ಆದಿಕಾಂಡದಿಂದ ಇಂದಿನ ಮೊದಲನೆಯ ವಾಚನ 14:18-20
ಸಾಲೇಮಿನ ಅರಸನೂ ಪರಾತ್ಪರ ದೇವರ ಯಾಜಕನೂ ಆಗಿದ್ದ ಮೆಲ್ಕಿಸದೇಕನು ಸಹ ಅಲ್ಲಿಗೆ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಅರ್ಪಿಸಿ ಅಬ್ರಾಮನಿಗೆ ಇಂತೆಂದು ಆಶೀರ್ವಾದ ಮಾಡಿದನು:
" ಭೂಮ್ಯಾಕಾಶಗಳನ್ನು ಉಂಟುಮಾಡಿದ ಪರಾತ್ಪರ ದೇವರ ಆಶೀರ್ವಾದ ಅಬ್ರಾಮನಿಗಿರಲಿ; ನಿನ್ನ ಶತ್ರುಗಳನ್ನು ನಿನ್ನ ಕೈವಶಮಾಡಿದ ಆ ಪರಾತ್ಪರ ದೇವರಿಗೆ ಸ್ತೋತ್ರವಾಗಲಿ!" ಅಬ್ರಾಹಮನು ತಾನು ಗೆದ್ದು ತಂದಿದ್ದ ಎಲ್ಲ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕಿಸದೇಕನಿಗೆ ಕೊಟ್ಟನು.
ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ
ಕೀರ್ತನೆ 110:1-4.V.4
ಶ್ಲೋಕ: ಮೆಲ್ಕಿಸದೇಕ್ ಪರಂಪರೆಯ ಯಾಜಕ ನೀ ನಿರುತ.
1. ನುಡಿದಿಹನು ಇಂತೆಂದು ಪ್ರಭು ನನ್ನೊಡೆಯನಿಗೆ|
ಆಸೀನನಾಗಿರು ನೀನು ನನ್ನ ಬಲಗಡೆಗೆ|
ಹಗೆಗಳನು ನಿನಗೆ ಕಾಲ್ಮಣೆಯಾಗಿಸುವವರೆಗೆ||
ಶ್ಲೋಕ
2. ಸಿಯೋನಿನ ಹೊರಗು ವಿಸ್ತರಿಸುವನು|
ಪ್ರಭು ನಿನ್ನ ರಾಜ್ಯದಾಳಿಕೆಯನು||
ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೇ|
ದೊರೆತನ ಮಾಡುವೆ ನೀನು||
ಶ್ಲೋಕ
3. ಸೇನೆಯನು ನೀ ಅಣಿಗೊಳಿಸುವ ದಿನದೊಳು|
ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು||
ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು|
ಉದಯಕಾಲದ ಇಬ್ಬನಿಯಂತೆ ಇಳಿದು ಬರುವರು||
ಶ್ಲೋಕ
4. ಮೆಲ್ಕಿಸದೇಕ್ ಪರಂಪರೆಯ ಯಾಜಕ ನೀ ನಿರುತ|
ಬದಲಿಸನು ಪ್ರಭು ತಾನಿತ್ತ ಪ್ರಮಾಣದ ಈ ಮಾತ||
ಶ್ಲೋಕ
ಎರಡನೆಯ ವಾಚನ
ಪೌಲನು ಕೊರಿಂಥಿಯರಿಗೆ ಬರೆದ ಮೊದಲನೆಯ ಪತ್ರದಿಂದ ಇಂದಿನ ಎರಡನೆಯ ವಾಚನ 11:23-26
ಸಹೋದರರೇ, ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂಲೇ ಪಡೆದೆನು. ಅದೇನೆಂದರೆ; ಪ್ರಭು ಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ, ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ, "ಎಂದರು. ಅಂತೆಯೇ ಭೋಜನದ ಕೊನೆಯಲ್ಲಿ ಪಾನಪಾತ್ರೆಯನ್ನು ತೆಗೆದುಕೊಂಡು, "ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ, " ಎಂದರು. ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ, ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ.
ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ
ಘೋಷಣೆ ಯೊವಾನ್ನ 6:51
ಅಲ್ಲೆಲೂಯ, ಅಲ್ಲೆಲೂಯ!
ನಾನೇ ಸ್ವರ್ಗದಿಂದ ಇಳಿದುಬಂದ ಜೀವಂತ ರೊಟ್ಟಿ | ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ ||
ಅಲ್ಲೆಲೂಯ!
ಶುಭಸಂದೇಶ
ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 9:11-17
ಪ್ರಭೂ, ನಿಮಗೆ ಮಹಿಮೆ ಸಲ್ಲಲಿ
ಆ ಕಾಲದಲ್ಲಿ ಯೇಸು ತಮ್ಮನ್ನು ಹಿಂಬಾಲಿಸುತ್ತಿದ್ದ ಜನಸಮೂಹವನ್ನು ಸ್ವಾಗತಿಸಿ, ದೇವರ ಸಾಮ್ರಾಜ್ಯದ ವಿಷಯವಾಗಿ ಹೇಳಿ ಅಗತ್ಯವಿದ್ದವರಿಗೆ ಆರೋಗ್ಯದಾನ ಮಾಡಿದರು. ಅಷ್ಟರಲ್ಲಿ ಸಾಯಂಕಾಲವಾಗುತ್ತಾ ಬಂದಿತು. ಹನ್ನೆರಡು ಮಂದಿ ಪ್ರೇಷಿತರು ಯೇಸುವಿನ ಬಳಿಗೆ ಬಂದು, " ಇದು ನಿರ್ಜನ ಪ್ರದೇಶ; ಜನರನ್ನು ಕಳುಹಿಸಿಬಿಡಿ. ಅವರು ಸಮೀಪದ ಊರುಕೇರಿಗಳಿಗೂ ಹೋಗಿ ಊಟವಸತಿಯನ್ನು ಒದಗಿಸಿಕೊಳ್ಳಲಿ, "ಎಂದರು. ಅದಕ್ಕೆ ಯೇಸು, "ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ," ಎಂದರು. ಅವರು, "ನಮ್ಮಲ್ಲಿರುವುದು ಐದು ರೊಟ್ಟಿ ಮತ್ತು ಎರಡು ಮೀನು ಮಾತ್ರ. ನಾವು ಹೋಗಿ ಇವರೆಲ್ಲರಿಗೆ ಬೇಕಾಗುವಷ್ಟು ಊಟ ಕೊಂಡುಕೊಂಡು ಬರಬೇಕೇ? "ಎಂದರು. ಏಕೆಂದರೆ ಅಲ್ಲಿ ಗಂಡಸರೇ ಸುಮಾರು ಐದು ಸಾವಿರ ಮಂದಿ ಇದ್ದರು. ಆಗ ಯೇಸು ಶಿಷ್ಯರಿಗೆ, "ಇವರನ್ನು ಐವತ್ತು ಐವತ್ತರಂತೆ ಪಂಕ್ತಿಯಾಗಿ ಕೂರಿಸಿರಿ, "ಎಂದು ಹೇಳಲು ಅವರು ಹಾಗೆಯೇ ಎಲ್ಲರನ್ನು ಕುಳ್ಳರಿಸಿದರು. ಅನಂತರ ಯೇಸು ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ಅವುಗಳನ್ನು ಮುರಿದು ಜನಸಮೂಹಕ್ಕೆ ಬಡಿಸುವಂತೆ ಶಿಷ್ಯರಿಗೆ ಕೊಟ್ಟರು. ಎಲ್ಲರೂ ಹೊಟ್ಟೆ ತುಂಬ ತಿಂದು ಸಂತೃಪ್ತರಾದರು. ಇನ್ನು ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿ ತುಂಬ ಆದವು.
ಪ್ರಭುವಿನ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ
No comments:
Post a Comment