08.02.22 - ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ.

ಮೊದಲನೇ ವಾಚನ: 1 ಅರಸುಗಳು 8:22-23, 27-30

ಸೊಲೊಮೋನನು ಇಸ್ರಯೇಲರೆಲ್ಲರ ಎದುರಿನಲ್ಲಿ ಸರ್ವೇಶ್ವರನ ಬಲಿಪೀಠದ ಮುಂದೆ ನಿಂತು, ಆಕಾಶದ ಕಡೆಗೆ ಕೈಗಳನ್ನೆತ್ತಿ, ಹೀಗೆ ಪ್ರಾರ್ಥಿಸಿದನು: “ಇಸ್ರಯೇಲ್ ದೇವರಾದ ಸರ್ವೇಶ್ವರಾ, ಭೂಲೋಕದಲ್ಲೂ ಪರಲೋಕದಲ್ಲೂ ನಿಮಗೆ ಸಮಾನರಾದ ದೇವರಿಲ್ಲ; ಪೂರ್ಣಮನಸ್ಸಿನಿಂದ ನಿಮಗೆ ಪ್ರಾಮಾಣಿಕರಾಗಿ ನಡೆದುಕೊಳ್ಳುವಂಥ ಭಕ್ತರ ಬಗ್ಗೆ ನಿಮ್ಮ ಒಡಂಬಡಿಕೆಯನ್ನೂ ಕೃಪೆಯನ್ನೂ ನೆರವೇರಿಸುವವರು ನೀವು. “ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವರೋ? ಆಕಾಶವೂ, ಉನ್ನತೋನ್ನತ ಆದ ಆಕಾಶವೂ, ನಿಮ್ಮ ವಾಸಕ್ಕೆ ಸಾಲದು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ತಾನೆ ಸಾಕಾದೀತು? ಆದರೂ ನನ್ನ ದೇವರೇ, ಸರ್ವೇಶ್ವರಾ, ನಿಮ್ಮ ದಾಸನ ಪ್ರಾರ್ಥನೆಗೂ ವಿಜ್ಞಾಪನೆಗೂ ಕಿವಿಗೊಡಿ; ಈ ದಿನ ನಿಮ್ಮನ್ನು ಪ್ರಾರ್ಥಿಸುತ್ತಿರುವ ನಿಮ್ಮ ದಾಸನ ಮೊರೆಯನ್ನು ಆಲಿಸಿರಿ. ಈ ಸ್ಥಳವನ್ನು ಕುರಿತು ‘ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವುದು’ ಎಂದು ಹೇಳಿದವರೇ, ನಿಮ್ಮ ಕಟಾಕ್ಷವು ಹಗಲಿರುಳೂ ಈ ಮಂದಿರದ ಮೇಲಿರಲಿ; ಇಲ್ಲಿ ನಿಮ್ಮ ದಾಸನು ನಿಮ್ಮನ್ನು ಪ್ರಾರ್ಥಿಸುವಾಗಲೆಲ್ಲಾ ಅವನಿಗೆ ಸದುತ್ತರವನ್ನು ದಯಪಾಲಿಸಿರಿ. ನಿಮ್ಮ ದಾಸನಾದ ನಾನಾಗಲಿ, ನಿಮ್ಮ ಪ್ರಜೆಗಳಾದ ಇಸ್ರಯೇಲರಾಗಲಿ, ಈ ಸ್ಥಳದ ಕಡೆಗೆ ತಿರುಗಿಕೊಂಡು ನಿಮ್ಮನ್ನು ಪ್ರಾರ್ಥಿಸಿದರೆ ನಿಮ್ಮ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸಿರಿ.

ಕೀರ್ತನೆ: 84:3, 4, 5, 10, 11
ಶ್ಲೋಕ: ಪ್ರಭೂ, ನಿನ್ನ ನಿವಾಸಗಳೆನಿತೋ ಸುಂದರ

ಹಂಬಲಿಸಿ ಸೊರಗಿಹೋಗಿದೆ ಎನ್ನ ಮನ|
ಕಾಣಬೇಕೆಂದು ಪ್ರಭುವಿನ ಪ್ರಾಂಗಣ||

ಪ್ರಭು ದೇವಾ, ಎನ್ನರಸ, ಸ್ವರ್ಗಸೇನಾಧೀಶ್ವರ|
ದೊರಕಿದೆ ಗುಬ್ಬಿಗೆ ಗೂಡು ನಿನ್ನ ವೇದಿಕೆಯಹತ್ತಿರ|
ಪಾರಿವಾಳಕ್ಕು ಅಲ್ಲೇ ಇದೆ ಮರಿಯಿಡಲು ಆಗರ||

ನಿನ್ನ ಮಂದಿರದಲಿ ವಾಸಿಸುವವರು ಧನ್ಯರು|
ನಿರಂತರವು ನಿನ್ನ ಗುಣಗಾನ ಮಾಡುವರವರು||

ನಿನ್ನ ಮಂದಿರದಲಿ ಕಳೆದ ದಿನವೊಂದು|
ತಿಳಿವೆನು ಸಾವಿರ ದಿನಕೂ
ಮೇಲೆಂದು||
ದುರುಳರ ಬಿಡಾರದಲಿ ನಾ ವಾಸಮಾಡುವುದರ ಬದಲು|
ನಿನ್ನಾಲಯದ ದ್ವಾರಪಾಲಕನಾಗಿರುವುದೆ ಮೇಲು||

ಘೋಷಣೆ ಕೀರ್ತನೆ148:13,14
ಅಲ್ಲೆಲೂಯ, ಅಲ್ಲೆಲೂಯ!

ಹೊಗಳಲಿ ಇವರೆಲ್ಲರು ಪ್ರಭುವಿನ ನಾಮವನು |
ಖ್ಯಾತಿ ತಂದಿಹನು ತನ್ನ ಭಕ್ತಾಧಿಗಳಿಗೆ ||
ಅಲ್ಲೆಲೂಯ!

ಶುಭಸಂದೇಶ: ಮಾರ್ಕ 7:1-13

ಒಮ್ಮೆ ಫರಿಸಾಯರು ಮತ್ತು ಜೆರುಸಲೇಮಿನಿಂದ ಕೆಲವು ಮಂದಿ ಧರ್ಮಶಾಸ್ತ್ರಿಗಳು ಯೇಸುಸ್ವಾಮಿಯ ಬಳಿಗೆ ಬಂದು ಸೇರಿದರು. ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ, ಎಂದರೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಅವರು ನೋಡಿದರು. ಫರಿಸಾಯರು ಇತರ ಯೆಹೂದ್ಯರಂತೆ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಊಟ ಮಾಡುವುದಿಲ್ಲ. ಇದು ಅವರ ಪೂರ್ವಜರಿಂದ ಬಂದ ಸಂಪ್ರದಾಯ. ಪೇಟೆ ಬೀದಿಗಳಿಗೆ ಹೋಗಿ ಬಂದರೆ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ಸೂತ್ರಬದ್ಧವಾಗಿ ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದುವು. ಆದುದರಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ, “ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟ ಮಾಡುತ್ತಿದ್ದಾರಲ್ಲಾ?” ಎಂದು ಯೇಸುವನ್ನು ಕೇಳಿದರು. ಅದಕ್ಕೆ ಯೇಸು, “ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ಎಷ್ಟೊಂದು ಚೆನ್ನಾಗಿ ಪ್ರವಾದಿಸಿದ್ದಾನೆ: ‘ಬರಿಯ ಮಾತಿನ ಮನ್ನಣೆಯನೀಯುತ, ಹೃದಯವನು ದೂರವಿರಿಸುತ, ನರಕಲ್ಪಿತ ಕಟ್ಟಳೆಗಳನೆ ದೇವವಾಕ್ಯವೆಂದು ಉಪದೇಶಿಸುತ, ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ! ಎಂದರು ದೇವರು.’ “ನೀವು ದೇವರ ಆಜ್ಞೆಯನ್ನು ತೊರೆದು ಮಾನವನಿರ್ಮಿತ ಸಂಪ್ರದಾಯಗಳನ್ನು ನಿಷ್ಠೆಯಿಂದ ಪರಿಪಾಲಿಸುತ್ತಿದ್ದೀರಿ. ಸಂಪ್ರದಾಯದ ನೆವದಲ್ಲಿ ದೇವರ ಆಜ್ಞೆಗಳನ್ನು ನೀವು ಜಾಣ್ಮೆಯಿಂದ ಬದಿಗೊತ್ತಿರುವುದು ಬಲು ಚೆನ್ನಾಗಿದೆ! ‘ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು; ತಂದೆಯನ್ನಾಗಲೀ ತಾಯಿಯನ್ನಾಗಲೀ ದೂಷಿಸುವವನಿಗೆ ಮರಣದಂಡನೆ ಆಗಲೇಬೇಕು,’ ಎಂಬುದು ಮೋಶೆ ವಿಧಿಸಿದ ಆಜ್ಞೆ. ನೀವಾದರೋ, ಒಬ್ಬನು ತನ್ನ ತಂದೆಗೆ ಅಥವಾ ತಾಯಿಗೆ ‘ನನ್ನಿಂದ ನಿಮಗೆ ಸಲ್ಲತಕ್ಕದ್ದು “ಕೊರ್ಬಾನ್” (ಎಂದರೆ ದೇವರಿಗೆ ಮುಡಿಪು) ಎಂದು ಹೇಳಿಬಿಟ್ಟರೆ ಸಾಕು, ಮುಂದೆ ಅವನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನೂ ಮಾಡುವುದಕ್ಕೆ ನೀವು ಬಿಡುವುದಿಲ್ಲ. “ಹೀಗೆ ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ. ಇಂಥಾ ಕೃತ್ಯಗಳು ಇನ್ನೆಷ್ಟೋ!” ಎಂದರು. 

09.02.22 - "ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ಧ ಮಾಡುತ್ತವೆ,”

ಮೊದಲನೇ ವಾಚನ: 1 ಅರಸುಗಳು 10:1-10

ಸರ್ವೇಶ್ವರನ ನಾಮ ಮಹತ್ತಿನಿಂದ ಸೊಲೊಮೋನನ ಕೀರ್ತಿ ಹರಡಿತು. ಇದನ್ನು ಕೇಳಿದ ಶೆಬದ ರಾಣಿ ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕೆ ಬಂದಳು. ಆಕೆ ಸುಗಂಧ ದ್ರವ್ಯ, ಅಪರಿಮಿತವಾದ ಬಂಗಾರ, ರತ್ನ, ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು ಮಹಾ ಪರಿವಾರದೊಡನೆ ಜೆರುಸಲೇಮಿಗೆ ಬಂದಳು. ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸೊಲೊಮೋನನೊಡನೆ ಸಂಭಾಷಿಸಿದಳು. ಸೊಲೊಮೋನನು ಆಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಟ್ಟನು; ಅರಸನಿಗೆ ಬಿಡಿಸಲು ಕ್ಷಿಷ್ಟವಾದ ಒಗಟು ಒಂದೂ ಇರಲಿಲ್ಲ. ಶೆಬದ ರಾಣಿ ಸೊಲೊಮೋನನ ಹಲವಿಧವಾದ ಜ್ಞಾನೋಕ್ತಿಗಳನ್ನು ಕೇಳಿದಳು; ಅವನು ಕಟ್ಟಿಸಿದ ಅರಮನೆ, ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನು ಮತ್ತು ಸರ್ವೇಶ್ವರನ ಆಲಯದಲ್ಲಿ ಅವನು ಸಮರ್ಪಿಸುತ್ತಿದ್ದ ದಹನಬಲಿಗಳನ್ನು ನೋಡಿದಳು. ಇವುಗಳಿಂದ ಆಶ್ಚರ್ಯಚಕಿತಳಾಗಿ, “ನಾನು ನನ್ನ ದೇಶದಲ್ಲಿ ನಿಮ್ಮ ಜ್ಞಾನವನ್ನೂ ಸಾಧನೆಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ. ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವುದಕ್ಕೆ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಲಿಲ್ಲ; ಈಗ ನೋಡಿದರೆ ನಿಮ್ಮ ಜ್ಞಾನ ವೈಭವಗಳು, ನಾನು ಕೇಳಿದ್ದಕ್ಕಿಂತ ಮಿಗಿಲಾಗಿವೆ. ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ವರದಿ ಮಾಡಿರಲಿಲ್ಲ. ನಿಮ್ಮ ಪ್ರಜೆಗಳು ಭಾಗ್ಯವಂತರು! ಸದಾ ನಿಮ್ಮ ಸನ್ನಿಧಿಯಲ್ಲಿದ್ದು ನಿಮ್ಮ ಜ್ಞಾನ ವಾಕ್ಯಗಳನ್ನು ಕೇಳುವ ನಿಮ್ಮ ಸೇವಕರು ಧನ್ಯರು! ನಿಮ್ಮನ್ನು ಮೆಚ್ಚಿ ಇಸ್ರಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿಮ್ಮ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ಅವರು ಇಸ್ರಯೇಲರನ್ನು ಸದಾ ಪ್ರೀತಿಸುವವರಾಗಿರುವುದರಿಂದ ಆ ಜನರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕಾಗಿ ನಿಮ್ಮನ್ನು ಅರಸನನ್ನಾಗಿ ನೇಮಿಸಿದ್ದಾರೆ,” ಎಂದು ಹೇಳಿದಳು. ಆಕೆ ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂಗೂ ಹೆಚ್ಚು ಬಂಗಾರವನ್ನು, ಅಪರಿಮಿತ ಸುಗಂಧದ್ರವ್ಯವನ್ನು ಹಾಗು ರತ್ನಗಳನ್ನು ಕೊಟ್ಟಳು. ಶೆಬದ ರಾಣಿ ಅರಸ ಸೊಲೊಮೋನನಿಗೆ ಕೊಟ್ಟಷ್ಟು ಸುಗಂಧದ್ರವ್ಯವನ್ನು ಬೇರೆ ಯಾರೂ ಈ ನಾಡಿಗೆ ಕೊಟ್ಟಿರಲಿಲ್ಲ.

ಕೀರ್ತನೆ: 37:5-6, 30-31, 39-40
ಶ್ಲೋಕ: ಸಜ್ಜನರ ಬಾಯಿ ಆಡುವುದು ಸುಜ್ಞಾನವನು

ಶುಭಸಂದೇಶ: ಮಾರ್ಕ 7:14-23

ಅನಂತರ ಯೇಸುಸ್ವಾಮಿ ಜನರ ಗುಂಪನ್ನು ತಮ್ಮ ಬಳಿಗೆ ಕರೆದು, “ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ: ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿಗೊಳಿಸುವುದಿಲ್ಲ. ಮನುಷ್ಯನ ಅಂತರಂಗದಿಂದ ಹೊರಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. (ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ)” ಎಂದರು. ಯೇಸು ಜನರ ಗುಂಪನ್ನು ಬಿಟ್ಟು ಮನೆ ಸೇರಿದ ಬಳಿಕ ಶಿಷ್ಯರು, ಅವರ ಬಳಿಗೆ ಬಂದು ಆ ಸಾಮತಿಯ ಅರ್ಥವೇನೆಂದು ಕೇಳಿದರು. ಅದಕ್ಕೆ ಅವರು, “ನೀವು ಕೂಡ ಮಂದಮತಿಗಳೋ? ನಿಮಗೂ ಇದು ಅರ್ಥವಾಗದೋ? ಹೊರಗಿನಿಂದ ಮನುಷ್ಯನ ಒಳಕ್ಕೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ, ಹೊಟ್ಟೆಯನ್ನು ಮಾತ್ರ ಸೇರಿ, ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ. (ಹೀಗೆ ಆಹಾರ ಪದಾರ್ಥಗಳು ಯಾವುವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದರು.) ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮುವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ. ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ, ಕೆಡುಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತವೆ. ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ಧ ಮಾಡುತ್ತವೆ,” ಎಂದರು.

07.02.22 - ಹಾಗೆ ಮುಟ್ಟಿದವರೆಲ್ಲರೂ ಗುಣಹೊಂದುತ್ತಿದ್ದರು.

ಮೊದಲನೇ ವಾಚನ: 1 ಅರಸುಗಳು 8:1-7, 9-13

ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ದಾವೀದನಗರವಾದ ಸಿಯೋನಿನಿಂದ ದೇವಾಲಯಕ್ಕೆ ತರುವುದಕ್ಕಾಗಿ, ಇಸ್ರಯೇಲರ ಹಿರಿಯರು, ಕುಲಗಳ ನಾಯಕರು, ಇವರೇ ಮೊದಲಾದ ಎಲ್ಲ ಇಸ್ರಯೇಲ್ ಪ್ರಮುಖ ವ್ಯಕ್ತಿಗಳು ಜೆರುಸಲೇಮಿಗೆ, ತನ್ನ ಆಸ್ಥಾನಕ್ಕೆ, ಬರಬೇಕೆಂದು ಅರಸ ಸೊಲೊಮೋನನು ಆಜ್ಞಾಪಿಸಿದನು. ಅಂತೆಯೇ ಆ ಇಸ್ರಯೇಲರೆಲ್ಲರು ಏಳನೆಯ ತಿಂಗಳಾದ ಆಶ್ವಯುಜ ಮಾಸದಲ್ಲಿ ಜಾತ್ರೆಯಾಗಿ ಅರಸ ಸೊಲೊಮೋನನ ಬಳಿಗೆ ಕೂಡಿಬಂದರು. ಇಸ್ರಯೇಲರ ಹಿರಿಯರೆಲ್ಲರು ಹೀಗೆ ಕೂಡಿ ಬಂದಿರಲು ಯಾಜಕರು ಸರ್ವೇಶ್ವರನ ಮಂಜೂಷವನ್ನು ಹೊತ್ತುಕೊಂಡರು. ಉಳಿದ ಯಾಜಕರೂ ಲೇವಿಯರೂ ದೇವದರ್ಶನದ ಗುಡಾರ ಹಾಗು ಅದರಲ್ಲಿದ್ದ ಪವಿತ್ರ ವಸ್ತುಗಳನ್ನು ಹೊತ್ತರು. ಅರಸ ಸೊಲೊಮೋನನು ಹಾಗು ಅಲ್ಲಿ ಕೂಡಿ ಬಂದಿದ್ದ ಎಲ್ಲ ಇಸ್ರಯೇಲರೂ ಮಂಜೂಷದ ಮುಂದೆ ಅಸಂಖ್ಯವಾದ ಕುರಿದನಗಳನ್ನು ಬಲಿದಾನ ಮಾಡಿದರು. ಯಾಜಕರು ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಮಹಾಪರಿಶುದ್ಧ ಸ್ಥಳವೆನಿಸುವ ಗರ್ಭಗುಡಿಯಲ್ಲಿ, ಕೆರೂಬಿಗಳ ರೆಕ್ಕೆಗಳ ಕೆಳಗೆ, ಅದಕ್ಕೆ ನೇಮಕವಾದ ಸ್ಥಳದಲ್ಲಿಟ್ಟರು. ಕೆರೂಬಿಗಳ ರೆಕ್ಕೆಗಳು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದವುಗಳಾಗಿದ್ದುದರಿಂದ ಮಂಜೂಷವು ಹಾಗು ಅದರ ಕೋಲುಗಳು ಪೂರ್ಣವಾಗಿ ಅವುಗಳ ನೆರಳಿನಲ್ಲಿದ್ದವು. ಮಂಜೂಷದಲ್ಲಿ ಎರಡು ಶಿಲಾಶಾಸನಗಳನ್ನು ಬಿಟ್ಟರೆ, ಬೇರೇನೂ ಇರಲಿಲ್ಲ. ಸರ್ವೇಶ್ವರ ಈಜಿಪ್ಟಿನಿಂದ ಬಂದ ಇಸ್ರಯೇಲರೊಡನೆ ಹೋರೇಬ್ ಬೆಟ್ಟದ ಬಳಿ ಒಡಂಬಡಿಕೆ ಮಾಡಿಕೊಂಡಮೇಲೆ, ಮೋಶೆ ಆ ಶಾಸನಗಳನ್ನು ಅದರಲ್ಲಿ ಇಟ್ಟಿದ್ದನು. ಯಾಜಕರು ಆ ಪರಿಶುದ್ಧ ಸ್ಥಳದಿಂದ ಹೊರಗೆ ಬಂದಕೂಡಲೆ ಮೇಘವು ಸರ್ವೇಶ್ವರನ ಆಲಯವನ್ನು ತುಂಬಿಕೊಂಡಿತು. ಸರ್ವೇಶ್ವರನ ತೇಜಸ್ವಿನಿಂದ ವ್ಯಾಪ್ತವಾಗಿದ್ದ ಆ ಮೇಘವು ಆಲಯವನ್ನು ಆವರಿಸಿಕೊಂಡಿದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾಗಲಿಲ್ಲ. ಆಗ ಸೊಲೊಮೋನನು ಹೀಗೆಂದು ಪ್ರಾರ್ಥಿಸಿದನು: “ಹೇ ಸರ್ವೇಶ್ವರ, ರವಿಯನು ಆಗಸದಲ್ಲಿ ಸ್ಥಿರವಿರಿಸಿದ ನೀವು ಆರಿಸಿಕೊಂಡಿರಿ, ಕರಿಮೋಡದಲಿ ವಾಸಿಸಲು ನಾ ನಿರ್ಮಿಸಿರುವ ಈ ಭವ್ಯ ಮಂದಿರ ನಿಮಗಾಗಲಿ ಶಾಶ್ವತವಾದ ನಿವಾಸ.”

ಕೀರ್ತನೆ: 132:6-7, 8-10
ಶ್ಲೋಕ: ಪ್ರಭೂ, ನಿನ್ನ ವಾಸಸ್ಥಾನವನು ಬಂದು ಸೇರು ಬೇಗನೆ.

ಶುಭಸಂದೇಶ: ಮಾರ್ಕ 6:53-56


ಅವರೆಲ್ಲರು ಸರೋವರವನ್ನು ದಾಟಿ ಗೆನಸರೇತ್ ಊರಿನ ದಡ ಸೇರಿದರು. ಅವರು ದೋಣಿಯನ್ನು ಕಟ್ಟಿ, ಅದರಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುಸ್ವಾಮಿಯ ಗುರುತು ಹಚ್ಚಿದರು. ಒಡನೆ ಸುತ್ತಮುತ್ತಲೆಲ್ಲಾ ಓಡಾಡಿ, ರೋಗಿಗಳನ್ನು ಹಾಸಿಗೆಗಳ ಸಹಿತ ಹೊತ್ತುಕೊಂಡು, ಯೇಸು ಎಲ್ಲೆಲ್ಲಿ ಇದ್ದಾರೆಂದು ಕೇಳಿದರೋ ಅಲ್ಲೆಲ್ಲಾ ಹೋಗತೊಡಗಿದರು. ಯೇಸು ಹಳ್ಳಿಗಳಿಗಾಗಲಿ ಪಟ್ಟಣಪಾಳೆಯಗಳಿಗಾಗಲಿ ಹೋದಾಗಲೆಲ್ಲಾ ಜನರು ರೋಗಿಗಳನ್ನು ಅಲ್ಲಿಯ ಸಂತೆಬೀದಿ ಚೌಕಗಳಿಗೆ ಕರೆ ತರುತ್ತಿದ್ದರು. ಅವರ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಯೇಸುವನ್ನು ಬೇಡಿಕೊಳ್ಳುತ್ತಿದ್ದರು. ಹಾಗೆ ಮುಟ್ಟಿದವರೆಲ್ಲರೂ ಗುಣಹೊಂದುತ್ತಿದ್ದರು.

06.02.22 - "ಇದು ನಿನ್ನ ತುಟಿಗಳನ್ನು ತಾಕಿದೆ. ಈಗ ದೋಷ ನೀಗಿತು"

 ಮೊದಲನೇ ವಾಚನ: ಯೆಶಾಯ 6:1-8


ರಸ ಉಜ್ಜೀಯನು ಕಾಲವಾದ ವರ್ಷದಲ್ಲಿ ನನಗೆ  ದರ್ಶನವಾಯಿತು. ಉನ್ನತೋನ್ನತ ಸಂಹಾಸನದಲ್ಲಿ ಅವರು ಆಸೀನರಾಗಿದ್ದರು. ಅವರ ಮೇಲುವಸ್ತ್ರ ನೆರಿಗೆ ನರಿಗೆಯಾಗಿ ದೇವಾಲಯವನ್ನೆಲ್ಲ ಆವರಿಸಿತ್ತು. ಅವರ ಸುತ್ತಲು ಸೆರಾಫಿಯರೆಂಬ ತೇಜಸ್ವಿಗಳು ಇದ್ದರು ಪ್ರತಿಯೊಬ್ಬರಿಗೂ ಆರಾರು ರೆಕ್ಕೆಗಳಿದ್ದವು ಎರಡು ರೆಕ್ಕೆಗಳಿಂದ ಅವರ ಮುಖ ಮುಚ್ಚಿತ್ತು. ಇನ್ನೆರಡು ರೆಕ್ಕೆಗಳಿಂದ ಅವರ ಪಾದಗಳು ಮುಚ್ಚಿದ್ದವು. ಮತ್ತೆರಡು ರೆಕ್ಕೆಗಳನ್ನು ಬಡಿಯುತ್ತಾ ನೆಲ ಸೋಕದಂತೆ ನಿಂತಿದ್ದರು. ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ: "ಪವಿತ್ರ, ಪವಿತ್ರ, ಪವಿತ್ರ ಸೇನಾಧೀಶ್ವರ ಸರ್ವೇಶ್ವರ; ಜಗವೆಲ್ಲ ಆತನ ಪ್ರಭಾವಭರಿತ" ಎಂದು ಕೂಗಿ ಹೇಳಿದನು. ಆ ಶಬ್ದಕ್ಕೆ ದೇವಾಲಯದ ಅಸ್ತಿವಾರವೇ ಕಂಪಿಸಿತು. ಅಶುದ್ಧ ವದನದವನು ನಾನು. ಅಶುದ್ಧ ವದನದವರ ಮಧ್ಯೆ ಬಾಳುವವನು. ನನ್ನ ಕಣ್ಣುಗಳು  ರಾಜಾಧಿರಾಜನನ್ನು, ಸೇನಾಧೀಶ್ವರ ಸರ್ವೇಶ್ವರನನ್ನು ಕಂಡೆವಲ್ಲಾ!" ಎಂದು ಕೂಗಿ ಕೊಂಡೆನು. ಆಗ ಸೆರಾಫಿಯರಲ್ಲಿ - ತೇಜಸ್ವಿಯೊಬ್ಬನು ಬಲಿಪೀಠದಿಂದ, ಉರಿಯುವ ಕೆಂಡವೊಂದನ್ನು ಇಕ್ಕಳದಿಂದ ಹಿಡಿದಕೊಂಡು ನನ್ನತ್ತ ಹಾರಿ ಬಂದನು. ಆ ಉರಿ ಕೆಂಡವನ್ನುನನ್ನ ಬಾಯಿಗೆ ಮುಟ್ಟಿಸಿ: "ಇದು ನಿನ್ನ ತುಟಿಗಳನ್ನು ತಾಕಿದೆ. ಈಗ ದೋಷ ನೀಗಿತು. ನಿನ್ನ ಪಾಪ ಪರಿಹಾರ ಆಯಿತು", ಎಂದನು. ಆಗ, "ಯಾರನ್ನು ಕಳುಹಿಸಲಿ? ನಮ್ಮ ಪರವಾಗಿ ಹೋಗುವವರು ಯಾರು?" ಎಂಬ ನುಡಿ ಕೇಳಿಸಿತು. ಅದಕ್ಕೆ ನಾನು," ಇಗೋ, ನಾನು ಸಿದ್ದ, ನನ್ನನ್ನು ಕಳುಹಿಸಿ" ಎಂದೆನು.

ಕೀರ್ತನೆ: 138:1-3, 4-5, 7-8,
ಶ್ಲೋಕ: ಪ್ರಭೂ, ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ

ಎರಡನೇ ವಾಚನ: 1 ಕೊರಿಂಥಿಯರಿಗೆ  15:1-11


ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ ಶುಭಸಂದೇಶವನ್ನ ನೆನಪಿಗೆ ತಂದುಕೊಳ್ಳಿರಿ.  ನೀವು ಅದನ್ನು ಸ್ವೀಕರಿಸಿದ್ಧೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ಧೀರಿ. ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಢವಾಗಿ ವಿಶ್ವಾಸಿಸಿದರೆ ನೀವು ಜೀವೋದ್ಧಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ ವಿಶ್ವಾಸ ನಿರರ್ಥಕವಾದೀತು. ನಾನು ಪಡೆದುಕೊಂಡದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತ ಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ ಗ್ರಂಥದ ಪ್ರಕಾರ ಮೂರನೆಯ ದಿನ ಅವರು ಪುನರುತ್ದಾನ ಹೊಂದಿದರು. ಆನಂತರ ಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು. ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೋದರರಿಗೆ ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತು ಹೋಗಿದ್ದರೂ ಬಹುಮಂದಿ ಇಂದಿಗೂ ಬದುಕಿದ್ದಾರೆ. ಅದಾದ ಮೇಲೆ ಯಕೋಬನಿಗೂ ಆನಂತರ ಪ್ರೇಷಿತರೆಲ್ಲರಿಗೂ ಕಾಣಿಸಿಕೊಂಡರು. ಕಟ್ಟಕಡೆಗೆ ದಿನ ತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು. ನಾನಾದರೋ ಪ್ರೇಷಿತರಲ್ಲಿ ಕನಿಷ್ಠನು, ಪ್ರೇಷಿತನೆಂಬ ಹೆಸರಿಗೂ ಅಪಾತ್ರನು. ಏಕೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು. ನಾನು ಈಗ ಈ ಸ್ಥಿತಿಯಲ್ಲಿ ಇರುವುದು ದೇವರ ಅನುಗ್ರಹದಿಂದಲೇ, ಅವರ ಅನುಗ್ರಹ ನನ್ನಲ್ಲಿ ವ್ಯರ್ಥವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚು ಶ್ರಮಪಟ್ಟು ಸೇವೆಮಾಡಿದ್ದೇನೆ. ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿರುವ ದೇವರ ಅನುಗ್ರಹವೇ. ನಾನಾದರೇನು, ಅವರಾದರೇನು? ನಾವು ಸಾರುವ ಸಂದೇಶ ಒಂದೇ. ಅದನ್ನು ನೀವು ನಂಬಿದ್ದೀರಿ.

 ಶುಭಸಂದೇಶ: ಲೂಕ 5:1-11

ಮ್ಮೆ ಯೇಸುಸ್ವಾಮಿ ಗೆನಸರೇತ್ ಎಂಬ ಸರೋವರದ ತೀರದಲ್ಲಿ ನಿಂತಿದ್ದಾಗ, ಜನಸಮೂಹವು ದೇವರ ವಾಕ್ಯವನ್ನು ಕೇಳಲು ನೂಕು ನುಗ್ಗಲಾಗಿ ಬಂದು ಅವರನ್ನು ಒತ್ತರಿಸುತ್ತಿತ್ತು. ಆಗ ದಡದ ಮೇಲಿದ್ದ ಎರಡು ದೋಣಿಗಳು ಯೇಸುವಿನ ಕಣ್ಣಿಗೆ ಬಿದ್ದವು. ಬೆಸ್ತರು ದೋಣಿಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಆ ದೋಣಿಗಳಲ್ಲಿ ಒಂದು ಸಿಮೋನನದು. ಯೇಸು ಅದನ್ನು ಹತ್ತಿ, ದಡದಿಂದ ಸ್ವಲ್ಪ ದೂರ ತಳ್ಳಲು ಹೇಳಿ, ಅದರಲ್ಲೇ ಕುಳಿತುಕೊಂಡು ತಮ್ಮ ಬೋಧನೆಯನ್ನು ಮುಂದುವರಿಸಿದರು ಬೋಧನೆ ಮುಗಿದದ್ದೇ ಸಿಮೋನನಿಗೆ, "ನೀರು ಆಳವಾಗಿರುವ ಸ್ಥಳಕ್ಕೆ ದೋಣಿಯನ್ನು ಹಾಯಿಸಿ, ಮೀನು ಬೇಟೆಗೆ ನಿಮ್ಮ ಬಲೆಗಳನ್ನು ಹಾಕಿರಿ," ಎಂದರು. ಅದಕ್ಕೆ ಸಿಮೋನನು "ಗುರುವೇ, ನಾವು ರಾತ್ರಿಯೆಲ್ಲಾ ದುಡಿದಿದ್ದೇವೆ; ಏನೂ ಸಿಗಲಿಲ್ಲ. ಆದರೂ ನಿಮ್ಮ ಮಾತಿಗೆ ಬೆಲೆಕೊಟ್ಟು ಬಲೆಗಳನ್ನು ಹಾಕುತ್ತೇವೆ," ಎಂದನು. ಬಲೆಗಳನ್ನು ಹಾಕಿದ್ದೇ ಮೀನುಗಳು ರಾಶಿ ರಾಶಿಯಾಗಿ ಸಿಕ್ಕಿಕೊಂಡವು; ಬಲೆಗಳು ಹರಿದು ಹೋಗುವುದರಲ್ಲಿದ್ದವು. ಆದುದರಿಂದ ಬೇರೆ ದೋಣಿಯಲ್ಲಿದ್ದ ತಮ್ಮ ಸಂಗಡಿಗರಿಗೆ ಸನ್ನೆ ಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಸೇರಿ ಮೀನುಗಳನ್ನು ತುಂಬಿಕೊಳ್ಳಲು, ದೋಣಿಗಳೆರಡೂ ಮುಳುಗಲು ಆರಂಭಿಸಿದವು. ಇದನ್ನು ಕಂಡ ಸಿಮೋನ್ ಪೇತ್ರನು ಯೇಸುವಿನ ಕಾಲಿಗೆ ಬಿದ್ದು, "ಸ್ವಾಮೀ, ನಾನು ಪಾಪಾತ್ಮ; ನನ್ನಿಂದ ದೂರವಿರಿ!" ಎಂದನು. ಹಿಡಿದ ಮೀನಿನ ರಾಶಿಯನ್ನು ಕಂಡು ಅವನ ಸಂಗಡಿಗರೆಲ್ಲರೂ ನಿಬ್ಬೆರಗಾಗಿ ಹೋಗಿದ್ದರು. ಸಿಮೋನನ ಪಾಲುಗಾರರಾದ ಜೆಬೆದಾಯನ ಮಕ್ಕಳು - ಯಕೋಬ ಮತ್ತು ಯೊವಾನ್ನರು - ಹಾಗೆಯೇ ಬೆರಗಾಗಿದ್ದರು ಆಗ ಯೇಸು ಸಿಮೋನನಿಗೆ, "ಹೆದರಬೇಡ, ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ," ಎಂದರು. ಆ ಬೆಸ್ತರು ದೋಣಿಗಳನ್ನು ದಡಕ್ಕೆ ಸಾಗಿಸಿದ್ದೇ ಎಲ್ಲವನ್ನು ತ್ಯಜಿಸಿಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ಮನಸಿಗೊಂದಿಷ್ಟು : ರಾತ್ರಿಯೆಲ್ಲಾ ಬಲೆ ಹಾಕಿ ಮೀನು ಸಿಗದಿದ್ದರೂ ಯೇಸುವಿನ ಒಂದು ಮಾತಿಗೆ ಮತ್ತೆ ಬಲೆ ಹಾಕಿ ರಾಶಿ ಮಾಡಿಕೊಂಡ ಪೇತ್ರ. ನಂತರ ಯೇಸುವಿನ ಒಂದೇ ಒಂದು ಕರೆಗೆ ಎಲ್ಲವನ್ನು ಬಿಟ್ಟು ಪೇತ್ರ ತೋರಿದ ಬದ್ಧತೆ ಅಸಮಾನ್ಯ. ಶ್ರೀಮಂತರಾಗಿದ್ದ ಯಕೋಬ ಯೊವಾನ್ನ ಸಹೋದರರೂ ಇದೇ ಕತೆ. ಆದರಿಂದಲೇ ಆ ಪ್ರೇಷಿತರ ಹೆಸರು, ಕಾರ್ಯಗಳು 2000 ವರ್ಷಗಳ ನಂತರವೂ ಅಮರರಾಗಿ ಉಳಿದಿವೆ.

ಪ್ರಶ್ನೆ:  ಪೇತ್ರ, ಯೊವಾನ್ನ, ಯಕೋಬರ ಸ್ಥಾನದಲ್ಲಿ ನಾನಿದಿದ್ದರೆ ಯೇಸುವಿನ ಕರೆಗೆ ನನ್ನ ಪ್ರತಿಕ್ರಿಯೆ ಏನಿರುತಿತ್ತು?

05.02.22 - ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು, ಯೇಸುವಿನ ಮನ ಕರಗಿತು

 ಮೊದಲನೇ ವಾಚನ: 1 ಅರಸುಗಳು 3:4-13


ಒಮ್ಮೆ ಅರಸ ಸೊಲೊಮೋನನು ಬಲಿಯರ್ಪಿಸುವುದಕ್ಕಾಗಿ, ಪೂಜಾಸ್ಥಳಗಳಲ್ಲೇ ಪ್ರಾಮುಖ್ಯವಾದ ಗಿಬ್ಯೋನಿಗೆ ಹೋದನು. ಅಲ್ಲಿನ ಪೀಠದ ಮೇಲೆ ಸಹಸ್ರ ಬಲಿಗಳನ್ನು ಸಮರ್ಪಿಸಿದಾಗ, ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು. ಸೊಲೊಮೋನನು, “ನಿಮಗೆ ಪ್ರಾಮಾಣಿಕನಾಗಿ ನೀತಿಯಿಂದಲೂ ಯಥಾರ್ಥ ಚಿತ್ತದಿಂದಲೂ ನಡೆದುಕೊಂಡ ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ನೀವು ಮಹಾಕೃಪೆಯನ್ನು ತೋರಿಸಿದಿರಿ; ಆ ಕೃಪೆಯನ್ನು ಮುಂದುವರಿಸುತ್ತಾ ಈಗ ಅವರ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿ ಅದನ್ನು ಸಂಪೂರ್ಣ ಗೊಳಿಸಿದ್ದೀರಿ. ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು. ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾ ಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ. ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು. ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು. ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ. ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ. ಇದಲ್ಲದೆ, ನೀನು ಕೇಳದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನನಾದ ಅರಸನು ಇನ್ನೊಬ್ಬನಿರುವುದಿಲ್ಲ." ಎಂದರು.

ಕೀರ್ತನೆ: 119:9, 10, 11, 12, 13, 14

ಶ್ಲೋಕ: ನಿನ್ನ ಆಜ್ಞೆಗಳನು ಕಲಿಸು ಎನಗೆ

ಶುಭಸಂದೇಶ: ಮಾರ್ಕ 6:30-34


ಪ್ರೇಷಿತರು ಯೇಸುಸ್ವಾಮಿಯ ಬಳಿಗೆ ಹಿಂದಿರುಗಿ ಬಂದು ತಾವು ಮಾಡಿದ ಸಕಲ ಕಾರ್ಯಕಲಾಪಗಳ ಹಾಗೂ ನೀಡಿದ ಬೋಧನೆಯ ವರದಿಯನ್ನು ಒಪ್ಪಿಸಿದರು. ಜನರು ಗುಂಪು ಗುಂಪಾಗಿ ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟ ಮಾಡಲೂ ಬಿಡುವಿರಲಿಲ್ಲ. ಆದುದರಿಂದ ಯೇಸು, “ಬನ್ನಿ, ಪ್ರತ್ಯೇಕವಾಗಿ ನಾವು ನಿರ್ಜನ ಪ್ರದೇಶಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು ಬರೋಣ,” ಎಂದರು. ಅಂತೆಯೇ ಅವರೆಲ್ಲರೂ ಪ್ರತ್ಯೇಕವಾಗಿ ದೋಣಿಯನ್ನು ಹತ್ತಿ ಏಕಾಂತ ಪ್ರದೇಶಕ್ಕೆ ಹೊರಟರು. ಆದರೆ ಅವರು ಹೋಗುತ್ತಿರುವುದನ್ನು ಕಂಡು ಗುರುತಿಸಿದ ಅನೇಕರು ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ತ್ವರಿತವಾಗಿ ಸಾಗಿ ಅವರಿಗೆ ಮುಂಚಿತವಾಗಿಯೇ ಆ ಸ್ಥಳವನ್ನು ಸೇರಿದರು. ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು, ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು.

04.02.22 - "ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ"

 ಮೊದಲನೇ ವಾಚನ: ಸಿರಾಖನು 47:2-11


ಶಾಂತಿ ಬಲಿಪಶುವಿನಿಂದ ಕೊಬ್ಬನ್ನು ಬೇರ್ಪಡಿಸುವಂತೆ ಇಸ್ರಯೇಲರಿಂದ ಮೀಸಲಾದವನು ದಾವೀದನೆ. ಸಿಂಹಗಳನ್ನು ಆಡಿಸಿದನಿವನು ಆಡುಮರಿಗಳಂತೆ ಕರಡಿಗಳೊಂದಿಗೆ ಆಡಿದನು ಕುರಿಮರಿಗಳೊಂದಿಗೆ ಆಡುವಂತೆ. ಈತನೇ ಅಲ್ಲವೆ ತಾರುಣ್ಯದಲಿ ಕವಣೆಕಲ್ಲನು ಕೈಗೆತ್ತಿಕೊಂಡವನು? ಬಲಾಢ್ಯನೂ ಜಂಬಕೋರನೂ ಆದ ಗೊಲ್ಯಾತನನ್ನು ಸಂಹರಿಸಿ ನೆಲಕ್ಕುರುಳಿಸಿದವನು? ಈ ಪರಿ ತನ್ನ ಜನಾಂಗದ ಅವಮಾನವನ್ನು ಹೋಗಲಾಡಿಸಿದವನು? ಇವನು ಮೊರೆಯಿಡಲು ಮಹೋನ್ನತ ಸರ್ವೇಶ್ವರನಿಗೆ ಶಕ್ತಿ ನೀಡಿದನಾತ ಇವನ ಭುಜಬಲಕ್ಕೆ ಯುದ್ಧವೀರನಾದ ಆ ವ್ಯಕ್ತಿಯನ್ನು ಸಂಹರಿಸುವುದಕ್ಕೆ ತನ್ನ ಜನಾಂಗದವರ ಕೀರ್ತಿಪತಾಕೆಯನು ಮೇಲೆತ್ತುವುದಕ್ಕೆ. ಎಂತಲೇ ಜನರು ಗೌರವಿಸಿದರವನನು ‘ಹತ್ತು ಸಾವಿರಗಟ್ಟಲೆ’ ಕೊಂದುದಕ್ಕಾಗಿ ಹೊಗಳಿದರವನನ್ನು ಸರ್ವೇಶ್ವರನ ಆಶೀರ್ವಾದಗಳಿಗಾಗಿ ಮಹಿಮೆಯ ಮುಕುಟ ಕೊಡಲಾಯಿತವನಿಗೆ ಅದಕ್ಕಾಗಿ. ನಾಶಗೊಳಿಸಿದನು ಸುತ್ತಲೂ ಇದ್ದ ಶತ್ರುಗಳನ್ನು ಸೋಲಿಸಿದನು ತನ್ನ ವಿರೋಧಿಗಳಾದ ಫಿಲಿಷ್ಟಿಯರನ್ನು ಮುರಿದು ಪುಡಿಪುಡಿಮಾಡಿದನು ಅವರ ಕಳಸಕೊಂಬನ್ನು ಹಾಗೆಯೇ ಇರುವುದದು ಇಂದಿನವರೆಗು. ಪರಿಶುದ್ಧನು, ಮಹೋನ್ನತನು ಆದಾತನಿಗೆ ಸಲ್ಲಿಸಿದನು ಧನ್ಯವಾದ ತನ್ನ ಎಲ್ಲ ಕಾರ್ಯಗಳಲ್ಲೂ ಗಂಭೀರ ವಚನಗಳಿಂದ. ಆತನನ್ನು ಕೀರ್ತಿಸಿ ಹಾಡಿದನು ಪೂರ್ಣಹೃದಯದಿಂದ, ತನ್ನ ಸೃಷ್ಟಿಕರ್ತನನ್ನು ಪ್ರೀತಿವಾತ್ಸಲ್ಯದಿಂದ. ಇದಲ್ಲದೆ ಗಾಯಕರನ್ನಿರಿಸಿದನು ಬಲಿಪೀಠದ ಮುಂದೆ ಮಧುರ ಗೀತವನ್ನು ಹಾಡಿ ವಂದಿಸುವಂತೆ. ವಿಜೃಂಭಣೆಯನ್ನು ತಂದನು ಉತ್ಸವಗಳಿಗೆ ಉತ್ಸವಕಾಲಗಳಿಗಿತ್ತನು ಪೂರ್ಣವಾದ ಕ್ರಮಬದ್ಧತೆ. ಏರ್ಪಡಿಸಿದನು ಆ ಸಂದರ್ಭಗಳಲ್ಲಿ ಸರ್ವೇಶ್ವರನ ಶ್ರೀನಾಮವನ್ನು ಕೀರ್ತಿಸುವಂತೆ ಪವಿತ್ರಾಲಯದಲ್ಲಿ ಬೆಳಗಿನಿಂದ ಆ ಧ್ವನಿ ಕೇಳಿಬರುವಂತೆ. ಸರ್ವೇಶ್ವರ ಪರಿಹರಿಸಿದನು ಇವನ ಪಾಪವನ್ನು ಶಾಶ್ವತವಾಗಿಸಿದನು ಅವನ ಕೀರ್ತಿ ಪತಾಕೆಯನ್ನು. ಒಡಂಬಡಿಕೆಮಾಡಿ ಶಾಶ್ವತಗೊಳಿಸಿದನು ಅರಸೊತ್ತಿಗೆಯನ್ನು ದಯಪಾಲಿಸಿದನವನಿಗೆ ಇಸ್ರಯೇಲರಲ್ಲಿ ಮಹಿಮಾ ಸಿಂಹಾಸನವನ್ನು.

ಕೀರ್ತನೆ: 18:31, 47, 50, 51

ಶ್ಲೋಕ: ನನ್ನ ಉದ್ಧಾರಕನಾದ ಸರ್ವೇಶ್ವರನಿಗೆ ಸ್ತುತಿಸ್ತೊತ್ರವು

ಶುಭಸಂದೇಶ: ಮಾರ್ಕ 6:14-29

ಇಷ್ಟರಲ್ಲಿ ಯೇಸುಸ್ವಾಮಿಯ ಹೆಸರು ಮನೆಮಾತಾಯಿತು. ಅದು ಹೆರೋದ ಅರಸನ ಕಿವಿಗೂ ಬಿತ್ತು. ಯೇಸುವಿನ ವಿಚಾರವಾಗಿ ಕೆಲವರು, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದುದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎನ್ನುತ್ತಿದ್ದರು. ಇನ್ನು ಕೆಲವರು, ‘ಈತನೇ ಎಲೀಯನು’ ಎಂದೂ ಮತ್ತೆ ಕೆಲವರು, “ಪ್ರಾಚೀನ ಪ್ರವಾದಿಗಳಂತೆ ಈತನೂ ಒಬ್ಬ ಪ್ರವಾದಿ,” ಎಂದೂ ಹೇಳುತ್ತಿದ್ದರು. ಇದನ್ನೆಲ್ಲಾ ಕೇಳಿದ ಹೆರೋದನು, “ಹೌದು, ನಾನು ಶಿರಚ್ಛೇದನ ಮಾಡಿದ ಯೊವಾನ್ನನೇ ಮರಳಿ ಜೀವಂತನಾಗಿ ಬಂದಿದ್ದಾನೆ,” ಎಂದನು. ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತ ಯೊವಾನ್ನನನ್ನು ಸೆರೆಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು. ಈ ಕಾರಣ ಯೊವಾನ್ನನು, “ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಪದೇಪದೇ ಅವನನ್ನು ಎಚ್ಚರಿಸುತ್ತಿದ್ದನು. ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ. ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವೂ ಆತನಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನ್ನು ಕಿವಿಗೊಟ್ಟು ಕೇಳುತ್ತಿದ್ದನು. ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು. ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣಶಾಲೆಗೆ ಬಂದು ನರ್ತನ ಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು. ಆಗ ಅರಸ ಹೆರೋದನು ಅವಳಿಗೆ, “ನಿನಗೆ ಏನು ಬೇಕಾದರೂ ಕೇಳು, ಕೊಡುತ್ತೇನೆ” ಎಂದನು. “ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು. ಅವಳು ತನ್ನ ತಾಯಿಯ ಬಳಿಗೆ ಹೋಗಿ, “ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?” ಎಂದು ವಿಚಾರಿಸಿದಳು. “ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು,” ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು. ಕೂಡಲೆ ಅವಳು ಅರಸನ ಬಳಿಗೆ ಧಾವಿಸಿ, “ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ,” ಎಂದು ಕೇಳಿಕೊಂಡಳು. ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆಮಾಡಿ ಕಳುಹಿಸಿದನು. ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆ ತಂದುಕೊಟ್ಟನು. ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. 

03.02.22

ಮೊದಲನೆಯ ವಾಚನ: ಅರಸುಗಳ ಮೊದಲನೆಯ ಗ್ರಂಥದಿಂದ ವಾಚನ 2:1-4,10-12

ದಾವೀದನ ಮರಣ ಸಮಯ ಸಮೀಪಿಸಿದಾಗ ಅವನು ತನ್ನ ಮಗ ಸೊಲೊಮೋನನಿಗೆ ಹೀಗೆಂದು ಆಜ್ಞಾಪಿಸಿದನು: ಜಗದ ಜನರೆಲ್ಲರು ಹೋಗುವ ದಾರಿಯನ್ನು ನಾನು ಈಗ ಹಿಡಿಯಬೇಕು; ನೀನು ಧೈರ್ಯದಿಂದಿರು. ನಿನ್ನ ಸಾಮರ್ಥ್ಯವನ್ನು ತೋರಿಸು. ನಿನ್ನ ದೇವರಾದ ಸರ್ವೇಶ್ವರಸ್ವಾಮಿಯ ಕಟ್ಟಳೆಯನ್ನು ಕೈಗೊಂಡು ಅವರ ಮಾರ್ಗದಲ್ಲೇ ನಡೆದುಕೋ; ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಅವರ ಆಜ್ಞಾನಿಯಮ-ವಿಧಿನಿರ್ಣಯಗಳನ್ನು ಪಾಲಿಸು. ಹೀಗೆ ಮಾಡುವುದಾದರೆ ನೀನು ಏನು ಮಾಡಿದರೂ ಎಲ್ಲಿಗೆ ಹೋದರು ಕೃತಾರ್ಥನಾಗುವೆ. ಇದಲ್ಲದೆ ಸರ್ವೇಶ್ವರ, ನಿನ್ನ ಸಂತಾನದವರು ಪೂರ್ಣ ಮನಸ್ಸಿನಿಂದಲೂ ಪೂರ್ಣ ಪ್ರಾಣದಿಂದಲೂ ನನಗೆ ನಂಬಿಗಸ್ತರಾಗಿ ನಡೆದುಕೊಳ್ಳುವುದರಲ್ಲಿ ಜಾಗರೂಕರಾಗಿದ್ದರೆ ಅವರು ಇಸ್ರಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ತಪ್ಪದು,' ಎಂದು ನನಗೆ ಮಾಡಿದ ವಾಗ್ದಾನವನ್ನು ಅವರು ಸ್ಥಿರಪಡಿಸುವರು. ಅನಂತರ ದಾವೀದನು ಮರಣ ಹೊಂದಿ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ದಾವೀದನು ಇಸ್ರಯೇಲರನ್ನು ಆಳಿದ್ದು ನಲ್ವತ್ತು ವರ್ಷ: ಹೆಬ್ರೋನಿನಲ್ಲಿ ಏಳು ವರ್ಷ, ಜೆರುಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು. ಸೊಲೊಮೋನನು ತನ್ನ ತಂದೆ ದಾವೀದನ ಸಿಂಹಾಸನವನ್ನು ಏರಿದನು. ಅವನ ರಾಜ್ಯ ಸಮೃದ್ಧಿಯಾಗಿ ಬೆಳೆಯಿತು.

ಕೀರ್ತನೆ: 1 ಪೂರ್ವಕಾಲದ ವೃತ್ತಾಂತ 29:11-12,
ಶ್ಲೋಕ: ಸರ್ವಾಧಿಕಾರ ಬಲಪರಾಕ್ರಮ ಇರುವುದು ಪ್ರಭು ನಿಮ್ಮ ಕೈಯಲ್ಲೇ.

ಹೇ ಸರ್ವೇಶ್ವರಾ, ನಮ್ಮ ಪಿತೃ ಯಕೋಬನ ದೇವರೇ|
ಸದಾಕಾಲಕ್ಕೂ ಸ್ತುತಿಸ್ತೋತ್ರ ಸಲ್ಲಲಿ ನಿಮಗೆ||
ಹೇ ಸರ್ವೇಶ್ವರಾ, ಮಹಿಮೆ, ಪ್ರತಾಪ,ವೈಭವ, ಪರಾಕ್ರಮ, ಪ್ರತಿಭೆ, ನಿಮ್ಮವೇ|
ಭೂಮ್ಯಾಕಾಶಗಳಲ್ಲಿರುವ ಸಮಸ್ತವೂ ನಿಮ್ಮದೇ||

ಸರ್ವೇಶ್ವರಾ, ರಾಜ್ಯಭಾರವೂ ನಿಮ್ಮದೇ|
ಸರ್ವವನು ಮಹೋನ್ನತರಾಗಿ ಆಳುವವರೂ ನೀವೇ||
ಆಸ್ತಿ-ಪಾಸ್ತಿ, ಐಶ್ವರ್ಯ ಬರುವುದು ನಿಮ್ಮಿಂದಲೇ|
ಸರ್ವಾಧಿಕಾರ ಬಲಪರಾಕ್ರಮ ಇರುವುದು ನಿಮ್ಮ ಕೈಯಲ್ಲೇ|
ಪಟ್ಟ ಪದವಿಗೆಸರ್ವಶಕ್ತಿ ಸಾಹಸಕ್ಕೆ ಮೂಲ ನೀವೇ||

ಶುಭಸಂದೇಶ: ಮಾರ್ಕ 6: 7-13

ಆ ಕಾಲದಲ್ಲಿ ಯೇಸು ಸುತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವಬಿಡಿಸುವ ಅಧಿಕಾರವನ್ನಿತ್ತು. ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು. ಕಳುಹಿಸುವಾಗ, ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ. ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ, ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು, ಎರಡು ಅಂಗಿಗಳನ್ನು ತೊಟ್ಟುಕೊಳ್ಳಬೇಡಿ, ಎಂದು ಅಪ್ಪಣೆ ಮಾಡಿದರು. ಇದಲ್ಲದೆ, ನೀವು ಯಾವುದೇ ಒಂದು ಊರಿಗೆ ಹೋದಾಗ ಆ ಊರನ್ನು ಬಿಡುವವರೆಗೂ ಆತಿಥ್ಯ ನೀಡುವ ಯಾವುದಾದರೂ ಒಂದು ಮನೆಯಲ್ಲೇ ಉಳಿದುಕೊಳ್ಳಿ. ಯಾವುದೇ ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟು ಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ, ಎಂದರು. ಶಿಷ್ಯರು ಹೊರಟು ಹೋಗಿ ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಎಂದು ಜನರಿಗೆ ಸಾರಿ ಹೇಳಿದರು. ದೆವ್ವಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು. ತೈಲ ಲೇಪನಮಾಡಿ ಅನೇಕ ರೋಗಿಗಳನ್ನು ಗುಣಪಡಿಸಿದರು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...