08.10.2019

ಮೊದಲನೇ ವಾಚನ: ಯೋನನ 3:1-10 


ಯೋನನಿಗೆ ಸ್ವಾಮಿಯ ವಾಣಿ ಪುನಃ ಕೇಳಿಸಿತು: "ಎದ್ದು ಮಹಾನಗರವಾದ ನಿನೆವೆಗೆ ಹೋಗು, ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು," ಎಂದಿತು. ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, "ಜನರೇ ಕೇಳಿ; ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು," ಎಂದನು. ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ - ಎಲ್ಲರೂ ಮನಪರಿವರ್ತನೆ ಚಿಹ್ನೆಯಾಗಿ ಗೋಣಿತಟ್ಟನ್ನು  ಉಟ್ಟುಕೊಂಡರು ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು. ಕೂಡಲೇ ತನ್ನ ಪ್ರಜೆಗಳಿಗೆಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: "ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು. ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು: ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು. ಹೀಗೆ ಮಾಡಿದ್ದೇ. ಆದರೆ, ದೇವರು ಒಂದುವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು." ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆಹಿಡಿದರು. 

ಕೀರ್ತನೆ: 130:1-2, 3-4, 7-8 

ಶ್ಲೋಕ: ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭೂ ನಿನ್ನ ಮುಂದೆ ಯಾರು ತಾನೆ ನಿಲ್ಲಬಲ್ಲರು ವಿಭೂ? 

ಶುಭಸಂದೇಶ: ಲೂಕ 10:38-42 


ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಅಮಂತ್ರಿಸಿದಳು. ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪಾದದ ಬಳಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, "ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ," ಎಂದಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ, "ಮಾರ್ತಾ, ಮಾರ್ತಾ, ನೀನು ಅನಾವಶ್ಯ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು," ಎಂದರು.

07.10.2019 - "ದಯೆ ತೋರಿದವನೇ ನೆರೆಯವನು,"

ಮೊದಲನೇ ವಾಚನ: ಯೋನನ 1:1-2:1-2, 10 


ಒಂದು ದಿನ ಅಮಿತ್ತಾಯನ ಮಗನಾದ ಯೋನನಿಗೆ ಸರ್ವೇಶ್ವರಸ್ವಾಮಿಯ ವಾಣಿ ಕೇಳಿಸಿತು. "ನಿನೆವೆ ಮಹಾನಗರದ ನಿವಾಸಿಗಳು ಎಷ್ಟು ದುಷ್ಟರೆಂಬುದು ನನಗೆ ತಿಳಿದುಬಂದಿದೆ. ನೀನು ಅಲ್ಲಿಗೆ ಹೋಗು. ಅವರನ್ನು ಕಟುವಾಗಿ ಖಂಡಿಸು," ಆದರೆ ಯೋನನು ಆ ಸ್ವಾಮಿಯ ಸನ್ನಿಧಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಿನೆವೆಗೆ ಹೋಗುವುದರ ಬದಲು ತಾರ್ಷಿಷಿಗೆ ಅಭಿಮುಖವಾಗಿ ಓಡಿಹೋಗಲು ಹೊರಟನು.  ಜೊಪ್ಪ ಎಂಬ ಊರನ್ನು ತಲುಪಿದಾಗ ತಾರ್ಷಿಷಿಗೆ ಹೊರಡಲಿದ್ದ ಹಡಗೊಂದನ್ನು ಕಂಡನು. ಪ್ರಯಾಣದ ದರವನ್ನು ತೆತ್ತು ಸಹ ನಾವಿಕರೊಂದಿಗೆ ಹಡಗನ್ನು ಹತ್ತಿದನು. ಹೀಗೆ ಯೋನನು ಸರ್ವೇಶ್ವರಸ್ವಾಮಿಯ ಸನ್ನಿಧಿಯಿಂದ ದೂರ ಹೋಗಬಹುದೆಂದು ಭಾವಿಸಿದನು. ಆದರೆ ಸರ್ವೇಶ್ವರ ಸಮುದ್ರದಲ್ಲಿ ಬಿರುಗಾಳಿಯೊಂದನ್ನು ಬರ ಮಾಡಿದರು. ಅಲೆಗಳ ಹೊಡೆತಕ್ಕೆ ಹಡಗು ನುಚ್ಚು ನೂರಾಗಿ ಒಡೆದು ಹೋಗುವುದರಲ್ಲಿತ್ತು. ದಿಗ್ಬ್ರಾಂತರಾದ ನಾವಿಕರು ಪ್ರಾಣ ರಕ್ಷಣೆಗಾಗಿ ತಮ್ಮ ದೇವ ದೇವತೆಗಳ ಮೊರೆ ಹೊಕ್ಕರು. ಪ್ರಾಣಾಪಾಯದಿಂದ ಪಾರಾಗಲು ತಮ್ಮಲ್ಲಿದ್ದ ಸರಕು ಸಾಮಗ್ರಿಗಳನ್ನು ಸಮುದ್ರಕ್ಕೆ ಎಸೆದರು. ಇಷ್ಟರೊಳಗೆ ಯೋನನು ಹಡಗಿನ ತಳಭಾಗಕ್ಕೆ ಇಳಿದು ಹೋಗಿ ಹಾಯಾಗಿ ಮಲಗಿದ್ದನು. ಅವನಿಗೆ ಗಾಢ ನಿದ್ರೆ ಹತ್ತಿತ್ತು. ಇದನ್ನು ಕಂಡ ನೌಕಾಧಿಕಾರಿ ಅಲ್ಲಿಗೆ ಬಂದು, ಅವನನ್ನು ಎಬ್ಬಿಸುತ್ತಾ: "ಏನಯ್ಯಾ, ಹಾಯಾಗಿ ಇಲ್ಲಿ ನಿದ್ರೆ ಮಾಡುತ್ತಿದ್ದೀಯಲ್ಲ, ಎದ್ದೇಳು. ನಿನ್ನ ದೇವರಿಗೆ ಮೊರೆಯಿಡು. ಅವರಾದರೂ ನಮ್ಮ ಮೇಲೆ ಕರುಣೆತೋರಿ, ನಾವು ನಾಶವಾಗದಂತೆ ಕಾಪಾಡಿಯಾರು," ಎಂದನು.ಆಮೇಲೆ ನಾವಿಕರು: "ನಮಗೆ ಸಂಭವಿಸಿರುವ ಈ ದುರಂತಕ್ಕೆ ಕಾರಣ ಯಾರಿರಬಹುದು? ಬನ್ನಿ, ಚೀಟುಹಾಕಿ ನೋಡೋಣ" ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಹಾಗೆ ಮಾಡಿದಾಗ ಚೀಟು ಯೋನನ ಹೆಸರಿಗೆ ಬಂತು. ಆಗ ನಾವಿಕರು: "ನೀನು ಯಾರು? ಎಲ್ಲಿಂದ ಬಂದೆ? ಯಾವ ಕೆಲಸದ ಮೇಲೆ ಬಂದೆ? ನೀನು ಯಾವ ಜನಾಂಗದವನು? ಈ ದುರಂತಕ್ಕೆ ಕಾರಣ ಯಾರು?" ಎಂದು ಪ್ರಶ್ನಿಸಿದರು. ಅದಕ್ಕೆ ಯೋನನು: ಸರ್ವೇಶ್ವರನ ಭಕ್ತನು ನಾನು," ಎಂದು ಉತ್ತರಿಸಿದನು. ಅಲ್ಲದೆ ತಾನು ಆ ಸ್ವಾಮಿಯ ಸನ್ನಿಧಿಯಿಂದ ಓಡಿ ಹೋಗುತ್ತಿರುವುದಾಗಿಯೂ ತಿಳಿಸಿದನು. ಇದನ್ನು ಕೇಳಿದ್ದೇ ನಾವಿಕರು ಭಯಭ್ರಾಂತರಾದರು. "ಎಂಥಾ ತಪ್ಪು ಮಾಡಿದೆ!" ಎಂದು ಅವನನು ಖಂಡಿಸಿದರು. ಆಗ ಬಿರುಗಾಳಿ ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ನಾವಿಕರು ಯೋನನಿಗೆ: "ಸಮುದ್ರ ಶಾಂತವಾಗಬೇಕಾದರೆ ನಿನ್ನನ್ನು ಏನು ಮಾಡಬೇಕು? ಹೇಳು," ಎಂದು ಕೇಳಿದರು. ಯೋನನು: "ನನ್ನನ್ನು ಎತ್ತಿ ಸಮುದ್ರಕ್ಕೆ ಎಸೆಯಿರಿ. ಆಗ ಅದು ಶಾಂತವಾಗುವುದು. ನೀವು ಇಂಥ ಭೀಕರ ಬಿರುಗಾಳಿಗೆ ತುತ್ತಾಗಲು ನಾನೇ ಕಾರಣ. ಇದನ್ನು ನಾನು ಚೆನ್ನಾಗಿ ಬಲ್ಲೆ." ಎಂದನು. ನಾವಿಕರು ಅವನ ಸಲಹೆಗೆ ಒಪ್ಪದೆ, ಹಡಗನ್ನು ದಡಕ್ಕೆ ಸಾಗಿಸಲು ತಮ್ಮ ಶಕ್ತಿ ಸಾಮರ್ಥ್ಯವನ್ನೆಲ್ಲ ಪ್ರಯೋಗಿಸಿ ಹುಟ್ಟು ಹಾಕಿದರು. ಆದರೆ ಸಾಧ್ಯವಾಗಲಿಲ್ಲ. ಸಮುದ್ರವು ಅಲ್ಲೋಲಕಲ್ಲೋಲವಾಗುತ್ತಲೇ ಇತ್ತು. ಆಗ ಅವರು ಬೇರೆ ದಿಕ್ಕು ತೋಚದೆ ಸರ್ವೇಶ್ವರಸ್ವಾಮಿಗೆ ಮೊರೆಯಿಡುತ್ತಾ: "ಸ್ವಾಮೀ, ಈ ನಿರಪರಾಧಿಯ ಪ್ರಾಣಹಾನಿಗೆ ನಾವು ಹೊಣೆಯಲ್ಲ. ಇದಕ್ಕಾಗಿ ನಮ್ಮನ್ನು ನಾಶಮಾಡಬೇಡಿ. ಇದೆಲ್ಲವೂ ಸಂಭವಿಸಿರುವುದು ನಿಮ್ಮ ಚಿತ್ತವಲ್ಲವೇ?" ಎಂದು ದೈನ್ಯದಿಂದ ಪ್ರಾರ್ಥಿಸಿದರು. ಬಳಿಕ ಅವರು ಯೋನನನ್ನು ಎತ್ತಿ ಸಮುದ್ರಕ್ಕೆ ಎಸೆದರು. ತಕ್ಷಣವೇ, ಭೋರ್ಗರೆಯುತ್ತಿದ್ದ ಸಮುದ್ರ ಶಾಂತವಾಯಿತು. ಇದನ್ನು ಕಂಡ ಜನರು ಸರ್ವೇಶ್ವರಸ್ವಾಮಿಗೆ ಬಹುವಾಗಿ ಭಯಪಟ್ಟರು: ಯಜ್ಞವನ್ನು ಅರ್ಪಿಸಿ, ಹರಕೆಗಳನ್ನು ಸಲ್ಲಿಸಿದರು. ಇತ್ತ ಸರ್ವೇಶ್ವರಸ್ವಾಮಿಯ ಆಜ್ಞಾನುಸಾರ ದೊಡ್ಡ ಮೀನೊಂದು ಬಂದು ಯೋನನನ್ನು ನುಂಗಿತು. ಅವನು ಅದರ ಹೊಟ್ಟೆಯಲ್ಲಿ ಮೂರು ಹಗಲು, ಮೂರು ಇರುಳು ಇದ್ದನು. ಆ ಮೀನಿನ ಹೊಟ್ಟೆಯೊಳಗಿಂದಲೇ ಯೋನನು ಸರ್ವೇಶ್ವರಸ್ವಾಮಿ ದೇವರಿಗೆ ಈ ರೀತಿ ಪ್ರಾರ್ಥನೆ ಮಾಡಿದನು: "ಸಂಕಟದಲಿ, ಸರ್ವೇಶ್ವರಾ, ನಾ ನಿನಗೆ ಮೊರೆಯಿಟ್ಟೆ ನೀನೆನ್ನ ಮೊರೆಗೆ ಕಿವಿಕೊಟ್ಟೆ. ಪಾತಾಳದಂತರಾಳದಿಂದ ನಿನ್ನ ನೆರವನ್ನು ಬೇಡಿದೆ ನೀನೆನ್ನ ಪ್ರಾರ್ಥನೆಯನ್ನಾಲಿಸಿದೆ. ಸರ್ವೇಶ್ವರಸ್ವಾಮಿಯ ಆಜ್ಞೆಯ ಪ್ರಕಾರ ಆ ಮೀನು ಯೋನನನ್ನು ದಡದ ಮೇಲೆ ಕಕ್ಕಿತು. 

ಯೋನ: 2:3, 4, 5, 8 

ಶ್ಲೋಕ: ಸರ್ವೇಶ್ವರಾ, ಮೇಲಕ್ಕೆತ್ತಿದೆ ಎನ್ನ ಜೀವಸಹಿತ 

ಶುಭಸಂದೇಶ: ಲೂಕ 10:25-37 


ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುಸ್ವಾಮಿಯನ್ನು ಪರೀಕ್ಷಿಸುವ ಉದ್ದೇಶದಿಂದ "ಬೋಧಕರೇ, ಅಮರಜೀವ ನನಗೆ ಪ್ರಾಪ್ತಿಯಾಗಬೇಕಾದರೆ ನಾನು ಮಾಡಬೇಕಾದುದು ಏನು?" ಎಃದು ಕೇಳಿದನು. ಅದಕ್ಕೆ ಯೇಸು, "ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ?" ಎಂದು ಮರುಪ್ರಶ್ನೆ ಹಾಕಿದರು. ಅವನು, "ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು" ಎಂದಿದೆ," ಎಂದು ಉತ್ತರಕೊಟ್ಟನು. ಯೇಸು, "ಸರಿಯಾಗಿ ಉತ್ತರಕೊಟ್ಟೆ. ಅದರಂತೆ ಮಾಡು. ನಿನಗೆ ಅಮರಜೀವ ಲಭಿಸುವುದು," ಎಂದರು. ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು, "ನನ ನೆರೆಯವನು ಯಾರು?" ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು. ಯೇಸು ಅವನಿಗೆ ಹೀಗೆಂದು ವಿವರಿಸಿದರು: "ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ. ದರೋಡೆಗಾರರು ಅವನನ್ನು ಸುಲಿಗೆ ಮಾಡಿ, ಹೊಡೆದು ಬಡಿದು, ಅರೆಜೀವ ಮಾಡಿ, ಅಲ್ಲೇ  ಬಿಟ್ಟುಹೋದರು. ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದು ಹೋಗಬೇಕಾಗಿ ಬಂದಿತು. ಈತನು ಅವನನ್ನು ಕಂಡದ್ದೇ  ಆಚೆ ಬಳಸಿಕೊಂಡು ಹೋದ. ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ. ಆದರೆ ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟ. ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ದಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ  ವಾಹಕಪಶುವಿನ ಮೇಲೆ ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ, ಆರೈಕೆ ಮಾಡಿದ. ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, "ಇವನನ್ನು ಚೆನ್ನಾಗಿ ನೋಡಿಕೊ, ಇದಕ್ಕಿಂತ ಹೆಚ್ಚು ವೆಚ್ಚವಾದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ," ಎಂದ. "ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವರೆಂದು ನಿನಗೆ ತೋರುತ್ತದೆ?" ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು. ಅದಕ್ಕೆ ಯೇಸು, "ದಯೆ ತೋರಿದವನೇ ನೆರೆಯವನು," ಎಂದನು. ಆಗ ಯೇಸು, "ಹೋಗು, ನೀನೂ ಹಾಗೆಯೇ ಮಾಡು," ಎಂದು ಹೇಳಿದರು.

06.10.2019 - "ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ"

ಮೊದಲನೇ ವಾಚನ: ಹಬಕ್ಕೂಕ 1:2-3; 2:2-4 

ನಾನೆಷ್ಟು ಕಾಲ ಸರ್ವೇಶ್ವರಾ, ಮೊರೆಯಿಡುತ್ತಿರಬೇಕು ನಿನಗೆ? ನೀನೆಷ್ಟು ಕಾಲ ಸುಮ್ಮನಿರುವೆ ಕಿವಿಗೊಡದೆ ನನಗೆ? ಹಿಂಸೆಯಾಗುತ್ತಿದೆಯೆಂದು ನಾ ಕೂಗಿದೆ ಆದರೂ ನೀ ಸುಮ್ಮನಿರುವೆ, ರಕ್ಷಣೆ ನೀಡದೆ. ಕೇಡನ್ನು ನಾ ನೋಡುವಂತೆ ಮಾಡಿದೆ ಯೇಕೆ? ಕಷ್ಟವನ್ನು ನಾ ಕಾಣುವಂತೆ ಮಾಡಿದೆ ಯೇಕೆ? ಹಿಂಸೆಬಾಧೆಗಳು ಇವೆ ನನ್ನ ಕಣ್ಣು ಮುಂದೆ. ಇಗೋ, ಜಗಳ ನಡೆಯುತಿದೆ, ವ್ಯಾಜ್ಯವೇಳುತ್ತಿದೆ. ಆಗ ಸರ್ವೇಶ್ವರ ನನಗೆ ಕೊಟ್ಟ ಉತ್ತರ ಇದು: "ನೀನು ಕಂಡ ದರ್ಶನವನ್ನು ಬರೆ. ಓದುವವನು ಶೀಘ್ರವಾಗಿ ಓದುವಂತೆ ಹಲಗೆಗಳ ಮೇಲೆ ಅದನ್ನು ಕೆತ್ತು. ನಿಯಮಿತ ಕಾಲದಲ್ಲಿ ಆ ದರ್ಶನ ನೆರವೇರುವುದು. ಅದರ ಅಂತಿಮ ಪರಿಣಾಮ ಶೀಘ್ರದಲ್ಲಿ ಗೊತ್ತಾಗುವುದು. ತಡವಾದರೂ ಕಾದಿರು; ಮೋಸಮಾಡದು. ಅದು ಖಂಡಿತವಾಗಿ ಕೈಗೂಡುವುದು; ತಾಮಸವಾಗದು. ನೋಡು, ನೇರಮನಸ್ಕನಲ್ಲದವನು, ಉಬ್ಬಿಹೋಗಿರುವ ಆ ದುರ್ಜನನು ಉಳಿಯನು; ದೇವರೊಂದಿಗೆ ಸತ್ಸಂಬಂಧ  ಹೊಂದಿರುವ ಸಜ್ಜನನು ವಿಶ್ವಾಸದಿಂದಲೇ ಬಾಳುವನು. 

ಕೀರ್ತನೆ: 95:1-2, 6-7, 8-9 
ಶ್ಲೋಕ:ಆತನ ಕಿವಿಗೆ ಕಿವಿಗೊಟ್ಟರೆನಿತೋ ಒಳಿತು ನೀವಿಂದೇ 

ಎರಡನೇ ವಾಚನ: 2 ತಿಮೊಥೇಯನಿಗೆ 2:6-8, 13-14 

ಸಹೋದರನೇ, ನಾನು ನಿನ್ನ ಮೇಲೆ ಹಸ್ತ ನಿಕ್ಷೇಪಮಾಡಿ ಪ್ರಾರ್ಥಿಸಿದಾಗ ನೀನು ಪಡೆದಂಥ ವರದಾನವನ್ನು ಪುನಃ ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಿಸುತ್ತೇನೆ. ದೇವರು ನಮಗೆ ಪ್ರದಾನಮಾಡಿರುವ ಪವಿತ್ರಾತ್ಮ ನಮ್ಮನ್ನು ಹೇಡಿಗಳನ್ನಾಗಿ ಮಾಡುವುದಿಲ್ಲ; ನಮ್ಮಲ್ಲಿ ದೈವೀಶಕ್ತಿ, ಪ್ರೀತಿ ಹಾಗೂ ಸಂಯಮಗಳು ಪ್ರವರ್ಧಿಸುವಂತೆ ಮಾಡುತ್ತಾರೆ. ಆದ್ದರಿಂದ ಕ್ರಿಸ್ತ ಯೇಸುವಿಗೆ ಸಾಕ್ಷಿಯಾಗಿರಲು ನಾಚಬೇಡ.  ಅವರಿಗಾಗಿ ಬಂಧಿಯಾಗಿರುವ ನನ್ನ ವಿಷಯದಲ್ಲೂ ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು. ಕ್ರಿಸ್ತ ಯೇಸುವಿನಲ್ಲಿ ನಮ್ಮದಾಗಿರುವ ವಿಶ್ವಾಸ ಹಾಗೂ ಪ್ರೀತಿಯಲ್ಲಿ ನೀನು ನೆಲೆಗೊಂಡಿರು. ನಾನು ಬೋಧಿಸಿದ್ದನ್ನು ಆದರ್ಶವಾಗಿಟ್ಟುಕೊಂಡು ಅನುಸರಿಸು. ನಿನ್ನ ವಶಕ್ಕೆ ಕೊಡಲಾಗಿರುವ ಸದ್ಬೋಧನೆಯನ್ನು ನಮ್ಮಲ್ಲಿ ವಾಸಿಸುವ ಪವಿತ್ರಾತ್ಮರ ಸಹಾಯದಿಂದ ಸುರಕ್ಷಿತವಾಗಿಡು. 

ಶುಭಸಂದೇಶ: ಲೂಕ 17:5-10 

"ಸ್ವಾಮೀ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ," ಎಂದು ಪ್ರೇಷಿತರು ಕೇಳಿಕೊಂಡರು. ಆಗ ಯೇಸುಸ್ವಾಮಿ, "ಸಾಸಿವೆ ಕಾಳಿನಷ್ಟು ವಿಶ್ವಾಸ ನಿಮ್ಮಲಿದ್ದು, ನೀವು ಈ ಅತ್ತಿಮರಕ್ಕೆ, "ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೊ," ಎಂದು ಆಜ್ಞಾಪಿಸಿದ್ದೇ ಅದರೆ ಅದು ನಿಮಗೆ ವಿಧೇಯವಾಗಿ ನಡೆದುಕೊಳ್ಳುವುದು. ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, "ಬಾ, ನನ್ನೊಂದಿಗೆ ಊಟಮಾಡು," ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ. ಅದಕ್ಕೆ ಬದಲಾಗಿ "ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರ ಮಾಡು. ಅನಂತರ ನೀನು ಊಟ ಮಾಡುವೆಯಂತೆ," ಎಂದು ಹೇಳುತ್ತಾರಲ್ಲವೇ? ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ. ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, "ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ," ಎಂದುಕೊಳ್ಳಿರಿ," ಎಂದರು.

05.10.2019 - "ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು"

ಮೊದಲನೇ ವಾಚನ: ಬಾರೂಕ 4:5-12, 27-29 

ನನ್ನ ಜನರೇ, ಧೈರ್ಯದಿಂದಿರಿ, ಇಸ್ರಯೇಲಿನ ಹೆಸರನ್ನು ನೀವು ಉಳಿಸಬಲ್ಲಿರಿ, ನೀವು ಅನ್ಯರಾಷ್ಟ್ರಗಳಿಗೆ ಮಾರಲ್ಪಟ್ಟಿರುವುದು ವಿನಾಶಕ್ಕಾಗಿ ಅಲ್ಲ ನೀವು ಶತ್ರುಗಳ ವಶವಾಗಿರುವುದು ದೇವರನ್ನು ಸಿಟ್ಟಿಗೆಬ್ಬಿಸಿದ್ದರಿಂದ; ದೇವರನ್ನು ತೊರೆದು ದೆವ್ವಗಳಿಗೆ ಬಲಿಯರ್ಪಿಸಿದ್ದರಿಂದ ನಿಮ್ಮ ಸೃಷ್ಟಿಕರ್ತನ ಕೋಪವನ್ನು ಕೆರಳಿಸಿದ್ದರಿಂದ; ನಿಮ್ಮನ್ನು ಸಾಕಿಸಲಹಿದ ನಿತ್ಯ ದೇವರನ್ನು ಮರೆತದ್ದರಿಂದ ನಿಮ್ಮನ್ನು ಪೋಷಿಸಿದ ಮಾತೆ ಜೆರುಸಲೇಮನ್ನು ನೋಯಿಸಿದ್ದರಿಂದ. ನಿಮ್ಮ ಮೇಲೆ ಎರಗಲಿದ್ದ ದೇವಕೋಪವನ್ನು ಆಕೆ ಹೀಗೆಂದು ಬಣ್ಣಿಸಿದಳು: "ಸಿಯೋನಿನ ನೆರೆಹೊರೆಯಲ್ಲಿ ವಾಸಿಸಿದವರೇ ಕೇಳಿ; ದೇವರು ನನ್ನ ಮೇಲೆ ಬರಮಾಡಿದ್ದಾರೆ ಮಹಾಕಸ್ತಿ ಶಾಶ್ವತರಾದ ದೇವರು ನನ್ನ ಪುತ್ರ ಪುತ್ರಿಯರ ಮೇಲೆ ಬರಮಾಡಿರುವ ಗಡೀಪಾರನ್ನು ನಾನು ಅರಿತಿರುವೆ. ಮುದದಿಂದ ನಾನಿವರನ್ನು ಸಲಹಿದೆ, ದುಃಖದಿಂದ ಕಣ್ಣೀರಿಡುತ್ತಾ ಕಳುಹಿಸಿಕೊಟ್ಟೆ. ನಾನೊಬ್ಬ ವಿಧವೆ, ಹಲವರಿಂದ ನಿರಾಕೃತಳು ನನ್ನನ್ನು ನೋಡಿ ಯಾರೂ ಆನಂದಿಸಬಾರದು; ದೇವರ ಧರ್ಮಶಾಸ್ತ್ರವನ್ನು ಬಿಟ್ಟು ನನ್ನ ಮಕ್ಕಳು ದೂರಸರಿದರು ಅವರ ಪಾಪ ಕೃತ್ಯಗಳ ನಿಮಿತ್ತ ನಾನು ಹಾಳುಬೀಳಬೇಕಾಯಿತು. ಮಕ್ಕಳೇ, ಧೈರ್ಯದಿಂದಿರಿ, ಮೊರೆಯಿಡಿ ದೇವರಿಗೆ; ಇದನ್ನೆಲ್ಲಾ ಬರಮಾಡಿದಾತ ತಂದುಕೊಳ್ಳುವನು ನಿಮ್ಮನ್ನು ನೆನಪಿಗೆ. ದೇವರಿಗೆ ವಿಮುಕರಾಗಲು ಮನಸ್ಸು ಮಾಡಿದಿರಿ ಈಗ ಅವರಿಗೆ ಅಭಿಮುಖರಾಗಲು ಹತ್ತರಷ್ಟು ಮನಸ್ಸುಮಾಡಿರಿ. ನಿಮಗೆ ಈ ವಿಪತ್ತನ್ನು ಬರಮಾಡಿದಾತನು ನಿಮ್ಮ ಉದ್ಧಾರದೊಂದಿಗೆ ಶಾಶ್ವತ ಸಂತಸವನ್ನುಂಟುಮಾಡುವನು." 

ಕೀರ್ತನೆ: 69:33-35, 36-37 

ಶ್ಲೋಕ: ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು. 

ಶುಭಸಂದೇಶ: ಲೂಕ 10:17-24 


"ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ." ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, "ಸ್ವಾಮೀ, ನಿಮ್ಮ ಹೆಸರಿನಲ್ಲಿ ಆಜ್ಞೆ ಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ," ಎಂದು ವರದಿ ಮಾಡಿದರು. ಅದಕ್ಕೆ ಯೇಸು, "ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು. ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಹಾನಿಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ," ಎಂದು ಹೇಳಿದರು. ಅದೇ ಗಳಿಗೆಯಲ್ಲಿ ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, "ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆ ಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ  ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು  ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವರೇ ಹೊರತು ಮತ್ತಾರೂ ಅರಿಯರು," ಎಂದು ಹೇಳಿದರು. ಆನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, "ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು. ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡಿರುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕಾಣಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ," ಎಂದರು.

04.10.2019

ಮೊದಲನೇ ವಾಚನ: ಬಾರೂಕ  1:15-22 

ನೀವು ಮಾಡಬೇಕಾದ ಪಾಪನಿವೇದನೆ ಹೀಗಿರಲಿ: ನಮ್ಮ ದೇವರಾದ ಸರ್ವೇಶ್ವರ ಸತ್ಯಸ್ವರೂಪರು; ನಾವಾದರೋ ಇಂದು ನಾಚಿಕೆಗೀಡಾಗಿದ್ದೇವೆ. ನಾವು ಮಾತ್ರವಲ್ಲ, ಜುದೇಯದ ಜನರು, ಜೆರುಸಲೇಮಿನ ನಿವಾಸಿಗಳು, ನಮ್ಮ ಅರಸರು, ಅಧಿಪತಿಗಳು, ಪ್ರವಾದಿಗಳು, ನಮ್ಮ ಪೂರ್ವಜರು ಎಲ್ಲರೂ ಅಂತೆಯೇ ನಾಚಿಕೆಗೀಡಾಗಿದ್ದೇವೆ. ಏಕೆಂದರೆ ದೇವರ ಮುಂದೆ ನಾವು ಪಾಪಿಗಳು, ಅವರಿಗೆ ಅವಿಧೇಯರಾಗಿ ನಡೆದುಕೊಂಡಿದ್ದೇವೆ. ನಾವು ನಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡಲಿಲ್ಲ; ಅವರು ನಮಗೆ ಕೊಟ್ಟ ಆಜ್ಞೆಗಳನ್ನು ಪಾಲಿಸಲಿಲ್ಲ. ನಮ್ಮ ದೇವರಾದ ಸರ್ವೇಶ್ವರ ನಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕರೆತಂದ ದಿನದಿಂದ ಇಂದಿನವರೆಗೂ ನಾವು ಅವರಿಗೆ ಅವಿಧೇಯರಾಗಿಯೇ ನಡೆದುಕೊಂಡಿದ್ದೇವೆ. ಅವರ ಮಾತನ್ನು ಕೇಳದೆ ಉದಾಸಿನರಾಗಿದ್ದೇವೆ. ಆದುದರಿಂದಲೇ ಉಪದ್ರವಗಳು ನಮಗೆ ಅಂಟಿಕೊಂಡಿವೆ. ಹಾಲೂ ಜೇನೂ ಹರಿಯುವ ನಾಡನ್ನು ನಮಗೆ ಕೊಡುವುದಕ್ಕಾಗಿ ನಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕರೆತಂದ ನಮ್ಮ ದೇವರಾದ ಸರ್ವೇಶ್ವರಸ್ವಾಮಿ ತಮ್ಮ ದಾಸ ಮೋಶೆಯ ಮೂಲಕ ಹಾಕಿಸಿದ ಶಾಪ ನಮ್ಮನ್ನು ಇಂದಿಗೂ ಬಿಟ್ಟಿಲ್ಲ. ನಮ್ಮ ದೇವರಾದ ಸರ್ವೇಶ್ವರ ನಮ್ಮ ಬಳಿಗೆ ಕಳುಹಿಸಿದ ಪ್ರವಾದಿಗಳು ನುಡಿದ ದೈವೋಕ್ತಿಗಳನ್ನು ನಾವು ಆಲಿಸದೆ, ಅವರ ಮಾತಿಗೆ ಕಿವಿಗೊಡದೆ ಹೋದೆವು. ಮಾತ್ರವಲ್ಲ, ನಮ್ಮಲ್ಲಿ ಪ್ರತಿಯೊಬ್ಬನು ಅವನವನ ಹೃದಯ ದುಷ್ಪ್ರೇರಣೆಗೆ ಒಳಪಟ್ಟು, ಅನ್ಯದೇವತೆಗಳಿಗೆ ಪೂಜೆಮಾಡಿದ್ದಾನೆ. ನಮ್ಮ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದಾಗಿರುವುದನ್ನೇ ಮಾಡಿದ್ದಾನೆ.

ಕೀರ್ತನೆ: 79:1-2, 3-5, 8, 9 
ಶ್ಲೋಕ: ದೇವಾ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ 

ಶುಭಸಂದೇಶ: ಲೂಕ 10:13-16 

ಯೇಸು ಹೀಗೆಂದರು: "ಕೊರಾಜ್ಜಿನ್ ಪಟ್ಟಣವೇ, ನಿನಗೆ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ! ನಿಮ್ಮಲ್ಲಿ ಮಾಡಿದ ಅದ್ಬುತ ಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಬಳಿದುಕೊಂಡು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗುತ್ತಿದ್ದರು. ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಸಹನೀಯವಾಗಿರುವುದು. ಎಲೈ ಕಫೆರ್ನವುಮ್ ಪಟ್ಟಣವೇ, ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತಿಯೋ? ಇಲ್ಲ, ಪಾತಾಳಕ್ಕೇ ಇಳಿಯುವೆ." ಆನಂತರ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನಿಮ್ಮನ್ನು ಆಲಿಸುವವನು ನನ್ನನ್ನೇ ಆಲಿಸುತ್ತಾನೆ; ನಿಮ್ಮನ್ನು ಅಲಕ್ಷ್ಯ ಮಾಡುವವನು ನನ್ನನ್ನೇ ಅಲಕ್ಷ್ಯ ಮಾಡುತ್ತಾನೆ; ನನ್ನನ್ನು ಅಲಕ್ಷ್ಯ ಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೆ ಅಲಕ್ಷ್ಯ ಮಾಡುತ್ತಾನೆ," ಎಂದರು.

03.10.2019 - "ಈ ಮನೆಗೆ ಶಾಂತಿ"

ಮೊದಲನೇ ವಾಚನ: ನೆಹೆಮೀಯ 8:1-4, 5-6, 7-12 

ತಮ್ಮತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಸ್ರಯೇಲ್ ಸರ್ವಸಮೂಹದವರು ಏಳನೆಯ ತಿಂಗಳಲ್ಲಿ ನೀರುಬಾಗಿಲಿನ ಮುಂದಿನ ಬಯಲಿನಲ್ಲಿ ಒಟ್ಟಿಗೆ ಸೇರಿದರು. ಸರ್ವೇಶ್ವರಸ್ವಾಮಿ ಮೋಶೆಯ ಮುಖಾಂತರ ಇಸ್ರಯೇಲರಿಗೆ ಕೊಟ್ಟ ಧರ್ಮಶಾಸ್ತ್ರದ ಗ್ರಂಥವನ್ನು ತೆಗೆದುಕೊಂಡು ಬರಬೇಕೆಂದು ಧರ್ಮೋಪದೇಶಕನಾದ ಎಜ್ರನನ್ನು ಕೇಳಿಕೊಂಡರು. ಯಾಜಕ ಎಜ್ರನು, ಗ್ರಹಿಸಿಕೊಳ್ಳಲು ಶಕ್ತರಾದ ಸ್ತ್ರೀಪುರುಷರು ನೆರೆದಿದ್ದ ಸಮೂಹದವರ ಮುಂದೆ, ಏಳನೆಯ ತಿಂಗಳಿನ ಪ್ರಥಮ ದಿನದಲ್ಲಿ, ಆ ಧರ್ಮಶಾಸ್ತ್ರವನ್ನು ತಂದು ಬೆಳಗಿನಿಂದ ಮಧ್ಯಾಹ್ನದವರೆಗೂ ಓದಿದನು. ಆ ನೀರು ಬಾಗಿಲಿನ ಮುಂದಣ ಬಯಲಿನಲ್ಲಿ ಕೂಡಿಬಂದಿದ್ದ ಸ್ತ್ರೀಪುರುಷರಲ್ಲಿ ಗ್ರಹಿಸಲು ಶಕ್ತರಾದವರೆಲ್ಲರೂ ಧರ್ಮಶಾಸ್ತ್ರ ಪಾರಾಯಣವನ್ನು ಆಲಿಸುತ್ತಿದ್ದರು. ಧರ್ಮೋಪದೇಶಕ ಎಜ್ರನು ಪಾರಾಯಣಕ್ಕಾಗಿ ಮಾಡಲಾಗಿದ್ದ ಮರದ ಪೀಠದ ಮೇಲೆ ನಿಂತನು. ಜನ ಸಮೂಹಕ್ಕಿಂತಲು ಎತ್ತರವಾದ ಸ್ಥಳದಲ್ಲಿ ನಿಂತಿದ್ದ ಎಜ್ರನು ಜನರ ಸಮಕ್ಷಮದಲ್ಲಿ ಗ್ರಂಥವನ್ನು ತೆರೆದ ಕೂಡಲೆ, ಎಲ್ಲರು ಎದ್ದುನಿಂತರು. ಎಜ್ರನು ಪರಾತ್ಪರ ದೇವರಾದ ಸರ್ವೇಶ್ವರನನ್ನು ಸ್ತುತಿಸಿದಾಗ ಸರ್ವಜನರೂ ತಮ್ಮ ಕೈಗಳನ್ನೆತ್ತಿ  "ಆಮೆನ್, ಆಮೆನ್"  ಎಂದು ಹೇಳಿ ನೆಲದ ಮಟ್ಟಿಗೂ ತಲೆಬಾಗಿ ಸರ್ವೇಶ್ವರನನ್ನು ಆರಾಧಿಸಿದರು. ಆಮೇಲೆ ಲೇವಿಯರು ಧರ್ಮಶಾಸ್ತ್ರವನ್ನು ಜನರು ಗ್ರಹಿಸುವಂತೆ ಮಾಡಿದರು. ಜನರು ಎದ್ದುನಿಂತ ನಂತರ ಅವರು ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಒದುತ್ತಾ ಅದರ ತಾತ್ಪರ್ಯವನ್ನು ವಿವರಿಸಿದರು. ಜನರು ಚೆನ್ನಾಗಿ ಗ್ರಹಿಸಿಕೊಂಡರು. ಜನರೆಲ್ಲರೂ ಧರ್ಮೋಪದೇಶದ ವಾಕ್ಯಗಳನ್ನು ಕೇಳುತ್ತಾ ಕಣ್ಣೀರಿಡುತ್ತಿದ್ದರು ರಾಜ್ಯಪಾಲ ನೆಹೆಮೀಯನು, ಧರ್ಮೋಪದೇಶ ಮಾಡುವ ಯಾಜಕ ಎಜ್ರನು ಹಾಗು ಜನರನ್ನು ಸಂಬೋಧಿಸುತ್ತಿದ್ದ ಲೇವಿಯರು ಜನರಿಗೆ, "ಈ ದಿನ ನಿಮ್ಮ ದೇವರಾದ ಸರ್ವೇಶ್ವರನಿಗೆ ಪರಿಶುದ್ಧ ದಿನ! ಆದುದರಿಂದ ನೀವು ದುಃಖಿಸುತ್ತಾ ಅಳುತ್ತಾ ಇರಬೇಡಿ," ಎಂದು ಹೇಳಿದರು. ಇದಲ್ಲದೆ, ಎಜ್ರನು ಅವರಿಗೆ, "ಹೋಗಿ ಮೃಷ್ಟಾನ್ನವನ್ನೂ ಮಧುರಪಾನವನ್ನೂ ತೆಗೆದುಕೊಳ್ಳಿ; ತಮಗಾಗಿ ಏನೂ ಸಿದ್ಧ ಮಾಡದವರಿಗೆ ಒಂದು ಪಾಲನ್ನು ಕಳುಹಿಸಿರಿ. ಈ ದಿನ ನಮ್ಮ ಸರ್ವೇಶ್ವರನಿಗೆ ಪ್ರತಿಷ್ಠತದಿನ! ವ್ಯಸನಪಡಬೇಡಿ; ಸರ್ವೇಶ್ವರನ ಆನಂದವೇ ನಿಮ್ಮ ಆಶ್ರಯವಾಗಿದೆ," ಎಂದನು. ಲೇವಿಯರು ಕೂಡ, "ಸುಮ್ಮನಿರಿ, ಇದು ದೇವರ ದಿವಸ; ದುಃಖಿಸಬೇಡಿ," ಎಃದು ಹೇಳಿ ಜನರನ್ನು ಸಂತೈಸಿದರು. ತಮಗೆ ತಿಳಿಯಪಡಿಸಿದ ಮಾತುಗಳನ್ನು ಜನರೆಲ್ಲರೂ ಗಮನಿಸಿ. ಹೋಗಿ ಅನ್ನಪಾನಗಳನ್ನು ತೆಗೆದುಕೊಂಡುಏನೂ ಇಲ್ಲದವರಿಗೆ ಪಾಲುಗಳನ್ನು ಕಳುಹಿಸಿ, ಬಹಳವಾಗಿ ಸಂತೋಷಪಟ್ಟರು. 

ಕೀರ್ತನೆ: 19:8, 9, 10, 11 
ಶ್ಲೋಕ: ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಹರ್ಷಾನಂದ 

 ಶುಭಸಂದೇಶ: ಲೂಕ 10:1-12 

ಯೇಸುಸ್ವಾಮಿ ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳುಹಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, "ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, "ಈ ಮನೆಗೆ ಶಾಂತಿ," ಎಂದು ಆಶೀರ್ವಾದ ಮಾಡಿ. ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿನವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು  ಕೂಲಿಗೆ ಭಾಧ್ಯನು. ನೀವೂ ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ "ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ, " ಎಂದು ತಿಳಿಸಿರಿ. ಆದರೆ ನೀವು ಹೋಗುವ ಊರಿನ ಜನರು ನಿಮ್ಮನ್ನು ಸ್ವಾಗತಿಸದೆ ಹೋದರೆ. ರಸ್ತೆಗಳಿಗೆ ಹೋಗಿ, ನಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮಗೆ ವಿರುದ್ಧವಾಗಿ ಒದರಿಬಿಡುತ್ತೇವೆ. ಆದರೂ ದೇವರ ಸಾಮ್ರಾಜ್ಯ  ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ," ಎಂದು ತಿಳಿಸಿರಿ. ತೀರ್ಪಿನ ದಿನ ಈ ಊರಿನ ಗತಿ ಸೋದೋಮ್ ಊರಿನ ಗತಿಗಂತಲೂ ಕಠಿಣವಾಗಿರುವುದೆಂದು ನಾನು ನಿಮಗೆ ಹೇಳುತ್ತೇನೆ.

02.10.2019 - "ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು"

ಮೊದಲನೇ ವಾಚನ: ವಿಮೋಚನಕಾಂಡ 23:20-23 

"ಇಗೋ, ದಾರಿಯಲ್ಲಿ ನಿಮ್ಮನ್ನು ಕಾಪಾಡುವುದಕ್ಕೆ ಹಾಗೂ ನಾನು ಗೊತ್ತು ಮಾಡಿರುವ ಸ್ಥಳಕ್ಕೆ ನಿಮ್ಮನ್ನು ಕರೆದುತರುವುದಕ್ಕೆ ಒಬ್ಬ ದೂತನನ್ನು ನಿಮ್ಮ ಮುಂದೆ ಕಳುಹಿಸುತ್ತೇನೆ. ನೀವು ಆತನಲ್ಲಿ ಲಕ್ಷ್ಯವಿಟ್ಟು ಆತನ ಮಾತಿಗೆ ಕಿವಿಗೊಡಬೇಕು. ಆತನಿಗೆ ಅವಿಧೇಯರಾಗಿ ಇರಬಾರದು. ಏಕೆಂದರೆ ಆತ ಬರುವುದು ನನ್ನ ಹೆಸರಿನಲ್ಲಿ. ನೀವು ಅವಿಧೇಯರಾದರೆ  ಆತ ನಿಮ್ಮನ್ನು ಕ್ಷಮಿಸಲಾರನು. ನೀವು ಆತನ ಮಾತನ್ನು ಶ್ರದ್ಧೆಯಿಂದ ಆಲಿಸಿ, ನನ್ನ ಆಶೆಗಳನ್ನೆಲ್ಲ ಪಾಲಿಸಿದರೆ ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿಯೂ ನಿಮ್ಮನ್ನು ಪೀಡಿಸುವವರನ್ನು ಪೀಡಿಸುವವನಾಗಿಯೂ ಇರುವೆನು. ನನ್ನ ದೂತನು ನಿಮ್ಮ ಮುಂದೆ ನಡೆದು ಆಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಹಾಗೂ ಯೆಬೂಸಿಯರು ಇರುವ ನಾಡಿಗೆ ನಿಮ್ಮನ್ನು ಸೇರಿಸುವನು. ಅವರನ್ನಾದರೋ ನಾನು ನಿರ್ಮೂಲಮಾಡುವೆನು. 

ಕೀರ್ತನೆ: 91:1-2, 3-4, 4-6, 10-11 

ಶ್ಲೋಕ: ನೀನು ಹೋದಡೆಯೆಲ್ಲಾ ನಿನ್ನ ಕಾಯುವುದಕ್ಕೆ ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ 

ಶುಭಸಂದೇಶ: ಮತ್ತಾಯ 18:1-5, 10 

ಆ ಸಮಯದಲ್ಲಿ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?" ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: "ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ" "ಎಚ್ಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣೀಕರಿಸಬೇಡಿ.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...