ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 14:5-18

ಅನ್ಯಧರ್ಮದವರು ಮತ್ತು ಯೆಹೂದ್ಯರು ತಮ್ಮ ಅಧಿಕಾರಿಗಳೊಡನೆ ಸೇರಿ ಪ್ರೇಷಿತರಿಗೆ ಕಿರಿಕುಳಕೊಡಲು ಹಾಗೂ ಅವರ ಮೇಲೆ ಕಲ್ಲುತೂರಲು ಪ್ರಯತ್ನಿಸಿದರು. ಇದನ್ನರಿತುಕೊಂಡ ಪ್ರೇಷಿತರು ಅಲ್ಲಿಂದ ಪಲಾಯನಮಾಡಿ ಲುಕಪೋನಿಯದ ಪಟ್ಟಣಗಳಾದ ಲುಸ್ತ ಮತ್ತು ದೆರ್ಬೆಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೂ ಹೊರಟುಹೋದರು. ಅಲ್ಲೂ ಶುಭಸಂದೇಶವನ್ನು ಸಾರತೊಡಗಿದರು. ಲುಸ್ತದಲ್ಲಿ ಒಬ್ಬ ಕುಂಟನಿದ್ದ, ಅವನೊಬ್ಬ ಹುಟ್ಟುಕುಂಟ, ಎಂದೂ ಕಾಲೂರಿ ನಡೆದವನಲ್ಲ. ಒಮ್ಮೆ, ಅವನು ಕುಳಿತಲ್ಲೇ ಪೌಲನ ಮಾತುಗಳನ್ನು ಆಲಿಸುತ್ತಿದ್ದನು. ಆಗ ಪೌಲನು ಅವನನ್ನೇ ದಿಟ್ಟಿಸಿ ನೋಡಿದನು. ಅವನಲ್ಲಿ ಸ್ವಸ್ಥಪಡೆಯುವಷ್ಟು ವಿಶ್ವಾಸವನ್ನು ಕಂಡು ಸ್ವರವೆತ್ತಿ, "ಎದ್ದೇಳು, ಕಾಲೂರಿ ನೆಟ್ಟಗೆ ನಿಲ್ಲು," ಎಂದು ಹೇಳಿದನು. ಆ ಮನುಷ್ಯನು ನೆಗೆದುನಿಂತು ನಡೆಯಲಾರಂಭಿಸಿದನು. ಪೌಲನು ಮಾಡಿದ ಈ ಮಹತ್ಕಾರ್ಯವನ್ನು ಜನಸಮೂಹವು ನೋಡಿತು. "ದೇವರುಗಳೇ ಮನುಷ್ಯನರೂಪದಲ್ಲಿ ನಮ್ಮಲ್ಲಿಗೆ ಬಂದಿದ್ದಾರೆ," ಎಂದು ತಮ್ಮ ಲುಕವೋನಿಯ ಭಾಷೆಯಲ್ಲಿ ಗಟ್ಟಿಯಾಗಿ ಕೂಗಲಾರಂಭಿಸಿತು. ಆ ಜನರು ಬಾರ್ನಬನನ್ನು 'ಜೆಯುಸ್' ದೇವರೆಂದೂ ಪೌಲನು ಮುಖ್ಯ ಭಾಷಣಕಾರನಾದುದರಿಂದ, ಅವನನ್ನು 'ಹೆರ್ಮೆ' ದೇವರೆಂದೂ ಕರೆಯಲಾರಂಭಿಸಿದರು. ಆ ಜೆಯುಸ್ ದೇವರ ಗುಡಿ ಪಟ್ಟಣದ ಮುಂದೆಯೇ ಇತ್ತು. ಅಲ್ಲಿಯ ಅರ್ಚಕನು ದ್ವಾರದ ಬಳಿಗೆ ಹೋರಿಗಳನ್ನೂ ಹೂವಿನ ಹಾರಗಳನ್ನೂ ತೆಗೆದುಕೊಂಡು ಬಂದನು. ಜನರೊಡನೆ ಸೇರಿ ಪ್ರೇಷಿತರಿಗೆ ಬಲಿಯನ್ನು ಅರ್ಪಿಸಬೇಕೆಂದಿದ್ದನು. ಇದನ್ನು ಕೇಳಿದ ಬಾರ್ನಬ ಮತ್ತು ಪೌಲರು ಸಿಟ್ಟಿನಿಂದ ತಮ್ಮ ಮೇಲಂಗಿಗಳನ್ನು ಹರಿದು ಜನಸಂದಣಿಯತ್ತ ಧಾವಿಸಿ ಹೀಗೆಂದು ಕೂಗಿ ಹೇಳಿದರು: "ಮಹಾಜನರೇ, ನೀವು ಮಾಡುತ್ತಿರುವುದೇನು? ನಾವು ನಿಮ್ಮಂತೆ ಕೇವಲ ನರಮಾನವರು. ನಾವು ಬಂದಿರುವುದು ನಿಮಗೆ ಶುಭಸಂದೇಶವನ್ನು ಸಾರುವುದಕ್ಕೆ; ನೀವು ಈ ನಿರರ್ಥಕ ಕಾರ್ಯವನ್ನು ಬಿಟ್ಟುಬಿಡಬೇಕು; ಭೂಮ್ಯಾಕಾಶವನ್ನೂ ಸಮೂದ್ರ ಸರೋವರವನ್ನೂ ಮತ್ತು ಅವುಗಳಲ್ಲಿರುವ ಸಮಸ್ತ ಸೃಷ್ಟಿಯನ್ನೂ ಉಂಟುಮಾಡಿದ ಜೀವಂತ ದೇವರ ಭಕ್ತರಾಗಬೇಕು; ಹಿಂದಿನ ಕಾಲದಲ್ಲಿ ಸಮಸ್ತ ಜನಾಂಗಗಳು ತಮಗೆ ಇಷ್ಟಬಂದಂತೆ ನಡೆಯಲೆಂದು ದೇವರು ಬಿಟ್ಟುಬಿಟ್ಟರು. ಆದರೆ ತಮ್ಮ ಅಸ್ತಿತ್ವವನ್ನು ಅರಿತುಕೊಳ್ಳುವಂತೆ ಸುಕೃತ್ಯಗಳ ಸಾಕ್ಷ್ಯ ನೀಡುತ್ತಲೇ ಬಂದಿದ್ದಾರೆ; ನಿಮಗೆ ಆಕಾಶದಿಂದ ಮಳೆಯನ್ನೂ ಸಕಾಲಕ್ಕೆ ಬೆಳೆಯನ್ನೂ ಕೊಡುತ್ತಾ ಆಹಾರವನ್ನು ಒದಗಿಸಿ, ನಿಮ್ಮ ಹೃದಯವನ್ನು ಪರಮಾನಂದಗೊಳಿಸುತ್ತಾ ಬಂದಿದ್ದಾರೆ." ಪ್ರೇಷಿತರು ಇಷ್ಟು ಹೇಳಿದರೂ ಜನರು ತಮಗೆ ಬಲಿಅರ್ಪಿಸುವುದನ್ನು ತಡೆಯುವುದು ಕಷ್ಟಸಾಧ್ಯವಾಯಿತು.
ಕೀರ್ತನೆ: 115:1-2, 3-4, 15-16
ಶ್ಲೋಕ: ನಮಗಲ್ಲ ಹೇ ಪ್ರಭೂ, ನಮಗಲ್ಲ ಮಹಿಮೆ, ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ
ಶುಭಸಂದೇಶ: ಯೊವಾನ್ನ 14:21-26
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ: "ನನ್ನ ಆಜ್ಞೆಗಳನ್ನು ಅಂಗೀಕರಿಸಿ ಅವುಗಳ ಪ್ರಕಾರ ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ಪಿತನಿಗೂ ಪ್ರಿಯನಾಗಿರುವನು. ನಾನು ಅವರನ್ನು ಪ್ರೀತಿಸಿ ನನ್ನನ್ನೇ ಅವನಿಗೆ ಸಾಕ್ಷಾತ್ಕರಿಸಿಕೊಡುವೆನು," ಎಂದರು. ಆಗ ಯೂದನು, (ಈತ ಇಸ್ಕರಿಯೋತ ಯೂದನಲ್ಲ) "ಪ್ರಭೂ, ನೀವು ಈ ಲೋಕಕ್ಕೆ ನಿಮ್ಮನ್ನು ಸಾಕ್ಷಾತ್ಕರಿಸಿಕೊಳ್ಳದೆ ನಮಗೆ ಮಾತ್ರ ಸಾಕ್ಷಾತ್ಕರಿಸಿಕೊಳ್ಳುತ್ತೀರಲ್ಲಾ, ಏಕೆ?" ಎಂದು ಕೇಳಿದನು. ಆಗ ಯೇಸು, "ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು. ಅವನನ್ನು ನನ್ನ ಪಿತನೂ ಪ್ರೀತಿಸುವರು. ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು ಅವನಲ್ಲಿ ನೆಲೆಸುವೆವು. ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತನ್ನು ಕೈಗೊಂಡು ನಡೆಯುವುದಿಲ್ಲ. ನೀವು ಕೇಳುತ್ತಿರುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ಪಿತನದೇ. ನಾನು ನಿಮ್ಮೊಡನೆ ಇರುವಾಗಲೇ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಆದರೆ ಪಿತನು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪೋಷಕರಾದ ಪವಿತ್ರಾತ್ಮ ನಿಮಗೆ ಎಲ್ಲವನ್ನೂ ಬೋಧಿಸಿ ನಾನು ಹೇಳಿರುವುದನ್ನೆಲ್ಲಾ ನಿಮಗೆ ನೆನಪಿಗೆ ತರುವರು," ಎಂದರು.
No comments:
Post a Comment