18.12.22 - "ಆಕೆ ಗರ್ಭ ಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ"

ಮೊದಲನೇ ವಾಚನ: ಯೆಶಾಯ 7:10-14 

ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ:, "ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೋ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು" ಎಂದರು. ಅದಕ್ಕೆ ಆಹಾಜನು "ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ" ಎಂದನು. ಆಗ ಯೆಶಾಯನು: "ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ? ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭ ತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು. 

ಕೀರ್ತನೆ: 24:1-2, 3-4, 5-6 

ಶ್ಲೋಕ: ಆಗಮಿಸುತಿಹನಿದೋ ಮಹಿಮಾವಂತ ರಾಜಾದಿರಾಜನು ಇವನೇ ಪ್ರಭು, ಯುದ್ಧವೀರನು,  ಶಕ್ತಿಸಮರ್ಥನು 

ಎರಡನೇ ವಾಚನ: ರೋಮನರಿಗೆ 1:1-7 

ದೇವರಿಗೆ ಅತ್ಯಂತ ಪ್ರಿಯರು ಹಾಗು ದೇವಜನರಾಗಲು ಕರೆಹೊಂದಿದವರು ಆದ ರೋಮ್ ನಗರ ನಿವಾಸಿಗಳೆಲ್ಲರಿಗೆ: ಕ್ರಿಸ್ತಯೇಸುವಿನ ದಾಸನೂ ಪ್ರೇಷಿತನಾಗಲು ಕರೆ ಹೊಂದಿದವನೂ ದೇವರ ಶುಭಸಂದೇಶವನ್ನು ಸಾರಲು ನೇಮಕಗೊಂಡವನೂ ಆದ ಪೌಲನು ಬರೆಯುವ ಪತ್ರ: ನಮ್ಮ ತಂದೆಯಾದ ದೇವರು ಹಾಗು ಪ್ರಭುವಾದ ಯೆಸುಕ್ರಿಸ್ತರು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ. ದೇವರು ತಮ್ಮ ಶುಭಸಂದೇಶವನ್ನು ನೀಡುವುದಾಗಿ ಪ್ರವಾದಿಗಳ ಮುಖಾಂತರ ಮುಂಚಿತವಾಗಿಯೇ ಪವಿತ್ರಗ್ರಂಥದಲ್ಲಿ ವಾಗ್ದಾನಮಾಡಿದ್ದರು. ಈ ಸಂದೇಶ ದೇವರ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ಕುರಿತಾದುದು. ಮನುಷ್ಯತ್ವದ ಮಟ್ಟಿಗೆ ಯೇಸು ದಾವೀದನ ವಂಶಜರು; ದೈವಿಕ ಪರಿಶುದ್ಧತೆಯ ಮಟ್ಟಿಗೆ ಇವರು ದೇವರ ಶಕ್ತಿಯನ್ನು ವ್ಯಕ್ತಪಡಿಸುವ ದೇವರ ಪುತ್ರ. ಸತ್ತು ಪುನರುತ್ಥಾನಹೊಂದಿ ಇದನ್ನು ಖಚಿತಪಡಿಸಿದವರು. ಇವರ ನಾಮ ಮಹಿಮೆಗೋಸ್ಕರವಾಗಿಯೇ ಸರ್ವಜನಾಂಗಗಳೂ ಇವರನ್ನು ವಿಶ್ವಾಸಿಸಿ, ವಿಧೇಯರಾಗಿ ನಡೆಯುವಂತೆ ಮಾಡಲು ಪ್ರೇಷಿತನಾಗುವ ಸೌಭಾಗ್ಯ ನನ್ನದಾಯಿತು. ಆ ಯೇಸುಕ್ರಿಸ್ತರ ಮುಖಾಂತರವೇ ದೇವರು ಈ ಭಾಗ್ಯವನ್ನು ನನಗೆ ಅನುಗ್ರಹಿಸಿದರು. ಯೇಸುಕ್ರಿಸ್ತರಿಗೆ ಸ್ವಂತದವರಾಗಲು ಕರೆಹೊಂದಿರುವ ನೀವು ಕೂಡ ಸರ್ವ ಜನಾಂಗಗಳಲ್ಲಿ ಸೇರಿದ್ದೀರಿ. 

ಶುಭಸಂದೇಶ: ಮತ್ತಾಯ 1:18-24 

ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮುಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ  ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು. ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭ ಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ. ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು  "ಯೇಸು"  ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವನು ಆತನೇ,", ಎಂದನು. "ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು,  "ಇಮ್ಮಾನುವೇಲ್"  ಎಂದು ಆತನಿಗೆ ಹೆಸರಿಡುವರು" ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು.  "ಇಮ್ಮಾನುವೇಲ್"  ಎಂದರೆ  "ದೇವರು ನಮ್ಮೊಡನೆ ಇದ್ದಾರೆ" ಎಂದು ಅರ್ಥ. ಆಗ ಜೋಸೆಫನು ಎಚ್ಚೆತ್ತು ದೇವದೂತನ ಆಜ್ಞೆಯ ಪ್ರಕಾರ ಮರಿಯಳನ್ನು ವಿವಾಹ ಮಾಡಿಕೊಂಡನು.

17.12.22

ಮೊದಲನೇ ವಾಚನ: ಆದಿಕಾಂಡ 49:2, 8-10

ಯಕೋಬನ ಮಕ್ಕಳೇ, ಕೂಡಿಬಂದು ಕೇಳಿ ನೀವೆಲ್ಲರು, ಆಲಿಸಿ ನಿಮ್ಮ ತಂದೆ ಇಸ್ರಯೇಲಿನ ಮಾತನ್ನು: ಯೆಹೂದನೇ, ವಂದಿಸುವರು ನಿನ್ನನು ಸಹೋದರರು, ನಿನ್ನ ಕೈಯಲ್ಲಿರುವುದು ಶತ್ರುಗಳ ಕುತ್ತಿಗೆಯು; ಎರಗುವರು ನಿನಗೆ ನಿನ್ನ ಅಣ್ಣತಮ್ಮಂದಿರು. ನನ್ನ ಪುತ್ರ ಯೆಹೂದ, ನೀ ಪ್ರಾಯದ ಸಿಂಹದಂತೆ, ಬೇಟೆಹಿಡಿದು ಬೆಟ್ಟ ಏರಿದ ಕಂಠೀರವನಂತೆ; ಕಾಲು ಮಡಿಚಿ ಹೊಂಚುಕೂತ ಕೇಸರಿಯಂತೆ. ಈ ಸಿಂಹಿಣಿಯನ್ನು ಕೆಣಕುವ ಕೆಚ್ಚು ಯಾರಿಗಿದೆ? ರಾಜ್ಯಾಧಿಕಾರ ಪಡೆದವನು ಬರುವ ತನಕ; ರಾಷ್ಟ್ರಗಳು ಆತನಿಗೆ ತಲೆಬಾಗುವ ತನಕ; ತಪ್ಪದು ರಾಜದಂಡ ಯೆಹೂದನ ಕೈಯಿಂದ, ಕದಲದು ಮುದ್ರೆಕೋಲು ಅವನ ವಂಶದಿಂದ.


ಕೀರ್ತನೆ: 72:1-2, 3-4, 7-8, 17
ಶ್ಲೋಕ: ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ, ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ.

ಶುಭಸಂದೇಶ: ಮತ್ತಾಯ 1:1-17


ಅಬ್ರಹಾಮನ ಮನೆತನಕ್ಕೆ ಸೇರಿದ ದಾವೀದ ಕುಲದ ಯೇಸುಕ್ರಿಸ್ತರ ವಂಶಾವಳಿ: ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು, ಯಕೋಬನಿಗೆ ಯೂದ ಹಾಗೂ ಆತನ ಸಹೋದರರು ಹುಟ್ಟಿದರು ಯೂದನಿಗೆ ತಾಮರ ಎಂಬುವಳಿಂದ ಪೆರಸ್ ಹಾಗೂ ಜೆರಹನ್ ಹುಟ್ಟಿದರು. ಪೆರಸನಿಗೆ ಹೆಸ್ರೋನ್, ಹೆಸ್ರೋನನಿಗೆ ರಾಮ್, ರಾಮನಿಗೆ ಅಮ್ಮಿನದಾಬ್, ಅಮ್ಮಿನದಾಬನಿಗೆ ನಹಸ್ಸೋನ್, ನಹಸ್ಸೋನನಿಗೆ ಸಲ್ಮೋನ್, ಸಲ್ಮೋನನಿಗೆ ರಹಾಬ್, ಎಂಬುವಳಿಂದ ಬೋವಜ್, ಬೋವಜನಿಗೆ ರೂತ್ ಎಂಬುವಳಿಂದ ಓಬೇದ್, ಓಬೇದನಿಗೆ ಜೆಸ್ಸೆಯ, ಜೆಸ್ಸೆಯನಿಗೆ ದಾವೀದರಸನು ಹುಟ್ಟಿದರು. ದಾವೀದನಿಗೆ ಊರಿಯನ ಹೆಂಡತಿಯಿಂದ ಸೊಲೊಮೋನ್, ಸೊಲೊಮೋನನಿಗೆ ರೆಹಬ್ಬಾಮ, ರೆಹಬ್ಬಾಮನಿಗೆ ಅಬೀಯ, ಅಬೀಯನಿಗೆ ಅಸನ್ ಹುಟ್ಟಿದರು. ಅಸನನಿಗೆ ಯೋಸೆಫಾತ್, ಯೋಸೆಫಾತನಿಗೆ ಯೆಹೋರಾಮ್, ಯೆಹೋರಾಮನಿಗೆ ಉಜ್ಜೀಯ ಹುಟ್ಟಿದರು. ಉಜ್ಜೀಯನಿಗೆ ಯೋತಾಮ್, ಯೋತಾಮನಿಗೆ ಅಹಾಜ್, ಅಹಾಜನಿಗೆ ಹಿಜ್ಕೀಯನು ಹುಟ್ಟಿದರು. ಹಿಜ್ಕಯನಿಗೆ ಮನಸ್ಸೆ, ಮನಸ್ಸೆಗೆ ಆಮೋನ್, ಆಮೋನನಿಗೆ ಯೋಷೀಯ ಹುಟ್ಟಿದರು. ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು ಈ ಸಮಯದಲ್ಲೇ ಇಸ್ರಯೇಲರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು. ಬಾಬಿಲೋನಿಗೆ ಸೆರೆಹೋದ ದಾಸ್ಯದಿನಗಳು ಮುಗಿದ ಮೇಲೆ ಯೆಕೊನ್ಯನಿಗೆ ಸಲಥಿಯೇಳ್, ಸಲಥಿಯೇಲನಿಗೆ ಜೆರುಬಾಬೆಲ್, ಜೆರುಬಾಬೆಲನಿಗೆ ಅಬೀಹೂದ್, ಅಬೀಹೂದನಿಗೆ ಎಲ್ಯಕೀಮ್, ಎಲ್ಯಕೀಮನಿಗೆ ಅಜೋರ್ ಹುಟ್ಟಿದರು. ಅಜೋರನಿಗೆ ಸದೋಕ್, ಸದೋಕನಿಗೆ ಅಖೀಮ್, ಅಖೀಮನಿಗೆ ಎಲಿಹೂದ್, ಎಲಿಹೂದನಿಗೆ ಎಲಿಯಾಜರ್, ಎಲಿಯಾಜರನಿಗೆ ಮತ್ತಾನ್, ಮತ್ತಾನನಿಗೆ ಯಕೋಬ್ ಹುಟ್ಟಿದರು ಯಕೋಬನಿಗೆ ಮರಿಯಳ ಪತಿಯಾದ ಜೋಸೆಫನು ಹುಟ್ಟಿದನು. ಈ ಮರಿಯಳಿಂದಲೇ "ಕ್ರಿಸ್ತ" ಎಂದು ಕರೆಯಲಾಗುವ ಯೇಸುಸ್ವಾಮಿ ಹುಟ್ಟಿದ್ದು; ಹೀಗೆ ಒಟ್ಟು, ಅಬ್ರಾಹಾಮನಿಂದ ದಾವೀದನವರೆಗೆ ಹದಿನಾಲ್ಕು, ದಾವೀದನಿಂದ ಬಾಬಿಲೋನಿನ ದಾಸ್ಯದಿನಗಳವರೆಗೆ ಹದಿನಾಲ್ಕು, ಬಾಬಿಲೋನಿನ ದಾಸ್ಯದಿನಗಳಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು.

16.12.22 - " ಯೊವಾನ್ನನು ಉಜ್ವಲವಾಗಿ ಉರಿಯುವ ದೀಪದಂತೆ ಇದ್ದನು."

ಮೊದಲನೆಯ ವಾಚನ: ಯೆಶಾಯ 56:1-3, 6-8

ಸರ್ವೇಶ್ವರನಸ್ವಾಮಿ ಹೇಳುವುದು ಏನೆಂದರೆ: ನ್ಯಾಯವನ್ನು ಅನುಸರಿಸಿರಿ. ನೀತಿಯನ್ನು ಆಚರಿಸಿರಿ. ಏಕೆಂದರೆ ನಾ ನೀಡುವ ಮುಕ್ತಿಯು ಬೇಗನೆ ಬರುವುದು; ನಾನು ತರುವ ಸತ್ಸಂಬಂಧವು ಕೂಡಲೆ ಬೆಳಗುವುದು. ಅದನ್ನು ಕೈಗೊಳ್ಳುವವನು ಧನ್ಯನು! ಅದನ್ನು ಸುಭದ್ರವಾಗಿ ಕಾದಿರಿಸಿಕೊಂಡು ಸಬ್ಬತ್ ದಿನವನ್ನು ಹೊಲೆಮಾಡದೆ ಆಚರಿಸುತ್ತಾ ಬರುವವನು ಹಾಗೂ ಯಾವ ಕೇಡಿಗೂ ಕೈ ಹಾಕದವನು ಭಾಗ್ಯವಂತನು! ಸರ್ವೇಶ್ವರನನ್ನು ಅವಲಂಬಿಸುವ ವಿದೇಶಿಯನು, 'ಸರ್ವೇಶ್ವರ ತನ್ನ ಜನರಿಂದ ನನ್ನನ್ನು ಖಂಡಿತವಾಗಿ ಬಹಿಷ್ಕರಿಸುವನು' ಎಂದು ಹೇಳದಿರಲಿ. ಅನ್ಯದೇಶಿಯರಲ್ಲಿ ಯಾರು 'ಸರ್ವೇಶ್ವರ' ಎಂದು ನನ್ನನ್ನು ಅವಲಂಬಿಸಿ, ಪೂಜಿಸಿ, ನನ್ನ ನಾಮವನ್ನು ಪ್ರೀತಿಸಿ, ನನಗೆ ದಾಸನಾಗಿ, ಸಬ್ಬತ್ ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ, ಜೊತೆಗೆ ನನ್ನ ಒಡಂಬಡಿಕೆಯನ್ನು ಸುಭದ್ರವಾಗಿ ಪಾಲಿಸುತ್ತಾರೋ, ಅವರೆಲ್ಲರನ್ನು ನನ್ನ ಪವಿತ್ರ ಪರ್ವತಕ್ಕೆ ಬರಮಾಡುವೆನು; ನನ್ನ ಪ್ರಾರ್ಥನಲಯದಲ್ಲಿ ಅವರನ್ನು ಆನಂದಗೊಳಿಸುವೆನು; ನನ್ನ ಬಲಿಪೀಠದ ಮೇಲೆ ಅವರು ನೀಡುವ ದಹನಬಲಿಗಳನ್ನೂ ಅರ್ಪಣೆಗಳನ್ನೂ ಸಂತೋಷದಿಂದ ಸ್ವೀಕರಿಸುವೆನು. ನನ್ನ ಆಲಯ ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು. ಇಸ್ರಯೇಲಿನ ಸೆರೆಹೋದ ಜನರನ್ನು ಬರಮಾಡಿಕೊಳ್ಳುವ ದೇವರಾದ ಸರ್ವೇಶ್ವರ, " ನಾನು ಕೂಡಿಸಿಕೊಂಡ ಇಸ್ರಾಯೇಲ ಜನರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು " ಎಂದಿದ್ದಾರೆ.

ಕೀರ್ತನೆ 67:1-2, 3-4, 6-7
ಶ್ಲೋಕ: ನಿನ್ನ ಕೀರ್ತಿಸಲಿ ದೇವಾ, ಜನರು, ಸಂಕೀರ್ತಿಸಲಿ ಅವರೆಲ್ಲರೂ.

ಹರಸು ದೇವಾ, ನಮ್ಮನ್ನಾಶೀರ್ವದಿಸು|
ನಿನ್ನ ಮುಖಕಾಂತಿಯಿಂದೆಮ್ಮನು ಬೆಳಗಿಸು||
ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ|
ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತೆಗೆಲ್ಲ||

ನಿನ್ನ ಕೀರ್ತಿಸಲಿ ದೇವಾ, ಜನರು|
ಸಂಕೀರ್ತಿಸಲಿ ಅವರೆಲ್ಲರೂ||
ನ್ಯಾಯದ ಪ್ರಕಾರ ತೀರ್ಪಿಡುತಿ ಜನತೆಗೆ|
ಆದರ್ಶ ನೀಡುತಿ ಜಗದ ರಾಷ್ಟ್ರಗಳಿಗೆ|
ಹರ್ಷಾನಂದವಾಗಲಿ ಜನಾಂಗಗಳಿಗೆ||

ಇತ್ತನೆಮ್ಮ ದೇವನು ಆಶೀರ್ವಾದವನು|
ಕೊಟ್ಟಿತ್ತೆಮ್ಮ ಭೂಮಿಯು ಸಂತುಷ್ಟ ಬೆಳೆಯನು||
ನಮ್ಮೆಲ್ಲರನು ದೇವನು ಹರಸಲಿ|
ಎಲ್ಲೆಡೆ ಆತನ ಭಯಭಕ್ತಿಯಿರಲಿ||

ಶುಭಸಂದೇಶ: ಯೊವಾನ್ನ 5:33-36

ಆ ಕಾಲದಲ್ಲಿ ಯೇಸು ಯೆಹೂದ್ಯರಿಗೆ ಹೀಗೆಂದರು: ನೀವೇ ಯೊವಾನ್ನನ ಬಳಿಗೆ ದೂತರನ್ನು ಕಳುಹಿಸಿದ್ದಿರಿ. ಆತನು ಸತ್ಯವನ್ನು ಕುರಿತು ಸಾಕ್ಷಿ ಹೇಳಿದ್ದಾನೆ. ನನಗೆ ಮಾನವಸಾಕ್ಷಿ ಬೇಕೆಂದು ಅಲ್ಲ ; ಆದರೆ ಇದನ್ನೆಲ್ಲಾ ನಿಮ್ಮ ಉದ್ಧಾರಕ್ಕೆಂದು ನಾನು ಹೇಳುತ್ತಿದ್ದೇನೆ. ಯೊವಾನ್ನನು ಉಜ್ವಲವಾಗಿ ಉರಿಯುವ ದೀಪದಂತೆ ಇದ್ದನು. ಆ ಬೆಳಕಿನಲ್ಲಿ ನೀವು ಸ್ವಲ್ಪಕಾಲ ನಲಿದಾಡಿದಿರಿ. ಯೊವಾನ್ನನು ನೀಡಿದ ಸಾಕ್ಷ್ಯಕ್ಕಿಂತಲೂ ಮಿಗಿಲಾದ ಸಾಕ್ಷ್ಯ ನನಗುಂಟು : ನಾನು ಸಾಧಿಸುತ್ತಿರುವ ಸುಕೃತ್ಯಗಳೇ. ಅಂದರೆ, ಪಿತನು ನನಗೆ ಮಾಡಿಮುಗಿಸಲು ಕೊಟ್ಟ ಕಾರ್ಯಗಳೇ ನಾನು ಪಿತನಿಂದ ಬಂದವನೆಂದು ನನ್ನ ಪರವಾಗಿ ಸಾಕ್ಷಿಕೊಡುತ್ತವೆ.

15.12.22

ಮೊದಲನೆಯ ವಾಚನ: ಪ್ರವಾದಿ ಯೆಶಾಯ 54:1-10

ಆನಂದ ಗೀತೆಯನು ಹಾಡು ಹೆರದವಳೇ, ಬಂಜೆಯಾಗಿದ್ದವಳೇ; ಉಲ್ಲಾಸದಿಂದ ಅರಚು, ಬೇನೆಯನು ಅನುಭವಿಸದವಳೇ. ‘ಗಂಡನುಳ್ಳವಳಿಗಿಂತ ಹೆಚ್ಚು ಮಕ್ಕಳನ್ನು ಹೆರುವೆ’ ಎಂದು ಹೇಳುತ್ತಾರೆ ಸರ್ವೇಶ್ವರಸ್ವಾಮಿ ನಿನಗೆ. ವಿಸ್ತರಿಸು ನಿನ್ನ ಗುಡಾರವನು, ಚಾಚು ಮುಂದಕೆ ಗುಡಾರದ ಬಟ್ಟೆಗಳನು, ಹೆದರಬೇಡ; ಉದ್ದಮಾಡು ಹಗ್ಗಗಳನು, ಬಲಪಡಿಸು ಗೂಟಗಳನು. ಏಕೆಂದರೆ ಹಬ್ಬಿಕೊಳ್ಳುವೆ ನೀನು ಎಡಬಲದೊಳು ಎಲ್ಲೆಲ್ಲು, ವಶಮಾಡಿಕೊಳ್ಳುವರು ನಿನ್ನ ಸಂತಾನದವರು ಜನಾಂಗಗಳನು. ಜನಭರಿತವಾಗುವಂತೆ ಮಾಡುವರು ಪಾಳುಬಿದ್ದ ಪಟ್ಟಣಗಳನು. ಅಂಜಬೇಡ, ನಿನಗಾಗುವುದಿಲ್ಲ ಅವಮಾನ ನಾಚಬೇಡ, ನಿನಗಾಗದು ಆಶಾಭಂಗ. ಮರೆವೆ ಯೌವನದಲ್ಲಿ ನಿನಗಾದ ಅವಮಾನವನು ವೈಧವ್ಯದಲ್ಲಾದ ನಿಂದೆ ನೆನಪಿಗೆ ಬಾರದಿನ್ನು. ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ. ಗಂಡಬಿಟ್ಟು ಮನನೊಂದಿರುವ ಪತ್ನಿ ನೀನು ಹೌದು, ತ್ಯಜಿಸಲಾದ ಯೌವನದ ಪತ್ನಿ ನೀನು. ಸರ್ವೇಶ್ವರ ಕನಿಕರಿಸಿ ಕರೆದಿಹನು ನಿನ್ನನು. ಆ ನಿನ್ನ ದೇವರ ನುಡಿಯಿದು: ಬಿಟ್ಟಿದ್ದೆನು ನಿನ್ನನು ಕ್ಷಣಮಾತ್ರ ಪ್ರೀತಿಯಿಂದ ಸೇರಿಸಿಕೊಳ್ಳುವೆ ಹತ್ತಿರ. ತಟ್ಟನೆ ಉಕ್ಕಿ ಹರಿಯುವ ಕೋಪದಿಂದ ಕ್ಷಣಮಾತ್ರ ಮುಖಮರೆಸಿಕೊಂಡೆ ನಿನ್ನಿಂದ ಕರುಣಿಸುವೆನು ನಿನ್ನನು ಶಾಶ್ವತ ಕೃಪೆಯಿಂದ.” ಇಂತೆನ್ನುತಿಹನು ನಿನ್ನ ಉದ್ಧಾರಕ ಸರ್ವೇಶ್ವರ. ಶಪಥಮಾಡಿದೆ ನಾನು ನೋಹನ ದಿನದಂದು: ಜಲಪ್ರಳಯವು ಭೂಮಿಯನು ಇನ್ನು ಮುಳುಗಿಸದೆಂದು. ಶಪಥಮಾಡುವೆ ಈಗ ‘ ಕೋಪಮಾಡೆನು’ ಎಂದು ‘ಇನ್ನು ನಿನ್ನನು ಗದರಿಸೆನು’ ಎಂದು. ಬಿರುಕುಬಿಟ್ಟಾವು ಬೆಟ್ಟಗಳು, ಕದಲಿಯಾವು ಗುಡ್ಡಗಳು, ನನ್ನ ಅಚಲ ಪ್ರೀತಿಯಾದರೊ ಬಿಟ್ಟುಹೋಗದು ನಿನ್ನನು. ಶಾಂತಿಸಮಾಧಾನದ ನನ್ನೀ ಒಪ್ಪಂದವು ಕದಲದು. ನಿನ್ನ ಮೇಲೆ ಕರುಣೆಯಿಟ್ಟಿರುವ ಸರ್ವೇಶ್ವರನ ನುಡಿಯಿದು.”

ಕೀರ್ತನೆ: 30: 1-3, 4-5, 10-12
ಶ್ಲೋಕ: ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ಧರಿಸಿದೆ.

ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ಧರಿಸಿದೆ|
ಶತ್ರುಗಳನ್ನು ಕುರಿತು ಹಿಗ್ಗದಂತೆ ಮಾಡಿದೆ||
ಪಾತಾಳದಿಂದೆನ್ನ ಪ್ರಾಣವನು ಮೇಲೆತ್ತಿದೆ |
ಎನ್ನ ಬದುಕಿಸಿದೆ ದೇವಾ, ಸಮಾಧಿ ಸೇರಗೊಡದೆ||

ಭಕ್ತರೇ, ಸಂಕೀರ್ತಿಸಿರಿ ಪ್ರಭುವನು, | ಮಾಡಿರಿ ಆತನ ನಾಮಸ್ಮರಣೆಯನು||
ಆತನ ಕೋಪ ಕ್ಷಣಮಾತ್ರ| ಆತನ ಕೃಪೆ ಜೀವನ ಪರಿಯಂತ||
ಇರುಳು ಬರಲು ಇರಬಹುದು ಅಳಲು|
ನಲಿವು ಉಲಿವುದು ಹಗಲು ಹರಿಯಲು||

“ಆಲಿಸು ಪ್ರಭು, ಕರುಣಿಸು, ನೆರವಾಗು ಬೇಗ”|
ಎಂದು ಪ್ರಭು ನಾನಿನ್ನನು ಪ್ರಾರ್ಥಿಸಿದಾಗ||
ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ|
ಎನ್ನ ಗೋಣಿತಟ್ಟನು ಹರ್ಷಾಭರಣವಾಗಿಸಿದೆ||
ಹೇ ಪ್ರಭೂ, ಎನ್ನ ದೇವ, ನಿನಗೆನ್ನ ಅನಂತ ಧನ್ಯವಂದನೆ||

ಶುಭಸಂದೇಶ: ಲೂಕ 7:24-30

ಆ ಕಾಲದಲ್ಲಿ ಯೇಸು ಜನಸಮೂಹಕ್ಕೆ ಯೊವಾನ್ನನನ್ನು ಕುರಿತು ಹೀಗೆಂದರು : " ಬೆಂಗಾಡಿನಲ್ಲಿ ನೀವು ಏನನ್ನು ನೋಡಲೆಂದು ಹೋದಿರಿ? ಗಾಳಿಗೆ ಓಲಾಡುವ ಜೊಂಡನ್ನೇ? ಇಲ್ಲವಾದರೆ ಮತ್ತೇನನ್ನು ನೋಡಹೋದಿರಿ? ನಯವಾದ ರೇಷ್ಮೆ ಉಡುಪನ್ನು ಧರಿಸಿರುವ ವ್ಯಕ್ತಿಯನ್ನೇ? ಅಂಥ ಶೃಂಗಾರವಾದ ಉಡುಗೆ ತೊಡುಗೆಯನ್ನು ಧರಿಸಿ, ಭೋಗಜೀವನ ನಡೆಸುವವರು ಅರಮನೆಗಳಲ್ಲಿರುತ್ತಾರಷ್ಟೆ ! ಹಾಗಾದರೆ ನೀವು ಇನ್ನೇನನ್ನು ನೋಡಲು ಹೋದಿರಿ? ಪ್ರವಾದಿಯನ್ನೇ? ಹೌದು, ಪ್ರವಾದಿಗಿಂತಲೂ ಶ್ರೇಷ್ಠನಾದವನನ್ನು ನೋಡಿದಿರಿ, ಎಂಬುದು ನಿಜ. " ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ ಕಳುಹಿಸುವೆನು. ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ದಗೊಳಿಸುವನು, -- ಎಂದು ಪವಿತ್ರಗ್ರಂಥದಲ್ಲಿ ಪ್ರಸ್ತಾಪಿಸಿರುವುದು ಈ ಯೊವಾನ್ನನನ್ನು ಕುರಿತೇ. ಮಾನವನಾಗಿ ಜನಿಸಿದ ಯಾವನೂ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಆದರೂ ದೇವರ ಸಾಮ್ರಾಜ್ಯದಲ್ಲಿ ಕನಿಷ್ಟನು ಕೂಡ ಅವನಿಗಿಂತ ಶ್ರೇಷ್ಠನೇ ಸರಿ, " ಎಂದರು. ಯೊವಾನನ್ನ ಉಪದೇಶವನ್ನು ಜನಸಾಮಾನ್ಯರೆಲ್ಲರೂ ಕೇಳಿದರು. ಅವರು, ವಿಶೇಷವಾಗಿ ಸುಂಕದವರು, ದೇವಯೋಜನೆಗೆ ತಲೆಬಾಗಿ ಆತನಿಂದ ಸ್ನಾನದೀಕ್ಷೆಯನ್ನು ಪಡೆದರು. ಆದರೆ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು ತಮ್ಮನ್ನು ಕುರಿತಾದ ದೈವೇಚ್ಛೆಯನ್ನು ಅಲ್ಲಗಳೆದು, ಯೊವಾನ್ನನಿಂದ ಸ್ನಾನದೀಕ್ಷೆಯನ್ನು ಪಡೆಯದೆ ಹೋದರು.

14.12.22 - "ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ"

ಮೊದಲನೇ ವಾಚನ: ಯೆಶಾಯ 45: 6c-8, 18, 21c-25 

ಇದ ಕಂಡು ತಿಳಿಯುವರೆಲ್ಲರು ಪೂರ್ವದಿಂದ ಪಶ್ಚಿಮದವರೆಗು: ನನ್ನ ವಿನಾ ದೇವರಾರು ಇಲ್ಲವೆಂದು ನಾನೇ ಸರ್ವೇಶ್ವರ ಮತ್ತಾರು ಅಲ್ಲವೆಂದು; ಬೆಳಕಿಗೂ ಕತ್ತಲಿಗೂ ನಾನೆ ಸೃಷ್ಟಿಕರ್ತನೆಂದು ಸುಖದುಃಖಗಳಿಗೆ ಕಾರಣಕರ್ತನೆಂದು ಸಕಲವನು ನಡೆಸುವ ಸರ್ವೇಶ್ವರ ನಾನೇ ಎಂದು. ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ; ಅಂಕುರಿಸಲಿ ಜೀವೋದ್ಧಾರವನು ಭೂಮಂಡಲ ಬೆಳೆಯಲಿ ಅದರೊಡನೆಯೇ ಸದ್ಧರ್ಮದ ಫಲ, ಸರ್ವೇಶ್ವರನಾದ ನಾನೇ ಕರ್ತ ಇದಕ್ಕೆಲ್ಲ.” ಕೇಳಿ, ಆಕಾಶಮಂಡಲವನ್ನು ಸೃಷ್ಟಿಸಿದ ಸರ್ವೇಶ್ವರನ ಮಾತನ್ನು: ಭೂಲೋಕವನು ನಿರ್ಮಿಸಿ, ರೂಪಿಸಿ, ಸ್ಥಾಪಿಸಿದ ದೇವರು ಆತನು. ಅದನ್ನು ಶೂನ್ಯಸ್ಥಾನವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದವನು ಆತನು. ಅಂಥವನು ಇಂತೆನ್ನುತ್ತಾನೆ: “ಸರ್ವೇಶ್ವರ ನಾನೇ; ನಾನಲ್ಲದೆ ಇನ್ನಾರೂ ಇಲ್ಲ. ಹೇಳಿ, ನ್ಯಾಯಸ್ಥಾನಕ್ಕೆ ಬಂದು ನಿಮ್ಮ ವಾದವನ್ನು ಮಂಡಿಸಿ; ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಪರ್ಯಾಲೋಚಿಸಿ ನೋಡಲಿ. ಪ್ರಾರಂಭದಿಂದಲೂ ಈ ವಿಷಯವನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮುಂಚೆಯೇ ತಿಳಿಸಿದವನು ನಾನಲ್ಲದೆ ಇನ್ಯಾರು? ನನ್ನ ಹೊರತು ಇನ್ನು ಯಾವ ದೇವರೂ ಇಲ್ಲ; ನಾನಲ್ಲದೆ ಸತ್ಯಸ್ವರೂಪವನು, ಉದ್ಧಾರಕನು ಆದ ದೇವನಿಲ್ಲವೇ ಇಲ್ಲ. “ಎಲ್ಲೆ ಎಲ್ಲೆಗಳಲ್ಲಿರುವ ಜನರೇ, ತಿರುಗಿಕೊಳ್ಳಿರಿ ನನ್ನ ಕಡೆಗೆ, ಆಗ ಉದ್ಧಾರವಾಗುವಿರಿ. ದೇವರು ಬೇರಾರೂ ಇಲ್ಲ, ನಾನೊಬ್ಬನೆ ಎಂಬುದನರಿಯಿರಿ. ಪ್ರತಿಯೊಬ್ಬರು ಮೊಣಕಾಲೂರುವರು ನನಗೆ ಎಲ್ಲರು ನಾನೇ ದೇವರೆಂದು ಮಾಡುವರು ಪ್ರತಿಜ್ಞೆ. ಆ ನುಡಿ ಹೊರಟಿದೆ ನನ್ನ ಸತ್ಯದ ಬಾಯಿಂದ ಅದನ್ನು ಹಿಂತೆಗೆಯೆನು ನನ್ನ ಮೇಲಿಟ್ಟ ಆಣೆಯಿಂದ. “ಜೀವೋದ್ಧಾರವು, ಶಕ್ತಿಯು ಸರ್ವೇಶ್ವರನಲ್ಲಿ ಮಾತ್ರ ಉಂಟು ಆತನ ವಿರೋಧಿಗಳೆಲ್ಲರೂ ಆತನನ್ನೇ ಮರೆಹೋಗುವರು ನಾಚಿಕೆಪಟ್ಟು. ಪಡೆವರು ಇಸ್ರಯೇಲಿನ ವಂಶಜರೆಲ್ಲರು ಸರ್ವೇಶ್ವರನಲ್ಲೇ ಜೀವೋದ್ಧಾರವನು, ಆನಂದವನು.”

ಕೀರ್ತನೆ: 85: 9ab and 10, 11-12, 13-14 
ಶ್ಲೋಕ: ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ, ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ. 

ಶುಭಸಂದೇಶ: ಲೂಕ 7: 18b-23 


ಸ್ನಾನಿಕ ಯೊವಾನ್ನನ್ನು, ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದವರು ನೀವೋ ಅಥವಾ ಬೇರೊಬ್ಬರಿಗಾಗಿ ನಾವು ಎದುರು ನೋಡಬೇಕೋ?” ಎಂದು ಯೇಸುಸ್ವಾಮಿಯನ್ನು ಕೇಳಲು ಅವರ ಬಳಿಗೆ ಕಳುಹಿಸಿದನು. ಆ ಶಿಷ್ಯರು ಯೇಸುವಿನ ಬಳಿಗೆ ಬಂದು, “ಬರಬೇಕಾದವರು ನೀವೋ ಅಥವಾ ನಾವು ಬೇರೊಬ್ಬರನ್ನು ಎದುರುನೋಡಬೇಕೋ ಎಂದು ವಿಚಾರಿಸಲು ಸ್ನಾನಿಕ ಯೊವನ್ನನು ನಮ್ಮನ್ನು ತಮ್ಮ ಬಳಿಗೆ ಕಳುಹಿಸಿದ್ದಾರೆ,”ಎಂದರು.ಅದೇ ಸಮಯದಲ್ಲಿ ಯೇಸು ರೋಗ ರುಜಿನಗಳಿಂದ ನರಳುತ್ತಿದ್ದ ಹಾಗೂ ದೆವ್ವಹಿಡಿದಿದ್ದ ಅನೇಕರನ್ನು ಗುಣಪಡಿಸುತ್ತಿದ್ದರು ಮತ್ತು ಹಲವು ಮಂದಿ ಕುರುಡರಿಗೆ ದೃಷ್ಟಿಯನ್ನು ದಯಪಾಲಿಸುತ್ತಿದ್ದರು. ಯೇಸು ಅವರಿಗೆ ಪ್ರತ್ಯುತ್ತರವಾಗಿ,“ನೀವು ಕಂಡದ್ದನ್ನೂ ಕೇಳಿದ್ದನ್ನೂ ಯೊವಾನ್ನನಿಗೆ ಹೋಗಿ ತಿಳಿಸಿರಿ : ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ. ದೀನದಲಿತರಿಗೆ ಶುಭಸಂದೇಶವನ್ನು ಪ್ರಕಟಿಸಲಾಗುತ್ತಿದೆ. ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು,” ಎಂದು ಹೇಳಿ ಕಳುಹಿಸಿದರು.

13.12.22

ಮೊದಲನೇ ವಾಚನ: ಜೆಫನ್ಯನು 3: 1-2, 9-13 

ದಬ್ಬಾಳಿಕೆ ನಡೆಸುವ, ದಂಗೆಯೇಳುವ ದುಷ್ಟ ನಗರಕ್ಕೆ ದಿಕ್ಕಾರ! ಅದು ಯಾರ ಬುದ್ಧಿಮಾತಿಗೂ ಕಿವಿಗೊಡಲಿಲ್ಲ. ಶಿಕ್ಷಣಕ್ಕೆ ಒಳಪಡಲಿಲ್ಲ. ಸರ್ವೇಶ್ವರಸ್ವಾಮಿಯಲ್ಲಿ ಭರವಸೆ ಇಡಲಿಲ್ಲ. ತನ್ನ ದೇವರ ಸನ್ನಿಧಿಗೆ ಬರಲಿಲ್ಲ. “ಆಗ ಎಲ್ಲರೂ ಒಮ್ಮನಸ್ಸಿನಿಂದ ನನ್ನನ್ನು ಪೂಜಿಸಿ ನನ್ನ ಹೆಸರೆತ್ತಿ ಪ್ರಾರ್ಥಿಸುವಂತೆ ಜನಾಂಗಗಳ ಬಾಯನ್ನು ಪರಿವರ್ತಿಸಿ ಶುದ್ಧೀಕರಿಸುವೆನು. ಚದರಿಹೋಗಿರುವ ನನ್ನ ಜನರು, ನನ್ನ ಭಕ್ತಾದಿಗಳು, ಸುಡಾನಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದೊಪ್ಪಿಸುವರು. ನೀನು ನನಗೆ ಎದುರಾಗಿ ದಂಗೆಯೆದ್ದು ಮಾಡಿದ ನಾನಾ ದುಷ್ಕøತ್ಯಗಳಿಗಾಗಿ ಆ ದಿನದಂದು ನೀನು ನಾಚಿಕೆಪಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಅತಿ ಗರ್ವದಿಂದ ಮೆರೆಯುವವರನ್ನು ನಿನ್ನ ಮಧ್ಯೆಯಿಂದ ತೊಲಗಿಸಿಬಿಡುವೆನು. ಅಂದಿನಿಂದ ನನ್ನ ಪವಿತ್ರ ಪರ್ವತದ ಮೇಲೆ ನೀನು ಗರ್ವಪಡದೆ ಬಾಳುವೆ. ದೀನರೂ ನಮ್ರರೂ ಆದ ಜನರನ್ನು ನಿನ್ನಲ್ಲಿ ಉಳಿಸುವೆನು. ಅವರು ಪ್ರಭುವಿನ ನಾಮದಲ್ಲಿ ಭಯಭಕ್ತಿಯಿಂದಿರುವರು. ಇಸ್ರಯೇಲಿನಲ್ಲಿ ಅಳಿದುಳಿದವರು ಅನ್ಯಾಯ ಮಾಡರು, ಸುಳ್ಳಾಡರು. ಅವರ ಬಾಯಲ್ಲಿ ಮೋಸವಿರದು. ಕುರಿಮಂದೆಯಂತೆ ಮೇದು ಸುರಕ್ಷಿತವಾಗಿರುವರು. ಅವರನ್ನು ಯಾರೂ ಹೆದರಿಸರು.” 

ಕೀರ್ತನೆ: 34: 2-3, 6-7, 17-18, 19 and 23 
ಶ್ಲೋಕ: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು 

ಶುಭಸಂದೇಶ: ಮತ್ತಾಯ 21: 28-32 

ಯೇಸು ಮುಖ್ಯಯಾಜಕರನ್ನೂ ಪ್ರಜಾಪ್ರಮುಕರನ್ನೂ ಉದ್ದೇಶಿಸಿ ಹೀಗೆಂದರು: “ಈ ಬಗ್ಗೆ ನಿಮಗೇನು ಅನಿಸುತ್ತದೆ? ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಒಮ್ಮೆ ಆತ ಮೊದಲನೆಯ ಮಗನ ಹತ್ತಿರ ಬಂದು, ‘ಮಗನೇ, ಈ ಹೊತ್ತು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದ. ಅದಕ್ಕೆ ಅವನು, ‘ನಾನು ಹೋಗುವುದಿಲ್ಲ’ ಎಂದು ಉತ್ತರವಿತ್ತ. ಆದರೂ ಅನಂತರ ಪಶ್ಚಾತ್ತಾಪಪಟ್ಟು ಅವನು ತೋಟಕ್ಕೆ ಹೋದ. ತಂದೆ ಎರಡನೆಯ ಮಗನ ಹತ್ತಿರ ಹೋಗಿ ಅಂತೆಯೇ ತೋಟಕ್ಕೆ ಹೋಗಲು ಹೇಳಿದ. ಅವನು, ‘ಇಗೋ, ಹೋಗುತ್ತೇನಪ್ಪಾ’ ಎಂದು ಹೇಳಿದ. ಆದರೆ ಹೋಗಲೇ ಇಲ್ಲ. ಇವರಿಬ್ಬರಲ್ಲಿ ತಂದೆಯ ಇಷ್ಟದಂತೆ ನಡೆದವನು ಯಾರು?” ಎಂದು ಯೇಸು ಕೇಳಿದರು. “ಮೊದಲನೆಯ ಮಗನೇ,” ಎಂದು ಉತ್ತರಿಸಿದರು ಅವರು. ಆಗ ಯೇಸುಸ್ವಾಮಿ, “ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲೇ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವರು ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಸ್ನಾನಿಕ ಯೊವಾನ್ನನು ಧರ್ಮಮಾರ್ಗವನ್ನು ತೋರಿಸಲು ಬಂದನು. ನೀವು ಆತನನ್ನು ನಂಬಲಿಲ್ಲ. ಆದರೆ ಸುಂಕದವರೂ ವೇಶ್ಯೆಯರೂ ಆತನನ್ನು ನಂಬಿದರು. ಇದನ್ನು ಕಂಡ ಮೇಲೂ ನೀವು ಪಶ್ಚಾತ್ತಾಪ ಪಡಲಿಲ್ಲ, ಯೊವಾನ್ನನನ್ನು ನಂಬಲೂ ಇಲ್ಲ.

12.12.22

 ಮೊದಲನೇ ವಾಚನ: ಸಂಖ್ಯಾಕಾಂಡ 24:2-7, 15-17

ಬಿಳಾಮನು ಕಣ್ಣೆತ್ತಿ ನೋಡಿದಾಗ ಕುಲಗಳ ಅನುಸಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಯೇಲರು ಅವನಿಗೆ ಕಾಣಿಸಿದರು. ಆಗ ಅವನು ದೇವಾತ್ಮ ಪ್ರೇರಿತನಾಗಿ ಪದ್ಯರೂಪದಲ್ಲಿ ಇಂತೆಂದು ಭವಿಷ್ಯ ನುಡಿದನು: "ಇದು ಬೆಯೋರನ ಮಗ ಬಿಳಾಮನ ಭವಿಷ್ಯವಾಣಿ: ಮನೋದೃಷ್ಟಿಯಿಂದ ನೋಡುವ; ಪುರುಷನ ವಾಣಿ. ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ, ಪರವಶನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದಾ ವೆಕ್ತಿಯ ವಾಣಿ. ಯಕೋಬ್ಯರೇ, ನಿಮ್ಮ ಡೇರೆಗಳೆಷ್ಟು ರಮ್ಯ! ಇಸ್ರಯೇಲರೇ, ನಿಮ್ಮ ನಿವಾಸಗಳೆಷ್ಟು ಸುಂದರ! ಅವಿವೆ ಉದ್ದುದ್ದ ಚಾಚಿಕೊಂಡಿರುವ ಕಣಿವೆಗಳಂತೆ; ನದಿಯ ಬಳಿಯಿರುವ ತೋಟಗಳಂತೆ ಸರ್ವೇಶ್ವರ ನೆಟ್ಟ ಅಗರು ಮರಗಳಂತೆ; ನೀರ ಬದಿಯ ದೇವದಾರು ವೃಕ್ಷಗಳಂತೆ. ನೀರು ಹರಿಯುತ್ತಲೇ ಇದೆ ಅವರ ಕಪಿಲೆಗಳಿಂದ, ಅವರ ಬಿತ್ತನೆಗೆ ನೀರಿನ ಕೊರತೆಯೆಂಬುದಿಲ್ಲ. ಆಗಾಗ್ ರಾಜನಿಗಿಂತ ಶ್ರೇಷ್ಠ ಅವರ ಅರಸ; ಅಭಾವೃದ್ಧಿಯಾಗುತ್ತಿದೆ ಅವರ ರಾಜ್ಯ." ನಂತರ ಬಿಳಾಮನು ಪುನಃ ಪದ್ಯರೂಪದಲ್ಲಿ ಹೀಗೆಂದನು: "ಬೆಯೋರನ ಮಗ ಬಿಳಾಮನು ನುಡಿದ ಭವಿಷ್ಯವಾಣಿ; ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ ದೈವೋಕ್ತಿಗಳನ್ನು ಕೇಳುವವನ ಭವಿಷ್ಯವಾಣಿ; ಪರಾತ್ಪರನ ಜ್ಞಾನವನ್ನು ಪಡೆದವನ ವಾಣಿ ಪರವಷನಾಗಿ ಕಣ್ದೆರೆದು ಸರ್ವಶಕ್ತನ ದರ್ಶನ ಹೊಂದಿದವನ ಭವಿಷ್ಯವಾಣಿ; ಒಬ್ಬಾತನನ್ನು ನೋಡುತ್ತಿದ್ದೇನೆ; ಆತ ಈಗಿನವನಲ್ಲ. ಆತ ಕಾಣಿಸುತ್ತಾನೆ, ಆದರೆ ಸಮಿಾಪದಲ್ಲಿಲ್ಲ. ನಕ್ಷತ್ರಪ್ರಾಯನೊಬ್ಬನು ಉದಯಿಸಿದ್ದಾನೆ ಯಕೋಬವಂಶದಲ್ಲಿ; ರಾಜದಂಡ ಹಿಡಿದವನ ಕಂಡು ಬಂದಿದ್ದಾನೆ ಇಸ್ರಯೇಲರಲ್ಲಿ. ಆತ ಸೀಳಿಹಾಕಿದ್ದಾನೆ ಮೋವಾಬ್ಯರ ತಲೆಯನ್ನು; ಕೆಡವಿಬಿಟ್ಟಿದ್ದಾನೆ ಯುದ್ಧವೀರರೆಲ್ಲರನ್ನು.

ಕೀರ್ತನೆ: 25:4-5, 6, 7, 8-9

ಶ್ಲೋಕ: ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು

ಶುಭಸಂದೇಶ: ಮತ್ತಾಯ 21:23-27

ಯೇಸುಸ್ವಾಮಿ ಮಹಾದೇವಾಲಯದ ಒಳಕ್ಕೆ ಹೋಗಿ ಅಲ್ಲಿ ಬೋಧನೆ ಮಾಡತೊಡಗಿದರು. ಮುಖ್ಯ ಯಾಜಕರೂ ಪ್ರಜಾಪ್ರಮುಖರೂ ಅವರ ಬಳಿಗೆ ಬಂದು, "ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರಾರು?" ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು, "ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ಉತ್ತರಕೊಟ್ಟರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ. "ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ, ಮನುಷ್ಯರಿಂದಲೋ?"  ಎಂದು ಕೇಳಿದರು. ಅದಕ್ಕೆ ಅವರು ತಮ್ಮ ತಮ್ಮೊಳಗೇ ತರ್ಕ ಮಾಡಲಾರಂಭಿಸಿದರು; "ದೇವರಿಂದ ಬಂತು ಎಂದು ಉತ್ತರಿಸಿದರೆ, "ಹಾಗಾದರೆ ನೀವೇಕೆ ಆತನನ್ನು ನಂಬಲಿಲ್ಲ?" ಎಂದು ಕೇಳುವನು. "ಮನುಷ್ಯರಿಂದ ಬಂತು" ಎಂದು ಕೇಳಿದೆವಾದರೆ ಜನಸಮೂಹಕ್ಕೆ ನಾವು ಭಯಪಡಬೇಕಾಗಿದೆ. ಏಕೆಂದರೆ ಯೊವಾನ್ನನು ಒಬ್ಬ ಪ್ರವಾದಿಯೆಂದು ಸರ್ವರೂ ಸನ್ಮಾನಿಸುತ್ತಾರೆ" ಎಂದುಕೊಂಡರು. ಬಳಿಕ ಬಂದು, "ನಮಗೆ ಗೊತ್ತಿಲ್ಲ," ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು, "ಹಾಗಾದರೆ, ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ," ಎಂದರು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...