ಮೊದಲನೆಯ ವಾಚನ: ಆದಿಕಾಂಡದಿಂದ ಇಂದಿನ ವಾಚನ 1:26-2:3
ದೇವರು, "ನಮ್ಮಂತೆಯೇ ಇರುವ ಹಾಗೂ ನಮ್ಮನ್ನು ಹೋಲುವ ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ- ಚಿಕ್ಕ ಸಾಕುಪ್ರಾಣಿ ಹಾಗೂ ಕಾಡು ಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ, "ಎಂದರು. ಹೀಗೆ ದೇವರು: ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ. ಅವರನ್ನು ದೇವರು ಆಶೀರ್ವದಿಸಿ, "ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿ ಕೊಳ್ಳಿರಿ; ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ. ಇನ್ನೂ ಭೂಮಿಯಲ್ಲಿರುವ ಎಲ್ಲ ತರದ ದವಸ ಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ " ಎಂದು ಹೇಳಿದರು. ಹಾಗೆಯೇ ಆಯಿತು. ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಪರಲೋಕ - ಭೂಲೋಕಗಳೂ ಅವುಗಳಲ್ಲಿ ಇರುವ ಸಮಸ್ತವೂ ಹೀಗೆ ನಿರ್ಮಿತವಾದವು. ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು. ಆ ಏಳನೆಯ ದಿನವು ಪರಿಶುದ್ದವಾಗಿರಲಿ ಎಂದು ಆಶೀರ್ವದಿಸಿದರು. ತಮ್ಮ ಸೃಷ್ಟಿಕಾರ್ಯವನ್ನೆಲ್ಲಾ ಮುಗಿಸಿ, ಆ ದಿನದಂದು ವಿಶ್ರಮಿಸಿಕೊಂಡ ಕಾರಣ ಹಾಗೆ ಮಾಡಿದರು.
ಕೀರ್ತನೆ 90:2,3-4,12-13,14,17
ಶ್ಲೋಕ: ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ, ಓ ಪ್ರಭೂ!
ಬೆಟ್ಟಗಳು ಹುಟ್ಟುವುದಕ್ಕೆ ಮುಂಚಿನಿಂದ|
ಭೂದೇಶಗಳು ಆಗುವುದಕ್ಕೆ ಮೊದಲಿನಿಂದ|
ನೀನೆಮಗೆ ದೇವರು ಯುಗಯುಗಗಳಿಂದ||
ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ|
"ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ" ಎನ್ನುತಿಹೆ||
ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ|
ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ||
ಜೀವನಾವಧಿಯನು ಲೆಕ್ಕಿಸುವುದನ್ನು ನಮಗೆ ಕಲಿಸು|
ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು||
ಪ್ರಭೂ, ತಿರುಗಿ ಬಾ, ಕೋಪವೆಷ್ಟರ ತನಕ|
ನಿನ್ನ ಸೇವಕರ ಮೇಲಿರಲಿ ಮರುಕ||
ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ|
ಹರ್ಷಿಸಿ ಆನಂದಿಸುವೆವು ಆಗ ದಿನದಾದ್ಯಂತ||
ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಭಕ್ತರಿಗೆ|
ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ||
ಘೋಷಣೆ (ಕೀರ್ತನೆ 68:20)
ಅಲ್ಲೆಲೂಯ, ಅಲ್ಲೆಲೂಯ!
ನಮ್ಮ ದೇವರು ಜೀವೋದ್ಧಾರಕ ದೇವರು ಹೌದು | ಸಾವಿಂದ ತಪ್ಪಿಸುವ ಶಕ್ತಿ, ಸ್ವಾಮಿ ದೇವರದು||
ಅಲ್ಲೆಲೂಯ!
ಶುಭಸಂದೇಶ: ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 13:54-58
ಆ ಕಾಲದಲ್ಲಿ ಯೇಸು ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಬೋಧನೆ ಮಾಡಿದರು. ಅದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, "ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು? ಈ ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ? ಇವನು ಆ ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು? " ಎಂದು ಮಾತನಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು. ಅವರಿಗೆ ಯೇಸು, "ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ದೊರಕದು, "ಎಂದು ಹೇಳಿದರು. ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತ ಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ.
Please send gospel readdings
ReplyDelete