ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

13-06-2025 - ನಿನ್ನ ಇಡೀ ದೇಹ ನರಕಕ್ಕೆ ತುತ್ತಾಗುವುದಕ್ಕಿಂತ ನಿನ್ನ ಒಂದು ಅಂಗ ನಾಶವಾಗುವುದೇ ಲೇಸು

ಮೊದಲನೇ ವಾಚನ: 2 ಕೊರಿಂಥಿಯರಿಗೆ 4:7-15

ಸಹೋದರರೆ ನಾವು ಇಂಥ ಆಧ್ಯಾತ್ಮಿಕ ಮಾಣಿಕ್ಯವನ್ನು ಪಡೆದಿದ್ದರೂ ಮಣ್ಣಿನ ಮಡಕೆಗಳಂತೆ ಇದ್ದೇವೆ. ಹೀಗೆ, ಈ ಪರಮೋನ್ನತ ಶಕ್ತಿ ನಮಗೆ ಸೇರಿದ್ದಲ್ಲ, ದೇವರಿಗೆ ಸೇರಿದ್ದೆಂದು ವ್ಯಕ್ತವಾಗುತ್ತದೆ. ನಾವು ಇಕ್ಕಟ್ಟು ಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನಜ್ಜುಗುಜ್ಜಾಗಲಿಲ್ಲ; ಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲ. ಶತ್ರುಗಳು ಅನೇಕರಿದ್ದರೂ ಮಿತ್ರನೊಬ್ಬನು ಇಲ್ಲದಿರಲಿಲ್ಲ. ಪ್ರಾಣಹಿಂಸೆಗಳಿಗೀಡಾಗಿದ್ದರೂ ಪ್ರಾಣನಷ್ಟವನ್ನು ಅನುಭವಿಸಲಿಲ್ಲ. ಯೇಸುವಿನ ದಿವ್ಯಜೀವವು ನಮ್ಮ ದೇಹದಲ್ಲಿ ಗೋಚರವಾಗುವಂತೆ ಅವರ ಮರಣಯಾತನೆಯನ್ನು ನಿರಂತರವಾಗಿ ಅನುಭವಿಸುತ್ತಾ ಬಾಳುತ್ತಿದ್ದೇವೆ. ಯೇಸುವಿನ ಅಮರ ಜೀವವು ನಮ್ಮ ನಶ್ವರ ಶರೀರದಲ್ಲಿ ಗೋಚರವಾಗುವಂತೆ ಬದುಕಿರುವಾಗಲೇ ನಾವು ಯೇಸುವಿಗೋಸ್ಕರ ಸತತ ಸಾವಿಗೆ ಈಡಾಗಿದ್ದೇವೆ. ಹೀಗೆ ನಮ್ಮಲ್ಲಿ ಸಾವು ಕಾರ್ಯಗತವಾಗುತ್ತಿದ್ದರೆ ನಿಮ್ಮಲ್ಲಿ ಜೀವ ಕಾರ್ಯಗತವಾಗುತ್ತಿದೆ. 

 “ನಾನು ವಿಶ್ವಾಸವಿಟ್ಟೆನು. ಆದ್ದರಿಂದ ಮಾತನಾಡಿದೆನು,” ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ. ಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇಬೇಕು. ಏಕೆಂದರೆ ನಮಗೆ ವಿಶ್ವಾಸವಿದೆ. ಪ್ರಭು ಯೇಸುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ಥಾನಗೊಳಿಸಿ ತಮ್ಮ ಸಾನ್ನಿಧ್ಯಕ್ಕೆ ಬರಮಾಡಿಕೊಳ್ಳುವರು ಎಂಬುದನ್ನು ನಾವು ಬಲ್ಲೆವು. ಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರು. ೧೫ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ. ಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದು; ಅವರಲ್ಲಿ ಕೃತಜ್ಞತಾ ಭಾವನೆಯನ್ನು ಹೆಚ್ಚಿಸುವುದು; ಇದರಿಂದಾಗಿ ದೇವರ ಮಹಿಮೆ ಬೆಳಗುವುದು. 

ಕೀರ್ತನೆ: 56:4.12.13

ಶ್ಲೋಕ: ಕೃತಜ್ಞತಾಬಲಿಗಳನು ದೇವಾ, ನಿನಗರ್ಪಿಸುವೆ 

1.ದೇವರಲ್ಲೇ ನಿರ್ಭೀತ ನಂಬಿಕೆ ನನಗೆ

ಹೆಮ್ಮೆ ಪಡುವೆನು ಆತನಿತ್ತ ವಾಗ್ದಾನಕೆ 

2.ನಿನ್ನ ಮುಂದೆ ಜೀವನ್ ಜ್ಯೋತಿಯಲಿ ನಾ ನಡೆಯಮಾಡಿರುವೆ 

ಮೃತ್ಯುವಿನಿಂದೆನ್ನ ಪ್ರಾಣವನು ನೀ ಮುಕ್ತಗೊಳಿಸಿರುವೆ 

ಜಾರಿ ಬೀಳದಂತೆನ್ನ ಪಾದಗಳನು ಕಾದಿರಿಸಿರುವೆ 

3.ಎಂದೇ ನಿನಗೆ ಹೊತ್ತ ಹರಕೆಗಳನು ಸಲ್ಲಿಸುವೆ 

ಕೃತಜ್ಞತಾಬಲಿಗಳನು ದೇವಾ, ನಿನಗರ್ಪಿಸುವೆ 


ಶುಭಸಂದೇಶ: ಮತ್ತಾಯ 5:27-32


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ವ್ಯಭಿಚಾರ ಮಾಡಕೂಡದು ಎಂಬ ನಿಯಮವನ್ನು ನೀವು ಕೇಳಿದ್ದೀರಿ; ಆದರೆ ನಾನು ಹೇಳುತ್ತೇನೆ, ಕೇಳಿ; ಪರಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ತನ್ನ ಹೃದಯದಲ್ಲಿ ಆಕೆಯೊಡನೆ ಆಗಲೇ ವ್ಯಭಿಚಾರ ಮಾಡಿದವನೇ ಆಗುತ್ತಾನೆ. ನಿನ್ನ ಬಲಗಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತೆಸೆದುಬಿಡು; ನಿನ್ನ ಇಡೀ ದೇಹ ನರಕಕ್ಕೆ ತುತ್ತಾಗುವುದಕ್ಕಿಂತ ನಿನ್ನ ಒಂದು ಅಂಗ ನಾಶವಾಗುವುದೇ ಲೇಸು. ನಿನ್ನ ಬಲಗೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಬಿಸಾಡಿಬಿಡು; ನಿನ್ನ ಇಡೀ ದೇಹ ನರಕದ ಪಾಲಾಗುವುದಕ್ಕಿಂತ ಒಂದು ಅವಯವ ನಾಶವಾಗುವುದು ಎಷ್ಟೋ ಮೇಲು.” “ಇದಲ್ಲದೆ, ‘ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ವಿವಾಹ ವಿಚ್ಛೇದನ ಪತ್ರವನ್ನು ಅವಳಿಗೆ ಕೊಡಲಿ,’ ಎಂದು ವಿಧಿಸಲಾಗಿದೆ. ಆದರೆ ನಾನೀಗ ನಿಮಗೆ ಹೇಳುತ್ತೇನೆ ಕೇಳಿ; ತನ್ನ ಹೆಂಡತಿಯ ದುರ್ನಡತೆಯ ಕಾರಣದಿಂದಲ್ಲದೆ, ಅವಳನ್ನು ಬಿಟ್ಟು ಬಿಡುವವನು ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ; ಅಲ್ಲದೆ ಗಂಡ ಬಿಟ್ಟವಳನ್ನು ಮದುವೆಯಾಗುವವನು ಕೂಡ ವ್ಯಭಿಚಾರಿಯಾಗುತ್ತಾನೆ.”

No comments:

Post a Comment