ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.11.2019 - "ಅಪ್ರಾಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಸಿಸಿದ"

ಮೊದಲನೇ ವಾಚನ: ರೋಮನರಿಗೆ 15:14-21

ಸಹೋದರರೇ, ನೀವು ಗುಣಸಂಪನ್ನರೂ ಒಬ್ಬರಿಗೊಬ್ಬರು ಬುದ್ಧಿ ಹೇಳಿಕೊಳ್ಳಲು ಸಮರ್ಥರೂ ಆಗಿದ್ದೀರಿ ಎಂದು ನಾನು ಚೆನ್ನಾಗಿ ಬಲ್ಲೆ. ಆದರೂ ಕೆಲವು ವಿಷಯಗಳತ್ತ ನಿಮ್ಮ ಗಮನ ಸೆಳೆಯುವ ಉದ್ದೇಶದಿಂದ ಅಲ್ಲಲ್ಲಿ ಹೆಚ್ಚಿನ ಧೈರ್ಯವಹಿಸಿ ಬರೆದಿದ್ದೇನೆ. ದೇವರು ನನಗೆ ದಯಪಾಲಿಸಿರುವ ವಿಶೇಷ ವರದಾನದಿಂದಾಗಿ ಈ ಪ್ರಕಾರ ಬರೆದಿದ್ದೇನೆ ಈ ವರದಿಂದಲೇ ಯೆಹೂದ್ಯರಲ್ಲದ ಜನರಿಗೆ ನಾನು ಕ್ರಿಸ್ತ ಯೇಸುವಿನ ದಾಸನಾದೆ. ಯೆಹೂದ್ಯರಲ್ಲದವರು ಪವಿತ್ರಾತ್ಮರ ಮೂಲಕ ಪರಿಶುದ್ಧರಾಗಿ, ದೇವರಿಗೆ ಸಮರ್ಪಕ ಕಾಣಿಕೆಯಾಗುವಂತೆ ದೇವರ ಶುಭಸಂದೇಶವನ್ನು ಸಾರುವುದೇ ನನ್ನ ಪೂಜ್ಯಸೇವೆ, ಅದುವೇ ನನ್ನ ಯಾಜಕ ಸೇವೆ. ದೇವರಿಗಾಗಿ ಸಲ್ಲಿಸುವ ಈ ಸೇವೆಯನ್ನು ಕುರಿತು ನಾನು ಕ್ರಿಸ್ತಯೇಸುವಿನಲ್ಲಿ ಹೆಮ್ಮೆಪಡಲು ಕಾರಣ ಉಂಟು. ಕ್ರಿಸ್ತ ಯೇಸು ನನ್ನ ಮುಖಾಂತರ ಅಂದರೆ, ನನ್ನ  ಬೋಧನೆ ಹಾಗು ಸಾಧನೆಗಳ ಮೂಲಕ, ಸೂಚಕ ಹಾಗೂ ಅದ್ಬುತ ಕಾರ್ಯಗಳ ಮೂಲಕ ಮತ್ತು ಪವಿತ್ರಾತ್ಮರ ಶಕ್ತಿಯ ಮೂಲಕ ಯೆಹೂದ್ಯರಲ್ಲದವರನ್ನೂ ತಮ್ಮ ಶರಣರನ್ನಾಗಿಸಿಕೊಂಡಿದ್ದಾರೆ. ಇದೊಂದನ್ನು ಬಿಟ್ಟು ಬೇರೆ ಯಾವುದನ್ನು ಕುರಿತು ಹೊಗಳಿಕೊಳ್ಳಲು ನಾನು ಧೈರ್ಯಗೊಳ್ಳುವುದಿಲ್ಲ ಜೆರುಸಲೇಮಿನಿಂದ ಪ್ರಾರಂಭಿಸಿ ಇಲ್ಲುರಿಕ ಪ್ರಾಂತ್ಯದವರಿಗೂ ಸುತ್ತಮುತ್ತಲಿನಲ್ಲೂ ನಾನು ಸಂಚಾರಮಾಡಿ, ಕ್ರಿಸ್ತ ಯೇಸುವಿನ ಶುಭಸಂದೇಶವನ್ನು ಪೂರ್ತಿಯಾಗಿ ಪ್ರಚಾರಮಾಡಿದ್ದೇನೆ. ಮತ್ತೊಬ್ಬನು ಹಾಕಿದ ಅಸ್ತಿವಾರದ ಮೇಲೆ ನಾನು ಕಟ್ಟುವುದು ಸರಿಯಲ್ಲವೆಂಬುದು ನನ್ನ ಅಭಿಪ್ರಾಯ. ಆದಕಾರಣ ಕ್ರಿಸ್ತ ಯೇಸುವಿನ ನಾಮವು ಪ್ರಚಾರವಾಗದ ಕಡೆ ಹೋಗಿ ಶುಭಸಂದೇಶವನ್ನು ಸಾರಬೇಕೆಂಬುದೇ ನನ್ನ ಆಕಾಂಕ್ಷೆ. "ಯಾರಿಗೆ ಆತನ ಸುದ್ದಿ ಮುಟ್ಟಿಲ್ಲವೋ ಅವರು ಆತನನ್ನು ನೋಡುವರು; ಯಾರು ಆತನ ವರ್ತಮಾನ ಕೇಳಿಲ್ಲವೋ ಅವರು ಅತನನ್ನು ಗ್ರಹಿಸಿಕೊಳ್ಳುವರು," ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ನನ್ನ ಕಾರ್ಯವನ್ನು ನಡೆಸಿದ್ದೇನೆ.

ಕೀರ್ತನೆ: 98:1, 2-3, 3-4
ಶ್ಲೋಕ: ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು

ಶುಭಸಂದೇಶ: ಲೂಕ 16:1-8

ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ ಇಂತೆಂದರು: "ಒಬ್ಬನು ಧನಿಕನಿದ್ದ, ಅವನ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯಿದ್ದ. ಇವನು ಧನಿಕನ ಆಸ್ತಿಯನ್ನು ಹಾಳುಮಾಡುತ್ತಿದ್ದಾನೆಂದು ದೂರು ಬಂದಿತು. ಧನಿಕನು ಅವನನ್ನು ಕರೆದು, "ಏನಿದು, ನಿನ್ನ ವಿಷಯವಾಗಿ ನಾನು ಹೀಗೆಲ್ಲ ಕೇಳುತ್ತಾ ಇದ್ದೇನೆ? ನಿನ್ನ ಕೆಲಸದ ಲೆಕ್ಕಾಚಾರವನ್ನು ಒಪ್ಪಿಸಿಬಿಡು. ಇನ್ನು ನೀನು ಮೇಸ್ತ್ರಿ ಆಗಿರಲು ಆಗದು," ಎಂದ. ಆಗ ಮೇಸ್ತ್ರಿ, "ಈಗ ಏನು ಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದು ಬಿಡುತ್ತಾನಲ್ಲಾ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ," ಎಂದು ಚಿಂತಾಕ್ರಾಂತನಾದ, ಮರುಕ್ಷಣ, "ಸರಿ, ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ ಜನರು ನನ್ನನ್ನು ತಮ್ಮ ಮನೆಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ಈಗ ಗೊತ್ತಾಯಿತು," ಎಂದುಕೊಂಡ. ಯಜಮಾನನ ಸಾಲಗಾರರನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಂಡ. "ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲ ಎಷ್ಟು?" ಎಂದು ಮೊದಲನೆಯವನನ್ನು ಕೇಳಿದ. ಅವನು, "ನೂರು ಬುದ್ದಲಿ ಎಣ್ಣೆ," ಎಂದ. ಅದಕ್ಕೆ ಮೇಸ್ತ್ರಿ, "ಇಗೋ, ನಿನ್ನ ಪತ್ರ, ಕುಳಿತುಕೊಂಡು "ಐವತ್ತು" ಎಂದು ಬೇಗನೆ ಬರೆ," ಎಂದ. ಬಳಿಕ ಇನ್ನೊಬ್ಬನನ್ನು ಕರೆದು, "ನೀನೆಷ್ಟು ಸಾಲ ತೀರಿಸಬೇಕು?" ಎಂದು ಕೇಳಿದ. ಅವನು "ನೂರು ಖಂಡುಗ ಗೋದಿ" ಎಂದಾಗ "ಇಗೋ ನಿನ್ನ ಪತ್ರ, "ಎಂಬತ್ತು"ಎಂದು ಬರೆ", ಎಂದ. ಈ ಅಪ್ರಾಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಸಿಸಿದ. ಏಕೆಂದರೆ, ತಮ್ಮ ತಮ್ಮ ವ್ಯವಹಾರಗಳಲ್ಲಿ ಲೌಕಿಕ ಜನರು ಬೆಳಕಿನ ರಾಜ್ಯದ ಜನರಿಗಿಂತ ಜಾಣರು.

07.11.2019 - "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ"

ಮೊದಲನೇ ವಾಚನ: ರೋಮನರಿಗೆ 14:7-12

ಸಹೋದರರೇ, ನಮ್ಮಲ್ಲಿ ಯಾರೂ ತನಗಾಗಿಯೇ ಬದುಕುವುದಿಲ್ಲ; ತನಗಾಗಿಯೇ ಸಾಯುವುದಿಲ್ಲ. ನಾವು ಬದುಕಿದರೂ ಪ್ರಭುವಿಗಾಗಿಯೇ; ಸತ್ತರೂ ಅವರಿಗಾಗಿಯೇ. ನಾವು ಬದುಕಿದರೂ ಸತ್ತರೂ ಪ್ರಭುವಿಗೆ ಸೇರಿದವರು, ಏಕೆಂದರೆ, ಸತ್ತವರಿಗೂ ಬದುಕುವವರಿಗೂ ಪ್ರಭುವಾಗಬೇಕೆಂಬ ಉದ್ದೇಶದಿಂದಲೇ ಕ್ರಿಸ್ತ ಯೇಸು ಸತ್ತು ಜೀವಂತರಾದುದ್ದು. ಹೀಗಿರುವಲ್ಲಿ ಸಸ್ಯಹಾರಿಯೇ, ನೀನು ನಿನ್ನ ಸಹೋದರರನ್ನು ದೋಷಿಯೆಂದು ತೀರ್ಪಿಡುವುದೇಕೆ? ಮಾಂಸಹಾರಿಯೇ, ನಿನ್ನ ಸಹೋದರನನ್ನು ಹೀನೈಸುವುದೇಕೆ? ನಾವೆಲ್ಲರೂ ದೇವರ ನ್ಯಾಯಸ್ಥಾನದ ಮುಂದೆ ನಿಲ್ಲಬೇಕಲ್ಲವೆ? ಪವಿತ್ರ ಗ್ರಂಥದಲ್ಲಿ;  "ಎಲ್ಲರೂ ನನಗೆ ಸಾಷ್ಟಾಂಗವೆರಗುವರು ಎಲ್ಲರೂ ನನ್ನನ್ನು ದೇವರೆಂದು ನಿವೇದಿಸುವರು ಇದಕ್ಕೆ ಜೀವಸ್ವರೂಪನಾದ  ನಾನೇ ಸಾಕ್ಷಿ," ಎಂದು ಸರ್ವೇಶ್ವರಸ್ವಾಮಿ ಹೇಳಿದ್ದಾರೆ. ನಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕವನ್ನು ಒಪ್ಪಿಸಬೇಕು.

ಕೀರ್ತನೆ: 27:1, 4, 13-14
ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೇ

ಶುಭಸಂದೇಶ: ಲೂಕ 15:1-10

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, "ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ," ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆಯೆನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. "ಕಳೆದು ಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾನೆ. ಅಲ್ಲವೆ? ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುವುದರಲ್ಲಿ ಸಂದೇಹವಿಲ್ಲ. ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿ ಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ?ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದು ಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೇ? ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, "ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು‌. ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾಳಲ್ಲವೆ? ಅದೇ ಮೇರೆಗೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ," ಎಂದರು.

06.11.2019 - "ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬಾರದವನು ನನ್ನ ಶಿಷ್ಯನಾಗಲಾರನು"

ಮೊದಲನೇ ವಾಚನ: ರೋಮನರಿಗೆ 13:8-10

ಸಹೋದರರೇ, ಒಬ್ಬರನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ವಿಧವಾದ ಋಣವೂ ನಿಮಗಿರಬಾರದು. ಏಕೆಂದರೆ ಪರರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ಪೂರ್ಣವಾಗಿ ನೆರವೇರಿಸಿದವನು. "ವ್ಯಭಿಚಾರ ಮಾಡಬೇಡ, ಕೊಲಬೇಡ, ಕಳಬೇಡ, ದುರಾಶೆ ಪಡಬೇಡ,"  ಈ ಮುಂತಾದ ಆಜ್ಞೆಗಳೆಲ್ಲವೂ "ನೀನು ನಿನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನೂ ಪ್ರೀತಿಸು," ಎಂಬ ಒಂದೇ ಆಜ್ಞೆಯಲ್ಲಿ ಅಡಗಿದೆ. ಪ್ರೀತಿಯು ಪರರಿಗೆ ಕೇಡು ಬಗೆಯದು. ಆದಕಾರಣ ಪ್ರೀತಿಯೇ ಧರ್ಮಶಾಸ್ತ್ರದ ಪೂರೈಕೆ.

ಕೀರ್ತನೆ: 112:1-2, 4-5, 9
ಶ್ಲೋಕ: ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತನು

ಶುಭಸಂದೇಶ: ಲೂಕ 14:25-33

ಜನರು ಗುಂಪುಗುಂಪಾಗಿ ಯೇಸುಸ್ವಾಮಿಯ ಸಂಗಡ ಹೋಗುತ್ತಿದ್ದರು. ಆಗ ಯೇಸು ಅವರ ಕಡೆಗೆ ತಿರುಗಿ ಹೀಗೆಂದರು: "ನನ್ನಲ್ಲಿಗೆ ಬರುವ ಯಾರೊಬ್ಬನು ತನ್ನ ತಂದೆ - ತಾಯಿ, ಹೆಡತಿ - ಮಕ್ಕಳು, ಸೋದರ - ಸೋದರಿಯರನ್ನು ಮಾತ್ರವಲ್ಲ, ತನ್ನ ಪ್ರಾಣವನ್ನು ಕೂಡ ತ್ಯಜಿಸದ  ಹೊರತು, ನನ್ನ ಶಿಷ್ಯನಾಗಲಾರನು. ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬಾರದವನು ನನ್ನ ಶಿಷ್ಯನಾಗಲಾರನು ನಿಮ್ಮಲ್ಲಿ ಒಬ್ಬನು ಒಂದು ಗೋಪುರವನ್ನು ಕಟ್ಟಲು ಇಚ್ಛಿಸಿದರೆ, ಕೆಲಸವನ್ನು ಮುಗಿಸಲು ತನ್ನಿಂದ ಸಾಧ್ಯವೇ ಎಂದು ನೋಡಲು ಮೊದಲು ಕುಳಿತು, ಬೇಕಾಗುವ ಖರ್ಚುವೆಚ್ಚವನ್ನು ಲೆಕ್ಕ ಹಾಕುವುದಿಲ್ಲವೇ? ಇಲ್ಲದೆ ಹೋದರೆ, ಇವನು ಅಸ್ತಿವಾರ ಹಾಕಿದ ಮೇಲೆ ಕೆಲಸ ಪೂರೈಸದೆ ಇರುವುದನ್ನು ಕಂಡು, "ಕಟ್ಟಲಾರಂಭಿಸಿದ; ಮುಗಿಸಲು ಇವನಿಂದಾಗಲಿಲ್ಲ!" ಎಂದು ನೋಡುವವರೆಲ್ಲರೂ ಅವನನ್ನು ಪರಿಹಾಸ್ಯಮಾಡುವರು. ಹಾಗೆಯೇ, ಅರಸನೊಬ್ಬನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವುದಕ್ಕೆ ಮುಂಚೆ ಇಪ್ಪತ್ತು ಸಾವಿರ ಸೈನ್ಯದೊಡನೆ ಬರುವ ಶತ್ರುವನ್ನು ತನ್ನ ಹತ್ತು ಸಾವಿರ ಸೈನ್ಯದಿಂದ ಎದುರಿಸಲು ಸಾಧ್ಯವೇ ಎಂದು ಮೊದಲು ಕುಳಿತು ಆಲೋಚನೆ ಮಾಡುವುದಿಲ್ಲವೇ? ಸಾಧ್ಯವಿಲ್ಲದಿದ್ದರೆ, ಶತ್ರುರಾಜನು ದೂರದಲ್ಲಿರುವಾಗಲೇ ದೂತರನ್ನು ಕಳುಹಿಸಿ, ಸಂಧಾನಕ್ಕೆ ಶರತ್ತುಗಳೇನೆಂದು ವಿಚಾರಿಸುತ್ತಾನೆ. ಅದೇ ಮೇರೆಗೆ, ನಿಮ್ಮಲ್ಲಿ ಯಾವನು ತನಗಿರುವುದನ್ನೆಲ್ಲಾ ಪರಿತ್ಯಾಗ ಮಾಡುವುದಿಲ್ಲವೋ ಅವನು ನನ್ನ ಶಿಷ್ಯನಾಗಲಾರ".

05.11.2019 - "ಮೊದಲು ಆಹ್ವಾನಿತರಾದವರಲ್ಲಿ ಒಬ್ಬನೂ ನಾನು ಮಾಡಿಸಿದ ಅಡುಗೆಯ ರುಚಿ ನೋಡಬಾರದು!"

ಮೊದಲನೇ ವಾಚನ: ರೋಮನರಿಗೆ 12:5-16

ಸಹೋದರರೇ, ನಾವು ಅನೇಕ ಮಂದಿ ಇದ್ದರೂ ಕ್ರಿಸ್ತ ಯೇಸುವಿನಲ್ಲಿ ನಾವೆಲ್ಲರೂ ಒಂದೇ ದೇಹವಾಗಿದ್ದೇವೆ. ಒಬ್ಬರಿಗೊಬ್ಬರು ದೇಹದ ವಿವಿಧ ಅಂಗಗಳಂತೆ ಹೊಂದಿಕೊಂಡಿದ್ದೇವೆ. ದೇವರು ಅನುಗ್ರಹಿಸುವ ಪ್ರಕಾರ ನಾವು ಬೇರೆ ಬೇರೆ ವರಗಳನ್ನು ಹೊಂದಿದ್ದೇವೆ. ನಾವು ಹೊಂದಿರುವ ವರವು ಪ್ರವಾದನೆಯ ವರವಾಗಿದ್ದರೆ ನಮ್ಮ ವಿಶ್ವಾಸಕ್ಕೆ ಅನುಗುಣವಾಗಿ ಅದನ್ನು ಉಪಯೋಗಿಸಬೇಕು. ಸೇವಕನು ಸೇವೆಯಲ್ಲಿಯೂ ಬೋಧಕನು ಬೋಧಿಸುವುದರಲ್ಲಿಯೂ ಉಪದೇಶಕನು ಉಪದೇಶಿಸುವುದರಲ್ಲಿಯೂ ನಿರತನಾಗಿರಲಿ. ದಾನಮಾಡುವವನು ಧಾರಾಳವಾಗಿ ದಾನ ಮಾಡಲಿ, ಅಧಿಕಾರ ನಡೆಸುವವನು ನಿಷ್ಠೆಯಿಂದ ನಡೆಸಲಿ. ಕರುಣಾಪೂರಿತ ಕಾರ್ಯಗಳನ್ನು ಕೈಗೊಳ್ಳುವವನು ಹರ್ಷಚಿತ್ತನಾಗಿರಲಿ. ನಿಮ್ಮ ಪ್ರೀತಿ ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿರಿ. ಒಳ್ಳೆಯದನ್ನು ಕೈಬಿಡದಿರಿ, ಸೋದರಭಾವನೆಯಿಂದ ಒಬ್ಬರನೊಬ್ಬರು ಹೃತ್ಪೂರ್ವಕವಾಗಿ ಪ್ರೀತಿಸಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. ಪ್ರಭುವಿನ ಸೇವೆಯಲ್ಲಿ ಆಲಸಿಗಳಾಗದೆ ಅತ್ಯಾಸಕ್ತರಾಗಿರಿ. ನಂಬಿಕೆ ನಿರೀಕ್ಷೆಯನ್ನು ಹೊಂದಿರುವ ನೀವು ಉಲ್ಲಾಸದಿಂದಿರಿ. ಸಂಕಟ ಬಂದಾಗ ಸಹನೆಯಿಂದಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. ಕೊರತೆಯಲ್ಲಿರುವ ದೇವಜನರಿಗೆ ನೆರವು ನೀಡಿರಿ. ಅತಿಥಿ ಸತ್ಕಾರದಲ್ಲಿ ತತ್ಪರರಾಗಿರಿ, ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ. ಹೌದು, ಶಪಿಸದೆ ಆಶೀರ್ವದಿಸಿರಿ. ಸಂತೋಷಪಡುವವರೊಂದಿಗೆ ಸಂತೋಷಪಡಿರಿ; ದುಃಖಿಸುವವರೊಡನೆ ದುಃಖಿಸಿರಿ. ನಿಮ್ಮ ನಿಮ್ಮಲ್ಲಿ ಸಾಮರಸ್ಯವಿರಲಿ. ದೊಡ್ಡಸ್ತಿಕೆಯಿಂದ ವರ್ತಿಸಬೇಡಿ. ದೀನದಲಿತರೊಡನೆ ಗೆಳೆತನ ಬೆಳೆಸಿರಿ. ನೀವೇ ಜಾಣರೆಂದು ಭಾವಿಸದಿರಿ.

ಕೀರ್ತನೆ: 131:1, 2, 3
ಶ್ಲೋಕ: ಎಂದೇ ನನ್ನಾತ್ಮ ಸಮಾಧಾನದಿಂದಿದೆ

ಶುಭಸಂದೇಶ: ಲೂಕ 14:15-24

ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಯೇಸುಸ್ವಾಮಿ ಹೇಳಿದ್ದನ್ನು ಕೇಳಿ, "ದೇವರ ಸಾಮ್ರಾಜ್ಯದ ಔತಣದಲ್ಲಿ ಭಾಗಿಯಾಗುವವನು ಎಷ್ಟೋ ಧನ್ಯನು!" ಎಂದನು. ಯೇಸು ಅವನಿಗೆ ಈ ಸಾಮತಿಯನ್ನು ಹೇಳಿದರು: "ಒಬ್ಬಾತ ಒಂದು ದೊಡ್ಡ ಔತಣವನ್ನೇರ್ಪಡಿಸಿ ಅನೇಕ ಜನರಿಗೆ ಆಹ್ವಾನವಿತ್ತ. ಊಟಕ್ಕೆ ವೇಳೆಯಾದಾಗ, "ಈಗ ಎಲ್ಲಾ ಸಿದ್ಧವಾಗಿದೆ ಬನ್ನಿ," ಎಂದು ಹೇಳಿ ಆಹ್ವಾನಿತರನ್ನು ಕರೆದುತರಲು ಸೇವಕರನ್ನು ಕಳಿಸಿದ. ಆದರೆ ಆಹ್ವಾನಿತರೆಲ್ಲರೂ ಒಬ್ಬರಾದ ಮೇಲೊಬ್ಬರು "ಕ್ಷಮಿಸಬೇಕು," ಎಂದು ಹೇಳಲಾರಂಭಿಸಿದರು. ಒಬ್ಬ, "ಕ್ಷಮಿಸಬೇಕು, ಒಂದು ಹೊಲ ಕೊಂಡು ಕೊಂಡಿದ್ದೇನೆ, ಅಲ್ಲಿಗೆ ಹೋಗಿ ನೋಡಬೇಕಾಗಿದೆ," ಎಂದ. ಇನ್ನೊಬ್ಬ, "ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಬೇಕು," ಎಂದ. ಮತ್ತೊಬ್ಬ, "ನನಗೆ ಈಗ ತಾನೆ ಮದುವೆಯಾಗಿದೆ, ಬರುವುದಕ್ಕಾಗುವುದಿಲ್ಲ," ಎಂದನು. ಆ ಸೇವಕನು ಬಂದು ಯಜಮಾನನಿಗೆ ಹಾಗೆಯೇ ವರದಿ ಮಾಡಿದ.  ಇದನ್ನು ಕೇಳಿ ಯಜಮಾನನಿಗೆ ರೋಷಬಂದಿತು. ಅವನು ಸೇವಕನಿಗೆ, "ಪಟ್ಟಣದ ಹಾದಿಬೀದಿಗಳಿಗೂ ಸಂದುಗೊಂದುಗಳಿಗೂ ಹೋಗಿ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆದುಕೊಂಡು ಬಾ," ಎಂದು ಆಜ್ಞೆಮಾಡಿದ. ಸೇವಕನು ಬಂದು, ಸ್ವಾಮಿಾ, ನಿಮ್ಮ ಆಜ್ಞೆಯಂತೆ ಮಾಡಿದ್ದಾಯಿತು; ಆದರೆ ಇನ್ನೂ ಸ್ಥಳವಿದೆ," ಎಂದು ಹೇಳಿದ. ಅದಕ್ಕೆ ಯಜಮಾನ "ಹಾಗಾದರೆ ಹಳ್ಳಿಹಾದಿಗಳಿಗೂ ಎಲ್ಲೆ ಬೇಲಿಗಳವರೆಗೂ ಹೋಗಿ ಕಂಡಕಂಡವರನ್ನು ಒತ್ತಾಯ ಮಾಡಿ ಕರೆದುಕೊಂಡು ಬಾ. ನನ್ನ ಮನೆ ತುಂಬಿಹೋಗಲಿ ಆದರೆ ಮೊದಲು ಆಹ್ವಾನಿತರಾದವರಲ್ಲಿ ಒಬ್ಬನೂ ನಾನು ಮಾಡಿಸಿದ ಅಡುಗೆಯ ರುಚಿ ನೋಡಬಾರದು!" ಎಂದು ಸ್ಪಷ್ಟಪಡಿಸಿದ."

04.11.2019 - "ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು"

ಮೊದಲನೇ ವಾಚನ: ರೋಮನರಿಗೆ 11:29-36

ದೇವರು ತಾವೇ ನೀಡುವ ವರಗಳನ್ನಾಗಲಿ, ಕೊಡುವ ಕರೆಯನ್ನಾಗಲಿ ಹಿಂತೆಗೆದುಕೊಳ್ಳುವವರಲ್ಲ. ಇಸ್ರಯೇಲರಲ್ಲದ ನೀವು ಹಿಂದೊಮ್ಮೆ ದೇವರಿಗೆ ಅವಿಧೇಯರಾಗಿದ್ದಿರಿ. ಆದರೆ ಈಗ ಇಸ್ರಯೇಲರ ಅವಿಧೇಯತೆಯ ನಿಮಿತ್ತ ದೇವರ ದಯೆಯನ್ನು ಹೊಂದಿದ್ದೀರಿ. ಅದೇ ಪ್ರಕಾರ ಅವರು ಈಗ ಅವಿಧೇಯರಾಗಿದ್ದರೂ ನೀವು ಹೊಂದಿದ ಕರುಣೆಯ ನಿಮಿತ್ತ ಅವರು ಕರುಣೆಯನ್ನು ಹೊಂದುವರು. ಏಕೆಂದರೆ, ಸರ್ವರೂ ತಮ್ಮ ಕರುಣೆಯನ್ನು ಸವಿಯುವಂತೆ ದೇವರು ಎಲ್ಲರನ್ನು  ಅವಿಧೇಯತೆ ಎಂಬ ಬಂಧನಕ್ಕೆ ಒಳಪಡಿಸಿದ್ದಾರೆ. ದೇವರ ಸಿರಿಸಂಪತ್ತು, ಜ್ಞಾನವಿಜ್ಞಾನ ಎಷ್ಟು ಅಗಾಧ! ಪರಿಶೋಧನೆಗೂ ನಿಲುಕದ ಅವರ ನಿರ್ಣಯ ಎಷ್ಟು ಅಗಮ್ಯ! ಅವರ ನಿಯೋಜನೆಗಳು ಗ್ರಹಿಕೆಗೂ ಎಷ್ಟು ಅಸಾಧ್ಯ!
 "ಪ್ರಭುವಿನ ಮನಸ್ಸನ್ನು ಅರಿತವರಾರು?
 ಅವರಿಗೆ ಉಪದೇಶಿಸುವವರಾರು?
 ಮೊದಲೇ ಅವರ ಬಳಿ ಕೊಟ್ಟಿಟ್ಟವರಾರು?
 ಹೀಗೆ ಅವರಿಂದ ಪ್ರತಿಫಲ ಪಡೆದವರಾರು? ಸಮಸ್ತವೂ ಉಂಟಾಗುವುದು ಅವರಿಂದಲೇ; ಮುಂದುವರಿಯುವುದೂ ಅವರ ಮುಖಾಂತರವೇ; ಇರುವುದೂ ಅವರಿಗೋಸ್ಕರವೇ. ಆ ಪ್ರಭುವಿಗೆ ಯುಗಯುಗಾಂತರಕ್ಕೂ ಸ್ತುತಿಸ್ತೋತ್ರ ಸಲ್ಲಲಿ. ಆಮೆನ್.

ಕೀರ್ತನೆ: 69:30-31, 33-34, 36 
ಶ್ಲೋಕ: ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ

ಶುಭಸಂದೇಶ: ಲೂಕ 14:12-14 

ಅನಂತರ ತಮ್ಮನ್ನು ಊಟಕ್ಕೆ ಆಮಂತ್ರಿಸಿದವನನ್ನು ನೋಡಿ ಯೇಸುಸ್ವಾಮಿ, "ನೀನು ಊಟ ಅಥವಾ ಔತಣವನ್ನು ಏರ್ಪಡಿಸುವಾಗ ನಿನ್ನ ಸ್ನೇಹಿತರನ್ನಾಗಲಿ, ಸೋದರರನ್ನಾಗಲಿ, ಬಂಧು ಬಳಗದವರನ್ನಾಗಲಿ, ಧನಿಕರಾದ ನೆರೆಯವರನ್ನಾಗಲಿ ಕರೆಯಬೇಡ. ಏಕೆಂದರೆ, ಅವರು ನಿನ್ನನ್ನು ಪ್ರತಿಯಾಗಿ ಕರೆದು ಮುಯ್ಯಿ ತೀರಿಸಿಬಿಡಬಹುದು. ಆದ್ದರಿಂದ ಔತಣವನ್ನು ಏರ್ಪಡಿಸುವಾಗ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆ; ಆಗ ನೀನು ಧನ್ಯನಾಗುವೆ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ಸತ್ಪುರುಷರು ಪುನರುತ್ಥಾನ ಹೊಂದುವಾಗ ದೇವರೇ ನಿನಗೆ ಸಲ್ಲಬೇಕಾದುದನ್ನು ಸಲ್ಲಿಸುವರು," ಎಂದರು.

03.11.2019 - "ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ"

ಮೊದಲನೇ ವಾಚನ: ಜ್ಞಾನಗ್ರಂಥ ಗ್ರಂಥ  11:22-12:2 

ಕರ್ತರೇ, ನಿಮ್ಮ ದೃಷ್ಟಿಯಲ್ಲಿ ಇಡೀ ವಿಶ್ವವು ತಕ್ಕಡಿಯಲ್ಲಿನ ಒಂದು ಅಣುವಿನಂತೆ ಮುಂಜಾನೆ ನೆಲಕ್ಕೆ ಬೀಳುವ ಮಂಜಿನ ಒಂದು ಹನಿಯಂತೆ. ಏನು ಮಾಡಲೂ ನಿನಗೆ ಶಕ್ತಿಯಿದೆ, ಆದರೂ ಎಲ್ಲರಿಗೂ ಕರುಣೆ ತೋರುತ್ತೀರಿ. ಜನರು ನಿಮಗೆ ಅಭಿಮುಖರಾಗಲೆಂದೇ, ಅವರ ಪಾಪಗಳನ್ನು ಕಂಡರೂ ಕಾಣದಂತಿದ್ದೀರಿ. ಪ್ರೀತಿಸುತ್ತೀರಿ ಸೃಷ್ಟಿಯನ್ನೆಲ್ಲಾ; ನೀವುಂಟು ಮಾಡಿದ್ದನ್ನು ಹೇಸುವುದಿಲ್ಲ ಹೇಸುತ್ತಿದ್ದರೆ ಉಂಟುಮಾಡುತ್ತಿರಲಿಲ್ಲ. ನಿಮ್ಮ ಚಿತ್ತ ಇದ್ದ ಹೊರತು, ಯಾವುದು ಬಾಳೀತು? ನಿಮ್ಮ ಕರೆ ಇಲ್ಲದಿದ್ದರೆ, ಇದ್ದುದು ಹೇಗೆ ಉಳಿದೀತು? ಹೇ ಸರ್ವೇಶ್ವರಾ, ಜೀವಾತ್ಮಗಳ ಪ್ರಿಯನೇ ಎಲ್ಲವೂ ನಿಮ್ಮವಾದುದರಿಂದ, ಎಲ್ಲಕ್ಕೂ ಇದೆ ನಿಮ್ಮ ರಕ್ಷಣೆ ಅಮರವಾದ ನಿಮ್ಮ ಚೈತನ್ಯವು ಇರುವುದು ಪ್ರತಿಯೊಂದರಲ್ಲೂ. ಎಂದೇ ಸನ್ಮಾರ್ಗದಿಂದ ತಪ್ಪಿಹೋದವರನ್ನು ಸ್ವಲ್ಪಸ್ವಲ್ಪವಾಗಿ ತಿದ್ದುತ್ತೀರಿ ಮಾಡಿದ ಅಪರಾಧಗಳನ್ನು ನೆನಪಿಗೆ ತಂದುಕೊಟ್ಟು ಎಚ್ಚರಿಸುತ್ತೀರಿ. ಸರ್ವೇಶ್ವರಾ, ದುಷ್ಟತನ ಬಿಟ್ಟು ನಿಮ್ಮನ್ನವರು ನಂಬಲೆಂದೇ ಹೀಗೆ ಮಾಡುತ್ತೀರಿ. 

ಕೀರ್ತನೆ: 145:1-2, 8-9, 10-11, 14-15 
ಶ್ಲೋಕ: ದೇವಾ, ಮಾಡುವೆ ಯುಗಯುಗಾಂತರಕ್ಕೂ ನಿನ್ನ ನಾಮಕೆ ನಮನ 

ಎರಡನೇ ವಾಚನ: 2 ಥೆಸಲೋನಿಯರಿಗೆ 1:11-2:2 

ಸಹೋದರರೇ, ನಿಮಗೋಸ್ಕರ ನಾವು ಸದಾ ಪ್ರಾರ್ಥಿಸುತ್ತೇವೆ. ದೇವರೇ ನೀಡಿರುವ ಕರೆಗೆ ನೀವು ಯೋಗ್ಯವಾಗಿ ಬಾಳುವಂತಾಗಲಿ; ದೇವರ ಮಹಿಮಾಶಕ್ತಿಯಿಂದ ನಿಮ್ಮ ಶುಭಾಕಾಂಕ್ಷೆಗಳು ಮತ್ತು ವಿಶ್ವಾಸಪ್ರೇರಿತ ಕಾರ್ಯಗಳು ಪೂರ್ಣವಾಗಲಿ. ಹೀಗೆ ನಿಮ್ಮ ಮುಖಾಂತರ ಪ್ರಭು ಯೇಸುವಿನ ನಾಮಕ್ಕೂ ಮತ್ತು ಅವರಲ್ಲಿ ನಿಮಗೂ ಮಹಿಮೆಯುಂಟಾಗಲಿ. ನಿಮ್ಮ ದೇವರ ಹಾಗೂ ಪ್ರಭು ಯೇಸುಕ್ರಿಸ್ತರ ಅನುಗ್ರಹದಿಂದ ಇದು ನೆರವೇರಲಿ. ನಮ್ಮ ಪ್ರಭು ಯೇಸುಕ್ರಿಸ್ತರ ಪುನರಾಗಮನವನ್ನು ಮತ್ತು ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನು ಕುರಿತು ನಿಮ್ಮಲ್ಲಿ ನಾವು ವಿನಂತಿಸುವುದೇನೆಂದರೆ; ಪ್ರಭುವಿನ ದಿನವು ಬಂದೇಬಿಟ್ಟಿತೆಂದು ಪ್ರವಾದನೆಯಿಂದಾಗಲಿ, ಪ್ರವಚನದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದು ಬಂದಿದೆಯೆಂದು ಯಾರಾದರೂ ಹೇಳಿದರೆ, ಒಮ್ಮೆಗೇ ನೀವು ತಳಮಳಗೊಳ್ಳದಿರಿ. 

ಶುಭಸಂದೇಶ: ಲೂಕ 19:1-10 


ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಪ್ರವೇಶಿಸಿ ಅದರ ಬೀದಿಗಳಲ್ಲಿ ಹಾದು ಹೋಗುತ್ತಿದ್ದರು. ಅಲ್ಲಿ ಜಕ್ಕಾಯ ಎಂಬುವನಿದ್ದನು. ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ. ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ. ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು. ಯೇಸು ಆ ಸ್ಥಳಕ್ಕೆ ಬಂದು, ತಲೆಯೆತ್ತಿ ನೋಡಿ, "ಜಕ್ಕಾಯಾ, ಒಡನೆ ಇಳಿದು ಬಾ; ಈ ದಿನ  ನಿನ್ನ ಮನೆಯಲ್ಲಿ ನಾನು  ತಂಗಬೇಕು," ಎಂದರು. ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಇದನ್ನು ನೋಡಿದವರೆಲ್ಲರು, "ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ?" ಎಂದು ಗೊಣಗುಟ್ಟಿದರು. ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, "ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ," ಎಂದನು. ಆಗ ಯೇಸು, "ಇಂದು ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೇ? ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ," ಎಂದು ಹೇಳಿದರು.

02.11.2019 - "ಹೀಗೆ ಈ ದುರ್ಜನರು ನಿತ್ಯ ಶಿಕ್ಷೆಗೂ, ಆ ಸಜ್ಜನರು ನಿತ್ಯ ಜೀವಕ್ಕೂ ಹೋಗುವರು"

ಮೊದಲನೇ ವಾಚನ: ಜ್ಞಾನಗ್ರಂಥ 3:1-9 

ಸಜ್ಜನರ ಆತ್ಮಗಳಿರುವುವು ದೇವರ ಕೈಯೊಳು ಅವರನ್ನು ಮುಟ್ಟದು ಮಹಾಯಾತನೆ ಯಾವುದೂ. ಮಂದಮತಿಯ ಕಣ್ಣಿಗೆ ಸತ್ತವರಂತೆ ಅವರು ಕಾಣಿಸಿಕೊಂಡರು ಅವರು ಗತಿಸಿಹೋದುದು ಅವನಿಂದ ತೊಲಗಿದ ಕೇಡಂತಿತ್ತು. ಸಜ್ಜನರಿಗಾದ ಸಾವು ಮಹಾ ವಿಪತ್ತು ಎಂದವನಿಗೆ ತೋರಿತು. ಅವರಾದರೋ ಶಾಂತಿ ಸಮಾಧಾನದಿಂದ ನೆಮ್ಮದಿಯಾಗಿರುವರು. ಮಾನವನ ದೃಷ್ಟಿಯಲ್ಲಿ ಅವರು ಕಂಡು ಬಂದರು ಶಿಕ್ಷಿಸಲ್ಪಟ್ಟವರಂತೆ ಅವರಲ್ಲಾದರೋ ತುಂಬಿತ್ತು ಅಮರತ್ವದ ನಂಬಿಕೆ ನಿರೀಕ್ಷೆ, ಅವರು ಅನುಭವಿಸಿದ ಶಿಕ್ಷೆ ಅಲ್ಪ, ಹೊಂದುವ ಸೌಭಾಗ್ಯ ಅಪಾರ. ಶೋಧಿಸಿದ ತರುವಾಯ ದೇವರಿಗೆ ಅವರು ಕಂಡು ಬಂದರು ಯೋಗ್ಯಾರ್ಹ. ಶೋಧಿಸಿದರವರನು ಪುಟಕ್ಕಿಟ್ಟ ಚಿನ್ನದಂತೆ, ಅಂಗೀಕೃತರಾದರು ಪೂರ್ಣ ದಹನ ಬಲಿಯಂತೆ. ಪ್ರಕಾಶಿಸುವರು ದೇವರನು ಸಂದರ್ಶಿಸುವ ಕಾಲದಲ್ಲಿ ಹೊಳೆಯುವರು ಒಣ ಹುಲ್ಲಿನೊಳಗಿನ ಕಿಡಿಗಳೋಪಾದಿ. ನ್ಯಾಯ ತೀರಿಸುರವರು ಜನಾಂಗಗಳಿಗೆ ದೊರೆತನ ಮಾಡುವರವರು ಜನಗಳ ಮೇಲೆ ದೇವರ ಪ್ರಜೆಗಳಾಗಿರುವರು ಸದಾಕಾಲಕ್ಕೆ. ಸತ್ಯವನ್ನು ಅರಿವರು ದೇವರಲ್ಲಿ ಭರವಸಯಿಡುವವರು ಅವರೊಂದಿಗೆ ಪ್ರೀತಿಯಿಂದ ಬಾಳುವರು ನಂಬಿಗಸ್ತರು. ದೇವರಿಂದ ಆಯ್ಕೆಯಾದವರಿಗಿರುವುದು ಕೃಪಾನುಗ್ರಹವು ದೇವರೇ ಕಾಪಾಡುವರು ಸಜ್ಜನರನು .

ಕೀರ್ತನೆ: 23:1-3, 3-4, 5, 6 

ಶ್ಲೋಕ:, ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ? 

ಎರಡನೇ ವಾಚನ: ರೋಮನರಿಗೆ 6:3-9 

ಸಹೋದರರೇ, ಕ್ರಿಸ್ತ ಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೇ? ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ದೇವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತ ಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವೂ ಸಹ ಹೊಸ ಜೀವವನ್ನು ಹೊಂದಿ ಬಾಳುತ್ತೇವೆ. ಅವರು ಮರಣ ಹೊಂದಿದಂತೆ ನಾವೂ ಅವರೊಂದಿಗೆ ಐಕ್ಯವಾಗಿ ಮರಣವನ್ನು ಹೊಂದುತ್ತೇವೆ. ಅಂತೆಯೇ, ಅವರು ಪುನರುತ್ಥಾನವಾದಂತೆ ನಾವೂ ಅವರೊಡನೆ ಐಕ್ಯವಾಗಿ ಪುನರುತ್ಥಾನ ಹೊಂದುತ್ತೇವೆ. ನಮಗೆ ತಿಳಿದಿರುವಂತೆ ಪಾಪಾಧೀನವಾದ ನಮ್ಮ ಸ್ವಭಾವವು ನಾಶವಾಗುವಂತೆಯೂ ಇನ್ನು ಮುಂದೆ ನಾವು ಪಾಪಕ್ಕೆ ದಾಸರಾಗಿರದಂತೆಯೂ ಯೇಸುಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವನ್ನು ಶಿಲುಬೆಗೆ ಜಡಿಯಲಾಗಿದೆ. ಹೀಗೆ ಸತ್ತವನು ಪಾಪ ಬಂಧದಿಂದ ಬಿಡುಗಡೆ ಹೊಂದಿದವನು. ಕ್ರಿಸ್ತ ಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ  ವಿಶ್ವಾಸ. ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು  ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ. 

ಶುಭಸಂದೇಶ: ಮತ್ತಾಯ 25:31-46  



"ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು. ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು ಬೇರ್ಪಡಿಸುವನು. ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು. ಆಗ ಆರಸನು ತನ್ನ ಬಲಗಡೆಯಿರುವ ಜನರಿಗೆ, "ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ, ಲೋಕಾದಿಯಿಂದ ನಿಮಗಾಗಿ ಸಿದ್ಧ ಮಾಡಿದ ಸಾಮ್ರಾಜ್ಯವನ್ನು ಸ್ವಾಸ್ಥ್ಯವಾಗಿ ಪಡೆಯಿರಿ. ಏಕೆಂದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ. ಬಟ್ಟೆಬರೆ ಇಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆ ಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ," ಎಂದು ಹೇಳುವನು. ಅದಕ್ಕೆ ಆ ಸಜ್ಜನರು "ಸ್ವಾಮಿಾ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು? ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯ ಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು? ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು?" ಎಂದು ಕೇಳುವರು. ಆಗ ಅರಸನು ಪ್ರತ್ಯುತ್ತರವಾಗಿ, "ಈ ನನ್ನ ಸಹೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಠನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ," ಎನ್ನುವನು. "ಆನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, "ಶಾಪಗ್ರಸ್ತರೇ, ನನ್ನಿಂದ ತೊಲಗಿರಿ. ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. ಏಕೆಂದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರ ಕೊಡಲಿಲ್ಲ; ಬಾಯಾರಿದ್ದೆ, ಕುಡಿಯಲು ಕೊಡಲಿಲ್ಲ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಡಲಿಲ್ಲ; ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ; ರೋಗಿಯಾಗಿದ್ದೆ, ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಲಿಲ್ಲ," ಎಂದು ಹೇಳುವನು. ಅದಕ್ಕೆ ಅವರು ಕೂಡ, "ಸ್ವಾಮಿಾ, ತಾವು ಯಾವಾಗ ಹಸಿದಿದ್ದೀರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ, ಬಂಧಿಯಾಗಿದ್ದಿರಿ, ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆ ಹೋದೆವು? ಎಂದು ಪ್ರಶ್ನಿಸುವರು. ಅದಕ್ಕೆ ಪ್ರತ್ಯುತ್ತರವಾಗಿ ಅರಸನು, "ಇವರಲ್ಲ ಒಬ್ಬನಿಗೆ, ಅವನೆಷ್ಟೇ ಕನಿಷ್ಠನಾಗಿರಲಿ, ನೀವು ಹಾಗೆ ಮಾಡದೆ ಹೋದಾಗ ಅದನ್ನು ನನಗೇ ಮಾಡಲಿಲ್ಲ," ಎನ್ನುವನು. "ಹೀಗೆ ಈ ದುರ್ಜನರು ನಿತ್ಯ ಶಿಕ್ಷೆಗೂ, ಆ ಸಜ್ಜನರು ನಿತ್ಯ ಜೀವಕ್ಕೂ ಹೋಗುವರು," ಎಂದು ಹೇಳಿದರು ಸ್ವಾಮಿ.