“ಇಂದೇ ನಿಮಗೋಸ್ಕರ ಲೋಕೋದ್ಧಾರಕ ಜನಿಸಿದ್ದಾರೆ.”
ಅ ಕಾಲದಲ್ಲಿ ಚಕ್ರವರ್ತಿ ಔಗಸ್ತನು ತನ್ನ ಸಾಮ್ರಾಜ್ಯದಲ್ಲೆ ಲ್ಲಾ ಜನಗಣತಿ ಮಾಡಬೇಕೆಂದು ಆಜ್ಞೆ ಹೊರಡಿಸಿದನು. ಮೊಟ್ಟ ಮೊದಲನೆಯ ಆ ಜನಗಣತಿ, ಕುರೇನ್ಯನು ಸಿರಿಯ ನಾಡಿಗೆ ರಾಜ್ಯಪಾಲನಾಗಿದ್ದಾಗ ನಡೆಯಿತು. ಆಗ ಎಲ್ಲರೂ ತಮ್ಮ ಹೆಸರನ್ನು ದಾಖಲೆ ಮಾಡಿಸಿಕೊಳ್ಳಲು ತಮ್ಮ ತಮ್ಮ ಊರುಗಳಿಗೆ ಹೊರಟರು. ಜೋಸೆಫನು ದಾವೀದನ ಮನೆತನದವರು ಹಾಗೂ ಗೊತ್ರದವನು.ಆದುದರಿಂದ ಅವನೂ ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಿಂದ ಹೊರಟು ಜುದೇಯನಾಡಿನ ಬೆತ್ಲೆಹೇಮೆಂಬ ದಾವೀದನ ಊರಿಗೆ ಹೋದನು. ಆತನ ಸಂಗಡ ಆತನಿಗೆ ನಿಶ್ಚಿತಾರ್ಥಳಾಗಿದ್ದ ಹಾಗೂ ಪೂರ್ಣ ಗರ್ಭವತಿಯಾಗಿದ್ದ ಮರಿಯಳು ಸಹ ಹೋದಳು. ಹೀಗೆ ಅವರು ಬೆತ್ಲೆಹೇಮಿನಲ್ಲಿ ಇದ್ದಾಗ, ಮರಿಯಳಿಗೆ ಪ್ರಸವ ಕಾಲ ಸಮೀಪಿಸಿತು. ಆಕೆ ಚೊಚ್ಚಲ ಮಗನಿಗೆ ಜನ್ಮವಿತ್ತು. ಇದ್ದ ಬಟ್ಟೆಯಲ್ಲೇ ಸುತ್ತಿ, ಅದನ್ನು ಗೋದಲಿಯಲ್ಲಿ ಮಲಗಿಸಿದಳು. ಕಾರಣ - ಛತ್ರದಲ್ಲಿ ಅವರಿಗೆ ಸ್ಥಳ ಸಿಗಲಿಲ್ಲ.
ಅದೇ ನಾಡಿನಲ್ಲಿ ಕೆಲವು ಕುರುಬರು ಹೊಲಗಳಲ್ಲಿದ್ದುಕೊಂಡು ರಾತ್ರಿಯಲ್ಲಿ ಕುರಿ ಮಂದೆಗಳನ್ನು ಕಾಯುತ್ತಿದ್ದರು. ಇದ್ದಕಿದ್ದಂತೆ ದೇವದೂತನೊಬ್ಬನು ಅವರೆದುರಿಗೆ ಪ್ರತ್ಯಕ್ಷನಾಗಲು ಸರ್ವೇಶ್ವರನ ಪ್ರಭೆ ಅವರ ಸುತ್ತಲೂ ಪ್ರಕಾಶಿಸಿತು. ಅವರು ಬಹಳವಾಗಿ ಹೆದರಿದರು. ಆ ದೂತನು ಅವರಿಗೆ “ಭಯಪಡಬೇಡಿ, ಇಗೋ, ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ, ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಲೋಕೋದ್ಧಾರಕ ಜನಿಸಿದ್ದಾರೆ. ಅವರೇ ಪ್ರಭು ಕ್ರಿಸ್ತ. ಇಗೋ ನಿಮಗೊಂದು ಸೂಚನೆ - ಆ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಗೋದಲಿಯೊಂದರಲ್ಲಿ ಮಲಗಿಸಿರುವುದನ್ನು ಕಾಣುವಿರಿ,” ಎಂದನು. ತಕ್ಷಣವೇ ಆ ದೂತನ ಸಂಗಡ ಸ್ವರ್ಗದ ದೂತ ಪರಿವಾರವಾರವೊಂದು ಕಾಣಿಸಿಕೊಂಡಿತು. “ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ ಸಮಾಧಾನ,” ಎಂದು ಸರ್ವೇಶ್ವರನ ಸ್ತುತಿ ಮಾಡಿತು.
No comments:
Post a Comment