07.10.22 - "ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ"

ಮೊದಲನೇ ವಾಚನ: ಗಲಾತ್ಯರಿಗೆ 3:7-14

ಸಹೋದರರೇ, ಯಾರು ವಿಶ್ವಾಸದಿಂದ ಜೀವಿಸುತ್ತಾರೋ ಅವರೇ ಅಬ್ರಹಾಮನ ಮಕ್ಕಳೆಂದು ತಿಳಿದುಕೊಳ್ಳಿ. ಈ ವಿಶ್ವಾಸದ ಮೂಲಕವೇ ಅನ್ಯಧರ್ಮೀಯರನ್ನು ಕೂಡ ದೇವರು ತಮ್ಮ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ, ಎಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆಯಲಾಗಿತ್ತು. ಈ ಕಾರಣದಿಂದಲೇ ಅಬ್ರಹಾಮನಿಗೆ, “ನಿನ್ನ ಮುಖಾಂತರವೇ ಎಲ್ಲಾ ಜನಾಂಗಗಳು ಆಶೀರ್ವಾದವನ್ನು ಪಡೆಯುವುವು,” ಎಂಬ ಶುಭವರ್ತಮಾನವನ್ನು ಪಡೆಯುವುವು,” ಎಂಬ ಶುಭವರ್ತಮಾನವನ್ನು ಮುಂಚಿತವಾಗಿ ತಿಳಿಸಲಾಯಿತು. ಹೀಗಿರಲಾಗಿ, ವಿಶ್ವಾಸದಿಂದ ಬಾಳುವವರು ವಿಶ್ವಾಸಿಯಾದ ಅಬ್ರಹಾಮನು ಪಡೆದ ಸೌಭಾಗ್ಯವನ್ನೇ ಪಡೆಯುವರು. ಧರ್ಮಶಾಸ್ತ್ರದ ವಿಧಿನಿಯಮಗಳನ್ನೇ ಆಧಾರವಾಗಿಟ್ಟುಕೊಂಡು ಬಾಳುವವರು ಶಾಪಗ್ರಸ್ತರು. ಏಕೆಂದರೆ, “ಧರ್ಮಗ್ರಂಥದಲ್ಲಿ ಬರೆದಿರುವುದನ್ನೆಲ್ಲಾ ಅನುದಿನವೂ ಕೈಗೊಂಡು ನಡೆಯದ ಪ್ರತಿಯೊಬ್ಬನೂ ಶಾಪಗ್ರಸ್ತನು,” ಎಂದು ಲಿಖಿತವಾಗಿದೆ. ಇದಲ್ಲದೆ, ಧರ್ಮಶಾಸ್ತ್ರ ವಿಧಿಸುವುದನ್ನು ಪೂರೈಸುವುದರಿಂದ ಯಾರೂ ದೇವರೊಡನೆ ಸತ್ಸಂಬಂಧ ಪಡೆಯಲಾರರು ಎಂಬುದು ಸಹ ಸ್ಪಷ್ಟವಾಗಿದೆ. ಏಕೆಂದರೆ, “ಯಾರು ದೇವರೊಡನೆ ಸತ್ಸಂಬಂಧವನ್ನು ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ” ಎಂದು ಪವಿತ್ರಗ್ರಂಥದಲ್ಲೇ ಲಿಖಿತವಾಗಿದೆ. ಧರ್ಮಶಾಸ್ತ್ರ ವಿಶ್ವಾಸವನ್ನು ಆಧರಿಸಿಲ್ಲ, ಬದಲಿಗೆ, “ಅದರ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕವಾಗಿ ಜೀವಿಸುತ್ತಾನೆ,” ಎಂದು ಬರೆಯಲಾಗಿದೆ. ಮರಕ್ಕೆ ತೂಗುಹಾಕಲಾದ ಪ್ರತಿ ಒಬ್ಬನೂ ಶಾಪಗ್ರಸ್ತನು,” ಎಂದು ಬರೆದಿರುವಂತೆ, ನಮಗೋಸ್ಕರ ಕ್ರಿಸ್ತಯೇಸು ಶಾಪಸ್ವರೂಪಿಯಾಗಿ ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವ ಶಾಪದಿಂದ ನಮ್ಮನ್ನು ಪಾರುಮಾಡಿದರು. ಇದರಿಂದಾಗಿ ಅಬ್ರಹಾಮನಿಗೆ ದೊರಕಿದ ಸೌಭಾಗ್ಯ, ಕ್ರಿಸ್ತಯೇಸುವಿನ ಮುಖಾಂತರ ಅನ್ಯಧರ್ಮೀಯರಿಗೂ ದೊರಕುವಂತಾಯಿತು; ವಿಶ್ವಾಸದ ಮೂಲಕವಾಗಿ, ದೇವರು ವಾಗ್ದಾನ ಮಾಡಿದ ಪವಿತ್ರಾತ್ಮ ನಮಗೂ ದೊರಕುವಂತಾಯಿತು.

ಕೀರ್ತನೆ: 111:1-2, 3-4, 5-6

ಶ್ಲೋಕ: ತನ್ನೊಡಂಬಡಿಕೆಯ ಚಿರ ನೆನಪಿರುವುದು ಪ್ರಭುವಿಗೆ 

ಶುಭಸಂದೇಶ: ಲೂಕ 11:15-26


ಜನರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಭುತಕಾರ್ಯವನ್ನು ಮಾಡಿತೋರಿಸುವಂತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊಂಡು ಯೇಸು, “ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. “ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ. “ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ,” ಎಂದರು. ಯೇಸುಸ್ವಾಮಿ ಬೋಧನೆಯನ್ನು ಮುಂದುವರಿಸುತ್ತಾ, “ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಲೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆ ಸಿಗದ ಕಾರಣ ಅದು, ‘ನಾನು ಬಿಟ್ಟುಬಂದ ನನ್ನ ಮನೆಗೇ ಹಿಂದಿರುಗುತ್ತೇನೆ’ ಎಂದುಕೊಳ್ಳುತ್ತದೆ. ಅದು ಮರಳಿ ಬಂದಾಗ, ಮನೆ ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟವಾಗಿರುವುದನ್ನೂ ಕಾಣುತ್ತದೆ. ಪುನಃ ಹೊರಟು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳ ಹೊಕ್ಕು ನೆಲಸುತ್ತವೆ. ಕೊನೆಗೆ ಅವನ ಪರಿಸ್ಥಿತಿ ಪೂರ್ವಸ್ಥಿತಿಗಿಂತಲೂ ಅಧೋಗತಿಗೆ ಇಳಿಯುತ್ತದೆ,” ಎಂದರು.

06.10.22 - "ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ? "

 ಮೊದಲನೇ ವಾಚನ: ಗಲಾತ್ಯರಿಗೆ 3:1-5

ಎಲೈ ಮತಿಗೆಟ್ಟ ಗಲಾತಿಯರೇ, ನಿಮ್ಮನ್ನು ಮರುಳುಗೊಳಿಸಿದವರು ಯಾರು? ಯೇಸುಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣಾರ್ಪಣೆ ಮಾಡಿದ್ದನ್ನು ನಿಮ್ಮ ಕಣ್ಣೆದುರಿಗೇ ಚಿತ್ರಿತಗೊಳಿಸಲಿಲ್ಲವೆ? ನಿಮ್ಮ ಬಳಿ ಒಂದು ವಿಷಯವನ್ನು ಕೇಳಲಿಚ್ಛಿಸುತ್ತೇನೆ; ನೀವು ಪವಿತ್ರಾತ್ಮರನ್ನು ಪಡೆದುದು ಹೇಗೆ? ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲೋ? ಇಲ್ಲವೆ ಶುಭಸಂದೇಶವನ್ನು ಕೇಳಿ ವಿಶ್ವಾಸಿಸಿದ್ದರಿಂದಲೋ? ನೀವು ಪವಿತ್ರಾತ್ಮ ಸಂಬಂಧವಾದ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿಯೂ ಈಗ ಅದನ್ನು ಕೇವಲ ದೇಹಸಂಬಂಧವಾದ ವಿಧಿಯಿಂದ ಪೂರೈಸಬೇಕೆಂದಿದ್ದೀರೋ? ನೀವು ಅಷ್ಟು ಮತಿಗೆಟ್ಟವರೋ? ನಿಮ್ಮ ಅನುಭವಗಳೆಲ್ಲವೂ ವ್ಯರ್ಥವಾದುವು ಎಂದು ಹೇಳೋಣವೇ? ದೇವರು ನಿಮಗೆ ಪವಿತ್ರಾತ್ಮರನ್ನು ಪ್ರಧಾನಮಾಡಿ ಮಹತ್ಕಾರ್ಯಗಳನ್ನು ಎಸಗುತ್ತಾ ಬಂದಿದ್ದಾರೆ. ಹಾಗೆ ಮಾಡುತ್ತಿರುವುದು, ನೀವು ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲ್ಲ, ಶುಭಸಂದೇಶವನ್ನು ಕೇಳಿ, ವಿಶ್ವಾಸ ಇಟ್ಟಿರುವುದರಿಂದ.

ಲೂಕ: 1:69-70, 71-72, 73-75

ಶ್ಲೋಕ: ಸ್ತುತಿಸ್ತೋತ್ರ ಇಸ್ರಯೇಲಿನ  ದೇವರಾದ ಸರ್ವೇಶ್ವರನಿಗೆ 

ಶುಭಸಂದೇಶ: ಲೂಕ 11:5-13


ಯೇಸುಸ್ವಾಮಿ ಶಿಷ್ಯರಿಗೆ ಹೀಗೆಂದರು: “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, ‘ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು. ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು, ಈ ಸ್ನೇಹಿತ ಒಳಗಿನಿಂದಲೇ, ‘ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ,’ ಎಂದು ಉತ್ತರ ಕೊಡುವುದು ಸಹಜವಲ್ಲವೇ? ಆದರೂ, ತನ್ನ ಗೆಳೆಯ ಇವನು ಎಂದು ಎದ್ದುಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದುಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ. ಆದುದರಿಂದ: ‘ಕೇಳಿರಿ, ನಿಮಗೆ ದೊರಕುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ, ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು.’ “ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ?  ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ?  ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ.”

05.10.22 - “ನೀವು ಹೀಗೆ ಪ್ರಾರ್ಥನೆ ಮಾಡಬೇಕು"

 ಮೊದಲನೇ ವಾಚನ: ಗಲಾತ್ಯರಿಗೆ 2:1-2, 7-14


ಹದಿನಾಲ್ಕು ವರ್ಷಗಳು ಕಳೆದ ಮೇಲೆ ತೀತನನ್ನು ಕರೆದುಕೊಂಡು ಬಾರ್ನಬನ ಜೊತೆಯಲ್ಲಿ ಪುನಃ ಜೆರುಸಲೇಮಿಗೆ ಹೋದೆ. ದೇವಪ್ರೇರಣೆಗೆ ಅನುಸಾರವಾಗಿಯೇ ಅಲ್ಲಿಗೆ ಹೋದೆ. ಅನ್ಯಧರ್ಮೀಯರಿಗೆ ನಾನು ಸಾರುತ್ತಿದ್ದ ಸಂದೇಶ ಏನೆಂಬುದನ್ನು ಅಲ್ಲಿದ್ದ ಕೆಲವು ಗಣ್ಯವ್ಯಕ್ತಿಗಳಿಗೆ ಪ್ರತ್ಯೇಕವಾಗಿ ತಿಳಿಸಿದೆ. ಅದುವರೆಗೆ ನಾನು ಪಟ್ಟ ಶ್ರಮವಾಗಲಿ ಈಗ ಪಡುತ್ತಿರುವ ಶ್ರಮವಾಗಲಿ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಹೀಗೆ ಮಾಡಿದೆ. ಬದಲಾಗಿ, ಯೆಹೂದ್ಯರಿಗೆ ಶುಭಸಂದೇಶವನ್ನು ಸಾರುವ ಸೇವೆಯನ್ನು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರುವ ಸೇವಾಕಾರ್ಯವನ್ನು ದೇವರು ನನಗೆ ವಹಿಸಿಕೊಟ್ಟಿದ್ದಾರೆ ಎಂಬುದನ್ನು ಆ ಗಣ್ಯವ್ಯಕ್ತಿಗಳು ಒಪ್ಪಿಕೊಂಡರು. ಹೌದು, ಯೆಹೂದ್ಯರಿಗೆ ಪ್ರೇಷಿತನಾಗುವಂತೆ ಪೇತ್ರನನ್ನು ಪ್ರೇರೇಪಿಸಿದ ದೇವರು, ಯೆಹೂದ್ಯರಲ್ಲದವರಿಗೆ ಪ್ರೇಷಿತನಾಗಲು ನನ್ನನ್ನು ಪ್ರೇರೇಪಿಸಿದ್ದಾರೆ. ನನಗೆ ಕೊಡಲಾಗಿದ್ದ ಈ ವಿಶೇಷ ವರವನ್ನು ಮನಗಂಡು ಸಭಾಸ್ತಂಭಗಳೆಂದು ಪರಿಗಣಿತರಾದ ಯಕೋಬ, ಕೇಫ ಮತ್ತು ಯೊವಾನ್ನರು ನನಗೂ ಬಾರ್ನಬನಿಗೂ ಕೈಯಲ್ಲಿ ಕೈಯನ್ನಿಟ್ಟು ಅನ್ಯೋನ್ಯತೆಯನ್ನು ಸೂಚಿಸಿದರು. ಅಲ್ಲದೆ, “ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ, ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ,” ಎಂದೂ ಹೇಳಿದರು. ಅವರಲ್ಲಿದ್ದ ಬಡಬಗ್ಗರಿಗೆ ಮರೆಯದೆ ನೆರವಾಗಬೇಕೆಂಬ ಒಂದು ವಿಷಯವನ್ನು ಮಾತ್ರ ಕೇಳಿಕೊಂಡರು. ನಾನು ಮಾಡಬೇಕೆಂದು ಎಣಿಸಿದುದು ಅದೇ ಆಗಿತ್ತು. ಆದರೆ ಕೇಫನು ಅಂತಿಯೋಕ್ಯಕ್ಕೆ ಬಂದಾಗ ಆತನು ತಪ್ಪಿತಸ್ಥನೆಂಬುದು ಸಿದ್ಧವಾಗಿದ್ದುದರಿಂದ ನಾನು ಆತನನ್ನು ಮುಖಾಮುಖಿಯಾಗಿ ಖಂಡಿಸಿದೆ.  ಯಕೋಬನ ಕಡೆಯಿಂದ ಕೆಲವು ಸಹೋದರರು ಬರುವುದಕ್ಕೆ ಮುಂಚೆ ಆತನು ಅನ್ಯಧರ್ಮೀಯರೊಡನೆ ಊಟಮಾಡುತ್ತಿದ್ದನು. ಆದರೆ ಅವರು ಬಂದ ಮೇಲೆ ಸುನ್ನತಿ ಪರವಾದಿಗಳಿಗೆ ಅಂಜಿ ಅನ್ಯಧರ್ಮೀಯರಿಂದ ದೂರವಾದನು.  ಅಂತೆಯೇ, ಕೇಫನ ಸಂಗಡ ಇದ್ದ ಮಿಕ್ಕ ಯೆಹೂದ್ಯರು ಕಪಟತನದಿಂದ ವರ್ತಿಸಿದರು. ಇವರ ವರ್ತನೆಗೆ ಬಾರ್ನಬನೂ ಸಹ ಮಾರುಹೋದನು.  ಅವರ ಈ ನಡತೆ, ಶುಭಸಂದೇಶದ ಸತ್ಯಕ್ಕೆ ಅನುಗುಣವಾದುದಲ್ಲ ಎಂದು ನನಗೆ ಮನದಟ್ಟಾಯಿತು. ಆಗ ನಾನು ಅವರೆಲ್ಲರ ಸಮ್ಮುಖದಲ್ಲೇ ಕೇಫನಿಗೆ: “ನೀನು ಯೆಹೂದ್ಯನಾಗಿದ್ದೂ ಯೆಹೂದ್ಯರಂತೆ ನಡೆಯದೆ ಅನ್ಯಧರ್ಮೀಯರಂತೆ ನಡೆದುಕೊಳ್ಳುತ್ತ ಇದ್ದಿಯಲ್ಲವೇ? ಹೀಗಿರುವಲ್ಲಿ ಅನ್ಯಧರ್ಮೀಯರು ಯೆಹೂದ್ಯರಂತೆ ನಡೆದುಕೊಳ್ಳಬೇಕೆಂದು ನೀನು ಒತ್ತಾಯಪಡಿಸುವುದಾದರೂ ಹೇಗೆ?” ಎಂದು ಕೇಳಿದೆ.

ಕೀರ್ತನೆ: 117:1, 2

ಶ್ಲೋಕ: ವಿಶ್ವದ ಎಲ್ಲೆಡೆಗಳಿಗೂ ಹೋಗಿ ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ. 

ಶುಭಸಂದೇಶ: ಲೂಕ11:1-4

ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು. “ಪ್ರಭುವೇ, ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ,” ಎಂದನು. ಅದಕ್ಕೆ ಯೇಸು ಇಂತೆಂದರು, “ನೀವು ಹೀಗೆ ಪ್ರಾರ್ಥನೆ ಮಾಡಬೇಕು: ತಂದೆಯೇ, ನಿಮ್ಮ ಪವಿತ್ರನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ. ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿ. ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ’.”

04.10.22 - "ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು,”

ಮೊದಲನೇ ವಾಚನ: ಗಲಾತ್ಯರಿಗೆ1:13-24

ಸಹೋದರರೇ, ಹಿಂದೊಮ್ಮೆ ನಾನು ಯೆಹೂದ್ಯ ಮತಸ್ಥನಾಗಿದ್ದಾಗ ನನ್ನ ನಡತೆ ಹೇಗಿತ್ತೆಂದು ನೀವು ಚೆನ್ನಾಗಿ ಬಲ್ಲಿರಿ. ಆಗ ನಾನು ದೇವರ ಸಭೆಯನ್ನು ಕ್ರೂರವಾಗಿ ಹಿಂಸಿಸಿದೆ; ಅದನ್ನು ಧ್ವಂಸಮಾಡಲು ಪ್ರಯತ್ನಿಸಿದೆ.  ಇದಲ್ಲದೆ, ನಾನು ನನ್ನ ಪೂರ್ವಜರ ಮತ ಸಂಪ್ರದಾಯಗಳಲ್ಲಿ ಅತ್ಯಧಿಕ ನಿಷ್ಠೆಯುಳ್ಳವನಾಗಿದ್ದೆ. ಯೆಹೂದ್ಯ ಮತಾಚರಣೆಯಲ್ಲಿ ಅನೇಕ ಸಮವಯಸ್ಕರಿಗಿಂತ ಎಷ್ಟೋ ಮುಂದಾಗಿದ್ದೆ. ಆದರೆ, ನಾನಿನ್ನೂ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ನನ್ನನ್ನು ತಮ್ಮ ಅನುಗ್ರಹದಿಂದ ಆರಿಸಿಕೊಂಡು ತಮ್ಮ ಸೇವೆಗೆ ಕರೆದರು.  ನಾನು ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರಬೇಕೆಂದು ದೇವರು ತಮ್ಮ ಮಗನನ್ನು ನನಗೆ ಶ್ರುತಪಡಿಸಿದರು. ಆಗ ಸಲಹೆಗಾಗಿ ನಾನು ಯಾರ ಬಳಿಗೂ ಹೋಗಲಿಲ್ಲ.  ನನಗಿಂತ ಮುಂಚಿತವಾಗಿ ಪ್ರೇಷಿತರಾದವರನ್ನು ಕಾಣಲೆಂದು ನಾನು ಜೆರುಸಲೇಮಿಗೂ ಹೋಗಲಿಲ್ಲ. ಬದಲಿಗೆ, ನೇರವಾಗಿ ಅರೇಬಿಯಾಕ್ಕೆ ಹೋದೆ. ಅಲ್ಲಿಂದ ದಮಸ್ಕಸ್ ನಗರಕ್ಕೆ ಹಿಂದಿರುಗಿದೆ.  ಮೂರು ವರ್ಷಗಳ ನಂತರವೇ ಕೇಫನನ್ನು ಕಂಡು ಮಾತನಾಡಲು ಜೆರುಸಲೇಮಿಗೆ ಹೋದೆ; ಹದಿನೈದು ದಿನ ಆತನೊಂದಿಗೆ ತಂಗಿದ್ದೆ.  ಆಗ, ಉಳಿದ ಪ್ರೇಷಿತರಲ್ಲಿ ಪ್ರಭುವಿನ ಸಹೋದರ ಯಕೋಬನಲ್ಲದೆ ಬೇರೆ ಯಾವ ಪ್ರೇಷಿತರನ್ನೂ ನಾನು ಕಾಣಲಿಲ್ಲ.  ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲ.ಎಂಬುದಕ್ಕೆ ದೇವರೇ ಸಾಕ್ಷಿ. ಅನಂತರ ನಾನು ಸಿರಿಯ ಮತ್ತು ಸಿಲಿಸಿಯ ಪ್ರಾಂತ್ಯಗಳಿಗೆ ಹೋದೆ.  ಆಗ ಜುದೇಯ ಪ್ರಾಂತ್ಯದಲ್ಲಿದ್ದ ಕ್ರೈಸ್ತ ಸಭೆಗಳಿಗೆ ನನ್ನ ಪರಿಚಯವಾಗಿರಲಿಲ್ಲ.  ‘ಹಿಂದೊಮ್ಮೆ ನಮ್ಮನ್ನು ಹಿಂಸಿಸುತ್ತಿದ್ದವನು, ತಾನು ನಾಶಮಾಡಲೆತ್ನಿಸಿದ ವಿಶ್ವಾಸವನ್ನೇ ಈಗ ಪ್ರಚಾರಮಾಡುತ್ತಿದ್ದಾನೆ’, ಎಂಬ ಸುದ್ದಿಯನ್ನು ಮಾತ್ರ ಕೇಳಿದ್ದರು.  ಈ ಕಾರಣ ನನ್ನನ್ನು ಕುರಿತು ಅವರು ದೇವರನ್ನು ಕೊಂಡಾಡುತ್ತಿದ್ದರು. 

ಕೀರ್ತನೆ: 139:1-3, 13-14, 14-15

ಶ್ಲೋಕ: ಪ್ರಭೂ, ನಡೆಸೆನ್ನನು ಆ ಸನಾತನ ಪಥದಲಿ 

ಶುಭಸಂದೇಶ: ಲೂಕ 10:38-42

ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು. 39ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪಾದತಳದಲ್ಲಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು.  ಮಾರ್ತಳಾದರೋ, ಅತಿಥಿಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, “ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ,” ಎಂದಳು.  ಯೇಸು ಆಕೆಗೆ ಪ್ರತ್ಯುತ್ತರವಾಗಿ, “ಮಾರ್ತಾ, ಮಾರ್ತಾ, ನೀನು ಅನಾವಶ್ಯ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ.  ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು,” ಎಂದರು.

03.10.22 - ದಯೆ ತೋರಿದವನೇ ನೆರೆಯವನು

ಮೊದಲನೇ ವಾಚನ: ಗಲಾತ್ಯರಿಗೆ 1:6-12


ಕ್ರಿಸ್ತ ಯೇಸುವಿನ ಅನುಗ್ರಹದಿಂದ ನಿಮ್ಮನ್ನು ಕರೆದ ದೇವರನ್ನು ನೀವಿಷ್ಟು ಬೇಗನೆ ತ್ಯಜಿಸಿ, ಬೇರೊಂದು ‘ಶುಭಸಂದೇಶ’ವನ್ನು ಅಂಗೀಕರಿಸುತ್ತಿರುವಿರೆಂದು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ.  ವಾಸ್ತವವಾಗಿ, ಬೇರೆ ಯಾವ ಶುಭಸಂದೇಶವೂ ಇಲ್ಲ. ಆದರೆ ಕೆಲವರು ನಿಮ್ಮಲ್ಲಿ ಗೊಂದಲವೆಬ್ಬಿಸಿ, ಕ್ರಿಸ್ತಯೇಸುವಿನ ಶುಭಸಂದೇಶವನ್ನು ಮಾರ್ಪಡಿಸಲು ಯತ್ನಿಸುತ್ತಾ ಇದ್ದಾರೆ. ನಾವು ನಿಮಗೆ ಬೋಧಿಸಿದ ಶುಭಸಂದೇಶಕ್ಕೆ ವಿರುದ್ಧವಾದ ಸಂದೇಶವನ್ನು ನಾವೇ ಆಗಲಿ, ಸ್ವರ್ಗದಿಂದ ಇಳಿದ ದೇವದೂತನೇ ಆಗಲಿ, ಯಾರೇ ಆಗಲಿ ಬೋಧಿಸಿದರೆ ಅವನು ಶಾಪಗ್ರಸ್ತನಾಗಲಿ! ನೀವು ಅಂಗೀಕರಿಸಿದ ಶುಭಸಂದೇಶಕ್ಕೆ ವಿರುದ್ಧವಾದ ಸಂದೇಶವನ್ನು ಸಾರುವವನು ಶಾಪಗ್ರಸ್ತನಾಗಲಿ ಎಂದು ನಾನು ಮೊದಲೇ ಹೇಳಿದಂತೆ, ಮತ್ತೊಮ್ಮೆ ಒತ್ತಿ ಹೇಳುತ್ತೇನೆ. ಇದರಿಂದ ನಾನು ಯಾರನ್ನು ಒಲಿಸಿಕೊಳ್ಳಲು ಯತ್ನಿಸುತ್ತಿದ್ದೇನೆ? ಮಾನವರನ್ನೋ? ದೇವರನ್ನೋ? ನಾನು ಮಾನವರ ಮೆಚ್ಚುಗೆಯನ್ನು ಗಳಿಸಿಕೊಳ್ಳಲು ಯತ್ನಿಸುತ್ತಿಲ್ಲ; ನಾನಿನ್ನೂ ಜನರ ಮೆಚ್ಚುಗೆಯನ್ನು ಗಳಿಸುವವನೇ ಆಗಿದ್ದರೆ ಕ್ರಿಸ್ತಯೇಸುವಿನ ದಾಸನಾಗಿರಲು ಸಾಧ್ಯವೇ ಇಲ್ಲ. ಪ್ರಿಯ ಸಹೋದರರೇ, ನಾನು ಬೋಧಿಸಿದ ಶುಭಸಂದೇಶವು ಮಾನವ ಕಲ್ಪಿತ ಸಂದೇಶ ಅಲ್ಲವೆಂದು ನಿಮಗೆ ಮನದಟ್ಟು ಮಾಡಲು ಬಯಸುತ್ತೇನೆ.  ಈ ಶುಭಸಂದೇಶವನ್ನು ನಾನು ಮನುಷ್ಯರಿಂದ ಪಡೆಯಲಿಲ್ಲ; ಅದನ್ನು ಯಾರಿಂದಲೂ ಕಲಿತುಕೊಳ್ಳಲಿಲ್ಲ. ಯೇಸು ಕ್ರಿಸ್ತರೇ ನನಗದನ್ನು ಶ್ರುತಪಡಿಸಿದರು.

ಕೀರ್ತನೆ: 111:1-2, 7-8, 9, 10

ಶ್ಲೋಕ: ತನ್ನೊಡಂಬಡಿಕೆಯ ಚಿರ ನೆನಪಿರುವುದು ಪ್ರಭುವಿಗೆ 

ಶುಭಸಂದೇಶ: ಲೂಕ 10:25-37

ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುಸ್ವಾಮಿಯನ್ನು ಪರೀಕ್ಷಿಸುವ ಉದ್ದೇಶದಿಂದ “ಬೋಧಕರೇ, ಅಮರಜೀವ ನನಗೆ ಪ್ರಾಪ್ತಿ ಆಗಬೇಕಾದರೆ ನಾನು ಮಾಡಬೇಕಾದುದು ಏನು?” ಎಂದು ಕೇಳಿದನು.  ಅದಕ್ಕೆ ಯೇಸು, “ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ?” ಎಂದು ಮರುಪ್ರಶ್ನೆ ಹಾಕಿದರು.  ಅವನು, “ ‘ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಆತ್ಮದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು’ ಎಂದಿದೆ,” ಎಂದು ಉತ್ತರಕೊಟ್ಟನು.  ಯೇಸು, “ಸರಿಯಾಗಿ ಉತ್ತರಕೊಟ್ಟೆ, ಅದರಂತೆ ಮಾಡು. ನಿನಗೆ ಅಮರಜೀವ ಲಭಿಸುವುದು,” ಎಂದರು. ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು, “ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು.  ಆಗ ಯೇಸು ಅವನಿಗೆ ಹೀಗೆಂದು ವಿವರಿಸಿದರು: “ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ. ದರೋಡೆಗಾರರು ಅವನನ್ನು ಸುಲಿಗೆಮಾಡಿ, ಹೊಡೆದು ಬಡಿದು, ಅರೆಜೀವ ಮಾಡಿ ಅಲ್ಲೇ ಬಿಟ್ಟುಹೋದರು.  ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದುಹೋಗಬೇಕಾಗಿ ಬಂದಿತು. ಈತನು, ಅವನನ್ನು ಕಂಡದ್ದೇ ಆಚೆ ಬಳಸಿಕೊಂಡು ಹೋದ.  ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ.  ಆದರೆ ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟು,  ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ ವಾಹಕಪಶುವಿನ ಮೇಲೆ ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ, ಆರೈಕೆ ಮಾಡಿದ.  ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, ‘ಇವನನ್ನು ಚೆನ್ನಾಗಿ ನೋಡಿಕೊ, ಇದಕ್ಕಿಂತ ಹೆಚ್ಚು ವೆಚ್ಚ ಆದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ,’ ಎಂದ.  “ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?” ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು. ಅದಕ್ಕೆ ಅವನು, “ದಯೆ ತೋರಿದವನೇ ನೆರೆಯವನು,” ಎಂದನು. ಆಗ ಯೇಸು, “ಹೋಗು, ನೀನೂ ಹಾಗೆಯೇ ಮಾಡು,” ಎಂದು ಹೇಳಿದರು.

02-10.22 - ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ

 ಮೊದಲನೇ ವಾಚನ: ಹಬಕ್ಕೂಕ 1:2-3; 2:2-4 


ನಾನೆಷ್ಟು ಕಾಲ ಸರ್ವೇಶ್ವರಾ, ಮೊರೆಯಿಡುತ್ತಿರಬೇಕು ನಿನಗೆ? ನೀನೆಷ್ಟು ಕಾಲ ಸುಮ್ಮನಿರುವೆ ಕಿವಿಗೊಡದೆ ನನಗೆ? ಹಿಂಸೆಯಾಗುತ್ತಿದೆಯೆಂದು ನಾ ಕೂಗಿದೆ ಆದರೂ ನೀ ಸುಮ್ಮನಿರುವೆ, ರಕ್ಷಣೆ ನೀಡದೆ. ಕೇಡನ್ನು ನಾ ನೋಡುವಂತೆ ಮಾಡಿದೆ ಯೇಕೆ? ಕಷ್ಟವನ್ನು ನಾ ಕಾಣುವಂತೆ ಮಾಡಿದೆ ಯೇಕೆ? ಹಿಂಸೆಬಾಧೆಗಳು ಇವೆ ನನ್ನ ಕಣ್ಣು ಮುಂದೆ. ಇಗೋ, ಜಗಳ ನಡೆಯುತಿದೆ, ವ್ಯಾಜ್ಯವೇಳುತ್ತಿದೆ. ಆಗ ಸರ್ವೇಶ್ವರ ನನಗೆ ಕೊಟ್ಟ ಉತ್ತರ ಇದು: "ನೀನು ಕಂಡ ದರ್ಶನವನ್ನು ಬರೆ. ಓದುವವನು ಶೀಘ್ರವಾಗಿ ಓದುವಂತೆ ಹಲಗೆಗಳ ಮೇಲೆ ಅದನ್ನು ಕೆತ್ತು. ನಿಯಮಿತ ಕಾಲದಲ್ಲಿ ಆ ದರ್ಶನ ನೆರವೇರುವುದು. ಅದರ ಅಂತಿಮ ಪರಿಣಾಮ ಶೀಘ್ರದಲ್ಲಿ ಗೊತ್ತಾಗುವುದು. ತಡವಾದರೂ ಕಾದಿರು; ಮೋಸಮಾಡದು. ಅದು ಖಂಡಿತವಾಗಿ ಕೈಗೂಡುವುದು; ತಾಮಸವಾಗದು. ನೋಡು, ನೇರಮನಸ್ಕನಲ್ಲದವನು, ಉಬ್ಬಿಹೋಗಿರುವ ಆ ದುರ್ಜನನು ಉಳಿಯನು; ದೇವರೊಂದಿಗೆ ಸತ್ಸಂಬಂಧ  ಹೊಂದಿರುವ ಸಜ್ಜನನು ವಿಶ್ವಾಸದಿಂದಲೇ ಬಾಳುವನು. 

ಕೀರ್ತನೆ: 95:1-2, 6-7, 8-9 
ಶ್ಲೋಕ:ಆತನ ಕಿವಿಗೆ ಕಿವಿಗೊಟ್ಟರೆನಿತೋ ಒಳಿತು ನೀವಿಂದೇ 

ಎರಡನೇ ವಾಚನ: 2 ತಿಮೊಥೇಯನಿಗೆ 2:6-8, 13-14 

ಸಹೋದರನೇ, ನಾನು ನಿನ್ನ ಮೇಲೆ ಹಸ್ತ ನಿಕ್ಷೇಪಮಾಡಿ ಪ್ರಾರ್ಥಿಸಿದಾಗ ನೀನು ಪಡೆದಂಥ ವರದಾನವನ್ನು ಪುನಃ ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಿಸುತ್ತೇನೆ. ದೇವರು ನಮಗೆ ಪ್ರದಾನಮಾಡಿರುವ ಪವಿತ್ರಾತ್ಮ ನಮ್ಮನ್ನು ಹೇಡಿಗಳನ್ನಾಗಿ ಮಾಡುವುದಿಲ್ಲ; ನಮ್ಮಲ್ಲಿ ದೈವೀಶಕ್ತಿ, ಪ್ರೀತಿ ಹಾಗೂ ಸಂಯಮಗಳು ಪ್ರವರ್ಧಿಸುವಂತೆ ಮಾಡುತ್ತಾರೆ. ಆದ್ದರಿಂದ ಕ್ರಿಸ್ತ ಯೇಸುವಿಗೆ ಸಾಕ್ಷಿಯಾಗಿರಲು ನಾಚಬೇಡ.  ಅವರಿಗಾಗಿ ಬಂಧಿಯಾಗಿರುವ ನನ್ನ ವಿಷಯದಲ್ಲೂ ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು. ಕ್ರಿಸ್ತ ಯೇಸುವಿನಲ್ಲಿ ನಮ್ಮದಾಗಿರುವ ವಿಶ್ವಾಸ ಹಾಗೂ ಪ್ರೀತಿಯಲ್ಲಿ ನೀನು ನೆಲೆಗೊಂಡಿರು. ನಾನು ಬೋಧಿಸಿದ್ದನ್ನು ಆದರ್ಶವಾಗಿಟ್ಟುಕೊಂಡು ಅನುಸರಿಸು. ನಿನ್ನ ವಶಕ್ಕೆ ಕೊಡಲಾಗಿರುವ ಸದ್ಬೋಧನೆಯನ್ನು ನಮ್ಮಲ್ಲಿ ವಾಸಿಸುವ ಪವಿತ್ರಾತ್ಮರ ಸಹಾಯದಿಂದ ಸುರಕ್ಷಿತವಾಗಿಡು. 

ಶುಭಸಂದೇಶ: ಲೂಕ 17:5-10 

"ಸ್ವಾಮೀ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ," ಎಂದು ಪ್ರೇಷಿತರು ಕೇಳಿಕೊಂಡರು. ಆಗ ಯೇಸುಸ್ವಾಮಿ, "ಸಾಸಿವೆ ಕಾಳಿನಷ್ಟು ವಿಶ್ವಾಸ ನಿಮ್ಮಲಿದ್ದು, ನೀವು ಈ ಅತ್ತಿಮರಕ್ಕೆ, "ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೊ," ಎಂದು ಆಜ್ಞಾಪಿಸಿದ್ದೇ ಅದರೆ ಅದು ನಿಮಗೆ ವಿಧೇಯವಾಗಿ ನಡೆದುಕೊಳ್ಳುವುದು. ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, "ಬಾ, ನನ್ನೊಂದಿಗೆ ಊಟಮಾಡು," ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ. ಅದಕ್ಕೆ ಬದಲಾಗಿ "ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರ ಮಾಡು. ಅನಂತರ ನೀನು ಊಟ ಮಾಡುವೆಯಂತೆ," ಎಂದು ಹೇಳುತ್ತಾರಲ್ಲವೇ? ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ. ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, "ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ," ಎಂದುಕೊಳ್ಳಿರಿ," ಎಂದರು.

01.10.22 - ಸ್ವಾಮೀ, ನಿಮ್ಮ ಹೆಸರಿನಲ್ಲಿ ಆಜ್ಞೆಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ

 ಮೊದಲನೇ ವಾಚನ: ಯೋಬನ ಗ್ರಂಥ  42:1-3, 5-6, 12-16

ಯೋಬನು ಸರ್ವೇಶ್ವರಸ್ವಾಮಿಗೆ ಕೊಟ್ಟ ಉತ್ತರ ಇದು: “ತಾವು ಎಲ್ಲಾ ಕಾರ್ಯಗಳನು ನಡೆಸಲು‍ ಶಕ್ತರೆಂದು ನಾನು ಬಲ್ಲೆ ಯಾವ ಯೋಜನೆಯು ನಿಮಗೆ ಅಸಾಧ್ಯವಿಲ್ಲವೆಂದು ನಾನು ಅರಿತಿರುವೆ. ‘ಅಜ್ಞಾನದ ಮಾತುಗಳನ್ನಾಡುವ ನೀನು ಯಾರು?’ ‘ಸತ್ಯಾಲೋಚನೆಗಳನು ಮಂಕುಮಾಡುವ ನೀನಾರು?’ ಈ ನಿಮ್ಮ ನುಡಿಯಂತೆ ಅರ್ಥಹೀನ ಮಾತುಗಳನು ನಾನಾಡಿದೆ ನನ್ನ ಬುದ್ಧಿಗೆಟುಕದ ಪವಾಡಗಳನ್ನು ಟೀಕಿಸಿದೆ. ಈವರೆಗೆ ನಿಮ್ಮನು ಕುರಿತು ನಾನು ಕೇಳಿದ್ದು ಬೇರೆಯವರಿಂದ ಈಗಲಾದರೊ ನಿಮ್ಮನು ಕಂಡಿದ್ದೇನೆ ನನ್ನ ಕಣ್ಣುಗಳಿಂದ. ಆದುದರಿಂದ ನಾನು ಹೇಳಿದ್ದೆಲ್ಲಕ್ಕಾಗಿ ವಿಷಾದಿಸುತ್ತೇನೆ ಬೂದಿಯಲು, ಧೂಳಿನಲು ಕುಳಿತು ಪಶ್ಚಾತ್ತಾಪಪಡುತ್ತೇನೆ.” ಸರ್ವೇಶ್ವರ ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಅಧಿಕಗೊಳಿಸಿ ಆಶೀರ್ವದಿಸಿದರು.  ಅವನಿಗೆ ಹದಿನಾಲ್ಕು ಸಾವಿರ ಕುರಿಗಳು, ಆರು ಸಾವಿರ ಒಂಟೆಗಳು, ಒಂದು ಸಾವಿರ ಜೋಡಿ ಎತ್ತುಗಳು, ಒಂದು ಸಾವಿರ ಕತ್ತೆಗಳು ದೊರಕಿದವು.  ಅಲ್ಲದೆ ಏಳು ಮಂದಿ ಗಂಡುಮಕ್ಕಳು, ಮೂರು ಮಂದಿ ಹೆಣ್ಣುಮಕ್ಕಳು ಹುಟ್ಟಿದರು. ಮೊದಲನೆಯವಳಿಗೆ ಯೆಮೀಮ, ಎರಡನೆಯವಳಿಗೆ ಕೆಚೀಯ, ಮೂರನೆಯವಳಿಗೆ ಕೆರೆನ್ಹಪ್ಪೂಕ್ ಎಂದು ಹೆಸರಿಟ್ಟನು.  ಯೋಬನ ಮಕ್ಕಳಷ್ಟು ಸುಂದರವಾದ ಹೆಣ್ಣುಗಳು ಆ ನಾಡಿನಲ್ಲೆಲ್ಲೂ ಸಿಕ್ಕುತ್ತಿರಲಿಲ್ಲ. ಅವರ ತಂದೆ, ಅವರ ಅಣ್ಣತಮ್ಮಂದಿರಿಗೆ ಕೊಟ್ಟ ಹಾಗೆ ಅವರಿಗೂ ಸೊತ್ತನ್ನು ಹಂಚಿದನು.  ತರುವಾಯ ಯೋಬನು ನೂರನಾಲ್ವತ್ತು ವರ್ಷ ಬಾಳಿದನು. ನಾಲ್ಕು ತಲೆಮಾರು ತನಕ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಂಡನು. ಹಣ್ಣು ಹಣ್ಣು ಮುದುಕನಾಗಿ ಸತ್ತನು. 

ಕೀರ್ತನೆ: 119:66, 71, 75, 91, 125, 130

ಶ್ಲೋಕ: ಪ್ರಭೂ, ತೋರು ನಿನ್ನ ಮುಖದರ್ಶನ ಈ ದಾಸನಿಗೆ 

ಶುಭಸಂದೇಶ: ಲೂಕ 10:17-24

"ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿದೆ ಎಂದು ಸಂತೋಷ ಪಡಿ," ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, “ಸ್ವಾಮೀ, ನಿಮ್ಮ ಹೆಸರಿನಲ್ಲಿ ಆಜ್ಞೆಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ,” ಎಂದು ವರದಿಮಾಡಿದರು.  ಅದಕ್ಕೆ ಯೇಸು, “ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು.  ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಹಾನಿಮಾಡದು.  ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ,” ಎಂದು ಹೇಳಿದರು. ಅದೇ ಗಳಿಗೆಯಲ್ಲಿ ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, “ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ.  ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವನೇ ಹೊರತು ಮತ್ತಾರೂ ಅರಿಯರು,” ಎಂದು ಹೇಳಿದರು.  ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು.  ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕಾಣಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...