22.06.2018

ಮೊದಲನೇ ವಾಚನ: 2 ಅರಸುಗಳು 11:1-4, 8-18, 20 

ಏಳನೆಯ ವರ್ಷದಲ್ಲಿ ಯೆಹೋಯಾದವನು 'ಕಾರಿ' ಎಂಬ ಸಿಪಾಯಿಗಳ ಮತ್ತು ಕಾವಲು ದಂಡಿನವರ ಶತಾಧಿಪತಿಗಳನ್ನು ತನ್ನ ಹತ್ತಿರ ಸರ್ವೇಶ್ವರನ ಆಲಯಕ್ಕೆ ಕರೆಯಿಸಿದನು. ಅಲ್ಲಿ ಅವನು ಅವರ ಸಂಗಡ ಪ್ರಮಾಣಪೂರ್ವಕವಾದ ಒಪ್ಪಂದವನ್ನು ಮಾಡಿಕೊಂಡನಂತರ ರಾಜಕುಮಾರನನ್ನು ತೋರಿಸಿದನು. ಯಾಜಕನಾದ ಯೆಹೋಯಾದವನು ಆಜ್ಞಾಪಿಸಿದಂತೆ ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ಅವನ ಬಳಿಗೆ ಬಂದರು. ಅವರು ಆ ಶತಾಧಿಪತಿಗಳಿಗೆ ಸರ್ವೇಶ್ವರನ ಆಲಯದಲ್ಲಿ ಇಡಲಾಗಿದ್ದ ದಾವೀದನ ಭರ್ಜಿಯನ್ನೂ ಗುರಾಣಿಗಳನ್ನೂ ಕೊಟ್ಟನು. ಕಾವಲುದಂಡಿನವರು ಆಯುಧ ಹಿಡಿದುಕೊಂಡು ಅರಸನನ್ನು ಕಾಯುವುದಕ್ಕಾಗಿ ದೇವಾಲದ ದಕ್ಷಿಣ ದಿಕ್ಕಿನ ಮೂಲೆಯಿಂದ ಬಲಿಪೀಠದವರೆಗೂ, ಅಲ್ಲಿಂದ ಉತ್ತರ ದಿಕ್ಕಿನ ಮೂಲೆಯವರೆಗೂ, ಸಾಲಾಗಿ ನಿಂತರು. ಯೆಹೋಯಾದವನು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜ್ಯಾಭಿಷೇಕ ಮಾಡಿದನು. ಕೂಡಲೇ ಜನರು ಚಪ್ಪಾಳೆ ಹೊಡೆದು 'ಅರಸನು ಚಿರಂಜೀವಿಯಾಗಲಿ!' ಎಂದು ಜಯಕಾರ ಮಾಡಿದರು. ಅತಲ್ಯಳು ಕಾವಲು ದಂಡಿನವರ ಮತ್ತು ಇತರ ಜನರ ಗದ್ದಲವನ್ನು ಕೇಳಿ, ಅವರು ಕೂಡಿದ್ದ ಸರ್ವೇಶ್ವರನ ಆಲಯಕ್ಕೆ ಬಂದಳು. ಅಲ್ಲಿ ಅರಸನು ಪದ್ದತಿಯ ಪ್ರಕಾರ ಸ್ತಂಭದ ಬಳಿಯಲ್ಲಿ ನಿಂತಿದ್ದನು; ಅಧಿಪತಿಗಳೂ ತುತ್ತೂರಿಗಳನ್ನು ಊದುವವರೂ ಅರಸನ ಹತ್ತಿರ ಇದ್ದರು. ಜನ ಸಾಮಾನ್ಯರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಇದನ್ನು ಕಂಡಕೂಡಲೇ ಆಕೆ ಕೋಪದಿಂದ ಬಟ್ಟೆಗಳನ್ನು ಹರಿದುಕೊಂಡು, "ದ್ರೋಹ! ದ್ರೋಹ!" ಎಂದು ಕೂಗಿದಳು. ಆಗ ಯಾಜಕನಾದ ಯೆಹೋಯಾದವನು ಸೇನಾನಿಗಳಾದ ಶತಾಧಿಪತಿಗಳಿಗೆ, "ಈಕೆಯನ್ನು ಸರ್ವೇಶ್ವರನ ಆಲಯದಲ್ಲಿ ಕೊಲ್ಲಬೇಡಿ; ಎರಡು ಸಾಲು ಸಿಪಾಯಿಗಳು ಈಕೆಯನ್ನು ನಡುವೆ ಮಾಡಿ, ಹೊರಗೆ ಕರೆದುಕೊಂಡು ಹೋಗಲಿ; ಮತ್ತು ಈಕೆಯನ್ನು ಹಿಂಬಾಲಿಸುವಂತವರನ್ನು ಕತ್ತಿಯಿಂದ ಕೊಲ್ಲಿರಿ," ಎಂದು ಆಜ್ಞಾಪಿಸಿದನು. 

ಕೀರ್ತನೆ:132:11-12, 13-14, 17-18 

ಶ್ಲೋಕ : ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನ್ನು. 

ಶುಭಸಂದೇಶ: ಮತ್ತಾಯ 6:19-23


"ಇಹಲೋಕದಲ್ಲಿ ಆಸ್ತಿಪಾಸ್ತಿಯನ್ನು ಶೇಖರಿಸಿಡಬೇಡಿ. ಇಲ್ಲಿ ತುಕ್ಕು ಹಿಡಿದೀತು; ನುಸಿ ಹೊಡೆದೀತು; ಕಳ್ಳರು ಕನ್ನ ಕೊರೆದು ಕದಿಯಾರು. ನಿನ್ನ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿನ್ನ ಹೃದಯ. ಕಣ್ಣೇ ದೇಹಕ್ಕೆ ದೀಪ. ನಿನ್ನ ಕಣ್ಣು ಸರಿಯಿದ್ದರೆ ದೇಹವೆಲ್ಲಾ  ಕಾಂತಿಮಯವಾಗುವುದು. ಅದು ಕೆಟ್ಟದ್ದರೆ ನಿನ್ನ ದೇಹವೆಲ್ಲ ಕತ್ತಲಮಯವಾಗುವುದು!" ಎಂದು ಯೇಸುಸ್ವಾಮಿ ಹೇಳಿದರು.

21.06.2018

ಮೊದಲನೇ ವಾಚನ: ಸಿರಾಖನು 48:1-14 

ಆಮೇಲೆ ಪ್ರವಾದಿ ಎಲೀಯನೆದ್ದನು ಬೆಂಕಿಯಂತೆ ಉರಿಯಿತವನ ನುಡಿ ಪಂಜಿನಂತೆ. ಕ್ಷಾಮವನ್ನು ಬರಮಾಡಿದನಿವನು ಜನರ ಮೇಲೆ ಅವರನ್ನು ಕುಂದಿಸಿದನು ತನ್ನ ರೋಷದಂದಲೆ. ಆಕಾಶವನ್ನೇ ಮುಚ್ಚಿಬಿಟ್ಟನು ಸರ್ವೇಶ್ವರನ ಹೆಸರಿನಲ್ಲಿ ಬೆಂಕಿಯಿಳಿಯುವಂತೆ ಮಾಡಿದನು ಮೂರು ಸಾರಿ. ಎಲೈ ಎಲಿಯನೇ, ಮಹಾತ್ಕಾರ್ಯಗಳಲ್ಲಿ ನೀನು ಎಷ್ಟು ಘನವಂತನಾಗಿದ್ದೆ! ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ? ಸತ್ತವನನ್ನು ನೀನೆಬ್ಬಿಸಿದೆ ಮರಣದಿಂದ, ಪಾತಾಳದಿಂದ ಇದು ಸಾಧ್ಯವಾಯಿತು ಮಹೋನ್ನತನ ವಾಕ್ಯ ಶಕ್ತಿಯಿಂದ. ಅರಸುಗಳನ್ನು ನಾಶನಕ್ಕೆ ಗುರಿಮಾಡಿದವನು ನೀನು ಗಣ್ಯ ವ್ಯಕ್ತಿಗಳನ್ನು ಮಂಚದಿಂದ ಇಳಿಸಿದವನು ನೀನು. ಸೀನಾಯಿನಲ್ಲಿ ಗದರಿಸಿಕೊಂಡವನು ನೀನು ಹೋರೆಬಿನಲ್ಲಿ ಮುಯ್ಯಿ ತೀರಿಸುವ ನಿರ್ಣಯ ಕೇಳಿಸಿಕೊಂಡವನು ನೀನು. ಪ್ರತೀಕಾರ ಮಾಡುವುದಕ್ಕೆ  ಅರಸರನ್ನು, ನಿನ್ನಾನಂತರ ಇರಬೇಕಾದ ಪ್ರವಾದಿಯನ್ನು ಅಭಿಷೇಕಿಸಿದವನು ನೀನು. ನೀ ಒಯ್ಯಲ್ಪಟ್ಟೆ  ಬೆಂಕಿಯ ಬಿರುಗಾಳಿಯಲ್ಲಿ ಅಗ್ನಿಮಯ ಕುದುರೆಗಳೆಳೆದ ರಥದಲ್ಲಿ. ಕೋಪ ರೌದ್ರಕ್ಕೇರುವುದಕ್ಕೆ ಮುಂಚೆ ಅದನ್ನು ಶಾಂತಪಡಿಸುವುದಕ್ಕಾಗಿ ತಂದೆಯ ಹೃದಯವನ್ನು ಮಗನ ಕಡೆಗೆ ತಿರುಗಿಸುವುದಕ್ಕಾಗಿ ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ ತರುವುದಕ್ಕಾಗಿ ತಕ್ಕ ಕಾಲದಲ್ಲಿ ಗದರಿಸುವಾತ ನೀನೆಂದು ಬರೆದಿದೆ ನಿನ್ನ ವಿಷಯವಾಗಿ. ನಿನ್ನನು ನೋಡುವವರು ಧನ್ಯರು! ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು. ಸುಳಿಗಾಳಿಯಿಂದ ಆವರಿಸಲ್ಪಟ್ಟವನು ಎಲೀಯನು ಅವನ ಆತ್ಮದಿಂದ ತುಂಬಿಕೊಂಡವನು ಎಲೀಷನು. ಇವನು ತನ್ನ ಜೀವನದಲ್ಲಿ ಜಗ್ಗಲಿಲ್ಲ ಯಾವ ಅರಸನ ಬೆದರಿಕೆಗೂ ಇವನನ್ನು ಅಧೀನದಲ್ಲಿಟ್ಟುಕೊಳ್ಳುವ ಶಕ್ತಿ ಇರಲಿಲ್ಲ ಯಾರಿಗೂ. ಇವನು ಸೋಲಲಿಲ್ಲ ಯಾವ ಮಾತಿಗೂ ಇವನ ದೇಹ ಪ್ರವಾದಿಸಿತು ಸತ್ತ ಮೇಲೂ. ಜೀವಮಾನಕಾಲದಲ್ಲಿ ಎಸಗಿದನು ಮಹಾತ್ಕಾರ್ಯಗಳನ್ನು ಸತ್ತ ಮೇಲೂ ಅವನ ಕಾರ್ಯಗಳು ಅಗಾಧವಾಗಿದ್ದವು. 

ಕೀರ್ತನೆ: 97:1-2, 3-4, 5-6, 7 
ಶ್ಲೋಕ: ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ. 

ಶುಭಸಂದೇಶ: ಮತ್ತಾಯ 6:7-15


"ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ. ಆದುದ್ದರಿಂದ ಹೀಗೆಂದು ಪ್ರಾರ್ಥನೆ ಮಾಡಿ: "ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಅಹಾರವನ್ನು ನಮಗಿಂದು ಕೊಡಿ. ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ, ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ. "ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು,"

20-06-2018

ಮೊದಲನೇ ವಾಚನ: 2 ಅರಸುಗಳು: 2:1, 6-14

ಸರ್ವೇಶ್ವರಸ್ವಾಮಿ ಎಲೀಯನನ್ನು ಸುಂಟರಗಾಳಿಯಲ್ಲಿ ಪರಲೋಕಕ್ಕೆ ಸೇರಿಸುವ ಸಮಯ ಬಂದಿತು. ಆಗ ಎಲೀಯನು ಎಲೀಷನೊಡನೆ ಗಿಲ್ಗಾನನ್ನು ಬಿಟ್ಟು ಹೊರಟನು. ಎಲೀಯನು ಮತ್ತೆ ಎಲೀಷನಿಗೆ, "ದಯವಿಟ್ಟು ನೀನು ಇಲ್ಲೆಯಿರು; ಸರ್ವೇಶ್ವರ ನನಗೆ ಜೋರ್ಡನಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾರೆ," ಎಂದನು. ಆಗ ಅವನು, "ಸರ್ವೇಶ್ವರನ ಆಣೆ, ನಿಮ್ಮ ಜೀವದಾಣೆ, ನಾನು ನಿಮ್ಮನ್ನು ಬಿಟ್ಟಿರಲಾಗದು," ಎಂದು ಉತ್ತರಕೊಟ್ಟನು. ಆದುದರಿಂದ ಇಬ್ಬರೂ ಹೊರಟು ಜೋರ್ಡನ್ ನದಿಯ ದಡಕ್ಕೆ ಬಂದರು. ಪ್ರವಾದಿ ಮಂಡಲಿಯವರಲ್ಲಿ ಐವತ್ತು ಮಂದಿ ಇವರ ಹಿಂದಿನಿಂದಲೇ ಬಂದು ಸ್ವಲ್ಪ ದೂರದಲ್ಲಿ ನಿಂತುಕೊಂಡರು. ಅನಂತರ ಎಲೀಯನು ತನ್ನ ಕಂಬಳಿಯನ್ನು ಮಡಿಚಿ, ಅದರಿಂದ ನೀರನ್ನು ಹೊಡೆದನು. ನೀರು ಇಬ್ಬಾಗವಾಯಿತು; ಅವರಿಬ್ಬರೂ ಒಣ ನೆಲದ ಮೇಲೆ ದಾಟಿಹೋದರು. ಅವರು ಆಚೆ ದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು, "ನಿನ್ನನ್ನು ಬಿಟ್ಟು ಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಬೇಕೆನ್ನುತ್ತೀ ಹೇಳು?, ಎಂದು ಕೇಳಿದನು. ಅದಕ್ಕೆ ಎಲೀಷನು, "ನಿಮಗಿರುವ ಆತ್ಮ ಶಕ್ತಿಯಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸಿ," ಎಂದು ಬೇಡಿಕೊಂಡನು. ಆಗ ಎಲೀಯನು, "ನೀನು ದುರ್ಲಭವಾದದ್ದನ್ನು ಕೇಳಿಕೊಂಡೆ; ಆದರೂ ನನ್ನನ್ನು ನಿನ್ನ ಬಳಿಯಿಂದ ತೆಗೆಯಲಾಗುವಾಗ ನೀನು ನನ್ನನ್ನು ನೋಡುವುದಾದರೆ ಅದು ದೊರಕುವುದು; ಇಲ್ಲವಾದರೆ ದೊರಕುವುದಿಲ್ಲ," ಎಂದನು. ಅವರು ಮಾತನಾಡುತ್ತಾ ಮುಂದೆ ಹೋಗುತ್ತಿರುವಾಗ ಫಕ್ಕನೆ ಅಗ್ನಿಮಯವಾದ ರಥ ರಥಾಶ್ವಗಳು ನಡುವೆ ಬಂದು ಅವರನ್ನು ವಿಂಗಡಿಸಿದವು. ಎಲೀಯನು ಸುಂಟರ ಗಾಳಿಯಲ್ಲಿ ಪರಲೋಕಕ್ಕೆ ಹೋದನು. ಎಲೀಷನು ಅದನ್ನು ನೋಡುತ್ತಾ, "ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಯೇಲರಿಗೆ ರಥ ರಥಾಶ್ವಗಳಾಗಿದ್ದವರೇ," ಎಂದು ಕೂಗಿಕೊಡನು. ಎಲೀಯನು ತನಗೆ ಕಾಣಿಸದೆ ಹೋದ ಮೇಲೆ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದು ಎರಡು ತುಂಡು ಮಾಡಿದನು. ಅನಂತರ ಅವನು ಮೇಲಿನಿಂದ ಬಿದ್ದ ಎಲೀಯನ ಕಂಬಳಿಯನ್ನು ತೆಗೆದುಕೊಂಡು ಜೋರ್ಡನ್ ನದೀ ತೀರಕ್ಕೆ ಬಂದನು. "ಎಲೀಯನ ದೇವರಾದ ಸರ್ವೇಶ್ವರನೆಲ್ಲಿ?" ಎಂದುಕೊಂಡು ಆ ಕಂಬಳಿಯಿಂದ ನೀರನ್ನು ಹೊಡೆದನು. ಅದು ಇಬ್ಬಾಗ ಆಯಿತು. ಅವನು ದಾಟಿ ಹೋದನು.

ಕೀರ್ತನೆ: 31: 20, 21, 24
ಶ್ಲೋಕ: ಪ್ರಭುವಿಗಾಗಿ ಕಾದಿಹ ಜನರೇ, ನಿಮಗಿರಲಿ ಅಭಯ



ಶುಭಸ೦ದೇಶ: ಮತ್ತಾಯ: 6:1-6, 16-18

"ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು. ಅ೦ತೆಯೇ, ನೀನು ದಾನ ಧರ್ಮ ಮಾಡುವಾಗ ತುತ್ತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾ ಮಂದಿರಗಳಲ್ಲೂ ಹಾದಿ ಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ನೀನು ದಾನ ಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು." "ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆ೦ದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿ ಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು." "ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆ ಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೋ, ತಲೆ ಬಾಚಿಕೊ. ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲಾ ಪ್ರತಿಫಲ ಕೊಡುವರು."

19-06-2018

ಮೊದಲನೇ ವಾಚನ: 1 ಅರಸುಗಳು: 21: 17-29

ಆಗ ತಿಷ್ಬೀಯನಾದ ಎಲೀಯನಿಗೆ ಸರ್ವೇಶ್ವರನ ವಾಣಿವುಂಟಾಯಿತು. "ನೀನು ಹೋಗಿ ಸಮಾರಿಯದಲ್ಲಿ ವಾಸಿಸುವ ಇಸ್ರಯೇಲ್ ಅರಸನನ್ನು ಕಾಣು; ಅವನು ಈಗ ನಾಬೋತನ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕಾಗಿ ಅಲ್ಲಿಗೆ ಹೋಗಿದ್ದಾನೆ. ಅವನಿಗೆ, ’ನೀನು ಕೊಲೆ ಮಾಡಿ, ಸೊತ್ತನ್ನು ಸಂಪಾದಿಸಿಕೊಂಡೆಯಲ್ಲವೇ? ಬಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವುವು, ಎನ್ನುತ್ತಾರೆ ಸರ್ವೇಶ್ವರ ಎಂದು ಹೇಳು." ಅಹಾಬನು ಎಲೀಯನನ್ನು ನೋಡಿ, "ಎಲೈ ವೈರಿಯೇ, ನೀನು ನನ್ನನ್ನು ಕಂಡು ಹಿಡಿದೆಯಾ?" ಎಂದು ಕೇಳಿದನು. ಅವನು, "ಹೌದು, ಕಂಡು ಹಿಡಿದೆ, ನೀನು ನಿನ್ನನ್ನು ಪಾಪಕ್ಕೆ ಮಾರಿಬಿಟ್ಟು, ಸರ್ವೇಶ್ವರ ದೃಷ್ಠಿಯಲ್ಲಿ ದ್ರೋಹಿಯಾದೆ. ಸರ್ವೇಶ್ವರ ನಿನ್ನನ್ನು ಕುರಿತು ,’ನಾನು ನಿನ್ನ ಮೈಮೇಲೆ ಕೇಡನ್ನು ಬರಮಾಡಿ, ನಿನ್ನನ್ನು ಕಸದಂತೆ ತೆಗೆದು ಹಾಕುವೆನು; ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ಪರತಂತ್ರರಾಗಲಿ ಎಲ್ಲರನ್ನೂ ಇಸ್ರಯೇಲರ ಮಧ್ಯೆಯಿಂದ ಕಡಿದುಬಿಡುವೆನು. ನೀನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿ, ನನಗೆ ಕೋಪವನ್ನೆಬ್ಬಿಸಿದ್ದರಿಂದ ನೆಬಾಟನ ಮಗ ಯಾರೊಬ್ಬಾಮನ ಮನೆಗೂ ಅಹೀಯನ ಮಗ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು.’ ಎನ್ನುತ್ತಾರೆ. ಇದಲ್ಲದೆ ಈಜೆಬೆಲಳನ್ನು ಕುರಿತು ಅವರು, ’ನಾಯಿಗಳು ಜೆಸ್ರೀಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವುವು; ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳು ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವುವು’ ಎಂದು ಹೇಳುತ್ತಾರೆ." ಎಂದನು. ಹೆಂಡತಿ ಈಜೆಬೆಲಳಿಂದ ಪ್ರಚೋದಿತನಾಗಿ ಸರ್ವೇಶ್ವರನ ದೃಷ್ಥಿಯಲ್ಲಿ ಕೆಟ್ಟದ್ದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ. ಸರ್ವೇಶ್ವರ ಇಸ್ರಯೇಲರ ನಾಡಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆ ಬಹಳ ಅಸಹ್ಯವಾಗಿತ್ತು. ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಯನ್ನು ದುಃಖದಿಂದ ಹರಿಸು ಕೊಂಡನು; ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು ಉಪವಾಸ ಮಾಡುತ್ತಾ ದೀನ ಮನಸ್ಸಿನಿಂದ ವರ್ತಿಸಿದನು. ಆದುದರಿಂದ ಸರ್ವೇಶ್ವರ ತಿಷ್ಬೀಯನಾದ ಎಲೀಯನಿಗೆ, "ಅಹಾಬನು ನನ್ನ ಮುಂದೆ ತನ್ನನ್ನೇ ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ಹೀಗೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡುವುದಿಲ್ಲ. ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಬರಮಾಡುವೆನು," ಎಂದು ಹೇಳಿದರು.


ಕೀರ್ತನೆ: 51: 3-4, 5-6, 11,16

ಶ್ಲೋಕ: ಕೃಪಾಳು ದೇವಾ, ಕರುಣಿಸಿನ್ನೆನು ನಿನಗೆ ದ್ರೋಹವೆಸಗಿದೆ.


ಶುಭಸ೦ದೇಶ: ಮತ್ತಾಯ: 5: 43-48


’ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು’ ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು  ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೆ? ನಿಮ್ಮ ಮಿತ್ರರನ್ನುಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯ ಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ" ಎಂದು ಯೇಸುಸ್ವಾಮಿ ಹೇಳಿದರು.

18-06-2018

ಮೊದಲನೇ ವಾಚನ: ೧ ಅರಸುಗಳು: ೨೧: ೧-೧೬

ಅನಂತರ ಸಂಭವಿಸಿದ ಘಟನೆಗಳು ಇವು: ಜೆಸ್ರೀಲಿನಲ್ಲಿ, ಸಮಾರಿಯದ ಅರಸ ಅಹಾಬನ ಅರಮನೆಯ ಹತ್ತಿರ ಜೆಸ್ರೀಲಿನವನಾದ ನಾಬೋತನೆಂಬ ವ್ಯಕ್ತಿಗೆ ಒಂದು ದ್ರಾಕ್ಷಿ ತೋಟವಿತ್ತು. ಅಹಾಬನು ಆ ನಾಬೋತನಿಗೆ, "ನಿನ್ನ ದ್ರಾಕ್ಷಿತೋಟವನ್ನು ನನಗೆ ಕೊಡು; ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುತ್ತೇನೆ; ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ; ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ," ಎಂದು ಹೇಳಿದನು. ಅದಕ್ಕೆ ನಾಬೋತನು, "ಪಿತ್ರಾರ್ಜಿತ ಸೊತ್ತನ್ನು ನಿಮಗೆ ಮಾರದಂತೆ ಸರ್ವೇಶ್ವರ ನನ್ನನ್ನು ತಡೆಯಲಿ!" ಎಂದು ಉತ್ತರ ಕೊಟ್ಟನು. ಪಿತ್ರಾರ್ಜಿತ ಸೊತ್ತನ್ನು ನಿನಗೆ ಕೊಡುವುದಿಲ್ಲವೆಂದು ನಾಬೋತನು ಹೇಳಿದ್ದರಿಂದ ಆಹಾಬನು ಸಿಟ್ಟುಗೊಂಡನು. ಗ೦ಟುಮೋರೆ ಮಾಡಿಕೊಂಡು ಮನೆಗೆ ಹೋಗಿ ಊಟಮಾಡಲೊಲ್ಲದೆ ಮಂಚದ ಮೇಲೆ ಮಲಗಿ, ಗೋಡೆಯ ಕಡೆಗೆ ಮುಖ ತಿರುಗಿಸಿಕೊಂಡನು. ಆಗ ಅವನ ಹೆಂಡತಿ ಈಜೆಬೆಲಳು ಅವನ ಬಳಿಗೆ ಬಂದು, "ನೀವೇಕೆ ಊಟಮಾಡುವುದಿಲ್ಲ? ನಿಮಗೆ ಯಾವ ಚಿಂತೆ?," ಎಂದು ಕೇಳಿದಳು. ಅವನು, "ನಾನು ಜೆಸ್ರೀಲಿನವನಾದ ನಾಬೋತನಿಗೆ, ’ನಿನ್ನ ದ್ರಾಕ್ಷಿ ತೋಟವನ್ನು ನನಗೆ ಮಾರಿಬಿಡು; ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷಿ ತೋಟವನ್ನು ಕೊಡುತ್ತೇನೆ ಎಂದು ಹೇಳಿದೆ; ಆದರೆ ಅವನು ಕೊಡುವುದಿಲ್ಲ ಎಂದು ಬಿಟ್ಟ," ಎಂದು ಉತ್ತರ ಕೊಟ್ಟನು. ಆಗ ಅವನ ಹೆಂಡತಿ ಈಜೆಬೆಲಳು, "ಇಸ್ರಯೇಲರ ಅರಸರಾದ ನೀವು ಹೀಗೆ ವರ್ತಿಸುವುದೇ! ಎದ್ದು ಊಟಮಾಡಿ, ಸ೦ತೋಷದಿಂದಿರಿ; ನಾನು ನಿಮಗೆ ಜೆಸ್ರೀಲಿನವನಾದ ನಾಬೋತನ ದ್ರಾಕ್ಷಿ ತೋಟವನ್ನು ಕೊಡುತ್ತೇನೆ," ಎಂದು ನುಡಿದಳು.

ಅಂತೆಯೇ ಅಹಾಬನ ಹೆಸರಿನಲ್ಲಿ ಒಂದು ಪತ್ರವನ್ನು ಬರೆದು, ಅದಕ್ಕೆ ಅವನ ಮುದ್ರೆಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನ ಪುರುಷರಿಗೂ ಹಿರಿಯರಿಗೂ ಕಳುಹಿಸಿದಳು. ಅದರಲ್ಲಿ, "ಎಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿರಿ; ನಾಬೋತನನ್ನು ನೆರೆದ ಸಭೆಯ  ಮುಂದೆ ನಿಲ್ಲಿಸಿರಿ; ಅವನು ದೇವರನ್ನೂ ಅರಸನನ್ನೂ ಶಪಿಸಿದವನು ಎಂಬುದಾಗಿ ಇಬ್ಬರು ದುಷ್ಟ ಮುನುಷ್ಯರಿಂದ ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಿಸಿರಿ; ಅವನನ್ನು ಹೊರಗೆ ಒಯ್ದು ಕಲ್ಲೆಸೆದು ಕೊಲ್ಲಿರಿ," ಎಂದು ಬರೆದಿದ್ದಳು. ಅವನ ಊರಿನ ಹಿರಿಯರೂ ಪ್ರಧಾನ ಪುರುಷರು ಈಜೆಬೆಲಳು ಕಳುಹಿಸಿದ್ದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು; ಉಪವಾಸವನ್ನು ಪ್ರಕಟಿಸಿದರು; ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು; ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತರು. ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆಂಬುದಾಗಿ ಜನರ ಎದುರಿನಲ್ಲೆ ಅವನಿಗೆ ವಿರುದ್ದ ಸಾಕ್ಷಿ ಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು. ನಾಬೋತನು ಕಲ್ಲೆಸೆತದಿಂದ ಸತ್ತ ಸಮಾಚಾರವನ್ನು ಆ ಹಿರಿಯರು ಈಜೆಬೆಲಳಿಗೆ ಮುಟ್ಟಿಸಿದರು. ಆಕೆ ಇದನ್ನು ಕೇಳಿ ಆಹಾಬನಿಗೆ "ನೀವು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೊಳ್ಳಿ. ಅವನು ಜೀವದಿಂದಿಲ್ಲ, ಸತ್ತನು" ಎಂದು ಹೇಳಿದಳು. ಜೆಸ್ರೀಲಿನವನಾದ ನಾಬೋತನ ಮರಣ ವಾರ್ತೆಯನ್ನು ಅಹಾಬನು ಕೇಳಿ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಹೋದನು.

ಕೀರ್ತನೆ: ೫: ೨-೩ಎಬಿ, ೪ಬಿ, ೬ಎ, ೬ಬಿ-೭
ಶ್ಲೋಕ: ಕಿವಿಗೊಡು ಪ್ರಭು ಎನ್ನ ನುಡಿಗೆ. 

ಶುಭಸ೦ದೇಶ: ಮತ್ತಾಯ: ೫: ೩೮-೪೨

" ’ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು’ ಎಂಬುದನ್ನು ನೀವು ಕೇಳಿದ್ದೀರಿ. ಆದರೆ ನನ್ನ ಬೋಧೆ ಇದು: ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲ ಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು. ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅ೦ಗಿಯನ್ನೂ ಕೊಟ್ಟುಬಿಡು. ಯಾರಾದರು ಒಂದು ಕಿಲೊಮಿಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯ ಪಡಿಸಿದರೆ ಅವನೊಡನೆ ಎರಡು ಕಿಲೊಮಿಟರ್ ಹೋಗು; ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳ ಬ೦ದವನಿಂದ ಮುಖ ತಿರುಗಿಸಿಕೊಳ್ಳಾಬೇಡ" ಎಂದರು ಯೇಸುಸ್ವಾಮಿ.

17-06-2018

ಮೊದಲನೇ ವಾಚನ: ಯೆಜೆಕೀಯಲ: 17: 22-24
ಸರ್ವೇಶ್ವರನಾದ ದೇವರ ವಾಣಿಯಿದು: ನಾನೇ ನೆಡುವೆನು ರೆಂಬೆಯೊಂದನು ಎತ್ತರದ ದೇವದಾರು ಮರದ ಮೇಲಿಂದ ತಂದು ತುತ್ತ ತುದಿಯ ಚಿಗುರುಗಳಲೊಂದನ್ನು ತಂದು ಅತೀ ಕೋಮಲವಾದುದನು ಚಿವುಟಿ ತಂದು, ನೆಡುವೆನದನು ಉನ್ನತೋನ್ನತವಾದ ಪರ್ವತದಲ್ಲಿ. ಹೌದು, ನೆಡುವೆನು ಇಸ್ರಯೇಲಿನ ಪರ್ವತಾಗ್ರದಲ್ಲಿ. ಆಗುವುದದು ಸೊಂಪಾದ ದೇವದಾರು ಮರ, ರೆ೦ಬೆಗಳನದು ಹರಡಿಕೊಂಡು ಕೊಡುವುದು ಫಲ. ಸಕಲ ವಿಧ ಪಕ್ಷಿಗಳು ವಾಸಿಸುವುವು ಅದರಲ್ಲಿ. ಆಶ್ರಯ ಪಡೆವುವು ಅದರ ರೆಂಬೆಗಳ ನೆರಳಲ್ಲಿ. ಆಗ ತಿಳಿವುವು ವನದ ವೃಕ್ಷಗಳು: ಎತ್ತರವಾದ ಮರಗಳ ತಗ್ಗಿಸುವವನು, ತಗ್ಗಾದುದನ್ನು ಎತ್ತರ ಪಡಿಸುವವನು ಹಸಿರಾದುದನ್ನು ಒಣಗಿಸುವವನು, ಒಣಗಿದುದನು ಚಿಗುರಿಸುವವನು ಸರ್ವೇಶ್ವರ ನಾನೇ ಎಂದು. ಇದ ನುಡಿದವ ನಾನು, ನುಡಿದದ್ದನ್ನು ನಡೆಸುವವ ನಾನು."

ಎರಡನೇ ವಾಚನ: 2 ಕೊರಿಂಥಿಯರಿಗೆ: 5: 6-10


ಈ ಕಾರಣದಿಂದಲೇ ನಾವು ಸದಾ ಸ್ಥಿರ ಚಿತ್ತರಾಗಿದ್ದೇವೆ. ಈ ದೇಹವನ್ನೇ ನೆಚ್ಚಿ ಇದರಲ್ಲೇ ನೆಲೆಯಾಗಿರುವವರೆಗು ನಾವು ಪ್ರಭುವಿನಿಂದ ದೂರವಿರುವ ಪ್ರವಾಸಿಗಳಂತೆ ಇದ್ದೇವೆ. ನಾವು ನೋಡಿ ನಡೆಯುವವರಲ್ಲ, ನಂಬಿ ನಡೆಯುವವರು. ಆದ್ದರಿಂದ ಈ ದೇಹವನ್ನು ತ್ಯಜಿಸಿ, ಪ್ರಭುವನ್ನೇ ನೆಚ್ಚಿ ನೆಲಸುವುದು ಲೇಸೆಂದು ಧೈರ್ಯದಿಂದ ಹೇಳುತ್ತೇವೆ. ಈ ಕಾರಣ ಇಲ್ಲಾದರು ಸರಿ, ಅಲ್ಲಾದರು ಸರಿ, ಪ್ರಭು ಮೆಚ್ಚುವಂತೆ ಬಾಳುವುದೊಂದೆ ನಮ್ಮ ಗುರಿ. ನಾವು ಎಲ್ಲರು ನ್ಯಾಯ ವಿಚಾರಣೆಗಾಗಿ ಕ್ರಿಸ್ತ ಯೇಸುವಿನ ಮುಂದೆ ನಿಲ್ಲಲೇಬೇಕು. ಪ್ರತಿಯೊಬ್ಬನು ತನ್ನ ದೈಹಿಕ ಜೀವನದಲ್ಲಿ ಮಾಡಿದ ಪಾಪ ಪುಣ್ಯ ಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ಪಡೆಯಲೇ ಬೇಕು.

ಕೀರ್ತನೆ: 92:2-3, 13-14, 15-16
ಶ್ಲೋಕ: ಹೇ ಪ್ರಭೂ, ನಿನ್ನ ಗುಣಗಾನ ಮ೦ಗಳಕರ 


ಶುಭಸ೦ದೇಶ: ಮಾರ್ಕ: 4: 26-34


ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: "ದೇವರ ಸಾಮ್ರಾಜ್ಯವು ರೈತನೊಬ್ಬನು ತನ್ನ ಹೊಲದಲ್ಲಿ ಮಾಡಿದ ಬಿತ್ತನೆಗೆ ಹೋಲಿಕೆಯಾಗಿದೆ. ಬಿತ್ತನೆಯಾದ ಬಳಿಕ ಅವನು ರಾತ್ರಿಯಲ್ಲಿ ಮಲಗಿರಲಿ, ಹಗಲಲ್ಲಿ ಎದ್ದಿರಲಿ, ಅವನಿಗೆ ಹೇಗೆಂದು ತಿಳಿಯದೆಯೇ ಆ ಬೀಜವು ಮೊಳೆತು ಬೆಳೆಯುತ್ತಿರುತ್ತದೆ. ಭೂಮಿ ಮೊದಲು ಸಸಿಯನ್ನು ಅನಂತರ ಹೊಡೆಯನ್ನು ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೆ ತಾನೇ ಉತ್ಪತ್ತಿ ಮಾಡುತ್ತದೆ. ಬೆಳೆಯು ಮಾಗಿದಾಗ, ಸುಗ್ಗಿಯು ಬಂತೆದು ವ್ಯವಸಾಯಗಾರನು ಕುಡುಗೋಲನ್ನು ಬಳಸುತ್ತಾನೆ," ಎಂದರು. ಯೇಸುಸ್ವಾಮಿ ತಮ್ಮ ಉಪದೇಶವನ್ನು ಮುಂದುವರಿಸಿ, "ದೇವರ ಸಾಮ್ರಾಜ್ಯವನ್ನು ಇನ್ನು ಯಾವುದಕ್ಕೆ ಹೋಲಿಸೋಣ? ಅದಕ್ಕಾಗಿ ಯಾವ ಸಾಮತಿಯನ್ನು ಉಪಯೋಗಿಸೋಣ? ಭೂಮಿಯಲ್ಲಿರುವ ಕಾಳುಗಳಲ್ಲಿ ಅತೀ ಚಿಕ್ಕದಾಗಿರುವ ಸಾಸಿವೆ ಕಾಳಿಗೂ ಅದನ್ನು ಹೋಲಿಸ ಬಹುದು. ಸಾಸಿವೆ ಕಾಳು ಚಿಕ್ಕದಾಗಿದ್ದರು ಬಿತ್ತನೆಯ ತರುವಾಯ ಮೊಳೆತು ಎಲ್ಲಾ ಕಾಯಿ ಪಲ್ಯದ ಸಸಿಗಳಿಗಿಂತಲೂ ದೊಡ್ಡದಾಗಿ ಬೆಳೆಯುತ್ತದೆ. ಹಕ್ಕಿಗಳು ಕೂಡ ಬಂದು ಅದರ ನೆರಳಲ್ಲಿ ಗೂಡು ಕಟ್ಟಿ ವಾಸಿಸುವಷ್ಟು ದೊಡ್ಡದಾದ ರೆ೦ಬೆಗಳನ್ನು ಅದು ತಳೆಯುತ್ತದೆ," ಎಂದರು. ಯೇಸುಸ್ವಾಮಿ ಈ ಬಗೆಯ ಸಾಮತಿಗಳನ್ನು ಉಪಯೋಗಿಸಿ ಜನರಿಗೆ ದೇವರ ಸಂದೇಶವನ್ನು ಅವರವರ ತಿಳುವಳಿಕೆಗೆ ತಕ್ಕಂತೆ ಉಪದೇಶಿಸುತ್ತಿದ್ದರು. ಸಾಮತಿಗಳನ್ನು ಉಪಯೋಗಿಸದೇ ಅವರು ಭೋದಿಸುತ್ತಿರಲಿಲ್ಲ. ಆದರೆ ತಮ್ಮ ಆಪ್ತ ಶಿಷ್ಯರೊಡನೆ ಪ್ರತ್ಯೇಕವಾಗಿದ್ದಾಗ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.

16-06-2018

ಮೊದಲನೇ ವಾಚನ: 1 ಅರಸುಗಳು 19: 19-21

ಎಲೀಯನು ಅಲ್ಲಿಂದ ಹೊರಟು ಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವುದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆಯ ಜೋಡಿಯಿಂದ ತಾನಾಗಿ ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದುಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು. ಕೂಡಲೇ ಅವನು ಎತ್ತುಗಳನ್ನು ಬಿಟ್ಟು ಓಡುತ್ತಾ ಬಂದು ಎಲೀಯನಿಗೆ, "ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬರುವುದಕ್ಕೆ ಅಪ್ಪಣೆಯಾಗಲಿ; ಅನಂತರ ನಿನ್ನನ್ನು ಹಿಂಬಾಲಿಸುವೆನು," ಎಂದನು. ಅದಕ್ಕೆ ಎಲೀಯನು, "ಹೋಗಿ ಬಾ; ನಾನು ನಿನಗೆ ಮಾಡಬೇಕಾದ್ದನ್ನು ಮಾಡಿದ್ದೇನೆ," ಎಂದು ಉತ್ತರ ಕೊಟ್ಟನು.  ಎಲೀಷನು ಹಿಂದಿರುಗಿ ಹೋಗಿ ತಾನು ಉಳುತ್ತಿದ್ದ ಜೋಡಿ ಎತ್ತುಗಳನ್ನು ತೆಗೆದುಕೊಂಡು ವಧಿಸಿ ಮಾ೦ಸವನ್ನು ನೊಗದ ಕಟ್ಟಿಗೆಯಿಂದ ಬೇಯಿಸಿ, ಜನರಿಗೆ ಔತಣ ಮಾಡಿಸಿದನು. ಅನಂತರ ಅವನು ಎದ್ದು ಎಲೀಯನನ್ನು ಹಿಂಬಾಲಿಸಿ ಅವನ ಶಿಷ್ಯನಾದನು.

ಕೀರ್ತನೆ: 16: 1-2, 5, 7-8, 9-10

ಶ್ಲೋಕ: ಪ್ರಭೂ, ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ.


ಶುಭಸ೦ದೇಶ: ಮತ್ತಾಯ: 5: 33-37


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: " ’ಸುಳ್ಳಾಣೆಯಿಡಬೇಡ; ದೇವರಿಗೆ ಆಣೆಯಿಟ್ಟು ವಾಗ್ದಾನ ಮಾಡಿದಂತೆ ನಡೆದುಕೊಳ್ಳಲೇ ಬೇಕು’ ಎಂದು ಪೂರ್ವಿಕರಿಗೆ ಹೇಳಿದ್ದು ನಿಮಗೆ ತಿಳಿದೇ ಇದೆ. ಈಗ ನಾನು ಹೇಳುವುದನ್ನು ಕೇಳಿ: ನೀವು ಆಣೆಯಿಡಲೇ ಬೇಡಿ. ಆಕಾಶದ ಮೇಲೆ ಆಣೆಯಿಡಬೇಡಿ, ಅದು ದೇವರ ಸಿಂಹಾಸನ; ಭೂಮಿಯ ಮೇಲೆ ಆಣೆಯಿಡಬೇಡಿ, ಅದು ದೇವರ ಪಾದಪೀಠ; ಜೆರುಸಲೇಮಿನ ಮೇಲೆ ಆಣೆಯಿಡಬೇಡಿ, ಅದು ರಾಜಾಧಿರಾಜನ ಪಟ್ಟಣ; ನಿಮ್ಮ ತಲೆಯ ಮೇಲೂ ಆಣೆಯಿಡ ಬೇಡಿ; ಹಾಗೆ ಆಣೆಯನಿಟ್ಟು ಅದರ ಒಂದು ಕೂದಲನ್ನಾದರು ಬೆಳ್ಳಗೆ ಅಥವ ಕಪ್ಪಗೆ ಮಾಡಲು ನಿಮ್ಮಿಂದಾಗದು. ಹೌದಾದರೆ ಹೌದೆನ್ನಿ, ಅಲ್ಲವಾದರೆ ಅಲ್ಲವೆನ್ನಿ; ಇದಕ್ಕಿಂತ ಮಿಗಿಲಾದದ್ದು ಪಿಶಾಚಿಯಿಂದ ಪ್ರೇರಿತವಾದುದು. 

29.08.2026 - ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು

  ಸಂತ ಸ್ನಾನಿಕ ಯೊವಾನ್ನನ ಶಿರಚ್ಛೇದನ ಮೊದಲನೇ ವಾಚನ: ಯೆರೆಮಿಯ: 1: 17-19 ಆದುದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲ...