24.12.22 - "ನಿಮಗೆ ಮನಸ್ಸಿದ್ದಂತೆ ಮಾಡಿ; ಸರ್ವೇಶ್ವರ ನಿಮ್ಮೊಡನೆ ಇದ್ದಾರೆ,"

  ಮೊದಲನೇ ವಾಚನ: 2 ಸಮುವೇಲ  7:1-5, 8-12, 14, 16 


ಸರ್ವೇಶ್ವರನ ಅನುಗ್ರಹದಿಂದ ಸುತ್ತಮುತ್ತ ಇದ್ದ ವೈರಿಗಳ ಭಯ ನಿಂತುಹೋಯಿತು. ದಾವೀದನು ನೆಮ್ಮದಿಯಿಂದ ಅರಮನೆಯಲ್ಲಿ ವಾಸಿಸುತ್ತಿದ್ದನು. ಒಂದು ದಿನ ಅವನು ಪ್ರವಾದಿ ನಾತಾನನಿಗೆ, "ನೋಡು, ನಾನು ವಾಸಮಾಡುತ್ತಿರುವುದು ದೇವದಾರು ಮರದಿಂದ ಮಾಡಿದ ಅರಮನೆಯಲ್ಲಿ; ಆದರೆ ದೇವರ ಮಂಜೂಷ ಇರುವುದು ಬಟ್ಟೆಯ ಗುಡಾರದಲ್ಲಿ!" ಎಂದನು. ಅದಕ್ಕೆ ನಾತಾನನು ಸಮ್ಮತಿಸಿ, "ನಿಮಗೆ ಮನಸ್ಸಿದ್ದಂತೆ ಮಾಡಿ; ಸರ್ವೇಶ್ವರ ನಿಮ್ಮೊಡನೆ ಇದ್ದಾರೆ," ಎಂದನು. ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು; "ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: "ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ? ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ. ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆ ಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು. ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ವಾಸಿಸುವರು. ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚಿಗೆ ಇಸ್ರಯೇಲರು ಶೋಷಣೆಗೆ ಗುರಿಯಾದರು. ಆದರೆ ಇನ್ನು ಮುಂದೆ ಆಗದು. ನೀನು ಶತ್ರು ಭಯವಿಲ್ಲದೆ, ಸುಖದಿಂದಿರುವಂತೆ ಮಾಡುವೆನು. ಅದು ಮಾತ್ರ ಅಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ. ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು. ನಾನು ಅವನಿಗೆ ತಂದೆಯಾಗಿರುವೆನು. ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿ ತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು. ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು." 

ಕೀರ್ತನೆ: 89:2-3, 4-5, 27, 29 

ಶ್ಲೋಕ: ಪ್ರಭೂ, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು 

ಶುಭಸಂದೇಶ: ಲೂಕ 1:67-79 


ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು: ಸ್ತುತಿ ಸ್ತೋತ್ರ ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ. ತಾನಾಗಿ ಬಂದು ತನ್ನ ಪ್ರಜೆಯನ್ನು ಬಿಡುಗಡೆ ಮಾಡಿದಾತನಿಗೆ. ಉದಯಗೊಳಿಸಿರುವನಾತ ತನ್ನ ದಾಸ ದಾವೀದನ ವಂಶದೊಳು ನಮಗೊಬ್ಬ ಶಕ್ತಿಯುತ ಮುಕ್ತಿದಾತನನು. ಪುರಾತನ ಕಾಲದಿಂದಲೆ. ಪೂಜ್ಯ ಪ್ರವಾದಿಗಳ ಬಾಯಿಂದಲೆ ಅರುಹಿಸಿರುವನು ಇಂತೆಂದು ನಮಗೆ; "ಹಗೆಗಳಿಂದ, ದ್ವೇಷಿಗಳೆಲ್ಲರ ಹಿಡಿತದಿಂದ ನಿಮಗೆ ಅನುಗ್ರಹಿಸುವೆನು ಸಂರಕ್ಷಣೆ" ವ್ಯಕ್ತಪಡಿಸಿರುವನು ಪೂರ್ವಜರಿಗೆ ಪ್ರಮಾಣಿಸಿದ ಪ್ರೀತಿಯನ್ನು, ಸ್ಮರಿಸಿಕೊಂಡಿರುವನು ತನ್ನ ಪವಿತ್ರ ಒಡಂಬಡಿಕೆಯನು. ಪಿತಾಮಹ ಅಬ್ರಹಾಮನಿಗಿತ್ತ ಮಾತಿಗನುಸಾರ ನಮಗಿತ್ತಿರುವರು. ಶತ್ರುಗಳಿಂದ ರಕ್ಷಿಸುವನೆಂಬ ಅಭಯ. ಹೀಗೆ ಜೀವಮಾನವೆಲ್ಲ ನಾವು ಆತನ ಸೇವೆ ಮಾಡುವಂತಾಯಿತು ನಿರ್ಭೀತರಾಗಿ, ಆತನ ಸನ್ನಿಧಿಯಲಿ ಬಾಳುವಂತಾಯಿತು ಪುನಿತರಾಗಿ, ಸದ್ಬಕ್ತರಾಗಿ. ಸುಕುಮಾರಾ, ನೀನೆನಿಸಿಕೊಳ್ಳುವೆ "ಪರಾತ್ಪರನ ಪ್ರವಾದಿ", ಸರ್ವೇಶ್ವರನ ಮಾರ್ಗವನ್ನು ಸಜ್ಜುಗೊಳಿಸುವೆ, ಮುಂದಾಗಿ ತೆರಳಿ ಪಾಪಕ್ಷಮೆಯನ್ನು ಸಾರುವೆ ಆತನ ಪ್ರಜೆಗೆ. ಈ ಮೂಲಕ ಜೀವೋದ್ಧಾರದ ಜ್ಞಾನವನ್ನೀಯುವೆ ಆ ಜನರಿಗೆ. ಕೃಪಾಸಾಗರ, ದಯಾಮಯ, ನಮ್ಮ ದೇವನು, ಆತನ ಕರುಣೆಯಿಂದ ನಮಗಾಯಿತು ಮೇಲಿಂದ ಅರುಣೋದಯವು ಬೆಳಗಿಸಲು ಇರುಳಿನಲು, ಮರಣದ ಮುಸುಕಿನಲು ಬಾಳುವವರನು, ನಮ್ಮ ಕಾಲುಗಳನ್ನೂರಿಸಿ ನಡೆಸಲು ಶಾಂತಿಪಥದೊಳು.

23.12.22

 ಮೊದಲನೇ ವಾಚನ: ಮಲಾಕಿ 3:1-4;  4:5-6 

ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: "ನಾನು ನನ್ನ ದೂತನನ್ನು ಮುಂದಾಗಿ ಕಳುಹಿಸುತ್ತೇನೆ. ನಾನು ಬರಲು ಮಾರ್ಗವನ್ನು ಆತನು ಸಿದ್ಧಗೊಳಿಸುವನು ನೀವು ಎದುರು ನೋಡುತ್ತಿರುವ ಸರ್ವೇಶ್ವರ ಇದ್ದಕ್ಕಿದ್ದಂತೆ ತಮ್ಮ ಆಲಯಕ್ಕೆ ಬರುವರು. ಇಗೋ, ನಿಮಗೆ ಪ್ರಿಯನಾದ ದೂತನು ಬರುವನು. ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು. ಆದರೆ ಆತನು ಬರುವಾಗ ಆತನನ್ನು ಎದುರುಗೊಳ್ಳಬಲ್ಲವನು ಯಾರು? ಆತನು ಅಕ್ಕಸಾಲಿಗನ ಕುಲುಮೆಯ ಬೆಂಕಿಗೂಅಗಸನ ಚೌಳಿಗೂ ಸಮಾನನು. ಬೆಳ್ಳಿಯನ್ನು ಶುದ್ಧೀಕರಿಸುವ ಅಕ್ಕಸಾಲಿಗನಂತೆ ಲೇವಿಯ ವಂಶದವರನ್ನು ಶುದ್ಧಗೊಳಿಸುವನು; ಬೆಳ್ಳಿಬಂಗಾರದಂತೆ ಶುದ್ಧೀಕರಿಸುವನು. ಆಗ ಅವರು ಯೋಗ್ಯವಾದ ಕಾಣಿಕೆಗಳನ್ನು ಸರ್ವೇಶ್ವರಸ್ವಾಮಿಗೆ ತಂದೊಪ್ಪಿಸುವರು. ಪೂರ್ವದಿನಗಳಲ್ಲಿ, ಪುರಾತನ ಕಾಲದಲ್ಲಿ ಇದ್ದಂತೆ ಜೂದಾ ಮತ್ತು ಜೆರುಸಲೇಮಿನ ಜನರ ಕಾಣಿಕೆಗಳು ಆ ಸ್ವಾಮಿಗೆ ಮೆಚ್ಚುಗೆಯಾಗಿರುವುವು. ಇಗೋ, ಸರ್ವೇಶ್ವರಸ್ವಾಮಿಯ ಆಗಮನದ ಭಯಂಕರ ಮಹಾದಿನ ಬರುವುದಕ್ಕೆ ಮುಂಚೆ ಪ್ರವಾದಿ ಎಲೀಯನನ್ನು ನಿಮ್ಮಲ್ಲಿಗೆ ಕಳುಹಿಸುವೆನು. ನಾನು ಬಂದು ಲೋಕವನ್ನು ಶಪಿಸಿ ನಾಶಗೊಳಿಸದಂತೆ ಆತನು ಹೆತ್ತವರ ಮನಸ್ಸನ್ನು ಮಕ್ಕಳ ಕಡೆಗೂ, ಮಕ್ಕಳ ಮನಸ್ಸನ್ನು ಹೆತ್ತವರ ಕಡೆಗೂ ಒಲಿಸಿ ಅವರನ್ನು ಒಂದಾಗಿಸುವನು." 

ಕೀರ್ತನೆ: 25:4-5, 8-9, 10, 14 
ಶ್ಲೋಕ: ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ, ಏಕೆಂದರೆ, ನಿಮ್ಮ ಉದ್ಧಾರವು ಸಮಿಾಪಿಸಿತು 

ಶುಭಸಂದೇಶ: ಲೂಕ 1:57-66 


ದಿನ ತುಂಬಿದಾಗ ಎಲಿಜಬೇತಳು ಗಂಡು ಮಗುವಿಗೆ ಜನ್ಮವಿತ್ತಳು. ಸರ್ವೇಶ್ವರ ಆಕೆಗೆ ವಿಶೇಷ ಕೃಪೆ ತೋರಿದ್ದಾರೆಂದು ಅರಿತುಕೊಂಡ ನೆರೆಹೊರೆಯವರೂ ಬಂಧುಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು. ಎಂಟನೆಯ ದಿನ ಮಗುವಿನ  ಸುನ್ನತಿಗಾಗಿ ಅವರು ಬಂದು ಅದಕ್ಕೆ , ತಂದೆಯ ಹೆಸರನ್ನು ಅನುಸರಿಸಿ, ಜಕರೀಯನೆಂದು ನಾಮಕರಣ ಮಾಡುವುದರಲ್ಲಿ ಇದ್ದರು. ಆದರೆ ಮಗುವಿನ ತಾಯಿ, "ಇಲ್ಲ, ಅದು ಕೂಡದು, ಅವನಿಗೆ "ಯೊವಾನ್ನ" ಎಂಬ ಹೆಸರಿಡಬೇಕು," ಎಂದಳು. ಅದಕ್ಕೆ ಅವರು, "ನಿನ್ನ ಬಂಧುಬಳಗದವರಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ," ಎಂದು ಹೇಳಿ, "ಮಗುವಿಗೆ ಏನು ಹೆಸರಿಡಬೇಕೆನ್ನುತ್ತೀರಿ?" ಎಂದು ಮಗುವಿನ ತಂದೆಗೆ ಸನ್ನೆಮಾಡಿ ಕೇಳಿದರು. ಆಗ ಜಕರೀಯನು ಬರೆಯುವ ಒಂದು ಹಲಗೆಯನ್ನು ತರಿಸಿಕೊಂಡು, "ಇವನ ಹೆಸರು ಯೊವಾನ್ನ" ಎಂದು ಬರೆದನು.  ಎಲ್ಲರೂ ಬೆರಗಾದರು. ತಕ್ಷಣವೇ ಅವನಿಗೆ ಬಾಯಿ ಬಂದಿತು; ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು. ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು. ಈ ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು. ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, "ಈ ಮಗು ಮುಂದೆ ಎಂಥವನಾಗುವನೋ!" ಎಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಅಭಯಹಸ್ತವು ಆ ಮಗುವಿನ ಮೇಲಿತ್ತು.

22.12.22 - " ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ!"

ಮೊದಲನೆಯ  ವಾಚನ : ಸಮುವೇಲನ  ಮೊದಲನೆಯ  ಗ್ರಂಥದಿಂದ  ವಾಚನ  1:24-28



ಹನ್ನಳು  ಮಗುವನ್ನು  ಶಿಲೋವಿನಲ್ಲಿದ್ದ  ಸರ್ವೇಶ್ವರನ  ಮಂದಿರಕ್ಕೆ  ತಂದಳು.   ಅವನು  ಇನ್ನೂ  ಚಿಕ್ಕವನು  ಆಗಿದ್ದನು.  ಜೊತೆಗೆ  ಅವರು  ಮೂರು  ವರ್ಷದ  ಹೋರಿಯೊಂದನ್ನು,  ಹತ್ತು  ಕಿಲೋಗ್ರಾಂ  ಹಿಟ್ಟನ್ನು  ಹಾಗು  ಒಂದು  ತಿತ್ತಿ  ದ್ರಾಕ್ಷಾರಸವನ್ನು  ತಂದಿದ್ದರು.  ಆ  ಹೋರಿಯನ್ನು  ಬಲಿದಾನ  ಮಾಡಿದ  ಮೇಲೆ  ಮಗುವನ್ನು  ಏಲಿಯ  ಬಳಿಗೆ  ತರಲಾಯಿತು.  ಹನ್ನಳು  ಏಲಿಗೆ,  " ಸ್ವಾಮಿ,  ನಿಮ್ಮ  ಜೀವದಾಣೆ,  ಹಿಂದೊಮ್ಮೆ  ಸರ್ವೇಶ್ವರನ  ಸನ್ನಿಧಿಯಲ್ಲಿ  ಪ್ರಾರ್ಥನೆಮಾಡುತ್ತಾ  ಇಲ್ಲಿ  ನಿಮ್ಮ  ಹತ್ತಿರ  ನಿಂತಿದ್ದ  ಮಹಿಳೆ  ನಾನೇ.   ಸರ್ವೇಶ್ವರ  ನನ್ನ  ಪ್ರಾರ್ಥನೆಯ  ಫಲವಾಗಿ  ಅನುಗ್ರಹಿಸಿದ  ಮಗನು  ಇವನೇ.   ಇವನನ್ನು  ಸರ್ವೇಶ್ವರನಿಗೆ  ಸಮರ್ಪಿಸಿಬಿಟ್ಟಿದ್ದೇನೆ.   ಬದುಕಿರುವ  ತನಕ  ಇವನು  ಅವರಿಗೇ  ಪ್ರತಿಷ್ಠಿತನು, " ಎಂದು  ಹೇಳಿದರು.   ಬಳಿಕ  ಅವರು  ಸರ್ವೇಶ್ವರಸ್ವಾಮಿಯನ್ನು  ಆರಾಧಿಸಿದರು.

ಕೀರ್ತನೆ:  1 ಸಮುವೇಲ 2:1, 4-5, 6-7, 8
ಶ್ಲೋಕ:  ಆನಂದಿಸುತ್ತಿದೆ  ನನ್ನ  ಮನ  ಸರ್ವೇಶ್ವರನಲಿ.
ಆನಂದಿಸುತ್ತಿದೆ  ನನ್ನ  ಮನ  ಸರ್ವೇಶ್ವರನಲಿ|
ಉನ್ನತೋನ್ನತವಾಗಿದೆ  ನನ್ನ  ಶಕ್ತಿ  ಆ  ದೇವನಲಿ||
ನನಗಿದೆ  ಶತ್ರುಗಳನ್ನು  ಧಿಕ್ಕರಿಸುವ  ಶಕ್ತಿ|
ನನಗಿತ್ತಿರುವನಾ  ಸಂತಸದಾಯಕ  ಮುಕ್ತಿ||

ಮುರಿದು  ಬಿದ್ದಿವೆ  ಶೂರರ  ಬಿಲ್ಲುಬಾಣಗಳು|
ದುರ್ಬಲರಾದರೋ  ಶೌರ್ಯದ  ನಡುಕಟ್ಟಿ  ನಿಂತಿಹರು||
ಉಂಡು  ಸುಖದಿಂದಿರುವವರು  ಹಸಿವುಗೊಂಡವರು|
ಹೊಟ್ಟೆಗಾಗಿ  ಕೂಲಿ  ಮಾಡುತ್ತಿಹರು,  ತೃಪ್ತರಿದ್ದವರು||
ಬಂಜೆ  ಹೆರುವಳು  ಆರೇಳು  ಮಕ್ಕಳನು|
ಒಬ್ಬಂಟಿಗಳಾಗಿರುವಳು  ಮಕ್ಕಳಿವೆ  ಎಂದವಳು||

ಜೀವಕೊಡುವವನು,  ತೆಗೆದುಕೊಳ್ಳುವವನು  ಆ  ಸರ್ವೇಶ್ವರನೇ|
ಪಾತಾಳಕ್ಕಿಳಿಸುವವನು,  ಮೇಲಕ್ಕೆಳೆದುಕೊಳ್ಳುವವನು  ಆತನೇ||
ಬಡತನ  ಸಿರಿತನ  ಕೊಡುವವನು  ಆ  ಸರ್ವೇಶ್ವರನೇ|
ತಗ್ಗಿಸುವವನು  ಹೆಚ್ಚಿಸುವವನು  ಆತನೇ||

ಎತ್ತುವನಾತ  ದೀನರನು  ಧೂಳಿನಿಂದ  ದರಿದ್ರರನು  ತಿಪ್ಪೆಯಿಂದ|
ಕುಳ್ಳರಿಸುವನವರನು  ಅಧಿಪತಿಗಳ  ಸಮೇತ||
ಅನುಗ್ರಹಿಸುವನು  ಹಕ್ಕಾಗಿ  ಆ  ಮಹಿಮಾಸನ|
ಕಾರಣ,  ಭೂಮಿಯ  ಆಧಾರಸ್ಥಂಭಗಳು  ಸರ್ವೇಶ್ವರನವೇ|
ಭೂಮಂಡಲವನು  ಅವುಗಳ  ಮೇಲೆ  ಸ್ಥಾಪಿಸಿದವನು  ಆತನೇ||

ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ!
ಓ  ಜನಾಂಗಗಳ  ಅರಸರೇ,  ಮತ್ತು  ಧರ್ಮಸಭೆಯ  ಮೂಲೆಗಲ್ಲೇ,  ಬನ್ನಿ,  ಮಣ್ಣಿನಿಂದ  ನೀವು  ಉಂಟುಮಾಡಿದ  ಮನುಷ್ಯನನ್ನು  ರಕ್ಷಿಸಲು  ಬನ್ನಿ,,
ಅಲ್ಲೆಲೂಯ!

ಶುಭಸಂದೇಶ  ವಾಚನ : ಸಂತ  ಲೂಕನ  ಬರೆದ  ಪವಿತ್ರ  ಶುಭಸಂದೇಶದಿಂದ  ವಾಚನ  1:46-56


 " ಮಾಡಿಹನೆನಗೆ  ಸರ್ವಶಕ್ತನು  ಮಹತ್ಕಾರ್ಯ!"
ಆ  ಕಾಲದಲ್ಲಿ  ಮರಿಯಳು  ಹೀಗೆಂದು  ಹೊಗಳಿದಳು:
" ಎನ್ನ  ಮನ  ಮಾಡುತ್ತಿದೆ  ಸರ್ವೇಶ್ವರನ  ಸ್ತುತಿ,  ಉಲ್ಲಾಸಿಸುತ್ತಿದೆ  ಮುಕ್ತಿದಾತ  ದೇವನಲಿ; 
ತನ್ನ  ದಾಸಿಯ  ದೀನತೆಯನು  ನೆನಪಿಗೆ  ತಂದುಕೊಂಡನಾತ.
ಧನ್ಯಳೆಂದು  ಹೊಗಹುವರೆನ್ನನು  ಇಂದಿನಿಂದ  ಸರ್ವ  ಜನಾಂಗ,
ಏಕೆನೆ  ಮಾಡಿಹನೆನಗೆ  ಸರ್ವಶಕ್ತನು  ಮಹತ್ಕಾರ್ಯ,  ನಿಜಕ್ಕೂ  ಆತನ  ನಾಮಧೇಯ  ಪರಮ  ಪೂಜ್ಯ.
ಆತನಲ್ಲಿ  ಭಯಭಕ್ತಿಯುಳ್ಳವರಿಗೆ  ಆತನ  ಪ್ರೀತಿ  ತಲತಲಾಂತರದವರೆಗೆ,
ಗರ್ವ   ಹೃದಯಿಗಳನಾತ  ಚದರಿಸಿರುವನು,  ಪ್ರದರ್ಶಿಸಿರುವನು  ತನ್ನ  ಬಾಹುಬಲವನು,
ಇಳಿಸಿಹನು  ಗದ್ದುಗೆಯಿಂದ  ಘನಾಧಿಪತಿಗಳನು,  ಏರಿಸಿರುವನು  ಉನ್ನತಿಗೆ  ದೀನದಲಿತರನು.
ತೃಪ್ತಿಪಡಿಸಿರುವನಾತ  ಹಸಿದವರನು  ಮೃಷ್ಟಾನ್ನದಿ,  ಹೊರದೂಡಿರುವನು  ಸಿರಿವಂತರನು  ಬರಿಗೈಯಲಿ,
ನೆರವಾದನು  ತನ್ನ  ದಾಸ  ಇಸ್ರಯೇಲನಿಗೆ,  ಪೂರ್ವಜರಿಗಿತ್ತ  ವಾಗ್ದಾನದ  ಮೇರೆಗೆ
ಮರೆಯಲಿಲ್ಲ  ಆತ  ಕರುಣೆತೋರಲು  ಅಬ್ರಹಾಮನಿಗೆ  ಅವನ  ಸಂತತಿಗೆ,  ಯುಗಯುಗಾಂತರದವರೆಗೆ.
ಮರಿಯಳು  ಸುಮಾರು  ಮೂರು  ತಿಂಗಳು  ಎಲಿಜಬೇತಳೊಡನೆ  ತಂಗಿದ್ದು  ತನ್ನ  ಮನೆಗೆ  ಹಿಂದಿರುಗಿದಳು.

21.12.22 - ಸಜ್ಜನರೇ, ಮಾಡಿರಿ ಪ್ರಭುವಿನ ಗುಣಗಾನ

ಮೊದಲನೇ ವಾಚನ: ಪರಮಗೀತೆ  2:8-14

ಅಗೋ, ನನ್ನ ಕಾಂತನ ಸಪ್ಪಳ! ಹಾರಿ ಬರುತಿಹನು ಬೆಟ್ಟಗಳ ಮೇಲೆ, ಜಿಗಿದು ಬರುತಿಹನು ಗುಡ್ಡಗಳ ಮೇಲೆ. ನನ್ನ ಪ್ರಿಯನು ಇಹನು ಜಿಂಕೆಯಂತೆ, ಎಳೆಯ ಹುಲ್ಲಿನಂತೆ. ಇಗೋ, ನಿಂತಿಹನು ಗೋಡೆಯ ಹಿಂಭಾಗದಲೆ, ದೃಷ್ಟಿಸಿ ನೋಡುತಿಹನು ಕಿಟಕಿಗಳಲಿ, ಇಣುಕು ಹಾಕುತಿಹನು ಜಾಲಾಂತರಗಳಲಿ. ನನ್ನ ನಲ್ಲನು ನನ್ನೊಡನೆ ಮಾತಾಡಿ ಹೀಗೆಂದನು: 'ಎದ್ದು ಬಾ, ಪ್ರಿಯತಮೆ,  ಬಾ ನನ್ನೊಂದಿಗೆ, ಸುಂದರಿಯೇ, ಇಗೋ, ಚಳಿಗಾಲ ಕಳೆಯಿತು, ಮಳೆಗಾಲ ಮುಗಿಯಿತು. ಧರೆಯಲ್ಲೆಲ್ಲ ಹೂಗಳು ಅರಳಿವೆ, ನಲಿದು ಹಾಡುವ ಕಾಲ ಬಂದಿದೆ, ಬೆಳವಕ್ಕಿಯ ಕೂಗು ನಾಡಿನಲ್ಲಿ ಕೇಳಿಸುತ್ತಿದೆ; ಅಂಜೂರದ ಕಾಯಿಗಳು ಹಣ್ಣಾಗಿವೆ, ದ್ರಾಕ್ಷಾಬಳ್ಳಿಗಳು ಹೂ ಬಿಟ್ಟಿವೆ, ಅದರ ಪರಿಮಳ ಹರಡುತ್ತಿದೆ." ಎದ್ದು ಬಾ, ನನ್ನ ಪ್ರೆಯಸಿಯೇ, ಬಾ ನನ್ನೂಂದಿಗೆ, ಸುಂದರಿಯೇ. ಬಂಡೆಯ ಬಿರುಕುಗಳಲ್ಲಿ, ಸಂದುಗಳ ಮರೆಯಲ್ಲಿ ತಂಗಿರುವ ಪಾರಿವಾಳವೇ ಬಾ. ನಿನ್ನ ರೂಪವನು ನನಗೆ ಕಾಣಿಸು, ನಿನ್ನ ದನಿಯನು ನನಗೆ ಕೇಳಿಸು. ನಿನ್ನ ದನಿ ಎನಿತೋ ಇಂಪು!ನಿನ್ನ ರೂಪ ಎನಿತೋ ತಂಪು!

ಕೀರ್ತನೆ: 33:2-3, 11-12, 20-21
ಶ್ಲೋಕ: ಸಜ್ಜನರೇ, ಮಾಡಿರಿ ಪ್ರಭುವಿನ ಗುಣಗಾನ, ಹಾಡಿರಿ ಆತನಿಗೆ ಕೀರ್ತನೆಯನು ನೂತನ.

ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ|
ಕೀರ್ತಿಸಿ ದಶತಂತಿ ವೀಣೆಯನು ಭಾರಿಸುತ ||
ನೂತನ ಕೀರ್ತನೆಯನು ಆತನಿಗೆ ಹಾಡಿರಿ|
ಇಂಪಾಗಿ ಭಾರಿಸಿ, ಸೊಂಪಾಗಿ ಭಜಿಸಿರಿ||

ಪ್ರಭುವಿನ ಯೋಜನೆ ಶಾಶ್ವತ|
ಆತನ ಸಂಕಲ್ಪ ಅನವರತ||
ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ|
ಸಜ್ಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ||

ಕಾದಿದೆ ಎನ್ನ ಮನ ಪ್ರಭುವಿಗಾಗಿ|
ಆತನಿಹನು ಎನಗೆ ಗುರಾಣಿಯಾಗಿ||
ನೆಮ್ಮದಿಯಿಂದಿದೆ ಎನ್ನ ಮನ ಆತನಲಿ|
ನಂಬಿರುವೆನು ಆತನ ಶ್ರೀ ನಾಮದಲಿ||

ಅಲ್ಲೆಲೂಯ, ಅಲ್ಲೆಲೂಯ!
ಮೋಕ್ಕರಾಜ್ಯದ ಬಾಗಿಲನ್ನು ತೆರೆಯುವ ಓ ದಾವೀದನ ಬೀಗದಕೈಗಳೇ, ಕಾರ್ಗತ್ತಲೆಯ ಸೆರೆಮನೆಯಲ್ಲಿ ಬಂಧಿತರಾದವರನ್ನು ಬಿಡುಗಡೆ ಮಾಡಲು ಬನ್ನಿ !
ಅಲ್ಲೆಲೂಯ!


ಶುಭಸಂದೇಶ: ಲೂಕ 1:39-45

ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ, ಹರ್ಷೋದ್ಗಾರದಿಂದ ಹೀಗೆಂದಳು: "ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು."

20.12.22

ಮೊದಲನೆಯ ವಾಚನ: ಯೆಶಾಯ 7:10-14

ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ: “ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು” ಎಂದರು. ಅದಕ್ಕೆ ಆಹಾಜನು “ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ ” ಎಂದನು. ಆಗ ಯೆಶಾಯನು: “ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ? ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು."

ಕೀರ್ತನೆ: 24: 1-2, 3-4, 5-6
ಶ್ಲೋಕ: ಆಗಮಿಸುತಿಹನಿದೋ ಮಹಿಮಾವಂತ ರಾಜಾದಿರಾಜನು ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು.

ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ
ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ
ಕಡಲನು ತಳಪಾಯವನಾಗಿಸಿದವನು ಆತನೇ
ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೇ.

ಪ್ರಭುವಿನ ಶಿಖರವನು ಏರಬಲ್ಲವನಾರು?
ಆ ನಿವಾಸದಲಿ ನಿಲ್ಲಲು ಯೋಗ್ಯನಾರು?
ಅಂಥವನಿರಬೇಕು ಶುದ್ಧಹಸ್ತನು, ಸುಮನಸ್ಕನು
ಅನಾಚಾರಕೆ, ಅಪ್ರಾಮಾಣಿಕತೆಗೆ ಒಲಿಯನವನು.

ಲಭಿಸುವುದಾತನಿಗೆ ಶುಭ ಪ್ರಭುವಿನಿಂದ
ನೀತಿಯ ಸತ್ಫಲ ರಕ್ಷಕ ದೇವನಿಂದ
ಇಂಥವರೇ ದೇವರ ದರ್ಶನಾಭ್ಯರ್ಥಿಗಳು
ಇಂಥವರೆ ಯಕೋಬ ದೇವನ ಭಕ್ತಾದಿಗಳು.

ಶುಭಸಂದೇಶ: ಲೂಕ 1:26-38

ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ 'ಯೇಸು’ ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು. ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ದೇವರ ಪುತ್ರ’ ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು. ಆಗ ಮರಿಯಳು, “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

19.12.22 - "ಜಕರೀಯಾ, ಭಯ ಪಡಬೇಡ! ನಿನ್ನ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾರೆ"

 ಮೊದಲನೇ ವಾಚನ: ನ್ಯಾಯಸ್ಥಾಪಕರು 13:2-7, 24-25

ಚೊರ್ಗಾ ಎಂಬ ಊರಲ್ಲಿ ದಾನ್ ಕುಲದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿ ಬಂಜೆಯಾಗಿದ್ದುದರಿಂದ ಅವನಿಗೆ ಮಕ್ಕಳಿರಲಿಲ್ಲ. ಒಂದಾನೊಂದು ದಿನ ಸರ್ವೇಶ್ವರನ ದೂತ ಆಕೆಗೆ ಪ್ರತ್ಯಕ್ಷನಾಗಿ, "ಇಗೋ, ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು  ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಈ ಕಾರಣ ಜಾಗರೂಕತೆಯಿಂದಿರು; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು. ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇ ಬಾರದು. ಅವನು ಹುಟ್ಟಿನಿಂದ ದೇವರಿಗೆ ಪ್ರತಿಷ್ಠಿತನಾಗುವನು. ಅವನು ಇಸ್ರಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವುದಕ್ಕೆ ಪ್ರಾರಂಭಿಸುವನು," ಎಂದನು. ತರುವಾಯ ಆ ಸ್ತ್ರೀ ತನ್ನ ಗಂಡನ ಬಳಿಗೆ ಹೋಗಿ, "ಒಬ್ಬ ದೇವಪುರುಷ ನನ್ನ ಹತ್ತಿರ ಬಂದಿದ್ದನು. ಅವನ ರೂಪ ದೇವದೂತನ ರೂಪದಂತೆ ಘನಗಂಭೀರವಾಗಿತ್ತು. 'ಎಲ್ಲಿಂದ ಬಂದಿರಿ? ಎಂದು ನಾನು ಅವನನ್ನು ಕೇಳಲಿಲ್ಲ; ಅವನು ತನ್ನ ಹೆಸರನ್ನು ತಿಳಿಸಲಿಲ್ಲ. ಆದರೆ ಆತ ನನಗೆ, 'ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಆದ್ದರಿಂದ ನೀನು ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು. ಯಾವ ನಿಷಿದ್ಧಾಹಾರವನ್ನೂ ಮುಟ್ಟಬೇಡ; ಆ ಮಗು ಹುಟ್ಟಿದಂದಿನಿಂದ ಸಾಯುವವರೆಗೆ ಪ್ರತಿಷ್ಠಿತನಾಗಿರುವನು.' ಎಂದು ಹೇಳಿದನು," ಎಂದಳು. ಆ ಮಹಿಳೆ ಒಬ್ಬ ಮಗನನ್ನು ಹೆತ್ತು ಅವನಿಗೆ 'ಸಂಸೋನ' ಎಂದು ಹೆಸರಿಟ್ಟಳು. ಹುಡುಗ ಬೆಳೆದು ದೊಡ್ಡವನಾದ. ಸರ್ವೇಶ್ವರನ ಆಶೀರ್ವಾದ ಅವನ ಮೇಲಿತ್ತು. ಇದಲ್ಲದೆ, ಅವನು ಚೊರ್ಗಕ್ಕೂ ಎಷ್ಟಾವೋಲಿಗೂ ಮದ್ಯದಲ್ಲಿರುವ ದಾನ್ ಕುಲದ ಪಾಳೆಯದಲ್ಲಿದ್ದಾಗ ಸರ್ವೇಶ್ವರನ ಆತ್ಮ ಅವನನ್ನು ಚೇತನಗೊಳಿಸ ತೊಡಗಿತು.

ಕೀರ್ತನೆ: 71:3-4, 5-6, 16-17

ಶ್ಲೋಕ: ನಿನ್ನ ಗುಣಗಾನ ನನ್ನ ಬಾಯ್ತುಂಬ ನಿನ್ನ ಘೋಷಣೆ ನನಗೆ ದಿನದಾದ್ಯಂತ.

 ಶುಭಸಂದೇಶ: ಲೂಕ 1:5-25

ಜುದೇಯ ಪ್ರಾಂತ್ಯದ ಅರಸನಾಗಿದ್ದ ಹೆರೋದನ ಕಾಲದಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಇವನ ಪತ್ನಿಯ ಹೆಸರು ಎಲಿಜಬೇತ್. ಇವಳೂ ಆರೋನನ ಯಾಜಕವಂಶಕ್ಕೆ ಸೇರಿದವಳು. ದಂಪತಿಗಳಿಬ್ಬರೂ ದೇವರ ದೃಷ್ಟಿಯಲ್ಲಿ ಭಯಭಕ್ತಿಯುಳ್ಳವರಾಗಿದ್ದರು. ಸರ್ವೇಶ್ವರನ ವಿಧಿ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದರು. ಎಲಿಜಬೇತಳು ಬಂಜೆ ಆದುದರಿಂದ ಅವರಿಗೆ ಮಕ್ಕಳಿರಲಿಲ್ಲ. ಅಲ್ಲದೆ ಅವರಿಬ್ಬರೂ ಮುದುಕರಾಗಿದ್ದರು. ಒಮ್ಮೆ ತನ್ನ ವರ್ಗದ ಸರದಿ ಬಂದಾಗ ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕ ವಿಧಿಯನ್ನು ನೆರವೇರಿಸುತ್ತಿದ್ದನು. ಮಹಾದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಧೂಪಾರತಿಯನ್ನು ಅರ್ಪಿಸುವ ಸರದಿಗೆ, ಯಾಜಕರ ಸಂಪ್ರದಾಯದ ಪ್ರಕಾರ, ಚೀಟು ಹಾಕಿದಾಗ ಅದು ಜಕರೀಯನ ಪಾಲಿಗೆ ಬಂದಿತು. ಅಂತೆಯೇ,  ಅವನು ಧೂಪಾರತಿಯನ್ನು ಅರ್ಪಿಸುತ್ತಿದ್ದಾಗ ಭಕ್ತಸಮೂಹವು ಹೊರಗೆ ನಿಂತು ಪ್ರಾರ್ಥನೆ ಮಾಡುತ್ತಿತ್ತು. ಆಗ ಧೂಪಪೀಠದ ಬಲಗಡೆ ಅವನಿಗೆ ದೇವದೂತನೊಬ್ಬನು ಪ್ರತ್ಯಕ್ಷನಾದನು. ಅವನನ್ನು ಕಾಣುತ್ತಲೇ ತತ್ತರಗೊಂಡ ಜಕರೀಯನು ಭಯಭ್ರಾಂತನಾದನು. ದೂತನು ಅವನಿಗೆ, "ಜಕರೀಯಾ, ಭಯಪಡಬೇಡ! ನಿನ್ನ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾರೆ. ನಿನ್ನ ಪತ್ನಿ ಎಲಿಜಬೇತಳಲ್ಲಿ ನಿನಗೆ ಒಂದು ಗಂಡು ಮಗು ಹುಟ್ಟುವುದು. ನೀನು ಅವನಿಗೆ 'ಯೊವಾನ್ನ' ಎಂದು ನಾಮಕರಣ ಮಾಡಬೆಕು. ಆ ಮಗುವಿನ ಜನನವು ನಿಮಗೆ ಹರ್ಷಾನಂದವನ್ನು ಉಂಟುಮಾಡುವುದು; ಬಹು ಜನಕ್ಕೆ ಸಂತಸವನ್ನು ತರುವುದು. ಸರ್ವೇಶ್ವರನ ದೃಷ್ಟಿಯಲ್ಲಿ ಅವನು ಮಹಾತ್ಮನಾಗುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಸೇವಿಸನು; ತಾಯಿಯ ಉದರದಿಂದಲೇ ಪವಿತ್ರಾತ್ಮಭರಿತನಾಗುವನು. ಇಸ್ರಯೇಲರಲ್ಲಿ ಅನೇಕರನ್ನು ಅವರ ದೇವರಾದ ಸರ್ವೇಶ್ವರನ ಕಡೆಗೆ ಮರಳಿ ತಿರುಗಿಸುವನು. ಎಲೀಯನಂತೆ ಶಕ್ತಿಪ್ರಭಾವಗಳಿಂದ ಕೂಡಿದವನಾಗಿ ಪ್ರಭುವಿನ ಮುಂದೂತನಾಗುವನು.  ತಂದೆ ಮಕ್ಕಳನ್ನು ಪುನಃ ಒಂದಾಗಿಸುವನು. ಸತ್ಪರುಷರ ಸನ್ಮಾರ್ಗಕ್ಕೆ ಅವಿಧೇಯರು ಹಿಂದಿರುಗುವಂತೆ ಮಾಡುವನು. ಹೀಗಾಗಿ ಪ್ರಭುವಿಗೆ ಯೋಗ್ಯ ಪ್ರಜೆಯನ್ನು ಸಿದ್ಧಗೊಳಿಸುವನು," ಎಂದನು. ಅದಕ್ಕೆ ಜಕರೀಯನು, "ಈ ಮಾತು ನಿಜವಾಗುವುದೆಂದು ನಾನು ತಿಳಿಯುವುದಾದರೂ ಹೇಗೆ? ನಾನೋ ಮುದುಕ; ನನ್ನ ಪತ್ನಿಗೂ ಮುಪ್ಪು," ಎಂದನು. ಆಗ ದೇವದೂತನು, "ನಾನು ದೇವರ ಸನ್ನಿಧಿಯಲ್ಲಿ ಸೇವೆಮಾಡುವ  ಗಬ್ರಿಯೇಲನು; ಈ ಶುಭಸಮಾಚಾರವನ್ನು ನಿನಗೆ ತಿಳಿಸುವುದಕ್ಕಾಗಿ ದೇವರ ಅಪ್ಪಣೆಯ ಪ್ರಕಾರ ಬಂದವನು. ನಾನು ತಿಳಿಸಿದ ಸಂದೇಶವು ಸಕಾಲದಲ್ಲಿ ನೆರವೇರುವುದು. ಆದರೆ ನೀನು ಅದನ್ನು ನಂಬದೆ ಹೋದ ಕಾರಣ ಅದೆಲ್ಲಾ ಈಡೇರುವ ತನಕ ಮಾತನಾಡಲಾಗದೆ ಮೂಕನಾಗಿರುವೆ," ಎಂದನು. ಇತ್ತ ಭಕ್ತಜನರು ಜಕರೀಯನಿಗಾಗಿ ಎದುರು ನೋಡುತ್ತಾ ದೇವಾಲಯದಲ್ಲಿ ಅವನು ಇಷ್ಟು ತಡಮಾಡಲು ಕಾರಣವೇನಿರಬಹುದೆಂದು ಆಶ್ಚರ್ಯಪಡುತ್ತಿದ್ದರು. ಅಷ್ಟರಲ್ಲಿ ಜಕರೀಯನು ಹೊರಗೆ ಬಂದು ಮಾತನಾಡಲೆತ್ನಿಸಿದರೂ ಅವನ ಬಾಯಿಂದ ಮಾತೇ ಹೊರಡಲಿಲ್ಲ. ಬರೀ ಕೈಸನ್ನೆ ಮಾಡುತ್ತಿದ್ದ ಅವನಿಗೆ ದೇವಾಲಯದಲ್ಲಿ ಏನೋ ದಿವ್ಯದರ್ಶನ ಆಗಿರಬೇಕೆಂದು ಜನರು ಅರಿತುಕೊಂಡರು. ಅಂದಿನಿಂದ ಅವನು ಮೂಕನಾಗಿಯೇ ಇದ್ದನು. ತನ್ನ ಯಾಜಕ ಸೇವಾಸರದಿಯು ಮುಗಿದ ನಂತರ ಜಕರೀಯನು ಮನೆಗೆ ಹಿಂದಿರುಗಿ ಹೋದನು. ಕೆಲವು ದಿನಗಳಾದ ಬಳಿಕ ಅವನ ಪತ್ನಿ ಎಲಿಜಬೇತಳು ಗರ್ಭಿಣಿಯಾಗಿ, ಐದು ತಿಂಗಳು ಮನೆಯಲ್ಲಿ ಮರೆಯಾಗಿದ್ದಳು. "ಕಟ್ಟಕಡೆಗೆ ಸರ್ವೇಶ್ವರ ನನಗೆ ಕರುಣೆ ತೋರಿದ್ದಾರೆ; ಜನರ ನಡುವೆ ನನಗಿದ್ದ ಅವಮಾನವನ್ನು ತೊಲಗಿಸಿದ್ದಾರೆ," ಎಂದುಕೊಳ್ಳುತ್ತಿದ್ದಳು.

18.12.22 - "ಆಕೆ ಗರ್ಭ ಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ"

ಮೊದಲನೇ ವಾಚನ: ಯೆಶಾಯ 7:10-14 

ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ:, "ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೋ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು" ಎಂದರು. ಅದಕ್ಕೆ ಆಹಾಜನು "ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ" ಎಂದನು. ಆಗ ಯೆಶಾಯನು: "ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ? ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭ ತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು. 

ಕೀರ್ತನೆ: 24:1-2, 3-4, 5-6 

ಶ್ಲೋಕ: ಆಗಮಿಸುತಿಹನಿದೋ ಮಹಿಮಾವಂತ ರಾಜಾದಿರಾಜನು ಇವನೇ ಪ್ರಭು, ಯುದ್ಧವೀರನು,  ಶಕ್ತಿಸಮರ್ಥನು 

ಎರಡನೇ ವಾಚನ: ರೋಮನರಿಗೆ 1:1-7 

ದೇವರಿಗೆ ಅತ್ಯಂತ ಪ್ರಿಯರು ಹಾಗು ದೇವಜನರಾಗಲು ಕರೆಹೊಂದಿದವರು ಆದ ರೋಮ್ ನಗರ ನಿವಾಸಿಗಳೆಲ್ಲರಿಗೆ: ಕ್ರಿಸ್ತಯೇಸುವಿನ ದಾಸನೂ ಪ್ರೇಷಿತನಾಗಲು ಕರೆ ಹೊಂದಿದವನೂ ದೇವರ ಶುಭಸಂದೇಶವನ್ನು ಸಾರಲು ನೇಮಕಗೊಂಡವನೂ ಆದ ಪೌಲನು ಬರೆಯುವ ಪತ್ರ: ನಮ್ಮ ತಂದೆಯಾದ ದೇವರು ಹಾಗು ಪ್ರಭುವಾದ ಯೆಸುಕ್ರಿಸ್ತರು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ. ದೇವರು ತಮ್ಮ ಶುಭಸಂದೇಶವನ್ನು ನೀಡುವುದಾಗಿ ಪ್ರವಾದಿಗಳ ಮುಖಾಂತರ ಮುಂಚಿತವಾಗಿಯೇ ಪವಿತ್ರಗ್ರಂಥದಲ್ಲಿ ವಾಗ್ದಾನಮಾಡಿದ್ದರು. ಈ ಸಂದೇಶ ದೇವರ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ಕುರಿತಾದುದು. ಮನುಷ್ಯತ್ವದ ಮಟ್ಟಿಗೆ ಯೇಸು ದಾವೀದನ ವಂಶಜರು; ದೈವಿಕ ಪರಿಶುದ್ಧತೆಯ ಮಟ್ಟಿಗೆ ಇವರು ದೇವರ ಶಕ್ತಿಯನ್ನು ವ್ಯಕ್ತಪಡಿಸುವ ದೇವರ ಪುತ್ರ. ಸತ್ತು ಪುನರುತ್ಥಾನಹೊಂದಿ ಇದನ್ನು ಖಚಿತಪಡಿಸಿದವರು. ಇವರ ನಾಮ ಮಹಿಮೆಗೋಸ್ಕರವಾಗಿಯೇ ಸರ್ವಜನಾಂಗಗಳೂ ಇವರನ್ನು ವಿಶ್ವಾಸಿಸಿ, ವಿಧೇಯರಾಗಿ ನಡೆಯುವಂತೆ ಮಾಡಲು ಪ್ರೇಷಿತನಾಗುವ ಸೌಭಾಗ್ಯ ನನ್ನದಾಯಿತು. ಆ ಯೇಸುಕ್ರಿಸ್ತರ ಮುಖಾಂತರವೇ ದೇವರು ಈ ಭಾಗ್ಯವನ್ನು ನನಗೆ ಅನುಗ್ರಹಿಸಿದರು. ಯೇಸುಕ್ರಿಸ್ತರಿಗೆ ಸ್ವಂತದವರಾಗಲು ಕರೆಹೊಂದಿರುವ ನೀವು ಕೂಡ ಸರ್ವ ಜನಾಂಗಗಳಲ್ಲಿ ಸೇರಿದ್ದೀರಿ. 

ಶುಭಸಂದೇಶ: ಮತ್ತಾಯ 1:18-24 

ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮುಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ  ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು. ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭ ಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ. ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು  "ಯೇಸು"  ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವನು ಆತನೇ,", ಎಂದನು. "ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು,  "ಇಮ್ಮಾನುವೇಲ್"  ಎಂದು ಆತನಿಗೆ ಹೆಸರಿಡುವರು" ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು.  "ಇಮ್ಮಾನುವೇಲ್"  ಎಂದರೆ  "ದೇವರು ನಮ್ಮೊಡನೆ ಇದ್ದಾರೆ" ಎಂದು ಅರ್ಥ. ಆಗ ಜೋಸೆಫನು ಎಚ್ಚೆತ್ತು ದೇವದೂತನ ಆಜ್ಞೆಯ ಪ್ರಕಾರ ಮರಿಯಳನ್ನು ವಿವಾಹ ಮಾಡಿಕೊಂಡನು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...