04.08.2026 - ನನ್ನ ಪರಮಪಿತನು ನೆಡದ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು. ಅವರನ್ನು ಅವರಷ್ಟಕ್ಕೇ ಬಿಡಿ

 ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ  30:1-2, 12-15, 18-22



ಸರ್ವೇಶ್ವರ ಸ್ವಾಮಿ ಯೆರೆಮೀಯನಿಗೆ ಮತ್ತೊಮ್ಮೆ ಈ ಸಂದೇಶವನ್ನು ದಯಪಾಲಿಸಿದರು: “ಇಸ್ರಯೇಲರ ದೇವರಾದ ಸರ್ವೇಶ್ವರ ಹೀಗೆನ್ನುತ್ತಾರೆ - ‘ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲ ಗ್ರಂಥರೂಪವಾಗಿ ಬರೆ. ಹೌದು, ಸರ್ವೇಶ್ವರ ಹೀಗೆನ್ನುತ್ತಾರೆ: “ನಿನ್ನ ಗಾಯಗಳು ಗುಣಹೊಂದವು ನಿನ್ನ ಹುಣ್ಣನ್ನು ವಾಸಿಮಾಡಲಾಗದು. ನಿನ್ನ ಪರ ವಾದಿಸುವವರಿಲ್ಲ, ನಿನ್ನ ವ್ರಣಕ್ಕೆ ಔಷಧವಿಲ್ಲ ನಿನ್ನನ್ನು ಆರೈಕೆ ಮಾಡುವವರಿಲ್ಲ. ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ. ‘ಅಯ್ಯೋ ನೋವು ನಿಲ್ಲದಿದೆ,’ ಎಂದು ನಿನ್ನ ಗಾಯಕ್ಕಾಗಿ ಗೋಳಿಡುತ್ತಿರುವೆ ಏಕೆ? ನಿನ್ನ ಅಪರಾಧ ಹೆಚ್ಚಿದೆ, ಪಾಪಗಳು ಬಹಳವಿವೆ ಎಂದೇ ಇದನ್ನೆಲ್ಲ ನಿನಗೆ ಮಾಡಿದೆ. ಯಕೋಬನ ಮನೆಗಳ ದುರವಸ್ಥೆಯನ್ನು ತಪ್ಪಿಸುವೆನು ಜೆರುಸಲೇಮಿನ ನಿವಾಸಗಳನ್ನು ನಿಶ್ಚಯವಾಗಿ ಕರುಣಿಸುವೆನು. ಅದರ ಹಾಳುದಿಬ್ಬಗಳ ಮೇಲೆ ಹೊಸನಗರ ಕಟ್ಟುವೆನು ಅದರ ಅರಮನೆ ಮೊದಲಿದ್ದ ಸ್ಥಳದಲ್ಲೆ ನೆಲೆಯಾಗಿ ನಿಲ್ಲುವುದು. ಅವುಗಳಿಂದ ಸ್ತುತಿಸ್ತೋತ್ರ ಕೇಳಿಬರುವುದು ಅಲ್ಲಿಂದ ನಲಿವುನಾದ ಕೇಳಿಸುವುದು. ಆ ಜನರನ್ನು ಹೆಚ್ಚಿಸುವೆನು, ಅವರು ಕೊಂಚವಾಗಿರರು. ಅವರನ್ನು ಘನಪಡಿಸುವೆನು, ಅವರು ಹೀನರಾಗಿರರು. ಅವನ ಸಂತಾನ ಹಿಂದಿನ ಸುಸ್ಥಿತಿಯನ್ನು ಹೊಂದುವುದು ಅವರ ಸಮಾಜ ನನ್ನ ಮುಂದೆ ನೆಲೆಯಾಗಿ ನಿಲ್ಲುವುದು ಅವರನ್ನು ಬಾಧಿಸುವವರನ್ನೆಲ್ಲ ನಾನು ದಂಡಿಸುವೆನು. ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗುವನು ಅವರ ವಂಶದವನೇ ಅವರನ್ನು ಆಳುವನು. ಅವನನ್ನು ನಾನು ನನ್ನ ಹತ್ತಿರ ಬರಗೊಡಿಸುವೆನು ಅವನು ನನ್ನ ಸನ್ನಿಧಾನಕ್ಕೆ ಸೇರುವನು. ಇಲ್ಲದಿದ್ದಲ್ಲಿ, ನನ್ನನು ಸಮೀಪಿಸಲು ಧೈರ್ಯಗೊಳ್ಳುವವನಾರು? - ಇದು ಸರ್ವೇಶ್ವರನಾದ ನನ್ನ ನುಡಿ. ನೀವು ನನಗೆ ಪ್ರಜೆಯಾಗಿರುವಿರಿ ನಾನು ನಿಮಗೆ ದೇವರಾಗಿರುವೆನು.

ಕೀರ್ತನೆ: 102:16-18, 19-21, 29, 22-23
ಶ್ಲೋಕ: ಪ್ರಭು ಪುನರುದ್ದರಿಸುವನು ಸಿಯೋನನು

ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು|
ಭಯಪಡುವರು ನಿನ್ನ ಪ್ರತಾಪಕೆ ಭೂ ರಾಜರುಗಳು||
ಏಕೆನೆ ಪುನರುದ್ಧರಿಸುವನು ಸಿಯೋನನು|
ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು||
ತಿರಸ್ಕರಿಸನಾತ ನಿರ್ಗತಿಕರ ಮೊರೆಯನು|
ನೆರವೇರಿಸದೆ ಬಿಡನು ಅವರ ಕೋರಿಕೆಯನು||

ಮುಂದಣ ಸಂತತಿಗಿದು ಶಾಸನವಾಗಿರಲಿ|
ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ||
ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ|
ದೃಷ್ಟಿಸಿದನು ತನ್ನ ಉನ್ನತ ಪವಿತ್ರ ಸ್ಥಾನದಿಂದ||
ಆಲಿಸಿದನಾತನು ಬಂಧಿತರ ಗೋಳಾಟವನು|
ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು||

ಹೀಗೆ ಪಭುವಿಗಾರಾಧನೆ  ಸಲ್ಲಿಸಲು|
ಜನಾಂಗಗಳೂ ರಾಜ್ಯಗಳೂ ಕೂಡಿರಲು||
ಹೊಗಳಲಾಗುವುದು ಪ್ರಭುವಿನ  ನಾಮ  ಸಿಯೋನಿನಲಿ|
ಆತನ ಗುಣಗಾನವಿರುವುದು ಆ  ಜೆರುಸಲೇಮಿನಲಿ||

ಘೋಷಣೆ                   ಕೀರ್ತನೆ 25:4
ಅಲ್ಲೆಲೂಯ, ಅಲ್ಲೆಲೂಯ!
ನಿನ್ನ  ಮಾರ್ಗವನು  ಪ್ರಭೂ,  ನನಗೆ  ತೋರಿಸು,
ನೀನೊಪ್ಪುವ  ಪಥದಲ್ಲಿ  ನಾ  ನಡೆಯ  ಕಲಿಸು,,
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 15:1-2, 10-14


ಜೆರುಸಲೇಮಿನಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ ಯೇಸುಸ್ವಾಮಿಯ ಬಳಿಗೆ ಬಂದು, "ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಸಂಪ್ರದಾಯಗಳನ್ನು ಮೀರುವುದೇಕೆ? ಅವರು ಊಟಕ್ಕೆ ಮುಂಚೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟ ಮಾಡುವುದೇಕೆ?" ಎಂದು ಕೇಳಿದರು. ಅನಂತರ ಯೇಸುಸ್ವಾಮಿ ಜನರನ್ನು ತಮ್ಮ ಬಳಿಗೆ ಕರೆದು, "ನಾನು ಹೇಳುವುದನ್ನು ಕೇಳಿ ಚೆನ್ನಾಗಿ ತಿಳಿದುಕೊಳ್ಳಿರಿ: ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಕಲುಷಿತಗೊಳಿಸುವುದಿಲ್ಲ; ಬಾಯೊಳಗಿನಿಂದ ಹೊರಕ್ಕೆ ಬರುವಂಥದ್ದೇ ಮನುಷ್ಯನನ್ನು ಕಲುಷಿತಗೊಳಿಸುತ್ತದೆ," ಎಂದು ಹೇಳಿದರು. ಆಗ ಶಿಷ್ಯರು ಹತ್ತಿರಕ್ಕೆ ಬಂದು, "ನಿಮ್ಮ ಮಾತನ್ನು ಕೇಳಿ ಫರಿಸಾಯರು ಬಹಳ ಬೇಸರಗೊಂಡಿದ್ದಾರೆಂದು ನಿಮಗೆ ತಿಳಿಯಿತೇ?" ಎಂದರು. ಅದಕ್ಕೆ ಯೇಸು, "ನನ್ನ ಪರಮಪಿತನು ನೆಡದ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು. ಅವರನ್ನು ಅವರಷ್ಟಕ್ಕೇ ಬಿಡಿ; ಅವರೊ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಇಬ್ಬರೂ ಹಳ್ಳದಲ್ಲಿ ಬೀಳುತ್ತಾರಷ್ಟೆ," ಎಂದರು.

03.08.2026 - ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ,

ಮೊದಲನೆಯ ವಾಚನ : ಯೆರೆಮೀಯನ ಗ್ರಂಥದಿಂದ ಇಂದಿನ ವಾಚನ 28: 1-17

ಜುದೇಯದ  ಅರಸ  ಚಿದ್ಕೀಯನ  ಆಳ್ವಿಕೆಯಲ್ಲಿ  ನಾಲ್ಕನೆಯ  ವರ್ಷದ  ಐದನೆಯ  ತಿಂಗಳಲ್ಲಿ,  ಪ್ರವಾದಿಯಾದ  ಅಜ್ಜೂರನ  ಮಗನು  ಹಾಗು  ಗಿಬ್ಯೋನ್  ಊರಿನವನು  ಆದ  ಹನನ್ಯನು  ಸರ್ವೇಶ್ವರನ  ಆಲಯದೊಳಗೆ  ಬಂದು  ಯಾಜಕರ  ಮತ್ತು  ಸಕಲ  ಜನರ  ಮುಂದೆ  ನಿಂತು  ನನಗೆ  ಹೀಗೆ  ಹೇಳಿದ: "ಇಸ್ರಯೇಲರ  ದೇವರೂ  ಸರ್ವಶಕ್ತರೂ  ಆದ  ಸರ್ವೇಶ್ವರನ  ನುಡಿ  ಇದು:  'ಬಾಬಿಲೋನಿಯದ  ಅರಸನು  ಹೇರಿರುವ  ನೊಗವನ್ನು  ಮುರಿದುಬಿಟ್ಟಿದ್ದೇನೆ.  ಬಾಬಿಲೋನಿಯದ  ಅರಸನಾದ  ನೆಬೂಕದ್ನೆಚ್ಚರನು  ಈ  ಸ್ಥಳದಿಂದ  ಬಾಬಿಲೋನಿಗೆ  ಕೊಂಡೊಯ್ದ  ಸರ್ವೇಶ್ವರನ  ಆಲಯದ  ಸಕಲ  ಉಪಕರಣಗಳನ್ನು  ಎರಡು  ವರ್ಷಗಳೊಳಗಾಗಿ  ನಾನು  ಪುನಃ  ಈ  ಸ್ಥಳಕ್ಕೆ  ಸೇರಿಸುವೆನು.  ಯೆಹೋಯಾಕೀಮನ  ಮಗನೂ  ಜುದೇಯದ  ಅರಸನೂ  ಆದ  ಯೆಕೊನ್ಯನನ್ನು  ಮತ್ತು  ಬಾಬಿಲೋನಿಗೆ  ಸೆರೆಹೋದ  ಎಲ್ಲ  ಯೆಹೂದ್ಯರನ್ನು  ಈ  ಸ್ಥಳಕ್ಕೆ  ಮರಳಿ  ಬರಮಾಡುವೆನು.  ಇದು  ಸರ್ವೇಶ್ವರನ  ನುಡಿ."  ಆಗ  ಪ್ರವಾದಿ  ಯೆರೆಮೀಯನು  ಸರ್ವೇಶ್ವರನ  ಆಲಯದೊಳಗೆ  ನಿಂತಿದ್ದ  ಯಾಜಕರ  ಮತ್ತು  ಸಕಲ  ಜನರ  ಎದುರಿನಲ್ಲೇ  ಪ್ರವಾದಿ  ಹನನ್ಯನಿಗೆ:  "ಆಮೆನ್!  ಸರ್ವೇಶ್ವರ  ಹಾಗೆಯೇ  ಮಾಡಲಿ!  ಸರ್ವೇಶ್ವರ  ತಮ್ಮ  ಆಲಯದ  ಉಪಕರಣಗಳನ್ನೂ  ಸೆರೆಹೋದವರೆಲ್ಲರನ್ನೂ  ಬಾಬಿಲೋನಿನಿಂದ  ಈ  ಸ್ಥಳಕ್ಕೆ  ಪುನಃ  ಬರಮಾಡಲಿ.  ನೀನು  ನುಡಿದ  ಮಾತುಗಳನ್ನು    ನೆರವೇರಿಸಲಿ!  ಆದರೆ  ನಾನು,  ನಿನ್ನ  ಮತ್ತು  ಸಕಲ  ಜನರ  ಕಿವಿಗೆ  ಬೀಳುವಂತೆ  ನುಡಿಯುವ  ಈ  ಮಾತನ್ನು  ಗಮನಿಸು:  ನನಗೂ  ನಿನಗೂ  ಹಿಂದೆ,  ಪುರಾತನ  ಕಾಲದಿಂದಿದ್ದ  ಪ್ರವಾದಿಗಳು  ಅನೇಕ  ದೇಶಗಳಿಗೂ  ದೊಡ್ಡ  ದೊಡ್ಡ  ರಾಜ್ಯಗಳಿಗೂ  ಯುದ್ದ,  ಆಪತ್ತು - ವಿಪತ್ತು,  ಕಾಯಿಲೆ -ಕಷ್ಟ,  ಇಂಥವುಗಳನ್ನು  ಸಾರುತ್ತಿದ್ದರು.  ಹಿತಸಮಾಚಾರವನ್ನು  ಸಾರುವ  ಪ್ರವಾದಿಯೇ  ಸರ್ವೇಶ್ವರನಿಂದ  ನಿಜವಾಗಿ  ಕಲಿಸಲ್ಪಟ್ಟವನೆಂದು  ಅವನ  ಮಾತು  ಕೈಗೂಡಿದ  ಮೇಲೆ  ತಿಳಿಯತಕ್ಕದ್ದು," ಎಂದು  ಹೇಳಿದನು.  ಆಗ  ಪ್ರವಾದಿ  ಹನನ್ಯನು  ಪ್ರವಾದಿ ಯೆರೆಮೀಯನ  ಹೆಗಲಿನಿಂದ  ನೊಗವನ್ನು  ತೆಗೆದು  ಮುರಿದುಹಾಕಿದನು.  ನೆರೆದಿದ್ದ  ಜನರೆಲ್ಲರ  ಮುಂದೆ,  "ಸರ್ವೇಶ್ವರನೇ  ಹೇಳಿದ್ದಾರೆ - ಇದೇ  ಪ್ರಕಾರ,  ಬಾಬಿಲೋನಿನ  ಅರಸ  ನೆಬೂಕದ್ನೆಚ್ಚರನು  ಹೊರಿಸಿರುವ  ನೊಗವನ್ನು  ಇನ್ನೆರಡು  ವರ್ಷದೊಳಗೆ  ಸಮಸ್ತ  ರಾಷ್ಟ್ರಗಳ  ಹೆಗಲಿನಿಂದ  ತೆಗೆದು  ಮುರಿದುಹಾಕಲಾಗುವುದು,"  ಎಂದು  ಹೇಳಿದನು.  ಇದನ್ನು  ಕೇಳಿದ  ಪ್ರವಾದಿ  ಯೆರೆಮೀಯನು  ಅಲ್ಲಿಂದ   ಹೊರಟುಹೋದನು.  ಹೀಗೆ  ಪ್ರವಾದಿ  ಹನನ್ಯನು  ಪ್ರವಾದಿ ಯೆರೆಮೀಯನ  ಹೆಗಲಿನಿಂದ  ನೊಗವನ್ನು  ತೆಗೆದು,  ಮುರಿದುಹಾಕಿದ  ಮೇಲೆ  ಸರ್ವೇಶ್ವರ  ಯೆರೆಮೀಯನಿಗೆ  ಹೀಗೆಂದರು:  "ನೀನು  ಹೋಗಿ  ಹನನ್ಯನಿಗೆ:  'ಸರ್ವೇಶ್ವರ  ಇಂತೆನ್ನುತ್ತಾರೆ - ನೀನು  ಮರದ  ನೊಗಗಳನ್ನು  ಮುರಿದು  ಬಿಟ್ಟಿರುವೆ.  ಅವುಗಳಿಗೆ  ಬದಲಾಗಿ  ಕಬ್ಬಿಣದ  ನೊಗಗಳನ್ನು  ಮಾಡು.  ಏಕೆಂದರೆ  ಇಸ್ರಯೇಲರ  ದೇವರೂ  ಸೇನಾಧೀಶ್ವರರೂ  ಆದ  ಸರ್ವೇಶ್ವರನ  ಮಾತಿವು:  ಈ  ಎಲ್ಲ  ರಾಷ್ಟ್ರಗಳು  ಬಾಬಿಲೋನಿಯದ  ಅರಸ  ನೆಬೂಕದ್ನೆಚ್ಚರನಿಗೆ  ಸೇವೆಮಾಡಲೆಂದು  ನಾನು  ಅವುಗಳ  ಹೆಗಲಿಗೆ  ಕಬ್ಬಿಣದ ನೊಗವನ್ನು  ಹೇರಿದ್ದೇನೆ.  ಅವು  ಅವನಿಗೆ  ಸೇವೆ  ಸಲ್ಲಿಸೇ  ತೀರಬೇಕು;  ಕಾಡುಮೃಗಗಳು  ಕೂಡ  ಸೇವೆಸಲ್ಲಿಸುವಂತೆ  ಅವನಿಗೆ  ಅವುಗಳನ್ನು  ಒಪ್ಪಿಸಿದ್ದೇನೆ,  ಎಂದು  ಹೇಳು."  ಆಗ  ಪ್ರವಾದಿ  ಯೆರೆಮೀಯನು  ಪ್ರವಾದಿ  ಹನನ್ಯನಿಗೆ,  "ಹನನ್ಯನೆ  ಕೇಳು,  ಸರ್ವೇಶ್ವರ  ನಿನ್ನನ್ನು  ಕಳಿಸಲಿಲ್ಲ.  ಆದರೂ  ಈ  ಜನರು  ಸುಳ್ಳನ್ನು  ನಂಬುವಂತೆ  ಮಾಡುತ್ತಿರುವೆ.  ಆದಕಾರಣ  ಸರ್ವೇಶ್ವರ  ಇಂತೆನ್ನುತ್ತಾರೆ:  ಇಗೋ,  ನಾನು  ನಿನ್ನನ್ನು  ಈ  ಜಗತ್ತಿನಿಂದ  ತೊಲಗಿಸುವೆನು.  ನೀನು  ಸರ್ವೇಶ್ವರನಾದ  ನನಗೆ  ವಿರುದ್ದವಾಗಿ  ದ್ರೋಹದ  ಮಾತುಗಳನ್ನು  ಆಡಿದ್ದರಿಂದ  ಇದೇ  ವರ್ಷ  ಸಾಯುವೆ," ಎಂದು ಹೇಳಿದನು.  ಅಂತೆಯೇ  ಹನನ್ಯನು  ಅದೇ  ವರ್ಷದ  ಏಳನೆಯ  ತಿಂಗಳಲ್ಲಿ  ಸತ್ತುಹೋದನು.

ಪ್ರಭುವಿನ  ವಾಕ್ಯ

ಕೀರ್ತನೆ: 119: 29, 43, 79-80, 95, 102. v.68

ಶ್ಲೋಕ:  ಪ್ರಭೂ,  ಬೋಧಿಸೆನಗೆ  ನಿನ್ನ  ನಿಬಂಧನೆಗಳನ್ನು.

1.  ಮಿಥ್ಯ ಮಾರ್ಗವನು ನನಗೆ ದೂರಮಾಡಯ್ಯಾ|

ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ||

ತೆಗೆಯಬೇಡ ನನ್ನ ಬಾಯಿಂದ ಸತ್ಯವನು|

ನಂಬಿಕೊಂಡಿರುವೆ  ನಿನ್ನ ನ್ಯಾಯವಿಧಿಯನು||

ಶ್ಲೋಕ

2.  ನನ್ನತ್ತ ಬರಲಿ ನಿನ್ನಲಿ ಭಯಭಕ್ತಿಯುಳ್ಳವರು|

ನಿನ್ನ ಕಟ್ಟಳೆಗಳನು ಆಗ ಕಲಿತುಕೊಳ್ಳುವರು||

ನಿನ್ನ ನಿಬಂಧನೆಗಳಲಿ ಸ್ಥಿರವಿದೆ ಎನ್ನ ಮನ|

ನನಗೆ ಒದಗದು ಆಗ ಆಶಾಭಂಗ, ಅವಮಾನ||

ಶ್ಲೋಕ

3.  ಹೊಂಚುಹಾಕುತಿಹರು ದುರುಳರು ಸಂಹರಿಸಲೆನ್ನನು|

ನಾನೋ ನಿನ್ನ ಕಟ್ಟಳೆಗಳನು ಲಕ್ಷಿಸುತ್ತಿರುವೆನು||

ತಪ್ಪಿಸಿಕೊಳ್ಳಲಿಲ್ಲ ನಾ ನಿನ್ನ ವಿಧಿಗಳಿಂದ|

ನೀನೇ ನನಗದರ ಬೋಧನೆ ಮಾಡಿದ್ದರಿಂದ||

ಶ್ಲೋಕ


ಘೋಷಣೆ

(ಕೀರ್ತನೆ 19: 8)

ಪ್ರಭುವಿನ  ನಿಯಮ  ನೀತಿಬದ್ಧ; ಮನಸ್ಸಿಗದು  ಗ್ರಹಿಕೆ| ಪ್ರಭುವಿನ  ಕಟ್ಟಳೆ  ಪರಿಶುದ್ಧ; ಕಣ್ಣಿಗದು  ದೀವಿಗೆ ||

ಶುಭಸಂದೇಶ :ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 14: 13-21

ಆ  ಕಾಲದಲ್ಲಿ      ಯೇಸು  ಆ  ಸ್ಥಳವನ್ನು  ಬಿಟ್ಟು,  ದೋಣಿಹತ್ತಿ  ನಿರ್ಜನ  ಪ್ರದೇಶಕ್ಕೆ  ಒಬ್ಬಂಟಿಗರಾಗಿ  ಹೊರಟರು.  ಇದನ್ನು  ತಿಳಿದುಕೊಂಡ  ಜನರು  ಊರೂರುಗಳಿಂದ  ಹೊರಟು  ಗುಂಪು  ಗುಂಪಾಗಿ  ಅವರ  ಹಿಂದೆಯೇ  ಕಾಲ್ದಾರಿಯಲ್ಲಿ  ನಡೆದುಹೋದರು.  ಯೇಸು  ದೋಣಿಯಿಂದ  ಇಳಿದಾಗ,  ದೊಡ್ಡ  ಜನಸಮೂಹ  ಆಗಲೇ  ಅಲ್ಲಿ  ಸೇರಿತ್ತು.  ಆ  ಸಮೂಹವನ್ನು  ಕಂಡು  ಅವರ  ಮನ  ಕರಗಿತು;  ಅವರಲ್ಲಿ  ಅಸ್ವಸ್ಥರಾಗಿದ್ದವರನ್ನು  ಗುಣಪಡಿಸಿದರು.  ಸಂಜೆಯಾದಾಗ,  ಶಿಷ್ಯರು  ಯೇಸುವಿನ  ಬಳಿಗೆ  ಬಂದು,  "ಇದು  ನಿರ್ಜನ  ಪ್ರದೇಶ.  ಈಗಾಗಲೇ  ಹೊತ್ತು  ಮೀರಿಹೋಗಿದೆ.  ಜನಸಮೂಹವನ್ನು  ಕಳುಹಿಸಿಬಿಡಿ,  ಹಳ್ಳಿಪಳ್ಳಿಗಳಿಗೆ  ಹೋಗಿ  ಅವರಿಗೆ  ಬೇಕಾದ  ತಿಂಡಿತಿನಿಸುಗಳನ್ನು  ಕೊಂಡುಕೊಳ್ಳಲಿ."  ಎಂದರು.  ಅದಕ್ಕೆ  ಯೇಸು,  "ಅವರು  ಹೋಗಬೇಕಾಗಿಲ್ಲ,  ನೀವೇ  ಅವರಿಗೆ  ಊಟಕ್ಕೆ  ಏನಾದರೂ ಕೊಡಿ," ಎಂದರು.  ಶಿಷ್ಯರು  ಪ್ರತ್ಯುತ್ತರವಾಗಿ,  "ನಮ್ಮ  ಬಳಿ  ಐದೇ  ಐದು  ರೊಟ್ಟಿ  ಮತ್ತು  ಎರಡು  ಮೀನುಗಳು. ಮಾತ್ರ  ಇವೆ," ಎಂದರು.  ಯೇಸು, "ಅವನ್ನು  ಇಲ್ಲಿಗೆ  ತನ್ನಿ,"  ಎಂದು  ಹೇಳಿ,  ಜನರೆಲ್ಲರೂ  ಹುಲ್ಲಿನ  ಮೇಲೆ  ಕುಳಿತುಕೊಳ್ಳುವಂತೆ  ಅಪ್ಪಣೆಮಾಡಿದರು.  ಬಳಿಕ  ಆ  ಐದು  ರೊಟ್ಟಿಗಳನ್ನೂ  ಎರಡು  ಮೀನುಗಳನ್ನೂ  ತೆಗೆದುಕೊಂಡು,  ಸ್ವರ್ಗದತ್ತ  ಕಣ್ಣೆತ್ತಿ  ನೋಡಿ,  ದೇವರಿಗೆ  ಸ್ತೋತ್ರ  ಸಲ್ಲಿಸಿದರು.  ತರುವಾಯ  ರೊಟ್ಟಿಗಳನ್ನು  ಮುರಿದು  ಶಿಷ್ಯರಿಗೆ  ಕೊಟ್ಟರು.  ಶಿಷ್ಯರು  ಜನರಿಗೆ  ಹಂಚಿದರು.  ಎಲ್ಲರೂ  ಹೊಟ್ಟೆ  ತುಂಬ  ತಿಂದು  ತೃಪ್ತರಾದರು.  ಉಳಿದಿದ್ದ  ತುಂಡುಗಳನ್ನು  ಒಟ್ಟುಗೂಡಿಸಿದಾಗ  ಅವು  ಹನ್ನೆರಡು  ಬುಟ್ಟಿಗಳ  ತುಂಬಾ  ಆದವು.  ಊಟಮಾಡಿದವರಲ್ಲಿ  ಹೆಂಗಸರು,  ಮಕ್ಕಳನ್ನು  ಬಿಟ್ಟರೆ,  ಗಂಡಸರೇ  ಸುಮಾರು  ಐದು  ಸಾವಿರ  ಇದ್ದರು. 

02.08.2026 - ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ

 ಮೊದಲನೇ ವಾಚನ: ಯೆಶಾಯ 55:1-3


ಎಲೈ ಬಾಯಾರಿದ ಜನರೇ, ನೀರಿನ ಬಳಿಗೆ ಬನ್ನಿ ಹಣವಿಲ್ಲದವರೇ ಬನ್ನಿ, ಅನ್ನವನ್ನು ತೆಗೆದುಕೊಂಡು ತಿನ್ನಿ. ಹಾಲನು, ದ್ರಾಕ್ಷಾರಸವನು ಕ್ರಯವಿಲ್ಲದೆ ಕೊಂಡುಕೊಳ್ಳಿ. ಆಹಾರವಲ್ಲದ್ದಕ್ಕೆ ಹಣವನು ವ್ಯಯಮಾಡುವುದೇಕೆ? ತೃಪ್ತಿ ತರದ ಪದಾರ್ಥಕ್ಕೆ ನಿಮ್ಮ ದುಡಿತದ ವೆಚ್ಚವೇಕೆ? ಕಿವಿಗೊಡಿ ನನಗೆ, ಒಳಿತನ್ನು ತಿಂದು ಆನಂದಪಡಿ ಆ ಮೃಷ್ಟಾನ್ನವನುಂಡು. ಕಿವಿಯನ್ನಿತ್ತ ತಿರುಗಿಸಿ ಬನ್ನಿ ನನ್ನ ಬಳಿಗೆ, ಬದುಕಿಬಾಳುವಿರಿ ನೀವು ಕಿವಿಗೊಟ್ಟರೆನಗೆ. ದಾವೀದನಿಗೆ ವಾಗ್ದಾನವಿತ್ತ ವರವ ಈವೆ ನಿಮಗೆ ಮಾಡಿಕೊಳ್ಳುವೆ-ಚಿರವಾದ ಒಡಂಬಡಿಕೆಯನು ನಿಮ್ಮೊಂದಿಗೆ.

ಕೀರ್ತನೆ: 145:8-9, 15-16, 17-18

ಶ್ಲೋಕ: ನೀ ಕೈನೀಡಿ ಎಲ್ಲರ ಕೋರಿಕೆಗಳನು ಈಡೇರಿಸುತ್ತಿ

ಎರಡನೇ ವಾಚನ: ರೋಮನರಿಗೆ 8:35, 37-39

ಸಹೋದರರೇ, ಕ್ರಿಸ್ತಯೇಸುವಿನ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಯಾರಿಂದ ಸಾಧ್ಯ? ಕಷ್ಟಸಂಕಟ, ಇಕ್ಕಟ್ಟು-ಬಿಕ್ಕಟ್ಟು, ಹಿಂಸೆ ಬಾಧೆ ಇವುಗಳಿಂದ ಸಾಧ್ಯವೆ? ಇಲ್ಲ, ಹಸಿವು ನೀರಡಿಕೆ, ನಗ್ನಸ್ಥಿತಿ, ಆಪತ್ತು-ವಿಪತ್ತು, ಖಡ್ಗಕಠಾರಿಗಳಿಂದ ಸಾಧ್ಯವೆ? ಎಂದಿಗೂ ಇಲ್ಲ.  ಪವಿತ್ರಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: ದಿನವಿಡೀ ನಿಮಗೋಸ್ಕರವೇ ಸಾವಿಗೀಡಾಗುತಿಹೆವು ನಾವು ವಧ್ಯಸ್ಥಾನಕ್ಕೆ ಒಯ್ದ ಕುರಿಗಳಂತೆ ಪರಿಗಣಿತರಾಗುತಿಹೆವು ನಾವು.” ನಮ್ಮನ್ನು ಪ್ರೀತಿಸಿದ ಯೇಸುಕ್ರಿಸ್ತರ ಮುಖಾಂತರ ಇವೆಲ್ಲವುಗಳಲ್ಲಿಯೂ ನಾವು ಪೂರ್ಣ ಜಯಶಾಲಿಗಳಾಗುತ್ತೇವೆ.  ಸಾವಾಗಲಿ ಜೀವವಾಗಲಿ, ದೇವದೂತರಾಗಲಿ ದುರಾತ್ಮರಾಗಲಿ, ಈಗಿನ ಸಂತತಿಗಳೇ ಆಗಲಿ, ಭವಿಷ್ಯದ ಆಗುಹೋಗುಗಳೇ ಆಗಲಿ, ಯಾವ ಶಕ್ತಿಗಳೇ ಆಗಲಿ ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ತೋರಿಬಂದ ದೈವಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲಾರವು. ಅಂತೆಯೇ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಸೃಷ್ಟಿಸಮಸ್ತಗಳಲ್ಲಿ ಯಾವುದೇ ಆಗಲಿ, ಆ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದು ನಿಶ್ಚಯ

ಶುಭಸಂದೇಶ: ಮತ್ತಾಯ 14:13-21


ಯೊವಾನ್ನನ ಮರಣದ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ದೋಣಿಹತ್ತಿ ನಿರ್ಜನಪ್ರದೇಶಕ್ಕೆ ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪುಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಹೋದರು.  ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು. ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಈಗಾಗಲೇ ಹೊತ್ತು ಮೀರಿಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿತಿನಿಸುಗಳನ್ನು ಕೊಂಡುಕೊಳ್ಳಲಿ,” ಎಂದರು.  ಅದಕ್ಕೆ ಯೇಸು, “ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ,” ಎಂದರು.  ಶಿಷ್ಯರು ಪ್ರತ್ಯುತ್ತರವಾಗಿ, “ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ,” ಎಂದರು.  ಯೇಸು, “ಅವನ್ನು ಇಲ್ಲಿಗೆ ತನ್ನಿ,” ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿದರು.  ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿನೋಡಿ, ದೇವರಿಗೆ ಸ್ತೋತ್ರಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು.  ಎಲ್ಲರೂ ಹೊಟ್ಟೆತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದುವು. ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು.

01.08.2026 - ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ

 

ಪ್ರವಾದಿ ಯೆರೆಮೀಯನ ಗ್ರಂಥ 26:11-16, 24


ಯಾಜಕರೂ ಪ್ರವಾದಿಗಳೂ, “ಇವನು ಮರಣದಂಡನೆಗೆ ಪಾತ್ರನು; ನಗರಕ್ಕೆ ಅಹಿತವಾದುದನ್ನು ನುಡಿದಿದ್ದಾನೆ. ಇದನ್ನು ನೀವೇ ಕೇಳಿದ್ದೀರಿ,” ಎಂದು ನಾಯಕರಿಗೂ ಜನರೆಲ್ಲರಿಗೂ ದೂರು ಇತ್ತರು. ಆಗ ಯೆರೆಮೀಯನು, “ನೀವು ಕೇಳಿದ ಮಾತುಗಳನ್ನೆಲ್ಲ, ಅಂದರೆ ಈ ದೇವಾಲಯಕ್ಕೂ ನಗರಕ್ಕೂ ವಿರುದ್ಧವಾದ ಮಾತುಗಳನ್ನು ನುಡಿಯಲು ನನ್ನನ್ನು ಕಳಿಸಿದವರು ಸರ್ವೇಶ್ವರನೇ. ಇದೀಗಲೇ ನೀವು ನಿಮ್ಮ ಮಾರ್ಗಗಳನ್ನೂ ನಡತೆಗಳನ್ನೂ ತಿದ್ದುಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರನ ನುಡಿಗೆ ಕಿವಿಗೊಡಿ. ಆಗ ನಿಮಗೆ ತಿಳಿಸಿದ ಕೇಡು ಒದಗದಂತೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವರು. ನಾನೋ ನಿಮ್ಮ ಕೈಯಲ್ಲಿದ್ದೇನೆ. ನಿಮಗೆ ಯಾವುದು ಒಳ್ಳೆಯದು, ಯಾವುದು ನ್ಯಾಯವಾದುದು ಎಂದು ತೋರುತ್ತದೆಯೋ ಅದನ್ನು ನನಗೆ ಮಾಡಿ. ಆದರೆ ಒಂದು ವಿಷಯ ನಿಮಗೆ ಚೆನ್ನಾಗಿ ತಿಳಿದಿರಲಿ - ನೀವು ನನ್ನನ್ನು ಕೊಂದುಹಾಕಿದ್ದೇ ಆದರೆ, ನಿರ್ದೋಷಿಯ ರಕ್ತ ಸುರಿಸಿದ ಅಪರಾಧಕ್ಕೆ ನೀವೂ ಈ ನಗರವೂ ಇದರ ನಿವಾಸಿಗಳೂ ಗುರಿಯಾಗುವಿರಿ. ಏಕೆಂದರೆ ಈ ಮಾತುಗಳನ್ನೆಲ್ಲ ನಿಮ್ಮ ಕಿವಿಗೆ ಮುಟ್ಟಿಸುವಂತೆ ನನ್ನನ್ನು ಕಳಿಸಿದವರು ಸರ್ವೇಶ್ವರ ಎಂಬುದು ಸತ್ಯ,” ಎಂದು ಹೇಳಿದನು. ಇದನ್ನು ಕೇಳಿದ ನಾಯಕರು ಮತ್ತು ಸಕಲ ಜನರು ಯಾಜಕ - ಪ್ರವಾದಿಗಳಿಗೆ, “ಇವನು ಮರಣದಂಡನೆಗೆ ಪಾತ್ರನಲ್ಲ. ಏಕೆಂದರೆ ನಮ್ಮ ದೇವರಾದ ಸರ್ವೇಶ್ವರನ ಹೆಸರಿನಲ್ಲೇ ಇದನ್ನು ನಮಗೆ ನುಡಿದಿದ್ದಾನೆ,” ಎಂದರು. ಇತ್ತ ಯಾಜಕರೂ ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ ಕೊಲ್ಲಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಯೆರೆಮೀಯನಿಗೆ ಶಾಫಾನನ ಮಗ ಅಹೀಕಾಮನ ಸಹಾಯ ದೊರಕಿತ್ತು.

ಕೀರ್ತನೆ: 69:15-16, 30-31, 33-34

ಶ್ಲೋಕ: ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ

ಶ್ಲೋಕ:  ಪ್ರೀತಿಮಯ  ದೇವಾ,  ಸದುತ್ತರ  ನೀಡೆನಗೆ.

1.  ಕಳ್ಳುಸುಬೀನಲಿ ನಾನಿಳಿದು ಹೋಗದಂತೆ ಸೆಳೆದುಕೊ|
ಪೊಳ್ಳು ದುರುಳರ ನಡುವಿನಲಿ ನಾ ಮುಳುಗದಂತೆ ಎಳೆದುಕೊ||
ಹುಚ್ಚು  ಹೊಳೆಯ ಎನ್ನ ಕೊಚ್ಚದಿರಲಯ್ಯಾ|
ಮಡುವು ಎನ್ನ ಸೆಳೆದುಕೊಳ್ಳದಿರಲಯ್ಯಾ|
ಪಾತಾಳವೆನ್ನನು ನುಂಗದಿರಲಯ್ಯಾ||
ಶ್ಲೋಕ

2.  ದೇವಾ, ನಾ ನೊಂದು  ಬೆಂದಿಹೆನಯ್ಯಾ|
ಉದ್ಧರಿಸಿ ನನ್ನನು ಕಾಪಾಡಯ್ಯಾ||
ಸಂಕೀರ್ತಿಸುವೆನು ದೇವರ ಶ್ರೀ  ನಾಮವನು|
ಕೃತಜ್ಞತೆಯಿಂದಾತನನು  ಕೊಂಡಾಡುವೆನು||
ಶ್ಲೋಕ

3.  ಇದನರಿತು ದೀನದಲಿತರು ಆನಂದಗೊಳ್ಳಲಿ|
ದೇವನನು ಅರಸುವವರು ಪುನಶ್ಚೇತನಗೊಳ್ಳಲಿ||  ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು|
ಸೆರೆಯಲ್ಲಿರುವ ತನ್ನವರನು ತಿರಸ್ಕರಿಸನು||
ಶ್ಲೋಕ

ಘೋಷಣೆ
(ಕೀರ್ತನೆ 27: 11)

ಅಲ್ಲೆಲೂಯ, ಅಲ್ಲೆಲೂಯ.
ಬೋಧಿಸೆನಗೆ  ಪ್ರಭು  ನಿನ್ನ  ಮಾರ್ಗವನು,| ಶತ್ರುರಹಿತ  ಹಾದಿಯಲಿ  ನಡೆಸು  ಎನ್ನನು||
ಅಲ್ಲೆಲೂಯ.



ಶುಭಸಂದೇಶ: ಮತ್ತಾಯ 14:1-12

ಯೇಸುಸ್ವಾಮಿಯ ಸಮಾಚಾರ ಆಗ ಗಲಿಲೇಯ ಪ್ರಾಂತ್ಯಕ್ಕೆ ಸಾಮಂತರಾಜನಾಗಿದ್ದ ಹೆರೋದನ ಕಿವಿಗೆ ಬಿದ್ದಿತು. ಅವನು ತನ್ನ ಪರಿಚಾರಕರಿಗೆ, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದ್ದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎಂದನು ಹೆರೋದನು ತನ್ನ ಸಹೋದರ ಫಿಲಿಪ್ಪನ ಧರ್ಮಪತ್ನಿಯಾದ ಹೆರೋದಿಯಳನ್ನು ಇಟ್ಟುಕೊಂಡಿದ್ದನು. ಅವಳ ಪ್ರಯುಕ್ತ ಯೊವಾನ್ನನನ್ನು ಹಿಡಿದು ಬಂಧಿಸಿ ಸೆರೆಯಲ್ಲಿ ಹಾಕಿದ್ದನು. ಏಕೆಂದರೆ ಆತನು, ‘ನಿನ್ನ ಸಹೋದರನ ಧರ್ಮಪತ್ನಿಯನ್ನು ನೀನು ಇಟ್ಟುಕೊಂಡಿರುವುದು ಅಕ್ರಮ,” ಎಂದು ಹೆರೋದನಿಗೆ ಹೇಳುತ್ತಿದ್ದನು. ಯೊವಾನ್ನನನ್ನು ಕೊಲ್ಲಿಸಬೇಕೆಂದಿದ್ದರೂ ಹೆರೋದನು ಜನರಿಗೆ ಹೆದರಿದ್ದನು. ಅವರು ಆತನನ್ನು ಪ್ರವಾದಿಯೆಂದು ಭಾವಿಸಿದ್ದರು. ಹೀಗಿರುವಲ್ಲಿ ಹೆರೋದನ ಹುಟ್ಟುಹಬ್ಬ ಬಂದಿತು. ಹೆರೋದಿಯಳ ಮಗಳು ಆಹ್ವಾನಿತರ ಮುಂದೆ ನರ್ತನಮಾಡಿ ಹೆರೋದನನ್ನು ಮೆಚ್ಚಿಸಿದಳು. ಆಗ ಅವಳು ಏನು ಕೇಳಿದರೂ ಕೊಡುವುದಾಗಿ ಅವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದನು. ಅವಳು ತನ್ನ ತಾಯಿಯ ಸಲಹೆ ಪಡೆದು, “ನನಗೆ ಸ್ನಾನಿಕ ಯೊವಾನ್ನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿಕೊಡಿ,” ಎಂದಳು. ಇದನ್ನು ಕೇಳಿ ರಾಜನಿಗೆ ವ್ಯಥೆಯಾಯಿತು. ಆದರೆ ಅತಿಥಿಗಳ ಮುಂದೆ ಮಾಡಿದ ಪ್ರಮಾಣ ಮುರಿಯಲಾಗದೆ ಅವಳ ಇಚ್ಛೆಯನ್ನು ಪೂರೈಸುವಂತೆ ಆಜ್ಞೆಮಾಡಿದನು. ಅದರಂತೆಯೇ ಆಳುಗಳನ್ನು ಕಳುಹಿಸಿ, ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿಸಿದನು;  ಅದನ್ನು ಒಂದು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಡಲಾಯಿತು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು.  ಯೊವಾನ್ನನ ಶಿಷ್ಯರು ಶವವನ್ನು ತೆಗೆದು ಕೊಂಡುಹೋಗಿ ಸಮಾಧಿಮಾಡಿದರು. ಅನಂತರ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು.

31.07.2026 - ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ಗೌರವ ದೊರಕದು

 ಮೊದಲನೇ ವಾಚನ: ಯೆರೆಮೀಯ 26:1-9


ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಯೆರೆಮೀಯನಿಗೆ ಸರ್ವೇಶ್ವರ ಸ್ವಾಮಿಯಿಂದ ಈ ಅಪ್ಪಣೆ ಆಯಿತು; “ನೀನು ನನ್ನ ದೇವಾಲಯದ ಪ್ರಾಕಾರದಲ್ಲಿ ನಿಂತು, ಆ ಮಂದಿರದಲ್ಲಿ ಆರಾಧಿಸುವುದಕ್ಕೆ ಬರುವ ಜುದೇಯದ ಎಲ್ಲ ಊರಿನವರಿಗೆ ನಾನು ಆಜ್ಞಾಪಿಸುವ ಮಾತುಗಳನ್ನೆಲ್ಲಾ ಹೇಳು, ಒಂದನ್ನೂ ಬಿಡಬೇಡ. ಬಹುಶಃ ಅವರು ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು. ಹಾಗೆ ಮಾಡಿದ್ದೇ ಆದರೆ, ಅವರ ದುಷ್ಕೃತ್ಯಗಳಿಗೆ ದಂಡನೆಯನ್ನು ವಿಧಿಸಬೇಕೆಂದಿದ್ದ ನನ್ನ ಮನಸ್ಸನ್ನು ಬದಲಾಯಿಸಿಕೊಳ್ಳುವೆನು. “ಅವರಿಗೆ ನೀನು ಹೇಳಬೇಕಾದುದು ಇದು: ‘ಸರ್ವೇಶ್ವರ ಹೀಗೆನ್ನುತ್ತಾರೆ - ನೀವು ನನಗೆ ಕಿವಿಗೊಡದೆ ಹೋದರೆ, ನಾನು ನಿಮ್ಮ ಮುಂದಿಟ್ಟಿರುವ ಧರ್ಮಶಾಸ್ತ್ರದ ಪ್ರಕಾರ ನಡೆಯದೆಹೋದರೆ, ಹಾಗು ನೀವು ಕೇಳದಿದ್ದರೂ ನಿಮ್ಮ ಬಳಿಗೆ ನಾನು ಪದೇಪದೇ ಕಳಿಸುತ್ತಾ ಬಂದಿರುವ ನನ್ನ ದಾಸರಾದ ಪ್ರವಾದಿಗಳ ಮಾತುಗಳನ್ನೂ ಆಲಿಸದೆಹೋದರೆ, 6ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.” ಯೆರೆಮೀಯನು ಸರ್ವೇಶ್ವರನ ಆಲಯದಲ್ಲಿ ಹೀಗೆ ಸಾರುವುದನ್ನು ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಕೇಳಿದರು. ಜನರಿಗೆ ತಿಳಿಸಬೇಕೆಂದು ಸರ್ವೇಶ್ವರ ಆಜ್ಞಾಪಿಸಿದ್ದನ್ನೆಲ್ಲ ಯೆರೆಮೀಯನು ನುಡಿದು ಮುಗಿಸಿದ ಮೇಲೆ ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಅವನನ್ನು ಸುತ್ತುಗಟ್ಟಿದರು. “ನಿನಗೆ ಖಂಡಿತವಾಗಿ ಮರಣದಂಡನೆಯಾಗಬೇಕು. ನೀನು ‘ಈ ದೇವಾಲಯಕ್ಕೆ ಶಿಲೋವಿನ ಗತಿ ಬರುವುದು, ಈ ನಗರ ಪಾಳುಬಿದ್ದು ನಿರ್ಜನ ಪ್ರದೇಶವಾಗುವುದು,’ ಎಂದು ಸರ್ವೇಶ್ವರನ ಹೆಸರೆತ್ತಿ ಪ್ರವಾದನೆ ಮಾಡಿದ್ದೇಕೆ?” ಎಂದು ಕೂಗಾಡಿದರು. ಆಲಯದಲ್ಲಿದ್ದ ಯೆರೆಮೀಯನನ್ನು ಜನರ ಗುಂಪು ಮುತ್ತಿಕೊಂಡಿತು.

ಕೀರ್ತನೆ: 69:6, 8-10, 14

ಶ್ಲೋಕ: ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ

1.  ತಲೆಕೂದಲಿಗಿಂತ  ಮಿಗಿಲಿಹರು  ನಿಷ್ಕಾರಣ ದ್ವೇಷಿಗಳು|
ಬಲಿಷ್ಟರಿಹರು  ನನ್ನ  ಕೊಲೆಗಡುಕರು,  ನಿರ್ನಿಮಿತ್ತ  ಶತ್ರುಗಳು||
ಕಳ್ಳ  ನಾನಲ್ಲವಾದರೂ  ದಂಡಕೋರುತಿಹರು  ವೈರಿಗಳು||
ಶ್ಲೋಕ

2.  ನಿನಗಾಗಿಯೇ  ನಾ  ಪ್ರಭೂ,  ನಿದೆಗೊಳಗಾದೆನಯ್ಯಾ|
ನಾಚಿಕೆಯಿಂದಲೇ  ಮುಖ  ಮುಚ್ಚಿಕೊಂಡೆನಯ್ಯಾ||
ನನ್ನವರಿಗೇ  ನಾನನ್ಯನಾದೆನಯ್ಯಾ|
ಒಡಹುಟ್ಟಿದವರಿಗೇ  ಹೊರಗಿನವನಾದೆನಯ್ಯಾ||
ಶ್ಲೋಕ

3.  ಅಗ್ನಿಯಂತೆನ್ನ  ದಹಿಸುತ್ತಿದೆ  ನಿನ್ನಾಲಯದಭಿಮಾನ|
ಎನ್ನ  ಮೇಲೆರಗಿದೆ  ನಿನ್ನ  ಕಡುದ್ರೋಹಿಗಳ  ದೂಷಣ||ಪ್ರಸನ್ನಕಾಲದಲಿ  ಪ್ರಭೂ,  ನಾ  ಮೊರೆಯಿಡುತ್ತಿರುವೆ  ನಿನಗೆ|
ಪ್ರೀತಿಮಯ  ದೇವಾ, ಜೀವೋದ್ಧಾರಕಾ,  ಸದುತ್ತರ  ನೀಡೆನಗೆ||
ಶ್ಲೋಕ 

ಘೋಷಣೆ
(ಕೀರ್ತನೆ 19: 8)

ಅಲ್ಲೆಲೂಯ, ಅಲ್ಲೆಲೂಯ.
ಪ್ರಭುವಿನ  ನಿಯಮ  ನೀತಿಬದ್ದ; ಮನಸ್ಸಿಗದು  ಗ್ರಹಿಕೆ  |  ಪ್ರಭುವಿನ  ಕಟ್ಟಳೆ  ಪರಿಶುದ್ಧ;  ಕಣ್ಣಿಗದು  ದೀವಿಗೆ||
ಅಲ್ಲೆಲೂಯ.




ಶುಭಸಂದೇಶ: ಮತ್ತಾಯ13:54-58


ಯೇಸು ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾ ಮಂದಿರದಲ್ಲಿ ಬೋಧನೆಮಾಡಿದರು. ಅದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, “ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು? ಈ ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ? ಇವನು ಆ ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು?” ಎಂದು ಮಾತಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು.ಅವರಿಗೆ ಯೇಸು, “ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ಗೌರವ ದೊರಕದು,” ಎಂದು ಹೇಳಿದರು. ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ.

30.07.2026 - ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನು ಬಲೆಗೆ ಹೋಲಿಸಬಹುದು

 ಮೊದಲನೇ ವಾಚನ: ಯೆರೆಮೀಯ 18:1-6


ಸರ್ವೇಶ್ವರ ಸ್ವಾಮಿ ನನಗೆ : “ನೀನೆದ್ದು ಕುಂಬಾರನ ಮನೆಗೆ ಇಳಿದುಹೋಗು, ಅಲ್ಲೇ ನನ್ನ ನುಡಿಯನ್ನು ನಿನಗೆ ಕೇಳಮಾಡುತ್ತೇನೆ,” ಎಂದು ತಿಳಿಸಿದರು. ಅಂತೆಯೇ ನಾನು ಕುಂಬಾರನ ಮನೆಗೆ ಹೋದೆ. ಅಲ್ಲಿ ಆ ಕುಂಬಾರನು ತಿರುಗುತ್ತಿದ್ದ ಚಕ್ರದ ಮೇಲೆ ಕೆಲಸ ಮಾಡುತ್ತಿದ್ದ. ಅವನು ಜೇಡಿ ಮಣ್ಣಿನಿಂದ ಮಾಡುತ್ತಿದ್ದ ಒಂದು ಪಾತ್ರೆ ಕೆಟ್ಟುಹೋಗುತ್ತಿದ್ದಾಗಲೆಲ್ಲ ಅದನ್ನು ಮತ್ತೆ ತನಗೆ ಸರಿತೋಚಿದ ಹಾಗೆ ಹೊಸ ಪಾತ್ರೆಯನ್ನಾಗಿ ಮಾಡುತ್ತಿದ್ದ. ಆಗ ಸರ್ವೇಶ್ವರ ನನಗೆ ಅನುಗ್ರಹಿಸಿದ ಸಂದೇಶ : “ಇಸ್ರಯೇಲಿನ ವಂಶಜರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಕೂಡದೇ? ಇಸ್ರಯೇಲಿನ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ ಹಾಗೆಯೇ ನೀವು ನನ್ನ ಕೈಯಲ್ಲಿ ಇದ್ದೀರಿ. 

ಕೀರ್ತನೆ:146:1-2, 2-4, 5-6

ಶ್ಲೋಕ: ಇಸ್ರಯೇಲ ಕುಲದೇವರು ಯಾರಿಗೆ ಉದ್ದಾರಕನೋ ಅವನೇ ಧನ್ಯನು



ಕೀರ್ತನೆ
146: 1-6. v.5

ಶ್ಲೋಕ:  ಇಸ್ರಯೇಲ  ಕುಲದೇವರು  ಯಾರಿಗೆ  ಉದ್ಧಾರಕನೋ  ಅವನೇ  ಧನ್ಯನು.

1.  ಮನವೇ,  ವಂದಿಸು  ಪ್ರಭುವನು|
ಪ್ರಾಣವಿರುವವರೆಗೆ  ಸ್ತುತಿಸುವೆನು  ಪ್ರಭುವನು|
ಬಾಳೆಲ್ಲ  ಹಾಡಿ  ಭಜಿಪೆನು  ನನ್ನ  ದೇವರನು||
ಶ್ಲೋಕ

2.  ನಂಬಬೇಡ  ಅಧಿಕಾರಿಯನು,  ನೆಚ್ಚಬೇಡ  ನರಮಾನವನನು|
ಉದ್ಧರಿಸಲು  ಅಸಮರ್ಥನವನು||
ಉಸಿರು  ಹೋದುದೇ  ಮರಳುತ್ತಾನವನು  ಮಣ್ಣಿಗೆ|  ಅಂದೇ  ಅಳಿಯುತ್ತದೆ  ಅವನೆಲ್ಲಾ ಯೋಜನೆ||
ಶ್ಲೋಕ

3.  ಇಸ್ರಯೇಲ  ಕುಲದೇವರು  ಯಾರಿಗೆ  ಉದ್ಧಾರಕನೋ  ಅವನೇ  ಧನ್ಯನು|
ಪ್ರಭುವನು  ತನ್ನ  ದೇವರೆಂದು  ಯಾರು  ನಂಬಿಹನೋ  ಅವನೇ  ಧನ್ಯನು||
ಭೂಮ್ಯಾಕಾಶ,  ಸಾಗರ,  ಚರಾಚರಗಳು   ನಿರ್ಮಿಸಿದವ  ಆತನೇ|
ಕೊಟ್ಟ  ವಾಗ್ದಾನಗಳನು  ತಪ್ಪದೆ  ನೆರವೇರಿಸುವವ  ಆತನೇ||
ಶ್ಲೋಕ


ಘೋಷಣೆ
(111: 7, 8)

ಅಲ್ಲೆಲೂಯ, ಅಲ್ಲೆಲೂಯ.
ಸುಸ್ಥಿರವಾದವು  ಪ್ರಭುವಿನ  ನಿಯಮ  ನಿಬಂಧನೆಗಳು,| ಯುಗಯುಗಾಂತರಕೂ  ದೃಢವಾಗಿರುವುವು ||
ಅಲ್ಲೆಲೂಯ.


ಶುಭಸಂದೇಶ: ಮತ್ತಾಯ 3:47-53


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: “ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನು ಬಲೆಗೆ ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ. ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ. ಕಾಲಾಂತ್ಯದಲ್ಲಿ ಇದರಂತೆಯೇ ಆಗುವುದು; ದೇವದೂತರು ಹೊರಟುಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಅವರು ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡುವರು.” “ಇದೆಲ್ಲ ನಿಮಗೆ ಅರ್ಥವಾಯಿತೇ?” ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು “ಅರ್ಥವಾಯಿತು” ಎಂದರು. ಆಗ ಯೇಸು, “ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ,” ಎಂದರು. ಈ ಸಾಮತಿಗಳನ್ನು ಹೇಳಿಯಾದ ಮೇಲೆ ಯೇಸುಸ್ವಾಮಿ ಅಲ್ಲಿಂದ ಹೊರಟುಹೋದರು.

29.07.2026 - ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತು ರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು


 

ಮೊದಲನೇ ವಾಚನ: ಯೆರೆಮೀಯ15:10, 16-21 



ಯೆರೆಮೀಯನು ಈ ಪರಿ ತನ್ನ ಶೋಕವನ್ನು ನಿವೇದಿಸಿಕೊಂಡನು: “ನನ್ನ ಹೆತ್ತ ತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ. ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ? ವಿನೋದಗಾರರ ಕೂಟದಲ್ಲಿ ಭಾಗವಹಿಸಿ ನಾನು ಉಲ್ಲಾಸಪಟ್ಟವನಲ್ಲ. ನಿಮ್ಮ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾದೆ. ಕೋಪಾವೇಶದಿಂದ ತುಂಬಿದವನಾದೆ. ನನಗೇಕೆ ನಿರಂತರವಾದ ವೇದನೆ? ಗುಣವಾಗದ ಗಡಸು ಗಾಯ? ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ?” ಅದಕ್ಕೆ ಸರ್ವೇಶ್ವರ : “ನೀನು ನನಗೆ ಅಭಿಮುಖನಾಗಿ ಹಿಂದಿರುಗಿ ಬಂದರೆ ಮರಳಿ ನಿನ್ನನ್ನು ನನ್ನ ಸೇವೆಗೆ ಸೇರಿಸಿಕೊಳ್ಳುವೆನು. ತುಚ್ಛವಾದುದನ್ನು ತೊರೆದು ಅಮೂಲ್ಯವಾದುದನ್ನು ಉಚ್ಚರಿಸುವೆಯಾದರೆ ನೀನು ನನ್ನ ಬಾಯಂತಿರುವೆ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು. ನೀನು ಅವರ ಕಡೆಗೆ ತಿರುಗದಿರುವೆ. ನಾನು ನಿನ್ನನ್ನು ಆ ಜನರಿಗೆ ದುರ್ಗಮವಾದ ಕಂಚಿನ ಪೌಳಿಗೋಡೆಯನ್ನಾಗಿಸುವೆನು. ನಿನಗೆ ವಿರುದ್ಧ ಅವರು ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗದು. ನಿನ್ನ ನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಸರ್ವೇಶ್ವರನಾದ ನನ್ನ ಮಾತು. ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಕ್ರೂರಿಗಳ ಕೈಯಿಂದ ರಕ್ಷಿಸುವೆನು.”

ಕೀರ್ತನೆ
59: 1-4, 9-11, 16-17. v.16

ಶ್ಲೋಕ:  ದೇವಾ,  ಸಂಕಟದಲ್ಲೆನಗಾದ  ಆಶ್ರಯಗಿರಿ  ನೀನು.

1.  ಶತ್ರುಗಳಿಂದ  ದೇವಾ  ತಪ್ಪಿಸು,|
ಎದುರಾಳಿಗಳಿಂದೆನ್ನ  ರಕ್ಷಿಸು||
ಕೇಡಿಗರಿಂದೆನ್ನ  ಬಿಡಿಸು,|
ಕೊಲೆಪಾತಕರಿಂದ  ಉಳಿಸು||
ಶ್ಲೋಕ

2.  ಇಗೋ  ನನ್ನ   ಪ್ರಾಣಕ್ಕವರು  ಹೂಡಿರುವ   ಹೊಂಚು|
ನನ್ನ  ಮೇಲೆರೆಗಲು  ಹೂಡಿರುವ  ಕ್ರೂರಿಗಳ  ಸಂಚು ||
ನಿದಪರಾಧಿ,  ನಿರ್ದೋಷಿ  ನಾನಾದರೂ|
ಮೇಲೆ  ಬೀಳಲಿದೋ  ಸಜ್ಜುಗೊಂಡಿಹರು||
ಶ್ಲೋಕ

3.  ನನ್ನ  ಶಕ್ತಿಯೇ,  ನಿನಗಾಗಿ  ನಾ  ಕಾದಿರುವೆ|
ನನ್ನಶ್ರಯ  ದುರ್ಗ  ದೇವಾ,  ನೀನೇ  ಅಲ್ಲವೇ?|
ಪ್ರೀತಿಯಿಂದ  ನೆರವಾಗುವನು  ದೇವನೆನಗೆ||
ಶ್ಲೋಕ

4.  ನಾನಾದರೋ  ಹೊಗಳಿ  ಹಾಡುವೆ  ದೇವಾ,  ನಿನ್ನ  ಸಾಮರ್ಥ್ಯವನು|
ಉದಯಕಾಲದಲೆ  ನಾ  ಸಂಕೀರ್ತಿಸುವೆ  ನಿನ್ನ  ಪ್ರೀತಿ ಪ್ರೇಮವನು||
ಸಂಕಟದಲ್ಲೆನಗಾದ  ಆಶ್ರಯಗಿರಿ,  ದುರ್ಗ  ನೀನಲ್ಲವೇನು?||
ನೀನೆನ್ನ  ಶಕ್ತಿ  ದೇವಾ.,  ನಿನಗೆನ್ನ  ಸ್ತುತಿ|  ನೀನೆನ್ನ  ದುರ್ಗ,  ತೋರಿಸು  ಎನಗೆ  ಪ್ರೀತಿ||
ಶ್ಲೋಕ

ಘೋಷಣೆ     ಕೀರ್ತನೆ 95: 8

ಅಲ್ಲೆಲೂಯ, ಅಲ್ಲೆಲೂಯ.
ಆತನ  ಕರೆಗೆ  ಕಿವಿಗೊಟ್ಟರೆನಿತೋ  ಒಳಿತು  ನೀವಿಂದೇ, |  ಕಲ್ಲಾಗಿಸಿಕೊಳ್ಳದಿರಿ  ಹೃದಯವನು  ನಿಮ್ಮ  ಪೂರ್ವಜರಂತೆ||
ಅಲ್ಲೆಲೂಯ

ಶುಭಸಂದೇಶ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 13:  44-46


ಆ  ಕಾಲದಲ್ಲಿ  ಯೇಸು  ಇನ್ನೊಂದು ಸಾಮತಿಯನ್ನು  ಹೇಳಿದರು:  "ಸ್ವರ್ಗಸಾಮ್ರಾಜ್ಯವನ್ನು  ಹೊಲದಲ್ಲಿ  ಹೂಳಿಟ್ಟ  ನಿಧಿಗೆ  ಹೋಲಿಸಬಹುದು.  ಇದನ್ನು  ಒಬ್ಬನು  ಪತ್ತೆ  ಹಚ್ಚಿ  ಅಲ್ಲಿಯೇ  ಮುಚ್ಚಿಡುತ್ತಾನೆ.  ತನಗಾದ  ಸಂತೋಷದಿಂದ  ಹೋಗಿ  ತನಗೆ  ಇದ್ದುದೆಲ್ಲವನ್ನೂ  ಮಾರಿ  ಈ  ಹೊಲವನ್ನೇ  ಕೊಂಡುಬಿಡುತ್ತಾನೆ.  ಸ್ವರ್ಗಸಾಮ್ರಾಜ್ಯವನ್ನು  ಉತ್ತಮವಾದ  ಮುತ್ತು  ರತ್ನಗಳನ್ನು  ಹುಡುಕಿಕೊಂಡು  ಹೋಗುವ  ವರ್ತಕನಿಗೂ  ಹೋಲಿಸಬಹುದು.  ಅನಘ್ಗೃವಾದ  ಒಂದು  ಮುತ್ತನ್ನು  ಕಂಡ  ಕೂಡಲೆ  ವರ್ತಕ  ತನ್ನ  ಆಸ್ತಿಪಾಸ್ತಿಯನ್ನೆಲ್ಲಾ  ಮಾರಿ  ಆ  ಮುತ್ತನ್ನು  ಕೊಂಡುಕೊಳ್ಳುತ್ತಾನೆ." 

28.07.26 - "ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಹಾಕಿದಂತೆ ಕಾಲಾಂತ್ಯದಲ್ಲೂ ನಡೆಯುವುದು"

 ಮೊದಲನೇ ವಾಚನ: ಯೆರೆಮೀಯ: 14:17-22  



ಸರ್ವೇಶ್ವರ ಯೆರೆಮೀಯನಿಗೆ ಈ ಮಾತುಗಳನ್ನು ಹೇಳಿದರು: “ನೀನು ನಿನ್ನ ದುಃಖವನ್ನು ಅವರಿಗೆ ಹೀಗೆಂದು ವ್ಯಕ್ತಪಡಿಸು - ‘ರಾತ್ರಿ ಹಗಲು ನನ್ನ ಕಣ್ಣೀರು ಸುರಿಯಲಿ ನಿರಂತರವಾಗಿ ಏಕೆಂದರೆ ನನ್ನ ಜನವೆಂಬ ಯುವತಿ ಗಾಯಗೊಂಡಿದ್ದಾಳೆ ತೀವ್ರವಾಗಿ, ಹೌದು, ಅವಳಿಗೆ ಪೆಟ್ಟುಬಿದ್ದಿದೆ ಗಡುಸಾಗಿ. ಊರುಬಿಟ್ಟು ಹೊರಗೆ ಹೋದರೆ ಅಲ್ಲಿ ಕಾಣಿಸುತ್ತಾರೆ ಖಡ್ಗದಿಂದ ಸತ್ತವರು. ಊರ ಒಳಗೆ ಬಂದರೆ ಅಲ್ಲಿ ಕಾಣಿಸುತ್ತಾರೆ ಕ್ಷಾಮದಿಂದ ನರಳುವವರು. ಅಪರಿಚಿತನಾಡಿಗೆ ಗಡೀಪಾರಾಗಿದ್ದಾರೆ ಪ್ರವಾದಿಗಳು ಮತ್ತು ಯಾಜಕರು’.” “ಸ್ವಾಮೀ, ನೀವು ಜುದೇಯವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿರೊ? ಸಿಯೋನಿನ ಬಗ್ಗೆ ನಿಮಗೆ ಮನಃಪೂರ್ವಕವಾದ ಅಸಹ್ಯ ಹುಟ್ಟಿದೆಯೊ? ಗುಣವಾಗದಂಥ ಪೆಟ್ಟನ್ನು ನಮಗೆ ಕೊಟ್ಟಿರುವಿರಿ ಏಕೆ? ಸುಖವನ್ನು ನಿರೀಕ್ಷಿಸಿದೆವು, ಸಿಗಲಿಲ್ಲ ನಮಗೆ ಯಾವ ಫಲ. ಸುಕ್ಷೇಮವನ್ನು ಎದುರು ನೋಡಿದೆವು, ಇಗೋ ಬಂದೊದಗಿದೆ ಸಂಕಟ. ಹೇ ಸರ್ವೇಶ್ವರಾ, ಒಪ್ಪಿಕೊಂಡಿದ್ದೇವೆ ನಮ್ಮ ದುಷ್ಟತನವನ್ನು ನಮ್ಮ ಪೂರ್ವಜರು ಎಸಗಿದ ದುರಾಚಾರವನ್ನು ನಾವು ಮಾಡಿದ ಪಾಪ ನಿಮಗೆ ವಿರುದ್ಧವೆಂಬುದನ್ನು. ನಿಮ್ಮ ನಾಮವನ್ನು ಮುಂದಿಟ್ಟು, ನಮಗೆ ಅವಮಾನ ಮಾಡಬೇಡಿ ನಿಮ್ಮ ಮಹಿಮೆಯ ಸಿಂಹಾಸನವನ್ನು ಅಸಡ್ಡೆ ಮಾಡಬೇಡಿ ನಮ್ಮೊಡನೆ ಮಾಡಿದ ಒಡಂಬಡಿಕೆಯನ್ನು ನೆನೆಯಿರಿ. ಅದನ್ನು ಭಂಗಪಡಿಸಬೇಡಿ. ಅನ್ಯಜನಾಂಗಗಳ ಶೂನ್ಯದೇವತೆಗಳಲ್ಲಿ ಮಳೆಸುರಿಸಬಲ್ಲವರುಂಟೆ? ಆಕಾಶವು ತಾನಾಗಿ ಹದಮಳೆಯನ್ನು ಬರಮಾಡಬಲ್ಲುದೆ? ನಮ್ಮ ದೇವರಾದ ಸರ್ವೇಶ್ವರಾ, ವೃಷ್ಟಿದಾತರು ನೀವೇ ನಾವು ನಿರೀಕ್ಷಿಸುತ್ತಿರುವುದು ನಿಮ್ಮನ್ನೇ ಹೌದು, ಇವುಗಳನ್ನೆಲ್ಲ ನಡೆಸುವವರು ನೀವೇ.

ಕೀರ್ತನೆ: 79:8, 9, 11, 13

ಶ್ಲೋಕ: ದೇವಾ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ

ಶುಭಸಂದೇಶ: ಮತ್ತಾಯ13:36-43


ಯೇಸುಸ್ವಾಮಿ ಜನರನ್ನು ಬೀಳ್ಕೊಟ್ಟು ಮನೆಗೆ ಬಂದರು. ಶಿಷ್ಯರು ಅವರ ಬಳಿಗೆ ಬಂದು, “ಹೊಲದಲ್ಲಿ ಬಿತ್ತಲಾದ ಕಳೆಗಳ ಸಾಮತಿಯನ್ನು ನಮಗೆ ವಿವರಿಸಿರಿ,” ಎಂದು ಕೇಳಿಕೊಂಡರು. ಅದಕ್ಕೆ ಯೇಸು, “ಒಳ್ಳೆಯ ಗೋದಿಯನ್ನು ಬಿತ್ತುವವನು ಎಂದರೆ ನರಪುತ್ರನು; ಹೊಲವೇ ಈ ಲೋಕ; ಒಳ್ಳೆಯ ಕಾಳುಗಳೇ ಶ್ರೀಸಾಮ್ರಾಜ್ಯದ ಮಕ್ಕಳು; ಕಳೆಗಳೇ ಕೇಡಿಗನ ಮಕ್ಕಳು. ಆ ಕಳೆಗಳನ್ನು ಬಿತ್ತಿದ ವೈರಿಯೇ ಪಿಶಾಚಿ. ಸುಗ್ಗಿಯೇ ಕಾಲಾಂತ್ಯ. ಕೊಯ್ಲುಗಾರರೇ ದೇವದೂತರು. ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಹಾಕಿದಂತೆ ಕಾಲಾಂತ್ಯದಲ್ಲೂ ನಡೆಯುವುದು. ನರಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದಿಂದ ಪಾಪಕ್ಕೆ ಕಾರಣವಾದುದೆಲ್ಲವನ್ನೂ ಮತ್ತು ದುಷ್ಕರ್ಮಿಗಳೆಲ್ಲರನ್ನೂ ಒಟ್ಟುಗೂಡಿಸಿ ಅಗ್ನಿಕುಂಡದಲ್ಲಿ ಹಾಕುವರು; ಅಲ್ಲಿ ಅವರು ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡುವರು. ಸದ್ಧರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಿಸಿಕೊಳ್ಳಲಿ!

27.07.2026 - ಸ್ವರ್ಗಸಾಮ್ರಾಜ್ಯ ಒಂದು ಸಾಸಿವೆ ಕಾಳನ್ನು ಹೋಲುತ್ತದೆ

 ಪ್ರವಾದಿ ಯೆರೇಮಿಯನ ಗ್ರಂಥದಿಂದ ವಾಚನ 13: 1-11



ಸರ್ವೇಶ್ವರಸ್ವಾಮಿ ನನಗೆ : “ನೀನು ಹೋಗಿ ನಾರಿನ ನಡುಕಟ್ಟೊಂದನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೋ. ಅದನ್ನು ನೀರಿನಲ್ಲಿ ನೆನಸಬೇಡ,’’ ಎಂದು ಅಪ್ಪಣೆಕೊಟ್ಟರು. ನಾನು ಅವರ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆ. ಆಮೇಲೆ, ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು ಯೂಫ್ರೆಟಸ್ ನದಿಗೆ ಹೋಗು. ಅದನ್ನು ಅಲ್ಲಿಯ ಬಂಡೆಯ ಸಂಧಿನೊಳಗೆ ಬಚ್ಚಿಡು,’’ ಎಂಬುದಾಗಿ ಸರ್ವೇಶ್ವರಸ್ವಾಮಿಯ ಎರಡನೆಯ ಆದೇಶ ನನಗೆ ಬಂದಿತು. ಅವರ ಅಪ್ಪಣೆಯ ಮೇರೆಗೆ ನಾನು ಹೋಗಿ ಯೂಫ್ರೆಟಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆ. ಬಹು ದಿನಗಳ ಮೇಲೆ ಸರ್ವೇಶ್ವರ ನನಗೆ, ಹೊರಡು, ಯೂಫ್ರೆಟಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,’’ ಎಂದು ಹೇಳಿದರು. ಆಗ ನಾನು ಯೂಫ್ರೆಟಿಸ್ ನದಿಗೆ ಹೋಗಿ ಹುಡುಕಿ ನಾನು ಬಚ್ಚಿಟ್ಟ ಸ್ಥಳದಿಂದ ಆ ನಡುಕಟ್ಟನ್ನು ತೆಗೆದೆ. ಆದರೆ ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು. ಆಗ ಸರ್ವೇಶ್ವರ ನನಗೆ ದಯಪಾಲಿಸಿದ ವಾಕ್ಯವೇನೆಂದರೆ : ಇದು ಸರ್ವೇಶ್ವರನಾದ ನನ್ನ ನುಡಿ, ಈ ಪ್ರಕಾರವಾಗಿಯೇ ನಾನು ಜುದೇಯದ ದೊಡ್ಡಸ್ತಿಕೆಯನ್ನು ಹಾಗು ಜೆರುಸಲೇಮಿನ ಘನವಾದ ದೊಡ್ಡಸ್ತಿಕೆಯನ್ನು ತೆಗೆದುಬಿಡುವೆನು. ಈ ದುಷ್ಟ ಜನರು ನನ್ನ ಮಾತುಗಳನ್ನು ಕೇಳಲೊಲ್ಲರು. ತಮ್ಮ ಹೃದಯದ ಒರಟುತನದಂತೆ ನಡೆದುಬಿಡುತ್ತಿದ್ದಾರೆ. ಅನ್ಯದೇವತೆಗಳನ್ನು ಹಿಂಬಾಲಿಸಿ, ಪೂಜಿಸುತ್ತಿದ್ದಾರೆ. ಇವರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಾಟಿಯಾಗುವರು. ಇಸ್ರಯೇಲ್ ವಂಶವೆಲ್ಲವು ಹಾಗೂ ಜುದೇಯ ವಂಶವೆಲ್ಲವು ನನಗೆ ಪ್ರಜೆಯಾಗಿರಲಿ; ನನಗೆ ಕೀರ್ತಿ, ಗೌರವ ತರಲಿ, ನನಗೆ ಆಭರಣವಾಗಿರಲಿ ಎಂದುಕೊಂಡೆ. ನಡುಕಟ್ಟನ್ನು ಸೊಂಟಕ್ಕೆ ಬಿಗಿದುಕೊಳ್ಳುವಂತೆ ಇವರನ್ನು ಬಿಗಿದುಕೊಂಡಿದ್ದೆ. ಆದರೂ ಇವರು ನನನಗೆ ಕಿವಿಗೊಡದೆ ಹೋದರು. ಇದು ಸರ್ವೇಶ್ವರನಾದ ನನ್ನ ನುಡಿ.’’

ಕೀರ್ತನೆ 32 : 18-21

ಶ್ಲೋಕ  : ಜನ್ಮವಿತ್ತ ದೇವರನ್ನು ನೀವು ಸ್ಮರಿಸಲಿಲ್ಲ |

1.  ಎಲೈ ಇಸ್ರಯೇಲರೇ, ಮರೆತಿರಾ ಜನ್ಮವಿತ್ತ ಪೊರೆಬಂಡೆಯನು?| 
ಸ್ಮರಿಸಲಿಲ್ಲ ನೀವು ಹೆತ್ತ ತಾಯಂತಿದ್ದಾ ದೇವರನು||
ಇದಕಂಡು ಸರ್ವೇಶ್ವರ ಬೇಸರಗೊಂಡ|
ತನ್ನ ಆ ಕುವರ ಕುವರಿಯರ ನಡತೆಯ ನೋಡಿ ನೊಂದುಕೊಂಡ||
ಶ್ಲೋಕ

2.  ಎಂದೇ ಇಂತೆಂದುಕೊಂಡನು: ಇವರಿಗೆ ವಿಮುಖನಾಗುವೆನು|
ಇವರಿಗೊದಗಲಿರುವ ಗತಿಯನು ನೋಡುವೆನು||
ಸತ್ಯವರಿತೂ ಅನುಸರಿಸದೆ ಹೋದರು|
ಈ ವಿದ್ರೋಹ ಮಕ್ಕಳಂತವರು||
ಶ್ಲೋಕ

3.  ರೇಗಿಸಿದರೆನ್ನನು ದೇವರಲ್ಲದವರ ಮೂಲಕ|
ಸಿಟ್ಟೇರಿಸಿದರು ಅಚೇತ ವಿಗ್ರಹಗಳ ಮೂಲಕ||
ನಾನವರಲಿ ಅಸೂಯೆ ಹುಟ್ಟಿಸುವೆನು ಜನಾಂಗವಲ್ಲದವರ ಮುಖಾಂತರ|
ನಾನವರನು ಸಿಟ್ಟಿಗೆಬ್ಬಿಸುವೆನು ಸಭ್ಯರಲ್ಲದ ಆ ಜನರ ಮುಖಾಂತರ||
ಶ್ಲೋಕ


ಘೋಷಣೆ
(ಕೀರ್ತನೆ 145: 14)

ಅಲ್ಲೆಲೂಯ, ಅಲ್ಲೆಲೂಯ.
ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು | ನಡೆಯಲಿ ಆತನು ಸದಾ ಪ್ರೀತಿಮಯನು ||
ಅಲ್ಲೆಲೂಯ.


ಸಂತ ಮತ್ತಾಯ ಬರೆದ ಶುಭಸಂದೇಶದಿಂದ ವಾಚನ 13: 31-35


ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು
: “ಸ್ವರ್ಗಸಾಮ್ರಾಜ್ಯ ಒಂದು ಸಾಸಿವೆ ಕಾಳನ್ನು ಹೋಲುತ್ತದೆ; ಈ ಕಾಳನ್ನು ತೆಗೆದುಕೊಂಡು ಹೋಗಿ ರೈತ ತನ್ನ ಹೊಲದಲ್ಲಿ ಬಿತ್ತಿದ. ಕಾಳುಗಳಲ್ಲಿ ಅತಿ ಸಣ್ಣದಾದ ಇದನ್ನು ಬಿತ್ತಿದಾಗ ಎಲ್ಲ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆದು ಮರವಾಗುತ್ತದೆ. ಅಕಾಶದಲ್ಲಿ ಹಾರಾಡುವ ಹಕ್ಕಿಗಳು ಬಂದು ಇದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಿಸುತ್ತವೆ.’’ ಯೇಸುಸ್ವಾಮಿ ಮತ್ತೊಂದು ಸಾಮತಿಯನ್ನು ಜನರಿಗೆ ಹೇಳಿದರು : ಸ್ವರ್ಗಸಾಮ್ರಾಜ್ಯ ಹುದುಗೆಬ್ಬಿಸುವ ಹುಳಿಯನ್ನು ಹೋಲುತ್ತದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು.’’ ಇದೆಲ್ಲವನ್ನೂ ಯೇಸುಸ್ವಾಮಿ ಜನರಿಗೆ ಸಾಮತಿಗಳ ರೂಪದಲ್ಲಿ ಹೇಳಿದರು. ಸಾಮತಿಗಳಿಲ್ಲದೆ ಅವರಿಗೆ ಏನನ್ನೂ ಬೋಧಿಸಲಿಲ್ಲ. ಸಾಮತಿಗಳಲ್ಲೇ ಬೋಧಿಸುವೆನು; ಲೋಕಾದಿಯಿಂದ ರಹಸ್ಯವಾದವುಗಳನ್ನು ಬಯಲುಗೊಳಿಸುವೆನು,’’ ಎಂದು ದೇವರು ಪ್ರವಾದಿಯ ಮುಖಾಂತರ ತಿಳಿಸಿದ್ದ ಪ್ರವಚನವನ್ನು ಯೇಸು ಹೀಗೆ ನೆರವೇರಿಸಿದರು

26.07.2026 - ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು

 ಮೊದಲನೇ ವಾಚನ: ಅರಸರು 3:5, 7-12



ದೇವರಾದ ಸರ್ವೇಶ್ವರ ಆ ರಾತ್ರಿ ಗಿಬ್ಯೋನಿನಲ್ಲಿ ಸೊಲೊಮೋನನಿಗೆ ಕನಸಿನಲ್ಲಿ ಕಾಣಿಸಿಕೊಂಡು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು. ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು. ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ. ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು. ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು. ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ. ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ. ಇದಲ್ಲದೆ, ನೀನು ಕೇಳಿದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನವಾದ ಅರಸನು ಇನ್ನೊಬ್ಬನಿರುವುದಿಲ್ಲ. ನೀನು ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು ನನ್ನ ಆಜ್ಞಾವಿಧಿಗಳನ್ನು ಕೈಗೊಳ್ಳುವುದಾದರೆ ನಿನ್ನ ಆಯುಷ್ಯವನ್ನೂ ಹೆಚ್ಚಿಸುವೆನು,” ಎಂದರು. ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಕನಸೆಂದು ತಿಳಿದುಕೊಂಡನು. ಅವನು ಜೆರುಸಲೇಮಿಗೆ ಬಂದನಂತರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿ, ತನ್ನ ಎಲ್ಲಾ ಪರಿವಾರದವರಿಗೆ ಔತಣವನ್ನು ಏರ್ಪಡಿಸಿದನು.

ಕೀರ್ತನೆ: 119:57, 72, 76-77, 127-128, 129-130

ಶ್ಲೋಕ:  ನಿನ್ನ ಧರ್ಮಶಾಸ್ತ್ರ ಪ್ರಭೂ, ನನಗೆ ಪರಮ ಪ್ರಿಯ.

1.  ಹೇ ಪ್ರಭೂ, ನೀನೇ ನನ್ನ ಪಾಲಿನ ಸ್ವಾಸ್ತ್ಯ|
ನಿನ್ನ ವಾಕ್ಯದ ಪಾಲನೆಯೇ ನಾ ಗೈದ ನಿರ್ಣಯ||
ಸಾವಿರಾರು ಚಿನ್ನ ಬೆಳ್ಳಿ ನಾಣ್ಯಗಳಿಗಿಂತ|
ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ ಉಚಿತ||
ಶ್ಲೋಕ

2.  ನಿನ್ನ ದಾಸನಿಗೆ ನೀನು ನುಡಿದ ಪ್ರಕಾರ|
ಸಾಂತ್ವನ ನೀಡಲಿ ಎನಗೆ ನಿನ್ನಚಲ ಪ್ರೀತಿ||
ನಾ ಬದಕುವಂತೆ ತೋರೆನಗೆ ನಿನ್ನ ದಯ|
ನಿನ್ನ ಧರ್ಮಶಾಸ್ತ್ರ ನನಗೆ ಪರಮ ಪ್ರಿಯ||
ಶ್ಲೋಕ

3.  ಚಿನ್ನ ಅಪರಂಜಿಗಿಂತಲೂ ಪ್ರಿಯ| ನಿನ್ನ ಆಜ್ಞೆಗಳು ನನಗೆ ಸುಪ್ರಿಯ||
ನ್ಯಾಯವಾಗಿವೆ ನಿನ್ನ ನಿಯಮಗಳೆಲ್ಲ|
ನನಗೆ ಹಗೆ ಮಿಥ್ಯ ಮಾರ್ಗಗಳೆಲ್ಲ||
ಶ್ಲೋಕ

4.  ಅಪೂರ್ವವಾದ ನಿನ್ನ ಕಟ್ಟಳೆಗಳನು|
ಹೃತ್ಪೂರ್ವಕವಾಗಿ ನಾ ಪಾಲಿಪೆನು||
ತರುವುದು ನಿನ್ನ ವಾಕ್ಯೋಪದೇಶ|
ಸರಳ ಜನರಿಗೆ ಜ್ಞಾನ ಪ್ರಕಾಶ||
ಶ್ಲೋಕ

ಎರಡನೇ ವಾಚನ: ರೋಮನರಿಗೆ 8:28-30


ದೇವರನ್ನು ಪ್ರೀತಿಸುವವರಿಗೂ ದೇವರ ಸಂಕಲ್ಪದ ಮೇರೆಗೆ ಕರೆಹೊಂದಿದವರಿಗೂ ಸಕಲವೂ ಹಿತಕರವಾಗಿ ಪರಿಣಮಿಸುವುದು.ಇದನ್ನು ನಾವು ಚೆನ್ನಾಗಿ ಅರಿತಿದ್ದೇವೆ.ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡರೋಅವರನ್ನು ತಮ್ಮ ಪುತ್ರನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದರು. ಹೀಗೆ ಅನೇಕ ಸಹೋದರರಲ್ಲಿ ತಮ್ಮ ಪುತ್ರನೇ ಜೇಷ್ಠನಾಗಿರಬೇಕೆಂಬುದು ದೇವರ ನಿರ್ಧಾರವಾಗಿದೆ. ಹೀಗೆ ಯಾರನ್ನು ಮೊದಲೇ ನೇಮಿಸಿದ್ದರೋ ಅವರನ್ನು ಕರೆದಿದ್ದಾರೆ. ಯಾರನ್ನು ಕರೆದಿದ್ದಾರೋ ಅವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೆ. ಯಾರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೋ ಅವರನ್ನು ಮಹಿಮಾಪದವಿಗೆ ಸೇರಿಸಿಕೊಂಡಿದ್ದಾರೆ.

ಶುಭಸಂದೇಶ: ಮತ್ತಾಯ 13:44-52



“ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು. ಇದನ್ನು ಒಬ್ಬನು ಪತ್ತೆಹಚ್ಚಿ ಅಲ್ಲಿಯೇ ಮುಚ್ಚಿಡುತ್ತಾನೆ. ತನಗಾದ ಸಂತೋಷದಿಂದ ಹೋಗಿ ತನಗೆ ಇದ್ದು ಬದ್ದುದೆಲ್ಲವನ್ನೂ ಮಾರಿ ಈ ಹೊಲವನ್ನೇ ಕೊಂಡುಕೊಂಡುಬಿಡುತ್ತಾನೆ. “ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತುರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು. ಅನರ್ಘ್ಯವಾದ ಒಂದು ಮುತ್ತನ್ನು ಕಂಡ ಕೂಡಲೆ ವರ್ತಕ ತನ್ನ ಆಸ್ತಿಪಾಸ್ತಿಯನ್ನು ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ. “ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನು ಬಲೆಗೆ ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ. ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ.  ಕಾಲಾಂತ್ಯದಲ್ಲಿ ಇದರಂತೆಯೇ ಆಗುವುದು; ದೇವದೂತರು ಹೊರಟು ಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು.  ಅಲ್ಲಿ ಅವರು ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡುವರು.” “ಇದೆಲ್ಲ ನಿಮಗೆ ಅರ್ಥವಾಯಿತೇ?” ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು “ಅರ್ಥವಾಯಿತು” ಎಂದರು. ಆಗ ಯೇಸು, “ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ,” ಎಂದರು.

25.07.2026 - ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ತಮ್ಮ ಎಡಗಡೆಯಲ್ಲೂ ಆಸೀನರಾಗುವಂತೆ ಅಪ್ಪಣೆಯಾಗಬೇಕು

 ಮೊದಲನೇ ವಾಚನ: 2 ಕೊರಿಂಥಿಯರಿಗೆ 4:7-15


ಸಹೋದರರೇ, ನಾವು ಇಂಥ ಆಧ್ಯಾತ್ಮಿಕ ಮಾಣಿಕ್ಯವನ್ನು ಪಡೆದಿದ್ದರೂ ಮಣ್ಣಿನ ಮಡಕೆಗಳಂತೆ ಇದ್ದೇವೆ. ಹೀಗೆ, ಈ ಪರಮೋನ್ನತ ಶಕ್ತಿ ನಮಗೆ ಸೇರಿದ್ದಲ್ಲ. ದೇವರಿಗೆ ಸೇರಿದ್ದೆಂದು ವ್ಯಕ್ತವಾಗುತ್ತದೆ. ನಾವು ಇಕ್ಕಟ್ಟುಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನಜ್ಜುಗುಜ್ಜಾಗಲಿಲ್ಲ; ಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲ.ಶತ್ರುಗಳು ಅನೇಕರಿದ್ದರೂ ಮಿತ್ರನೊಬ್ಬನು ಇಲ್ಲದಿರಲಿಲ್ಲ. ಪ್ರಾಣ ಹಿಂಸೆಗಳಿಗೀಡಾಗಿದ್ದರೂ ಪ್ರಾಣನಷ್ಟವನ್ನು ಅನುಭವಿಸಲಿಲ್ಲ. ಯೇಸುವಿನ ದಿವ್ಯಜೀವವು ನಮ್ಮ ದೇಹದಲ್ಲಿ ಗೋಚರವಾಗುವಂತೆ ಅವರ ಮರಣಯಾತನೆಯನ್ನು ನಿರಂತರವಾಗಿ ಅನುಭವಿಸುತ್ತಾ ಬಾಳುತ್ತಿದ್ದೇವೆ. ಯೇಸುವಿನ ಅಮರ ಜೀವವು ನಮ್ಮ ನಶ್ವರ ಶರೀರದಲ್ಲಿ ಗೋಚರವಾಗುವಂತೆ ಬದುಕಿರುವಾಗಲೇ ನಾವು ಯೇಸುವಿಗೋಸ್ಕರ ಸತತ ಸಾವಿಗೆ ಈಡಾಗಿದ್ದೇವೆ. ಹೀಗೆ ನಮ್ಮಲ್ಲಿ ಸಾವು ಕಾರ್ಯಗತವಾಗುತ್ತಿದ್ದರೆ ನಿಮ್ಮಲ್ಲಿ ಜೀವ ಕಾರ್ಯಗತವಾಗುತ್ತಿದೆ. “ನಾನು ವಿಶ್ವಾಸವಿಟ್ಟೆನು. ಆದ್ದರಿಂದ ಮಾತನಾಡಿದೆನು,” ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ. ಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇಬೇಕು. ಏಕೆಂದರೆ ನಮಗೆ ವಿಶ್ವಾಸವಿದೆ. ಪ್ರಭು ಯೇಸುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ಥಾನಗೊಳಿಸಿ ತಮ್ಮ ಸಾನ್ನಿಧ್ಯಕ್ಕೆ ಬರಮಾಡಿಕೊಳ್ಳುವರು ಎಂಬುದನ್ನು ನಾವು ಬಲ್ಲೆವು. ಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರು. ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ. ಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದು; ಅವರಲ್ಲಿ ಕೃತಜ್ಞತಾಭಾವನೆಯನ್ನು ಹೆಚ್ಚಿಸುವುದು; ಇದರಿಂದಾಗಿ ದೇವರ ಮಹಿಮೆ ಬೆಳಗುವುದು.

ಕೀರ್ತನೆ: 126:1-2, 2-3, 4-5, 6

ಶ್ಲೋಕ:  ಅಳುತಳುತಾ  ಬಿತ್ತುವವರು  ನಲಿನಲಿಯುತಾ  ಕೊಯ್ಯುವರು.

1.  ಸೆರೆಯಿಂದೆಮ್ಮನು ಪ್ರಭು ಸಿಯೋನಿಗೆ ಮರಳಿಸಿದಾಗ|
ಅದೊಂದು ಕನಸು ಕಂಡಂತಿತ್ತು ನಮಗೆ ಅವಾಗ|
ಉಕ್ಕಿತಾಗ ಮುಖ ತುಂಬ ನಗು, ಬಾಯ್ತುಂಬ ಹರ್ಷಗೀತೆ||
ಶ್ಲೋಕ

2.  ಎಂಥ ಮಹತ್ಕಾರ್ಯವೆಸಗಿದನಾ ಪ್ರಭು ಇವರ  ಪರತೆ|
ಇಂತೆಂದು ಆಡಿಕೊಂಡರು ತಂತಮ್ಮೊಳಗೆ ಅನ್ಯ ಜನತೆ||
ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ|
ಎಂತಲೆ ನಾವಾನಂದಭರಿತರಾಗುವುದು ಉಚಿತ||
ಶ್ಲೋಕ

3.  ಬತ್ತಿದ ನದಿಯಲಿ ನೀರು ಮರಳಿ ಉಕ್ಕಿ ಹರಿವಂತೆ|
ನೀಡು ಸಿರಿ ಸೌಭಾಗ್ಯ, ಹೇ ಪ್ರಭೂ, ನಮಗೆ ಮತ್ತೆ|
ಅಳುತಳುತಾ ಬಿತ್ತುವವರು ನಲಿನಲಿಯುತಾ ಕೊಯ್ಯುವರು||
ದುಃಖಿಸುತಾ ಬೀಜ ಬಿತ್ತಲು ಹೋದವನು|
ಹರ್ಷಿಸುತಾ ಕೊಯ್ದು ತರುವನು ತೆನೆಗಳನು||
ಶ್ಲೋಕ

ಘೋಷಣೆ
(ಯೊವಾನ್ನ 15:16)

ಅಲ್ಲೆಲೂಯ, ಅಲ್ಲೆಲೂಯ!
ನಾನೇ  ನಿಮ್ಮನ್ನು  ಆರಿಸಿಕೊಂಡಿದ್ದೇನೆ,  ನೀವು  ಲೋಕಕ್ಕೆ  ಹೋಗಬೇಕು  ಸಫಲರಾಗಬೇಕು | ಆ  ಫಲ  ಶಾತ್ವತವಾಗಿರಬೇಕೆಂದೇ  ನಿಮ್ಮನ್ನು  ನೇಮಿಸಿದ್ದೇನೆ ||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ: 20:20-28


ಜೆಬೆದಾಯನ ಮಕ್ಕಳ ತಾಯಿ ಪುತ್ರರ ಸಮೇತ ಯೇಸುಸ್ವಾಮಿಯ ಬಳಿಗೆ ಬಂದಳು. “ತಮ್ಮಿಂದ ನನಗೊಂದು ಉಪಕಾರ ಆಗಬೇಕು,” ಎಂದು ಸ್ವಾಮಿಯ ಪಾದಕ್ಕೆರಗಿದಳು. “ನಿನ್ನ ಕೋರಿಕೆ ಏನು?” ಎಂದರು ಯೇಸು. ಅದಕ್ಕೆ ಅವಳು, “ತಮ್ಮ ಸಾಮ್ರಾಜ್ಯದಲ್ಲಿ, ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ತಮ್ಮ ಎಡಗಡೆಯಲ್ಲೂ ಆಸೀನರಾಗುವಂತೆ ಅಪ್ಪಣೆಯಾಗಬೇಕು,” ಎಂದು ಕೋರಿದಳು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಬೇಕಾದ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೆ?” ಎಂದು ಪ್ರಶ್ನಿಸಿದರು. “ಹೌದು, ಆಗುತ್ತದೆ,” ಎಂದು ಅವರು ಮರುನುಡಿದರು. ಆಗ ಯೇಸು, “ನನ್ನ ಪಾತ್ರೆಯಿಂದ ನೀವೇನೋ ಕುಡಿಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ನನ್ನ ಪಿತನಿಂದ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು," ಎಂದು ನುಡಿದರು. ಉಳಿದ ಹತ್ತುಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು. ಯೇಸುವಾದರೋ, ಶಿಷ್ಯರೆಲ್ಲರನ್ನೂ ತಮ್ಮ ಬಳಿಗೆ ಕರೆದು, “ಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನ್ನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನಮಾಡುತ್ತಾರೆ. ಇದು ನಿಮಗೆ ಗೊತ್ತು. ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿ. ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿ. ಹಾಗೆಯೇ ನರಪುತ್ರನು ಸೇವೆಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ,” ಎಂದು ಹೇಳಿದರು.

24.07.2026 - ಇನ್ನೊಬ್ಬನು ವಾಕ್ಯವನ್ನು ಕೇಳುತ್ತಾನೆ, ಗ್ರಹಿಸಿಕೊಳ್ಳುತ್ತಾನೆ; ಫಲಪ್ರದನಾಗಿ ನೂರರಷ್ಟು, ಅರವತ್ತರಷ್ಟು, ಮೂವತ್ತರಷ್ಟು ಫಲ ಕೊಡುತ್ತಾನೆ.

 ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ 3:14-17



ಇದು ಕರ್ತರ ನುಡಿ: “ಭ್ರಷ್ಟರಾದ ಜನರೇ, ನನಗೆ ಅಭಿಮುಖರಾಗಿರಿ, ನಾನು ನಿಮಗೆ ಅಧಿಪತಿ. ನಿಮ್ಮಲ್ಲಿ ಒಂದು ಪಟ್ಟಣಕ್ಕೆ ಒಬ್ಬನಂತೆ, ಗೋತ್ರಕ್ಕೆ ಇಬ್ಬರಂತೆ ಆರಿಸಿ ಸಿಯೋನಿಗೆ ಕರೆತರುವೆನು. ಇದಲ್ಲದೆ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ಕೊಡುವೆನು. ಅವರು ನಿಮ್ಮನ್ನು ಜ್ಞಾನವಿವೇಕಗಳಿಂದ ಪೋಷಿಸುವರು. ನೀವು ನಾಡಿನಲ್ಲಿ ಹೆಚ್ಚಿ ಅಭಿವೃದ್ಧಿಯಾದಾಗ, ‘ಸರ್ವೇಶ್ವರನ ಒಡಂಬಡಿಕೆಯ ಮಂಜೂಷವೆಲ್ಲಿ?’ ಎಂದು ಪ್ರಸ್ತಾಪಿಸುವಂತಿಲ್ಲ. ಅದು ಜ್ಞಾಪಕಕ್ಕೆ ಬರುವುದಿಲ್ಲ, ಯಾರೂ ಅದನ್ನು ಸ್ಮರಿಸುವುದಿಲ್ಲ. ಅದು ಇಲ್ಲವಲ್ಲಾ ಎಂದು ದುಃಖಿಸುವುದಿಲ್ಲ. ಹೊಸದೊಂದನ್ನು ಕಲ್ಪಿಸಿಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ. ಆ ಕಾಲ ಬಂದಾಗ ಜೆರುಸಲೇಮನ್ನೇ ‘ಸರ್ವೇಶ್ವರನ ಸಿಂಹಾಸನ’ ಎಂದು ಕರೆಯುವರು. ನನ್ನ ನಾಮಮಹತ್ವದ ಸ್ಥಾನವಾದ ಜೆರುಸಲೇಮಿಗೆ ಸಕಲ ರಾಷ್ಟ್ರಗಳವರು ನೆರೆದುಬರುವರು. ಆಮೇಲೆ ತಮ್ಮ ದುಷ್ಟಹೃದಯದ ನಿಮಿತ್ತ ಹಟಮಾರಿಗಳಂತೆ ನಡೆಯಲಾರರು.

ಕೀರ್ತನೆ
ಯೆರೆಮೀಯ 31: 10, 11-12, 13, v.10

ಶ್ಲೋಕ:  ಪ್ರಭು  ನಮ್ಮನ್ನು  ಕಾಪಾಡುವರು.

1.  ರಾಷ್ಟ್ರಗಳೇ, ಸರ್ವೇಶ್ವರನ  ವಾಕ್ಯವನ್ನು  ಕೇಳಿರಿ:  ದೂರದ  ದ್ವೀಪಗಳಲ್ಲೂ  
ಅದನ್ನು  ಸಾರಿರಿ:ಇಸ್ರಾಯೇಲರನ್ನು  ಚದುರಿಸಿದಾತ 
ಕುರಿಮಂದೆಯನ್ನು  ಕಾಯುವ  ಕುರುಬನಂತೆ  ಅವರನ್ನು  ಕೂಡಿಸಿ  
ಕಾಪಾಡುವನೆಂದು  ಪ್ರಕಟಿಸಿರಿ.
ಶ್ಲೋಕ

2.  ಸರ್ವೇಶ್ವರ  ಯಕೋಬರ  ವಿಮೋಚಕ  ಅವರನ್ನು  
ಅವರಿಗಿಂತ  ಬಲಿಷ್ಠರ  ಕೈಯಿಂದ  ಬಿಡಿಸಿದಾತ.
ಅವರು  ಬಂದು  ಹಾಡುವರು  ಸಿಯೋನ್  ಶಿಖರದಲ್ಲಿ  
ಬರುವರು  ಪ್ರವಾಹ  ಪ್ರವಾಹವಾಗಿ 
ಧಾನ್ಯ,  ದ್ರಾಕ್ಷಾರಸ,  ಎಣ್ಣೆ, ಕುರಿ, ಕುರಿಮರಿ,  ಸರ್ವೇಶ್ವರನ  
ಈ  ವರದಾನಗಳನ್ನು  ಅನುಭವಿಸಲಿಕ್ಕಾಗಿ.
ಶ್ಲೋಕ

3.  ಆಗ  ನಾಟ್ಯವಾಡಿ  ನಲಿವಳು  ಯುವತಿ 
ಹರ್ಷಿಸುವರು  ಯುವಕರು  ಮುದುಕರು  ಜೊತೆಯಾಗಿ.
ಅವರ  ದುಃಖವನ್ನು  ಸಂತೋಷವಾಗಿಸುವೆನು 
ವ್ಯಸನ  ತೊರೆದು  ಆನಂದಿಸುವಂತೆ  ಅವರನ್ನು  ಸಂತೈಸುವೆನು.
ಶ್ಲೋಕ

ಘೋಷಣೆ
(ಕೀರ್ತನೆ 130: 5)

ಅಲ್ಲೆಲೂಯ, ಅಲ್ಲೆಲೂಯ.
ಪ್ರಭುವಿಗಾಗಿ  ಎನ್ನ  ಮನ  ಕಾದಿದೆ,| ಆತನ  ವಾಕ್ಯದಲಿ  ನಂಬಿಕೆ  ನನಗಿದೆ||
ಅಲ್ಲೆಲೂಯ.

ಶುಭಸಂದೇಶ: ಮತ್ತಾಯ 13:18-23


ಯೇಸುಸ್ವಾಮಿ ತಮ್ಮ ಶಿಷ್ಯರನ್ನುದ್ದೇಶಿಸಿ, “ಈಗ ಬಿತ್ತುವವನ ಸಾಮತಿಯ ಅರ್ಥವನ್ನು ಕೇಳಿ: ಒಬ್ಬನು ಶ್ರೀಸಾಮ್ರಾಜ್ಯದ ಸಂದೇಶವನ್ನು ಕೇಳಿ ಅದನ್ನು ಗ್ರಹಿಸದೆ ಹೋದರೆ, ಕೇಡಿಗನು ಬಂದು ಅವನ ಹೃದಯದಲ್ಲಿ ಬಿತ್ತಿದ್ದ ಬೀಜವನ್ನು ತೆಗೆದೆಸೆಯುತ್ತಾನೆ. ಇವನು ಕಾಲ್ದಾರಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಬೇರೊಬ್ಬನು ಈ ಸಂದೇಶವನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ. ಆದರೆ ಅದು ತನ್ನಲ್ಲಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಇದ್ದು, ಸಂದೇಶದ ನಿಮಿತ್ತ ಕಷ್ಟಕೋಟಲೆಗಳು ಬಂದೊದಗಿದಾಗ ಕೂಡಲೇ ಎಡವಿಬೀಳುತ್ತಾನೆ. ಇವನು ಕಲ್ಲು ನೆಲದ ಮೇಲೆ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ಸಂದೇಶವನ್ನೇನೋ ಕೇಳುತ್ತಾನೆ, ಆದರೆ ಪ್ರಾಪಂಚಿಕ ಚಿಂತನೆಗಳು, ಐಶ್ವರ್ಯದ ವ್ಯಾಮೋಹಗಳು ಆ ಸಂದೇಶವನ್ನು ಫಲಬಿಡದಂತೆ ಅದುಮಿಬಿಡುತ್ತವೆ; ಇವನು ಮುಳ್ಳುಪೊದೆಗಳಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ವಾಕ್ಯವನ್ನು ಕೇಳುತ್ತಾನೆ, ಗ್ರಹಿಸಿಕೊಳ್ಳುತ್ತಾನೆ; ಫಲಪ್ರದನಾಗಿ ನೂರರಷ್ಟು, ಅರವತ್ತರಷ್ಟು, ಮೂವತ್ತರಷ್ಟು ಫಲಕೊಡುತ್ತಾನೆ. ಇವನು ಹದವಾದ ಭೂಮಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ,” ಎಂದರು.

23.07.2026 - ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ, ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು

 ಮೊದಲನೇ ವಾಚನ: ಯೆರೆಮೀಯ 2:1-3, 7-8, 12-13 


ಸರ್ವೇಶ್ವರ ಸ್ವಾಮಿ ನನಗೆ ನೀಡಿದ ಆದೇಶ ಇದು : “ನೀನು ಹೋಗಿ ಜೆರುಸಲೇಮ್ ನಗರಕ್ಕೇ ಕೇಳಿಸುವಂತೆ ಈ ಸಂದೇಶವನ್ನು ಸಾರು: ನೀನು ಯೌವನದಲ್ಲಿ ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು, ನವ ವಧುವಾಗಿ ನನಗೆ ತೋರಿಸಿದ ಪ್ರೇಮವನ್ನು, ಹಾಗು ಬಿತ್ತನೆಯಿಲ್ಲದ ಅರಣ್ಯಮಾರ್ಗವಾಗಿ ನನ್ನನ್ನು ಹಿಂಬಾಲಿಸಿದಾಗ ಅನುಸರಿಸುತ್ತಿದ್ದ ನಿನ್ನ ಪಾತಿವ್ರತ್ಯವನ್ನು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ; ಇದು ನಿನ್ನ ಹಿತಕ್ಕಾಗಿಯೇ. “ಎಲೈ ಇಸ್ರಯೇಲ್, ನೀನು ನನಗೆ ಮೀಸಲಾದವಳು, ನನ್ನ ಬೆಳೆಯ ಪ್ರಥಮ ಫಲ. ಯಾರು ಯಾರು ಅದನ್ನು ತಿಂದರೋ ಅವರು ದ್ರೋಹಿಗಳು, ಕೇಡಿಗೆ ಗುರಿಯಾದವರು, ಎನ್ನುತ್ತಾರೆ ಸರ್ವೇಶ್ವರ.” ನಾನು ನಿಮ್ಮನ್ನು ಫಲವತ್ತಾದ ನಾಡಿಗೆ ಕರೆತಂದೆ. ಅದರ ಫಲವನ್ನೂ ಸಾರವನ್ನೂ ಅನುಭವಿಸುವ ಹಾಗೆ ಮಾಡಿದೆ. ಆದರೆ ನೀವು ಒಳನುಗ್ಗಿ ಬಂದು ಆ ನನ್ನ ನಾಡನ್ನು ಹೊಲೆಮಾಡಿದಿರಿ; ಆ ನನ್ನ ಸೊತ್ತನ್ನು ಅಸಹ್ಯಪಡಿಸಿದಿರಿ. ಯಾಜಕರು, ‘ಸರ್ವೇಶ್ವರ ಸ್ವಾಮಿ ಎಲ್ಲಿ? ಎಂದು ವಿಚಾರಿಸಲೇ ಇಲ್ಲ. ಧರ್ಮಶಾಸ್ತ್ರಿಗಳು ನನ್ನನ್ನು ಅರಿತುಕೊಳ್ಳಲಿಲ್ಲ. ಪ್ರಜಾಪಾಲಕರು ನನಗೆ ದ್ರೋಹಮಾಡಿದರು. ಪ್ರವಾದಿಗಳು ಬಾಳ್ ದೇವತೆಯ ಆವೇಶದಿಂದ ಪ್ರವಾದನೆ ಮಾಡಿದರು. ನಿರರ್ಥಕವಾದುವುಗಳನ್ನು ಪೂಜಿಸಿದರು.’ ಆಕಾಶ ಮಂಡಲವೇ, ಇದನ್ನು ಕೇಳಿ ನಿಬ್ಬೆರಗಾಗು; ತತ್ತರಿಸಿ ಹಾಳಾಗು!” ಇದು ಸರ್ವೇಶ್ವರ ಸ್ವಾಮಿಯ ವಾಣಿ. “ನನ್ನ ಜನರು ಇಬ್ಬಗೆಯ ಅಪರಾಧಗಳನ್ನು ಎಸಗಿದ್ದಾರೆ; ಜೀವಜಲದ ಬುಗ್ಗೆಯಾದ ನನ್ನನ್ನೇ ತೊರೆದುಬಿಟ್ಟಿದ್ದಾರೆ! ತೊಟ್ಟಿಗಳನ್ನು, ನೀರುನಿಲ್ಲದ ಬಿರುಕು ತೊಟ್ಟಿಗಳನ್ನು ತಮಗಾಗಿ ಕೊರೆದುಕೊಂಡಿದ್ದಾರೆ!”

ಕೀರ್ತನೆ: 36:6-7, 8-9, 10-11
ಶ್ಲೋಕ: ಪ್ರಭೂ, ನಿನ್ನಲ್ಲಿದೆ ಜೀವದ ಬುಗ್ಗೆ

ಶುಭಸಂದೇಶ: ಮತ್ತಾಯ 13:10-17

ತರುವಾಯ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ನೀವು ಜನರೊಡನೆ ಮಾತನಾಡುವಾಗ ಸಾಮತಿಗಳನ್ನು ಉಪಯೋಗಿಸುತ್ತೀರಿ, ಏಕೆ?” ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸ್ವರ್ಗಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶ ಲಭಿಸಿರುವುದು ನಿಮಗೆ, ಅವರಿಗಲ್ಲ. ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ. ಅವರೊಡನೆ ಸಾಮತಿ ರೂಪದಲ್ಲಿ ಮಾತನಾಡುವುದಕ್ಕೆ ಕಾರಣ ಇದು: ಅವರು ಕಣ್ಣಾರೆ ನೋಡಿದರೂ ಕಾಣುವುದಿಲ್ಲ; ಕಿವಿಯಾರೆ ಕೇಳಿದರೂ ಕಿವಿಗೊಡುವುದಿಲ್ಲ; ಗ್ರಹಿಸುವುದೂ ಇಲ್ಲ. ಪ್ರವಾದಿ ಯೆಶಾಯನ ಈ ಪ್ರವಚನ ಅವರಲ್ಲಿ ಈಡೇರುತ್ತದೆ. ‘ಕೇಳಿ ಕೇಳಿಯೂ ಗ್ರಹಿಸರು ನೋಡಿ ನೋಡಿಯೂ ಕಾಣರು ಈ ಜನರ ಹೃದಯ ಕಲ್ಲಾಗಿದೆ ಕಿವಿ ಮಂದವಾಗಿದೆ ಕಣ್ಣು ಮಬ್ಬಾಗಿದೆ. ಇಲ್ಲದಿದ್ದರೆ ಇವರ ಕಣ್ಣು ಕಾಣುತ್ತಾ ಕಿವಿ ಕೇಳುತ್ತಾ ಹೃದಯ ಗ್ರಹಿಸುತ್ತಾ ನನ್ನತ್ತ ತಿರುಗುತ್ತಿದ್ದರು; ದೇವರಾದ ನಾನಿವರನು ಸ್ವಸ್ಥಪಡಿಸುತ್ತಿದ್ದೆನು.’ “ನೀವಾದರೋ ಭಾಗ್ಯವಂತರು. ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ. ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ, ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು. ಆದರೆ ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂಬುದು ನಿಮಗೆ ತಿಳಿದಿರಲಿ."ಎಂದರು.

22.07.2026 - ನಾನು ಪ್ರಭುವನ್ನು ಕಂಡೆ: ಅವರು ಹೀಗೆಲ್ಲಾ ಹೇಳಿದರು

 

ಮೊದಲನೇ ವಾಚನ: ಪರಮಗೀತೆ  3:1-4 

ನಲ್ಲೆ: ನನ್ನ ಪ್ರಾಣಕಾಂತನನ್ನು ರಾತ್ರಿಯೆಲ್ಲಾ ಹುಡುಕಿದೆ ಹಾಸಿಗೆಯ ಮೇಲೆ ಹಾತೊರೆದೆ, ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ ಎದ್ದು ಊರೆಲ್ಲಾ  ಅಲೆದಾಡಿದೆ ಬೀದಿಗಳಲ್ಲಿ, ಚೌಕಗಳಲ್ಲಿ ಹುಡುಕಾಡಿದೆ ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ. ಊರಲ್ಲಿ ತಿರುಗುವ ಪಹರೆಯವರ ಕೈಗೆ ಸಿಕ್ಕಿಬಿದ್ದ "ನನ್ನ ಪ್ರಾಣಕಾಂತನನ್ನು ಕಂಡಿರಾ?"  ಎಂದು ವಿಚಾರಿಸಿದೆ; ಅವರನ್ನು ಬಿಟ್ಟು ತುಸು ಹೊತ್ತಿನಲ್ಲೇ ನನ್ನ ಪ್ರಾಣಕಾಂತನನ್ನು ಕಂಡುಕೊಂಡೆ. ತಾಯಿಯ ಮನೆಗೆ ಕರೆದೊಯ್ದೆ ಕೈಯ ಬಿಡದೆಯೆ ಕರೆದುಕೊಂಡು ಹೋದೆ.


ಅಥವಾ

ಪರ್ಯಾಯ  ವಾಚನ: 2,ಕೊರಿಂಥಿಯರಿಗೆ 5:14-17

ಸಹೋದರರೇ,  ಯೇಸು  ಕ್ರಿಸ್ತರ  ಪ್ರೀತಿಯ  ಪಾಲನೆಗೆ  ನಾವು  ಒಳಗಾಗಿದ್ದೇವೆ.  ಎಲ್ಲಾ  ಮಾನವರಿಗೋಸ್ಕರ  ಒಬ್ಬನು  ಮರಣಹೊಂದಿದನು.  ಆದ್ದರಿಂದ  ನಾವೆಲ್ಲರೂ  ಆ  ಮರಣದಲ್ಲಿ  ಪಾಲುಗಾರರು.  ಸರ್ವರಿಗಾಗಿ ಯೇಸು ಪ್ರಾಣತ್ಯಾಗ  ಮಾಡಿದರು.  ಪರಿಣಾಮವಾಗಿ,  ಇನ್ನು   ಮುಂದೆ   ಜೀವಿಸುವವರು   ತಮಗಾಗಿ  ಜೀವಿಸದೆ,  ಸತ್ತು  ಪುನರುತ್ಥಾನರಾದ  ಯೇಸುವಿಗಾಗಿ  ಜೀವಿಸಬೇಕು.  ಇನ್ನು  ಮುಂದೆ  ನಾವು  ಯಾರನ್ನೂ  ಕೇವಲ  ಮಾನವ  ದೃಷ್ಟಿಯಿಂದ  ಪರಿಗಣಿಸುವುದಿಲ್ಲ.  ಒಂದು  ಕಾಲದಲ್ಲಿ,  ಕ್ರಿಸ್ತ  ಯೇಸುವನ್ನು  ನಾವು  ಹಾಗೆ  ಪರಿಗಣಿಸಿದ್ದುಂಟು.  ಆದರೆ  ಇನ್ನು  ಮುಂದೆ  ಹಾಗೆ  ಮಾಡುವುದಿಲ್ಲ.  ಯಾರಾದರೂ  ಯೇಸು  ಕ್ರಿಸ್ತರೊಡನೆ  ಒಂದಾದರೆ ಅವನು  ನೂತನ  ಸೃಷ್ಟಿಯಾಗುತ್ತಾನೆ.  ಹಳೆಯದೆಲ್ಲಾ  ಅಳಿದುಹೋಗುತ್ತದೆ.  ಹೊಸದಿದೋ,  ಜನ್ಮ  ತಳೆದಿದೆ.

ಕೀರ್ತನೆ: 63:2, 3-4, 5-6, 8-9
ಶ್ಲೋಕ: ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ

ದೇವಾ, ನೀಯೆನ್ನ ದೇವ, ನಿನಗಾಗಿ ನಾ ಕಾದಿರುವೆ
ನಿರ್ಜಲ ಮರುಭೂಮಿಯಲಿ ನೀರಿಗಾಗಿ ಹಾತೊರೆವಂತೆ
ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ.

ನಿನ್ನ ಮಂದಿರದಲಿ ನನಗಾದ ದರ್ಶನದಲಿ
ನಿನ್ನ ಶಕ್ತಿ ಪ್ರತಿಭೆಯನು ಕಂಡಿರುವೆನಲ್ಲಿ
ಪ್ರಾಣಕ್ಕಿಂತ ಮಿಗಿಲಾದುದು ನಿನ್ನಚಲ ಪ್ರೀತಿ
ಎಡೆಬಿಡದೆ ಮಾಳ್ಪುದು ನನ್ನೀ ತುಟಿ ನಿನ್ನ ಸ್ತುತಿ.

ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ
ಕೈ ಮುಗಿವೆ ನಿನ್ನ ನಾಮದ ಸ್ಮರಣಾರ್ಥ
ಮೃಷ್ಟಾನ್ನ ತಿಂದಂತೆ ಎನ್ನ ಮನ ಸಂತೃಪ್ತ
ಸಂಭ್ರಮದಿಂದ ನಿನ್ನ ಹೊಗಳುವುದು ಬಾಯ್ತುಂಬ.

ನನಗೆ ನೀನು ನಿರಂತರದ ಸಹಾಯಕ
ನಿನ್ನ ರೆಕ್ಕೆಗಳಡಿ ನಾ ಸುಖಿ ಗಾಯಕ
ನನ್ನಾತ್ಮ ನಿನಗಾತುಕೊಂಡಿದೆ
ನಿನ್ನ ಬಲಗೈ ನನಗಿಂಬಾಗಿದೆ.

ಶುಭಸಂದೇಶ: ಯೊವಾನ್ನ  20:1-2, 11-18


ಅಂದು ಭಾನುವಾರ, ಮುಂಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದಳು. ಸಮಾಧಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿಂದ ತೆಗೆದು ಹಾಕಿರುವುದನ್ನು ಕಂಡಳು. ಆಗ ಆಕೆ ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿ ಬಂದು, "ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದಾರೋ ಗೊತ್ತಿಲ್ಲ," ಎಂದು ಹೇಳಿದಳು. ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತ ವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನು ಅಲ್ಲಿ ಕಂಡಳು. ಯೇಸುವಿನ ಪಾರ್ಥಿವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತ್ತಿದ್ದರು. ಅವರು ಆಕೆಯನ್ನು, "ಏಕಮ್ಮಾ ಅಳುತ್ತಿರುವೆ?" ಎಂದು ಕೇಳಿದರು. "ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿ ಬಿಟ್ಟಿದಾರೆ. ಎಲ್ಲಿ ಇಟ್ಟಿದ್ದಾರೋ ತಿಳಿಯದು," ಎಂದಳು.  ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ. ಯೇಸು, "ಏಕಮ್ಮಾ ಅಳುತ್ತಿರುವೆ? ಏನನ್ನು ಹುಡುಕುತ್ತಿರುವೆ?" ಎಂದು ಕೇಳಿದಾಗಲೂ ಮರಿಯಳು ಅವರು ತೋಟಗಾರನೆಂದು ಭಾವಿಸಿ, "ಅಯ್ಯಾ, ನೀವೇನಾದರೂ ಅವರನ್ನು ಕೊಂಡೊಯ್ದಿದ್ದರೆ ಎಲ್ಲಿಟ್ಟಿರುವಿರಿ, ಹೇಳಿ; ನಾನು ತೆಗೆದುಕೊಂಡು ಹೋಗುತ್ತೇನೆ," ಎಂದು ಹೇಳಿದಳು. ಆಗ ಯೇಸು, "ಮರಿಯಾ" ಎಂದು ಹೆಸರಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ, "ರಬ್ಬೂನಿ" ಎಂದಳು. (ಯೆಹೂದ್ಯರ ಭಾಷೆಯಲ್ಲಿ ಹಾಗೆಂದರೆ "ಗುರುದೇವಾ" ಎಂದರ್ಥ) ಯೇಸು ಆಕೆಗೆ, "ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ ಹೋಗುತ್ತೇನೆಂದು ತಿಳಿಸು," ಎಂದು ಹೇಳಿದರು. ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, "ನಾನು ಪ್ರಭುವನ್ನು ಕಂಡೆ: ಅವರು ಹೀಗೆಲ್ಲಾ ಹೇಳಿದರು," ಎಂದು ತಿಳಿಸಿದಳು.

21.07.2026 - ಸ್ವರ್ಗದಲ್ಲಿರುವ ನನ್ನ ತಂದೆಯ‍ ಚಿತ್ತವನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ ಮತ್ತು ತಾಯಿ

 ಮೊದಲನೇ ವಾಚನ: ಪ್ರವಾದಿ ಮೀಕನ ಗ್ರಂಥ 7:14-15, 18-20


ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ. ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೋರಿಸಿರಿ. ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ. ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ. ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ.

ಕೀತನೆ: 85:2-4, 5-6, 7-8

ಶ್ಲೋಕ: ತೋರಿಸೆಮಗೆ ಪ್ರಭೂ ಕರುಣೆಯನು

೧. ಪ್ರಭೂ, ತೋರಿಸಿದೆ ಕರುಣೆ ನಿನ್ನ ನಾಡಿಗೆ |
     ಮರಳಿಸಿದೆ ಸುಕ್ಷೇಮವನು ಯಕೋಬ್ಯರಿಗೆ ||
     ಮನ್ನಿಸಿದೆ ನಿನ್ನ ಪ್ರಜೆಯ ದ್ರೋಹವನು |
     ಕ್ಷಮಿಸಿದೆ ನೀ ಅವರ ಪಾಪಗಳೆಲ್ಲವನು ||
     ತೊರೆದುಬಿಟ್ಟೆ ಸ್ವಾಮೀ, ನಿನ್ನ ರೋಷವನು |
     ಆರಿಸಿಬಿಟ್ಟೆ ನಿನ್ನ ಕೋಪಾಗ್ನಿಯನು ||

೨. ಪುನಶ್ಚೇತನಗೊಳಿಸೆಮ್ಮನು ದೇವಾ ಉದ್ಧಾರಕ |
     ತೊರೆದುಬಿಡು ನಮ್ಮ ಬಗ್ಗೆ ನಿನಗಿರುವ ಸಿಟ್ಟುಸಿಡುಕ ||
     ಸದಾಕಾಲಕೂ ನಮ್ಮ ಮೇಲೆ ಸಿಟ್ಟಾಗಿರುವೆಯಾ |
     ತಲಾತಲಾಂತರಗಳಿಗೂ ಕೋಪವನು ಬೆಳೆಸುವೆಯಾ? ||

೩. ನವಜೀವವನು ತುಂಬಿಸಲಾರೆಯಾ ನಮ್ಮಲಿ? |
     ಆಗ ನಿನ್ನ ಜನರು ಆನಂದಿಸುವರು ನಿನ್ನಲಿ ||
     ತೋರಿಸೆಮಗೆ ಪ್ರಭೂ ಕರುಣೆಯನು |
      ಅನುಗ್ರಹಿಸೆಮಗೆ ರಕ್ಷಣೆಯನು ||


ಶುಭಸಂದೇಶ: ಮತ್ತಾಯ12:46-50


ಯೇಸುಸ್ವಾಮಿ ತಮ್ಮನ್ನು ಸುತ್ತುವರಿದಿದ್ದ ಜನರಿಗೆ ಇನ್ನೂ ಬೋಧನೆ ಮಾಡುತ್ತಿದ್ದರು. ಆಗ ಅವರ ತಾಯಿ ಮತ್ತು ಸಹೋದರರು ಬಂದು ಅವರೊಡನೆ ಮಾತನಾಡಬಯಸಿ ಹೊರಗೆ ನಿಂತಿದ್ದರು. “ನಿಮ್ಮ ತಾಯಿ ಮತ್ತು ಸಹೋದರರು ಹೊರಗೆ ನಿಂತಿದ್ದಾರೆ; ನಿಮ್ಮೊಡನೆ ಮಾತನಾಡಬೇಕೆಂದಿದ್ದಾರೆ,” ಎಂದು ಒಬ್ಬನು ತಿಳಿಸಿದನು. ಅದಕ್ಕೆ ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎನ್ನುತ್ತಾ, ತಮ್ಮ ಶಿಷ್ಯರ ಕಡೆಗೆ ಕೈತೋರಿಸಿ, ಇಗೋ ನೋಡು, ನನ್ನ ತಾಯಿ; ನನ್ನ ಸಹೋದರರು; ಸ್ವರ್ಗದಲ್ಲಿರುವ ನನ್ನ ತಂದೆಯ‍ ಚಿತ್ತವನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ ಮತ್ತು ತಾಯಿ,” ಎಂದರು.

20.07.2026 - ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಅವರು ಪಾಪಕ್ಕೆ ವಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ

 ಮೊದಲನೇ ವಾಚನ: ಮೀಕ 6:1-4, 6-8


ಸರ್ವೇಶ್ವರ ಹೇಳುವುದನ್ನು ಕೇಳಿರಿ: “ಎದ್ದೇಳು; ಬೆಟ್ಟಗಳ ಸಮ್ಮುಖದಲ್ಲಿ ನಿನ್ನ ವ್ಯಾಜ್ಯ ನಡೆಯಲಿ; ನಿನ್ನ ಧ್ವನಿ ಗುಡ್ಡಗಳಿಗೆ ಕೇಳಿಸಲಿ. “ಬೆಟ್ಟಗಳೇ, ಸರ್ವೇಶ್ವರಸ್ವಾಮಿಯ ಆಪಾದನೆಯನ್ನು ಕೇಳಿರಿ. ಭೂಮಿಯ ಸ್ಥಿರವಾದ ಅಸ್ತಿಭಾರಗಳೇ, ಕಿವಿಗೊಡಿ. ಆ ಸ್ವಾಮಿಗೆ ತನ್ನ ಪ್ರಜೆಯ ಮೇಲೆ ವ್ಯಾಜ್ಯವಿದೆ; ಅವರು ಇಸ್ರಯೇಲಿನ ವಿರುದ್ಧ ವಾದಿಸುವುದನ್ನು ಗಮನಿಸಿರಿ.” ಸರ್ವೇಶ್ವರ ಇಂತೆನ್ನುತ್ತಾರೆ: “ನನ್ನ ಪ್ರಜೆಯೇ, ನಾನು ನಿನಗೇನು ಮಾಡಿದೆ? ಯಾವ ವಿಷಯದಲ್ಲಿ ನಿನಗೆ ಬೇಸರವನ್ನುಂಟುಮಾಡಿದೆ? ಪ್ರಮಾಣವಾಗಿ ಹೇಳು. ಈಜಿಪ್ಟ್ ದೇಶದಿಂದ ನಾನು ನಿನ್ನನ್ನು ಕರೆತಂದೆ; ದಾಸತ್ವದ ಬಂಧನದಿಂದ ನಿನ್ನನ್ನು ಬಿಡುಗಡೆ ಮಾಡಿದೆ. ನಿನಗೆ ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ನಾಯಕರನ್ನಾಗಿ ಕಳುಹಿಸಿದೆ. ನಾನು ಸರ್ವೇಶ್ವರಸ್ವಾಮಿಯ ಸನ್ನಿಧಿಗೆ ಯಾವ ಕಾಣಿಕೆಯೊಂದಿಗೆ ಹೋಗಲಿ? ಮಹೋನ್ನತ ದೇವರಿಗೆ ಹೇಗೆ ಅಡ್ಡಬೀಳಲಿ? ಹೋಮಕ್ಕಾಗಿ, ಒಂದು ವರ್ಷದ ಎಳೆಕರುಗಳನ್ನು ತೆಗೆದುಕೊಂಡುಹೋಗಲೇ? ಸಾವಿರಾರು ಟಗರುಗಳನ್ನೂ ಧಾರಾಕಾರವಾಗಿ ಹರಿಯುವ ತೈಲಪ್ರವಾಹಗಳನ್ನು ನೋಡಿ ಸರ್ವೇಶ್ವರ ಮೆಚ್ಚುವುದುಂಟೆ? ನಾನು ಮಾಡಿದ ದ್ರೋಹಕ್ಕಾಗಿ ನನ್ನ ಚೊಚ್ಚಲುಮಗನನ್ನೇ ಅರ್ಪಿಸಲೇ? ನನ್ನ ಪಾಪಕ್ಕಾಗಿ ನನ್ನ ಕರುಳ ಕುಡಿಯನ್ನೇ ಬಲಿಕೊಡಲೇ? ಇಲ್ಲ ಮನುಜಾ, ನಿನಗೆ ಯಾವುದು ಒಳಿತೆಂದು ಸರ್ವೇಶ್ವರ ಈಗಾಗಲೇ ಸ್ಪಷ್ಟಪಡಿಸಿದ್ದಾರೆ: ನ್ಯಾಯನೀತಿಯ ನಡವಳಿಕೆ, ಕರುಣೆಯಲ್ಲಿ ಅಚಲ ಆಸಕ್ತಿ, ದೇವರ ಮುಂದೆ ನಮ್ರತೆ, ಇಷ್ಟನ್ನೇ ಆ ಸ್ವಾಮಿ ನಿನ್ನಿಂದ ಅಪೇಕ್ಷಿಸುವುದು.

ಕೀರ್ತನೆ: 50:5-6, 8-9, 16-17, 21, 23

ಶ್ಲೋಕ: ಸನ್ಮಾರ್ಗಿಗೆ ತೋರುವೆ ಪರಮ ಜೀವೋದ್ದಾರವನು

ಶುಭಸಂದೇಶ: ಮತ್ತಾಯ12:38-42


ಕೆಲವು ಮಂದಿ ಧರ್ಮಶಾಸ್ತ್ರಿಗಳೂ ಫರಿಸಾಯರೂ ಯೇಸುಸ್ವಾಮಿಯನ್ನು ಉದ್ದೇಶಿಸಿ, “ಬೋಧಕರೇ, ನೀವು ಒಂದು ಸೂಚಕಕಾರ್ಯ ಮಾಡುವುದನ್ನು ನೋಡಬೇಕೆಂದಿದ್ದೇವೆ,” ಎಂದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಇಂತೆಂದರು: “ಈ ಕೆಟ್ಟ ಹಾಗೂ ದೈವಭ್ರಷ್ಟ ಪೀಳಿಗೆ ಸೂಚಕಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಯೋನನು ಮೂರುದಿನ ಹಗಲು ರಾತ್ರಿ ದೊಡ್ಡ ಮೀನಿನ ಉದರದಲ್ಲಿದ್ದನು. ಅದರಂತೆಯೇ ನರಪುತ್ರನು ಮೂರುದಿನ ಹಗಲು ರಾತ್ರಿ ಭೂಗರ್ಭದಲ್ಲಿರುವನು. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಅವರು ಪಾಪಕ್ಕೆ ವಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.ಅದೇ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೂರ ದೇಶದಿಂದ ಬಂದಳು. ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ."

04.08.2026 - ನನ್ನ ಪರಮಪಿತನು ನೆಡದ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು. ಅವರನ್ನು ಅವರಷ್ಟಕ್ಕೇ ಬಿಡಿ

  ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ  30:1-2, 12-15, 18-22 ಸರ್ವೇಶ್ವರ ಸ್ವಾಮಿ ಯೆರೆಮೀಯನಿಗೆ ಮತ್ತೊಮ್ಮೆ ಈ ಸಂದೇಶವನ್ನು ದಯಪಾಲಿಸಿದರು: “ಇಸ್ರಯೇಲರ ದೇವರಾ...