ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:27-33
ಪ್ರೇಷಿತರನ್ನು ಕರೆತಂದು ನ್ಯಾಯಸಭೆಯ ಮಂದೆ ನಿಲ್ಲಿಸಲಾಯಿತು. ಪ್ರಧಾನ ಯಾಜಕನು ಅವರನ್ನು ಉದ್ದೇಶಿಸಿ, "ಆ ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎಂದು ನಿಮಗೆ ಕಟ್ಟಪ್ಪಣೆ ಮಾಡಿದೆವು ಆದರೂ ನೀವು ಮಾಡಿರುವುದೇನು? ನಿಮ್ಮ ಬೋಧನೆ ಜೆರುಸಲೇಮ್ ಆದ್ಯಂತ ಹಬ್ಬಿಹರಡಿದೆ. ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದಿರುವಿರಿ," ಎಂದು ಅಪಾದಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, "ನಾವು ವಿಧೇಯರಾಗಬೇಕಾದುದ್ದು ದೇವರಿಗೆ, ಮಾನವರಿಗಲ್ಲ. ನೀವು ಶಿಲುಬೆಗೇರಿಸಿ ಕೊಂದುಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು ಜೀವಕ್ಕೆಬ್ಬಿಸಿದ್ದಾರೆ. ದೇವರು ಅವರನ್ನು ತಮ್ಮ ಬಲಪಾರ್ಶವಕ್ಕೆ ಏರಿಸಿ ಮುಂದಾಳನ್ನಾಗಿಯೂ ಲೋಕೋದ್ಧಾರಕನಾಗಿಯೂ ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾಂತರ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಛೆಯಂತೆ ನಡೆಯುವವರಿಗೆ ದೇವರು ದಯಪಾಲಿಸಿರುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ಧಾರೆ," ಎಂದನು. ಇದನ್ನು ಕೇಳಿದ ಸಭಾಸದಸ್ಯರು ಕ್ರೋದಭರಿತರಾಗಿ ಪ್ರೇಷಿತರನ್ನು ಕೊಲ್ಲಬೇಕೆಂದಿದ್ದರು.
ಕೀರ್ತನೆ: 34:2, 9, 17-18, 19-20
ಶ್ಲೋಕ: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು
ಶುಭಸಂದೇಶ: ಯೊವಾನ್ನ 3:31-36
ಸ್ನಾನಿಕ ಯೊವಾನ್ನನು ತನ್ನ ಶಿಷ್ಯರಿಗೆ ಹೀಗೆಂದು ಹೇಳಿದನು: "ಮೇಲಿನಿಂದ ಬಂದವನೇ ಎಲ್ಲರಿಗಿಂತ ಮೇಲಾದವನು. ಇಹಲೋಕದಿಂದ ಬಂದವನಾದರೋ ಈ ಲೋಕಕ್ಕೆ ಸೇರಿದವನು; ಅವನು ಲೌಕಿಕವಾದುದನ್ನೇ ಹೇಳುವವನು. ಸ್ವರ್ಗದಿಂದ ಬಂದವನಾದರೋ ಸರ್ವರಿಗೂ ಶ್ರೇಷ್ಠನು. ಆತನು ತಾನು ಕಂಡದ್ದನ್ನೂ ಕೇಳಿದ್ದನ್ನೂ ಕುರಿತೇ ಸಾಕ್ಷಿ ಹೇಳುತ್ತಾನೆ. ಆದರೂ ಆತನ ಮಾತನ್ನು ಯಾರೂ ಅಂಗೀಕರಿಸುವುದಿಲ್ಲ. ಆತನ ಮಾತನ್ನು ಅಂಗೀಕರಿಸುವವನು ದೇವರು ಸತ್ಯಸ್ವರೂಪಿ ಎಂದು ಸಾದೃಶ್ಯಪಡಿಸುತ್ತಾನೆ. ದೇವರು ಕಳುಹಿಸಿದಾತನು ದೇವರ ಮಾತುಗಳನ್ನೇ ಆಡುತ್ತಾನೆ. ಏಕೆಂದರೆ ದೇವರು ಆತನಿಗೆ ಪವಿತ್ರಾತ್ಮ ಅವರನ್ನು ಪೂರ್ಣವಾಗಿ ಕೊಟ್ಟಿರುತ್ತಾರೆ. ಪಿತ ಪುತ್ರನನ್ನು ಪ್ರೀತಿಸಿ ಸರ್ವಸ್ವವನ್ನೂ ಆತನ ಕೈಗೆ ಕೊಟ್ಟಿದ್ದಾರೆ. ಪುತ್ರನಲ್ಲಿ ವಿಶ್ವಾಸವಿಟ್ಟವನು ನಿತ್ಯಜೀವವನ್ನು ಪಡೆದಿರುತ್ತಾನೆ; ಪುತ್ರನಿಗೆ ಶರಣಾಗದವನು ನಿತ್ಯಜೀವವನ್ನು ಸವಿಯನು. ಅವನು ದೇವರ ಕೋಪಾಗ್ನಿಗೆ ಗುರಿಯಾಗುತ್ತಾನೆ.
ಮನಸಿಗೊಂದಿಷ್ಟು : ನಿತ್ಯ ಜೀವವನ್ನು ಪಡೆಯುವುದು ಅಥವಾ ದೇವರ ಕೋಪಾಗ್ನಿಗೆ ಗುರಿಯಾಗುವ ಆಯ್ಕೆ ನಮ್ಮದೇ ಆಗಿದೆ. ಯೇಸುವಲ್ಲಿ ವಿಶ್ವಾಸವಿಟ್ಟವರು ನಿತ್ಯ ಜೀವವನ್ನು ಪಡೆಯುತ್ತಾರೆ ಎನ್ನುವುದು ನಿಜ. ಆದರೆ ’ ನಿತ್ಯ ಜೀವವನ್ನು ಪಡೆದಿರುತ್ತಾರೆ’ ಎನ್ನುತ್ತದೆ ಇಂದಿನ ಶುಭಸಂದೇಶ. ಅದರ ಅರ್ಥ ಯೇಸುವನ್ನು ಪೂರ್ಣ ಪ್ರಮಾಣದಲ್ಲಿ ವಿಶ್ವಾಸಿಸುತ್ತಾ ನಿತ್ಯ ಜೀವವನ್ನು ಪಡೆಯುವ ಪ್ರಕ್ರಿಯೆಯಲ್ಲಿ ನಾವೀಗಲೇ ಭಾಗಿಯಾಗಲು ಸಾಧ್ಯವಿದೆ.
ಪ್ರಶ್ನೆ : ನಮ್ಮ ವಿಧೇಯತೆ ಯಾರಿಗೆ? ಮಾನವರಿಗೋ, ದೇವರಿಗೋ?

No comments:
Post a Comment