18.09.23 - "ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ"

 ಮೊದಲನೇ ವಾಚನ: 1 ತಿಮೊಥೇಯನಿಗೆ 2:1-8



ಮೊತ್ತ ಮೊದಲು ಮಾನವರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆ, ಪ್ರಾರ್ಥನೆ, ಬಿನ್ನಹ  ಹಾಗೂ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತವಾಗಿ ಶಾಂತಿ ಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸರಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು. ಹೀಗೆ ಮಾಡುವುದು ಒಳ್ಳೆಯದು, ನಮ್ಮ ಉದ್ಧಾರಕರಾದ ದೇವರಿಗೆ ಮೆಚ್ಚುಗೆಯಾದುದು. ಎಲ್ಲಾ ಮಾನವರೂ ಸತ್ಯವನ್ನರಿತು ಜೀವೋದ್ಧಾರ ಪಡೆಯಬೇಕೆಂಬುದೇ ದೈವೇಚ್ಛೆ, ದೇವರು ಒಬ್ಬರೇ,  ಅವರೇ ಮಾನವರಾಗಿರುವ ಕ್ರಿಸ್ತಯೇಸು. ಇವರು ಎಲ್ಲರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸರ್ವರೂ ಉದ್ಧಾರವಾಗಬೇಕೆಂಬ ದೈವೇಚ್ಛೆಗೆ ಸೂಕ್ತ ಸಮಯದಲ್ಲಿ ಸಾಕ್ಷಿ ನೀಡಿದರು.  ವಿಶ್ವಾಸ ಮತ್ತು ಸತ್ಯದ ಸಂದೇಶವನ್ನು ಸಾರುವುದಕ್ಕಾಗಿಯೇ ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಯೆಹೂದ್ಯೇತರರಿಗೆ ಬೋಧಕನನ್ನಾಗಿಯೂ ನೇಮಕಮಾಡಿದರು.  ನಾನು ಹೇಳುತ್ತಿರುವುದು ಸುಳ್ಳಲ್ಲ, ಸತ್ಯಸ್ಯ ಸತ್ಯ. ಪ್ರಾರ್ಥನೆ ಮಾಡುವ ಸ್ಥಳಗಳಲ್ಲೆಲ್ಲಾ ಪುರುಷರು ಕೋಪತಾಪವಿಲ್ಲದೆ, ಕೋಲಾಹಲವಿಲ್ಲದೆ ಕರಗಳನ್ನೆತ್ತಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಬೇಕು ಎಂಬುದೇ ನನ್ನ ಅಪೇಕ್ಷೆ.

ಕೀರ್ತನೆ: 28:2, 7, 8-9
ಶ್ಲೋಕ: ಪ್ರಭುವಿಗೆನ್ನ ಕೃತಜ್ಞತಾ ವಂದನೆ. 


ನಿನ್ನ ಪರಿಶುದ್ಧಾಲಯದತ್ತ ಕೈಯೆತ್ತಿ ಮುಗಿವೆನು I
ಕರುಣೆಯಿಂದಾಲಿಸು ಪ್ರಭು, ನನ್ನಾರ್ತ ಮನವಿಯನು II
ಪ್ರಭುವೇ ಶಕ್ತಿ, ಎನಗೆ ರಕ್ಷೆ, ಎನ್ನೆದೆಯ ನಂಬುಗೆ I
ಎನ್ನ ಮನಃಪೂರ್ವಕ ಕೀರ್ತನೆ, ಆತನಿತ್ತ ನೆರವಿಗೆ II

ಪ್ರಭುವೆ ತನ್ನ ಪ್ರಜೆಯ ಪ್ರಾಬಲ್ಯವು I
ತನ್ನಭಿಷಿಕ್ತನಿಗೆ ಆಶ್ರಯ ದುರ್ಗವು II
ರಕ್ಷಿಸು ನಿನ್ನ ಪ್ರಜೆಯನು, ಆಶೀರ್ವದಿಸು ನಿನ್ನ ಜನರನು I
ಕುರಿಗಾಹಿ ನೀನಾಗಿರು ಪ್ರಭೂ, ಹೊತ್ತು ಸಾಗಿಸು ಅವರನು II


ಶುಭಸಂದೇಶ: ಲೂಕ 7:1-10


ಜನರಿಗೆ ಮನಮುಟ್ಟುವಂತೆ ಬೋಧನೆ ಮಾಡಿದ ನಂತರ ಯೇಸುಸ್ವಾಮಿ ಕಫೆರ್ನವುಮ್ ಎಂಬ ಊರಿಗೆ ಬಂದರು. ಅಲ್ಲಿ ರೋಮ್ ಶತಾಧಿಪತಿಯೊಬ್ಬನ ನೆಚ್ಚಿನ ಸೇವಕನು ಕಾಯಿಲೆಯಿಂದ ಸಾಯುವುದರಲ್ಲಿದ್ದನು. ಶತಾಧಿಪತಿ ಯೇಸುವಿನ ವಿಷಯವನ್ನು ಕೇಳೆ ಅವರ ಬಳಿಗೆ ಯೆಹೂದ್ಯ ಪ್ರಮುಖರನ್ನು ಕಳುಹಿಸಿ, ತನ್ನ ಸೇವಕರನ್ನು ಗುಣಪಡಿಸಲು ಬರಬೇಕೆಂದು ಮನವಿ ಮಾಡಿಕೊಂಡನು. ಅವರು ಯೇಸುವಿನ ಬಳಿಗೆ ಬಂದು, "ಆ ಶತಾಧಿಪತಿ ನಿಮ್ಮ ಉಪಕಾರಕ್ಕೆ ಆರ್ಹನು. ನಮ್ಮ ಜನರ ಮೆಲೆ ಅವನಿಗೆ ಪ್ರೀತಿ ಇದೆ; ಅಲ್ಲದೆ  ನಮ್ಮ ಪ್ರಾರ್ಥನಾ ಮಂದಿರವನ್ನು ಕಟ್ಟಿಸಿಕೊಟ್ಟವನೂ ಅವನೇ," ಎಂದು ಬಹಳವಾಗಿ ವಿನಂತಿಸಿದರು. ಯೇಸು ಅವರ ಸಂಗಡವೇ ಹೊರಟರು. ಮನೆಯಿಂದ ಸ್ವಲ್ಪ ದೂರವಿರುವಾಗಲೇ ಶತಾಧಿಪತಿ ತನ್ನ ಗೆಳೆಯರ ಮುಖಾಂತರ, "ಪ್ರಭುವೇ, ಇಷ್ಟು ಶ್ರಮ ತೆಗೆದುಕೊಳ್ಳಬೇಡಿ; ತಾವು ನನ್ನ ಮನೆಗೆ ಬರುವಷ್ಟು  ಯೋಗ್ಯತೆ ನನಗಿಲ್ಲ. ನಾನೇ ತಮ್ಮಲ್ಲಿಗೆ ಬರೋಣವೆಂದರೆ ಆ ಯೋಗ್ಯತೆಯೂ ನನಗಿಲ್ಲ. ತಾವು ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈ ಕೆಳಗಿರುವವನು; ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು "ಬಾ, ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ "ಹೋಗು," ಎಂದರೆ ಹೋಗುತ್ತಾನೆ. ಸೇವಕನಿಗೆ "ಇಂಥದ್ದನ್ನು ಮಾಡು," ಎಂದರೆ ಮಾಡುತ್ತಾನೆ," ಎಂದು ಹೇಳಿ ಕಳುಹಿಸಿದನು. ಅವನ ಈ ಮಾತುಗಳನ್ನು ಕೇಳಿದಾಗ ಯೇಸುವಿಗೆ ಆಶ್ಚರ್ಯವಾಯಿತು. ತಮ್ಮ ಹಿಂದೆ ಬರುತ್ತಿದ್ದ ಜನರ ಗುಂಪಿನ ಕಡೆ ತಿರುಗಿ ನೋಡಿ, "ಇಂಥ ಗಾಢ ವಿಶ್ವಾಸವನ್ನು  ನಾನು ಇಸ್ರಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು. ಇತ್ತ ಶತಾಧಿಪತಿಯ ಕಡೆಯಿಂದ ಬಂದವರು ಮನೆಗೆ ಹಿಂದಿರುಗಿದಾಗ ಕಾಯಿಲೆ ಬಿದ್ದಿದ್ದ ಆ ಸೇವಕನು ಸ್ವಸ್ಥವಾಗಿದ್ದುದನ್ನು ಕಂಡರು.

17.09.23

ಮೊದಲನೆಯ ವಾಚನ: ಸಿರಾಖ 27:30-28:7


ಸಿಟ್ಟುಸಿಡುಕುಗಳು ಹೇಯವಾದವುಗಳು, ಅವೆರಡೂ ಇರುವುವು ಪಾಪಾತ್ಮನೊಳು. ಪ್ರತೀಕಾರ ಮಾಡುವವನು ಸರ್ವೇಶ್ವರನಿಂದ ಪ್ರತೀಕಾರ ಹೊಂದುವನು. ಅವನ ಪಾಪಗಳನ್ನು ಸರ್ವೇಶ್ವರ ಸದಾ ಮನಸ್ಸಿನಲ್ಲಿಟ್ಟುಕೊಳ್ಳುವರು. ಕ್ಷಮೆನೀಡು ನಿನ್ನ ನೆರೆಯವನು ಮಾಡಿದ ತಪ್ಪಿಗೆ, ನೀನು ಪ್ರಾರ್ಥಿಸುವಾಗ ಕ್ಷಮೆ ದೊರಕುವುದು ನಿನ್ನ ಪಾಪಗಳಿಗೆ. ನೆರೆಯವನ ಮೇಲೆ ಮುನಿಸ್ಸಿಟ್ಟುಕೊಂಡರೆ ದೇವರಿಂದ ಕ್ಷಮೆಹೊಂದಲು ಆದೀತೆ? ತನ್ನಂಥ ಮನುಷ್ಯನ ಮೇಲೆ ಅವನಿಗೆ ಕರುಣೆಯಿಲ್ಲದಿರೆ ಬೇಡಿಕೊಂಡರೆ ಪಾಪಮನ್ನಣೆ ಪಡೆಯುವನೇ ? ಕೇವಲ ನರಮಾನವನಾದವನು ಇಂಥ ಸಿಡುಕ್ಕಿಟ್ಟುಕೊಂಡರೆ ಇವನ ಪಾಪಗಳಿಗೆ ದೋಷಪರಿಹಾರ ಮಾಡುವವರು ಯಾರಿದ್ದಾರೆ? ನಿನ್ನ ಅಂತ್ಯಕಾಲವನ್ನು ಸ್ಮರಿಸಿಕೊಂಡು ಹಗೆತನವನ್ನು ತೊರೆದುಬಿಡು. ಸಾವು ಮರಣಗಳನ್ನು ನೆನೆದು ದೇವರ ಆಜ್ಞೆಗಳನ್ನು ಪಾಲನೆಮಾಡು. ದೇವರ ಆಜ್ಞೆಗಳನ್ನು ಸ್ಮರಿಸಿಕೊಂಡು ನೆರೆಯವನ ಮೇಲೆ ಮುನಿಸಬೇಡ. ಮಹೋನ್ನತನ ಒಡಂಬಡಿಕೆಯನ್ನು ನೆನೆಸಿಕೊಂಡು ತಪ್ಪುನೆಪ್ಪುಗಳನ್ನು ವೀಕ್ಷಿಸಬೇಡ.

ಕೀರ್ತನೆ: 103: 1-2, 3-4, 9-10,11-12.V.8
ಶ್ಲೋಕ: ಪ್ರಭು ದಯಾಳು ಕೃಪಾಪೂರ್ಣನು | ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ||

ಭಜಿಸು ಎನ್ನ ಮನವೇ, ಭಜಿಸು ಪ್ರಭುವನು|
ನನ್ನ ಅಂತರಂಗವೇ, ಭಜಿಸು ಆತನನು|
ನೆನೆ ಆತನ ಪರಮ ಪಾವನ ನಾಮವನು||
ಭಜಿಸು ನನ್ನ ಮನವೇ ಭಜಿಸು ಪ್ರಭುವನು|
ಮರೆಯದಿರು ಆತನ ಉಪಕಾರಗಳೊಂದನು||

ಮನ್ನಿಸುವನಾತ ನನ್ನ ದೋಷಗಳನು|
ವಾಸಿಮಾಡುವನು ನನ್ನ ರೋಗಗಳನು||
ಉಳಿಸುವನು ಪಾತಾಳದ ಕೂಪದಿಂದ ನನ್ನನ್ನು|
ಮುಡಿಸುವನೆನಗೆ ದಯದಾಕ್ಷಿಣ್ಯದ. ಮುಕುಟವನು ||

ಆತನು ಸದಾ ತಪ್ಪು ಹುಡುಕುವವನಲ್ಲ|
ನಿತ್ಯಕ್ಕೂ ಕೋಪ ಇಟ್ಟುಕೊಳ್ಳುವವನಲ್ಲ||
ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ|
ನಮ್ಮ ಅಪರಾಧಗಳಿಗೆ ತಕ್ಕ ಹಾಗೆ ದಂಡಿಸಲಿಲ್ಲ||

ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ|
ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ||
ಪಡುವಣದಿಂದ ಮೂಡಣವೆಷ್ಟೋ ದೂರ|
ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ||

ಎರಡನೆಯ ವಾಚನ: ರೋಮನರಿಗೆ 14:7-9


ಸಹೋದರರೇ, ನಮ್ಮಲ್ಲಿ ಯಾರೂ ತಾನಗಾಗಿಯೇ ಬದುಕುವುದಿಲ್ಲ ; ತನಗಾಗಿಯೇ ಸಾಯುವುದಿಲ್ಲ, ನಾವು ಬದುಕಿದರೂ ಪ್ರಭುವಿಗಾಗಿಯೇ ; ಸತ್ತರೂ ಅವರಿಗಾಗಿಯೇ. ನಾವು ಬದುಕಿದರೂ ಸತ್ತರೂ ಪ್ರಭುವಿಗೆ ಸೇರಿದವರು. ಏಕೆಂದರೆ, ಸತ್ತವರಿಗೂ ಬದುಕುವವರಿಗೂ ಪ್ರಭುವಾಗಬೇಕೆಂಬ ಉದ್ದೇಶದಿಂದಲೇ ಕ್ರಿಸ್ತ ಯೇಸು ಸತ್ತು ಜೀವಂತರಾದದ್ದು.

ಘೋಷಣೆ ಯೊವಾನ್ನ 10:27
ಅಲ್ಲೆಲೂಯ, ಅಲ್ಲೆಲೂಯ!
ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ | ನಾನು ಅವನ್ನು ಬಲ್ಲೆನು, ಅವು ನನ್ನನ್ನು ಹಿಂಬಾಲಿಸುತ್ತವೆ ||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 18:21-35




ಆ ಕಾಲದಲ್ಲಿ ಪೇತ್ರನು ಯೇಸುವಿನ ಬಳಿಗೆ ಬಂದು, "ಸ್ವಾಮೀ, ನನಗೆ ವಿರುದ್ಧ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ? " ಎಂದು ಕೇಳಿದನು. "ಏಳು ಸಲವಲ್ಲ, ಏಳೆಪ್ಪತ್ತು ಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ, "ಎಂದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, "ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ, ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ 'ಚಿನ್ನದ ನಾಣ್ಯ'ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲತೀರಿಸುವಂತೆ ರಾಜ ಆಜ್ಞಾಪಿಸಿದ. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: 'ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮಿ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ. ' ಎಂದು ಅಂಗಲಾಚಿದ. ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿಬಿಟ್ಟ. ಆದರೆ ಅದೇ ಸೇವಕ ಹೊರಗೆ ಬಂದದ್ದೇ ತನಗೆ ಕೇವಲ ನೂರು 'ಬೆಳ್ಳಿಕಾಸು' ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ. ಅವನನ್ನು ಹಿಡಿದು, 'ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು, 'ಎಂದು ಕುತ್ತಿದೆ ಹಿಸುಕಿದ. ಆಗ ಆ ಜೊತೆಗಾರ, 'ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ, ' ಎಂದು ಕಾಲಿಗೆ ಬಿದ್ದು ಬೇಡಿಕೊಂಡ. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಹಿಸಿ, 'ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾ ಮಾಡಿದೆ. ನಾನು ನಿನಗೆ ದಯೆ ತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆತೋರಿಸಬೇಕಿತ್ತು ಅಲ್ಲವೇ? ಎಂದು ಸಿಟ್ಟುಗೊಂಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು‌. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು " ಎಂದರು.

16.09.23 - "ನೀವು ನನ್ನನ್ನು ‘ಸ್ವಾಮೀ ಸ್ವಾಮೀ,’ ಎಂದು ಕರೆಯುತ್ತೀರಿ; ಆದರೆ ನನ್ನ ಮಾತಿನಂತೆ ನಡೆಯುವುದಿಲ್ಲವೇಕೆ?"

 ಮೊದಲನೇ ವಾಚನ : 1 ತಿಮೋಥಿ 1:15-17

ಕ್ರಿಸ್ತಯೇಸು, ಪಾಪಿಗಳ ಉದ್ಧಾರಕ್ಕಾಗಿ ಈ ಲೋಕಕ್ಕೆ ಬಂದರು ಎನ್ನುವ ಮಾತು ಸತ್ಯವಾದುದು, ನಂಬಲರ್ಹವಾದುದು ಹಾಗೂ ಎಲ್ಲರ ಅಂಗೀಕಾರಕ್ಕೆ ಯೋಗ್ಯವಾದುದು. ಅಂಥ ಪಾಪಿಗಳಲ್ಲಿ ನಾನೇ ಪ್ರಮುಖನು. 
ಇದರಿಂದಾಗಿ, ಮುಂದೆ ವಿಶ್ವಾಸಿಗಳಾಗಿ ನಿತ್ಯಜೀವ ಪಡೆಯುವವರಿಗೆ ಆದರ್ಶ ದೊರಕುವಂತೆ ಕ್ರಿಸ್ತಯೇಸು ನನಗೆ ಪೂರ್ಣ ಸಹನೆ ತೋರಿದರು. ಇದು ದೇವರ ಕರುಣೆಯೇ ಸರಿ. ಸರ್ವಯುಗಗಳ ಅರಸರೂ ಅಮರರೂ ಅಗೋಚರರೂ ಆಗಿರುವ ಏಕೈಕ ದೇವರಿಗೆ ಯುಗಯುಗಾಂತರಕ್ಕೆ ಗೌರವವೂ ಮಹಿಮೆಯೂ ಸಲ್ಲಲಿ! ಆಮೆನ್.



 ಕೀರ್ತನೆ: 113: 1-7
 ಶ್ಲೋಕ: ಪ್ರಭುವಿನ ಸಿರಿನಾಮವು ಇಂದಿಗೂ ಎಂದೆಂದಿಗೂ ಪೂಜ್ಯ

ಪ್ರಭುವಿನ ದಾಸರೇ, ಸ್ತುತಿಮಾಡಿ I
ಪ್ರಭುವಿನ ನಾಮ ಸ್ತುತಿಯನು ಮಾಡಿ II
ಪ್ರಭುವಿನ ಸಿರಿನಾಮವು ಪೂಜ್ಯ I
ಇಂದಿಗೂ ಎಂದೆಂದಿಗೂ ಪೂಜ್ಯ II

ಪ್ರಭುವಿನಾ ಸಿರಿನಾಮವು ಸ್ತುತ್ಯ I
ಪೂರ್ವ ಪಶ್ಚಿಮದವರೆಗೂ ಸ್ತುತ್ಯ II
ಸಕಲ ಜಾತಿಜನಾಂಗಗಳಲಿ ಪ್ರಭು ಶ್ರೇಷ್ಠ I
ಆತನ ಮಹಿಮೆ ಗಗನಕ್ಕಿಂತಲೂ ಉತ್ಕೃಷ್ಟ II

ನಮ್ಮ ಪ್ರಭು ದೇವನಂತೆ ಯಾರು ಸಮರ್ಥ I
ಉನ್ನತದಲಿ ಆಸನಾರೂಢನು ಆತ I
ಇಹಪರಗಳನು ವೀಕ್ಷಿಸಲಾತ ಶಕ್ತ II
ದೀನರನು ಎಬ್ಬಿಸುವನು ಧೂಳಿನಿಂದ I
ಬಡವರನು ಎತ್ತುವನು ತಿಪ್ಪೆಯಿಂದ II

ಶುಭಸಂದೇಶ: ಲೂಕ  6:43-49

ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 
ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳುಗಿಡದಲ್ಲಿ ಅಂಜೂರ ಕೀಳುವಂತಿಲ್ಲ. ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವಂತಿಲ್ಲ. ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿಮಾತಾಗಿ ತುಳುಕುತ್ತದೆ. “ನೀವು ನನ್ನನ್ನು ‘ಸ್ವಾಮೀ ಸ್ವಾಮೀ,’ ಎಂದು ಕರೆಯುತ್ತೀರಿ; ಆದರೆ ನನ್ನ ಮಾತಿನಂತೆ ನಡೆಯುವುದಿಲ್ಲವೇಕೆ? ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ, ಅದರಂತೆ ನಡೆಯುವ ಪ್ರತಿಯೊಬ್ಬನೂ ಎಂಥವನಿಗೆ ಸಮಾನನೆಂದು ನಿಮಗೆ ಹೇಳುತ್ತೇನೆ ಕೇಳಿ: ಆಳವಾಗಿ ಅಡಿಪಾಯ ತೆಗೆದು, ಬಂಡೆಕಲ್ಲಿನ ಮೇಲೆ ಅಸ್ತಿವಾರ ಹಾಕಿ, ಮನೆಕಟ್ಟಿದವನಿಗೆ ಅವನು ಸಮಾನನು; ಹುಚ್ಚು ಹೊಳೆ ಬಂದು ಪ್ರವಾಹವು ಆ ಮನೆಗೆ ಅಪ್ಪಳಿಸಿದರೂ ಅದು ಕದಲಲಿಲ್ಲ. ಕಾರಣ - ಆ ಮನೆಯನ್ನು ಸುಭದ್ರವಾಗಿ ಕಟ್ಟಲಾಗಿತ್ತು. ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದವನು ಅಸ್ತಿವಾರವೇ ಇಲ್ಲದೆ ಬರಿಯ ಮಣ್ಣಿನ ಮೇಲೆ ಮನೆ ಕಟ್ಟಿದವನಿಗೆ ಸಮಾನನು. ಆ ಮನೆಗೆ ಪ್ರವಾಹವು ಅಪ್ಪಳಿಸಿದಾಗ ಒಡನೆಯೇ ಅದು ಕುಸಿದು ಬಿತ್ತು. ಆ ಮನೆಗೆ ಒದಗಿದ ಪತನವೋ ವಿಪರೀತ!” ಎಂದರು.

15.09.23 - "ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು"

 ಮೊದಲನೇ ವಾಚನ: 1 ತಿಮೊಥೇಯನಿಗೆ 1:1-2, 12-14


ಕ್ರೈಸ್ತ ವಿಶ್ವಾಸದಲ್ಲಿ ಸತ್ ಪುತ್ರನಾದ ತಿಮೊಥೇಯನಿಗೆ - ಪೌಲನು ಬರೆಯುವ ಪತ್ರ. ನಮ್ಮ ಉದ್ಧಾರಕರಾದ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕ್ರಿಸ್ತ ಯೇಸುವಿನ ಆಜ್ಞಾನುಸಾರ, ನಾನು ಕ್ರಿಸ್ತ ಯೇಸುವಿನ ಪ್ರೇಷಿತನಾಗಿದ್ದೇನೆ. ಪಿತನಾದ ದೇವರೂ ನಮ್ಮ ಪ್ರಭುವಾದ ಕ್ರಿಸ್ತ ಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ! ಶುಭ ಸಂದೇಶದ ಸೇವೆಯನ್ನು ಕೈಗೊಳ್ಳಲು ಯೋಗ್ಯನೆಂದು ಎಣಿಸಿ ನನಗೆ ಬೇಕಾದ ಶಕ್ತಿಸಾಮರ್ಥ್ಯವನ್ನು ದಯಪಾಲಿಸಿದ ನಮ್ಮ ಪ್ರಭು ಯೇಸುಕ್ರಿಸ್ತರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಹಿಂದೆ ನಾನು ಅವರನು ದೂಷಿಸಿದೆ, ಹಿಂಸಿಸಿದೆ, ಅವಮಾನಪಡಿಸಿದೆ. ಆದರೆ ದೇವರು ದಯಾಮಯಿ; ಆಗ ನಾನು ತಿಳಿಯದೆ ಅವಿಶ್ವಾಸಿಯಾಗಿ ಹಾಗೆ ಮಾಡಿದ್ದರಿಂದ ದೇವರು ನನಗೆ ಕರುಣೆ ತೋರಿದರು. ಕ್ರಿಸ್ತ ಯೇಸುವಿನ ಅನ್ಯೋನ್ಯತೆಯಿಂದ ಲಭಿಸುವ ಪ್ರೀತಿ ವಿಶ್ವಾಸದಲ್ಲಿ ಭಾಗಿಯಾಗುವಂತೆ ಅವರು ನನ್ನ ಮೇಲೆ ತಮ್ಮ ಕೃಪಾವರಗಳನ್ನು ಹೇರಳವಾಗಿ ಸುರಿಸಿದರು.

ಕೀರ್ತನೆ: 16:1-2, 5, 6-7, 8-9
ಶ್ಲೋಕ: ನನ್ನ ಸ್ವತ್ತೂ ಸ್ವಾಸ್ಥ್ಯವೂ ನೀನೇ ಪ್ರಭು

ನೀಡು ದೇವಾ ರಕ್ಷಣೆಯನು I
ನಾ ನಿನಗೆ ಶರಣಾಗತನು II
“ನೀನೇ ನನ್ನೊಡೆಯ"ನೆಂದು ನಾ ನುಡಿದೆ I
ನಿನ್ನ ಹೊರತು ನನಗಿಲ್ಲ ಒಳಿತು” ಎಂದೇ II

ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ I
ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ II
ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ I
ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ II

ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ I
ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ II
ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು I
ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು I
ನಿನ್ನ ಬಲಗೈ ನೀಡುವುದು ನಿತ್ಯಭಾಗ್ಯವನು II


ಶುಭಸಂದೇಶ: ಲೂಕ 6:39-42


ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: "ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೇ? ಗುರುವಿಗಿಂತ ಶಿಷ್ಯನು ಶ್ರೇಷ್ಟನಲ್ಲ; ಆದರೂ ಪೂರ್ಣ ಶಿಕ್ಷಣ ಪಡೆದ ಪ್ರತಿಯೊಬ್ಬನೂ ಗುರುವಿನಂತೆ ಆಗುವನು. ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ, ಸೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನೇ ಕಾಣಲಾರದ ನೀನು, "ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಬಿಡುತ್ತೇನೆ," ಎಂದು ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು, ಆನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದು,"

14.09.23 - "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು"

 ಮೊದಲನೇ ವಾಚನ: ಸಂಖ್ಯಾಕಾಂಡ - 21:4-9



ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪು ಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸದಿಂದವರಿಗೆ ಬೇಸರವಾಯಿತು. ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತನಾಡತೊಡಗಿದರು: "ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,", ಎಂದು ಹೇಳತೊಡಗಿದರು. ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹು ಜನ ಸತ್ತುಹೋದರು. ಆಗ ಜನರು ಮೋಶೆಯ ಬಳಿಗೆ ಬಂದು, "ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ," ಎಂದು ಬೇಡಿಕೊಂಡರು. ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜ ಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿಯೊಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು," ಎಂದು ಆಜ್ಞಾಪಿಸಿದರು. ಅಂತೆಯೇ ಮೋಶೆ ಕಂಚಿನಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜ ಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ  ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.

ಕೀರ್ತನೆ: 78:1-2, 34-38
ಶ್ಲೋಕ: ಮರೆಯದಿರು ಪ್ರಭುವಿನ ಮಹತ್ಕಾರ್ಯಗಳನು

ನನ್ನ ಜನರೇ, ಕಿವಿಗೊಡಿ ನನ್ನ ಬೋಧನೆಗೆ|
ಗಮನಕೊಡಿ ನಾ ಹೇಳುವ ಮಾತುಗಳಿಗೆ||
ಸಾಮತಿಯೊಂದಿಗೆ ಬೋಧನೆಯನಾರಂಭಿಸುವೆನು|
ಹೊರಪಡಿಸುವೆನು ಪೂರ್ವಕಾಲದ ಗೂಢಾರ್ಥಗಳನು||

ಆತನನು ನೆನಸಿಕೊಂಡರವರು ವಧೆಯಾಗುವಾಗ|
ಪರಿತಾಪಗೊಂಡು ದೇವರಿಗೆ ಅಭಿಮುಖರಾದಾಗ||
ನೆನೆದರಾಗ ದೇವರೇ ತಮಗಾಶ್ರಯದುರ್ಗವೆಂದು|
ಆ ಪರಾತ್ಪರ ದೇವರೇ ತಮಗೆ ಉದ್ಧಾರಕನೆಂದು||

ಆದರೆ ಅವರ ನಾಲಿಗೆಯಾಡಿತು ಅಸತ್ಯ|
ಅವರ ಬಾಯಿ ಮಾಡಿತು ಕೇವಲ ಮುಖಸ್ತುತಿಯ||
ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ|
ಬದ್ದರಾಗಿರಲಿಲ್ಲ ಆತನ ನಿಬಂಧನೆಗಳಲಿ||

ಆದರೂ ಕ್ಷಮಿಸಿದನವರನು ಆ ದಯಾಳು, ನಾಶಮಾಡದೆ|
ಕೋಪವ ತಾಳಿಕೊಂಡನು, ಹಲವು ವೇಳೆ ಉದ್ರೇಕಗೊಳ್ಳದೆ||

ಎರಡನೇ ವಾಚನ: ಫಿಲಿಪ್ಪಿಯರಿಗೆ 2:6-11

ಜೀವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನ್ನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವ ಪರಮನು, ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು,  "ಕ್ರಿಸ್ತ ಯೇಸುವೇ ಪ್ರಭು", ಎಂದೆಲ್ಲರಿಗೆ ಅರಿಕೆ ಮಾಡುವರು ಪಿತ ದೇವನ ಮಹಿಮೆಯನ್ನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಯೊವಾನ್ನ 3:13-17



ಯೇಸು ನಿಕೊದೇಮನಿಗೆ ಇಂತೆಂದರು: "ಸ್ವರ್ಗಲೋಕದಿಂದಲೇ ಇಳಿದುಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ. ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು. ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿ ಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು.

13.09.23 - "ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ! "

ಮೊದಲನೇ ವಾಚನ: ಕೊಲೊಸ್ಸೆಯರಿಗೆ 3:1-11 

ನೀವು ಯೇಸುಕ್ರಿಸ್ತರೊಂದಿಗೆ ಪುನರುತ್ದಾನ ಹೊಂದಿರುವುದಾದರೆ ಸ್ವರ್ಗೀಯ ವಿಷಯಗಳ ಕಡೆಗೆ ಗಮನ ಕೊಡಿ. ಕ್ರಿಸ್ತ ಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ. ನೀವು ಕ್ರಿಸ್ತ ಯೇಸುವಿನೊದಿಗೆ ಮರಣ ಹೊಂದಿರುವುದರಿಂದ ಅವರೊಂದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ. ನಿಮ್ಮ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಲಿ. ಕ್ರಿಸ್ತ ಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವು ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊಂದಿಗೆ ಪ್ರತ್ಯಕ್ಷರಾಗುವಿರಿ. ನಿಮ್ಮಲ್ಲಿರುವ ಪ್ರಾಪಂಚಿಕ ಆಶೆ ಆಕಾಂಕ್ಷೆಗಳನ್ನು ತ್ಯಜಿಸಿರಿ, ಹಾದರ, ಅನೈತಿಕತೆ, ಕಾಮಾಭಿಲಾಷೆ, ದುರಾಲೋಚನೆ, ವಿಗ್ರಹಾರಾಧನೆಗೆ ಸಮವಾಗಿರುವ ಲೋಭ - ಇವುಗಳನ್ನು ದಮನಮಾಡಿರಿ. ಇಂಥವುಗಳಿಗೆ ಈಡಾಗುವ ದುಷ್ಕರ್ಮಿಗಳು ದೇವರ ಕೋಪಾಗ್ನಿಗೆ ಗುರಿಯಾಗುತ್ತಾರೆ. ಒಮ್ಮೆ ಇವೆಲ್ಲ ನಿಮ್ಮ ಜೀವನದ ರೀತಿ ನೀತಿಗಳಾಗಿದ್ದು ಇವುಗಳಲ್ಲೇ ಮಗ್ನರಾಗಿದ್ದೀರಿ. ಈಗಲಾದರೋ ಕೋಪ, ರೋಷ, ಮತ್ಸರ ಇವುಗಳನ್ನು ತ್ಯಜಿಸಿರಿ; ದೂಷಣೆ ಮತ್ತು ಹೊಲಸು ಮಾತುಗಳು ನಿಮ್ಮ ಬಾಯಿಂದ ಬರಕೂಡದು. ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ, ನಿಮ್ಮಲ್ಲಿದ್ದ ಹಳೆಯ ಸ್ವಭಾವವನ್ನೂ ಅದಕ್ಕೆ ಸಂಬಂಧಿಸಿದ ದುರಭ್ಯಾಸಗಳನ್ನೂ ತೊರೆದುಬಿಟ್ಟಿದ್ದೀರಿ. ಮಾತ್ರವಲ್ಲ, ನೂತನ ಸ್ವಭಾವವನ್ನು ಧರಿಸಿಕೊಂಡಿದ್ದೀರಿ. ನೀವು ಸೃಷ್ಟಿಕರ್ತನನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಸ್ವಭಾವವನ್ನು ಅನುದಿನವೂ ನವೀಕರಿಸಲಾಗುತ್ತಿದೆ. ಇಂಥ ಹೊಸ ಜೀವನದಲ್ಲಿ ಯೆಹೂದ್ಯ - ಗ್ರೀಕ, ಸುನ್ನತಿ ಹೊಂದಿದವ - ಸುನ್ನತಿ ಇಲ್ಲದವ, ನಾಗರಿಕ - ಅನಾಗರಿಕ, ಯಜಮಾನ - ಗುಲಾಮ ಎಂಬ ಭಿನ್ನಭೇದಗಳಿಲ್ಲ. ಕ್ರಿಸ್ತ ಯೇಸುವೇ ಸಮಸ್ತದಲ್ಲಿ ಸಮಸ್ತವೂ ಆಗಿದ್ದಾರೆ.

ಕೀರ್ತನೆ: 145:2-3, 10-11, 12-13
ಶ್ಲೋಕ: ಪ್ರಭುವಿನ ಕರುಣೆ ಎಲ್ಲರ ಮೇಲೆ

ಶುಭಸಂದೇಶ: ಲೂಕ 6:20-26


ಯೇಸುಸ್ವಾಮಿ ತಮ್ಮ ಶಿಷ್ಯರ ಕಡೆಗೆ ದೃಷ್ಟಿಸಿ ನೋಡಿ ಹೀಗೆಂದು ಬೋಧಿಸಿದರು:  "ದೀನದಲಿತರೇ,,  ನೀವು ಭಾಗ್ಯವಂತರು! ದೇವರ ಸಾಮ್ರಾಜ್ಯ ನಿಮ್ಮದು. ಈಗ ಹಸಿದಿರುವವರೇ, ನೀವು ಭಾಗ್ಯವಂತರು! ನಿಮಗೆ ಸಂತೃಪ್ತಿಯಾಗುವುದು. ಈಗ ಅತ್ತು ಗೋಳಾಡುವವರೇ, ನೀವು ಭಾಗ್ಯವಂತರು! ನೀವು ನಕ್ಕು ನಲಿದಾಡುವಿರಿ! ನರಪುತ್ರನ ಶಿಷ್ಯರು ನೀವಾದುದರಿಂದ ನಿಮ್ಮನ್ನು ದ್ವೇಷಿಸಿ, ಬಹಿಷ್ಕರಿಸಿ, ಧಿಕ್ಕರಿಸಿ, ನಿಮ್ಮ ಹೆಸರೆತ್ತುವುದು ಕೂಡ ಕೇಡೆಂದು ತಿರಸ್ಕರಿಸುವಾಗ ನೀವು ಭಾಗ್ಯವಂತರು! ಈ ಜನರ ಪೂರ್ವಜರು ಪ್ರವಾದಿಗಳನ್ನು ಹೀಗೆಯೇ ತೆಗಳಿದರು. ಇದೆಲ್ಲಾ ಸಂಭವಿಸುವಾಗ ಹಿಗ್ಗಿ ನಲಿದಾಡಿರಿ. ಏಕೆಂದರೆ, ಸ್ವರ್ಗದಲ್ಲಿ ನಿಮಗೆ ಲಭಿಸುವ ಪ್ರತಿಫಲವು ಮಹತ್ತರವಾದುದು. ಆದರೆ ಧನಿಕರೇ, ನಿಮಗೆ ಧಿಕ್ಕಾರ! ನೀವು ಸುಖಜೀವನವನ್ನು ಅನುಭವಿಸಿ ಆಗಿದೆ. ಈಗ ತಿಂದು ತೃಪ್ತಿಯಾಗಿರುವವರೇ, ನಿಮಗೆ ಧಿಕ್ಕಾರ! ನೀವು ದುಃಖಿಸಿ ಗೋಳಾಡುವಿರಿ. ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ! ಕಪಟ ಪ್ರವಾದಿಗಳೂ ಈ ಜನರ ಪೂರ್ವಜರಿಂದ ಹೀಗೆಯೇ ಹೊಗಳಿಸಿಕೊಂಡಿದ್ದರು.

12.09.23 - "ಅಲ್ಲಿದ್ದ ಜನರೆಲ್ಲರು ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು."

 ಮೊದಲನೇ ವಾಚನ: ಕೊಲೊಸ್ಸೆಯರಿಗೆ 2:6-15


ನೀವು ಯೇಸುಕ್ರಿಸ್ತರನ್ನು ಪ್ರಭುವಾಗಿ ಸ್ವೀಕರಿಸಿರುವುದರಿಂದ, ಅವರೊಡನೆ  ಐಕ್ಯೆತೆಯಿಂದ ಬಾಳಿರಿ. ಅವರಲ್ಲಿ ಸ್ಥಿರವಾಗಿರಿ. ಅವರನ್ನೇ ಅವಲಂಬಿಸಿ ನಿಮ್ಮ ಬಾಳೆಂಬ ಸೌಧವನ್ನು ನಿರ್ಮಿಸಿರಿ. ನೀವು ಕಲಿತುಕೊಂಡಿರುವಂತೆ ನಿಮ್ಮ ವಿಶ್ವಾಸ ಅವರಲ್ಲಿ ದೃಢವಾಗಿರಲಿ. ಕೃತಜ್ಞತೆಯು ನಿಮ್ಮಲ್ಲಿ ಉಕ್ಕೇರಲಿ, ಪ್ರಪಂಚದ ಪ್ರಬಲ ಶಕ್ತಿಗಳಿಂದಲೂ ಮಾನವ ವಿವೇಚನೆಯ ಶುಷ್ಕತರ್ಕ ಸಿದ್ಧಾಂತಗಳಿಂದಲೂ ಯಾರೂ ನಿಮ್ಮನ್ನು ಮೋಸಗೊಳಿಸಿ ವಶಪಡಿಸಿಕೊಳ್ಳದಂತೆ ಎಚ್ಚರಿಕೆಯಿಂದಿರಿ. ಇವುಗಳು ಪ್ರಾಪಂಚಿಕ ಪಾರಂಪರ್ಯಕ್ಕೆ ಮತ್ತು ವಿಶ್ವದ ಮೂಲಭೂತ ಶಕ್ತಿಗಳಿಗೆ ಸಂಬಂಧಿಸಿದವುಗಳೇ ಹೊರತು ಯೇಸುಕ್ರಿಸ್ತರಿಗಲ್ಲ. ದೈವತ್ವದ ಸಂಪೂರ್ಣತೆ ಸಶರೀರವಾಗಿ ಯೇಸುಕ್ರಿಸ್ತರಲ್ಲಿ ನೆಲೆಗೊಂಡಿದೆ. ಸಕಲ ಅಧಿಪತ್ಯಕ್ಕೂ ಅಧಿಕಾರಕ್ಕೂ ಶಿರಸ್ಸು ಅವರೇ. ಅವರಲ್ಲಿ ಮಾತ್ರ ನೀವು ಪರಿಪೂರ್ಣತೆಯನ್ನು ಹೊಂದಲು ಸಾಧ್ಯ. ಕ್ರಿಸ್ತಯೇಸುವಿನಲ್ಲಿಯೇ ನೀವು ಸುನ್ನತಿಯನ್ನು ಪಡೆದಿದ್ದೀರಿ. ಇದು ಶಾರೀರಕ ಸುನ್ನತಿಯಲ್ಲ, ಪಾಪಮಯ ಸ್ವಭಾವವನ್ನು ಕಿತ್ತೊಗೆಯುವ ಸುನ್ನತಿ. ಸ್ವಯಂ ಕ್ರಿಸ್ತಯೇಸುವೇ ಯೋಜಿಸಿದ ‌ಸುನ್ನತಿ. ದೀಕ್ಷಾಸ್ನಾನದಲ್ಲಿ ನೀವು ಅವರೊಂದಿಗೆ ಸಮಾಧಿಯಾದಿರಿ. ಕ್ರಿಸ್ತ ಯೇಸುವನ್ನು ಮೃತರ ಮಧ್ಯದಿಂದ ದೈವರು ತಾವೇ ಎಬ್ಬಿಸಿದರು. ಈ ದೇವರ ಶಕ್ತಿಯಲ್ಲಿ ನೀವು ವಿಶ್ವಾಸವಿಟ್ಟಿರುವುದರಿಂದ ದೀಕ್ಷಾಸ್ನಾನದಲ್ಲಿಯೇ ನಿಮ್ಮನ್ನು ಕ್ರಿಸ್ತಯೇಸುವಿನೊಂದಿಗೆ ಎಬ್ಬಿಸಲಾಯಿತು. ನಿಮ್ಮ ಪಾಪಮಯ ಜೀವನದಿಂದಲೂ ಸುನ್ನತಿ ರಹಿತವಾದ ಸ್ವಭಾವದಿಂದಲೂ ಒಮ್ಮೆ ನೀವು ಮೃತರಾಗಿದ್ದಿರಿ. ಆದರೆ ಈಗ ದೇವರು ಕ್ರಿಸ್ತ ಯೇಸುವಿನೊಂದಿಗೆ ನಿಮ್ಮನ್ನು ಜೀವಂತಗೊಳಿಸಿದ್ದಾರೆ. ಅವರು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾರೆ. ನಮ್ಮನ್ನು ಬಂದಿಸಿದ್ದ ಧರ್ಮಶಾಸ್ತ್ರದ ವಿಧಿ ನಿಯಮಗಳನ್ನು ಕ್ರಿಸ್ತಯೇಸು ತೊಡೆದುಹಾಕಿದ್ದಲ್ಲದೆ ಅವುಗಳನ್ನು ಶಿಲುಬೆಗೆ ಜಡಿದು ನಮ್ಮನ್ನು ಬಿಡುಗಡೆ ಮಾಡಿದ್ದಾರೆ. ಬಲಾಢ್ಯ ಒಡೆಯರನ್ನೂ ಅಧಿಕಾರಿಗಳನ್ನೂ ನಿರಾಯುಧರನ್ನಾಗಿ ಮಾಡಿ, ತಾವು ಗಳಿಸಿದ ಜಯದ ನಿಮಿತ್ತ ಜನರೆಲ್ಲರ ಮುಂದೆ ಶಿಲುಬೆಯ ವಿಜಯೋತ್ಸವದಲ್ಲಿ ಅವರನ್ನು ಸೆರೆಯಾಳುಗಳನ್ನಾಗಿ ಪ್ರದರ್ಶಿಸಿದ್ದಾರೆ.

ಕೀರ್ತನೆ: 145:1-2, 8-9, 10-11
ಶ್ಲೋಕ: ಪ್ರಭುವಿನ ಕರುಣೆ ಎಲ್ಲರ ಮೇಲೆ

ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ I
ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ II
ಹೊಗಳುವೆನು ನಾ ದಿನದಿನವೂ ನಿನ್ನನು I
ಭಜಿಸುವೆನೆಂದೆಂದಿಗೂ ನಿನ್ನ ಹೆಸರನು II

ಪ್ರಭು ದಯಾನಿಧಿ, ಕೃಪಾಸಾಗರನು I
ಸಹನಶೀಲನು, ಪ್ರೀತಿಪೂರ್ಣನು II
ಪ್ರಭುವಿನ ಕರುಣೆ ಎಲ್ಲರ ಮೇಲೆ I
ಆತನ ಕೃಪೆಯು ಸೃಷ್ಟಿಯ ಮೇಲೆ II

ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು I
ಕೊಂಡಾಡುವುದು ನಿನ್ನನು ಭಕ್ತ ಸಮೂಹವು II
ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು I
ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು II

ಘೋಷಣೆ           ಯೊವಾನ್ನ  6:63,68

ಅಲ್ಲೆಲೂಯ, ಅಲ್ಲೆಲೂಯ!
ಸಜೀವವನ್ನು  ಕೊಡುವಂಥಾದ್ದು  ದೇವರ  ಆತ್ಮವೇ |  ನಿತ್ಯ  ಜೀವವನ್ನೀಯುವ  ನುಡಿ  ಇರುವುದು  ತಮ್ಮಲ್ಲೇ ||
ಅಲ್ಲೆಲೂಯ!

ಶುಭಸಂದೇಶ: ಲೂಕ 6:12-19


ಒಮ್ಮೆ ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡರು, ಅವರಿಗೆ "ಪ್ರೇಷಿತರು" ಎಂದು ಹೆಸರಿಟ್ಟರು. ಹೀಗೆ ಆಯ್ಕೆ ಆದವರು; ಪೇತ್ರನೆಂದು ಹೆಸರು ಪಡೆದ ಸಿಮೋನ ಮತ್ತು ಅವನ ಸಹೋದರ ಆಂದ್ರೆಯ, ಯಕೋಬ ಮತ್ತು ಯೊವಾನ್ನ, ಫಿಲಿಪ್ಪ ಮತ್ತು ಬಾರ್ತೋಲೊಮಾಯ, ಮತ್ತಾಯ ಮತ್ತು ತೋಮ, ಆಲ್ಫಾಯನ ಮಗ ಯಕೋಬ ಮತ್ತು ದೇಶಾಭಿಮಾನಿ ಎನಿಸಿಕೊಂಡಿದ್ದ ಸಿಮೋನ, ಯಕೋಬನ ಮಗ ಯೂದ ಮತ್ತು ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ. ಆನಂತರ ಯೇಸುಸ್ವಾಮಿ ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಸಮುದ್ರ ತೀರದ ಟೈರ್ ಹಾಗೂ ಸಿದೋನ್ ಪಟ್ಟಣಗಳಿಂದಲೂ ಜನಸಮೂಹ ಅಲ್ಲಿಗೆ ಬಂದಿತ್ತು. ಯೇಸುವಿನ ಬೋಧನೆಯನ್ನು ಕೇಳುವುದಕ್ಕೂ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ಅಲ್ಲಿಗೆ ಬಂದು ಸೇರಿದ್ದರು. ದೆವ್ವಪೀಡಿತರು ಕೂಡ ಬಂದು ಸ್ವಸ್ಥರಾಗುತ್ತಿದ್ದರು. ಯೇಸುವಿನಿಂದ ದಿವ್ಯಶಕ್ತಿ ಹರಿದು ಎಲ್ಲರನ್ನೂ ಗುಣಪಡಿಸುತ್ತಿತ್ತು. ಆದುದರಿಂದ ಅಲ್ಲಿದ್ದ ಜನರೆಲ್ಲರು ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು.

29.08.2026 - ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು

  ಸಂತ ಸ್ನಾನಿಕ ಯೊವಾನ್ನನ ಶಿರಚ್ಛೇದನ ಮೊದಲನೇ ವಾಚನ: ಯೆರೆಮಿಯ: 1: 17-19 ಆದುದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲ...