ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ಇಂದಿನ ವಾಚನ: 5:12-16
ಜನರೆಲ್ಲರ ಕಣ್ಮುಂದೆ ಅನೇಕ ಅದ್ಭುತ ಕಾರ್ಯಗಳೂ ಸೂಚಕಕಾರ್ಯಗಳೂ ಪ್ರೇಷಿತರ ಮುಖಾಂತರ ನಡೆಯುತ್ತಿದ್ದವು. ಭಕ್ತವಿಶ್ವಾಸಿಗಳೆಲ್ಲರೂ ಸೊಲೊಮೋನನ ಮಂಟಪದಲ್ಲಿ ಸಭೆ ಸೇರುತ್ತಿದ್ದರು. ಹೊರಗಿನವರು ಅವರನ್ನು ಬಹಳವಾಗಿ ಹೊಗಳುತ್ತಿದ್ದರೂ ಅವರ ಸಂಗಡ ಸೇರಲು ಯಾರಿಗೂ ಧೈರ್ಯವಿರಲಿಲ್ಲ. ಆದರೂ ಪ್ರಭುವನ್ನು ವಿಶ್ವಾಸಿಸುತ್ತಿದ್ದ ಸ್ತ್ರೀಪುರುಷರ ಸಂಖ್ಯೆ ಅಧಿಕವಾಗುತ್ತಾ ಬಂದಿತು. ಪೇತ್ರನು ಹಾದುಹೋಗುವಾಗ ಆತನ ನೆರಳಾದರೂ ಕೆಲವರ ಮೇಲೆ ಬೀಳಲೆಂದು ಜನರು ರೋಗಿಗಳನ್ನು ಹಾಸಿಗೆ ಅಥವಾ ಡೋಲಿಗಳ ಸಮೇತ ಹೊತ್ತು ತಂದು ಹಾದಿಗಳಲ್ಲಿ ಮಲಗಿಸುತ್ತಿದ್ದರು. ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದಲೂ ರೋಗಿಗಳನ್ನು ಮತ್ತು ಪಿಶಾಚಿಪೀಡಿತರನ್ನು ಜನರು ತರುತ್ತಿದ್ದರು; ಎಲರೂ ಸ್ವಸ್ಥರಾಗುತ್ತಿದ್ದರು.
ಕೀರ್ತನೆ 118:2-4,22-27 v. 1
ಶ್ಲೋಕ: ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ.
ಸಾರಲಿ ಇಸ್ರಯೇಲಿನ ಜನತೆ, ಆತನ ಪ್ರೀತಿ ಶಾಶ್ವತ ಎಂದೇ|
ಸಾರಲಿ ಆರೋನನ ವಂಶಲತೆ ಆತನ ಪ್ರೀತಿ ಶಾಶ್ವತ ಎಂದೇ|
ಸಾರಲಿ ಆತನ ಭಕ್ತರ ಪಂಥ, ಆತನ ಪ್ರೀತಿ ಶಾಶ್ವತ ಅಂಥ||
ಮನೆ ಕಟ್ಟುವವರು ಮೂಲೆಗೆಸೆದ ಕಲ್ಲು ಆಯಿತು ನೋಡು ಮುಖ್ಯವಾದ ಮೂಲೆಗಲ್ಲು|
ಪ್ರಭುವಿನಿಂದಲೇ ಆದ ಈ ಕಾರ್ಯ, ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ|
ಪ್ರಭುವೇ ನಿಯೋಜಿಸಿದ ದಿನವಿದು, ಹರ್ಷಿಸಿ ಆನಂದಿಸೋಣ ಇಂದು||
ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು, ಸುಕ್ಷೇಮ ನೀಡು ಪ್ರಭೂ ಕರುಣೆಯಿಟ್ಟು|
ಪ್ರಭುವಿನ ನಾಮದಲ್ಲಿ ಬರುವವನಿಗೆ ಜಯಮಂಗಳ||
ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ|
ಪ್ರಭುವೇ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು||
ಎರಡನೆಯ ವಾಚನ: ಪ್ರಕಟನಾ ಗ್ರಂಥದಿಂದ ಇಂದಿನ ಎರಡನೆಯ ವಾಚನ: 1:9-13,17-19
ನಾನು ಯೊವಾನ್ನ, ನಿಮ್ಮ ಸಹೋದರ; ಕ್ರಿಸ್ತಯೇಸುವಿನಲ್ಲಿ ದೇವರ ಸಾಮ್ರಾಜ್ಯಕ್ಕೆ ಸೇರಿರುವವರಿಗೆ ಬಂದೊದಗುವ ಕಷ್ಟಸಂಕಟಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದರಲ್ಲಿ ನಿಮ್ಮ ಪಾಲುಗಾರ. ದೇವರ ವಾಕ್ಯವನ್ನು ಸಾರಿದುದರಿಂದಲೂ ಕ್ರಿಸ್ತೇಸುವಿಗೆ ಸಾಕ್ಷಿ ನೀಡಿದುದರಿಂದಲೂ ನಾನು ಪತ್ಮೋಸ್ ದ್ವೀಪ ವಾಸವನ್ನು ಅನುಭವಿಸಬೇಕಾಯಿತು. ಪ್ರಭುವಿನ ದಿನದಂದು ನಾನು ದೇವರಾತ್ಮ ವಶನಾದೆ. ಆಗ ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ತುತ್ತೂರಿಯ ನಾದದಂತಿತ್ತು. ಅದು ಹೀಗೆಂದು ನುಡಿಯಿತು: "ನೀನು ಕಾಣುತ್ತಿರುವುದನ್ನು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲಿದೆಲ್ಪಿಯ ಮತ್ತು ಲವೋದಿಕೀಯ ಎಂಬ ಪಟ್ಟಣಗಳಲ್ಲಿರುವ ಏಳು ಸಭೆಗಳಿಗೆ ಕಳುಹಿಸು. ನನ್ನ ಸಂಗಡ ಮಾತನಾಡುತ್ತಿರುವ ಈ ಶಬ್ದ ಯಾರದೆಂದು ನೋಡಲು ನಾನು ಹಿಂದಕ್ಕೆ ತಿರುಗಿದೆ. ಹಾಗೆ ತಿರುಗಿದಾಗ, ಏಳು ಚಿನ್ನದ ದೀಪಸ್ತಂಭಗಳನ್ನು ಕಂಡೆ. ಆ ದೀಪಸ್ತಂಭಗಳ ನಡುವೆ 'ನರಪುತ್ರ' ನಂಥ ಒಬ್ಬ ವ್ಯಕ್ತಿಯಿದ್ದರು. ಅವರು ನಿಲುವಂಗಿಯನ್ನು ತೊಟ್ಟಿದ್ದರು. ಅದು ಅವರ ಪಾದಗಳನ್ನು ಮುಟ್ಟುವಷ್ಟು ನೀಳವಾಗಿತ್ತು. ಅಲ್ಲದೆ, ಚಿನ್ನದ ಎದೆಪಟ್ಟಿಯನ್ನು ಕಟ್ಟಿಕೊಂಡಿದ್ದರು. ನಾನು ಅವರನ್ನು ಕಂಡಾಗ, ಸತ್ತವನಂತಾದೆ. ಅವರ ಪಾದಗಳ ಮುಂದೆ ಬಿದ್ದೆ. ಅವರು ತಮ್ಮ ಬಲಗೈಯನ್ನು ನನ್ನ ಮೇಲಿಟ್ಟು, "ಭಯಪಡಬೇಡ, ನಾನೇ ಮೊದಲನೆಯವನೂ ಕಡೆಯವನೂ ಸದಾ ಜೀವಿಸುವವನೂ ಆಗಿದ್ದೇನೆ. ಮರಣಹೊಂದಿದೆ ನಿಜ. ಆದರೆ ಇಗೋ ನೋಡು, ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. ಮೃತ್ಯುವಿನ ಮತ್ತು ಮೃತ್ಯುಲೋಕದ ಬೀಗದ ಕೈಗಳು ನನ್ನಲ್ಲಿವೆ. ಆದುದರಿಂದ ನೀನು ಕಂಡ ಘಟನೆಗಳನ್ನು ಅಂದರೆ, ಈಗ ನಡೆಯುತ್ತಿರುವ ಘಟನೆಗಳನ್ನೂ ಮುಂದೆ ಸಂಭವಿಸಲಿರುವ ಘಟನೆಗಳನ್ನೂ ಕುರಿತು ಬರೆ, " ಎಂದರು.
ಘೋಷಣೆ
ಯೊವಾನ್ನ 20:29 ಅಲ್ಲೆಲೂಯ, ಅಲ್ಲೆಲೂಯ!
ನನ್ನನ್ನು ಕಂಡದ್ದರಿಂದ ತಾನೇ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು.
ಅಲ್ಲೆಲೂಯ!
ಶುಭಸಂದೇಶ: ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 20:19-31
ಅದೇ ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ನಡುವೆ ನಿಂತರು. "ನಿಮಗೆ ಶಾಂತಿ! " ಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಯನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು. ಯೇಸು ಪುನಃ, "ನಿಮಗೆ ಶಾಂತಿ. ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ, "ಎಂದರು. ಅನಂತರ ಅವರ ಮೇಲೆ ಉಸಿರೂದಿ, "ಪವಿತ್ರಾತ್ಮರನ್ನು ಸ್ವೀಕರಿಸಿರಿ. ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು. ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು, "ಎಂದು ನುಡಿದರು. ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು, ಯೇಸುಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು, "ನಾವು ಪ್ರಭುವನ್ನು ನೋಡಿದೆವು, " ಎಂದು ಹೇಳಿದರು. ಅದಕ್ಕೆ ಅವನು, "ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು. ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ, "ಎಂದುಬಿಟ್ಟನು. ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನೂ ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು, "ನಿಮಗೆ ಶಾಂತಿ "ಎಂದರು. ಆಮೇಲೆ ತೋಮನಿಗೆ, "ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು. ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು, "ಎಂದು ಹೇಳಿದರು. ಆಗ ತೋಮನು, "ನನ್ನ ಪ್ರಭುವೇ, ನನ್ನ ದೇವರೇ, "ಎಂದನು. ಯೇಸು ಅವನಿಗೆ "ನನ್ನನ್ನು ಕಂಡದ್ದರಿಂದ ತಾನೇ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು, "ಎಂದು ಹೇಳಿದರು. ಯೇಸು ತಮ್ಮ ಶಿಷ್ಯರ ಕಣ್ಮುಂದೆ ಮಾಡಿದ ಸೂಚಕ ಕಾರ್ಯಗಳು ಇನ್ನೂ ಎಷ್ಟೋ ಇವೆ. ಅವನ್ನು ಈ ಪುಸ್ತಕದಲ್ಲಿ ಬರೆದಿಲ್ಲ. ಇಲ್ಲಿ ಬರೆದವುಗಳ ಉದ್ದೇಶ ಇಷ್ಟೇ; ಯೇಸು, ದೇವರ ಪುತ್ರ ಹಾಗು ಲೋಕೋದ್ಧಾರಕ ಎಂದು ನೀವು ವಿಶ್ವಾಸಿಸಬೇಕು; ವಿಶ್ವಾಸಿಸಿ ಅವರ ಹೆಸರಿನಲ್ಲಿ ಸಜ್ಜೀವವನ್ನು ಪಡೆಯಬೇಕು.
No comments:
Post a Comment