ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 22:30, 23:6-11
ಯೆಹೂದ್ಯರು ಪೌಲನ ವಿರುದ್ಧ ತಂದ ಆಪಾದನೆ ಏನೆಂದು ಖಚಿತವಾಗಿ ತಿಳಿದುಕೊಳ್ಳಲು ಸಹಸ್ರಾಧಿಪತಿ ಅಪೇಕ್ಷಿಸಿದನು. ಮಾರನೆಯ ದಿನ ಪೌಲನನ್ನು ಬಿಡುಗಡೆ ಮಾಡಿದನು. ಮುಖ್ಯಯಾಜಕರು ಮತ್ತು ನ್ಯಾಯಸಭೆಯ ಪ್ರಮುಖರು ಕೂಡುವಂತೆ ಆಜ್ಞಾಪಿಸಿದನು. ಪೌಲನನ್ನು ಕರೆದುಕೊಂಡು ಹೋಗಿ ಆ ಸಭೆಯ ಮುಂದೆ ನಿಲ್ಲಿಸಿದನು. ಸಭೆ ಸೇರಿದ್ದವರಲ್ಲಿ ಕೆಲವರು ಫರಿಸಾಯ ಪಂಥದವರು. ಇದನ್ನು ಗಮನಿಸಿದ ಪೌಲನು, "ಸಹೋದರರೇ, ನಾನೊಬ್ಬ ಫರಿಸಾಯ, ಫರಿಸಾಯರ ವಂಶಜ. ಸತ್ತವರು ಪುನರುತ್ಥಾನ ಹೊಂದುತ್ತಾರೆ ಎಂಬ ನಮ್ಮ ನಿರೀಕ್ಷೆಯ ನಿಮಿತ್ತ ನಾನು ಇಲ್ಲಿ ವಿಚಾರಣೆಗೆ ಗುರಿಯಾಗಿದ್ದೇನೆ, "ಎಂದು ಧ್ವನಿಯೆತ್ತಿ ಸಭೆಯಲ್ಲಿ ಹೇಳಿದನು. ಅವನು ಹೀಗೆ ಹೇಳಿದಾಕ್ಷಣವೇ, ಫರಿಸಾಯರ ಮತ್ತು ಸದ್ದುಕಾಯರ ನಡುವೆ ವಾಗ್ವಾದ ಉಂಟಾಯಿತು. ಸಭೆಯಲ್ಲಿ ಭಿನ್ನಭೇದವುಂಟಾಯಿತು. ಏಕೆಂದರೆ, ಸದ್ದುಕಾಯರು ಪುನರುತ್ಥಾನವಾಗಲಿ, ದೇವದೂತರಾಗಲಿ, ದೇಹರಹಿತ ಆತ್ಮವಾಗಲಿ ಇದೆಯೆಂದು ಒಪ್ಪುವುದಿಲ್ಲ. ಆದರೆ ಫರಿಸಾಯರು ಇವೆಲ್ಲಾ ಇವೆಯೆಂದು ನಂಬುತ್ತಾರೆ. ಆಗ ಅಲ್ಲಿ ದೊಡ್ಡ ಕೂಗಾಟವೆದ್ದಿತು. ಫರಿಸಾಯ ಪಂಥಕ್ಕೆ ಸೇರಿದ ಕೆಲವು ಧರ್ಮಶಾಸ್ತ್ರಿಗಳು ಎದ್ದು ನಿಂತು, " ಈ ಮನುಷ್ಯನಲ್ಲಿ ನಮಗೆ ಯಾವ ದೋಷವೂ ಕಾಣುವುದಿಲ್ಲ. ಒಂದು ಆತ್ಮವೋ ಅಥವಾ ಒಬ್ಬ ದೂತನೇ ಇವನೊಡನೆ ಮಾತನಾಡಿದ್ದರೂ, ಮಾತನಾಡಿರಬಹುದು, " ಎಂದು ವಾದಿಸಿದರು. ಈ ವಾಗ್ವಾದ ವಿಕೋಪಕ್ಕೆ ಹೋದುದರಿಂದ ಪೌಲನನ್ನು ಅವರು ಖಂಡತುಂಡಾಗಿಸಬಹುದೆಂದು ಸಹಸ್ರಾಧಿಪತಿ ಹೆದರಿದನು. ಅವನು ಸೈನಿಕರನ್ನು ಕಳುಹಿಸಿ ಪೌಲನನ್ನು ಸಭೆಯ ಮಧ್ಯದಿಂದ ಎತ್ತಿಕೊಂಡು ಕೋಟೆಗೆ ತರುವಂತೆ ಆಜ್ಞಾಪಿಸಿದನು. ಪ್ರಭು ಅದೇ ರಾತ್ರಿ ಪೌಲನಿಗೆ ಹತ್ತಿರದಲ್ಲೇ ಕಾಣಿಸಿಕೊಂಡು, " ಧೈರ್ಯದಿಂದಿರು, ನೀನು ಜೆರುಸಲೇಮಿನಲ್ಲಿ ನನಗೆ ಸಾಕ್ಷಿಕೊಟ್ಟಂತೆ ರೋಮಿನಲ್ಲೂ ನನಗೆ ಸಾಕ್ಷಿಕೊಡಬೇಕಾಗಿದೆ, " ಎಂದರು.
No comments:
Post a Comment