನ ಶಾಂತಿ ಸಮಾಧಾನದಿಂದ ತುಂಬಿರಲಿ. ನೀವು ಒಂದೇ ಶರೀರವಾಗಿ ಬಾಳಲು ಕರೆಯಲ್ಪಟ್ಟಿದ್ದೀರಿ; ಕೃತಜ್ಞತೆಯುಳ್ಳವರಾಗಿ ಜೀವಿಸಿರಿ. ಕ್ರಿಸ್ತ ಯೇಸುವಿನ ವಾಕ್ಯ ನಿಮ್ಮಲ್ಲಿ ನೆಲೆಸಿ ಸಮೃದ್ಧಿಯಾಗಿ ಬೆಳೆಯಲಿ. ಜ್ಞಾನಸಂಪನ್ನರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿರಿ ಹಾಗೂ ಬುದ್ಧಿ ಹೇಳಿಕೊಳ್ಳಿರಿ. ಕೃತಜ್ಞತೆಯುಳ್ಳವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಭಕ್ರಿಗೀತೆಗಳಿಂದಲೂ ಹೃದಯಾಂತರಾಳದಿಂದ ದೇವರಿಗೆ ಹಾಡಿರಿ. ನುಡಿಯಲ್ಲಾಗಲೀ ನಡೆಯಲ್ಲಾಗಲೀ ನೀವು ಏನು ಮಾಡಿದರೂ ಯೇಸುಸ್ವಾಮಿಯ ಹೆಸರಿನಲ್ಲಿಯೇ ಮಾಡಿರಿ. ಅವರ ಮುಖಾಂತರವೇ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.
ಕೀರ್ತನೆ: 150:1-2, 3-4, 5-6
ಶ್ಲೋಕ: ಪ್ರಭುವನು ಸ್ತುತಿಸಲಿ ಉಸಿರಿರುವುದೆಲ್ಲವೂ
ಶುಭಸಂದೇಶ: ಲೂಕ 6:27-38
ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನನ್ನನ್ನು ಆಲಿಸುತ್ತಿರುವವರೇ, ನನ್ನ ಮಾತನ್ನು ಕೇಳಿರಿ: "ನಿಮ್ಮ ಶತ್ರುಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಿಸುವವರನ್ನು ಸತ್ಕರಿಸಿ. ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ. ನಿನ್ನ ಒಂದು ಕೆನ್ನೆಗೆ ಹೊಡೆಯುವವನಿಗೆ ಇನ್ನೊಂದು ಕೆನ್ನೆಯನ್ನು ಒಡ್ಡು, ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳ ಅಂಗಿಯನ್ನೂ ತೆಗೆದುಕೊಳ್ಳಲು ಬಿಡು. ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡು. ನಿನ್ನ ಸೊತ್ತನ್ನು ಕಸಿದುಕೊಳ್ಳುವವನಿಂದ ತಿರುಗಿ ಕೇಳದಿರು. ಅಲ್ಲದೆ, ಇತರರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ಅದೇನು ಪುಣ್ಯ? ಪಾಪಿಷ್ಟರು ಸಹ ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾರಲ್ಲವೇ? ಉಪಕಾರ ಮಾಡಿದವರಿಗೇ ಉಪಕಾರ ಮಾಡಿದರೆ ಅದೇನು ಪುಣ್ಯ? ಪಾಪಿಷ್ಟರು ಸಹ ಹಾಗೆಯೇ ಮಾಡುತ್ತಾರಲ್ಲವೇ? ಸಾಲತೀರಿಸುವಂಥ ನಂಬಿಗಸ್ಥರಿಗೇ ಸಾಲಕೊಟ್ಟರೆ ಅದೇನು ಪುಣ್ಯ? ಕೊಟ್ಟಷ್ಟೂ ಬರುತ್ತದೆಂದು ಪಾಪಿಷ್ಟರು ಸಹ ಸಾಲ ಕೊಡುತ್ತಾರಲ್ಲವೆ? ಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ಅವರಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲಕೊಡಿ. ಆಗ ನಿಮಗೆ ಮಹತ್ತಾದ ಸಂಭಾವನೆ ದೊರಕುವುದು. ನೀವು ಮಹೋನ್ನತ ದೇವರ ಮಕ್ಕಳಾಗುವಿರಿ. ದೇವರು ದುರ್ಜನರಿಗೂ ಒಳ್ಳೆಯವರು, ಕೃತಘ್ನರಿಗೂ ಒಳ್ಳೆಯವರು. ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿ, ಆಗ ದೇವರೂ ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿಮಾಡುವುದಿಲ್ಲ. ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು," ಎಂದರು.
ಪ್ರಭುವಿಗೆ ಸ್ತೋತ್ರ
ReplyDelete