ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15:7-21
ಸುದೀರ್ಘ ಚರ್ಚೆಯಾದ ನಂತರ ಪೇತ್ರನು ಎದ್ದು ನಿಂತು ಹೀಗೆಂದನು: "ಸಹೋದರರೇ, ಅನ್ಯಧರ್ಮೀಯರು ಶುಭಸಂದೇಶವನ್ನು ನನ್ನ ಬಾಯಿಯಿಂದ ಕೇಳಿ ವಿಶ್ವಾಸಿಸಲೆಂದು ದೇವರು ನಿಮ್ಮ ಮಧ್ಯೆಯಿಂದ ನನ್ನನ್ನು ಬಹುದಿನಗಳ ಹಿಂದೆಯೇ ಆರಿಸಿಕೊಂಡರು. ಇದು ನಿಮಗೆ ತಿಳಿಯದ ವಿಷಯ. ಮಾನವನ ಅಂತರಂಗವನ್ನು ಅರಿತ ದೇವರು ನಿಮಗೆ ಕೊಟ್ಟಂತೆಯೇ ಅವರಿಗೂ ಪವಿತ್ರಾತ್ಮ ಅವರನ್ನು ಕೊಟ್ಟರು. ಅವರೂ ತಮ್ಮವರೇ ಎಂದು ವ್ಯಕ್ತಪಡಿಸಿದರು. ಅವರಿಗೂ ನಮಗೂ ಯಾವ ಭೇದಭಾವವನ್ನು ತೋರಿಸದೆ ವಿಶ್ವಾಸದ ನಿಮಿತ್ತ ದೇವರು ಅವರ ಪಾಪಗಳನ್ನು ಕ್ಷಮಿಸಿದರು. ಆದುದರಿಂದ ನಮ್ಮ ಪೂರ್ವಜರಿಂದಾಗಲೀ ನಮಿಂದಾಗಲೀ ಹೊರಲಾಗದಂಥ ಹೊರೆಯನ್ನು ಈ ಅನುಯಾಯಿಗಳ ಮೇಲೆ ಏಕೆ ಹೊರಿಸುತ್ತೀರಿ? ಹೀಗೆ ದೇವರನ್ನೇಕೆ ಕೆಣಕುತ್ತೀರಿ? ಇಲ್ಲ, ಇದು ಸರಿಯಲ್ಲ. ನಮಗೇ ಆಗಲಿ, ಅವರಿಗೇ ಆಗಲಿ, ಜೀವೋದ್ಧಾರ ದೊರಕುವುದು ಪ್ರಭು ಯೇಸುವಿನ ಅನುಗ್ರಹದಿಂದಲೇ ಇದೇ ನಮ್ಮ ವಿಶ್ವಾಸ," ಇದನ್ನು ಕೇಳಿದ್ದೇ, ಸಭೆ ಸೇರಿದ್ದವರೆಲ್ಲರೂ ಮೌನರಾದರು. ಪೌಲ ಮತ್ತು ಬಾರ್ನಬರಿಗೆ ಕಿವಿಗೊಟ್ಟರು. ದೇವರು ಅವರ ಮುಖಾಂತರ ಅನ್ಯಧರ್ಮೀಯರ ಮಧ್ಯೆ ಎಸಗಿದ ಸೂಚಕಕಾರ್ಯಗಳನ್ನೂ ಅದ್ಬುತಕಾರ್ಯಗಳನ್ನೂ ಕುರಿತು ಕೇಳಿದರು. ಇದಾದ ಮೇಲೆ ಯಕೋಬನು ಎದ್ದು ಹೀಗೆಂದನು: "ಸಹೋದರರೇ ಕೇಳಿ, ದೇವರು ಈ ಮೊದಲೇ ಅನ್ಯಧರ್ಮೀಯರಲ್ಲಿ ಆಸಕ್ತಿಗೊಂಡು ಅವರಿಂದಲೂ ಸ್ವಂತ ಪ್ರಜೆಯನ್ನು ಆರಿಸಿಕೊಂಡಿದ್ದಾರೆ, ಎಂಬ ವಿಷಯವನ್ನು ಸಿಮೋನನು ಈಗ ತಾನೇ ವಿವರಿಸಿದ್ದಾನೆ. ಇದಕ್ಕೂ ಪ್ರವಾದಿಗಳ ಪ್ರವಚನಗಳಿಗೂ ಪೂರ್ಣಸಾಮರಸ್ಯವಿದೆ. 'ಅಳಿದುಹೋದ ದಾವೀದನ ಮನೆತನವನು ಪುನರ್ ಸ್ಥಾಪಿಸಲು ಮರಳಿ ಬರುವೆನು ಪಾಳುಬಿದ್ದುದನು ಜೀರ್ಣೋದ್ಧಾರಗೊಳಿಸುವೆನು. ಸುಭದ್ರವಾಗಿ ನಿಲ್ಲಿಸುವೆನು ಅದನು. ನನ್ನವರೆಂದು ನಾನು ಕರೆದ ಎಲ್ಲ ಅನ್ಯಧರ್ಮೀಯರು ಉಳಿದೆಲ್ಲ ಮಾನವರು ನನ್ನತ್ತ ಬರಲಿಹರು ಎಂಬೀ ಸರ್ವೇಶ್ವರನ ನುಡಿ ಎಂದಿನಿಂದಲೋ ತಿಳಿಯಬಹುದು." ಆದುದರಿಂದ ನನ್ನ ತೀರ್ಮಾನವೇನೆಂದರೆ: ದೇವರ ಕಡೆಗೆ ತಿರುಗುತ್ತಿರುವ ಅನ್ಯಧರ್ಮೀಯರನ್ನು ತೊಂದರೆಗೆ ಈಡುಮಾಡಬಾರದು. ಅದಕ್ಕೆ ಬದಲಾಗಿ ನಾವು ಅವರಿಗೆ ಪತ್ರ ಬರೆದು, "ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು ಅದನ್ನು ಸ್ವೀಕರಿಸಬಾರದು; ಅನೈತಿಕತೆಯಿಂದ ದೂರವಿರಬೇಕು; ರಕ್ತವನ್ನಾಗಲಿ, ಕುತ್ತಿಗೆ ಹಿಸುಕಿದ ಪ್ರಾಣಿಗಳನ್ನಾಗಲಿ ತಿನ್ನಬಾರದು," ಎಂದು ತಿಳುವಳಿಕೆ ಕೊಡಬೇಕು. ಏಕೆಂದರೆ ಪುರಾತನ ಕಾಲದಿಂದಲೂ ಪ್ರತಿಯೊಂದು ಸಬ್ಬತ್ ದಿನ ಮೋಶೆಯ ಧರ್ಮಶಾಸ್ತ್ರವನ್ನು ಪ್ರಾರ್ಥನಾಮಂದಿರಗಳಲ್ಲಿ ಓದಲಾಗುತ್ತಿದೆ ಮತ್ತು ಆತನ ಬೋಧನೆಯನ್ನು ಪ್ರತಿ ನಗರಗಳಲ್ಲೂ ಸಾರಲಾಗುತ್ತಿದೆ,"ಎಂದನು.
ಕೀರ್ತನೆ: 96: 1-2, 2-3, 10
ಶ್ಲೋಕ: ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಪ್ರಗಳಿಗೆ, ಆತನದ್ಬುತ ಕಾರ್ಯಗಳನು ಸಕಲ ಜನಾಂಗಗಳಿಗೆ
ಶುಭಸಂದೇಶ: ಯೊವಾನ್ನ 15:9-11
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ: "ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ. ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ," ಎಂದರು.
No comments:
Post a Comment