ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

13.08.24 - "ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು"

ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 2:8-3:4

ನರಪುತ್ರನೇ, ನಾನು ನಿನಗೆ ನುಡಿಯುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿತೆರೆದು ತಿಂದು ಬಿಡು,” ಎಂದರು. ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು; ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು. ಆ ಸುರುಳಿಯನ್ನು ನನ್ನೆದುರಿನಲ್ಲೆ ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಬರೆದಿತ್ತು: ಅದು ಪ್ರಲಾಪ, ಶೋಕ, ಶಾಪ ಇವುಗಳ ಬರಹದಿಂದ ಕೂಡಿತ್ತು. ಬಳಿಕ ಸರ್ವೇಶ್ವರ ನನಗೆ, “ನರಪುತ್ರನೇ, ನಿನಗೆ ಕೊಟ್ಟ ಈ ಸುರುಳಿಯನ್ನು ತಿನ್ನು; ಅನಂತರ ಇಸ್ರಯೇಲ್ ವಂಶದವರಿಗೆ ಸಾರು, ಹೋಗು,” ಎಂದು ಆಜ್ಞಾಪಿಸಿದರು. ನಾನು ಬಾಯಿ ತೆರೆದೆ; ಅವರೇ ಆ ಸುರುಳಿಯನ್ನು ನನಗೆ ತಿನ್ನಿಸಿದರು. ತಿನ್ನಿಸುತ್ತಾ, “ನರಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ,” ಎಂದರು. ನಾನು ಅದನ್ನು ತಿಂದು ಬಿಟ್ಟೆ; ಅದು ನನ್ನ ಬಾಯಿಗೆ ಜೇನಿನಂತೆ ಸಿಹಿಯಾಗಿತ್ತು. ಆಮೇಲೆ ಸರ್ವೇಶ್ವರ ನನಗೆ ಹೀಗೆಂದರು: “ನರಪುತ್ರನೇ, ನೀನು ಇಸ್ರಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ಹೇಳು."

ಕೀರ್ತನೆ: 119:14, 24, 72, 103, 111, 131

ಶ್ಲೋಕ:  ನಿನ್ನ  ನುಡಿ  ಎನಿತೊ  ರುಚಿ  ನನ್ನ  ನಾಲಿಗೆಗೆ.

1.  ಸಿರಿಸಂಪತ್ತಿಗಿಂತ  ಮಿಗಿಲಾಗಿ
ಆನಂದಿಪೆ  ನಿನ್ನ  ಮಾರ್ಗಿಯಾಗಿ
ನಿನ್ನಾಜ್ಞೆಯು   ಆನಂದದಾಯಕ
ಅವೇ  ನನಗೆ  ಮಂತ್ರಾಲೋಚಕ

2.  ಸಾವಿರಾರು  ಚಿನ್ನ  ಬೆಳ್ಳಿ  ನಾಣ್ಯಗಳಿಗಿಂತ
ನಿನ್ನ  ಬಾಯಿಂದ  ಬಂದ  ಧರ್ಮಶಾಸ್ತ್ರ  ಉಚಿತ
ನಿನ್ನ  ನುಡಿ  ಎನಿತೊ  ರುಚಿ  ನನ್ನ  ನಾಲಿಗೆಗೆ
ಜೇನುತುಪ್ಪಕ್ಕಿಂತ  ಸಿಹಿ  ನನ್ನ  ಬಾಯಿಗೆ

3.  ಹೃದಯಾನಂದಕರ  ನಿನ್ನ  ಕಟ್ಟಳೆಗಳು
ನನಗಮರ  ಸ್ವಾಸ್ಥ್ಯವಾದುವುವು   ಅವುಗಳು
ಬಾಯ್ದೆರೆದು  ಹಾತೊರೆಯುತ್ತಿರುವೆ
ನಿನ್ನ  ಆಜ್ಞೆಗಳನು  ಅರಸುತಿರುವೆ

ಘೋಷಣೆ                   ಕೀರ್ತನೆ 119:34

ಅಲ್ಲೆಲೂಯ, ಅಲ್ಲೆಲೂಯ!
ನೀಡೆನಗೆ  ನಿನ್ನ  ಶಾಸ್ತ್ರದ  ಅರಿವನು,
ಪೂರ್ಣಮನದಿಂದ  ಆಚರಿಸುವೆನದನು,,
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 18:1-5, 10, 12-14


ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?” ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: “ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ.” “ಎಚ್ಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣೀಕರಿಸಬೇಡಿ.  ಸ್ವರ್ಗದಲ್ಲಿನ ಇವರ ದೂತರು ಸದಾಕಾಲ ನನ್ನ ಸ್ವರ್ಗೀಯ ಪಿತನ ಸಮ್ಮುಖದಲ್ಲಿ ಇದ್ದಾರೆ; ಇದು ನಿಮಗೆ ತಿಳಿದಿರಲಿ. “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ. ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಬತ್ತೊಂಬತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡುಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಆ ತೊಂಬತ್ತೊಂಬತ್ತು ಕುರಿಗಳಿಗಿಂತ ಸಿಕ್ಕಿದ ಆ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ."




12.08.24

ಮೊದಲನೆಯ ವಾಚನ: ಯೆಜೆಕಿಯೇಲ 1:2-5,24-28

ಅದೇ ತಿಂಳಿನ ಐದನೆಯ ದಿನ, ಅಂದರೆ, ಯೆಹೋಯಾಖೀನನು ಸೆರೆಯಾದ ಐದನೆಯ ವರ್ಷ, ಬಾಬಿಲೋನಿಯಾ ದೇಶದ ಕೇಬಾರ್ ನದಿಯ ಹತ್ತಿರ, ಬೂಜಿಯ ಮಗ ಹಾಗೂ ಯಾಜಕನಾದ ಯೆಜೆಕಿಯೇಲ ಎಂಬ ನನಗೆ ಸರ್ವೇಶ್ವರಸ್ವಾಮಿಯ ವಾಣಿ ನೇರವಾಗಿ ಕೇಳಿಸಿತು; ಅವರ ಹಸ್ತಸ್ಪರ್ಶದಿಂದ ನಾನು ಪರವಶನಾದೆ. ನಾನು ಕಂಡ ದರ್ಶನ ಹೀಗಿತ್ತು: ಇಗೋ, ಉತ್ತರದಿಕ್ಕಿನಿಂದ ಬಿರುಗಾಳಿ ಬೀಸಿತು. ಎಡೆಬಿಡದೆ ಜ್ವಾಲೆಯಿಂದ ಕೂಡಿದ ಮಹಾ ಮೇಘವೊಂದು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು. ಅದರ ನಡುವೆ, ಆ ಜ್ವಾಲೆಯ ಮಧ್ಯೆ, ಸುವರ್ಣದಂಥ ಕಾಂತಿ ಬೆಳಗಿತು. ಅದರ ಮಧ್ಯದಿಂದ ನಾಲ್ಕು ಜೀವಿಗಳ ಆಕಾರಗಳು ಕಂಡುಬಂದವು. ಅವುಗಳ ರೂಪ ಮನುಷ್ಯರೂಪದಂತಿತ್ತು. ಅವು ಮುಂದುವರಿಯುವಾಗ ಅವುಗಳ ರೆಕ್ಕೆಗಳ ಶಬ್ದವು ಜಲಪ್ರವಾಹದ ಘೋಷದಂತೆ, ಸರ್ವಶಕ್ತನ ಧ್ವನಿಯಂತೆ, ಆರ್ಭಟಿಸುವ ಸೈನ್ಯದ ಕೋಲಾಹಲದಂತೆ ನನಗೆ ಕೇಳಿಸಿತು; ಅವು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು. ಅವುಗಳ ತಲೆಗಳ ಮೇಲ್ಗಡೆಯ ಗವಿಯಾಕೃತಿಯ ಮೇಲಿಂದ ಒಂದು ಧ್ವನಿ ನನ್ನ ಕಿವಿಗೆ ಬಿತ್ತು. ಅವುಗಳ ತಲೆಗಳ ಮೇಲ್ಗಡೆಯ ಗವಿಯಾಕೃತಿಯ ಮೇಲೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನಕಾರವು ಕಾಣಿಸಿತು; ಅದರ ಮೇಲೆ ನರನ ರೂಪವುಳ್ಳ ಒಬ್ಬಾತನು ಆಸೀನನಾಗಿದ್ದನು. ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತ ಕಾಂತಿಯನ್ನು ನಾನು ಕಂಡೆ; ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಕೆಳಗಡೆ ಬೆಂಕಿ ಉರಿಯುತ್ತದೋ ಎಂಬಂತಿರುವ ಮಹಾ ತೇಜಸ್ಸನ್ನು ನೋಡಿದೆ; ಪ್ರಕಾಶವು ಆತನನ್ನು ಆವರಿಸಿಕೊಂಡಿತ್ತು. ಮಳೆಗಾಲದಲ್ಲಿ ಮೇಘಮಂಡಲದೊಲಗೆ ಕಾಮನಬಿಲ್ಲು ಹೊಳೆಯುವಂತೆ ಆತನ ಸುತ್ತಲು ಪ್ರಕಾಶ ಹೊಳೆಯುತ್ತಿತ್ತು. ಹೀಗೆ ಸರ್ವೇಶ್ವರನ ಮಹಿಮಾದ್ಭುತ ದರ್ಶನವು ಆಯಿತು. ಇದನ್ನು ಕಂಡು ನಾನು ಅಡ್ಡಬಿದ್ದೆ.

ಕೀರ್ತನೆ: 148:1-2,11-14
ಶ್ಲೋಕ: ಹೊಗಳಲಿ ಎಲ್ಲರೂ ಭೂಮ್ಯಾಕಾಶ ಮೀರಿದ ಆತನ ಮಹಿಮೆಯನು.

ಹೊಗಳಿರಿ ಸ್ವರ್ಗದಿಂದ ಪ್ರಭುವನು|
ವಂದಿಸಿ ಮಹೋನ್ನತದಲಿ ಆತನನು||
ಆತನ ಸಮಸ್ತ ದೂತರೇ, ಸ್ತುತಿಸಿ ಆತನನು|
ಆತನ ಎಲ್ಲಾ ಗಣಗಳೇ, ಹೊಗಳಿ ಆತನನು||

ಭೂರಾಜರು, ಎಲ್ಲ ಜನಾಂಗಗಳು|
ಅಧಿಕಾರಿಗಳು, ದೇಶಾಧಿಪತಿಗಳು||
ಯುವಕರೂ, ಯುವತಿಯರೂ ಮುದುಕರೂ ಮಕ್ಕಳೂ|
ಹೊಗಳಲಿ ಇವರೆಲ್ಲರೂ ಪ್ರಭುವಿನ ನಾಮವನು||

ಭೂಮ್ಯಾಕಾಶ ಮೀರಿದ ಆತನ ಮಹಿಮೆಯನು|
ಆತನ ಮಹತ್ತಾದ ಏಕೈಕ ನಾಮವನು||
ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ|
ಖ್ಯಾತಿ ತಂದಿಹನು ತನ್ನ ಭಕ್ತಾದಿಗಳಿಗೆ|
ತನ್ನ ಆಪ್ತ ಜನರಾದ ಇಸ್ರಯೇಲರಿಗೆ||

ಘೋಷಣೆ ಕೀರ್ತನೆ 119:27
ಅಲ್ಲೆಲೂಯ, ಅಲ್ಲೆಲೂಯ!

ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ | ನಿನ್ನ ಅದ್ಭುತ ಕಾರ್ಯಗಳ ನಾನು ಧ್ಯಾನಿಸುವೆನಯ್ಯಾ ||

ಶುಭಸಂದೇಶ: ಮತ್ತಾಯ 17:22-27

ಆ ಕಾಲದಲ್ಲಿ ಶಿಷ್ಯರೆಲ್ಲರು ಒಮ್ಮೆ ಗಲಿಲೇಯದಲ್ಲಿ ಒಟ್ಟಿಗೆ ಸೇರಿದ್ದರು. ಆಗ ಯೇಸು ಅವರಿಗೆ, "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು; ಅವರು ಆತನನ್ನು ಕೊಲ್ಲುವರು. ಆದರೆ ಮೂರನೆಯ ದಿನ ಆತನನ್ನು ಪುನರುತ್ಥಾನಗೊಳಿಸಲಾಗುವುದು, "ಎಂದರು. ಇದನ್ನು ಕೇಳಿ ಶಿಷ್ಯರು ತುಂಬ ವ್ಯಥೆಗೊಂಡರು. ಯೇಸು ಮತ್ತು ಶಿಷ್ಯರು ಕಫೆರ್ನವುಮಿಗೆ ಹೋದರು. ದೇವಾಲಯದ ತೆರಿಗೆಯನ್ನು ವಸೂಲಿ ಮಾಡುತ್ತಿದ್ದವರು ಪೆತ್ರನ ಬಳಿಗೆ ಬಂದು, "ನಿಮ್ಮ ಗುರು ತೆರಿಗೆ ಕಟ್ಟುವುದಿಲ್ಲವೇ? "ಎಂದು ವಿಚಾರಿಸಿದರು. ಅದಕ್ಕೆ ಪೇತ್ರನು, "ಹೌದು, ಕಟ್ಟುತ್ತಾರೆ, " ಎಂದು ಉತ್ತರವಿತ್ತನು. ಬಳಿಕ ಮನೆಗೆ ಬಂದಾಗ, ಅವನು ಮಾತೆತ್ತುವುದಕ್ಕೆ ಮೊದಲೇ ಯೇಸು "ಸಿಮೋನಾ, ನಿನಗೆ ಏನನ್ನಿಸುತ್ತದೆ? ಇಹಲೋಕದ ರಾಜರು ಕಂದಾಯವನ್ನಾಗಲಿ, ತೆರಿಗೆಯನ್ನಾಗಲಿ ಯಾರಿಂದ ವಸೂಲಿಮಾಡುತ್ತಾರೆ? ತಮ್ಮ ಪುತ್ರರಿಂದಲೋ ಅಥವಾ ಪರರಿಂದಲೋ? "ಎಂದು ಕೇಳಿದರು. "ಪರರಿಂದಲೇ, " ಎಂದು ಪೇತ್ರನು ಉತ್ತರಕೊಟ್ಟನು. ಯೇಸು, "ಹಾಗಾದರೆ, ಪುತ್ರರು ತೆರಿಗೆ ಕಟ್ಟಬೇಕಾಗಿಲ್ಲ ತಾನೇ? ಆದರೂ, ನಾವು ಇವರಿಗೆ ಅಡ್ಡಿಯಾಗಬಾರದು. ಎಂದೇ ನೀನು ಸರೋವರಕ್ಕೆ ಹೋಗಿ ಗಾಳಹಾಕು. ಮೊದಲು ಸಿಕ್ಕುವ ಮೀನನ್ನು ಎತ್ತಿಕೊಂಡು ಅದರ ಬಾಯಿ ತೆರೆದು ನೋಡು. ಅದರಲ್ಲಿ ಒಂದು ಬೆಳ್ಳಿ ನಾಣ್ಯ ದೊರಕುವುದು. ಅದನ್ನು ತಂದು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು, "ಎಂದರು.

11.08..24

ಮೊದಲನೆಯ ವಾಚನ 1 ಅರಸುಗಳು 19 : 4-8

ಲೀಯನು ತಾನೊಬ್ಬನೇ, ಮರುಭೂಮಿಯಲ್ಲಿ ಒಂದು ದಿವಸದ ಪ್ರಯಾಣದಷ್ಟು ದೂರ ಹೋಗಿ, ಒಂದು ಜಾಲೀಗಿಡದ ಕೆಳಗೆ ಕುಳಿತುಕೊಂಡು ಮರಣವನ್ನು ಅಪೇಕ್ಷಿಸಿದನು. " ಸರ್ವೇಶ್ವರಾ, ನನಗೆ ನನಗೆ ಸಾಕಾಯಿತು ನನ್ನ ಪ್ರಾಣವನ್ನು ತೆಗೆದು ಬಿಡಿ; ನನ್ನ ಪೂರ್ವಜರಿಗಿಂತ ನಾನು ಉತ್ತಮನಲ್ಲ." ಎಂದು ದೇವರನ್ನು ಪ್ರಾರ್ಥಿಸಿದನು ಬಳಿಕ ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆ ಮಾಡಿದನು. ಕೂಡಲೇ ಒಬ್ಬ ದೇವದೂತನು ಅವನನ್ನು ತಟ್ಟಿ, "ಎದ್ದು ಊಟ ಮಾಡು," ಎಂದು ಹೇಳಿದನು. ಎಲೀಯನು ಎದ್ದು ಸುತ್ತಲೂ ನೋಡಿದನು. ಕೆಂಡದ ಮೇಲೆ ಸುಟ್ಟ ರೊಟ್ಟಿಯೂ ಒಂದು ತಂಬಿಗೆ ನೀರೂ ತನ್ನ ತಲೆಯ ಹತ್ತಿರ ಇದ್ದವು.  ಅವುಗಳನ್ನು ತೆಗೆದುಕೊಂಡು ತಿಂದು, ಕುಡಿದು ಪುನ: ಮಲಗಿದನು. ಸರ್ವೇಶ್ವರನ ದೂತನು ಎರಡನೆಯ ಸಾರಿ ಬಂದು ಅವನನ್ನು ತಟ್ಟಿ, "ಎದ್ದು ಊಟ ಮಾಡು; ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣ ಮಾಡಬೇಕಾಗಿದೆ," ಎಂದನು ಅವನು ಎದ್ದು ತಿಂದು ಕುಡಿದು ಅದರ ಬಲದಿಂದ ನಾಲ್ವತ್ತು ದಿವಸ ಹಗಲಿರುಳು ಪ್ರಯಾಣ ಮಾಡಿದನು  

ಕೀರ್ತನೆ 34: 2-3 , 4-5, 6-7, 8-9  
ಶ್ಲೋಕ : ಸವಿದು ನೋಡು ಪ್ರಭುವಿನ ಮಾಧುರ್ಯವನು


ಎರಡನೆಯ ವಾಚನ ಎಫಸಿಯರಿಗೆ 4:30 - 5:2

ದೇವರ ಪವಿತ್ರಾತ್ಮರನ್ನು ನೋಯಿಸದಿರಿ; ವಿವೇಚನೆಯ ದಿನದಂದು ನಿಮಗೆ ದೇವರಿಗೆ ಸೇರಿದವರು ಎಂಬುದನ್ನು ತೋರಿಸಲು ನಿಮ್ಮ ಮೇಲೆ ಒತ್ತಲಾಗಿರುವ ಮುದ್ರೆಯು ಅವರೇ ಎಲ್ಲಾ ವಿಧವಾದ ದ್ವೇಷ ದೂಷಣೆ ಕೋಪ ಕ್ರೋಧ ಮತ್ತು ಕೆಡಕುತನವನ್ನು ನಿಮ್ಮಿಂದ ದೂರ ಮಾಡಿರಿ. ಪರಸ್ಪರ ಕರುಣೆಯಿಂದಲೂ ಕನಿಕರದಿಂದಲೂ ವರ್ತಿಸಿರಿ. ಯೇಸುಕ್ರಿಸ್ತರಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಕ್ಷಮಿಸಿರಿ. ದೇವರ ಅಕ್ಕರೆಯ ಮಕ್ಕಳು ನೀವು. ಆದ್ದರಿಂದ ದೇವರನ್ನೇ ಅನುಸರಿಸಿ ಬಾಳಿರಿ. ಕ್ರಿಸ್ತೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ಸಮರ್ಪಿಸಿದರು. ದೇವರಿಗೆ ಸುಗಂಧ ಕಾಣಿಕೆಯನ್ನಾಗಿಯೂ ಬಲಿಯನ್ನಾಗಿಯೂ ಅರ್ಪಿಸಿದರು. ಅಂತೆಯೇ ನೀವೂ  ಪ್ರೀತಿಯಿಂದ ಬಾಳಿರಿ.

ಶುಭಸಂದೇಶ : ಯೊವಾನ್ನ 6:41- 51 


ಸ್ವರ್ಗದಿಂದ ಇಳಿದು ಬಂದ ರೊಟ್ಟಿ ನಾನೇ ಎಂದು ಹೇಳಿದ್ದಕ್ಕೆ ಯಹೂದ್ಯರು ಗೊಣಗತೊಡಗಿದರು. ಅವರು, " ಈತನು ಜೋಸೆಫನ ಮಗನಾದ ಯೇಸು ಅಲ್ಲವೇ? ಈತನ ತಂದೆ ತಾಯಿ ನಮಗೆ ಗೊತ್ತಿಲ್ಲವೇ? ಅಂದಮೇಲೆ, "ನಾನು ಸ್ವರ್ಗದಿಂದ ಬಂದಿದ್ದೇನೆ" ಎಂದು ಈತನು ಹೇಳುವುದಾದರೂ ಹೇಗೆ?"  ಎಂದರು. ಅದಕ್ಕೆ ಯೇಸು, " ನಿಮ್ಮ ನಿಮ್ಮೊಳಗೆ ಗೊಣಗುಟ್ಟದಿರಿ. ನನ್ನನ್ನು ಕಳುಹಿಸಿಕೊಟ್ಟ ಪಿತನು, ನನ್ನತ್ತ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬರಲಾರರು. ಬಂದವರನ್ನು ನಾನು ಅಂತಿಮ ದಿನದಂದು ಜೀವಕ್ಕೆ ಎಬ್ಬಿಸುತ್ತೇನೆ. ದೇವರಿಂದಲೇ, ಅವರೆಲ್ಲರೂ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ಪಿತನಿಗೆ ಕಿವಿಗೊಟ್ಟು ಅವರಿಂದಲೇ ಕಲಿತುಕೊಂಡ ಪ್ರತಿಯೊಬ್ಬನೂ ನನ್ನ ಬಳಿಗೆ ಬರುತ್ತಾನೆ. ಹಾಗೆಂದ ಮಾತ್ರಕ್ಕೆ ಪಿತನನ್ನು ಯಾರಾದರೂ ಕಣ್ಣಾರೆ ಕಂಡಿದ್ದಾರೆ ಎಂದಲ್ಲ, ದೇವರಿಂದ ಬಂದಿರುವ ಒಬ್ಬನು ಮಾತ್ರ ಪಿತನನ್ನು ಕಂಡಿದ್ದಾನೆ. ವಿಶ್ವಾಸವುಳ್ಳವನಲ್ಲಿ ನಿತ್ಯ ಜೀವ ಇದೆಯೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.  ಜೀವದಾಯಕ ರೊಟ್ಟಿ ನಾನೇ. ನಿಮ್ಮ ಪೂರ್ವಜರು ಮರಳುಗಾಡಿನಲ್ಲಿ ’ಮನ್ನಾ’ ವನ್ನು ತಿಂದರು; ಆದರೂ ಸಾವಿಗೆ ತುತ್ತಾದರು. ಸ್ವರ್ಗದಿಂದ ಇಳಿದು ಬಂದ ರೊಟ್ಟಿಯಾದರೂ ಹಾಗಲ್ಲ. ಇದನ್ನು ತಿನ್ನುವ ಯಾರಿಗೂ ಸಾವೆಂಬುದು ಇಲ್ಲ ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ," ಎಂದು ಹೇಳಿದರು.

10.08.24 - "ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ,”

ಮೊದಲನೇ ವಾಚನ: 2 ಕೊರಿಂಥಿಯರಿಗೆ 9:6-10

ಸಹೋದರರೇ ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯುತ್ತಾನೆ ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ.  ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ. “ದೀನದಲಿತರಿಗೆ ಧಾರಾಳವಾಗಿ ನೀಡುವನು; ಅನವರತ ಇರುವುದು ಅವನ ದಾನಧರ್ಮದ ಫಲವು,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು.

ಕೀರ್ತನೆ                       112:1-2, 5-9

ಶ್ಲೋಕ:   ದಯೆತೋರಿ  ಧನಸಹಾಯ  ಮಾಡುವವನು  ಭಾಗ್ಯವಂತ.

1.  ಪ್ರಭುವಿನಲಿ  ಭಯಭಕ್ತಿಯುಳ್ಳವನು  ಧನ್ಯನು|
ಆತನಾಜ್ಞೆಗಳಲಿ  ಹಿಗ್ಗುವವನು  ಭಾಗ್ಯನು||
ಬಲಿಷ್ಠವಾಗುವುದು  ಜಗದೊಳು  ಅವನ  ಸಂತಾನ|
ಸಜ್ಜನರ  ಸಂತತಿ  ಪಡೆವುದು  ಆಶೀರ್ವಚನ||

ಶ್ಲೋಕ

2.  ದಯೆತೋರಿ  ಧನಸಹಾಯ  ಮಾಡುವವನು  ಭಾಗ್ಯವಂತ|
ನ್ಯಾಯದಿಂದ  ವ್ಯವಹರಿಸುವಂಥಾ  ಮನುಜನು  ಭಾಗ್ಯವಂತ||
ಅಚಲನಾಗಿರುವನು  ನೀತಿವಂತನು|
ಮರೆಯಲಾರರು  ಎಂದಿಗೂ  ಆತನನು||

ಶ್ಲೋಕ

3.  ಅಶುಭವಾರ್ತೆಯ  ಭಯಭೀತಿ  ಯಾವುದೂ  ಅವನಿಗಿಲ್ಲ|
ಪ್ರಭುವಿನಲಿ  ಭರವಸೆಯಿಟ್ಟ  ಆ  ಭನವು  ಅಸ್ಥಿರವಲ್ಲ||
ದೃಢವಿದೆ  ಅವನ  ಮನ,  ಎದೆಗುಂದನವನು|
ಕಾಣುವನು  ದುರಳರಿಗಾಗುವ  ದಂಡನೆಯನು||

ಶ್ಲೋಕ

4.  ಉದಾರತೆಯಿಂದ  ಕೊಡುವನು  ಬಡವರಿಗೆ|
ಫಲಿಸುವುದು  ಅವನಾ  ನೀತಿ  ಸದಾಕಾಲಕೆ|
ಮಹಿಮೆತರುವ  ಕೋಡು  ಮೂಡುವುದು  ಅವನಿಗೆ||

ಶ್ಲೋಕ

ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!
ನಾನೇ  ಜಗಜ್ಯೋತಿ,  ನನ್ನನ್ನು  ಹಿಂಬಾಲಿಸುವವನು  ಕತ್ತಲಲ್ಲಿ  ನಡೆಯುವುದಿಲ್ಲ,  ಜೀವದಾಯಕ  ಜ್ಯೋತಿ  ಅವನಲ್ಲಿರುತ್ತದೆ,,
ಅಲ್ಲೆಲೂಯ!

ಶ್ಲೋಕ: ದಯೆತೋರಿ ಧನಸಹಾಯ ಮಡುವವನು ಭಾಗ್ಯವಂತ

ಶುಭಸಂದೇಶ: ಯೊವಾನ್ನ 12:24-26


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಉಳಿಯುತ್ತದೆ; ಅದು ಸತ್ತರೆ ಮಾತ್ರ ಸಮೃದ್ಧಿಯಾದ ಫಲವನ್ನು ಕೊಡುತ್ತದೆ.  ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ. ನನ್ನ ಸೇವೆ ಮಾಡಬೇಕೆಂದಿರುವವನು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ,” ಎಂದರು.

ಪೂಜಾರ್ಪಣೆ 



ಸಂತ ಸ್ಮರಣೆ - ಸಂತ ಲಾರೆನ್ಸ್ 

3ನೇ ಶತಮಾನದ ಸಂತ ಲಾರೆನ್ಸ್ ಬಡವರ ಸೇವೆಗಾಗಿ ನೇಮಿಸಲ್ಪಟ್ಟ 7 ಉಪಯಾಜಕರಲ್ಲಿ ಒಬ್ಬರಾಗಿದ್ದರು. ಕ್ರೈಸ್ತರ ಮೇಲೆ ಭೀಕರ ಚಿತ್ರಹಿಂಸೆ ಪ್ರಾರಂಭವಾದಾಗ ಜಗದ್ಗುರು ಸಂತ ಸಿಕ್ಸ್ ತಸ್ ಮತ್ತು ನಾಲ್ವರು ಉಪಯಾಜರು ಮರಣದಂಡನೆಗೆ ಒಳಗಾಗುತ್ತಾರೆ. ಮರಣದಂಡನೆಗೆ ಅವರು ನಡೆಯುತ್ತಿರುವಾಗ ಲಾರೆನ್ಸ್ ಎದುರು ಬಂದು "ತಂದೆಯೇ, ನಿಮ್ಮ ಉಪಾಸಕನನ್ನು ಬಿಟ್ಟು, ನೀವೆಲ್ಲಿಗೆ ಹೋಗುತ್ತಿದ್ದೀರಿ?" ಎಂದು ಕೇಳಿದಾಗ, ಜಗದ್ಗುರು ಸಿಕ್ಸ್ ತಸ್ "ನಿನ್ನ ಬಿಟ್ಟು ಹೋಗುತ್ತಿಲ್ಲ ಮಗು, ಇನ್ನೂ ಮೂರು ದಿನಗಳಲ್ಲಿ ನೀನು ನನ್ನನ್ನು ಹಿಂಬಾಲಿಸುವೆ" ಎಂದರು.

 ಈ ಮೂರು ದಿನಗಳು ಲಾರೆನ್ಸರ ಬದುಕಿನ ಶ್ರೇಷ್ಠ ದಿನಗಳಾದವು. ರೋಮ್ ಸೈನ್ಯದ ದಂಡನಾಯಕ ಕ್ರೈಸ್ತ ದೇವಾಲಯಗಳಲ್ಲಿ ಬಹಳಷ್ಟು ಚಿನ್ನ-ಬೆಳ್ಳಿ ಅಪಾರವಾದ ಸಂಪತ್ತು ಇರುವುದೆಂದು ತಿಳಿದು ಸಂತ ಲಾರೆನ್ಸಾ ರನ್ನು ಕರೆದು, ನೀವು ಚಿನ್ನದ ಬಟ್ಟಲುಗಳಲ್ಲಿ ಪೂಜೆ ಅರ್ಪಿಸುತ್ತಿರಂತೆ, ರಕ್ತವನ್ನು ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯುತ್ತಿರಂತೆ, ಪೂಜೆಯಲ್ಲಿ ಚಿನ್ನದ ಮೇಣದಬತ್ತಿಯ ಸ್ತಂಭಗಳನ್ನು ಇಡುತ್ತಿದ್ದಂತೆ, ನಿಮ್ಮ ಧರ್ಮದ ಸಿದ್ಧಾಂತವೇ ಹೇಳುತ್ತದೆ: 'ಸೀಜರನಿಗೆ ಸೇರಿದ್ದನ್ನು ಸೀಜರನಿಗೆ ಒಪ್ಪಿಸಿ' ಎಂದು. ನಿಮ್ಮ ದೇವರು ಭೂಮಿಗೆ ಬಂದಾಗ ಇದನ್ನೆಲ್ಲಾ ತರಲಿಲ್ಲ. ದೇವರ ವಾಕ್ಯವನ್ನು ಮಾತ್ರ ತಂದ. ಆದ್ದರಿಂದ ಎಲ್ಲವನ್ನೂ ನನಗೆ ತಂದು ಒಪ್ಪಿಸು"  ಎನ್ನುತ್ತಾನೆ.

 ಮೂರು ದಿನಗಳ ಕಾಲಾವಕಾಶ ಕೇಳಿದ ಸಂತ ಲಾರೆನ್ಸ್ ತನ್ನ ವಶದಲ್ಲಿದ್ದ ಎಲ್ಲಾ ಹಣವನ್ನು ಬಡಬಗ್ಗರಿಗೆ ಹಂಚುತ್ತಾರೆ. ಇದು ಸಾಲದು ಎಂಬಂತೆ ಚಿನ್ನದ ಪೂಜಾಪಾತ್ರೆಗಳನ್ನು ಮಾರಿ ಬಡವರಿಗೆ ಹಂಚುತ್ತಾರೆ. ಮೂರು ದಿನಗಳ ನಂತರ ಕುರುಡರು, ಕುಂಟರು, ಅಂಗವಿಕಲರು, ನಿರ್ಗತಿಕರು ಮತ್ತು ಬಡವರನ್ನು ಒಟ್ಟಿಗೆ ನಿಲ್ಲಿಸಿ ದಂಡನಾಯಕನ ಆಗಮನಕ್ಕೆ ಕಾಯುತ್ತಾರೆ. ದಂಡನಾಯಕ ಬಂದಾಗ ಎದುರಿಗಿದ್ದವರನ್ನು ತೋರಿಸಿ "ಇಗೋ ನಮ್ಮ ಚರ್ಚಿನ ಆಸ್ತಿ" ಎನ್ನುತ್ತಾರೆ. ಕೋಪೋದ್ರಿಕ್ತನಾದ ದಂಡನಾಯಕ ಅವರಿಗೆ ಮರಣದಂಡನೆ ವಿಧಿಸುತ್ತಾನೆ. ಅದು ಸಾಧಾರಣ ಮರಣ ದಂಡನೆ ಅಲ್ಲ. ದೊಡ್ಡ ಬಾಣಲೆಯ ಉರಿಯುವ ಕೆಂಡಗಳ ಮೇಲೆ ಲಾರೆನ್ಸ್ ನನ್ನು ಮಲಗಿಸಿ ಜೀವ ತೆಗೆಯುವುದು. ಹೀಗೆ ಸ್ವಲ್ಪ ಸ್ವಲ್ಪವೇ ಬೆಂದು ಸಾಯುವ ಗಳಿಗೆಯಲ್ಲಿ ಲಾರೆನ್ಸ್ ಹೇಳಿದರಂತೆ: "Assum est; Versa, et Manduca". ಅಂದರೆ "ಚೆನ್ನಾಗಿ ಬಂದಿದೆ, ಒಮ್ಮೆ ತಿರುಗಿಸಿ ನಂತರ ತಿನ್ನಿ". ಸಂತ ಅಂಬ್ರೋಸ್ ಈ ಘಟನೆಯನ್ನು ದಾಖಲಿಸಿದ್ದಾರೆ.

 ಸಂತ ಲಾರೆನ್ಸರ ಬಗೆಗೆ ನಮಗೆ ತಿಳಿದಿರುವುದು ಬಹಳ ಕಡಿಮೆ. ಜಗದ್ಗುರು ಸಂತ ಸಿಕ್ಸ್ ತುಸ್ ನಂತರ ರೋಮ್ ಚಕ್ರವರ್ತಿ ವಲೇರಿಯನ್ 258 ರಲ್ಲಿ ಲಾರೆನ್ಸ್ ಮತ್ತು ಇತರ ಇಬ್ಬರು ಉಪನ್ಯಾಸಕರನ್ನು ಮರಣದಂಡನೆಗೆ ಗುರಿಮಾಡಿದ್ದಷ್ಟೇ ಇತಿಹಾಸದಿಂದ ನಾವು ತಿಳಿದಿರುವುದು. ಸಂತ ಡಮಸಸ್, ಅಂಬ್ರೋಸ್ ಮತ್ತು ಅಗಸ್ಟಿನ್ ರು ತಮ್ಮ ಬರಹಗಳಲ್ಲಿ ಸಂತ ಲಾರೆನ್ಸರ ಬಗ್ಗೆ ಸಾಕಷ್ಟು ವಿವರಗಳನ್ನು ಉಲ್ಲೇಖಿಸುತ್ತಾರೆ.

ಸಂತ ಲಾರೆನ್ಸರ ಸಮಾಧಿಯ ಮೇಲೆ ಕಟ್ಟಲಾದ ದೇವಾಲಯ ರೋಮ್ನ ಏಳು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿತ್ತು. ಇಂದಿಗೂ ರೋಮ್ ನಗರಕ್ಕೆ ಹೋಗುವ ಭಕ್ತಾದಿಗಳಿಗೆ ಇದೊಂದು ಪುಣ್ಯಕ್ಷೇತ್ರವಾಗಿದೆ.


09.08.24 - "ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು"

ಮೊದಲನೇ ವಾಚನ: ನಹೂಮ2:1 , 3; 3:1-3, 6-7

ಇಗೋ, ಶುಭಸಂದೇಶವನ್ನು ಸಾರಲು ದೂತನೊಬ್ಬನು ಪರ್ವತದಿಂದ ಇಳಿದು ಬರುತ್ತಿದ್ದಾನೆ! ಶಾಂತಿ ಸಮಾಧಾನವನ್ನು ಘೋಷಿಸಲು ತ್ವರೆಪಡುತ್ತಿದ್ದಾನೆ! ಜುದೇಐ ನಾಡೇ, ನಿನ್ನ ಹಬ್ಬಗಳನ್ನು ಆಚರಿಸು. ನಿನ್ನ ಹರಕೆಗಳನ್ನು ಸಲ್ಲಿಸು. ಆ ದುಷ್ಟ ಶತ್ರು ಇನೆಂದಿಗೂ ನಿನಗೆ ಮುತ್ತಿಗೆ ಹಾಕಲಾರನು. ಅವನು ಸಂಪೂರ್ಣವಾಗಿ ನಾಶವಾಗಿದ್ದಾನೆ! ಸರ್ವೇಶ್ವರ, ಕೊಳ್ಳೇಗಾರರು ಸುಲಿಗೆ ಮಾಡಿದ್ದನ್ನು ಮುರಿದುಹಾಕಿದೆ ದ್ರಾಕ್ಷಿಯ ತೋಟಗಳನ್ನೂ ಸರಿಪಡಿಸಲಿದ್ದಾರೆ. ಯಾಕೋಬಿನ ಮಹತ್ವವನ್ನು ಹಾಗು ಇಸ್ರಾಯೇಲಿನ ಮಹಿಮೆಯನ್ನು ಈಗ ಮತ್ತೆ ಸ್ಥಾಪಿಸಲಿದ್ದಾರೆ. 

ಧಿಕ್ಕಾರ ರಕ್ತಮಯವಾದ ನಗರಕೆ! ತುಂಬಿದೆ ಅದರಲಿ ಸುಳ್ಳು ಮತ್ತು ಸುಲಿಗೆ ನಿಲ್ಲದೆ ನಡೆಯುತ್ತಿದೆ ಅದರಲಿ ಕೊಳ್ಳೆ. ಕೇಳಿ, ಚಕ್ರಗಳಚೀತ್ಕಾರ, ಚಾಟಿಗಳ ಚಟಪಟ; ಕುದುರೆಗಳ ಭರದೌಡು, ರಥಗಳ ಹಾರಾಟ. ರಾಹುತರ ರಭಸ, ಕತ್ತಿಯ ಥಳಥಳಿಪು, ಈಟಿಯ ಝಳಿಪು; ಹತರಾದವರು ಅಗಣಿತ, ಸತ್ತವರು ಅಸಂಖ್ಯಾತ, ಶವಗಳ ರಾಶಿ ವಿಪರೀತ; ನುಗ್ಗುವವರು ಎಡವುತಿಹರು ಹೆಣಗಳನು ದಾಟಿಹೋಗುತ. ಎಸೆಯುವೆನು ನಿನ್ನ ಮೇಲೆ ಹೊಲಸನು ಕಳೆಯುವೆನು ನಿನ್ನ ಮಾನವನು ಪರಿಹಾಸ್ಯಕ್ಕೀಡುಮಾಡುವೆನು ನಿನ್ನನು. ನಿನ್ನ ನೋಡುವವರು ನಿನ್ನಿಂದ ದೂರ ಓಡುವರು “ನಿನೆವೆ ಹಾಳುಬಿದ್ದಿದೆ, ಅದಕ್ಕೆ ಗೋಳಿಡುವರಾರು? ಅದನ್ನು ಸಂತೈಸುವವರು ನಮಗೆಲ್ಲಿ ಸಿಕ್ಕಿಯಾರು?, ಎಂದುಕೊಳ್ಳುವರು.”

ಧರ್ಮೋಪದೇಶಕಾಂಡ: 32:35-36, 39, 41

ಶ್ಲೋಕ: ಬದುಕಿಸುವವನು, ಕೊಲ್ಲುವವನು ನಾನೇ.

ಶುಭಸಂದೇಶ: ಮತ್ತಾಯ 16:24-28


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.  ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.  ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?  ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು.  ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ”.

08.08.24 - "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ"

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ 31:31-34

ಸರ್ವೇಶ್ವರ ಹೇಳುವುದನ್ನು ಕೇಳಿ: “ನಾನು ಇಸ್ರಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವುವು. ಈ ಒಡಂಬಡಿಕೆ, ನಾನು ಅವರ ಪೂರ್ವಜರನ್ನು ಕೈ ಹಿಡಿದು ಈಜಿಪ್ಟಿನಿಂದ ಕರೆದು ತಂದಾಗ ಅವರೊಡನೆ ಮಾಡಿಕೊಂಡ ಒಡಂಬಡಿಕೆ ಅಂಥದಾಗಿ ಇರುವುದಿಲ್ಲ. ನಾನು ಅವರಿಗೆ ಯಜಮಾನನಾಗಿ ಇದ್ದರೂ ಆ ನನ್ನ ಒಡಂಬಡಿಕೆಯನ್ನು ಅವರು ಮೀರಿನಡೆದರು. ಸರ್ವೇಶ್ವರನಾದ ನಾನು ಹೇಳುತ್ತೇನೆ ಕೇಳಿ: ಆ ದಿನಗಳು ಬಂದಮೇಲೆ ನಾನು ಇಸ್ರಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು - ನನ್ನ ಧರ್ಮಶಾಸ್ತ್ರವನ್ನು ಅವರ ಅಂತರಂಗದಲ್ಲಿ ಇಡುವೆನು. ಅವರ ಹೃದಯದ ಹಲಗೆಯ ಮೇಲೆ ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು. ಒಬ್ಬನು ತನ್ನ ನೆರೆಹೊರೆಯವರನ್ನು ಕುರಿತು ಅಥವಾ ಅಣ್ಣ ತಮ್ಮಂದಿರನ್ನು ಕುರಿತು, ‘ಸರ್ವೇಶ್ವರನನ್ನು ಅರಿತುಕೊ’ ಎಂದು ಬೋಧಿಸಬೇಕಾಗಿರುವುದಿಲ್ಲ. ಚಿಕ್ಕವರಿಂದ ಮೊದಲ್ಗೊಂಡು ದೊಡ್ಡವರ ತನಕ ಎಲ್ಲರು ನನ್ನನ್ನು ಅರಿತುಕೊಳ್ಳುವರು. ನಾನು ಅವರ ಅಪರಾಧವನ್ನು ಕ್ಷಮಿಸಿ, ಅವರ ಪಾಪವನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.”


ಕೀರ್ತನೆ: 51:12-13, 14-15, 15-17
ಶ್ಲೋಕ:  ವಿಧೇಯನಾಗಿ ನಡೆವ ಸಿದ್ದ ಮನಸ್ಸನು ನೀಡು ಪ್ರಭು. 

ಶುಭಸಂದೇಶ: ಮತ್ತಾಯ 16:13-23


ಯೇಸುಸ್ವಾಮಿ "ಫಿಲಿಪ್ಪನ ಸೆಜರೇಯ" ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು. ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲೀಯನು" ಎನ್ನುತ್ತಾರೆ; "ಯೆರೆವಿೂಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು." ಅನಂತರ ಯೇಸು ತಮ್ಮ ಶಿಷ್ಯರಿಗೆ ತಾವು ‘ಅಭಿಷಿಕ್ತರಾದ ಲೋಕೋದ್ಧಾರಕ’ ಎಂಬುದನ್ನು ಯಾರಿಗೂ ಹೇಳಕೂಡದೆಂದು ಕಟ್ಟಪ್ಪಣೆ ಮಾಡಿದರು. ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, "ನಾನು ಜೆರುಸಲೇಮಿಗೆ ಹೋಗಬೇಕಾಗಿದೆ; ಅಲ್ಲಿ ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿದೆ" ಎಂದು ಅಂದಿನಿಂದಲೂ ಒತ್ತಿ ಹೇಳಲಾರಂಭಿಸಿದರು. ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, "ಪ್ರಭೂ, ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ," ಎಂದು ಪ್ರತಿಭಟಿಸಿದನು. ಆದರೆ ಯೇಸು ಪೇತ್ರನತ್ತ ತಿರುಗಿ, "ಸೈತಾನನೇ, ತೊಲಗಿಲ್ಲಿಂದ; ನೀನು ನನಗೆ ಅಡೆತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ," ಎಂದರು.

07.08.24 - “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,”

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ 31:1-7




ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಕಾಲ ಬರಲಿದೆ, ಆಗ ಇಸ್ರಯೇಲಿನ ಸಕಲ ಗೋತ್ರಗಳಿಗೆ ನಾನೇ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.  ಇದು ಸರ್ವೇಶ್ವರನಾದ ನನ್ನ ನುಡಿ. ಅಳಿದುಳಿದಾ ಜನಕ್ಕೆ ಅರಣ್ಯದಲ್ಲಿ ದಯೆ ದೊರೆಯಿತು. ಇಸ್ರಯೇಲ್ ಶಾಂತಿಯನ್ನು ಅರಸುತ್ತಾ ಹೋಗುವಾಗ ಸರ್ವೇಶ್ವರನಾದ ನಾನು ದೂರದಿಂದ ಅದಕ್ಕೆ ದರ್ಶನಕೊಟ್ಟು: ‘ನಾನು ನಿನ್ನನ್ನು ಪ್ರೀತಿಸುವುದು ಶಾಶ್ವತ ಪ್ರೇಮದಿಂದ. ಈ ಕಾರಣದಿಂದ ನಿನ್ನನ್ನು ಆಕರ್ಷಿಸಿಕೊಂಡಿದ್ದೇನೆ ಅಚಲ ಪ್ರೇಮದಿಂದ.  ಇಸ್ರಯೇಲೆಂಬ ಯುವತಿಯೇ, ನಿನ್ನ ಪಾಳುಬಿದ್ದ ಪ್ರದೇಶಗಳನ್ನು ನಾನು ಪುನಃ ಕಟ್ಟುವೆನು, ಅವು ಕಟ್ಟಡಗಳಿಂದ ಕೂಡಿರುವುವು. ನೀನು, ಮತ್ತೆ ತಾಳಮೇಳಗಳನ್ನು ತೆಗೆದುಕೊಂಡು ನಲಿದಾಡುವವರ ನಾಟ್ಯಗಳಲ್ಲಿ ಭಾಗವಹಿಸುವೆ.  ಸಮಾರಿಯದ ಗುಡ್ಡಗಳಲ್ಲಿ ಮರಳಿ ದ್ರಾಕ್ಷಾತೋಟಗಳನ್ನು ಮಾಡಿಕೊಳ್ಳುವೆ. ನೆಡುವವರೇ ನೆಟ್ಟ ಫಲಗಳನ್ನು ಸವಿಯುವರು. ಹೌದು, ದಿನ ಬರುವುದು. ಆಗ ಕಾವಲುಗಾರರು ಎಫ್ರಯಿಮಿನ ಗುಡ್ಡಗಳ ಮೇಲೆ ನಿಂತು, ‘ಎದ್ದೇಳಿ, ಹೋಗೋಣ. ಬನ್ನಿ ಸಿಯೋನಿಗೆ, ನಮ್ಮ ದೇವರಾದ ಸರ್ವೇಶ್ವರನ ಸನ್ನಿಧಾನಕ್ಕೆ’ ಎಂದು ಕೂಗಿ ಕರೆ ನೀಡುವರು.” ಸರ್ವೇಶ್ವರ ಹೀಗೆನ್ನುತ್ತಾರೆ: “ಯಕೋಬನನ್ನು ಕುರಿತು ಹರ್ಷಧ್ವನಿಗೈಯಿರಿ ಜನಾಂಗಗಳಾ ಶಿರೋಮಣಿಗೆ ಜೈಕಾರಮಾಡಿರಿ. ‘ಸರ್ವೇಶ್ವರ ಆಳಿದುಳಿದಾ ಇಸ್ರಯೇಲರನ್ನು ರಕ್ಷಿಸಿಹನು’ ಎಂದು ಘೋಷಿಸುತ್ತಾ ಸ್ತುತಿಸಿರಿ.

ಕೀರ್ತನೆ: 31-10,11-12,13

ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ ಪ್ರಭು ನಮ್ಮನ್ನು ಕಾಪಾಡುವರು 

ಶ್ಲೋಕ:  ಕುರಿಮಂದೆಯನ್ನು  ಕಾಯುವ  ಕುರುಬನಂತೆ  ಪ್ರಭು  ನಮ್ಮನ್ನು  ಕಾಪಾಡುವರು.

ರಾಷ್ಟ್ರಗಳೇ, ಸರ್ವೇಶ್ವರನ  ವಾಕ್ಯವನ್ನು  ಕೇಳಿರಿ|
ದೂರದ  ದ್ವೀಪಗಳಲ್ಲೂ  ಅದನ್ನು  ಸಾರಿರಿ||
ಇಸ್ರಾಯೇಲರನ್ನು  ಚದುರಿಸಿದಾತ|
ಕುರಿಮಂದೆಯನ್ನು  ಕಾಯುವ  ಕುರುಬನಂತೆ|
ಅವರನ್ನು  ಕೂಡಿಸಿ  ಕಾಪಾಡುವೆನೆಂದು   ಪ್ರಕಟಿಸಿರಿ||

ಸರ್ವೇಶ್ವರ  ಯಕೋಬರ  ವಿಮೋಚಕ|
ಅವರನ್ನು  ಅವರಿಗಿಂತ  ಬಲಿಷ್ಠರ  ಕೈಯಿಂದ  ಬಿಡಿಸಿದಾತ|
ಅವರು  ಬಂದು  ಹಾಡುವರು  ಸಿಯೋನ್  ಶಿಖರದಲಿ|
ಬರುವರು  ಪ್ರವಾಹ  ಪ್ರವಾಹವಾಗಿ||
ಧಾನ್ಯ,  ದ್ರಾಕ್ಷರಸ,  ಎಣ್ಣೆ,  ಕುರಿ,  ಕುರಿಮರಿ|
ಸರ್ವೇಶ್ವರನ  ಈ  ವರದಾನಗಳನು  ಅನುಭವಿಸಲಿಕ್ಕಾಗಿ||

ಆಗ  ನಿಟ್ಯವಾಡಿ  ನಲಿದಳು  ಯುವತಿ|
ಹರ್ಷಿಸುವರು  ಯುವಕರು  ಮುದುಕರು  ಜೊತೆಯಾಗಿ||
ಅವರ  ದುಃಖವನ್ನು  ಸಂತೋಷವಾಗಿಸುವೆನು|
ವ್ಯಸನ  ತೊರೆದು  ಆನಂದಿಸುವಂತೆ  ಅವರನು  ಸಂತೈಸುವೆನು||


ಘೋಷಣೆ:

ಅಲ್ಲೆಲೂಯ, ಅಲ್ಲೆಲೂಯ!
ಬೋಧಿಸೆನಗೆ  ಪ್ರಭೂ,  ನಿನ್ನ  ಮಾರ್ಗವನು,
ಶತ್ರುರಹಿತ  ಹಾದಿಯಲಿ  ನಡೆಸು  ಎನ್ನನು,,
ಅಲ್ಲೆಲೂಯ!


ಶುಭಸಂದೇಶ: ಮತ್ತಾಯ 15:21-28


ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು. ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆ ಒಬ್ಬಳು ಅವರ ಬಳಿಗೆ ಬಂದಳು. “ಸ್ವಾಮೀ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಸಂಕಟಪಡುತ್ತಿದ್ದಾಳೆ,” ಎಂದು ಕೂಗಿಕೊಂಡಳು. ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, “ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ,” ಎಂದು ಕೇಳಿಕೊಂಡರು. ಆಗ ಯೇಸು, “ನನ್ನನ್ನು ಕಳಿಸಿರುವುದು ತಪ್ಪಿಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ,” ಎಂದರು. ಆದರೂ ಆಕೆ ಯೇಸುವಿಗೆ ಅಡ್ಡಬಿದ್ದು, “ಸ್ವಾಮೀ, ಸಹಾಯ ಮಾಡಿ,” ಎಂದು ಯಾಚಿಸಿದಳು. ಅದಕ್ಕೆ ಯೇಸು, “ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು. ಆಗ ಆಕೆ, “ಅದು ನಿಜ ಸ್ವಾಮೀ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ, ಅಲ್ಲವೇ?’ ಎಂದು ಮರುತ್ತರ ಕೊಟ್ಟಳು. ಆಗ ಯೇಸು, “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,” ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣ ಹೊಂದಿದಳು.