ಸಂತ ಡೊಮಿನಿಕ್ St.Dominic🙏
ಒಂದು ಕನಸು ಮತ್ತು ಒಂದು ದೃಶ್ಯ. ಪಾಪದಿಂದ ಉರಿಯುತ್ತಿದ್ದ ಈ ಲೋಕದ ಮೇಲೆ ದೇವರ ಮಹಾನ್ ಕೋಪ. ಆದರೆ ಮಾತೆ ಮರಿಯ ದೇವರಲ್ಲಿ ಪ್ರಾರ್ಥಿಸಿ ಭೂಮಿಯ ಮೇಲಿನ ಇಬ್ಬರು ವ್ಯಕ್ತಿಗಳ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ಮಾರನೆಯ ದಿನ ಈ ವ್ಯಕ್ತಿ ದೇವಾಲಯದಲ್ಲಿ ಚಿಂದಿಬಟ್ಟೆ ಹುಟ್ಟಿದ ಇನ್ನೊಬ್ಬ ವ್ಯಕ್ತಿಯನ್ನು ಕಾಣುತ್ತಾನೆ.
ತಾನು ಕನಸಿನಲ್ಲಿ ಕಂಡಿದ್ದು ಇದೇ ವ್ಯಕ್ತಿ. ಆತನ ಬಳಿಗೆ ಹೋಗಿದ್ದೇ ಆ ವ್ಯಕ್ತಿಯನ್ನು ಅಪ್ಪಿಕೊಂಡು ಹೇಳುತ್ತಾನೆ:"ನೀನು ನನ್ನ ಸಂಗಾತಿ, ನನ್ನ ಜೊತೆ ನಡೆಯಬೇಕು. ನಾವಿಬ್ಬರೂ ಒಟ್ಟಿಗಿದ್ದರೆ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ಎದುರಿಸಲಾರದು." ಹೀಗೆ ಹೇಳಿದ ವ್ಯಕ್ತಿಯೇ ಸಂತ ಡೊಮಿನಿಕ್. ಚಿಂದಿ ಬಟ್ಟೆಲ್ಲಿದ್ದವರು ಅಸಿಸ್ಸಿಯ ಸಂತ ಫ್ರಾನ್ಸಿಸ್. ಸಮಕಾಲೀನ ಸಂಗಾತಿಗಳಾದ ಈ ಇಬ್ಬರು ಸಂತರು ವಿಶ್ವದಲ್ಲೇ ಪ್ರಖ್ಯಾತವಾದ 'ಡೊಮಿನಿಕನ್ಸ್' ಮತ್ತು 'ಫ್ರಾನ್ಸಿಸ್ಕನ್ಸ್' ಎಂಬ ಪ್ರಸಿದ್ಧ ಧಾರ್ಮಿಕ ಸಭೆಗಳ ಸ್ಥಾಪಕರಾಗಿ ವಿಶ್ವವಿಖ್ಯಾತರಾದರು.
ಸ್ಪಾನಿಷ್ ಭಾಷೆಯಲ್ಲಿ 'ಡೊಮಿಂಗೊ' ಎಂದರೆ 'ನಾನು ದೇವರಿಗೆ ಸೇರಿದವನು' ಎಂದರ್ಥ. ಈ 'ಡೊಮಿಂಗೋ ಮತ್ತಾರೂ ಅಲ್ಲ, ಶ್ರೀಮಂತ ಕುಲಿನ ಪೆಲಿಕ್ಸ್ ದೆ ಗುಸ್ ಮಾನ್ ಮತ್ತು ಜೋವಾನ್ ಆಫ್ ಆಜಾ ಇವರ ಪುತ್ರ ಡೊಮಿನಿಕ್. 1170 ರಲ್ಲಿ ಸ್ಪೇನ್ ದೇಶದ ಕಾಸ್ಟಿಲ್ಲೆ ಎಂಬಲ್ಲಿ ಹುಟ್ಟಿದ ಡೊಮಿನಿಕ್ ಅಗಸ್ಟಿನಿಯನ್ ನ ಫ್ರೈಯರ್ಸ ಎಂಬ ಸಭೆ ಸೇರಿ ಧರ್ಮಗುರುವಾಗುತ್ತಾರೆ.
ಇಷ್ಟಾದರೂ ಅವರಿಗೆ ನಿಜವಾದ ಆಧ್ಯಾತ್ಮ ಸೆಳೆತ ಬಂದದ್ದು 1203ರಲ್ಲಿ. ಒಮ್ಮೆ ತನ್ನ ಧರ್ಮಾಧ್ಯಕ್ಷ ಡಿಯೇಗೋ ಇವರ ಜೊತೆ ಡೆನ್ ಮಾರ್ಕ್ ಗೆ ಪ್ರಯಾಣ ಮಾಡುತ್ತಿದ್ದಾಗ 'ಆಲ್ಬಿಜೆನ್ಸಸ್' ಎಂಬ ಒಂದು ಪಾಷಂಡಿ ಸಂಪ್ರದಾಯ ವಿರೋಧಿ ಪಂಥದ ಪರಿಚಯವಾಗುತ್ತದೆ. ಈ ಆಲ್ಬಿಜೆನ್ಸ್ ಎರಡು ತತ್ವಗಳನ್ನು ನಂಬಿದ್ದರು. ಅದು ಒಳಿತು ಮತ್ತು ಕೆಡುಕು. ಆತ್ಮ ಒಳಿತು ಮತ್ತು ದೇಹ ಕೆಡುಕಾದ್ದರಿಂದ ದೇಹಕ್ಕೆ ಸಂಬಂಧಪಟ್ಟ ಎಲ್ಲವನ್ನೂ ಅವರು ತಿರಸ್ಕರಿಸುತ್ತಿದ್ದರು, ಇಲ್ಲವೇ ನಿರ್ಲಕ್ಷಿಸುತ್ತಿದ್ದಾರು. ದೇಹ ಕೆಡುಕು ಎನಿಸಿಬಿಟ್ಟಿದ್ದರಿಂದ ಅವರು ಸಂತಾನವೃದ್ಧಿಗೆ ಮುಂದಾಗುತ್ತಿರಲಿಲ್ಲ.
ಜೊತೆಗೆ ಆದಷ್ಟು ಕಡಿಮೆ ಅನ್ನ ಪಾನೀಯಗಳನ್ನು ಸ್ವೀಕರಿಸುತ್ತಿದ್ದರು. ಈ ತತ್ವದ ಆಧಾರದ ಮೇಲೆ ದೇಹ ಮತ್ತು ಆತ್ಮದ ನಡುವೆ ನಿರಂತರ ಸಂಘರ್ಷವಿರುತ್ತಿತ್ತು. ಈ ಕಾರಣದಿಂದ ಅವರು ದೇವರು ಮನುಷ್ಯರಾದದ್ದುನ್ನು ಮತ್ತು ಧರ್ಮಸಭೆಯ ಸಂಸ್ಕಾರಗಳನ್ನು ನಂಬುತ್ತಿರಲಿಲ್ಲ. ಇದೆಲ್ಲದರ ಪರಿಣಾಮವಾಗಿ, ಈ ಆಲ್ಬಿಜೆನ್ಸ್ ಪಂಥದವರು ಕಠಿಣ ವೃತ ಮತ್ತು ತಪಸ್ಸಿನ ಜೀವನ ಶೈಲಿ ಅಳವಡಿಸಿಕೊಂಡಿದ್ದರಿಂದ ಬಹಳಷ್ಟು ಸಾಮಾನ್ಯ ಜನ ಇವೆರೆಡೆಗೆ ಆಕರ್ಷಿತರಾಗಿದ್ದರು. ಈ ಪಂಥ ಪ್ರಸಿದ್ಧ ವಾಗುತ್ತಾ ಬಂತು.
ಈ ಪಂಥದ ತತ್ವ ಮತ್ತು ಸಿದ್ಧಾಂತಗಳ ವಿರುದ್ಧ ಜನರಿಗೆ ತಿಳುವಳಿಕೆ ನೀಡಿ ಹೊರಹೋದವರನ್ನು ಮತ್ತೆ ಧರ್ಮಕ್ಕೆ ಸೆಳೆಯಲು ಜಗದ್ಗುರು ಮೂರನೇ ಇನ್ನೊಸೆಂಟ್ ಒಂದು ವಿಶೇಷ ಬೋಧಕ ಮಾರ್ಗವನ್ನು ಸ್ಥಾಪಿಸುತ್ತಾರೆ. ಜಗದ್ಗುರುಗಳ ಈ ಆದೇಶವನ್ನು ಗಂಭೀರವಾಗಿ ತೆಗೆದುಕೊಂಡ ಡೊಮಿನಿಕ್ ಮತ್ತು ಅವರ ಧರ್ಮಾಧ್ಯಕ್ಷರು ಈ ಪಾಷಂಡಿ ಪಂಥವನ್ನು ಎದುರಿಸಲು ಅವರದೇ ತತ್ವ ಅನುಸರಿಸಿ ಕಠಿಣ ತಪಸ್ಸಿನ ಜೀವನ ನಡೆಸುವುದರಿಂದ ಮಾತ್ರ ಸಾಧ್ಯ ಎಂಬ ನಿಲುವಿಗೆ ಬರುತ್ತಾರೆ. ಕಾರಣ ಈ ಪಂಥದ ಗುರುಗಳು ಕಠಿಣ ಜೀವನ ನಡೆಸುತ್ತಿದ್ದರೆ ಕಥೋಲಿಕ ಗುರುಗಳನ್ನು ಐಷಾರಾಮ ಜೀವನವಾಗಿತ್ತು. ಬೋಧನೆ ಮತ್ತು ಪಾಲನಾ ಕಾರ್ಯಕ್ಕೆ ಕುದುರೆಗಳ ಮೇಲೆ ಸಾಗುತ್ತಿದ್ದುದಲ್ಲದೆ, ಸಾಕಷ್ಟು ಸೇವಕರು ಮತ್ತು ನೌಕರವರ್ಗ ಹೊಂದಿದ್ದು, ಅತಿಥಿ ಗೃಹಗಳಲ್ಲೇ ಅವರು ಬಿಡಾರ ಹೂಡುತ್ತಿದ್ದರು.
ಹೀಗೆ ಕಥೋಲಿಕ ಗುರುಗಳಿಗೆ ಹೊಸ ಜೀವನ ಶೈಲಿ ಅಳವಡಿಸಿ ಹಿನ್ನಲೆಯಲ್ಲಿ ಸ್ವತಃ ತಾವೇ ಬೋಧನೆ ಮಾಡಲು ಪ್ರಾರಂಭಿಸುತ್ತಾರೆ ಡೊಮಿನಿಕ್. ತಮ್ಮ ಹೊಸತನದ ಬೋಧನೆ ಪರಿಣಾಮಕಾರಿಯಾಗಿ ಅನೇಕರು ಮತ್ತೆ ಕಥೋಲಿಕ ಧರ್ಮಕ್ಕೆ ಬರುತ್ತಾರೆ. ಹೀಗೆ ಆ ಪಂಥದಿಂದ ಹೊರಬಂದ ಮಹಿಳೆಯರಿಗಾಗಿ ಡೊಮಿನಿಕ್ ಒಂದು ಕನ್ಯಾ ಸ್ತ್ರೀ ಮಠವನ್ನು ಸ್ಥಾಪಿಸುತ್ತಾರೆ. 1215 ರಲ್ಲಿ ಟೂಲೌಸ್ ಎಂಬ ಊರಿನಲ್ಲಿ ಧರ್ಮಕ್ಷೇತ್ರಗಳ ಬೋಧಕರು(Diocesan Preachers) ಎಂಬ ಬೋಧಕ ಗುರುಗಳ ಸಭೆಯನ್ನು ಪ್ರಾರಂಭಿಸುತ್ತಾರೆ. ಈ ಗುರುಗಳಿಗೆ ತಪಸ್ಸು, ದೈವ ಶಾಸ್ತ್ರದಲ್ಲಿ ನೈಪುಣ್ಯತೆ ಮತ್ತು ನೈತಿಕ ಜೀವನ ಮಾದರಿಯನ್ನಾಗಿಡುತ್ತಾರೆ. ಮುಂದೆ ಈ ಸಭೆ 'ಡೊಮಿನಿಕನ್ ಧಾರ್ಮಿಕ ಸಭೆ' ಎಂದು ಹೊಸದಾಗಿ ನಾಮಕರಣ ಗೊಳ್ಳುತ್ತದೆ.
1221, ಆಗಸ್ಟ್ 6ರಂದು ಸಂತ ಡೊಮಿನಿಕ್ ತಮ್ಮ ಅಂತಿಮ ಯಾತ್ರೆ ಕೈಗೊಳ್ಳುವ ಸಂದರ್ಭದಲ್ಲಿ ಡೊಮಿನಿಕನ್ ಸಭೆ ಬಹಳಷ್ಟು ಪ್ರಸಿದ್ಧಿ ಪಡೆದು ಇಟಲಿ, ಫ್ರಾನ್ಸ್, ಇಂಗ್ಲೆಂಡ್, ಪೋಲೆಂಡ್, ಸ್ಪೇನ್ ಮುಂತಾದ ರಾಷ್ಟ್ರಗಳಲ್ಲಿ ಪ್ರಬಲವಾಗಿ ಹಬ್ಬಿತ್ತು. ಸಂತ ಡೊಮಿನಿಕ್ ರ ಆಕರ್ಷಕ ವ್ಯಕ್ತಿತ್ವ, ಸತ್ಯದ ಪ್ರೇಮ, ಕರ್ತವ್ಯಪ್ರಜ್ಞೆ, ಜಪಸರದ ಬಗೆಗಿನ ವಿಶೇಷ ಭಕ್ತಿ, ಪಾಪಿಯೆನಿಸಿಕೊಂಡವನ ಮೇಲೆ ಆದರದ ಪ್ರೀತಿ, ಅವರ ಪರಿಶುದ್ಧತೆಗೆ ಮತ್ತು ಬೋಧನೆಗೆ ಸೂಕ್ಷ್ಮ ವೇದಿಕೆಯನ್ನು ಒದಗಿಸಿತ್ತು.
1234,ಜುಲೈ 3ರಂದು ಸಂತ ಡೊಮಿನಿಕ್ ರ ಕಾರ್ಯವನ್ನು ಹತ್ತಿರದಿಂದ ಕಂಡಿದ್ದ ಜಗದ್ಗುರು 9ನೇ ಗ್ರೆಗೊರಿ ಇವರನ್ನು ಸಂತ ಪದವಿಗೆ ಏರಿದರು. ಈ ಸಮಯದಲ್ಲಿ ಉದ್ಘೋಷ ಮಾಡಿದ ಜಗದ್ಗುರು "ಸಂತ ಪೇತ್ರ ಮತ್ತು ಪೌಲರಿಗಿಂತ ಕಡಿಮೆ ಪರಿಶುದ್ಧತೆಯನ್ನು ಇವರಲ್ಲಿ ನಾನು ಕಂಡಿಲ್ಲ" ಎಂದರು. ಡೊಮಿನಿಕ್ ಕರಿಗೋ ಫ್ರಾನ್ಸಿಸ್ಕರಿಗೂ ಇಂದಿಗೂ ವಿಶೇಷ ನಂಟಿದೆ. ಇಬ್ಬರೂ ಸಂತರ ಹಬ್ಬಗಳಲ್ಲಿ ಒಟ್ಟಿಗೆ ಸೇರಿ ಪೂಜೆ ಅರ್ಪಿಸುವ ರೂಢಿ ಹಲವು ಕಡೆಯಿದೆ.
No comments:
Post a Comment