31.08.22 - “ನೀವು ದೇವರ ಪುತ್ರ”

ಮೊದಲನೇ ವಾಚನ: ೧ ಕೊರಿಂಥಿಯರಿಗೆ 3:1-9

ಪ್ರಿಯ ಸಹೋದರರೇ, ದೇವರ ಆತ್ಮವನ್ನು ಪಡೆದವರೊಡನೆ ಮಾತನಾಡಿದಂತೆ ನಿಮ್ಮೊಡನೆ ನಾವು ಮಾತನಾಡಲಿಲ್ಲ. ಲೌಕಿಕರು ನೀವು; ಕ್ರಿಸ್ತಯೇಸುವಿನಲ್ಲಿ ಹಸುಗೂಸುಗಳು ನೀವು ಎಂದು ಭಾವಿಸಿ ನಿಮ್ಮೊಡನೆ ಮಾತನಾಡಬೇಕಾಯಿತು.  ನಾನು ನಿಮಗೆ ಹಾಲೂಡಿಸಿದೆನು; ಗಟ್ಟಿ ಆಹಾರವನ್ನು ಕೊಡಲಿಲ್ಲ. ಏಕೆಂದರೆ, ಅದನ್ನು ಜೀರ್ಣಿಸಿಕೊಳ್ಳಲು ನಿಮಗೆ ಶಕ್ತಿ ಇರಲಿಲ್ಲ. ಇಂದಿಗೂ ನೀವು ಶಕ್ತರಲ್ಲ. ನೀವು ಇನ್ನೂ ಲೌಕಿಕರಂತೆ ಬಾಳುತ್ತಿದ್ದೀರಿ. ನಿಮ್ಮ ನಡುವೆ ದ್ವೇಷ-ಅಸೂಯೆ, ವಾದ-ವಿವಾದಗಳು ಪ್ರಬಲವಾಗಿದ್ದು ನೀವಿನ್ನೂ ಪ್ರಾಣಿಗಳಂತೆ, ಸಾಧಾರಣ ಮನುಷ್ಯರಂತೆ ವರ್ತಿಸುತ್ತಿದ್ದೀರಲ್ಲವೆ? ಒಬ್ಬನು, ನಾನು ಪೌಲನ ಕಡೆಯವನು; ಇನ್ನೊಬ್ಬನು, ನಾನು ಅಪೊಲೋಸನ ಕಡೆಯವನು, ಎಂದು ನಿಮ್ಮೊಳಗೆ ಕಿತ್ತಾಡುವ ನೀವು ಕೇವಲ ನರಪ್ರಾಣಿಗಳಲ್ಲದೆ ಮತ್ತೇನು? ಅಪೊಲೋಸನು ಯಾರು? ಪೌಲನು ಯಾರು? ನಿಮ್ಮನ್ನು ವಿಶ್ವಾಸಕ್ಕೆ ಕರೆತಂದ ದಾಸರು ನಾವಲ್ಲವೇ? ನಮ್ಮಲ್ಲಿ ಪ್ರತಿಯೊಬ್ಬನು ಪ್ರಭು ನಿಯಮಿಸುವ ಕಾರ್ಯವನ್ನು ನಿರ್ವಹಿಸುತ್ತೇವೆ. ನಾನು ಸಸಿಯನ್ನು ನೆಟ್ಟೆನು; ಅಪೊಲೋಸನು ನೀರೆರೆದನು; ಆದರೆ ಅದನ್ನು ಬೆಳೆಸಿದವರು ದೇವರು. ಆದ್ದರಿಂದ ನೆಡುವವನಾಗಲಿ, ನೀರೆರೆಯುವವನಾಗಲಿ ಪ್ರಮುಖನಲ್ಲ; ಬೆಳವಣಿಗೆ ನೀಡುವ ದೇವರೇ ದೊಡ್ಡವರು. ನೆಡುವವನೂ ನೀರೆರೆಯುವವನೂ ಇಬ್ಬರೂ ಅಗತ್ಯವಾಗಿ ಬೇಕಾದವರೇ. ಅವನವನ ದುಡಿಮೆಗೆ ತಕ್ಕ ಹಾಗೆ ಪ್ರತಿಯೊಬ್ಬನೂ ಸಂಭಾವನೆ ಪಡೆಯುತ್ತಾನೆ. ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ.

ಕೀರ್ತನೆ: 33:12-13, 14-15, 20-21

ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ

ಶುಭಸಂದೇಶ: ಲೂಕ 4:38-44

ಪ್ರಾರ್ಥನಾಮಂದಿರದಿಂದ ಹೊರಟ ಯೇಸುಸ್ವಾಮಿ ಸಿಮೋನನ ಮನೆಗೆ ಬಂದರು. ಆ ಸಿಮೋನನ ಅತ್ತೆ ವಿಷಮಜ್ವರದಿಂದ ನರಳುತ್ತಿದ್ದಳು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು. ಯೇಸು ಆಕೆಯ ಬಳಿ ನಿಂತು, ಬಾಗಿ, ಜ್ವರಕ್ಕೆ ಬಿಟ್ಟುಹೋಗೆಂದು ಆಜ್ಞಾಪಿಸಿದರು; ಅದು ಬಿಟ್ಟುಹೋಯಿತು. ಆ ಕ್ಷಣವೇ ಆಕೆ ಎದ್ದು ಅವರೆಲ್ಲರನ್ನು ಸತ್ಕರಿಸಿದಳು. ಸಂಜೆಯಾಗುತ್ತಿದ್ದಂತೆ ಜನರು ತಮ್ಮ ಮನೆಯಲ್ಲಿ ವಿಧವಿಧವಾದ ಕಾಯಿಲೆಯಿಂದ ನರಳುತ್ತಿದ್ದವರನ್ನೆಲ್ಲಾ ಯೇಸುಸ್ವಾಮಿಯ ಬಳಿಗೆ ಕರೆತಂದರು. ಯೇಸು ಪ್ರತಿಯೊಬ್ಬನ ಮೇಲೆ ತಮ್ಮ ಕೈಯಿಟ್ಟು ಗುಣಪಡಿಸಿದರು.  ಅನೇಕರ ಮೈಮೇಲಿದ್ದ ದೆವ್ವಗಳು ಸಹ, “ನೀವು ದೇವರ ಪುತ್ರ,” ಎಂದು ಬೊಬ್ಬೆಹಾಕುತ್ತಾ ಬಿಟ್ಟುಹೋದುವು. ಇವರೇ ‘ಕ್ರಿಸ್ತ’ ಎಂದು ಅವುಗಳು ತಿಳಿದಿದ್ದರಿಂದ ಯೇಸು ಅವುಗಳನ್ನು ಗದರಿಸಿ ಮಾತೆತ್ತಲು ಬಿಡಲಿಲ್ಲ. ಬೆಳಗಾಗುತ್ತಲೇ, ಯೇಸುಸ್ವಾಮಿ ಅಲ್ಲಿಂದ ಹೊರಟು ನಿರ್ಜನ ಸ್ಥಳಕ್ಕೆ ಹೋದರು. ಜನಸಮೂಹವು ಅವರನ್ನು ಹುಡುಕಿಕೊಂಡು ಅಲ್ಲಿಗೂ ಬಂದಿತು; ತಮ್ಮನ್ನು ಬಿಟ್ಟುಹೋಗಬಾರದೆಂದು ಜನರು ತಡೆಗಟ್ಟಲು ಯತ್ನಿಸಿದರು.  ಅವರಿಗೆ ಯೇಸು, “ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಅದಕ್ಕಾಗಿಯೇ,” ಎಂದರು.  ಬಳಿಕ ಜುದೇಯ ಪ್ರಾಂತ್ಯದ ಪ್ರಾರ್ಥನಾಮಂದಿರಗಳಲ್ಲಿ ಯೇಸು ಬೋಧಿಸುತ್ತಿದ್ದರು.

30.08.22 - “ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆ ಮಾಡುತ್ತಾನೆ"

ಮೊದಲನೇ ವಾಚನ: 1 ಕೊರಿಂಥಿಯರಿಗೆ 2:10-16

ಸಹೋದರರೇ, ನಮಗಾದರೋ ದೇವರು ಪವಿತ್ರಾತ್ಮ ಅವರ ಮುಖಾಂತರ ಇವುಗಳನ್ನು ಪ್ರಕಟಿಸಿದ್ದಾರೆ. ಸಕಲವನ್ನು ಹಾಗೂ ದೇವರ ಅಂತರಾಳವನ್ನು ಅವಲೋಕಿಸುವವರು ಈ ಪವಿತ್ರಾತ್ಮರೇ.  ಮಾನವನ ಆಲೋಚನೆಗಳನ್ನು ಅವನ ಅಂತರಾತ್ಮವಲ್ಲದೆ ಮತ್ತಾರು ಬಲ್ಲರು? ಅಂತೆಯೇ, ದೇವರ ಆಲೋಚನೆಗಳನ್ನು ಪವಿತ್ರಾತ್ಮರಲ್ಲದೆ ಬೇರೆ ಯಾರೂ ಅರಿಯಲಾರರು.  ನಾವಾದರೋ ಪ್ರಾಪಂಚಿಕ ಆತ್ಮವನ್ನು ಹೊಂದಿದವರಲ್ಲ. ದೇವರು ನಮಗೆ ದಯಪಾಲಿಸಿರುವ ವರಪ್ರಸಾದಗಳನ್ನು ಅರಿತುಕೊಳ್ಳುವಂತೆ ಮಾಡುವ ಪಾರಮಾರ್ಥಿಕ ಆತ್ಮವನ್ನು ಪಡೆದಿದ್ದೇವೆ. ನಾವು ಇವುಗಳನ್ನು ಮಾನವ ಜ್ಞಾನ ಪ್ರೇರೇಪಿಸಿದ ಮಾತುಗಳಿಂದ ಹೇಳುವುದಿಲ್ಲ. ದೇವರ ಆತ್ಮದಿಂದ ಪ್ರೇರಿತವಾದ ಮಾತುಗಳಿಂದ ಹೇಳುತ್ತೇವೆ. ಹೀಗೆ ಆಧ್ಯಾತ್ಮಿಕ ಸತ್ಯಗಳನ್ನು, ಆಧ್ಯಾತ್ಮಿಕ ವ್ಯಕ್ತಿಗಳಿಗೆ ವಿವರಿಸುತ್ತೇವೆ.  ಭೌತಿಕ ಮನುಷ್ಯನು ದೇವರ ಆತ್ಮದ ವರಗಳನ್ನು ನಿರಾಕರಿಸುತ್ತಾನೆ. ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ. ಅವುಗಳನ್ನು ಗ್ರಹಿಸಲು ಅವನಿಂದಾಗದು. ಏಕೆಂದರೆ, ಆಧ್ಯಾತ್ಮಿಕ ವಿವೇಚನೆಯಿಂದ ಮಾತ್ರ ಅವುಗಳನ್ನು ಅರಿಯಲು ಸಾಧ್ಯ.  ದೇವರ ಆತ್ಮವನ್ನು ಹೊಂದಿದವನು ಎಲ್ಲವನ್ನೂ ವಿಚಾರಣೆಮಾಡಿ ತಿಳಿದುಕೊಳ್ಳುತ್ತಾನೆ. ಅವನನ್ನು ಯಾರೂ ವಿಚಾರಣೆಗೆ ಗುರಿಮಾಡಲಾಗದು.  “ಪ್ರಭುವಿನ ಮನಸ್ಸನ್ನರಿತವರಾರು? ಪ್ರಭುವಿಗೆ ಉಪದೇಶಿಸುವವರಾರು?” ಎಂದು ಲಿಖಿತವಾಗಿದೆ. ನಾವಾದರೋ, ಕ್ರಿಸ್ತಯೇಸುವಿನ ಮನೋಭಾವನೆಯುಳ್ಳವರು.

ಕೀರ್ತನೆ: 145:8-9, 10-11, 12-13, 13-14
ಶ್ಲೋಕ: ಪ್ರಭುವಿನ ಮಾರ್ಗ ಧರ್ಮಸಮ್ಮತ

ಶುಭಸಂದೇಶ: ಲೂಕ 4:31-37


ಬಳಿಕ ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದ ಕಫೆರ್ನವುಮ್ ಎಂಬ ಊರಿಗೆ ಬಂದು ಸಬ್ಬತ್ದಿನ ಅಲ್ಲಿನ ಜನರಿಗೆ ಬೋಧಿಸುತ್ತಿದ್ದರು.  ಅವರು ಅಧಿಕಾರವಾಣಿಯಿಂದ ಉಪದೇಶಿಸುತ್ತಿದ್ದುದನ್ನು ಕೇಳಿ ಜನರೆಲ್ಲರೂ ಬೆರಗಾದರು. ದುಷ್ಟ ದೆವ್ವ ಹಿಡಿದಿದ್ದ ಒಬ್ಬನು ಆ ಪ್ರಾರ್ಥನಾಮಂದಿರದಲ್ಲಿ ಇದ್ದನು.  ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು; ದೇವರಿಂದ ಬಂದ ಪರಮಪೂಜ್ಯರು ನೀವು,” ಎಂದು ಗಟ್ಟಿಯಾಗಿ ಕಿರುಚಿದನು.  ಆದರೆ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ದೆವ್ವಕ್ಕೆ ಆಜ್ಞಾಪಿಸಿದರು. ಆ ದೆವ್ವ ಎಲ್ಲರ ಎದುರಿಗೇ ಅವನನ್ನು ಕೆಡವಿ, ಯಾವ ಕೆಡುಕನ್ನೂ ಮಾಡದೆ ಅವನನ್ನು ಬಿಟ್ಟು ಹೋಯಿತು.  ಜನರೆಲ್ಲರೂ ಆಶ್ಚರ್ಯಚಕಿತರಾದರು. “ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆಮಾಡುತ್ತಾನೆ; ಅವು ಕೂಡ ಈತ ಹೇಳಿದ ಹಾಗೆ ಕೇಳುತ್ತವಲ್ಲಾ!” ಎಂದು ತಮ್ಮತಮ್ಮೊಳಗೇ ಮಾತನಾಡಿಕೊಂಡರು. ಯೇಸುವಿನ ಸಮಾಚಾರ ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿ ಹರಡಿತು.

29.08.22 - ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆ ತಂದುಕೊಟ್ಟನು.

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ 1:17-19

ಸರ್ವೇಶ್ವರಸ್ವಾಮಿ ನನಗೆ ಹೀಗೆಂದರು: ನೀನು ಎದ್ದು ನಡುಕಟ್ಟಿಕೊ, ನಾನು ಆಜ್ಞಾಪಿಸುವುದನ್ನೆಲ್ಲ ಅವರಿಗೆ ತಿಳಿಸು, ಅವರಿಗೆ ಹೆದರಬೇಡ; ಹೆದರಿದರೆ ನಾನೂ ನಿನ್ನನ್ನು ಅವರ ಮುಂದೆ ಹೆದರಿಸುವೆನು.  ನಾನು ಹೇಳುವುದನ್ನು ಗಮನದಿಂದ ಕೇಳು - ಈ ದಿನ ನಿನ್ನನ್ನು ಜುದೇಯದ ಅರಸರು, ಅಧಿಪತಿಗಳು, ಯಾಜಕರು, ಜನಸಾಮಾನ್ಯರು, ಹೀಗೆ ನಾಡಿನವರೆಲ್ಲರನ್ನು ಎದುರಿಸತಕ್ಕವನನ್ನಾಗಿ ಮಾಡಿದ್ದೇನೆ; ಕೋಟೆಕೊತ್ತಲಗಳಿಂದ ಸುಸಜ್ಜಿತ ನಗರವನ್ನಾಗಿಯೂ ಕಬ್ಬಿಣದ ಕಂಬವನ್ನಾಗಿಯೂ ತಾಮ್ರದ ಪೌಳಿಗೋಡೆಯನ್ನಾಗಿಯೂ ನಿನ್ನನ್ನು ಸ್ಥಾಪಿಸಿದ್ದೇನೆ.  ನಿನಗೆ ವಿರುದ್ಧವಾಗಿ ಅವರು ಯುದ್ಧಮಾಡುವರು; ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ನುಡಿ".

ಕೀರ್ತನೆ: 71:1-2, 3-4, 5-6, 15, 17

ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು

ಶುಭಸಂದೇಶ: ಮಾರ್ಕ  6:17-29


ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತ ಯೊವಾನ್ನನನ್ನು ಸೆರೆಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು.  ಈ ಕಾರಣ ಯೊವಾನ್ನನು, “ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಪದೇಪದೇ ಅವನನ್ನು ಎಚ್ಚರಿಸುತ್ತಿದ್ದನು.  ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ.  ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವೂ ಆತನಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನು ಕಿವಿಗೊಟ್ಟು ಕೇಳುತ್ತಿದ್ದನು. ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು.  ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣ ಶಾಲೆಗೆ ಬಂದು ನರ್ತನಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು.  ಆಗ ಅರಸ ಹೆರೋದನು ಅವಳಿಗೆ, “ನಿನಗೆ ಏನುಬೇಕಾದರೂ ಕೇಳು, ಕೊಡುತ್ತೇನೆ” ಎಂದನು. “ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು.  ಅವಳು ತನ್ನ ತಾಯಿಯ ಬಳಿಗೆ ಹೋಗಿ, “ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?” ಎಂದು ವಿಚಾರಿಸಿದಳು. “ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು,” ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು.  ಕೂಡಲೆ ಅವಳು ಅರಸನ ಬಳಿಗೆ ಧಾವಿಸಿ, “ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ,” ಎಂದು ಕೇಳಿಕೊಂಡಳು. ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ.  ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆಮಾಡಿ ಕಳುಹಿಸಿದನು.  ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆ ತಂದುಕೊಟ್ಟನು. ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಮಾಡಿದರು.


28.08.22 - "ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ"

ಮೊದಲನೇ ವಾಚನ: ಸಿರಾಖ 3:17-18, 20, 28-29


ಮಗನೇ, ಕರ್ತವ್ಯ ನಿರ್ವಹಣೆಯಲ್ಲಿ ವಿನಯದಿಂದ ವರ್ತಿಸುವೆಯಾದರೆ, ದೇವರ ಯ್ಯೋಗ್ಯರಾದವರ ಪ್ರೀತಿಗೆ ನೀನೂ ಪಾತ್ರನಾಗುವೆ. ನೀನು ದೊಡ್ಡವನಾಗೀರುವಷ್ಟು ನಿನ್ನನ್ನೇ ತಗ್ಗಿಸಿಕೊಂಡೆಯಾದರೆ ದೇವರ ಸನ್ನಿಧಿಯಲ್ಲಿ ನಿಮಗೆ ಗಿಟ್ಟುವುದು ಕರುಣೆ, ಅಪೂರ್ವವಾದುದು ದೇವರ ಬಲ ದೀನರಿಂದ ಆತನಿಗೆ ಸಲ್ಲುವುದು ಘನಮಾನ. ಖಂಡನೆಯಿಂದ ಗುಣವಾಗದು ಗರ್ವಿಗೆ ದುಷ್ಟತನದ ಬಳ್ಳಿ ಬೇರೂರಿದೆ ಅವನಲ್ಲೇ,  ವಿವೇಕ ಮನಸ್ಸುಳ್ಳವರು ಪಾಠ ಕಲಿಯುವರು ಸಾಮತಿಗಳಂದ ಲಕ್ಷವಿಟ್ಟು ಕೇಳುವನು ಜ್ಞಾನಿ ಹೆಬ್ಬಯಕೆಯಿಂದ.

ಕೀರ್ತನೆ: 68:4-5, 6-7, 10-11

ಶ್ಲೋಕ: ದೇವಾ ಆಸ್ಥೆಯಿಂದೊದಗಿಸಿದೆ ದೀನದಲಿತರಿಗೆ

ಎರಡನೇ ವಾಚನ: ಹಿಬ್ರಿಯರಿಗೆ 12:18-19, 22-24

ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು. ಕಹಳೆಗಳು ಮೊಳಗುತ್ತಿದ್ದವು. ಆಗ ಧ್ವನಿಯೊಂದು ಕೇಳಿಬಂತು. ಅದನ್ನು ಕೇಳಿದವರು, ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು. ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ; ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ;  ಅಸಂಖ್ಯಾತ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ; ಸ್ವರ್ಗದಲ್ಲಿ ದಾಖಲೆಯಾಗಿರುವ ಜ್ಯೇಷ್ಠಪುತ್ರನ ಸಭೆಗೆ; ನೀವು  ಬಂದಿರುವುದು ಸಕಲ ಮಾನವರ ನ್ಯಾಯ ಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ; ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾ ರಕ್ತದ ಬಳಿಗೆ ನೀವು ಬಂದಿದ್ದೀರಿ.

ಶುಭಸಂದೇಶ: ಲೂಕ 14:7-14


ಅಂದು ಸಬ್ಬತ್ ದಿನ. ಯೇಸುಸ್ವಾಮಿ ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದರು. ಎಲ್ಲರ ಕಣ್ಣು ಅವರ ಮೇಲಿತ್ತು. ಅಲ್ಲದೆ, ಅಲ್ಲಿಗೆ ಬಂದಿದ್ದ ಅತಿಥಿಗಳು ಪಂಕ್ತಿಯಲ್ಲಿ ಉತ್ತಮ ಸ್ಥಾನಗಳನ್ನು ಆರಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಯೇಸು ಸಾಮತಿ ರೂಪದಲ್ಲಿ ಹೀಗೆಂದರು: "ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ. ಏಕೆಂದರೆ, ನಿನಗಿಂತ ಗೌರವಸ್ಥನನ್ನು ಆಹ್ವಾನಿಸಿರಬಹುದು. ನಿಮ್ಮಿಬ್ಬರನ್ನು ಕರೆದಾತ ನಿನ್ನ ಹತ್ತಿರ ಬಂದು, "ಇವನಿಗೆ ನಿನ್ನ ಸ್ಥಳವನ್ನು ಬಿಟ್ಟುಕೊಡು," ಎನ್ನಬಹುದು. ಆಗ ನೀನು ನಾಚಿಕೆಪಟ್ಟುಕೊಂಡು ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳಬೇಕಾಗಬಹುದು. ಅದಕ್ಕೆ ಬದಲಾಗಿ ನಿನ್ನನ್ನು ಆಹ್ವಾನಿಸಿದಾಗ ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೋ. ಕರೆದವನು ಬಂದು, "ಗೆಳೆಯಾ, ಮೇಲೆ ಬಾ" ಎಂದು ಹೇಳುವನು. ಆಗ ಜೊತೆಗೆ ಕುಳಿತಿರುವ ಅತಿಥಿಗಳೆಲ್ಲರ ಮುಂದೆ ನಿನಗೆ ಗೌರವ ಸಿಗುವುದು. ಅಂತೆಯೇ, ತನ್ನನ್ನು ತಾನೇ ಮೇಲಕ್ಕೆ ಏರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು; ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು," ಎಂದರು. ಆನಂತರ ತಮ್ಮನ್ನು ಊಟಕ್ಕೆ ಆಮಂತ್ರಿಸಿದವನನ್ನು ನೋಡಿ ಯೇಸುಸ್ವಾಮಿ, "ನೀನು ಊಟ ಆಥವಾ ಔತಣವನ್ನು ಏರ್ಪಡಿಸುವಾಗ ನಿನ್ನ ಸ್ನೇಹಹಿತರನ್ನಾಗಲಿ, ಸೋದರರನ್ನಾಗಲಿ ಕರೆಯಬೇಡ. ಏಕೆಂದರೆ, ಅವರು ನಿನ್ನನ್ನು ಪ್ರತಿಯಾಗಿ ಕರೆದು ಮುಯ್ಯಿ ತೀರಿಸಿಬಿಡಬಹುದು. ಆದ್ದರಿಂದ ಔತಣವನ್ನು ಏರ್ಪಡಿಸುವಾಗ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆ; ಆಗ ನೀನು ಧನ್ಯನಾಗುವೆ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ಸತ್ಪುರುಷರು ಪುನರುತ್ದಾನ ಹೊಂದುವಾಗ ದೇವರೇ ನಿನಗೆ ಸಲ್ಲಬೇಕಾದುದನ್ನು ಸಲ್ಲಿಸುವರು," ಎಂದರು.

27.08.22

ಮೊದಲನೇ ವಾಚನ: 1 ಕೊರಿಂಥಿಯರಿಗೆ 1:26-31

ಸಹೋದರರೇ, ನಿಮ್ಮನ್ನು ದೇವರು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿ. ಲೋಕದ ಎಣಿಕೆಯಲ್ಲಿ ನಿಮ್ಮೊಳಗೆ ಜ್ಞಾನಿಗಳು ಅನೇಕರಿಲ್ಲ, ಪರಾಕ್ರಮಿಗಳು ಅನೇಕರಿಲ್ಲ, ಕುಲೀನರು ಅನೇಕರಿಲ್ಲ, ಜ್ಞಾನಿಗಳನ್ನು ನಾಚಿಕೆಗೀಡು ಮಾಡಲು ದೇವರು ಲೋಕದ ದೃಷ್ಟಿಯಲ್ಲಿ ಮೂರ್ಖರನ್ನು ಆರಿಸಿಕೊಂಡರು; ಅಂತೆಯೇ ಬಲಿಷ್ಠರನ್ನು ಲಜ್ಜೆಗೀಡುಮಾಡಲು ಲೋಕದ ದೃಷ್ಟಿಯಲ್ಲಿ ಬಲಹೀನರನ್ನು ಆರಿಸಿಕೊಂಡರು. ಲೋಕದ ದೃಷ್ಟಿಯಲ್ಲಿ ಗಣ್ಯವಾದುದನ್ನು ನಿರ್ನಾಮಗೊಳಿಸಲು ಗಣನೆಗೆ ಬಾರದುದನ್ನು, ಕೀಳಾದುದನ್ನು, ಬೀಳಾದುದನ್ನು ಆರಿಸಿಕೊಂಡರು. ಯಾವ ಮಾನವನೂ ತಮ್ಮ ಸಮ್ಮುಖದಲ್ಲಿ ಅಹಂಕಾರಪಡದಂತೆ ದೇವರು ಹೀಗೆ ಮಾಡಿದರು. ಅವರ ಕೃಪೆಯಿಂದಲೇ ನೀವು ಕ್ರಿಸ್ತಯೇಸುವಿನಲ್ಲಿ ಬಾಳುತ್ತಾ ಇದ್ದೀರಿ; ಅವರ ಕೃಪೆಯಿಂದಲೇ ಕ್ರಿಸ್ತಯೇಸು ನಮಗೆ ಜ್ಞಾನಮೂಲವಾಗಿದ್ದಾರೆ. ದೇವರಿಂದ ನಮಗೆ ದೊರಕುವ ಸತ್ಸಂಬಂದ,  ಪಾವನತೆ ಹಾಗು ವಿಮೋಚನೆ ಆ ಕ್ರಿಸ್ತಯೇಸುವಿನಿಂದಲೇ. ಆದ್ದರಿಂದ ಪವಿತ್ರಗ್ರಂಥದಲ್ಲಿ ಹೇಳಿರುವಂತೆ: "ಹೆಚ್ಚಳಪಡುವವನು ಪ್ರಭುವಿನಲ್ಲಿ ಹೆಚ್ಚಳಪಡಲಿ."

ಕೀರ್ತನೆ: 33:12-13, 18-19, 20-21
 ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ

ಶುಭಸಂದೇಶ: ಮತ್ತಾಯ 25:14-30

 "ಅದೂ ಅಲ್ಲದೆ ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಇಂತಿರುವುದು: ಒಬ್ಬಾತ ಪ್ರವಾಸ ಹೊರಡಲಿದ್ದ, ತನ್ನ ಸೇವಕರನ್ನು ಕರೆದು ಅವರ ವಶಕ್ಕೆ ತನ್ನ ಆಸ್ತಿಯನ್ನ ಒಪ್ಪಿಸಿದ. ಒಬ್ಬನಿಗೆ ಐದು ತಲೆಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು -- ಹೀಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ವಹಿಸಿಕೊಟ್ಟು ಹೊರಟುಹೋದ. ಐದು ತಲೆಂತು ಪಡೆದ ಸೇವಕ ಒಡನೇ ಹೋಗಿ ಆ ಮೊತ್ತದಿಂದ ವ್ಯಾಪಾರಮಾಡಿ ಇನ್ನೂ ಐದನ್ನು ಸಂಪಾದಿಸಿದ. ಎರಡು ಪಡೆದವನೂ ಹಾಗೆಯೇ ಮಾಡಿ ಇನ್ನೂ ಎರಡನ್ನು ಸಂಪಾದಿಸಿದ. ಒಂದು ತಲೆಂತು ಪಡೆದವನು ಮಾತ್ರ, ಅದನ್ನು ತೆಗೆದುಕೊಂಡು ಹೋಗಿ ಭೂಮಿ ಅಗೆದು, ಅದರಲ್ಲಿ ತನ್ನ ಧಣಿಯ ಆ ಹಣವನ್ನು ಹೂತಿಟ್ಟ. ಬಹಳ ಕಾಲವಾದ ಬಳಿಕ ಆ ಧಣಿ ಹಿಂದಿರುಗಿ ಬಂದ. ಸೇವಕರಿಂದ ಲೆಕ್ಕಚಾರ ಕೇಳಿದ. ಐದು ತಲೆಂತು ಪಡೆದವನು ಇನ್ನೂ ಐದು ತಲೆಂತುಗಳನ್ನು ಮುಂದೆ ತಂದು, "ಒಡೆಯಾ, ನೀವು ನನ್ನ ವಶಕ್ಕೆ ಐದು ತಲೆಂತು ಒಪ್ಪಿಸಿದಿರಿ. ಇಗೋ ನೋಡಿ, ಮತ್ತೆ ಐದು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ಅ ಧಣಿ, 'ಭಲಾ, ನೆಚ್ಚಿನ ಸೇವಕ, ನೀನು ಪ್ರಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು," ಎಂದ ಎರಡು ತಲೆಂತು ಪಡೆದವನು ಮುಂದೆ ಬಂದು, "ಒಡೆಯಾ, ನೀವು ನನ್ನ ವಶಕ್ಕೆ ಎರಡು ತಲೆಂತುಗಳನ್ನು  ಒಪ್ಪಿಸಿದಿರಿ. ಇಗೋ ನೋಡಿ, ಇನ್ನೂ ಎರಡು ತಲೆಂತುಗಳನ್ನು ಸಂಪಾದಿಸಿದ್ದೇನೆ," ಎಂದ. ಧಣಿ ಅವನಿಗೂ, 'ಭಲಾ,  ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೂ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ನೀನೂ ಭಾಗಿಯಾಗು," ಎಂದ. ತರುವಾಯ ಒಂದು ತಲೆಂತು ಪಡೆದವನೂ ಮುಂದೆ ಬಂದು: "ಒಡೆಯಾ, ನಿಮ್ಮ ಮನಸ್ಸು ಕಠಿಣ ಎಂಬುದನ್ನು ನಾನು ಬಲ್ಲೆ, ನೀವು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವರು; ನೀವು ತೂರದ ಎಡೆಯಲ್ಲಿ ರಾಶಿಮಾಡುವವರು; ಆದುದ್ದರಿಂದ ನಾನು ಭಯಪಟ್ಟೆ; ಹೋಗಿ ನಿಮ್ಮ ತಲೆಂತನ್ನು ಭೂಮಿಯಲ್ಲಿ ಹೂತಿಟ್ಟೆ, ಇಗೋ, ಸ್ವೀಕರಿಸಿ, ನಿಮ್ಮದು ನಿಮಗೆ ಸೇರಿದೆ,' ಎಂದ.  "ಆಗ ಧಣಿ ಅವನಿಗೆ, 'ಎಲವೋ ಮೈಗಳ್ಳನಾದ ದುಷ್ಟ ಸೇವಕ, ನಾನು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವನು; ನಾನು ತೂರದ ಎಡೆಯಲ್ಲಿ ರಾಶಿ ಮಾಡುವವನು ಎಂದು ನಿನಗೆ ಗೊತ್ತಿತ್ತಲ್ಲವೆ? ಹಾಗಾದರೆ  ನನ್ನ ಹಣವನ್ನು ನೀನು ಬಡ್ಡಿ ಅಂಗಡಿಯಲ್ಲಿ ಹಾಕಿಡಬೇಕಿತ್ತು; ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ಪಡೆಯುತ್ತಿದ್ದೆ', ಎಂದ. ಆನಂತರ ಪರಿಚಾರಕರಿಗೆ, 'ಇವನಿಂದ ಆ ತಲೆಂತು ನಾಣ್ಯವನ್ನು ಕಿತ್ತು ಹತ್ತು ತಲೆಂತು ಇರುವವನಿಗೆ ಕೊಡಿ. ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ. ಅಪ್ರಯೋಜಕನಾದ ಈ ಸೇವಕನನ್ನು ಹೊರಗಿನ ಕಗ್ಗತ್ತಲೆಗೆ ದಬ್ಬಿರಿ. ಅಲ್ಲಿ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು.' ಎಂದು ಹೇಳಿದ.

26.08.22 - "ಆದ್ದರಿಂದ ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು."

ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25

ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ್ಚಾತುರ್ಯದಿಂದಲ್ಲ. ಹಾಗೆ ಸಾರಿದ್ದೇ ಆದರೆ, ಕ್ರಿಸ್ತಯೇಸುವಿನ ಶಿಲುಬೆಯೇ ನಿರರ್ಥಕವಾದೀತು. ವಿನಾಶಮಾರ್ಗದಲ್ಲಿರುವವರಿಗೆ ಶಿಲುಬೆಯ ಸಂದೇಶ ಹುಚ್ಚು ಸಂಗತಿಯಾಗಿದೆ. ಮುಕ್ತಿಮಾರ್ಗದಲ್ಲಿರುವ ನಮಗಾದರೋ ಅದು ದೈವಶಕ್ತಿಯಾಗಿದೆ. “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು ಜಾಣರ ಜಾಣತನಕ್ಕೆ ಭಂಗತರುವೆನು” ಎಂದು ಪವಿತ್ರಗ್ರಂಥದಲ್ಲಿ ಇದೆಯಲ್ಲವೇ? ಹೀಗಿರುವಾಗ ಜ್ಞಾನಿಯೆಲ್ಲಿ? ಶಾಸ್ತ್ರಜ್ಞನೆಲ್ಲಿ? ಜಗತ್ತಿನ ತರ್ಕನಿಪುಣನೆಲ್ಲಿ? ಪ್ರಪಂಚದ ಜ್ಞಾನವನ್ನು ದೇವರು ಹುಚ್ಚುತನವಾಗಿಸಿಲ್ಲವೇ? ಲೋಕವು ತನ್ನ ಸ್ವಂತ ಜ್ಞಾನದಿಂದ ದೇವರನ್ನು ಅರಿಯಲಾರದೆ ಹೋಯಿತು. ಇದು ದೈವಸಂಕಲ್ಪವೇ ಸರಿ. ಆದ್ದರಿಂದಲೇ ನಾವು ಸಾರುವ ‘ಹುಚ್ಚುತನ’ವೆಂಬ ಸಂದೇಶದ ಮೂಲಕ ವಿಶ್ವಾಸವುಳ್ಳವರನ್ನು ಉದ್ಧರಿಸುವುದು ದೇವರಿಗೆ ಉಚಿತವೆನಿಸಿತು ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರು ಜ್ಞಾನವನ್ನು ಅರಸುತ್ತಾರೆ.  ನಾವಾದರೋ ಶಿಲುಬೆಗೇರಿಸಲಾದ ಕ್ರಿಸ್ತಯೇಸುವನ್ನು ಪ್ರಚುರಪಡಿಸುತ್ತೇವೆ. ಯೆಹೂದ್ಯರಿಗೆ ಇದು ಅಸಹ್ಯವಾಗಿದೆ; ಅನ್ಯಜನರಿಗೆ ಹಾಸ್ಯಾಸ್ಪದವಾಗಿದೆ.  ಆದರೆ ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ದೇವರಿಂದ ಕರೆಹೊಂದಿದ್ದರೆ ಅಂಥವರಿಗೆ ಯೇಸುಕ್ರಿಸ್ತರು ದೇವರ ಶಕ್ತಿಯಾಗಿದ್ದಾರೆ ಹಾಗೂ ದೇವರ ಜ್ಞಾನವಾಗಿದ್ದಾರೆ.  ‘ದೇವರ ಹುಚ್ಚುತನ’ ಎಂಬುದು ಮಾನವ ಜ್ಞಾನಕ್ಕಿಂತಲೂ ಶ್ರೇಷ್ಠವಾದುದು. ‘ದೇವರ ದೌರ್ಬಲ್ಯ’ ಎಂಬುದು ಮಾನವ ಶಕ್ತಿಗಿಂತಲೂ ಪ್ರಬಲವಾದುದು.

ಕೀರ್ತನೆ: 33:1-2, 4-5, 10, 11

ಶ್ಲೋಕ: ಅಚಲ ಪ್ರೀತಿಯಿಂದ ಪ್ರಭು ಜಗವನು ತುಂಬಿಹನು

ಶುಭಸಂದೇಶ: ಮತ್ತಾಯ 25:1-13


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಹೇಗಿರುವುದು ಎನ್ನುವುದಕ್ಕೆ ಈ ಸಾಮತಿಯನ್ನು ಕೊಡಬಹುದು: ಹತ್ತುಮಂದಿ ಕನ್ಯೆಯರು ದೀಪಾರತಿ ಹಿಡಿದು ಮದುವಣಿಗನನ್ನು ಎದುರುಗೊಳ್ಳಲು ಹೋದರು. ಅವರಲ್ಲಿ ಐವರು ವಿವೇಕಿಗಳು, ಐವರು ಅವಿವೇಕಿಗಳು. ಅವಿವೇಕಿಗಳು ದೀಪಗಳನ್ನು ತೆಗೆದುಕೊಂಡರೇ ಹೊರತು ಜೊತೆಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. ವಿವೇಕಿಗಳಾದರೋ ದೀಪಗಳ ಜೊತೆಗೆ ಬುಡ್ಡಿಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು. ಮದುವಣಿಗ ಬರುವುದು ತಡವಾಯಿತು. ಅವರೆಲ್ಲರೂ ತೂಕಡಿಸುತ್ತಾ ಹಾಗೇ ನಿದ್ರೆಹೋದರು. “ನಡುರಾತ್ರಿಯ ವೇಳೆ. ‘ಇಗೋ, ಮದುವಣಿಗ ಬರುತ್ತಿದ್ದಾನೆ; ಬನ್ನಿ, ಆತನನ್ನು ಎದುರುಗೊಳ್ಳಿ,’ ಎಂಬ ಕೂಗು ಕೇಳಿಸಿತು. ಕನ್ಯೆಯರೆಲ್ಲರೂ ಎದ್ದರು. ತಮ್ಮತಮ್ಮ ದೀಪದ ಬತ್ತಿಯನ್ನು ಸರಿಮಾಡಿದರು. ಅವಿವೇಕಿಗಳು, ‘ನಮ್ಮ ದೀಪಗಳು ಆರಿಹೋಗುತ್ತಾ ಇವೆ; ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿ,’ ಎಂದು ವಿವೇಕಿಗಳನ್ನು ಕೇಳಿಕೊಂಡರು. ಅದಕ್ಕೆ ಅವರು, ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆಹೋದೀತು, ನೀವು ಅಂಗಡಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು,’ ಎಂದರು.  ಅಂತೆಯೇ ಅವರು ಎಣ್ಣೆಯನ್ನು ಕೊಂಡುಕೊಳ್ಳಲು ಹೋದಾಗ ಮದುವಣಿಗನು ಬಂದೇಬಿಟ್ಟನು. ಸಿದ್ಧರಾಗಿದ್ದವರು ಅವನ ಸಂಗಡ ವಿವಾಹ ಮಹೋತ್ಸವಕ್ಕೆ ಹೋದರು. ಕಲ್ಯಾಣಮಂಟಪದ ಬಾಗಿಲುಗಳನ್ನು ಮುಚ್ಚಲಾಯಿತು.  ಉಳಿದ ಕನ್ಯೆಯರು ಅನಂತರ ಬಂದರು. ‘ಸ್ವಾಮೀ, ಸ್ವಾಮೀ, ನಮಗೆ ಬಾಗಿಲು ತೆರೆಯಿರಿ,’ ಎಂದು ಕೂಗಿಕೊಂಡರು.  ಅದಕ್ಕೆ ಉತ್ತರವಾಗಿ ಆ ಮದುವಣಿಗ, ‘ಅದಾಗದು, ನೀವು ಯಾರೋ ನನಗೆ ಗೊತ್ತಿಲ್ಲ,’ ಎಂದುಬಿಟ್ಟ.  ಆದ್ದರಿಂದ ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು."

25.08.22 - "ಕುಡುಕರ ಸಂಗಡ ತಿಂದು ಕುಡಿಯಲಾರಂಭಿಸಿದರೆ, ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ, ಯಜಮಾನನು ಬರುವನು. "

ಮೊದಲನೇ ವಾಚನ: 1 ಕೊರಿಂಥಿಯರಿಗೆ 1:1-9

ಕ್ರಿಸ್ತಯೇಸುವಿನಲ್ಲಿ ಪುನೀತರಾಗಿ ದೇವಜನರಾಗಲು ಕರೆಹೊಂದಿರುವ ಕೊರಿಂಥದ ಶ್ರೀಸಭೆಯವರಿಗೂ ಹಾಗೂ ಪ್ರಭು ಯೇಸುಕ್ರಿಸ್ತರನ್ನು ಎಲ್ಲೆಡೆಯೂ ನಾಮಸ್ಮರಣೆ ಮಾಡುವ ಸರ್ವಜನರಿಗೂ - ದೇವರಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾಗಲು ಕರೆಹೊಂದಿದ ಪೌಲನಾದ ನಾನು ಸಹೋದರ ಸೊಸ್ಥೆನನೊಂದಿಗೆ ಸೇರಿ ಬರೆಯುವ ಪತ್ರ. ಯೇಸುಕ್ರಿಸ್ತರು ನಮಗೂ ಸಮಸ್ತ ದೇವಜನರಿಗೂ ಪ್ರಭುವಾಗಿದ್ದಾರೆ. ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಅನುಗ್ರಹ ಮತ್ತು ಶಾಂತಿಸಮಾಧಾನ ಲಭಿಸಲಿ! ಕ್ರಿಸ್ತಯೇಸುವಿನಲ್ಲಿ ನಿಮಗೆ ಕೊಡಲಾಗಿರುವ ದೇವಾನುಗ್ರಹದ ಸಲುವಾಗಿ ನಾನು ನಿಮಗೋಸ್ಕರ ನನ್ನ ದೇವರಿಗೆ ಸತತವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಏಕೆಂದರೆ, ಕ್ರಿಸ್ತಯೇಸುವಿನಲ್ಲಿ ನೀವು ಎಲ್ಲ ದೃಷ್ಟಿಯಿಂದಲೂ ಶ್ರೀಮಂತರು, ಜ್ಞಾನಸಂಪನ್ನರು ಮತ್ತು ವಾಕ್ಚತುರರು ಆಗಿದ್ದೀರಿ. 6ಇದಲ್ಲದೆ, ಕ್ರಿಸ್ತಯೇಸುವನ್ನು ಕುರಿತ ಸಾಕ್ಷ್ಯವು ನಿಮ್ಮಲ್ಲಿ ನೆಲೆಗೊಂಡಿದೆ. ಇದರಿಂದಾಗಿ ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷವಾಗುವುದನ್ನೇ ಎದುರುನೋಡುತ್ತಿರುವ ನಿಮಗೆ ಯಾವ ಕೃಪಾಶೀರ್ವಾದಗಳ ಕೊರತೆಯು ಇಲ್ಲ. ನಮ್ಮ ಪ್ರಭು ಯೇಸುಕ್ರಿಸ್ತರ ದಿನದಂದು ನೀವು ನಿರ್ದೋಷಿಗಳಾಗಿರುವಂತೆ ಆ ದೇವರೇ, ನಿಮ್ಮನ್ನು ಕಡೆಯವರೆಗೂ ಸ್ಥಿರವಾಗಿ ಕಾಪಾಡುವರು. ತಮ್ಮ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ ಅನ್ಯೋನ್ಯತೆಗೆ ನಿಮ್ಮನ್ನು ಕರೆದಿರುವ ದೇವರು ನಿಜಕ್ಕೂ ವಿಶ್ವಾಸಪಾತ್ರರು.

ಕೀರ್ತನೆ: 145:2-3, 4-5, 6-7

ಶ್ಲೋಕ: ದೇವಾ, ಮಾಡುವೆ ನಿನ್ನ ನಾಮಕ್ಕೆ ನಮನ ಯುಗಯುಗಾಂತರಕೂ

ಶುಭಸಂದೇಶ: ಮತ್ತಾಯ 24:42-51 


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಎಚ್ಚರಿಕೆಯಿಂದಿರಿ, ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು, ಆದ್ದರಿಂದ ಎಚ್ಚರವಾಗಿರಿ.  ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಲು ಬಿಡನು, ಅಲ್ಲವೆ?  ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು. “ಪ್ರಾಮಾಣಿಕನೂ ವಿವೇಕಿಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿ ಆಳುಗಳಿಗೆ ದವಸಧಾನ್ಯಗಳನ್ನು ಅಳೆದುಕೊಟ್ಟು ತನ್ನ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಕಗೊಂಡವನು. ಯಜಮಾನನು ಮನೆಗೆ ಹಿಂದಿರುಗಿಬಂದಾಗ ಆ ಮೇಸ್ತ್ರಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.  ಅಂಥವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುತ್ತಾನೆಂಬುದು ನಿಶ್ಚಯ.  ಆದರೆ ಆ ಮೇಸ್ತ್ರಿ ದುಷ್ಟನಾಗಿದ್ದು ‘ನನ್ನ ಯಜಮಾನ ತಡಮಾಡುವನು’ ಎಂದು ನೆನಸಿಕೊಂಡು,  ತನ್ನ ಜೊತೆಯ ಸೇವಕರನ್ನು ಹೊಡೆಯತೊಡಗಿದರೆ, ಕುಡುಕರ ಸಂಗಡ ತಿಂದು ಕುಡಿಯಲಾರಂಭಿಸಿದರೆ,  ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ, ಯಜಮಾನನು ಬರುವನು.  ಅವನನ್ನು ಚಿತ್ರಹಿಂಸೆಗೂ ಕಪಟಿಗಳ ದುರ್ಗತಿಗೂ ಗುರಿಮಾಡುವನು. ಅಲ್ಲಿರುವವರೊಡನೆ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು."

16.10.2026 - IIಶುಕ್ರವಾರ IIನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ

  ಮೊದಲನೆಯ ವಾಚನ: ರೋಮನರಿಗೆ 4:1-8 ಸಹೋದರರೇ, ವಂಶಾನುಕ್ರಮವಾಗಿ ನಮ್ಮ ಮೂಲಪಿತನಾದ ಅಬ್ರಹಾಮನ ಅನುಭವವನ್ನು ಕುರಿತು ಏನು ಹೇಳೋಣ? ಆತನು ತನ್ನ ಸತ್ಕಾರ್ಯಗಳಿಂದ ದೇವರೊಡನೆ...