09.05.21- "ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 10:25-26, 34-35, 44-48

ಪೇತ್ರನು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಕೊರ್ನೇಲಿಯನು ಅವನನ್ನು ಎದುರುಗೊಂಡು, ಪಾದಕ್ಕೆರಗಿ, ಸಾಷ್ಟಾಂಗ ನಮಸ್ಕಾರ ಮಾಡಿದನು. ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದು ನಿಲ್ಲು, ನಾನೂ ಒಬ್ಬ ಸಾಮಾನ್ಯ ಮನುಷ್ಯನೇ,” ಎಂದನು. ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ. ಈ ವಿಷಯ ನನಗೆ ಈಗ ಮನದಟ್ಟಾಗಿದೆ. ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದವನೇ ಆಗಿರಲಿ, ಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಪೇತ್ರನು ಮಾತನಾಡುತ್ತಿದ್ದಂತೆ ಅವನ ಉಪದೇಶವನ್ನು ಕೇಳುತ್ತಿದ್ದ ಎಲ್ಲರ ಮೇಲೆ ಪವಿತ್ರಾತ್ಮ ಇಳಿದು ಬಂದರು. ಎಲ್ಲರು ವಿವಿಧ ಭಾಷೆಗಳನ್ನು ಮಾತನಾಡುತ್ತಾ ದೇವರ ಮಹತ್ವವನ್ನು ಸ್ತುತಿಸತೊಡಗಿದರು. ಜೊಪ್ಪದಿಂದ ಪೇತ್ರನೊಡನೆ ಬಂದಿದ್ದ ಯೆಹೂದ್ಯ ಭಕ್ತವಿಶ್ವಾಸಿಗಳು ಇದನ್ನು ಕಂಡು, ದೇವರು ಅನ್ಯಧರ್ಮದವರ ಮೇಲೂ ಪವಿತ್ರಾತ್ಮಧಾರೆ ಎರೆಯುತ್ತಿದ್ದಾರಲ್ಲಾ ಎಂದು ವಿಸ್ಮಿತರಾದರು. ಆಗ ಪೇತ್ರನು, “ನಮ್ಮಂತೆಯೇ ಪವಿತ್ರಾತ್ಮ ಅವರನ್ನು ಪಡೆದಿರುವ ಈ ಜನರಿಗೆ ದೀಕ್ಷಾಸ್ನಾನ ಕೊಡಲು ಅಭ್ಯಂತರವಿದೆಯೇ?” ಎಂದನು. ಅನಂತರ ಅವರಿಗೆ ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನ ಪಡೆಯುವಂತೆ ಆಜ್ಞಾಪಿಸಿದನು. ಅದಾದ ಬಳಿಕ ತಮ್ಮೊಡನೆ ಕೆಲವು ದಿನ ಇರಬೇಕೆಂದು ಪೇತ್ರನನ್ನು ಆ ಜನರು ಕೇಳಿಕೊಂಡರು.

ಕೀರ್ತನೆ: 98:1-4

ಶ್ಲೋಕ: ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ದಾರಾಕ ಶಕ್ತಿಯನು.  

ಎರಡನೇ ವಾಚನ: 1 ಯೊವಾನ್ನ 4: 7-10

ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿ ದೇವರಿಂದ ಉಗಮವಾದುದು. ಪ್ರೀತಿಸುವವನು ದೇವರ ಮಗನು. ಅವನು ದೇವರನ್ನು ಬಲ್ಲವನು. ಪ್ರೀತಿಸದವನು ದೇವರನ್ನು ಬಲ್ಲವನಲ್ಲ. ಏಕೆಂದರೆ, ದೇವರು ಪ್ರೀತಿಸ್ವರೂಪಿ. ತಮ್ಮ ಏಕೈಕ ಪುತ್ರನ ಮುಖಾಂತರ ನಾವು ಸಜ್ಜೀವವನ್ನು ಪಡೆಯುವಂತೆ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ನಮ್ಮ ಮೇಲೆ ದೇವರಿಗಿರುವ ಪ್ರೀತಿ ಹೀಗೆ ವ್ಯಕ್ತವಾಯಿತು. ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಅವರು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತಮ್ಮ ಪುತ್ರನನ್ನು ಕಳುಹಿಸಿದ್ದರಲ್ಲಿಯೇ ಪ್ರೀತಿಯ ನಿಜ ಗುಣ ತೋರಿಬರುತ್ತದೆ.


ಶುಭಸಂದೇಶ: ಯೊವಾನ್ನ 15: 9-17


ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ. ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. “ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ. ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು. ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ. ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ.

08.05.21 - "ನನ್ನನ್ನು ಹಿಂಸೆಗೆ ಗುರಿಮಾಡಿದಂತೆ ನಿಮ್ಮನ್ನೂ ಹಿಂಸೆಗೆ ಗುರಿಮಾಡುವರು"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 16:1-10


ಪೌಲನು ದೆರ್ಬೆಗೂ ಅಲ್ಲಿಂದ ಲುಸ್ತ್ರಕ್ಕೂ ಪ್ರಯಾಣ ಮಾಡಿದನು. ತಿಮೊಥೇಯ ಎಂಬ ಕ್ರೈಸ್ತಭಕ್ತನು ಅಲ್ಲಿ ವಾಸಿಸುತ್ತಿದ್ದನು. ಇವನ ತಾಯಿ ಯೆಹೂದ್ಯಳು ಹಾಗೂ ಕ್ರೈಸ್ತಭಕ್ತಳು. ತಂದೆಯಾದರೋ ಗ್ರೀಕನು. ಲುಸ್ತ್ರ ಮತ್ತು ಇಕೋನಿಯದ ಸಹೋದರರೆಲ್ಲರಿಗೆ ತಿಮೊಥೇಯನ ಬಗ್ಗೆ ಸದಭಿಪ್ರಾಯವಿತ್ತು. ಪೌಲನು ತಿಮೊಥೇಯನನ್ನು ತನ್ನೊಡನೆ ಕರೆದುಕೊಂಡು ಹೋಗಲು ಅಪೇಕ್ಷಿಸಿದನು. ಆ ಪ್ರದೇಶಗಳಲ್ಲಿದ್ದ ಯೆಹೂದ್ಯರಿಗೆ ತಿಮೊಥೇಯನ ತಂದೆ ಗ್ರೀಕನೆಂದು ತಿಳಿದಿದ್ದುದರಿಂದ ಅವನಿಗೆ ಸುನ್ನತಿಮಾಡಿಸಿದನು. ಊರಿಂದ ಊರಿಗೆ ಪ್ರಯಾಣ ಮಾಡುತ್ತಾ, ಜೆರುಸಲೇಮಿನಲ್ಲಿದ್ದ ಪ್ರೇಷಿತರೂ ಸಭಾಪ್ರಮುಖರೂ ನಿರ್ಧರಿಸಿದ ನಿಯಮಗಳನ್ನು ಭಕ್ತರಿಗೆ ಬೋಧಿಸುತ್ತಾ, ಅವುಗಳನ್ನು ಪಾಲಿಸುವಂತೆ ಹೇಳಿದರು. ಹೀಗೆ ಕ್ರೈಸ್ತಸಭೆಗಳು ವಿಶ್ವಾಸದಲ್ಲಿ ದೃಢಗೊಂಡು ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯತೊಡಗಿತು. ಏಷ್ಯದಲ್ಲಿ ಅವರು ಶುಭಸಂದೇಶವನ್ನು ಸಾರಕೂಡದೆಂದು ಪವಿತ್ರಾತ್ಮ ನಿಷೇಧಿಸಿದ್ದರಿಂದ ಅವರು ಫ್ರಿಜಿಯ ಮತ್ತು ಗಲಾತ್ಯಪ್ರದೇಶಗಳ ಮಾರ್ಗವಾಗಿ ಪ್ರಯಾಣಮಾಡಿದರು. ಮೂಸಿಯದ ಗಡಿಯನ್ನು ತಲುಪಿದಾಗ ಅವರು ಬಿಥೂನಿಯ ಪ್ರಾಂತ್ಯಕ್ಕೆ ಹೋಗಲು ಯತ್ನಿಸಿದರು. ಯೇಸುವಿನ ಆತ್ಮ ಅಲ್ಲಿಗೆ ಹೋಗಲು ಸಹ ಅವರನ್ನು ಬಿಡಲಿಲ್ಲ. ಆದುದರಿಂದ ಅವರು ಮೂಸಿಯವನ್ನು ಹಾದು ನೇರವಾಗಿ ತ್ರೋವಕ್ಕೆ ಹೋದರು. ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು; ಮಕೆದೋನಿಯದ ಒಬ್ಬ ವ್ಯಕ್ತಿ ಅಲ್ಲಿ ನಿಂತು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡಿ,” ಎಂದು ಅಂಗಲಾಚಿದನು. ಪೌಲನಿಗೆ ಈ ದರ್ಶನವಾದ ತಕ್ಷಣ ಆ ಜನರಿಗೆ ಶುಭಸಂದೇಶವನ್ನು ಸಾರಲು ದೇವರು ನಮ್ಮನ್ನು ಕರೆದಿದ್ದಾರೆಂದು ನಾವು ಅರಿತುಕೊಂಡು ಮಕೆದೋನಿಯಕ್ಕೆ ಹೋಗಲು ಸಿದ್ಧರಾದೆವು.

ಕೀರ್ತನೆ: 100:1-2, 3, 5
ಶ್ಲೋಕ: ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ

ಭೂನಿವಾಸಿಗಳೇ, ಜಯಘೋಷ ಮಾಡಿ ಪ್ರಭುವಿಗೆ I
ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ I
ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ II
ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು I

ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು I
ಆತನ ಜನ, ಆತನೆ ಮೇಯಿಸುವ ಕುರಿಗಳು, ನಾವು II

ಹೌದು, ಪ್ರಭುವೆನಿತೋ ಒಳ್ಳೆಯವನು I
ಇರುವುದಾತನ ಪ್ರೀತಿ ಯುಗಯುಗಕು I
ಆತನ ಸತ್ಯತೆ ತಲತಲಾಂತರಕು II

ಶುಭಸಂದೇಶ: ಯೊವಾನ್ನ 15:18-21

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಲೋಕವು ನಿಮ್ಮನ್ನು ದ್ವೇಷಿಸಿದರೆ, ನನ್ನ ಮೇಲೆ ಅದಕ್ಕೆ ಮೊದಲೇ ದ್ವೇಷವಿತ್ತೆಂಬುದನ್ನು ನೆನಪಿನಲ್ಲಿಡಿ. ನೀವು ಲೋಕದ ಕಡೆಯವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಮಮತೆಯಿಂದ ಕಾಣುತ್ತಿತ್ತು. ನೀವಾದರೋ ಲೋಕದ ಕಡೆಗೆ ಸೇರಿದವರಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿರುವುದರಿಂದ ನೀವು ಲೋಕದಿಂದ ಬೇರ್ಪಟ್ಟಿದ್ದೀರಿ ಎಂದೇ ಲೋಕಕ್ಕೆ ನಿಮ್ಮ ಮೇಲೆ ದ್ವೇಷವಿದೆ. ಧಣಿಗಿಂತಲೂ ದಾಸನು ದೊಡ್ಡವನಲ್ಲವೆಂದು ನಾನು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿ. ಅವರು ನನ್ನನ್ನು ಹಿಂಸೆಗೆ ಗುರಿಮಾಡಿದಂತೆ ನಿಮ್ಮನ್ನೂ ಹಿಂಸೆಗೆ ಗುರಿಮಾಡುವರು. ನನ್ನ ಬೋಧನೆಯ ಮಾತನ್ನು ಅವರು ಅನುಸರಿಸಿ ನಡೆದರೆ ನಿಮ್ಮ ಬೋಧನೆಯ ಮಾತನ್ನು ಅನುಸರಿಸಿ ನಡೆಯುವರು. ನೀವು ನನ್ನವರಾದುದರಿಂದ ಅವರು ನಿಮ್ಮನ್ನು ಹೀಗೆ ಕಾಣುವರು. ಏಕೆಂದರೆ ನನ್ನನ್ನು ಕಳುಹಿಸಿದಾತನನ್ನು ಅವರು ಅರಿಯರು."

06.05.21 - "ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15: 7-21


ಸುದೀರ್ಘ ಚರ್ಚೆಯಾದ ನಂತರ ಪೇತ್ರನು ಎದ್ದು ನಿಂತು ಹೀಗೆಂದನು: “ಸಹೋದರರೇ, ಅನ್ಯ ಧರ್ಮೀಯರು ಶುಭಸಂದೇಶವನ್ನು ನನ್ನ ಬಾಯಿಯಿಂದ ಕೇಳಿ ವಿಶ್ವಾಸಿಸಲೆಂದು ದೇವರು ನಿಮ್ಮ ಮಧ್ಯೆಯಿಂದ ನನ್ನನ್ನು ಬಹುದಿನಗಳ ಹಿಂದೆಯೇ ಆರಿಸಿಕೊಂಡರು. ಇದು ನಿಮಗೆ ತಿಳಿದ ವಿಷಯ. ಮಾನವನ ಅಂತರಂಗವನ್ನು ಅರಿತ ದೇವರು ನಿಮಗೆ ಕೊಟ್ಟಂತೆಯೇ ಅವರಿಗೂ ಪವಿತ್ರಾತ್ಮ ಅವರನ್ನು ಕೊಟ್ಟರು. ಅವರೂ ತಮ್ಮವರೇ ಎಂದು ವ್ಯಕ್ತಪಡಿಸಿದರು. ಅವರಿಗೂ ನಮಗೂ ಯಾವ ಭೇದ ಭಾವವನ್ನು ತೋರಿಸದೆ ವಿಶ್ವಾಸದ ನಿಮಿತ್ತ ದೇವರು ಅವರ ಪಾಪಗಳನ್ನು ಕ್ಷಮಿಸಿದರು. ಆದುದರಿಂದ ನಮ್ಮ ಪೂರ್ವಜರಿಂದಾಗಲೀ ನಮ್ಮಿಂದಾಗಲೀ ಹೊರಲಾಗದಂಥ ಹೊರೆಯನ್ನು ಈ ಅನುಯಾಯಿಗಳ ಮೇಲೆ ಏಕೆ ಹೊರಿಸುತ್ತೀರಿ? ಹೀಗೆ ದೇವರನ್ನೇಕೆ ಕೆಣಕುತ್ತೀರಿ? ಇಲ್ಲ, ಇದು ಸರಿಯಲ್ಲ. ನಮಗೇ ಆಗಲಿ, ಅವರಿಗೇ ಆಗಲಿ, ಜೀವೋದ್ಧಾರ ದೊರಕುವುದು ಪ್ರಭು ಯೇಸುವಿನ ಅನುಗ್ರಹದಿಂದಲೇ. ಇದೇ ನಮ್ಮ ವಿಶ್ವಾಸ.” ಇದನ್ನು ಕೇಳಿದ್ದೇ, ಸಭೆ ಸೇರಿದ್ದವರೆಲ್ಲರೂ ಮೌನರಾದರು. ಪೌಲ ಮತ್ತು ಬಾರ್ನಬರಿಗೆ ಕಿವಿಗೊಟ್ಟರು. ದೇವರು ಅವರ ಮುಖಾಂತರ ಅನ್ಯ ಧರ್ಮೀಯರ ಮಧ್ಯೆ ಎಸಗಿದ ಸೂಚಕ ಕಾರ್ಯಗಳನ್ನೂ ಅದ್ಭುತ ಕಾರ್ಯಗಳನ್ನೂ ಕುರಿತು ಕೇಳಿದರು. ಇದಾದ ಮೇಲೆ ಯಕೋಬನು ಎದ್ದು ಹೀಗೆಂದನು: “ಸಹೋದರರೇ ಕೇಳಿ, ದೇವರು ಈ ಮೊದಲೇ ಅನ್ಯ ಧರ್ಮೀಯರಲ್ಲಿ ಆಸಕ್ತಿಗೊಂಡು ಅವರಿಂದಲೂ ಸ್ವಂತ ಪ್ರಜೆಯನ್ನು ಆರಿಸಿಕೊಂಡಿದ್ದಾರೆ, ಎಂಬ ವಿಷಯವನ್ನು ಸಿಮೋನನು ಈಗ ತಾನೇ ವಿವರಿಸಿದ್ದಾನೆ. ಇದಕ್ಕೂ ಪ್ರವಾದಿಗಳ ಪ್ರವಚನಗಳಿಗೂ ಪೂರ್ಣ ಸಾಮರಸ್ಯವಿದೆ. ‘ಅಳಿದುಹೋದ ದಾವೀದನ ಮನೆತನವನು ಪುನರ್ಸ್ಥಾಪಿಸಲು ಮರಳಿ ಬರುವೆನು ಪಾಳು ಬಿದ್ದುದನು ಜೀರ್ಣೋದ್ಧಾರ ಗೊಳಿಸುವೆನು ಸುಭದ್ರವಾಗಿ ನಿಲ್ಲಿಸುವೆನು ಅದನ್ನು ನನ್ನವರೆಂದು ನಾನು ಕರೆದ ಎಲ್ಲ ಅನ್ಯಧರ್ಮೀಯರು ಉಳಿದೆಲ್ಲ ಮಾನವರು ನನ್ನತ್ತ ಬರಲಿಹರು ಎಂಬೀ ಸರ್ವೇಶ್ವರನ ನುಡಿ ಎಂದಿನಿಂದಲೋ ತಿಳಿದಿಹುದು.’ “ಆದುದರಿಂದ ನನ್ನ ತೀರ್ಮಾನವೇನೆಂದರೆ: ದೇವರ ಕಡೆಗೆ ತಿರುಗುತ್ತಿರುವ ಅನ್ಯ ಧರ್ಮೀಯರನ್ನು ತೊಂದರೆಗೆ ಈಡು ಮಾಡಬಾರದು. ಅದಕ್ಕೆ ಬದಲಾಗಿ ನಾವು ಅವರಿಗೆ ಪತ್ರ ಬರೆದು, ‘ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು; ಅದನ್ನು ಸೇವಿಸಬಾರದು; ಅನೈತಿಕತೆಯಿಂದ ದೂರವಿರಬೇಕು; ರಕ್ತವನ್ನಾಗಲಿ, ಕುತ್ತಿಗೆ ಹಿಸುಕಿದ ಪ್ರಾಣಿಗಳನ್ನಾಗಲಿ ತಿನ್ನಬಾರದು,’ ಎಂದು ತಿಳುವಳಿಕೆ ಕೊಡಬೇಕು. ಏಕೆಂದರೆ ಪುರಾತನ ಕಾಲಂದಿದಲೂ ಪ್ರತಿಯೊಂದು ಸಬ್ಬತ್‍ ದಿನ ಮೋಶೆಯ ಧರ್ಮಶಾಸ್ತ್ರವನ್ನು ಪ್ರಾರ್ಥನಾ ಮಂದಿರಗಳಲ್ಲಿ ಓದಲಾಗುತ್ತಿದೆ ಮತ್ತು ಆತನ ಬೋಧನೆಯನ್ನು ಪ್ರತಿ ನಗರದಲ್ಲೂ ಸಾರಲಾಗುತ್ತಿದೆ,” ಎಂದನು.

ಕೀರ್ತನೆ: 96: 1-3, 10

ಶ್ಲೋಕ: ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ, ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ. 

ಶುಭಸಂದೇಶ: ಯೊವಾನ್ನ 15:9-11


ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ. ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. “ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ.

05.05.21 - "ನೀವು ಸಮೃದ್ಧಿಯಾಗಿ ಫಲಕೊಟ್ಟು ನನ್ನ ಶಿಷ್ಯರಾಗಿ ಬೆಳಗುವುದರಿಂದಲೇ ನನ್ನ ಪಿತನ ಮಹಿಮೆ ಪ್ರಕಟವಾಗುವುದು."

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15:1-6

ಜುದೇಯದಿಂದ ಕೆಲವು ಜನರು ಅಂತಿಯೋಕ್ಯಕ್ಕೆ ಬಂದು ಅಲ್ಲಿನ ಭಕ್ತ ವಿಶ್ವಾಸಿಗಳಿಗೆ, “ಮೋಶೆಯ ನಿಯಮದಂತೆ ನೀವು ಸುನ್ನತಿ ಮಾಡಿಸಿಕೊಂಡ ಹೊರತು ಜೀವೋದ್ಧಾರ ಪಡೆಯಲಾರಿರಿ,” ಎಂದು ಬೋಧಿಸತೊಡಗಿದರು. ಈ ವಿಷಯವಾಗಿ ಅವರಿಗೂ ಪೌಲ ಮತ್ತು ಬಾರ್ನಬರಿಗೂ ಭಿನ್ನಾಭಿಪ್ರಾಯ ಉಂಟಾಗಿ ತೀವ್ರ ವಿವಾದವೆದ್ದಿತು. ಆದುದರಿಂದ ಈ ಸಮಸ್ಯೆಯ ಬಗ್ಗೆ ಪೌಲ ಮತ್ತು ಬಾರ್ನಬರು ಅಂತಿಯೋಕ್ಯದ ಇನ್ನೂ ಕೆಲವರ ಸಮೇತ ಜೆರುಸಲೇಮಿಗೆ ಹೋಗಿ ಪ್ರೇಷಿತರನ್ನೂ ಪ್ರಮುಖರನ್ನೂ ಕಾಣಬೇಕೆಂದು ತೀರ್ಮಾನಿಸಲಾಯಿತು. ಅಂತೆಯೇ ಕ್ರೈಸ್ತಸಭೆ ಅವರನ್ನು ಬೀಳ್ಕೊಟ್ಟಿತು. ಅವರು ಫೆನಿಷ್ಯ ಹಾಗೂ ಸಮಾರಿಯದ ಮಾರ್ಗವಾಗಿ ಪ್ರಯಾಣಮಾಡುತ್ತಾ ಅಲ್ಲಿಯ ಭಕ್ತವಿಶ್ವಾಸಿಗಳಿಗೆ ಅನ್ಯಧರ್ಮೀಯರು ಹೇಗೆ ಕ್ರೈಸ್ತರಾದರೆಂಬುದನ್ನು ವಿವರಿಸಿದರು. ಇದನ್ನು ಕೇಳಿದ ಭಕ್ತಾದಿಗಳು ಸಂತೋಷಭರಿತರಾದರು. ಪೌಲ, ಬಾರ್ನಬ ಮತ್ತು ಸಂಗಡಿಗರು ಜೆರುಸಲೇಮಿಗೆ ಆಗಮಿಸಿದಾಗ, ಅಲ್ಲಿಯ ಕ್ರೈಸ್ತಸಭೆ ಪ್ರೇಷಿತರ ಹಾಗೂ ಪ್ರಮುಖರ ಸಮೇತ ಅವರನ್ನು ಸ್ವಾಗತಿಸಿತು. ಆಗ ಅವರು, ದೇವರು ತಮ್ಮೊಡನೆ ಇದ್ದು, ಸಾಧಿಸಿದ ಎಲ್ಲಾ ಕಾರ್ಯಗಳನ್ನು ವರದಿಮಾಡಿದರು. ಫರಿಸಾಯ ಪಂಥಕ್ಕೆ ಸೇರಿದ ಕೆಲವು ಭಕ್ತರು ಮಾತ್ರ ಎದ್ದುನಿಂತು, ಅನ್ಯಧರ್ಮೀಯರು ಸುನ್ನತಿಮಾಡಿಸಿಕೊಳ್ಳಲೇಬೇಕು, ಅವರು ಮೋಶೆಯ ನಿಯಮಗಳನ್ನು ಅನುಸರಿಸುವಂತೆ ಆಜ್ಞೆ ಮಾಡಲೇಬೇಕು,” ಎಂದರು. ಈ ಸಮಸ್ಯೆಯನ್ನು ಪರಿಶೀಲಿಸಲು ಪ್ರೇಷಿತರು ಮತ್ತು ಸಭಾಪ್ರಮುಖರು ಸಭೆ ಸೇರಿದರು. 

ಕೀರ್ತನೆ: 122:1-2, 3-4, 4-5
ಶ್ಲೋಕ: ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ, ಆಯಿತೆನಗೆ ಆನಂದ, ಜನರೆನ್ನ ಕರೆದಾಗ.

ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ I
ಆಯಿತೆನಗೆ ಆನಂದ, ಜನರೆನ್ನ ಕರೆದಾಗ II
ನನ್ನ ಕಾಲುಗಳು ಓ ಜೆರುಸಲೇಮೇ I
ತಲುಪಿವೆ ನಿನ್ನ ಪುರದ್ವಾರಗಳನೇ II

ನೋಡು, ಜೆರುಸಲೇಮ್ ಪಟ್ಟಣವಿದು I
ಗಟ್ಟಿಯಾಗಿಯೆ ಕಟ್ಟಲ್ಪಟ್ಟಿಹುದು II
ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ I
ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ I
ಪಾಲಿಪರಿಂತು ಇಸ್ರೇಲರಿಗೆ ವಿಧಿಸಿದಾಜ್ಞೆ II

ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು I
ದಾವೀದನ ಮನೆತನದವರ ಸಿಂಹಾಸನಗಳು II

ಶುಭಸಂದೇಶ: ಯೊವಾನ್ನ 15:1-8


“ನಾನೇ ನಿಜವಾದ ದ್ರಾಕ್ಷಾಬಳ್ಳಿ. ನನ್ನ ಪಿತನೇ ತೋಟಗಾರ. ನನ್ನಲ್ಲಿದ್ದೂ ಫಲಕೊಡದ ಕವಲುಬಳ್ಳಿಗಳನ್ನೆಲ್ಲಾ ಅವರು ಕತ್ತರಿಸಿಹಾಕುವರು. ಫಲಕೊಡುವ ಕವಲುಬಳ್ಳಿಗಳು ಮತ್ತಷ್ಟು ಫಲಕೊಡುವಂತೆ ಅವನ್ನು ಸವರಿ ಶುದ್ಧಗೊಳಿಸುವರು. ನೀವಾದರೋ, ನಾನು ನಿಮ್ಮೊಡನೆ ಆಡಿದ ಮಾತಿನಿಂದಾಗಿ ಸವರಿದ ಕವಲುಗಳಂತೆ ಶುದ್ಧರಾಗಿದ್ದೀರಿ. ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲಸದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾಗದು. ಹಾಗೆಯೇ ನೀವು ಕೂಡ ನನ್ನಲ್ಲಿ ಒಂದಾಗಿ ನೆಲಸದಿದ್ದರೆ ಫಲಕೊಡಲಾರಿರಿ. “ಹೌದು, ನಾನೇ ದ್ರಾಕ್ಷಾಬಳ್ಳಿ; ನೀವೇ ಅದರ ಕವಲುಬಳ್ಳಿಗಳು. ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅಂಥವನು ಸಮೃದ್ಧಿಯಾಗಿ ಫಲಕೊಡುವನು. ಏಕೆಂದರೆ, ನನ್ನಿಂದ ಬೇರ್ಪಟ್ಟು ನಿಮ್ಮಿಂದ ಏನೂ ಮಾಡಲಾಗದು. ನನ್ನಲ್ಲಿ ನೆಲಸದವನನ್ನು ಕವಲುಬಳ್ಳಿಯಂತೆ ಕತ್ತರಿಸಿ ಎಸೆಯಲಾಗುವುದು; ಅವನು ಒಣಗಿಹೋಗುವನು. ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆಂಕಿಯಲ್ಲಿ ಸುಟ್ಟುಹಾಕಲಾಗುವುದು. “ನೀವು ನನ್ನಲ್ಲಿಯೂ ನನ್ನ ವಾಕ್ಯವು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನು ಬೇಕಾದರೂ ಕೇಳಬಹುದು. ನಿಮಗದು ಸಿಗುವುದು. ನೀವು ಸಮೃದ್ಧಿಯಾಗಿ ಫಲಕೊಟ್ಟು ನನ್ನ ಶಿಷ್ಯರಾಗಿ ಬೆಳಗುವುದರಿಂದಲೇ ನನ್ನ ಪಿತನ ಮಹಿಮೆ ಪ್ರಕಟವಾಗುವುದು.

04.05.21 - "ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 14:19-28

ಆಗ ಅಂತಿಯೋಕ್ಯ ಮತ್ತು ಇಕೋನಿಯದಿಂದ ಕೆಲವು ಯೆಹೂದ್ಯರು ಅಲ್ಲಿಗೆ ಬಂದರು. ಅವರು ಜನಸಮೂಹವನ್ನು ತಮ್ಮಕಡೆ ಒಲಿಸಿಕೊಂಡು ಪೌಲನ ಮೇಲೆ ಕಲ್ಲುಬೀರಿ, ಅವನು ಸತ್ತನೆಂದು ಭಾವಿಸಿ, ಪಟ್ಟಣದಿಂದ ಹೊರಗೆ ಎಳೆದುಹಾಕಿದರು. ಆದರೆ, ಭಕ್ತವಿಶ್ವಾಸಿಗಳು ಬಂದು ಅವನ ಸುತ್ತಲೂ ನೆರೆದಿದ್ದಾಗ ಅವನು ಎದ್ದು ಪಟ್ಟಣವನ್ನು ಪ್ರವೇಶಿಸಿದನು. ಮರುದಿನ ಅವನು ಬಾರ್ನಬನ ಸಂಗಡ ದೆರ್ಬೆಗೆ ಹೊರಟುಹೋದನು. ದೆರ್ಬೆಯಲ್ಲಿ ಪೌಲ ಮತ್ತು ಬಾರ್ನಬ ಶುಭಸಂದೇಶವನ್ನು ಸಾರಿ ಅನೇಕರನ್ನು ಭಕ್ತವಿಶ್ವಾಸಿಗಳನ್ನಾಗಿ ಮಾಡಿಕೊಂಡರು. ಅನಂತರ ಅಲ್ಲಿಂದ ಲುಸ್ತ್ರಕ್ಕೂ ಇಕೋನಿಯಕ್ಕೂ ಅಂತಿಯೋಕ್ಯಕ್ಕೂ ಹಿಂದಿರುಗಿ ಬಂದರು. ಅಲ್ಲಿ ಭಕ್ತಾದಿಗಳನ್ನು ದೃಢಪಡಿಸಿ ವಿಶ್ವಾಸದಲ್ಲಿ ನಿಷ್ಠರಾಗಿರುವಂತೆ ಪ್ರೋತ್ಸಾಹಿಸಿದರು. ‘ಕಷ್ಟಸಂಕಟಗಳ ಮೂಲಕ ನಾವು ದೇವರ ಸಾಮ್ರಾಜ್ಯವನ್ನು ಪ್ರವೇಶಿಸಬೇಕಾಗಿದೆ’ ಎಂದು ಬೋಧಿಸಿದರು. ಇದಲ್ಲದೆ ಪ್ರತಿಯೊಂದು ಕ್ರೈಸ್ತಸಭೆಗೂ ಪ್ರಮುಖರನ್ನು ನೇಮಿಸಿದರು. ಪ್ರಾರ್ಥನೆ ಮತ್ತು ಉಪವಾಸಮಾಡಿ ತಾವು ಅಚಲವಾಗಿ ನಂಬಿದ್ದ ಪ್ರಭುವಿಗೆ ಅವರನ್ನು ಒಪ್ಪಿಸಿದರು. ಇದಾದ ಮೇಲೆ ಪಿಸಿದಿಯ ಪ್ರದೇಶವನ್ನು ದಾಟಿ ಪಾಂಫೀಲಿಯ ಎಂಬಲ್ಲಿಗೆ ಬಂದರು. ಪೆರ್ಗದಲ್ಲಿ ಶುಭಸಂದೇಶವನ್ನು ಸಾರಿ ಅತ್ತಾಲಿಯ ಎಂಬಲ್ಲಿಗೆ ಹೋದರು. ಅಲ್ಲಿಂದ ನೌಕಾಯಾನಮಾಡಿ ಅವರು ಅಂತಿಯೋಕ್ಯಕ್ಕೆ ಮರಳಿದರು. ಈವರೆಗೆ ಮಾಡಿ ಮುಗಿಸಿದ್ದ ಸೇವಾಕಾರ್ಯಕ್ಕಾಗಿ ಅವರು ದೇವರ ಕೃಪಾಶ್ರಯಕ್ಕೆ ಮೊದಲು ಸಮರ್ಪಿತರಾದದ್ದು ಇಲ್ಲಿಯೇ. ಇಲ್ಲಿಗೆ ತಲುಪಿದ ಕೂಡಲೇ ಅವರು ಕ್ರೈಸ್ತಸಭೆಯನ್ನು ಒಟ್ಟುಗೂಡಿಸಿದರು. ದೇವರು ತಮ್ಮೊಡನೆ ಇದ್ದು ಸಾಧಿಸಿದ್ದೆಲ್ಲವನ್ನೂ ವರದಿಮಾಡಿದರು; ಅದೂ ಅಲ್ಲದೆ, ದೇವರು ಅನ್ಯಧರ್ಮೀಯರಿಗೆ ವಿಶ್ವಾಸದ ದ್ವಾರವನ್ನು ಹೇಗೆ ತೆರೆದರೆಂದು ವಿವರಿಸಿದರು. ತರುವಾಯ ಭಕ್ತವಿಶ್ವಾಸಿಗಳ ಸಂಗಡ ಹೆಚ್ಚುಕಾಲ ತಂಗಿದ್ದರು.

ಕೀರ್ತನೆ: 145:10-11, 12-13, 21
ಶ್ಲೋಕ: ಅರಿವರಿಂತು ಜನರು ತನ್ನ ಶೂರಕಾರ್ಯಗಳನು, ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು.

ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು I
ಕೊಂಡಾಡುವುದು ನಿನ್ನನು ಭಕ್ತ ಸಮೂಹವು II
ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು I
ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು II

ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು I
ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು II
ಶಾಶ್ವತವಾದುದು ನಿನ್ನ ರಾಜ್ಯವು I
ಇರುವುದೆಂದಿಗು ನಿನ್ನ ಆಳ್ವಿಕೆಯು II

ಸಲಹುವನು ತನ್ನನು ಪ್ರೀತಿಸುವವರೆಲ್ಲರನು I
ನಾಶಮಾಡುವನು ದುರ್ಮಾರ್ಗಿಗಳೆಲ್ಲರನು II

ಶುಭಸಂದೇಶ: ಯೊವಾನ್ನ 14:27-31


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ: "ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ; ನನ್ನ ಶಾಂತಿಸಮಾಧಾನವನ್ನು ನಿಮಗೆ ಕೊಡುತ್ತೇನೆ. ಈ ಲೋಕವು ಕೊಡುವ ರೀತಿಯಲ್ಲಿ ನಾನದನ್ನು ನಿಮಗೆ ಕೊಡುವುದಿಲ್ಲ. ನೀವು ಹೃದಯದಲ್ಲಿ ಕಳವಳಗೊಳ್ಳದಿರಿ, ಭಯಪಡಬೇಡಿ. ನಾನು ಹೊರಟುಹೋಗುತ್ತೇನೆಂದೂ ಮತ್ತೆ ನಿಮ್ಮ ಬಳಿಗೆ ಬರುತ್ತೇನೆಂದೂ ನಾನು ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ಪಿತನ ಬಳಿಗೆ ಹೋಗುತ್ತಿರುವುದನ್ನು ಕುರಿತು ಹಿಗ್ಗುತ್ತಿದ್ದಿರಿ. ಏಕೆಂದರೆ ಪಿತ ನನಗಿಂತಲೂ ಶ್ರೇಷ್ಠರು. ಇದೆಲ್ಲಾ ಈಡೇರುವಾಗ ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ತಿಳಿಯಪಡಿಸಿದ್ದೇನೆ. ಇಹದ ಲೋಕಾಧಿಪತಿ ಬರುವ ಸಮಯವಾಯಿತು. ಇನ್ನು ಬಹಳ ಹೊತ್ತು ನಾನು ನಿಮ್ಮೊಡನೆ ಮಾತನಾಡಲು ಕಾಲಾವಕಾಶವಿಲ್ಲ. ನನ್ನ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ. ಆದರೆ ನಾನು ಪಿತನನ್ನು ಪ್ರೀತಿಸುತ್ತೇನೆಂಬುದನ್ನೂ ಅವರು ವಿಧಿಸಿದಂತೆಯೇ ಮಾಡುತ್ತೇನೆ ಎಂಬುದನ್ನೂ ಲೋಕವು ತಿಳಿಯಬೇಕು.” ಎಂದರು.

03.05.21 - "ನಾನು ಪಿತನಲ್ಲಿ ಇದ್ದೇನೆ ಪಿತನು ನನ್ನಲ್ಲಿ ಇದ್ದಾರೆ,"

ಮೊದಲನೇ ವಾಚನ: 1  ಕೊರಿಂಥಿಯರಿಗೆ 15:1-8

ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ  ಶುಭಸಂದೇಶವನ್ನು ನೆನಪಿಗೆ ತಂದುಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ದೀರಿ. ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಢವಾಗಿ ವಿಶ್ವಾಸಿಸಿದರೆ ನೀವು ಜೀವೋದ್ಧಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ ವಿಶ್ವಾಸ ನಿರರ್ಥಕವಾದೀತು. ನಾನು ಪಡೆದುಕೊಂಡಿದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರ ಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ ಗ್ರಂಥದ ಪ್ರಕಾರ ಮೂರನೆಯ ದಿನ ಅವರು ಪುನರುತ್ದಾನ ಹೊಂದಿದರು. ಆನಂತರ ಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು. ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೊದರರಿಗೆ ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತುಹೊಗಿದ್ದರೂ ಬಹು ಮಂದಿ ಇಂದಿಗೂ ಬದುಕಿದ್ದಾರೆ. ಅದಾದ ಮೇಲೆ ಯಕೋಬನಿಗೂ ಆನಂತರ ಪ್ರೇಷಿತರೆಲ್ಲರಿಗೂ ಕಾಣಿಸಿಕೊಂಡರು. ಕಟ್ಟಕಡೆಗೆ ದಿನ ತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು.


ಕೀರ್ತನೆ: 19:2-3, 4-5

ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ

ಶುಭಸಂದೇಶ: ಯೊವಾನ್ನ 14:6-14

ಅದಕ್ಕೆ ಯೇಸು, "ಮಾರ್ಗವೂ ಸತ್ಯವೂ ಜೀವವೂ ನಾನೇ.ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು. ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದೀರಿ ಹಾಗೂ ಕಂಡೂ ಇದ್ದೀರಿ," ಎಂದು ನುಡಿದರು. ಆಗ ಫಿಲಿಪ್ಪನು, "ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೆ ಸಾಕು," ಎಂದನು. ಅದಕ್ಕೆ ಉತ್ತರವಾಗಿ ಯೇಸು, "ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು ನೀನು ಅರಿತುಕೊಳ್ಳಲಿಲ್ಲವೆ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, "ನಮಗೆ ಪಿತನನ್ನು ತೋರಿಸಿ" ಎಂದು ಹೇಗೆ ಕೇಳುತ್ತೀ?  ನಾನು ಪಿತನಲ್ಲಿ ಇದ್ದೇನೆ ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ. "ನಾನು ಪಿತನಲ್ಲಿ ಇದ್ದೇನೆ ಪಿತನು ನನ್ನಲ್ಲಿ ಇದ್ದಾರೆ," ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ. ಇಲ್ಲವೇ, ನಾನು ಸಾಧಿಸಿದ ಸುಕೃತ್ಯಗಳ ನಿಮಿತ್ತದಿಂದಾದರೂ ವಿಶ್ವಾಸಿಸಿರಿ; ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿ ವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು. ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ. ಹೀಗೆ ಪಿತನಿಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು. ಹೌದು, ನನ್ನ ಹೆಸರಿನಲ್ಲಿ ನೀವು ಏನನ್ನು ಕೇಳಿದರೂ ನಾನು ಅದನ್ನು ಮಾಡಿಯೇ ತೀರುವೆನು."

ಮನಸಿಗೊಂದಿಷ್ಟು : ಯೇಸುವಿನ ನಂತರ ಶಿಷ್ಯರು ಶುಭ ಸಂದೇಶದ ಪ್ರಚಾರದಲ್ಲಿ ಮಾಡಿದ ಸಾಧನೆ ಅಪಾರ. ’ ನನ್ನಲ್ಲಿ ವಿಶ್ವಾಸವುಳ್ಳವನು ಮಹತ್ತಾದುವುಗಳನ್ನು ಸಾಧಿಸುವನು’ ಎಂಬ ಯೇಸುವಿನ ಮಾತು ಶಿಷ್ಯರ ಹಾಗೂ ಅನೇಕ ಸಂತರ ಬಾಳಿನಲ್ಲಿ ನಿಜವಾದುದ್ದನ್ನು ನಾವು ಕಾಣುತ್ತೇವೆ. ಆ ಮಾತು ನಮ್ಮ ಮೂಲಕವೂ ಸಾಕರಾಗೊಳ್ಳಲೆಂಬ ಆಸೆ ನಮ್ಮದಾಗಲಿ.

02.05.21 - “ಹೌದು, ನಾನೇ ದ್ರಾಕ್ಷಾಬಳ್ಳಿ; ನೀವೇ ಅದರ ಕವಲುಬಳ್ಳಿಗಳು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 9: 26-31


ಸೌಲನು ಜೆರುಸಲೇಮಿಗೆ ಬಂದು ಭಕ್ತವಿಶ್ವಾಸಿಗಳನ್ನು ಸೇರಲು ಪ್ರಯತ್ನಿಸಿದನು. ಆದರೆ, ಅವರು ಅವನು ಸಹ ಒಬ್ಬ ಭಕ್ತನೆಂದು ನಂಬದೆ ಅವನಿಗೆ ಭಯಪಟ್ಟರು. ಆಗ ಬಾರ್ನಬನು ಅವನನ್ನು ಪ್ರೇಷಿತರ ಬಳಿಗೆ ಕರೆದುಕೊಂಡು ಹೋದನು. ಸೌಲನು ಪ್ರಭುವನ್ನು ಮಾರ್ಗದಲ್ಲಿ ದರ್ಶಿಸಿದ್ದನ್ನು ಅವರು ಅವನೊಂದಿಗೆ ಮಾತನಾಡಿದ್ದನ್ನೂ ತಿಳಿಸಿದನು. ಅಲ್ಲದೆ ದಮಸ್ಕಸಿನಲ್ಲಿ ಧೈರ್ಯದಿಂದ ಯೇಸುವಿನ ಹೆಸರಿನಲ್ಲಿ ಬೋಧಿಸಿದ್ದನ್ನೂ ಅವರಿಗೆ ವಿವರಿಸಿದನು. ಅಂದಿನಿಂದ ಸೌಲನು ಜೆರುಸಲೇಮಿನಲ್ಲಿ ಅವರೊಡನೆ ಕಲೆತು ಪ್ರಭುವಿನ ಹೆಸರಿನಲ್ಲಿ ನಿರ್ಭಯವಾಗಿ ಬೋಧಿಸುತ್ತಿದ್ದನು. ಗ್ರೀಕ್ ಮಾತನಾಡುತ್ತಿದ್ದ ಯೆಹೂದ್ಯರೊಡನೆ ಸಂಭಾಷಿಸುತ್ತಾ ಅವರ ವಿರುದ್ಧ ವಾದಿಸುತ್ತಿದ್ದನು. ಅವರಾದರೋ ಅವನನ್ನು ಕೊಲ್ಲಲು ಹವಣಿಸಿದರು. ಇದನ್ನು ಅರಿತುಕೊಂಡ ಭಕ್ತಾದಿಗಳು ಅವನನ್ನು ಸೆಜರೇಯಕ್ಕೆ ಕರೆತಂದು ಅಲ್ಲಿಂದ ತಾರ್ಸಕ್ಕೆ ಕಳುಹಿಸಿಬಿಟ್ಟರು. ಇಂತಿರಲು ಜುದೇಯ, ಗಲಿಲೇಯ ಮತ್ತು ಸಮಾರಿಯದ ಧರ್ಮಸಭೆಯಲ್ಲಿ ಶಾಂತಿ ನೆಲಸಿತು. ಸಭೆ ಬೆಳೆಯುತ್ತಾ ಪ್ರಭುವಿನ ಭಯಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿಂದ ಪ್ರವರ್ಧಿಸುತ್ತಾ ಇತ್ತು.

ಕೀರ್ತನೆ: 22: 25-27, 29-31
ಶ್ಲೋಕ: ಪ್ರಭು, ನೀನೆ ಸ್ಫೂರ್ತಿ, ತುಂಬು ಸಭೆಯಲಿ ನಾ ಮಾಳ್ಪ ಸ್ತುತಿಗೆ. 

ಎರಡನೇ ವಾಚನ: 1 ಯೊವಾನ್ನ 3: 18-24

ಪ್ರಿಯ ಮಕ್ಕಳೇ, ನಾವು ಬರಿಯ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರಬಾರದು. ನಮ್ಮ ಪ್ರೀತಿ ಸತ್ಯದಲ್ಲೂ ಕೃತ್ಯದಲ್ಲೂ ವ್ಯಕ್ತವಾಗಬೇಕು. ಹೀಗೆ ನಾವು ಸತ್ಯಕ್ಕೆ ಸೇರಿದವರು ಎಂಬುದು ಮನದಟ್ಟಾಗುವುದಲ್ಲದೆ ದೇವರ ಮುಂದೆ ನಮ್ಮ ಮನಸ್ಸು ನೆಮ್ಮದಿಯಿಂದಿರುತ್ತದೆ. ಯಾವ ವಿಷಯದಲ್ಲಾದರೂ ನಮ್ಮ ಮನಸ್ಸಾಕ್ಷಿ ನಮ್ಮನ್ನು ಖಂಡಿಸಿದ್ದೇ ಆದರೆ ಎಲ್ಲವನ್ನೂ ಬಲ್ಲ ದೇವರು ನಮ್ಮ ಮನಸ್ಸಾಕ್ಷಿಗಿಂತಲೂ ದೊಡ್ಡವರೆಂಬುದು ನಮಗೆ ತಿಳಿದೇ ಇರುತ್ತದೆ. ಪ್ರಿಯರೇ, ನಮ್ಮ ಮನಸ್ಸಾಕ್ಷಿ ನಮ್ಮನ್ನು ಖಂಡಿಸದಿದ್ದರೆ, ನಾವು ದೇವರ ಮುಂದೆ ಧೈರ್ಯದಿಂದಿರಲು ಸಾಧ್ಯವಾಗುತ್ತದೆ. ನಾವು ದೇವರ ಆಜ್ಞೆಗಳಿಗೆ ವಿಧೇಯರಾಗಿ ಅವರಿಗೆ ಮೆಚ್ಚುಗೆಯಾದವುಗಳನ್ನೇ ಮಾಡುವುದರಿಂದ ನಾವು ಕೋರುವುದೆಲ್ಲವನ್ನೂ ಅವರಿಂದ ಪಡೆಯುತ್ತೇವೆ. ನಾವು ದೇವರ ಪುತ್ರ ಯೇಸುಕ್ರಿಸ್ತರ ನಾಮದಲ್ಲಿ ವಿಶ್ವಾಸವಿಟ್ಟು ಅವರು ವಿಧಿಸಿದಂತೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದೇ ಅವರ ಆಜ್ಞೆ. ದೇವರ ಆಜ್ಞೆಯನ್ನು ಪಾಲಿಸುವವನು ಅವರಲ್ಲಿ ನೆಲೆಸಿರುತ್ತಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ. ದೇವರು ನಮ್ಮಲ್ಲಿ ನೆಲೆಸಿದ್ದಾರೆಂದು ಅವರು ದಯಪಾಲಿಸುವ ಪವಿತ್ರಾತ್ಮರಿಂದಲೇ ತಿಳಿದುಕೊಳ್ಳುತ್ತೇವೆ.

ಶುಭಸಂದೇಶ: ಯೊವಾನ್ನ 15:1-8

ಯೇಸು ಸ್ವಾಮಿ ತಮ್ಮ ಶಿಷ್ಯರಿಗೆ, “ನಾನೇ ನಿಜವಾದ ದ್ರಾಕ್ಷಾಬಳ್ಳಿ. ನನ್ನ ಪಿತನೇ ತೋಟಗಾರ. ನನ್ನಲ್ಲಿದ್ದೂ ಫಲಕೊಡದ ಕವಲುಬಳ್ಳಿಗಳನ್ನೆಲ್ಲಾ ಅವರು ಕತ್ತರಿಸಿಹಾಕುವರು. ಫಲಕೊಡುವ ಕವಲುಬಳ್ಳಿಗಳು ಮತ್ತಷ್ಟು ಫಲಕೊಡುವಂತೆ ಅವನ್ನು ಸವರಿ ಶುದ್ಧಗೊಳಿಸುವರು. ನೀವಾದರೋ, ನಾನು ನಿಮ್ಮೊಡನೆ ಆಡಿದ ಮಾತಿನಿಂದಾಗಿ ಸವರಿದ ಕವಲುಗಳಂತೆ ಶುದ್ಧರಾಗಿದ್ದೀರಿ. ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲಸದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾಗದು. ಹಾಗೆಯೇ ನೀವೂ ಕೂಡ ನನ್ನಲ್ಲಿ ಒಂದಾಗಿ ನೆಲಸದಿದ್ದರೆ ಫಲಕೊಡಲಾರಿರಿ. “ಹೌದು, ನಾನೇ ದ್ರಾಕ್ಷಾಬಳ್ಳಿ; ನೀವೇ ಅದರ ಕವಲುಬಳ್ಳಿಗಳು. ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅಂಥವನು ಸಮೃದ್ಧಿಯಾಗಿ ಫಲಕೊಡುವನು. ಏಕೆಂದರೆ, ನನ್ನಿಂದ ಬೇರ್ಪಟ್ಟು ನಿಮ್ಮಿಂದ ಏನೂ ಮಾಡಲಾಗದು. ನನ್ನಲ್ಲಿ ನೆಲಸದವನನ್ನು ಕವಲುಬಳ್ಳಿಯಂತೆ ಕತ್ತರಿಸಿ ಎಸೆಯಲಾಗುವುದು; ಅವನು ಒಣಗಿಹೋಗುವನು. ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆಂಕಿಯಲ್ಲಿ ಸುಟ್ಟು ಹಾಕಲಾಗುವುದು. “ನೀವು ನನ್ನಲ್ಲಿಯೂ ನನ್ನ ವಾಕ್ಯವು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನು ಬೇಕಾದರೂ ಕೇಳಬಹುದು. ನಿಮಗದು ಸಿಗುವುದು. ನೀವು ಸಮೃದ್ಧಿಯಾಗಿ ಫಲಕೊಟ್ಟು ನನ್ನ ಶಿಷ್ಯರಾಗಿ ಬೆಳಗುವುದರಿಂದಲೇ ನನ್ನ ಪಿತನ ಮಹಿಮೆ ಪ್ರಕಟವಾಗುವುದು.

16.10.2026 - IIಶುಕ್ರವಾರ IIನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ

  ಮೊದಲನೆಯ ವಾಚನ: ರೋಮನರಿಗೆ 4:1-8 ಸಹೋದರರೇ, ವಂಶಾನುಕ್ರಮವಾಗಿ ನಮ್ಮ ಮೂಲಪಿತನಾದ ಅಬ್ರಹಾಮನ ಅನುಭವವನ್ನು ಕುರಿತು ಏನು ಹೇಳೋಣ? ಆತನು ತನ್ನ ಸತ್ಕಾರ್ಯಗಳಿಂದ ದೇವರೊಡನೆ...