ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.05.2019 - "ಅಂತಿಮ ದಿನದಂದು ನಾನು ಜೀವಕ್ಕೆ ಎಬ್ಬಿಸುತ್ತೇನೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:1-8

ಆ ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ದ ಕ್ರೂರ ಹಿಂಸೆ, ಪ್ರಾರಂಭವಾಯಿತು. ಪ್ರೇಷಿತರ ಹೊರತು ಇತರ ಭಕ್ತವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾಂತ್ಯಗಳಲ್ಲೆಲ್ಲಾ ಚದುರಿ ಹೋದರು. ಕೆಲವು ಭಕ್ತಾದಿಗಳು ಸ್ತೇಫನನ್ನು ಸಮಾಧಿ ಮಾಡಿ ಅವನಿಗಾಗಿ ಗೋಳಾಡಿದರು. ಇತ್ತ ಸೌಲನು ಧರ್ಮಸಭೆಯನ್ನು ನಾಶಪಡಿಸಲು ತೊಡಗಿದನು; ಮನೆ ಮನೆಗೂ ನುಗ್ಗಿ ಸ್ತ್ರೀಪುರುಷರೆನ್ನದೆ ಭಕ್ತರನ್ನು ಎಳೆದುತಂದು ಸೆರೆಮನೆಗೆ ತಳ್ಳುತ್ತಿದ್ದನು. ಚದುರಿ ಹೋದ ಭಕ್ತವಿಶ್ವಾಸಿಗಳು ಎಲ್ಲೆಲ್ಲೂ  ಹೋಗಿ ಶುಭಸಂದೇಶವನ್ನು ಸಾರುತ್ತಿದ್ದರು. ಫಿಲಿಪ್ಪನು ಸಮಾರಿಯದ ಪ್ರಮುಖ ಪಟ್ಟಣವೂಂದಕ್ಕೆ ಹೋಗಿ ಅಲ್ಲಿಯ ಜನರಿಗೆ ಯೇಸುವೇ ಅಭಿಷಿಕ್ತರಾದ ಲೋಕೋದ್ಧಾರಕನೆಂದು. ಸಾರಿದನು. ಜನಸಮೂಹವು ಅವನಿಗೆ ಕಿವಿಕೊಟ್ಟಿತು. ಅವನು ಮಾಡಿದ ಅದ್ಬುತ ಕಾರ್ಯಗಳನ್ನು ಕಣ್ಣಾರೆ ಕಂಡಿತು; ಅವನ ಬೋಧನೆಯನ್ನು ಒಮ್ಮನಸ್ಸಿನಿಂದ ಸ್ವೀಕರಿಸಿತು. ಅನೇಕರನ್ನು ಹಿಡಿದಿದ್ದ ದೆವ್ವಗಳು ಅಬ್ಬರಿಸುತ್ತಾ ಅವರನ್ನು ಬಿಟ್ಟಗಲಿದವು; ಪಾರ್ಶ್ವವಾಯು ಪೀಡಿತರೂ ಕುಂಟರೂ ಸ್ವಸ್ಥರಾದರು. ಇದರಿಂದ ಆ ಪಟ್ಟಣದಲ್ಲಿ ಉಂಟಾದ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.

ಕೀರ್ತನೆ: 66:1-3, 4-5, 6-7

ಶ್ಲೋಕ: ಜಗವೆಲ್ಲ ಮಾಡಲಿ ಜಯಕಾರವ ದೇವನಿಗೆ

ಶುಭಸಂದೇಶ: ಯೊವಾನ್ನ 6:35-40

ಆಗ ಯೇಸು, "ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು ಆದರೆ, ನಾನು ನಿಮಗೆ ಹೇಳಿದಂತೆ, ನೀವು ನನ್ನನ್ನು ನೋಡಿಯೂ ವಿಶ್ವಾಸಿಸದೆ ಇದ್ದೀರಿ. ಪಿತನು ನನಗೆಂದು ಕೊಟ್ಟಿರುವ ಪ್ರತಿಯೊಬ್ಬನೂ ನನ್ನಲ್ಲಿಗೆ ಬರುತ್ತಾನೆ. ನನ್ನಲ್ಲಿಗೆ ಬರುವವನನ್ನು ನಾನೆಂದಿಗೂ ತಳ್ಳಿಬಿಡುವುದಿಲ್ಲ. ನಾನು ಸ್ವರ್ಗದಿಂದ ಇಳಿದು ಬಂದುದು ನನ್ನ ಇಚ್ಚೆಯಂತೆ ನಡೆಯುವುದಕ್ಕಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತದಂತೆ ನಡೆಯುವುದಕ್ಕೆ. ಅವರ ಚಿತ್ತವೆನೆಂದರೆ: ಅವರು ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ಕಳೆದುಕೊಳ್ಳದೆ ಅಂತಿಮ ದಿನದಂದು ಅವರೆಲ್ಲರನ್ನೂ ನಾನು ಜೀವಕ್ಕೆ ಎಬ್ಬಿಸಬೇಕು. ಪುತ್ರನನ್ನು ಕಂಡು ಆತನಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ನನ್ನ ಪಿತನ ಸಂಕಲ್ಪ. ಅಂಥವನನ್ನು ಅಂತಿಮ ದಿನದಂದು ನಾನು ಜೀವಕ್ಕೆ ಎಬ್ಬಿಸುತ್ತೇನೆ," ಎಂದು ನುಡಿದರು.

ಮನಸಿಗೊಂದಿಷ್ಟು : ಯೇಸುವಿಲ್ಲದೆಯೂ ನಾವು ಅಸ್ತಿತ್ವದಲ್ಲಿರಲು ಸಾಧ್ಯ, ಆದರೆ ಆ ಅಸ್ತಿತ್ವದ ಹಿಂದಿನ ಜೀವಂತಿಕೆ ಯೇಸುವೇ. ಈ ಜೀವಂತಿಕೆ ಈ ಲೋಕದ ಬದುಕು ಮೀರಿದ ಮೇಲೂ ಇರಲು ಸಾಧ್ಯವಾಗುವುದು ಯೇಸುವಿನ ಮೇಲಿನ ವಿಶ್ವಾಸದಿಂದಲೇ. ತಮ್ಮಲ್ಲಿ ವಿಶ್ವಾಸವಿಡಲು ನಮಗೆ ಕರೆ ನೀಡುತ್ತಿರುವ ಯೇಸುವಿನತ್ತ ನಾವು ಸಾಗದಿದ್ದರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ, ನಿತ್ಯ ಜೀವದ ಭಾಗ್ಯವನ್ನು ಕೈ ಚೆಲ್ಲಿದಂತೆ.

ಪ್ರಶ್ನೆ : ನಮ್ಮದು ಯಾವ ರೀತಿಯ ಹಸಿವು, ದಾಹ? 

07.05.2019 - "ನನ್ನಲ್ಲಿ ವಿಶ್ವಾಸ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 7:51-8:1

ಸ್ತೇಫನನು ಮುಂದುವರೆದು, "ಎಷ್ಟು ಹಟಮಾರಿಗಳು ನೀವು; ಎಂಥಾ ಕಠಿಣ ಹೃದಯಿಗಳು ನೀವು ಸಹ ಪವಿತ್ತಾತ್ಮ ಅವರನ್ನು ಯಾವಾಗಲೂ ಪ್ರತಿಭಟಿಸುತ್ತೀರಿ. ನಿಮ್ಮ ಪೂರ್ವಜರು ಹಿಂಸೆಗೆ ಗುರಿಪಡಿಸಿದ ಪ್ರವಾದಿ ಯಾರಾದರೂ ಇದ್ದಾರೆಯೆ? ಸತ್ಯಸ್ವರೂಪನು ಬರಲಿದ್ದಾನೆಂದು ಮುಂತಿಳಿಸಿದವರನ್ನು ಅವರು ಕೊಂದುಹಾಕಿದರು. ನೀವಾದರೋ, ಆ ಸತ್ಯಸ್ವರೂಪನನ್ನು ಹಿಡಿದುಕೊಟ್ಟು ಕೊಲೆಮಾಡಿಸಿದಿರಿ. ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದ ನೀವೇ ಅದಕ್ಕೆ ಅವಿಧೇಯರಾಗಿ ನಡೆದಿರಿ," ಎಂದನು. ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು  ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲು ಕಡಿದರು. ಆದರೆ ಸ್ತೇಫನು ಪವಿತ್ರಾತ್ಮಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾರ್ಶ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು, "ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾರ್ಶ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ," ಎಂದನು. ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು. ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು. ಅವರು ತನ್ನ ಮೇಲೆ ಕಲ್ಲುಬೀರುತ್ತಿದ್ದಾಗ ಸ್ತೇಫನನು, "ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ," ಎಂದು ಪ್ರಾರ್ಥಿಸಿದನು. ಆನಂತರ ಮೊಣಕಾಲೂರಿ, "ಪ್ರಭೂ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡಿ," ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು. ಸೌಲನು ಸ್ತೇಫನನ ಕೊಲೆಗೆ ಸಮ್ಮತಿಸಿದ್ದನು. ಆ ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುಧ್ಧ ಕ್ರೂರ ಹಿಂಸೆ ಪ್ರಾರಂಭವಾಯಿತು.

ಕೀರ್ತನೆ: 31:3-4, 6, 7, 8, 17, 21

ಶ್ಲೋಕ: ನನಗಾಧಾರ ನೀನಲ್ಲವೇ? ನನ್ನಾತ್ಮವನು ನಿನಗೊಪ್ಪಿಸಿರುವೆ

ಶುಭಸಂದೇಶ: ಯೊವಾನ್ನ 6:30-35

ಆ ಜನರು ಯೇಸುಸ್ವಾಮಿಗೆ, "ನಾವು ನೋಡಿ ನಿಮ್ಮಲ್ಲಿ ವಿಶ್ವಾವಿಡುವಂತೆ ನೀವು ಏನು ಮಾಡುವಿರಿ? ಯಾವ ಸೂಚಕಕಾರ್ಯಗಳನ್ನು ತೋರಿಸುವಿರಿ? ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ ತಿನ್ನಲು  "ಮನ್ನ"  ಸಿಕ್ಕಿತು, ತಿನ್ನಲು ಅವರಿಗೆ ಸ್ವರ್ಗದಿಂದ ರೊಟ್ಟಿ ದೊರಕಿತು, ಎಂದು ಪವಿತ್ರಗ್ರಂಥವೇ ಹೇಳುತ್ತದೆಯಲ್ಲವೇ?" ಎಂದರು. ಯೇಸು ಅವರಿಗೆ, "ನಿಮಗೆ ಸತ್ಯವಾಗಿ ಹೇಳುತ್ತೇನೆ; ಸ್ವರ್ಗದಿಂದ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ; ನಿಮಗೆ ಸ್ವರ್ಗದಿಂದ ನಿಜವಾದ ರೊಟ್ಟಿಯನ್ನು ಕೊಡುವವರು ನನ್ನ ಪಿತನೇ. ಏಕೆಂದರೆ, ಸ್ವರ್ಗದಿಂದ ಇಳಿದು ಬಂದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ," ಎಂದು ಹೇಳಿದರು. ಅದಕ್ಕೆ ಆ ಜನರು, "ಅಂಥಾ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡಿ," ಎಂದು ಕೇಳಿದರು. ಆಗ ಯೇಸು, "ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು" ಎಂದರು.

06.05.2019 - "ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6:8-15

ಸ್ತೇಫನನು ದೈವಾನುಗ್ರಹದಿಂದಲೂ ಶಕ್ತಿಯಿಂದಲೂ ತುಂಬಿದ್ದನು.ಜನರ ಮಧ್ಯೆ ಅದ್ಬುತಗಳನ್ನೂ ಸೂಚಕಕಾರ್ಯಗಳನ್ನೂ  ಮಾಡುತ್ತಿದ್ದನು. ಆದರೆ ಕೆಲವರು ಸ್ತೇಫನನ ವಿರೋಧಿಗಳಾಗಿದ್ದರು. ಇವರು "ಬಿಡುಗಡೆ ಹೊಂದಿದವರು" ಎಂಬುವರ ಪ್ರಾರ್ಥನಾ ಮಂದಿರಕ್ಕೆ ಸೇರಿದವರು. ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರೂ ಇದರ ಸದಸ್ಯರಾಗಿದ್ದರು. ಇವರೊಡನೆ ಸಿಲಿಸಿಯ ಹಾಗೂ ಏಷ್ಯಾದ ಯೆಹೂದ್ಯರೂ ಸೇರಿ ಸ್ತೇಫನನೊಂದಿಗೆ ತರ್ಕ ಮಾಡತೊಡಗಿದರು. ಆದರೆ ಸ್ತೇಫನನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲು ಅವರಿಂದಾಗಲಿಲ್ಲ. ಆದುದರಿಂದ ಕೆಲವರಿಗೆ ಲಂಚಕೊಟ್ಟು "ಸ್ತೇಫನನು ಮೋಶೆಯನ್ನೂ ದೇವರನ್ನೂ ದೂಷಿಸುತ್ತಾನೆ; ಇದನ್ನು ನಾವು ಕೇಳಿದ್ದೇವೆ" ಎಂದು ಹೇಳಿಸಿದರು. ಹೀಗೆ ಜನರನ್ನೂ ಪ್ರಮುಖರನ್ನೂ ನ್ಯಾಯಶಾಸ್ತ್ರಜ್ಞರನ್ನೂ ಪ್ರಚೋದಿಸಿದರು. ಸ್ತೇಫನನನ್ನು ಬಂದಧಿಸಿ ನ್ಯಾಯಸಭೆಯ ಮುಂದೆ ಎಳೆದು ತರುವಂತೆ ಮಾಡಿದರು. ಕೆಲವರು ಸುಳ್ಳುಸಾಕ್ಷಿಗಳನ್ನು ನೇಮಿಸಿಕೊಂಡು ಅವರಿಂದ, "ಇವನು ಯಾವಾಗಲೂನಮ್ಮ ಪವಿತ್ರದೇವಾಲಯದ ವಿರುದ್ಧ ಹಾಗೂ ಮೊಶೆಯ ಧರ್ಮಶಾಸ್ತ್ರದ ವಿರಿದ್ಧ ಮಾತನಾಡುತ್ತಾನೆ. ನಜರೇತಿನ ಆ ಯೇಸು ಈ ಮಹಾದೇವಾಲಯವನ್ನು ನಾಶಗೊಳಿಸುವನೆಂದೂ ಮೊಶೆ ನಮಗೆ ವಿದಧಿಸಿದ ಸಂಪ್ರದಾಯಗಳನ್ನು ಬಲಗೊಳಿಸುವನೆಂದೂ ಇವನು ಹೇಳಿರುತ್ರಾನೆ. ಇದನ್ನು ನಾವು ಕೇಳಿದ್ದೇವೆ," ಎಂದು ಹೇಳಿಸಿದರು. ನ್ಯಾಯಸಭೆಯಲ್ಲಿ ಕುಳಿತಿದ್ದವರೆಲ್ಲರೂ ಅವನ ಮುಖವನ್ನೇ ದಿಟ್ಟಸಿ ನೋಡಿದರು. ಅದು ದೇವದೂತನ ಮುಖದಂತೆ ಕಂಗೊಳಿಸಿತು.

ಕೀರ್ತನೆ: 119:23, 24, 26, 27, 29, 30

ಶ್ಲೋಕ: ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು

ಶುಭಸಂದೇಶ: ಯೊವಾನ್ನ  6:22-29

ನರೆದಿದ್ದ ಜನರು ಮೂರನೆಯ ದಿನವು ಸರೋವರದ ಆಚೆಕಡೆಯೇ ಉಳಿದಿದ್ದರು. ಹಿಂದಿನ ದಿನ ಅಲ್ಲಿ ಒಂದೇ ಒಂದು ದೋಣಿ ಇದ್ದುದನ್ನು ಅವರು ನೋಡಿದರು. ಯೇಸುಸ್ವಾಮಿ ಶಿಷ್ಯರೋಡನೆ ದೋಣಿಯನ್ನು ಹತ್ತಲಿಲ್ಲವಾದ್ದರಿಂದ ಶಿಷ್ಯರು ಮಾತ್ರ ಹೊರಟು ಹೋಗಿದ್ದಾರೆಂದು ಅವರಿಗೆ ತಿಳಿದಿತ್ತು. ತಿಬೇರಿಯಾದಿಂದ ಹೊರಟ್ಟಿದ್ದ ದೋಣಿಗಳು ಅಷ್ಟು ಹೊತ್ತಿಗೆ ಅಲ್ಲಿಗೆ ಬಂದು ಸೇರಿದವು ಪ್ರಭುವು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಜನರಿಗೆ ರೊಟ್ಟಿ ಬಡಿಸಿದ ಸ್ಥಳ ಅಲ್ಲೇ ಪಕ್ಕದಲ್ಲಿತ್ತು. ಯೇಸು ಆಗಲಿ, ಅವರ ಶಿಷ್ಯರಾಗಲಿ ಇಲ್ಲದ್ದನ್ನು ನೋಡಿ ಜನರು ಆ ದೋಣಿಯನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಫೆರ್ನವುಮಿಗೆ ಬಂದರು. ಜನರು ಯೇಸುಸ್ವಾಮಿಯನ್ನು  ಸರೋವರದ ಆಚೆದಡದಲ್ಲಿ ಕಂಡೊಡನೆ, "ಗುರುದೇವಾ, ತಾವಿಲ್ಲಿಗೆ ಬಂದುದು ಯಾವಾಗ ?" ಎಂದು ಕೇಳಿದರು. ಯೇಸು ಅವರಿಗೆ, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ ನೀವು ನನ್ನನ್ನು ಹುಡುಕಿಕೊಂಡು ಬಂದದ್ದು ಸೂಚಕಕಾರ್ಯಗಳನ್ನು ನೋಡಿ ಗ್ರಹಿಸಿಕೊಂಡಿದ್ದರಿಂದ ಅಲ್ಲ, ಹೊಟ್ಟೆತುಂಬುವಷ್ಟು ರೊಟ್ಟಿ ಸಿಕ್ಕಿದ್ದರಿಂದ. ಅಳಿದುಹೋಗುವ ಆಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು ಈಯುವ ಆಹಾರಕ್ಕಾಗಿ ದುಡಿಯಿರಿ. ಪಿತನಾದ ದೇವರು ತಮ್ಮ ಅಧಿಕಾರ ಮುದ್ರೆಯನ್ನು ಆತನ ಮೇಲೆ ಒತ್ತಿದ್ದಾರೆ," ಎಂದು ಉತ್ತರಕೊಟ್ಟರು. ಆಗ ಆ ಜನರು "ದೇವರು ಮೆಚ್ಚುವ ಕಾರ್ಯಗಳನ್ನು ನಾವು ಮಾಡಬೇಕಾದರೆ, ಏನು ಮಾಡಬೇಕು?" ಎಂದು ಕೇಳಿದರು. ಅದಕ್ಕೆ ಯೇಸು, "ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ಅವರು ಮೆಚ್ಚುವ ಕಾರ್ಯ," ಎಂದರು.

05.05.2019 - "ನೀನು ನನ್ನನ್ನು ಪ್ರೀತಿಸುತ್ತೀಯಾ?"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:27-32, 40-41


ಪ್ರೇಷಿತರನ್ನು ಕರೆತಂದು ನ್ಯಾಯಸಭೆಯ ಮುಂದೆ ನಿಲ್ಲಿಸಲಾಯಿತು. ಪ್ರಧಾನ ಯಾಜಕನು ಅವರನ್ನು ಉದ್ದೇಶಿಸಿ, "ಆ ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎಂದು ನಿಮಗೆ ಕಟ್ಟಪ್ಪಣೆ ಮಾಡಿದೆವು. ಆದರೂ ನೀವು ಮಾಡಿರುವುದೇನು? ನಿಮ್ಮ ಬೋಧನೆ ಜೆರುಸಲೇಮ್ ಆದ್ಯಂತ ಹಬ್ಬಿಹರಡಿದೆ. ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದಿರುವಿರಿ," ಎಂದು ಅಪಾದಿಸಿದನು. ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, "ನಾವು ವಿಧೇಯರಾಗಬೇಕಾದುದ್ದು ದೇವರಿಗೆ, ಮಾನವರಿಗಲ್ಲ. ನೀವು ಶಿಲುಬೆಗೆರಿಸಿ ಕೊಂದುಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು  ಜೀವಕ್ಕೆಬ್ಬಿಸಿದ್ದಾರೆ. ದೇವರು ಅವರನ್ನು ತಮ್ಮ ಬಲಪಾರ್ಶ್ವಕ್ಕೆ ಏರಿಸಿ ಮುಂದಾಳನ್ನಾಗಿಯೂ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತಾಪಪಟ್ಟು ದೇವರಿಗೆ ಅಭಿಮುಖರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾಂತರ ಅವಕಾಶವನ್ನು ಕಲ್ಪಸಿ ಕೊಟ್ಟಿದ್ದಾರೆ. ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಛೆಯಂತೆ ನಡೆಯುವವರಿಗೆ ದೇವರು ದಯಪಾಲಿಸುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ದಾರೆ," ಎಂದರು. ಪ್ರೇಷಿತರನ್ನು ಒಳಗೆ ಕರೆದು, ಚಾಟಿಯಿಂದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು. ಯೇಸುವಿನ ನಾಮಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರಬಂದರು.

ಕೀರ್ತನೆ: 30:2, 4, 5, 6, 11-12, 13

ಶ್ಲೋಕ: ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ಧರಿಸಿದೆ

ಎರಡನೇ ವಾಚನ: ಪ್ರಕಟನಾಗ್ರಂಥ 5:11-14

ಅನಂತರ ಯೊವಾನ್ನನನಾದ ನಾನು ಅವರ ಸಂಹಾಸನದ, ನಾಲ್ಕು ಜೀವಿಗಳ ಹಾಗೂ ಸಭಾಪ್ರಮುಖರ ಸುತ್ತಲೂ ನಿಂತಿದ್ದ ಬಹುಮಂದಿ ದೇವದೂತರ ಸ್ವರವನ್ನು ಕೇಳಿಸಿಕೊಂಡೆ. ಅವರ ಸಂಖೆ ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ  ಇತ್ತು. ಅವರೆಲ್ಲರೂ ಉಚ್ಛಕಂಟದಿಂದ: "ವಧಿತ ಕುರಿಮರಿಯಾದಾತನು ಶಕ್ತಿಯನು, ಸಿರಿತನವನು, ಗೌರವವನು, ಘನಮಾನವನು, ಸ್ತುತಿಯನು, ಸುಜ್ಞಾನವನು ಹೊಂದಲು ಯೋಗ್ಯನು," ಎಂದು ಹಾಡಿದರು. ಇದಲ್ಲದೆ, ಸ್ವರ್ಗ, ಭೂಮಿ, ಪಾತಾಳಗಳಲೂ ಸಮೂದ್ರದಲ್ಲೂ ಇರುವ ಸಮಸ್ತ ಸೃಷ್ಟಿಗಳು ಹೀಗೆ ಹಾಡುವುದನ್ನು ಕೇಳಿಸಿಕೊಂಡೆ: "ಸಂಹಾಸನದಲ್ಲಿ ಕುಳಿತವನಿಗೆ ಯಜ್ಞಕುರಿಮರಿಯಾದಾತನಿಗೆ ಸಲ್ಲಲಿ ಯುಗಯುಗಾಂತರಕ್ಕೆ ಘನಮಾನ, ಗೌರವ, ಪರಾಕ್ರಮ, ಮತ್ತು ಮಹಿಮೆ." ಇದಕ್ಕುತ್ತರವಾಗಿ ಆ ನಾಲ್ಕು ಜೀವಿಗಳು,  "ಆಮೆನ್"  ಎಂದು ಹೇಳಿದವು. ಸಭಾಪ್ರಮುಖರು ಸಾಷ್ಟಾಂಗವೆರಗಿ ನಮಸ್ಕಾರಮಾಡಿ ಆರಾಧಿಸಿದರು.

ಶುಭಸಂದೇಶ: ಯೊವಾನ್ನ 21:1-19

ತರುವಾಯ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊಂಡರು. ಅದು ಹೀಗೆ ನಡೆಯಿತು: ಸಿಮೋನ ಪೇತ್ರನು, ದಿದುಮನೆಂಬ ತೋಮನು, ಗಲಿಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. ಆಗ ಸಿಮೋನ ಪೇತ್ರನು, "ನಾನು ಮೀನು ಹಿಡಿಯಲು ಹೋಗುತ್ತೇನೆ," ಎಂದನು. ಮಿಕ್ಕವರು, "ನಾವೂ ನಿಮ್ಮೊಡನೆ ಬರುತ್ತೇವೆ," ಎಂದರು. ಅವರೆಲ್ಲರೂ ಹೊರಟು ದೋಣಿಯನ್ನು ಹತ್ತಿದರು. ಆ ರಾತ್ರಿಯೆಲ್ಲಾ ಅವರಿಗೆ  ಒಂದು ಮೀನೂ ಸಿಗಲಿಲ್ಲ, ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರು ಯೇಸು ಎಂದು ಶಿಷ್ಯರಿಗೆ ಹೊಳೆಯಲಿಲ್ಲ. ಯೇಸು ಅವರಿಗೆ, "ಮಕ್ಕಳೇ, ಊಟಕ್ಕೆ ಏನಾದರೂ ಸಿಕ್ಕಿತೇ?" ಎಂದು ಕೇಳಿದರು. "ಏನೂ ಇಲ್ಲ," ಎಂದರು ಅವರು. "ದೋಣಿಯ ಬಲಗಡೆಗೆ ಬಲೆ ಬೀಸಿರಿ; ಮೀನುಗಳು ಸಿಗುತ್ತವೆ," ಎಂದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ಮೀನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು, ಆಗ ಯೇಸುವಿನ ಆಪ್ತ ಶಿಷ್ಯನು ಪೇತ್ರನಿಗೆ, "ಅವರೇ ಪ್ರಭು" ಎಂದನು. ಪ್ರಭುವೆಂದು ಕೇಳಿದ್ದೇ ತಡ, ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿದನು. ಮಿಕ್ಕ ಶಿಷ್ಯರು ಮೀನು ತುಂಬಿದ್ದ ಬಲೆಗಳನ್ನು ಎಳೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿದ್ದ ದಡಕ್ಕೆ ದೋಣಿಯಲ್ಲೇ ಬಂದರು. ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆಂಕಿ ಮಾಡಲಾಗಿತ್ತು. ಕೆಂಡದ ಮೇಲೆ ಮೀನುಗಳಿದ್ದವು. ರೊಟ್ಟಿಯೂ ಅಲ್ಲಿತ್ತು, ಯೇಸು ಅವರಿಗೆ, "ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿ," ಎಂದು ಹೇಳಿದರು. ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳೆದುತಂದನು. ಬಲೆಯ ತುಂಬ ದೊಡ್ಡ ಮೀನುಗಳು - ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ಮೀನುಗಳಿದ್ದರೂ ಬಲೆಯು ಹರಿದಿರಲಿಲ್ಲ. ಯೇಸು ಅವರಿಗೆ, "ಬಂದು ಊಟಮಾಡಿ," ಎಂದು ಅವರನ್ನು ಕರೆದರು. ಅವರು ಪ್ರಭುವೆಂದು ಅರಿತ್ತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, "ನೀವು ಯಾರು?" ಎಂದು ಕೇಳುವಷ್ಟು ಧೈರ್ಯ ಇರಲಿಲ್ಲ. ಯೇಸು ಹತ್ತಿರಕ್ಕೆ ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟರು. ಯೇಸು ಸತ್ತು ಜೀವಂತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ. ಅವರೆಲ್ಲರ ಊಟವಾದ ಮೇಲೆ ಯೇಸು ಸಿಮೋನ ಪೇತ್ರನನ್ನು ನೋಡಿ, "ಯೊವಾನ್ನನ ಮಗನಾದ ಸಿಮೋನನೇ, ಇವರಿಗಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳಿದರು. ಅದಕ್ಕೆ ಪೇತ್ರನು, "ಹೌದು ಪ್ರಭೂ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ," ಎಂದನು. ಯೇಸು ಅವನಿಗೆ, "ನನ್ನ ಕುರಿಮರಿಗಳನ್ನು ಮೇಯಿಸು," ಎಂದರು. ಯೇಸು ಎರಡನೆಯ ಬಾರಿ, "ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳಲು, "ಹೌದು ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ," ಎಂದು ಮರುನುಡಿದನು. ಯೇಸು ಅವನಿಗೆ, "ನನ್ನ ಕುರಿಗಳನ್ನು ಕಾಯಿ,"ಎಂದರು. ಮೂರನೇ ಬಾರಿಯೂ ಯೇಸು, "ಯೊವಾನ್ನನ ಮಗನಾದ ಸಿಮೋನನೇ, "ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳಿದರು. "ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂದು ಯೇಸು ಮೂರನೇ ಬಾರಿ ಕೇಳಿದ್ದನ್ನು ಕಂಡು ಪೇತ್ರನು ನೊಂದುಕೊಂಡನು. "ಪ್ರಭುವೇ, ನಿಮಗೆ ಎಲ್ಲವೂ ತಿಳಿದೇ ಇದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ನಿಮಗೆ ತಿಳಿದಿದೆ," ಎಂದು ಹೇಳಿದನು. ಅದಕ್ಕೆ ಯೇಸು, "ನನ್ನ ಕುರಿಗಳನ್ನು ಮೇಯಿಸು; ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ, ಕೇಳು: ತಾರುಣ್ಯದಲ್ಲಿ ನೀನೇ ನಡುಕಟ್ಟಿಕೊಂಡು ಇಷ್ಟ ಬಂದ ಕಡೆ ನಡೆದೆ. ವೃದ್ಧಾಪ್ಯದಲ್ಲಾದರೋ ನೀನು ಕೈಚಾಚುವೆ. ಬೇರೊಬ್ಬನು ನಿನ್ನ ನಡುಕಟ್ಟಿ ನಿನಗಿಷ್ಟವಿಲ್ಲದ ಕಡೆ ನಿನ್ನನ್ನು ನಡೆಸಿಕೊಂಡು ಹೋಗುವನು," ಎಂದು ನುಡಿದರು.  ಪೇತ್ರನು ಎಂಥ ಸಾವಿನಿಂದ ದೇವರ ಮಹಿಮೆಯನ್ನು ಬೆಳಗಿಸಲಿದ್ದಾನೆಂದು ಸೂಚಿಸಿ ಹಾಗೆ ಹೇಳಿದರು. ಇದಾದ ಮೇಲೆ ಯೇಸು ಪೇತ್ರನಿಗೆ, "ನೀನು ನನ್ನನ್ನು ಹಿಂಬಾಲಿಸಿ ಬಾ," ಎಂದರು

ಮನಸಿಗೊಂದಿಷ್ಟು : "ನನ್ನನು ಪ್ರೀತಿಸುತ್ತೀಯಾ?" ಎಂಬ ಪ್ರಶ್ನೆಯ ಪುನರಾವರ್ತನೆಗೆ ಪೇತ್ರ ನೊಂದುಕೊಳ್ಳುತ್ತಾನೆ. ಈಗ ಅದೇ ಪ್ರಶ್ನೆಯನ್ನು ಪ್ರತಿದಿನ ನಮ್ಮಲ್ಲಿ ಕೇಳುತ್ತಾ ನೊಂದುಕೊಳ್ಳುವ ಸರದಿ ಯೇಸು ಸ್ವಾಮಿಯದು.  ’ಪ್ರೀತಿಸುತ್ತೇವೆ’ ಎಂದು ಹೇಳುವ ನೈತಿಕ ಧೈರ್ಯ ನಮಗಿದೆಯೇ?.  ತಮ್ಮ ರಾಜ್ಯವನ್ನು ವಿಸ್ತರಿಸುವ ಜವಬ್ದಾರಿ ಕೊಡಲು ಯೇಸುವಂತೂ ತುದಿಗಾಲಲ್ಲಿ ನಿಂತಿದ್ದಾರೆ. ವಹಿಸಿಕೊಳ್ಳುವ ಮನಸ್ಸು ನಮ್ಮದಾಗಬೇಕು. ಮೊದಲು ಆರಿಸಿಕೊಳ್ಳುವಾಗ ಕರೆದಂತೆ ಮತ್ತೆ ಪೇತ್ರನಿಗೆ ’ಹಿಂಬಾಲಿಸು ಬಾ’ ಎಂದು ಹೊಸದಾಗಿ ಹೇಳುತ್ತಾರೆ. ’ಹಿಂಬಾಲಿಸಿದ ಪೇತ್ರ ಧರ್ಮಸಭೆಯ ಬಂಡೆಯಾದ. ನಾವು ಕಲ್ಲುಗಳಾಗೋಣ.

ಪ್ರಶ್ನೆ : "ನನ್ನನು ಪ್ರೀತಿಸುತ್ತೀಯಾ?" ಎಂಬ ಯೇಸುವಿನ ಪ್ರಶ್ನೆಗೆ ನಮ್ಮ ಉತ್ತರವೇನು?

04.05.2019 - "ಅಂಜಬೇಡಿ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6:1-7

ಇತ್ತ ಭಕ್ತ ವಿಶ್ವಾಸಿಗಳ ಸಂಖೆ ಹೆಚ್ಚುತ್ತಾ ಬಂದಿತು. ಆಗ ಗ್ರಿಕ್ ಮಾತನಾಡುತ್ತಾ ಇದ್ದವರ ಹಾಗೂ ಸ್ಥಳಿಯ ಭಾಷೆ ಮಾತನಾಡುತ್ತಿದ್ದವರ ನಡುವೆ ಭಿನ್ನಭಿಪ್ರಾಯ ಉಂಟಾಯಿತು.‌ ದಿನನಿತ್ಯ ಮಾಡುವ ದೀನದಲಿತರ ಸೇವೆಯಲ್ಲಿ ತಮ್ಮ ಕಡೆಯ ವಿಧವೆಯರನ್ನು ಅಲಕ್ಷ್ಯ ಮಾಡಲಾಗುತ್ತಿದೆ ಎಂದು ಗ್ರೀಕರು ಗೊಣಗುಟ್ಟಿದರು. ಆಗ ಹನ್ನೆರಡು ಮಂದಿ ಪ್ರೇಷಿತರು ಭಕ್ತವಿಶ್ವಾಸಿಗಳ ಸಭೆಯನ್ನು ಕರೆದು, "ನಾವು ದೇವರ ವಾಕ್ಯದ ಬೋಧನೆಯನ್ನು ಅವಗಣಿಸಿ ಊಟೋಪಚಾರಗಳ ಸೇವೆಯಲ್ಲಿ ಮಗ್ನರಾಗಿ ಇರುವುದು ಸರಿಯಲ್ಲ. ಆದುದರಿಂದ ಸಹೋದರರೇ ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಸನ್ಮಾನಿತರೂ ಆಗೀರುವ ಏಳು ವೆಕ್ತಿಗಳನ್ನು ನಿಮ್ಮಿಂದ ಆರಿಸಿಕೊಳ್ಳಿ. ನಾವು ಅವರಿಗೆ ಈ ಜವಾಬ್ದಾರಿಯನ್ನು ವಹಿಸುತ್ತೇವೆ. ನಾವಾದರೋ ಪ್ರಾರ್ಥನೆಯಲ್ಲೂ ವಾಕ್ಯೋಪದೇಶದಲ್ಲೂ ನಿರತರಾಗುತ್ತೇವೆ,"  ಎಂದರು. ಪ್ರೇಷಿತರ ಈ ಸಲಹೆಯನ್ನು ಇಡೀ ಸಭೆ ಅನುಮೋದಿಸಿತು. ಅಂತೆಯೇ ಅಗಾಧ ವಿಶ್ವಾಸವುಳ್ಳವನೂ ಪವಿತ್ರಾತ್ಮಭರಿತನೂ ಆದ ಸ್ತೇಫನ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಯೆಹೂದ್ಯ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ ಎಂಬ ಏಳು ಮಂದಿಯನ್ನು ಆರಿಸಿಕೊಂಡರು. ಪ್ರೇಷಿತರ ಮುಂದೆ ಅವರನ್ನು ನಿಲ್ಲಿಸಿದರು. ಪ್ರೇಷಿತರು ಪ್ರಾರ್ಥನೆಮಾಡಿ ಅವರ ಮೇಲೆ ಹಸ್ತನಿಕ್ಷೇಪ ಮಾಡಿದರು. ದೇವರ ವಾಕ್ಯವು ಪ್ರವರ್ಧಿಸತೊಡಗಿತು. ವಿಶ್ವಾಸಿಗಳ ಸಂಖೆ ಜೆರುಸಲೇಮಿನಲ್ಲಿ ಬಹಳವಾಗಿ ಹೆಚ್ಚಿತು. ಬಹುಮಂದಿ ಯಾಜಕರೂ ಆ ವಿಶ್ವಾಸಕ್ಕೆ ಶರಣಾದರು.

ಕೀರ್ತನೆ: 33:1-2, 4-5, 18-19

ಶ್ಲೋಕ: ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ, ಕಾದಿಹೆವು ಇದೋ ನಿನ್ನ ನಂಬಿ ಭರವಸದಿ

ಶುಭಸಂದೇಶ: ಯೊವಾನ್ನ 6:16-21


"ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯನ್ನು ಸಮೀಪಿಸುತ್ತಿರುವುದು ಶಿಷ್ಯರಿಗೆ ಕಾಣಿಸಿತು." ಸಾಯಂಕಾಲವಾದ ಮೇಲೆ ಯೇಸುಸ್ವಾಮಿಯ ಶಿಷ್ಯರು ಸರೋವರಕ್ಕೆ ಹೋಗಿ ದೋಣಿಯನ್ನು ಹತ್ತಿ ಕಫೆರ್ನವುಮಿನ ಕಡೆ ಸಾಗಿದರು. ಆಗಲೇ ಕತ್ತಲು ಕವಿದಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. ಅಷ್ಟರಲ್ಲಿ ರಭಸದಿಂದ ಗಾಳಿ ಬೀಸತೊಡಗಿತು. ಸರೋವರವು ಅಲ್ಲೋಲಕಲ್ಲೋಲವಾಯಿತು. ಐದು ಆರು ಕಿಲೋಮೀಟರಿನಷ್ಟು ಹುಟ್ಟು ಹಾಕಿರಬೇಕು. ಆಗ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯನ್ನು ಸಮೀಪಿಸುತ್ತಿರುವುದು ಶಿಷ್ಯರಿಗೆ ಕಾಣಿಸಿತು. ಅದನ್ನು ನೋಡಿ ಅವರು ಹೆದರಿದರು. ಆಗ ಯೇಸು, "ನಾನೇ, ಇನ್ಯಾರೂ ಅಲ್ಲ; ಅಂಜಬೇಡಿ," ಎಂದು ಹೇಳಿದರು. ಶಿಷ್ಯರು ಅವರನ್ನು ದೋಣಿಯೊಳಕ್ಕೆ ಬರಮಾಡಿಕೊಳ್ಳುವುದರಲ್ಲಿದ್ದರು. ಅಷ್ಟರಲ್ಲಿ, ದೋಣಿಯು ಸೇರಬೇಕಾಗಿದ್ದ ದಡವನ್ನು ತಲುಪಿತು.

ಮನಸಿಗೊಂದಿಷ್ಟು : ನಮ್ಮ ಜೀವನದ ಅಲ್ಲೋಲಕಲ್ಲೋಲದ ಸಮಯದಲ್ಲಿ ಯೇಸು ಸ್ವಾಮಿಯ ಇರುವಿಕೆಯ ಬಗೆಗಿನ ನಮ್ಮ ಪ್ರತಿಕ್ರಿಯೆ ಏನು ಎಂಬುದರ ಬಗ್ಗೆ ಯೋಚಿಸುವಂತೆ ಮಾಡುತ್ತದೆ ಇಂದಿನ ಶುಭಸಂದೇಶ. ರಭಸದ ಗಾಳಿಯ ಸಮಯದಲ್ಲಿ ಯೇಸು ದೋಣಿಯ ಬಳಿ ಬರುತ್ತಿರುವುದು ಶಿಷ್ಯರಿಗೆ ಸಮಾಧಾನ ತರಬೇಕಿತ್ತು, ಆದರೆ ಅವರು ಭಯಪಟ್ಟರು. ’ಅಂಜಬೇಡಿ’ ಎಂಬ ಮಾತಿನ ನಂತರವೇ ಅವರು ಯೇಸುವನ್ನು ಬರಮಾಡಿಕೊಂಡದ್ದು, ದಡ ಸೇರಿದ್ದು. ’ಅಂಜಬೇಡಿ’ ಎಂಬ ಮಾತಿಗೆ ನಾವು ಕಾಯದಿರೋಣ, ಯೇಸುವಿನ ಸಾಮಿಪ್ಯವಿದ್ದರೆ ಸಾಕು ನಮ್ಮ ದಡ ಹತ್ತಿರ, ಹಗುರ ಸುಗಮ. 

ಪ್ರಶ್ನೆ : ನಮ್ಮ ಬಾಳ ಪಯಣದಲ್ಲಿ ಕ್ರಿಸ್ತನ ಹೆಜ್ಜೆಗಳಿಗೆ ನಾವೆಷ್ಟು ಹತ್ತಿರ?

03.05.2019 - "ನನ್ನ ಮಾತುಗಳನ್ನು ವಿಶ್ವಾಸಿಸಿರಿ"

ಮೊದಲನೇ ವಾಚನ: 1  ಕೊರಿಂಥಿಯರಿಗೆ 15:1-8

ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ  ಶುಭಸಂದೇಶವನ್ನು ನೆನಪಿಗೆ ತಂದುಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ದೀರಿ. ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಢವಾಗಿ ವಿಶ್ವಾಸಿಸಿದರೆ ನೀವು ಜೀವೋದ್ಧಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ ವಿಶ್ವಾಸ ನಿರರ್ಥಕವಾದೀತು. ನಾನು ಪಡೆದುಕೊಂಡಿದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರ ಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ ಗ್ರಂಥದ ಪ್ರಕಾರ ಮೂರನೆಯ ದಿನ ಅವರು ಪುನರುತ್ದಾನ ಹೊಂದಿದರು. ಆನಂತರ ಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು. ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೊದರರಿಗೆ ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತುಹೊಗಿದ್ದರೂ ಬಹು ಮಂದಿ ಇಂದಿಗೂ ಬದುಕಿದ್ದಾರೆ. ಅದಾದ ಮೇಲೆ ಯಕೋಬನಿಗೂ ಆನಂತರ ಪ್ರೇಷಿತರೆಲ್ಲರಿಗೂ ಕಾಣಿಸಿಕೊಂಡರು. ಕಟ್ಟಕಡೆಗೆ ದಿನ ತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು.

ಕೀರ್ತನೆ: 19:2-3, 4-5

ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ

ಶುಭಸಂದೇಶ: ಯೊವಾನ್ನ 14:6-14

ಅದಕ್ಕೆ ಯೇಸು, "ಮಾರ್ಗವೂ ಸತ್ಯವೂ ಜೀವವೂ ನಾನೇ.ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು. ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದೀರಿ ಹಾಗೂ ಕಂಡೂ ಇದ್ದೀರಿ," ಎಂದು ನುಡಿದರು. ಆಗ ಫಿಲಿಪ್ಪನು, "ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೆ ಸಾಕು," ಎಂದನು. ಅದಕ್ಕೆ ಉತ್ತರವಾಗಿ ಯೇಸು, "ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು ನೀನು ಅರಿತುಕೊಳ್ಳಲಿಲ್ಲವೆ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, "ನಮಗೆ ಪಿತನನ್ನು ತೋರಿಸಿ" ಎಂದು ಹೇಗೆ ಕೇಳುತ್ತೀ?  ನಾನು ಪಿತನಲ್ಲಿ ಇದ್ದೇನೆ ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ. "ನಾನು ಪಿತನಲ್ಲಿ ಇದ್ದೇನೆ ಪಿತನು ನನ್ನಲ್ಲಿ ಇದ್ದಾರೆ," ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ. ಇಲ್ಲವೇ, ನಾನು ಸಾಧಿಸಿದ ಸುಕೃತ್ಯಗಳ ನಿಮಿತ್ತದಿಂದಾದರೂ ವಿಶ್ವಾಸಿಸಿರಿ; ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿ ವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು. ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ. ಹೀಗೆ ಪಿತನಿಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು. ಹೌದು, ನನ್ನ ಹೆಸರಿನಲ್ಲಿ ನೀವು ಏನನ್ನು ಕೇಳಿದರೂ ನಾನು ಅದನ್ನು ಮಾಡಿಯೇ ತೀರುವೆನು."

ಮನಸಿಗೊಂದಿಷ್ಟು : ಯೇಸುವಿನ ನಂತರ ಶಿಷ್ಯರು ಶುಭ ಸಂದೇಶದ ಪ್ರಚಾರದಲ್ಲಿ ಮಾಡಿದ ಸಾಧನೆ ಅಪಾರ. ’ ನನ್ನಲ್ಲಿ ವಿಶ್ವಾಸವುಳ್ಳವನು ಮಹತ್ತಾದುವುಗಳನ್ನು ಸಾಧಿಸುವನು’ ಎಂಬ ಯೇಸುವಿನ ಮಾತು ಶಿಷ್ಯರ ಹಾಗೂ ಅನೇಕ ಸಂತರ ಬಾಳಿನಲ್ಲಿ ನಿಜವಾದುದ್ದನ್ನು ನಾವು ಕಾಣುತ್ತೇವೆ. ಆ ಮಾತು ನಮ್ಮ ಮೂಲಕವೂ ಸಾಕರಾಗೊಳ್ಳಲೆಂಬ ಆಸೆ ನಮ್ಮದಾಗಲಿ.

ಪ್ರಶ್ನೆ : ಮಹತ್ತಾದುವುಗಳನ್ನು ಸಾಧಿಸಲು ಬೇಕಾದ ವಿಶ್ವಾಸ ನಮ್ಮಲ್ಲಿದೆಯೇ?

02.05.2019 - "ನಾವು ವಿಧೇಯರಾಗಬೇಕಾದುದ್ದು ದೇವರಿಗೆ, ಮಾನವರಿಗಲ್ಲ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:27-33

ಪ್ರೇಷಿತರನ್ನು ಕರೆತಂದು ನ್ಯಾಯಸಭೆಯ ಮಂದೆ ನಿಲ್ಲಿಸಲಾಯಿತು. ಪ್ರಧಾನ ಯಾಜಕನು ಅವರನ್ನು ಉದ್ದೇಶಿಸಿ, "ಆ ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎಂದು ನಿಮಗೆ ಕಟ್ಟಪ್ಪಣೆ ಮಾಡಿದೆವು ಆದರೂ ನೀವು ಮಾಡಿರುವುದೇನು? ನಿಮ್ಮ ಬೋಧನೆ ಜೆರುಸಲೇಮ್ ಆದ್ಯಂತ ಹಬ್ಬಿಹರಡಿದೆ. ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದಿರುವಿರಿ," ಎಂದು ಅಪಾದಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, "ನಾವು ವಿಧೇಯರಾಗಬೇಕಾದುದ್ದು ದೇವರಿಗೆ, ಮಾನವರಿಗಲ್ಲ. ನೀವು ಶಿಲುಬೆಗೇರಿಸಿ ಕೊಂದುಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು  ಜೀವಕ್ಕೆಬ್ಬಿಸಿದ್ದಾರೆ. ದೇವರು ಅವರನ್ನು ತಮ್ಮ ಬಲಪಾರ್ಶವಕ್ಕೆ ಏರಿಸಿ ಮುಂದಾಳನ್ನಾಗಿಯೂ ಲೋಕೋದ್ಧಾರಕನಾಗಿಯೂ ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾಂತರ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಛೆಯಂತೆ ನಡೆಯುವವರಿಗೆ ದೇವರು ದಯಪಾಲಿಸಿರುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ಧಾರೆ," ಎಂದನು. ಇದನ್ನು ಕೇಳಿದ ಸಭಾಸದಸ್ಯರು ಕ್ರೋದಭರಿತರಾಗಿ ಪ್ರೇಷಿತರನ್ನು ಕೊಲ್ಲಬೇಕೆಂದಿದ್ದರು.

ಕೀರ್ತನೆ: 34:2, 9, 17-18, 19-20

ಶ್ಲೋಕ: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು

ಶುಭಸಂದೇಶ: ಯೊವಾನ್ನ 3:31-36

ಸ್ನಾನಿಕ ಯೊವಾನ್ನನು ತನ್ನ ಶಿಷ್ಯರಿಗೆ ಹೀಗೆಂದು ಹೇಳಿದನು: "ಮೇಲಿನಿಂದ ಬಂದವನೇ ಎಲ್ಲರಿಗಿಂತ ಮೇಲಾದವನು. ಇಹಲೋಕದಿಂದ ಬಂದವನಾದರೋ ಈ ಲೋಕಕ್ಕೆ ಸೇರಿದವನು; ಅವನು ಲೌಕಿಕವಾದುದನ್ನೇ ಹೇಳುವವನು. ಸ್ವರ್ಗದಿಂದ ಬಂದವನಾದರೋ ಸರ್ವರಿಗೂ ಶ್ರೇಷ್ಠನು. ಆತನು ತಾನು ಕಂಡದ್ದನ್ನೂ ಕೇಳಿದ್ದನ್ನೂ ಕುರಿತೇ ಸಾಕ್ಷಿ ಹೇಳುತ್ತಾನೆ. ಆದರೂ ಆತನ ಮಾತನ್ನು ಯಾರೂ ಅಂಗೀಕರಿಸುವುದಿಲ್ಲ.  ಆತನ ಮಾತನ್ನು ಅಂಗೀಕರಿಸುವವನು ದೇವರು ಸತ್ಯಸ್ವರೂಪಿ ಎಂದು ಸಾದೃಶ್ಯಪಡಿಸುತ್ತಾನೆ. ದೇವರು ಕಳುಹಿಸಿದಾತನು ದೇವರ ಮಾತುಗಳನ್ನೇ ಆಡುತ್ತಾನೆ. ಏಕೆಂದರೆ ದೇವರು ಆತನಿಗೆ ಪವಿತ್ರಾತ್ಮ ಅವರನ್ನು ಪೂರ್ಣವಾಗಿ ಕೊಟ್ಟಿರುತ್ತಾರೆ. ಪಿತ ಪುತ್ರನನ್ನು ಪ್ರೀತಿಸಿ ಸರ್ವಸ್ವವನ್ನೂ ಆತನ ಕೈಗೆ ಕೊಟ್ಟಿದ್ದಾರೆ. ಪುತ್ರನಲ್ಲಿ ವಿಶ್ವಾಸವಿಟ್ಟವನು ನಿತ್ಯಜೀವವನ್ನು ಪಡೆದಿರುತ್ತಾನೆ; ಪುತ್ರನಿಗೆ ಶರಣಾಗದವನು ನಿತ್ಯಜೀವವನ್ನು ಸವಿಯನು. ಅವನು ದೇವರ ಕೋಪಾಗ್ನಿಗೆ ಗುರಿಯಾಗುತ್ತಾನೆ.

ಮನಸಿಗೊಂದಿಷ್ಟು : ನಿತ್ಯ ಜೀವವನ್ನು ಪಡೆಯುವುದು ಅಥವಾ ದೇವರ ಕೋಪಾಗ್ನಿಗೆ ಗುರಿಯಾಗುವ ಆಯ್ಕೆ ನಮ್ಮದೇ ಆಗಿದೆ. ಯೇಸುವಲ್ಲಿ ವಿಶ್ವಾಸವಿಟ್ಟವರು ನಿತ್ಯ ಜೀವವನ್ನು ಪಡೆಯುತ್ತಾರೆ ಎನ್ನುವುದು ನಿಜ. ಆದರೆ  ’ ನಿತ್ಯ ಜೀವವನ್ನು ಪಡೆದಿರುತ್ತಾರೆ’ ಎನ್ನುತ್ತದೆ ಇಂದಿನ ಶುಭಸಂದೇಶ. ಅದರ ಅರ್ಥ ಯೇಸುವನ್ನು ಪೂರ್ಣ ಪ್ರಮಾಣದಲ್ಲಿ ವಿಶ್ವಾಸಿಸುತ್ತಾ ನಿತ್ಯ ಜೀವವನ್ನು ಪಡೆಯುವ ಪ್ರಕ್ರಿಯೆಯಲ್ಲಿ ನಾವೀಗಲೇ ಭಾಗಿಯಾಗಲು ಸಾಧ್ಯವಿದೆ.

ಪ್ರಶ್ನೆ : ನಮ್ಮ ವಿಧೇಯತೆ ಯಾರಿಗೆ? ಮಾನವರಿಗೋ, ದೇವರಿಗೋ?