ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

13.11.24 - "ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,” ಎಂದರು.

ಮೊದಲನೇ ವಾಚನ: ತೀತನಿಗೆ 3:1-7


ಆಳುವವರಿಗೂ ಅಧಿಕಾರಿಗಳಿಗೂ ಕ್ರೈಸ್ತವಿಶ್ವಾಸಿಗಳು ವಿಧೇಯರಾಗಿ ನಡೆದುಕೊಳ್ಳಬೇಕೆಂದು ಜ್ಞಾಪಕಪಡಿಸು. ಎಲ್ಲಾ ಸತ್ಕಾರ್ಯಗಳನ್ನು ಕೈಗೊಳ್ಳಲು ಅವರು ಸಿದ್ಧರಿರಬೇಕು. ಅವರು ಯಾರನ್ನೂ ದೂಷಿಸದೆ, ಯಾರೊಡನೆಯೂ ಜಗಳವಾಡದೆ, ಸಾಧುಗುಣದಿಂದ ಎಲ್ಲರೊಡನೆ ಸೌಜನ್ಯದಿಂದ ನಡೆದುಕೊಳ್ಳಲಿ. ಹಿಂದೆ ನಾವು ಅವಿವೇಕಿಗಳೂ ಅವಿಧೇಯರೂ ಆಗಿ ದಾರಿ ತಪ್ಪಿಹೋಗಿದ್ದೆವು. ಅನೇಕ ಪ್ರಲೋಭನೆಗಳಿಗೂ ದುರಿಚ್ಛೆಗಳಿಗೂ ಗುಲಾಮರಾಗಿದ್ದೆವು. ದುಷ್ಟತನ ಹಾಗೂ ಮತ್ಸರಗಳಲ್ಲಿ ಕಾಲ ಕಳೆಯುತ್ತಾ ಅಸಹ್ಯರೂ ಪರಸ್ಪರ ದ್ವೇಷಿಗಳೂ ಆಗಿದ್ದೆವು. ಹೀಗಿರುವಾಗ, ಜಗದ್ರಕ್ಷಕರಾದ ದೇವರ ದಯೆಯೂ ಅವರ ಜನಪ್ರೇಮವೂ ಪ್ರಕಟವಾದವು.ಆಗ ಅವರೇ ನಮ್ಮನ್ನು ಉದ್ಧರಿಸಿದರು. ನಮ್ಮ ಸ್ವಂತ ಪುಣ್ಯಕಾರ್ಯಗಳು ನಮಗೆ ಈ ಉದ್ಧಾರವನ್ನು ತರಲಿಲ್ಲ. ಪುನರ್ಜನ್ಮವನ್ನು ಸೂಚಿಸುವ ಸ್ನಾನ ಹಾಗೂ ನೂತನ ಜೀವವನ್ನೀಯುವ ಪವಿತ್ರಾತ್ಮ ಈ ಮೂಲಕ ಅವರೇ ನಮ್ಮನ್ನು ಕರುಣೆಯಿಂದ ಉದ್ಧಾರಮಾಡಿದರು. ಪವಿತ್ರಾತ್ಮರನ್ನು ನಮ್ಮ ಉದ್ಧಾರಕ ಯೇಸುಕ್ರಿಸ್ತರ ಮುಖಾಂತರ ದೇವರು ನಮಗೆ ಧಾರಾಳವಾಗಿ ಅನುಗ್ರಹಿಸಿದ್ದಾರೆ. ಹೀಗೆ ದೈವಾನುಗ್ರಹದಿಂದ ನಾವು ದೇವರೊಡನೆ ಸತ್ಸಂಬಂಧವನ್ನು ಹೊಂದಿದೆವು. ನಿತ್ಯಜೀವದ ಭರವಸೆಯನ್ನು ಪಡೆದು ಆ ಜೀವಕ್ಕೆ ಬಾಧ್ಯಸ್ಥರಾದೆವು. ಇದು ಸತ್ಯವಾದ ಮಾತು. 

ಕೀರ್ತನೆ: 23:1-3, 3-4, 5, 6
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ, ಕುಂದುಕೊರತೆಗಳೆಲ್ಲಿಯವು ಎನಗೆ? 

ಶುಭಸಂದೇಶ: ಲೂಕ 17:11-19


“ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, ‘ಬಾ, ನನ್ನೊಂದಿಗೆ ಊಟಮಾಡು,’ ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ. ಅದಕ್ಕೆ ಬದಲಾಗಿ ‘ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರಮಾಡು. ಅನಂತರ ನೀನು ಊಟಮಾಡುವೆಯಂತೆ,’ ಎಂದು ಹೇಳುತ್ತಾರಲ್ಲವೇ? ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ. ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,” ಎಂದರು.

12.11.24 - "ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,”

 ಮೊದಲನೇ ವಾಚನ: ತೀತನಿಗೆ 2:1-8, 11-14

ಪ್ರಿಯನೇ, ನೀನಾದರೋ ಸದ್ಬೋಧನೆಗೆ ತಕ್ಕಂತೆ ಉಪದೇಶಮಾಡು. ಮದ್ಯಾಸಕ್ತಿ ಇಲ್ಲದೆಯೂ ಗೌರವಾಸಕ್ತರಾಗಿಯೂ ಆತ್ಮಸಂಯಮಿಗಳಾಗಿಯೂ ಇರಬೇಕೆಂದು ವೃದ್ಧರಿಗೆ ಬೋಧಿಸು. ವಿಶ್ವಾಸ, ಪ್ರೀತಿ ಮತ್ತು ತಾಳ್ಮೆ ಅವರ ಮುಖ್ಯ ಗುಣಗಳಾಗಿರಬೇಕು. ಅಂತೆಯೇ, ವೃದ್ಧ ಸ್ತ್ರೀಯರು ಸಭ್ಯರಾಗಿ ವರ್ತಿಸಬೇಕು, ಅವರು ಚಾಡಿಹೇಳಬಾರದು; ಮದ್ಯಾಸಕ್ತರಾಗಿರಬಾರದು; ಸದ್ಬೋಧಕಿಯರಾಗಿರಬೇಕೆಂದು ವಿಧಿಸು. ಅವರು ನವಗೃಹಿಣಿಯರಿಗೆ, ತಮ್ಮ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸುವಂತೆ ಬುದ್ಧಿ ಹೇಳಬೇಕು. ಗೃಹಿಣಿಯರು, ವಿವೇಕ ಬುದ್ಧಿಯುಳ್ಳವರು, ಪತಿವ್ರತೆಯರು, ಗೃಹಕೃತ್ಯಗಳನ್ನು ಗಮನಿಸುವವರು, ಸುಶೀಲೆಯರು, ಗಂಡಂದಿರಿಗೆ ವಿಧೇಯರು ಆಗಿ ಬಾಳುವುದನ್ನು ವೃದ್ಧಸ್ತ್ರೀಯರಿಂದ ಕಲಿತುಕೊಳ್ಳಲಿ. ಹೀಗೆ, ದೇವರ ವಾಕ್ಯಕ್ಕೆ ಯಾವ ಅಪವಾದವೂ ಬಾರದಂತೆ ಅವರು ನಡೆದುಕೊಳ್ಳಲಿ. ಹಾಗೆಯೇ, ಯುವಕರು ಎಲ್ಲ ವಿಷಯಗಳಲ್ಲೂ ಜಿತೇಂದ್ರಿಯರಾಗಿರಬೇಕೆಂದು ನೀನು ಎಚ್ಚರಿಸು. ಸತ್ಕಾರ್ಯಗಳನ್ನು ಮಾಡುವುದರಲ್ಲಿ ನೀನೇ ಮಾದರಿಯಾಗಿರಬೇಕು ಎಂಬುದನ್ನು ಮರೆಯಬೇಡ. ನಿನ್ನ ಬೋಧನೆ ಯಥಾರ್ಥವೂ ಗಂಭೀರವೂ ಕಳಂಕರಹಿತವೂ ಆಗಿರಲಿ. ಆಗ ನಮ್ಮ ವಿರೋಧಿಗಳು ನಮ್ಮಲ್ಲಿ ತಪ್ಪು ಕಂಡುಹಿಡಿಯಲಾಗದೆ ತಾವೇ ಅಪಮಾನಿತರಾಗುತ್ತಾರೆ. ಎಲ್ಲಾ ಮಾನವರ ಜೀವೋದ್ಧಾರಕ್ಕಾಗಿಯೇ ದೇವರ ಅನುಗ್ರಹವು ಪ್ರಕಟವಾಗಿದೆ. ನಾವು ಭಕ್ತಿಹೀನ ನಡತೆಯನ್ನೂ ಪ್ರಾಪಂಚಿಕ ವ್ಯಾಮೋಹಗಳನ್ನೂ ವಿಸರ್ಜಿಸಿ, ಈ ಲೋಕದಲ್ಲಿ ವಿವೇಕಿಗಳಾಗಿಯೂ ಪ್ರಾಮಾಣಿಕರಾಗಿಯೂ ಭಕ್ತರಾಗಿಯೂ ಜೀವಿಸಬೇಕೆಂದು ಅದು ನಮಗೆ ಬೋಧಿಸುತ್ತದೆ. ಅಲ್ಲದೆ, ಮಹೋನ್ನತ ದೇವರು ಮತ್ತು ನಮ್ಮ ಉದ್ಧಾರಕ ಯೇಸುಕ್ರಿಸ್ತರು ಮಹಿಮಾರೂಪದಲ್ಲಿ ನಮಗೆ ಪ್ರತ್ಯಕ್ಷವಾಗುವ ಸೌಭಾಗ್ಯವನ್ನು ನಾವು ಎದುರುನೋಡಬೇಕೆಂದು ಅದು ಕಲಿಸುತ್ತದೆ. ಯೇಸುಕ್ರಿಸ್ತರು ನಮ್ಮನ್ನು ಸಕಲ ಅಪರಾಧಗಳಿಂದ ವಿಮೋಚಿಸಿ, ಪರಿಶುದ್ಧರನ್ನಾಗಿಸಿ, ಸತ್ಕಾರ್ಯಗಳಲ್ಲಿ ಆಸಕ್ತರಾದ ಒಂದು ಜನಾಂಗವನ್ನಾಗಿ ಮಾಡಿದರು. ನಮ್ಮನ್ನು ತಮ್ಮ ಸ್ವಂತದವರನ್ನಾಗಿಸಿಕೊಳ್ಳಲೆಂದು ತಮ್ಮನ್ನೇ ನಮಗಾಗಿ ಸಮರ್ಪಿಸಿಕೊಟ್ಟನು.

ಕೀರ್ತನೆ: 37:3-4, 18, 23, 27, 29
ಶ್ಲೋಕ: ಸಜ್ಜನರ ಜೀವೋದ್ದಾರ ಪ್ರಭುವಿನಿಂದ  

ಶುಭಸಂದೇಶ: ಲೂಕ 17:7-10


ಯೇಸುಸ್ವಾಮಿ ತಮ್ಮ ಶಿಷ್ಯರನ್ನುದ್ದೇಶಿಸಿ: “ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, ‘ಬಾ, ನನ್ನೊಂದಿಗೆ ಊಟಮಾಡು,’ ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ. ಅದಕ್ಕೆ ಬದಲಾಗಿ ‘ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರಮಾಡು. ಅನಂತರ ನೀನು ಊಟಮಾಡುವೆಯಂತೆ,’ ಎಂದು ಹೇಳುತ್ತಾರಲ್ಲವೇ? ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ. ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,” ಎಂದರು.

11.11.24 - ನಿನ್ನ ಸಹೋದರನು ತಪ್ಪು ಮಾಡಿದರೆ ಅವನನ್ನು ಖಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿಬಿಡು

ಮೊದಲನೇ ವಾಚನ: ತೀತನಿಗೆ:  1: 1-9


ಕ್ರಿಸ್ತ ವಿಶ್ವಾಸದಲ್ಲಿ ಪುತ್ರನಾಗಿರುವ ತೀತನಿಗೆ - ದೇವರ ದಾಸನೂ ಯೇಸು ಕ್ರಿಸ್ತರ ಪ್ರೇಷಿತನೂ ಆದ ಪೌಲನು ಬರೆಯುವ ಪತ್ರ. ತಂದೆಯಾದ ದೇವರೂ ನಮ್ಮ ಉದ್ದಾರಕರಾದ ಯೇಸು ಕ್ರಿಸ್ತರೂ ನಿನಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ! ದೇವರು, ತಾವು ಆರಿಸಿಕೊಂಡಿರುವ ಜನರ ವಿಶ್ವಾಸವನ್ನು ದೃಢಪಡಿಸಲು ಮತ್ತು ಭಕ್ತಿಯನ್ನು ವೃದ್ದಿಗೊಳಿಸಿ ಅಮರ ಜೀವದತ್ತ ಕರೆದೊಯ್ಯುವ ಸತ್ಯಗಳನ್ನು ಅವರಿಗೆ ಭೋಧಿಸಿಲು ನನ್ನನ್ನು ನೇಮಿಸಿದ್ದಾರೆ. ಈ ಅಮರ ಜೀವವನ್ನು ಕೊಡುವುದಾಗಿ  ಸತ್ಯಪರರಾದ ದೇವರು ಆದಿಯಿಂದಲೂ ನಮಗೆ ವಾಗ್ದಾನ ಮಾಡಿದ್ದರು. ಸೂಕ್ತ ಕಾಲವು ಬಂದಾಗ ಈ ವಾಗ್ದಾನವನ್ನು ಈಡೇರಿಸಿ ತಮ್ಮ ಸಂದೇಶವನ್ನು ಪ್ರಕಟಿಸಿದರು. ನನಗೊಪ್ಪಿಸುವ ಈ ಸಂದೇಶವನ್ನು ಜಗದ್ರಕ್ಷರಾದ ದೇವರ ಆಜ್ಞಾನುಸಾರ ನಾನು ಸಾರುತ್ತಿದ್ದೇನೆ. ನೀನು ಕ್ರೇಟ್ ದ್ವೀಪದಲ್ಲಿ ಇನ್ನೂ ಸರಿಪಡಿಸಬೇಕಾದ ಕೆಲಸಗಳನ್ನು ಕ್ರಮಪಡಿಸಿ, ಅಲ್ಲಿಯ ಪ್ರತಿಯೊಂದು ಪಟ್ಟಣಕ್ಕೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆ. ನಾನು ಕೊಟ್ಟ ಸಲಹೆಗಳನ್ನು ಜ್ನಾ ಜ್ಞಾಪಿಸಿಕೋ; ಸಭಾ ಹಿರಿಯನು ನಿಂದಾರಹಿತನು ಏಕ ಪತ್ನಿ ವೃತಸ್ಥನು ಆಗಿರಬೇಕು. ಆತನ ಮಕ್ಕಳು ವಿಶ್ವಾಸಿಗಳಾಗಿರಬೇಕು. ಅವರು ಸ್ವೇಚ್ಛಾಚಾರಿಗಳಾಗಿರಬಾರದು, ಅವಿಧೇಯರಾಗಿರಬಾರದು. ಏಕೆಂದರೆ ಸಭಾಧ್ಯಕ್ಷನು ದೇವರ ಸೇವೆಯಲ್ಲಿ ಮೇಲ್ವಿಚಾರನಾಗಿರುವುದರಿಂದ ನಿಂದಾರಹಿತನಾಗಿರಬೇಕು. ಆತನು ಗರ್ವಿ ಅಥವಾ ಮುಂಗೋಪಿ ಆಗಿರಬಾರದು. ಕುಡಿತವಾಗಲಿ, ಹಿಂಸಾಚಾರವಾಗಲಿ, ಹಿಂಸಾಪ್ರವೃತ್ತಿಯಾಗಲಿ ಅವನಲ್ಲಿರಬಾರದು. ಅವನು ಲಾಭಕೋರನಾಗಿರಬಾರದು. ಅತಿಥಿ ಸತ್ಕಾರ ಮಾಡುವವನು ಒಳ್ಳೆಯದನ್ನು ಪ್ರೀತಿಸುವವನು ಆಗಿರಬೇಕು. ಇಂಥವನು ಸ್ವಸ್ಥ ಚಿತ್ತನೂ ನೀತಿವಂತನೂ ಸದ್ಭಕ್ತನೂ ಆತ್ಮಸಂಯಮವುಳ್ಳವನೂ ಆಗಿರಬೇಕು. ವಿಶ್ವಾಸಿಸಲು ಯೋಗ್ಯವಾದ ಹಾಗೂ ಕ್ರೈಸ್ತ ತತ್ವಗಳಿಗೆ ಅನುಗುಣವಾದ ಸಿದ್ದಾಂತಗಳನ್ನು ಅವನು ಭದ್ರವಾಗಿ ಹಿಡಿದವನಾಗಿರಬೇಕು. ಆಗ ಸದ್ಬೋಧನೆಯಿಂದ ಇತರರನ್ನು ಪ್ರೋತ್ಸಾಹಿಸುವುದಕ್ಕು ಅದಕ್ಕೆ ವ್ಯತಿರಿಕ್ತವಾಗಿ ನೆಡೆಯುವವರ ತಪ್ಪುಗಳನ್ನು ಎತ್ತಿತೋರಿಸುವುದಕ್ಕು ಆತನು ಸಮರ್ಥನಾಗುತ್ತಾನೆ.

ಕೀರ್ತನೆ: 24: 1ಬಿ-2, 3-4ಎಬಿ, 5-6
ಶ್ಲೋಕ: ಇಂಥವರೇ ದೇವರ ದರ್ಶಾನಾಭ್ಯರ್ಥಿಗಳು.

ಶುಭಸಂದೇಶ: ಲೂಕ: 17: 1-6


ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ಪಾಪಪ್ರಚೋದನೆಗಳು ಬಂದೇಬರುತ್ತವೆ. ಆದರೆ ಅವು ಯಾರಿಂದ ಬರುತ್ತವೋ ಅವನಿಗೆ ಧಿಕ್ಕಾರ! ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ಕಾರಣನಾಗುಚುದಕ್ಕಿಂತ, ಬೀಸುವ ಕಲ್ಲನ್ನು ಕುತ್ತಿಗೆಗೆ ಬಿಗಿಸಿಕೊಂಡು ಸಮುದ್ರದಲ್ಲಿ ದಬ್ಬಿಸಿಕೊಳ್ಳುವುದೇ ಲೇಸು. ನೀವಾದರೋ ಎಚ್ಚರಿಕೆಯಿಂದಿರಿ!" "ನಿನ್ನ ಸಹೋದರನು ತಪ್ಪು ಮಾಡಿದರೆ ಅವನನ್ನು ಖಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿಬಿಡು. ಅವನು ದಿನಕ್ಕೆ ಏಳು ಸಾರಿ ನಿನಗೆ ವಿರುದ್ದ ತಪ್ಪು ಮಾಡಿ ಪ್ರತಿಯೊಂದು ಸಾರಿಯೂ ಪಶ್ಚಾತ್ತಾಪಪಟ್ಟು ನಿನ್ನ ಬಳಿಗೆ ಬಂದು, ’ಕ್ಷಮಿಸು,’ ಎಂದು ಕೇಳಿಕೊಂಡರೆ ನೀನು ಅವನನ್ನು ಕ್ಷಮಿಸಲೇಬೇಕು," ಎಂದರು. "ಸ್ವಾಮೀ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ" ಎಂದು ಪ್ರೇಷಿತರು ಕೇಳಿಕೊಂಡರು. ಆಗ ಯೇಸುಸ್ವಾಮಿ, "ಸಾಸಿವೆ ಕಾಳಿನಷ್ಟು ವಿಶ್ವಾಸ ನಿಮ್ಮಲ್ಲಿದ್ದು, ನೀವು ಈ ಅತ್ತಿಮರಕ್ಕೆ, ’ನೀನು ಬೇರು ಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೋ.’ ಎಂದು ಆಜ್ಞಾಪಿಸಿದ್ದೇ ಆದರೆ ಅದು ನಿಮಗೆ ವಿಧೇಯವಾಗಿ ನಡೆದುಕೊಳ್ಳುವುದು," ಎಂದರು.

10.11.24

ಮೊದಲನೆಯ ವಾಚನ: 1 ಅರಸ 17:10-16

ಎಲೀಯನು ಅಲ್ಲಿಂದ ಹೊರಟು ಸರೆಪ್ತಾದ ಊರು ಬಾಗಿಲಿನ ಸಮೀಪಕ್ಕೆ ಬಂದನು. ಸೌದೆ ಕೂಡಿಸುತ್ತಿದ್ದ ಒಬ್ಬ ವಿಧವೆಯನ್ನು ಕಂಡು ಆಕೆಯನ್ನು ಕರೆದು, " ದಯವಿಟ್ಟು ಕುಡಿಯುವುದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ, " ಎಂದು ಹೇಳಿದನು. ಆಕೆ ಹೋಗುತ್ತಿರುವಾಗ ಮತ್ತೆ ಆಕೆಯನ್ನು ಕರೆದು, " ನೀನು ಬರುವಾಗ ನನಗೆ ಒಂದು ತುಂಡು ರೊಟ್ಟಿಯನ್ನು ಸಹ ತೆಗೆದುಕೊಂಡು ಬಾ, " ಎಂದನು. ಆಕೆ, " ನಿನ್ನ ದೇವರಾದ ಸರ್ವೇಶ್ವರನಾಣೆ, ನನ್ನ ಹತ್ತಿರ ರೊಟ್ಟಿಯಿಲ್ಲ. ಮಡಕೆಯಲ್ಲಿ ಒಂದು ಹಿಡಿ ಹಿಟ್ಟು, ಕುಡಿಕೆಯಲ್ಲಿ ಸ್ವಲ್ಪ ಎಣ್ಣೆ, ಇವುಗಳ ಹೊರತು ಬೇರೇನೂ ಇಲ್ಲ. ಈಗ ಸೌದೆ ಆಯ್ದುಕೊಂಡು ಹೋಗಿ ನನಗೂ ನನ್ನ ಮಗನಿಗೂ ರೊಟ್ಟಿ ಮಾಡುತ್ತೇನೆ. ಅದನ್ನು ತಿಂದ ಮೇಲೆ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ, " ಎಂದು ಉತ್ತರಕೊಟ್ಟಳು. ಆಗ ಎಲೀಯನು, " ಹೆದರಬೇಡ, ನೀನು ಹೇಳಿದಂತೆ ಮಾಡು, ಆದರೆ ಮೊದಲು ಅದರಿಂದ ನನಗೆ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ, ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. ಇಸ್ರಯೇಲ್ ದೇವರಾದ ಸರ್ವೇಶ್ವರ ನಿನಗೆ, " ನಾನು ನಾಡಿಗೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವುದಿಲ್ಲ, ಕುಡಿಕೆಯಲ್ಲಿರುವ ಎಣ್ಣೆ ಮುಗಿದು ಹೋಗುವುದಿಲ್ಲ, " ಎಂದು ಹೇಳುತ್ತಾರೆ ಎಂದನು. ಆಕೆ ಹೋಗಿ ಅವನು ಹೇಳಿದಂತೆಯೇ ಮಾಡಿದಳು. ಆಕೆಯೂ ಆಕೆಯ ಮನೆಯವರೂ ಎಲೀಯನೂ ಅದನ್ನು ಅನೇಕ ದಿವಸಗಳವರೆಗೆ ಊಟಮಾಡಿದರು. ಸರ್ವೇಶ್ವರ ಎಲೀಯನ ಮುಖಾಂತರ ಹೇಳಿದಂತೆ ಮಡಕೆಯಲ್ಲಿದ್ದ ಹಿಟ್ಟು ತೀರಲಿಲ್ಲ, ಕುಡಿಕೆಯಲ್ಲಿದ್ದ ಎಣ್ಣೆ ಮುಗಿದು ಹೋಗಲಿಲ್ಲ.

ಕೀರ್ತನೆ 146:6-10
ಶ್ಲೋಕ: ಮನವೇ, ವಂದಿಸು ಪ್ರಭುವನು.

ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೇ|
ದೊರಕಿಸುವನು ನ್ಯಾಯ ದಲಿತರಿಗೆ||
ಒದಗಿಸುವನು ಆಹಾರ ಹಸಿದವರಿಗೆ|
ನೀಡುವನು ಬಿಡುಗಡೆ ಬಂಧಿತರಿಗೆ||

ಕಣ್ಣನೀಯುವನು ಪ್ರಭು ಕುರುಡರಿಗೆ|
ಉದ್ಧಾರಕನಾ ಪ್ರಭು ಕುಗ್ಗಿದವರಿಗೆ||
ಆತನ ಒಲವಿರುವುದು ಸಾಧು ಸಜ್ಜನರಿಗೆ|
ರಕ್ಷಣೆಯನೀಯುವನು ಪ್ರಭು ಪರದೇಶಿಗಳಿಗೆ||

ಆದರಿಸುವನು ಅನಾಥರನು, ವಿಧವೆಯರನು|
ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು||
ಪ್ರಭುವೇ ಅರಸನು ಸದಾಕಾಲಕು|
ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು||

ಎರಡನೆಯ ವಾಚನ: ಹಿಬ್ರಿಯರಿಗೆ 9:24-28

ಸಹೋದರರೇ, ಕ್ರಿಸ್ತ ಯೇಸು ಪ್ರವೇಶಿಸಿದ್ದು ದೇವಾಲಯದ ಛಾಯೆಯಂತಿರುವ ಮಾನವನಿರ್ಮಿತ ಗರ್ಭಗುಡಿಯನ್ನಲ್ಲ, ನಮ್ಮ ಪರವಾಗಿ ದೇವರ ಸಮ್ಮುಖದಲ್ಲಿ ಉಪಸ್ಥಿತರಾಗಲು ಸಾಕ್ಷಾತ್ ಸರ್ಗವನ್ನೇ ಅವರು ಪ್ರವೇಶಿಸಿದರು. ಪ್ರಧಾನ ಯಾಜಕನು ಪ್ರತಿವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಗರ್ಭಗುಡಿಯನ್ನು ಪ್ರವೇಶಿಸುವಂತೆ ಯೇಸು ಪ್ರವೇಶಿಸಲಿಲ್ಲ. ಅವರು ಸ್ವರ್ಗವನ್ನು ಪ್ರವೇಶಿಸಿದ್ದು ಪದೇಪದೇ ತಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕೂ ಅಲ್ಲ. ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಲೋಕಾದಿಯಿಂದಲೂ ಅವರು ಅನೇಕ ಸಾರಿ ಮರಣಯಾತನೆಯನ್ನು ಅನುಭವಿಸಬೇಕಾಗಿ ಬರುತ್ತಿತ್ತು, ಅದಕ್ಕೆ ಬದಲಾಗಿ ಯುಗಾಂತ್ಯವಾದ ಈ ಕಾಲದಲ್ಲಿ, ಪಾಪ ನಿವಾರಣೆ ಮಾಡಬೇಕೆಂಬ ಉದ್ದೇಶದಿಂದ ಒಮ್ಮೆಗೇ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಳ್ಳಲೆಂದು ಯೇಸು ಪ್ರತ್ಯಕ್ಷರಾದರು. ಪ್ರತಿಯೊಬ್ಬ ಮಾನವನು ಸಾಯುವುದು ಒಂದೇ ಸಾರಿ. ಅನಂತರ ಅವನು ನ್ಯಾಯತೀರ್ಪಿಗೆ ಗುರಿಯಾಗಬೇಕು. ಹಾಗೆಯೇ, ಎಲ್ಲಾ ಮಾನವರ ಪಾಪಗಳನ್ನು ಹೊತ್ತು ಹೋಗಲಾಡಿಸಲು ಕ್ರಿಸ್ತ ಯೇಸು ಒಮ್ಮೆಗೆ ಎಲ್ಲಾ ಕಾಲಕ್ಕೂ ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡರು. ಅವರು ಮತ್ತೆ ಪ್ರತ್ಯಕ್ಷರಾಗುವರು, ಪಾಪನಿವಾರಣೆ ಮಾಡಲೆಂದು ಅಲ್ಲ, ತಮ್ಮನ್ನು ನಂಬಿ ನಿರೀಕ್ಷಿಸಿಕೊಂಡಿರುವವರನ್ನು ಜೀವೋದ್ಧಾರ ಮಾಡಲೆಂದು.

ಶುಭಸಂದೇಶ ವಾಚನ: ಮಾರ್ಕ 12:38-44

ಆ ಕಾಲದಲ್ಲಿ ಜನಸಮೂಹವು ಸಂತಸಚಿತ್ತದಿಂದ ಯೇಸುವಿನ ಮಾತುಗಳನ್ನು ಆಲಿಸುತ್ತಿತ್ತು. ಯೇಸು ತಮ್ಮ ಉಪದೇಶವನ್ನು ಮುಂದುವರಿಸುತ್ತಾ, " ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆ ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ, ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಪ್ರಾರ್ಥನಾ ಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಔತಣ ಸಮಾರಂಭಗಳಲ್ಲಿ ಶ್ರೇಷ್ಠಸ್ಥಾನಗಳನ್ನೂ ಅಪೇಕ್ಷಿಸುತ್ತಾರೆ. ವಿಧವೆಯರ ಮನೆಮಾರುಗಳನ್ನು ದೋಚಿಕೊಳ್ಳುವ ಈ ಜನ ನಟನೆಗಾಗಿ ದೀರ್ಘವಾಗಿ ಜಪತಪಗಳನ್ನು ಮಾಡುತ್ತಾರೆ. ಇವರನ್ನು ದೇವರು ಬಹಳ ಕಠಿಣವಾದ ದಂಡನೆಗೆ ಗುರಿಪಡಿಸುವರು, " ಎಂದರು. ಯೇಸು ದೇವಾಲಯದಲ್ಲಿ ಕಾಣಿಕೆಪೆಟ್ಟಿಗೆಗಳಿಗೆ ಎದುರಾಗಿ ಕುಳಿತಿದ್ದರು. ಜನರು ಅದರಲ್ಲಿ ಹಣಹಾಕುವ ರೀತಿ ಅವರ ಕಣ್ಣಿಗೆ ಬಿತ್ತು. ಧನವಂತರನೇಕರು ಹೆಚ್ಚು ಹೆಚ್ಚು ಹಣವನ್ನು ಹಾಕುತ್ತಿದ್ದರು. ಅಷ್ಟರಲ್ಲಿ ಬಡ ವಿಧವೆಯೊಬ್ಬಳು ಅಲ್ಲಿಗೆ ಬಂದಳು. ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು. ಆಗ ಯೇಸು ತಮ್ಮ ಶಿಷ್ಯರನ್ನು ಕರೆದು, " ಕಾಣಿಕೆಪೆಟ್ಟಿಗೆಯಲ್ಲಿ ಹಣಹಾಕಿದ ಎಲ್ಲರಿಗಿಂತಲೂ ಈ ವಿಧವೆ ಹೆಚ್ಚಾಗಿ ಅರ್ಪಿಸಿದಳು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಇವರೆಲ್ಲರೂ ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು. ಈಕೆಯಾದರೋ ತನ್ನ ಕಡುಬಡತನದಲ್ಲೂ ತನ್ನಲ್ಲಿ ಇದ್ದುದೆಲ್ಲವನ್ನು ಅರ್ಪಿಸಿದಳು. ತನ್ನ ಜೀವನಾಧಾರವನ್ನೇ ಕೊಟ್ಟುಬಿಟ್ಟಳು, " ಎಂದರು.

09.11.24 - “ಈ ದೇವಾಲಯವನ್ನು ಕೆಡವಿಬಿಡಿ, ಮೂರು ದಿನದಲ್ಲಿ ಅದನ್ನು ಪುನಃ ಎಬ್ಬಿಸುವೆನು,”

ಮೊದಲನೇ ವಾಚನ: ಯೆಜೆಕಿಯೇಲಾ 47:1-2, 8-9, 12

ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದುತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು. ಆಗ ಅವನು ನನಗೆ ಹೀಗೆ ಹೇಳಿದನು: “ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು; ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲವಿಧ ಜಲ ಜಂತುಗಳು ಬದುಕಿ ಬಾಳುವುವು; ವಿೂನುಗಳು ತಂಡೋಪ ತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರೂ ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.”

ಕೀರ್ತನೆ: 46:3,4, 5-6, 8, 11
ಶ್ಲೋಕ: ನದಿಯೊಂದು ಆನಂದಗೊಳಿಸುವುದು ದೇವನಗರವನು ಪುನೀತಗೊಳಿಸುವುದು ಪರಾತ್ಪರನಾ ನಿವಾಸವನು 

ಎರಡನೇ ವಾಚನ: 1 ಕೊರಿಂಥಿಯಾಯರಿಗೆ 3:9-11, 16-17


ಸಹೋದರರೇ, ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿ ಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ. ದೇವರು ನನಗಿತ್ತ ವರದಾನಗಳಿಗೆ ಅನುಸಾರವಾಗಿ ನಾನು ಚತುರ ಶಿಲ್ಪಿಯಂತೆ ಅಸ್ತಿವಾರ ಹಾಕಿದೆ. ಇನ್ನೊಬ್ಬನು ಅದರ ಮೇಲೆ ಕಟ್ಟುತ್ತಿದ್ದಾನೆ. ಆದರೆ ಕಟ್ಟುವ ಪ್ರತಿಯೊಬ್ಬನು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಲಿ. ಈಗಾಗಲೇ ಅಸ್ತಿವಾರ ಹಾಕಲಾಗಿದೆ. ಯೇಸುಕ್ರಿಸ್ತರೇ ಆ ಅಸ್ತಿವಾರ. ಇದಲ್ಲದೆ, ಬೇರೆ ಅಸ್ತಿವಾರವನ್ನು ಯಾರೂ ಹಾಕಲಾಗದು. ನೀವು ದೇವರ ಆಲಯವಾಗಿದ್ದೀರಿ. ದೇವರ ಆತ್ಮವು ನಿಮ್ಮಲ್ಲಿ ವಾಸಿಸುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಯಾವನಾದರೂ ದೇವಾಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುತ್ತಾರೆ. ದೇವರ ಆಲಯವು ಪವಿತ್ರವಾದುದು. ನೀವೇ ಆ ಆಲಯ.

ಶುಭಸಂದೇಶ: ಯೋವಾನ್ನ 2:13-22

ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿದ್ದುದರಿಂದ ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲಿಯ ಮಹಾದೇವಾಲಯದಲ್ಲಿ ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುವವರು ಮತ್ತು ನಾಣ್ಯವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತಿದ್ದರು. ಅದನ್ನು ಕಂಡ ಯೇಸು, ಹಗ್ಗವನ್ನು ಚಾವಟಿಯಂತೆ ಹೆಣೆದು ಅದರಿಂದ ಅವರನ್ನೆಲ್ಲಾ ದೇವಾಲಯದಿಂದ ಹೊರಗಟ್ಟಿದರು. ದನಕುರಿಗಳನ್ನು ಓಡಿಸಿದರು. ನಾಣ್ಯವಿನಿಮಯ ಮಾಡುವವರ ಮೇಜುಗಳನ್ನು ಕೆಡವಿ, ಚಿಲ್ಲರೆ ಹಣವನ್ನು ಚೆಲ್ಲಿದರು. ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವನ್ನು ಇಲ್ಲಿಂದ ತೆಗೆದುಕೊಂಡು ಹೊರಡಿ. ನನ್ನ ಪಿತನ ಆಲಯವನ್ನು ಸಂತೆಯನ್ನಾಗಿ ಮಾಡಬೇಡಿ,” ಎಂದು ಹೇಳಿದರು. ‘ನಿನ್ನ ಆಲಯದ ಮೇಲಿನ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,’ ಎಂದು ಪವಿತ್ರಗ್ರಂಥದಲ್ಲೇ ಬರೆದಿರುವ ವಾಕ್ಯವು ಶಿಷ್ಯರಿಗೆ ಆಗ ನೆನಪಾಯಿತು. ಯೆಹೂದ್ಯರು, “ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತು ಪಡಿಸುವುದಕ್ಕೆ ಯಾವ ಪವಾಡವನ್ನು ಮಾಡಿ ತೋರಿಸಬಲ್ಲೆ?” ಎಂದು ಯೇಸುವನ್ನು ಪ್ರಶ್ನಿಸಿದರು. ಅದಕ್ಕೆ ಯೇಸು, “ಈ ದೇವಾಲಯವನ್ನು ಕೆಡವಿಬಿಡಿ, ಮೂರು ದಿನದಲ್ಲಿ ಅದನ್ನು ಪುನಃ ಎಬ್ಬಿಸುವೆನು,” ಎಂದು ಉತ್ತರಕೊಟ್ಟರು. ಚಕಿತರಾದ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ನಲವತ್ತಾರು ವರ್ಷಗಳು ಹಿಡಿದಿವೆ. ನೀನು ಮೂರು ದಿನಗಳಲ್ಲೇ ಅದನ್ನು ಎಬ್ಬಿಸಬಲ್ಲೆಯಾ?” ಎಂದು ಕೇಳಿದರು. ಯೇಸು ಹೇಳಿದ್ದು ತಮ್ಮ ದೇಹವೆಂಬ ದೇಗುಲವನ್ನು ಕುರಿತು. ಅವರು ಸತ್ತು ಪುನರುತ್ಥಾನ ಹೊಂದಿದ ಬಳಿಕ ಶಿಷ್ಯರು ಅವರ ಈ ಮಾತುಗಳನ್ನು ಸ್ಮರಿಸಿಕೊಂಡರು. ಪವಿತ್ರಗ್ರಂಥದಲ್ಲೂ ಯೇಸುವಿನ ಮಾತಿನಲ್ಲೂ ಅವರಿಗೆ ಆಗ ವಿಶ್ವಾಸ ಹುಟ್ಟಿತು.

08.11.24

ಮೊದಲನೆಯ ವಾಚನ: ಪೌಲನು ಫಿಲಿಪ್ಪಿಯರಿಗೆ ಬರೆದ ಪತ್ರದಿಂದ ವಾಚನ 3:17--4:1

ಸಹೋದರರೇ, ನೀವು ನನ್ನನ್ನು ಅನುಸರಿಸಿರಿ. ನಮ್ಮಂತೆ ಆದರ್ಶಜೀವನ ನಡೆಸುವವರನ್ನು ಅನುಸರಿಸಿ ಬಾಳಿರಿ. ಕ್ರಿಸ್ತ ಯೇಸುವಿನ ಶಿಲುಬೆಗೆ ವಿರೋಧವಾಗಿ ನಡೆಯುವವರು ಆನೇಕರಿದ್ದಾರೆ. ಇದನ್ಯು ನಾನು ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಅತೀವ ದುಃಖದಿಂದ ಹೇಳುತ್ತಿದ್ದೇನೆ. ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕಾರ್ಯಗಳಲ್ಲಿಯೇ ಅವರಿಗೆ ಹೆಮ್ಮೆ, ನಶ್ವರವಾದ ವಿಷಯಗಳಲ್ಲಿಯೇ ಅವರಿಗೆ ವ್ಯಾಮೋಹ. ಹೀಗಾಗಿ, ವಿನಾಶವೇ ಅವರ ಅಂತ್ಯ. ನಾವಾದರೋ ಸ್ವರ್ಗಸಾಮ್ರಾಜ್ಯದ ಪ್ರಜೆಗಳು. ಉದ್ಧಾರಕರಾದ ಪ್ರಭು ಯೇಸುಕ್ರಿಸ್ತರು ಪುನರಾಗಮಿಸುವುದು ಅಲ್ಲಿಂದಲೇ ಎಂದು ಎದುರುನೋಡುತ್ತಿದ್ದೇವೆ. ಅವರು ಸಮಸ್ತವನ್ನು ಸ್ವಾಧೀನಪಡಿಸಿಕೊಳ್ಳುವರು; ನಶ್ವರವಾದ ನಮ್ಮ ದೀನ ದೇಹಗಳನ್ನು ತಮ್ಮ ಶಕ್ತಿಯಿಂದ ರೂಪಾಂತರಗೊಳಿಸಿ ತಮ್ಮ ತೇಜೋಮಯ ಶರೀರದಂತೆ ಮಾಡುವರು. ಹೀಗಿರಲಾಗಿ ಒಲವಿನ ಸಹೋದರರೇ, ನನ್ನ ಅತಿ ಪ್ರಿಯರೇ, ಆಪ್ತರೇ, ನನ್ನ ಮುದುವೂ ಮುಕುಟವೂ ಆದವರೇ, ಪ್ರಭುವಿನಲ್ಲಿ ದೃಢ ವಿಶ್ವಾಸಿಗಳಾಗಿ ಬಾಳಿರಿ.

ಕೀರ್ತನೆ 122:1-5
ಶ್ಲೋಕ: ಪ್ರಭುವಿನಾಲಯಕೆ ಹೋಗೋಣ ಬಾ ಎಂದು ಜನರೆನ್ನ ಕರೆದಾಗ ಆಯಿತೆನಗೆ ಆನಂದ|

ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ|
ಆಯಿತೆನಗೆ ಆನಂದ ಜನರೆನ್ನ ಕರೆದಾಗ||
ನಮ್ಮ ಕಾಲುಗಳು ಓ ಜೆರುಸಲೇಮೇ|
ತಲುಪಿವೆ ನಿನ್ನ ಪುರದ್ವಾರಗಳನೇ||

ನೋಡು ಜೆರುಸಲೇಮ್ ಪಟ್ಟಣವಿದು|
ಗಟ್ಟಿಯಾಗಿಯೇ ಕಟ್ಟಲ್ಪಟ್ಟಿಹುದು|
ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ||

ಮಾಡುವರಿಲ್ಲಿಯೇ ಪ್ರಭುವಿನ ನಾಮ ಕೀರ್ತನೆ|
ಪಾಲಿಪರಿಂತು ಇಸ್ರಯೇಲರಿಗೆ ವಿಧಿಸಿದಾಜ್ಞೆ||
ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು|
ದಾವೀದನ ಮನೆತನದವರ ಸಿಂಹಾಸನಗಳು||

ಶುಭಸಂದೇಶ ವಾಚನ: ಲೂಕ 16:1-8

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರನ್ನು ಉದ್ದೇಶಿಸಿ ಇಂತೆಂದರು: " ಒಬ್ಬ ಧನಿಕನಿದ್ದ, ಅವನ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯಿದ್ದ. ಇವನು ಧನಿಕನ ಆಸ್ತಿಯನ್ನು ಹಾಳುಮಾಡುತ್ತಿದ್ದಾನೆಂದು ದೂರು ಬಂದಿತು. ಧನಿಕನು ಅವನನ್ನು ಕರೆದು, ' ಏನಿದು, ನಿನ್ನ ವಿಷಯವಾಗಿ ನಾನು ಹೀಗೆಲ್ಲ ಕೇಳುತ್ತಾ ಇದ್ದೇನೆ? ನಿನ್ನ ಕೆಲಸದ ಲೆಕ್ಕಾಚಾರವನ್ನು ಒಪ್ಪಿಸಿಬಿಡು. ಇನ್ನು ನೀನು ಮೇಸ್ತ್ರಿ ಆಗಿರಲು ಆಗದು, ' ಎಂದ. ಆಗ ಆ ಮೇಸ್ತ್ರಿ, 'ಈಗ ಏನು ಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದು ಬಿಡುತ್ತಾನಲ್ಲಾ ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ, 'ಎಂದು ಚಿಂತಾಕ್ರಾಂತನಾದ. ಮರುಕ್ಷಣ, 'ಸರಿ, ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ, ಜನರು ನನ್ನನ್ನು ತಮ್ಮ ಮನೆಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ಈಗ ಗೊತ್ತಾಯಿತು, ' ಎಂದುಕೊಂಡ. ಯಜಮಾನನ ಸಾಲಗಾರರನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಂಡು, 'ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲ ಎಷ್ಟು? 'ಎಂದು ಮೊದಲನೆಯವನನ್ನು ಕೇಳಿದ. ಅವನು, 'ನೂರು ಬುದ್ದಲಿ ಎಣ್ಣೆ, 'ಎಂದ. ಅದಕ್ಕೆ ಮೇಸ್ತ್ರಿ, 'ಇಗೋ, ನಿನ್ನ ಪತ್ರ, ಕುಳಿತುಕೊಂಡು " ಐವತ್ತು " ಎಂದು ಬೇಗನೆ ಬರೆ, 'ಎಂದ. ಬಳಿಕ ಇನ್ನೊಬ್ಬನನ್ನು ಕರೆದು, 'ನೀನೆಷ್ಟು ಸಾಲ ತೀರಿಸಬೇಕು? ' ಎಂದು ಕೇಳಿದ. ಅವನು ' ನೂರು ಖಂಡುಗ ಗೋದಿ ' ಎಂದಾಗ, 'ಇಗೋ, ನಿನ್ನ ಪತ್ರ, " ಎಂಭತ್ತು, " ಎಂದು ಬರೆ ' 'ಎಂದ. ಈ ಅಪ್ರಾಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಶಿಸಿದ. ಏಕೆಂದರೆ, ತಮ್ಮ ತಮ್ಮ ವ್ಯವಹಾರಗಳಲ್ಲಿ ಲೌಕಿಕ ಜನರು ಬೆಳಕಿನ ರಾಜ್ಯದ ಜನರಿಗಿಂತ ಜಾಣರು."

07.11.24 - ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ,

ಮೊದಲನೇ ವಾಚನ: ಫಿಲಿಪ್ಪಿಯರಿಗೆ 3:3-8


ಸಹೋದರರೇ, ನಿಜವಾದ ಸುನ್ನತಿ ಪಡೆದವರು ನಾವು, ಏಕೆಂದರೆ, ನಾವು ಪವಿತ್ರಾತ್ಮ ಅವರ ಪ್ರೇರಣೆಯಿಂದ ದೇವರನ್ನು ಆರಾಧಿಸುತ್ತೇವೆ. ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ಹರ್ಷಿಸುತ್ತೇವೆ. ಬಾಹ್ಯಾಚರಣೆಗಳಲ್ಲೇ ನಂಬಿಕೆಯಿಡದೆ ಬಾಳುತ್ತೇವೆ. ಇಂಥ ಬಾಹ್ಯಾಚರಣೆಯಲ್ಲಿ ನಂಬಿಕೆ ಇಡಲು ತಮಗೆ ಹಕ್ಕು ಇದೆಯೆಂದು ಯಾರಾದರೂ ಭಾವಿಸಿದರೆ, ನನ್ನ ಹಕ್ಕು ಅದಕ್ಕೂ ಮಿಗಿಲಾದುದು ಎಂದೇ ಹೇಳುತ್ತೇನೆ. ಹುಟ್ಟಿದ ಎಂಟನೆಯ ದಿನ ನನಗೆ ಸುನ್ನತಿಯಾಯಿತು; ಹುಟ್ಟಿನಿಂದ ನಾನು ಇಸ್ರಯೇಲನು, ಬೆನ್ಯಮೀನ ಕುಲದವನು; ಅಪ್ಪಟ ಹಿಬ್ರಿಯನು, ಧರ್ಮಶಾಸ್ತ್ರದ ದೃಷ್ಟಿಯಲ್ಲಿ ನಿಷ್ಠಾವಂತ ಫರಿಸಾಯನು; ಮತಾಶಕ್ತಿಯ ಹಿತದೃಷ್ಟಿಯಿಂದ ಧರ್ಮಸಭೆಯ ಹಿಂಸಕನು; ಧರ್ಮಶಾಸ್ತ್ರ ವಿಧಿನಿಯಮಗಳ ಪಾಲನೆಯಲ್ಲಿ ನಿಂದಾರಹಿತನು. ಇವನ್ನೆಲ್ಲಾ ಲಾಭವೆಂದು ಪರಿಗಣಿಸಿದ್ದ ನಾನು ಈಗ ಕ್ರಿಸ್ತಯೇಸುವಿನ ಸಲುವಾಗಿ ನಷ್ಟವೆಂದೇ ಎಣಿಸುತ್ತೇನೆ. ನಿಶ್ಚಯವಾಗಿಯೂ ನನ್ನ ಪ್ರಭು ಯೇಸುಕ್ರಿಸ್ತರನ್ನು ಅರಿತುಕೊಳ್ಳುವುದೇ ಉತ್ಕೃಷ್ಟವಾದುದೆಂದು ಮನದಟ್ಟಾಗಿರುವುದರಿಂದ ಸಮಸ್ತವನ್ನೂ ವ್ಯರ್ಥವೆಂದೇ ಎಣಿಸುತ್ತೇನೆ. ಅವರನ್ನು ಲಭ್ಯವಾಗಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ತೊರೆದುಬಿಟ್ಟಿದ್ದೇನೆ, ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ. 


ಕೀರ್ತನೆ: 105:2-3, 4-5, 6-7
ಶ್ಲೋಕ: ಹಿಗ್ಗಲಿ ಹೃದಯ, ಕೋರಿ ಪ್ರಭುವಿನ ದರ್ಶನ 

ಶುಭಸಂದೇಶ: ಲೂಕ 15:1-10



ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: “ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆ ಎನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಬತ್ತೊಂಬತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. ‘ಕಳೆದುಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾನೆ, ಅಲ್ಲವೆ? “ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಬತ್ತೊಂಬತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. “ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿ ಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ? ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದುಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೇ? ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, ‘ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು; ನನ್ನೊಡನೆ ಸೇರಿ ಸಂತೋಷಪಡಿ,’ ಎನ್ನುತ್ತಾಳಲ್ಲವೆ? “ಅದೇ ಮೇರೆಗೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ,” ಎಂದರು.