ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

05.05.2019 - "ನೀನು ನನ್ನನ್ನು ಪ್ರೀತಿಸುತ್ತೀಯಾ?"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:27-32, 40-41


ಪ್ರೇಷಿತರನ್ನು ಕರೆತಂದು ನ್ಯಾಯಸಭೆಯ ಮುಂದೆ ನಿಲ್ಲಿಸಲಾಯಿತು. ಪ್ರಧಾನ ಯಾಜಕನು ಅವರನ್ನು ಉದ್ದೇಶಿಸಿ, "ಆ ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎಂದು ನಿಮಗೆ ಕಟ್ಟಪ್ಪಣೆ ಮಾಡಿದೆವು. ಆದರೂ ನೀವು ಮಾಡಿರುವುದೇನು? ನಿಮ್ಮ ಬೋಧನೆ ಜೆರುಸಲೇಮ್ ಆದ್ಯಂತ ಹಬ್ಬಿಹರಡಿದೆ. ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದಿರುವಿರಿ," ಎಂದು ಅಪಾದಿಸಿದನು. ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, "ನಾವು ವಿಧೇಯರಾಗಬೇಕಾದುದ್ದು ದೇವರಿಗೆ, ಮಾನವರಿಗಲ್ಲ. ನೀವು ಶಿಲುಬೆಗೆರಿಸಿ ಕೊಂದುಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು  ಜೀವಕ್ಕೆಬ್ಬಿಸಿದ್ದಾರೆ. ದೇವರು ಅವರನ್ನು ತಮ್ಮ ಬಲಪಾರ್ಶ್ವಕ್ಕೆ ಏರಿಸಿ ಮುಂದಾಳನ್ನಾಗಿಯೂ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತಾಪಪಟ್ಟು ದೇವರಿಗೆ ಅಭಿಮುಖರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾಂತರ ಅವಕಾಶವನ್ನು ಕಲ್ಪಸಿ ಕೊಟ್ಟಿದ್ದಾರೆ. ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಛೆಯಂತೆ ನಡೆಯುವವರಿಗೆ ದೇವರು ದಯಪಾಲಿಸುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ದಾರೆ," ಎಂದರು. ಪ್ರೇಷಿತರನ್ನು ಒಳಗೆ ಕರೆದು, ಚಾಟಿಯಿಂದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು. ಯೇಸುವಿನ ನಾಮಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರಬಂದರು.

ಕೀರ್ತನೆ: 30:2, 4, 5, 6, 11-12, 13

ಶ್ಲೋಕ: ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ಧರಿಸಿದೆ

ಎರಡನೇ ವಾಚನ: ಪ್ರಕಟನಾಗ್ರಂಥ 5:11-14

ಅನಂತರ ಯೊವಾನ್ನನನಾದ ನಾನು ಅವರ ಸಂಹಾಸನದ, ನಾಲ್ಕು ಜೀವಿಗಳ ಹಾಗೂ ಸಭಾಪ್ರಮುಖರ ಸುತ್ತಲೂ ನಿಂತಿದ್ದ ಬಹುಮಂದಿ ದೇವದೂತರ ಸ್ವರವನ್ನು ಕೇಳಿಸಿಕೊಂಡೆ. ಅವರ ಸಂಖೆ ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ  ಇತ್ತು. ಅವರೆಲ್ಲರೂ ಉಚ್ಛಕಂಟದಿಂದ: "ವಧಿತ ಕುರಿಮರಿಯಾದಾತನು ಶಕ್ತಿಯನು, ಸಿರಿತನವನು, ಗೌರವವನು, ಘನಮಾನವನು, ಸ್ತುತಿಯನು, ಸುಜ್ಞಾನವನು ಹೊಂದಲು ಯೋಗ್ಯನು," ಎಂದು ಹಾಡಿದರು. ಇದಲ್ಲದೆ, ಸ್ವರ್ಗ, ಭೂಮಿ, ಪಾತಾಳಗಳಲೂ ಸಮೂದ್ರದಲ್ಲೂ ಇರುವ ಸಮಸ್ತ ಸೃಷ್ಟಿಗಳು ಹೀಗೆ ಹಾಡುವುದನ್ನು ಕೇಳಿಸಿಕೊಂಡೆ: "ಸಂಹಾಸನದಲ್ಲಿ ಕುಳಿತವನಿಗೆ ಯಜ್ಞಕುರಿಮರಿಯಾದಾತನಿಗೆ ಸಲ್ಲಲಿ ಯುಗಯುಗಾಂತರಕ್ಕೆ ಘನಮಾನ, ಗೌರವ, ಪರಾಕ್ರಮ, ಮತ್ತು ಮಹಿಮೆ." ಇದಕ್ಕುತ್ತರವಾಗಿ ಆ ನಾಲ್ಕು ಜೀವಿಗಳು,  "ಆಮೆನ್"  ಎಂದು ಹೇಳಿದವು. ಸಭಾಪ್ರಮುಖರು ಸಾಷ್ಟಾಂಗವೆರಗಿ ನಮಸ್ಕಾರಮಾಡಿ ಆರಾಧಿಸಿದರು.

ಶುಭಸಂದೇಶ: ಯೊವಾನ್ನ 21:1-19

ತರುವಾಯ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊಂಡರು. ಅದು ಹೀಗೆ ನಡೆಯಿತು: ಸಿಮೋನ ಪೇತ್ರನು, ದಿದುಮನೆಂಬ ತೋಮನು, ಗಲಿಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. ಆಗ ಸಿಮೋನ ಪೇತ್ರನು, "ನಾನು ಮೀನು ಹಿಡಿಯಲು ಹೋಗುತ್ತೇನೆ," ಎಂದನು. ಮಿಕ್ಕವರು, "ನಾವೂ ನಿಮ್ಮೊಡನೆ ಬರುತ್ತೇವೆ," ಎಂದರು. ಅವರೆಲ್ಲರೂ ಹೊರಟು ದೋಣಿಯನ್ನು ಹತ್ತಿದರು. ಆ ರಾತ್ರಿಯೆಲ್ಲಾ ಅವರಿಗೆ  ಒಂದು ಮೀನೂ ಸಿಗಲಿಲ್ಲ, ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರು ಯೇಸು ಎಂದು ಶಿಷ್ಯರಿಗೆ ಹೊಳೆಯಲಿಲ್ಲ. ಯೇಸು ಅವರಿಗೆ, "ಮಕ್ಕಳೇ, ಊಟಕ್ಕೆ ಏನಾದರೂ ಸಿಕ್ಕಿತೇ?" ಎಂದು ಕೇಳಿದರು. "ಏನೂ ಇಲ್ಲ," ಎಂದರು ಅವರು. "ದೋಣಿಯ ಬಲಗಡೆಗೆ ಬಲೆ ಬೀಸಿರಿ; ಮೀನುಗಳು ಸಿಗುತ್ತವೆ," ಎಂದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ಮೀನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು, ಆಗ ಯೇಸುವಿನ ಆಪ್ತ ಶಿಷ್ಯನು ಪೇತ್ರನಿಗೆ, "ಅವರೇ ಪ್ರಭು" ಎಂದನು. ಪ್ರಭುವೆಂದು ಕೇಳಿದ್ದೇ ತಡ, ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿದನು. ಮಿಕ್ಕ ಶಿಷ್ಯರು ಮೀನು ತುಂಬಿದ್ದ ಬಲೆಗಳನ್ನು ಎಳೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿದ್ದ ದಡಕ್ಕೆ ದೋಣಿಯಲ್ಲೇ ಬಂದರು. ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆಂಕಿ ಮಾಡಲಾಗಿತ್ತು. ಕೆಂಡದ ಮೇಲೆ ಮೀನುಗಳಿದ್ದವು. ರೊಟ್ಟಿಯೂ ಅಲ್ಲಿತ್ತು, ಯೇಸು ಅವರಿಗೆ, "ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿ," ಎಂದು ಹೇಳಿದರು. ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳೆದುತಂದನು. ಬಲೆಯ ತುಂಬ ದೊಡ್ಡ ಮೀನುಗಳು - ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ಮೀನುಗಳಿದ್ದರೂ ಬಲೆಯು ಹರಿದಿರಲಿಲ್ಲ. ಯೇಸು ಅವರಿಗೆ, "ಬಂದು ಊಟಮಾಡಿ," ಎಂದು ಅವರನ್ನು ಕರೆದರು. ಅವರು ಪ್ರಭುವೆಂದು ಅರಿತ್ತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, "ನೀವು ಯಾರು?" ಎಂದು ಕೇಳುವಷ್ಟು ಧೈರ್ಯ ಇರಲಿಲ್ಲ. ಯೇಸು ಹತ್ತಿರಕ್ಕೆ ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟರು. ಯೇಸು ಸತ್ತು ಜೀವಂತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ. ಅವರೆಲ್ಲರ ಊಟವಾದ ಮೇಲೆ ಯೇಸು ಸಿಮೋನ ಪೇತ್ರನನ್ನು ನೋಡಿ, "ಯೊವಾನ್ನನ ಮಗನಾದ ಸಿಮೋನನೇ, ಇವರಿಗಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳಿದರು. ಅದಕ್ಕೆ ಪೇತ್ರನು, "ಹೌದು ಪ್ರಭೂ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ," ಎಂದನು. ಯೇಸು ಅವನಿಗೆ, "ನನ್ನ ಕುರಿಮರಿಗಳನ್ನು ಮೇಯಿಸು," ಎಂದರು. ಯೇಸು ಎರಡನೆಯ ಬಾರಿ, "ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳಲು, "ಹೌದು ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ," ಎಂದು ಮರುನುಡಿದನು. ಯೇಸು ಅವನಿಗೆ, "ನನ್ನ ಕುರಿಗಳನ್ನು ಕಾಯಿ,"ಎಂದರು. ಮೂರನೇ ಬಾರಿಯೂ ಯೇಸು, "ಯೊವಾನ್ನನ ಮಗನಾದ ಸಿಮೋನನೇ, "ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳಿದರು. "ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂದು ಯೇಸು ಮೂರನೇ ಬಾರಿ ಕೇಳಿದ್ದನ್ನು ಕಂಡು ಪೇತ್ರನು ನೊಂದುಕೊಂಡನು. "ಪ್ರಭುವೇ, ನಿಮಗೆ ಎಲ್ಲವೂ ತಿಳಿದೇ ಇದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ನಿಮಗೆ ತಿಳಿದಿದೆ," ಎಂದು ಹೇಳಿದನು. ಅದಕ್ಕೆ ಯೇಸು, "ನನ್ನ ಕುರಿಗಳನ್ನು ಮೇಯಿಸು; ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ, ಕೇಳು: ತಾರುಣ್ಯದಲ್ಲಿ ನೀನೇ ನಡುಕಟ್ಟಿಕೊಂಡು ಇಷ್ಟ ಬಂದ ಕಡೆ ನಡೆದೆ. ವೃದ್ಧಾಪ್ಯದಲ್ಲಾದರೋ ನೀನು ಕೈಚಾಚುವೆ. ಬೇರೊಬ್ಬನು ನಿನ್ನ ನಡುಕಟ್ಟಿ ನಿನಗಿಷ್ಟವಿಲ್ಲದ ಕಡೆ ನಿನ್ನನ್ನು ನಡೆಸಿಕೊಂಡು ಹೋಗುವನು," ಎಂದು ನುಡಿದರು.  ಪೇತ್ರನು ಎಂಥ ಸಾವಿನಿಂದ ದೇವರ ಮಹಿಮೆಯನ್ನು ಬೆಳಗಿಸಲಿದ್ದಾನೆಂದು ಸೂಚಿಸಿ ಹಾಗೆ ಹೇಳಿದರು. ಇದಾದ ಮೇಲೆ ಯೇಸು ಪೇತ್ರನಿಗೆ, "ನೀನು ನನ್ನನ್ನು ಹಿಂಬಾಲಿಸಿ ಬಾ," ಎಂದರು

ಮನಸಿಗೊಂದಿಷ್ಟು : "ನನ್ನನು ಪ್ರೀತಿಸುತ್ತೀಯಾ?" ಎಂಬ ಪ್ರಶ್ನೆಯ ಪುನರಾವರ್ತನೆಗೆ ಪೇತ್ರ ನೊಂದುಕೊಳ್ಳುತ್ತಾನೆ. ಈಗ ಅದೇ ಪ್ರಶ್ನೆಯನ್ನು ಪ್ರತಿದಿನ ನಮ್ಮಲ್ಲಿ ಕೇಳುತ್ತಾ ನೊಂದುಕೊಳ್ಳುವ ಸರದಿ ಯೇಸು ಸ್ವಾಮಿಯದು.  ’ಪ್ರೀತಿಸುತ್ತೇವೆ’ ಎಂದು ಹೇಳುವ ನೈತಿಕ ಧೈರ್ಯ ನಮಗಿದೆಯೇ?.  ತಮ್ಮ ರಾಜ್ಯವನ್ನು ವಿಸ್ತರಿಸುವ ಜವಬ್ದಾರಿ ಕೊಡಲು ಯೇಸುವಂತೂ ತುದಿಗಾಲಲ್ಲಿ ನಿಂತಿದ್ದಾರೆ. ವಹಿಸಿಕೊಳ್ಳುವ ಮನಸ್ಸು ನಮ್ಮದಾಗಬೇಕು. ಮೊದಲು ಆರಿಸಿಕೊಳ್ಳುವಾಗ ಕರೆದಂತೆ ಮತ್ತೆ ಪೇತ್ರನಿಗೆ ’ಹಿಂಬಾಲಿಸು ಬಾ’ ಎಂದು ಹೊಸದಾಗಿ ಹೇಳುತ್ತಾರೆ. ’ಹಿಂಬಾಲಿಸಿದ ಪೇತ್ರ ಧರ್ಮಸಭೆಯ ಬಂಡೆಯಾದ. ನಾವು ಕಲ್ಲುಗಳಾಗೋಣ.

ಪ್ರಶ್ನೆ : "ನನ್ನನು ಪ್ರೀತಿಸುತ್ತೀಯಾ?" ಎಂಬ ಯೇಸುವಿನ ಪ್ರಶ್ನೆಗೆ ನಮ್ಮ ಉತ್ತರವೇನು?

No comments:

Post a Comment