ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

10.04.25

ಮೊದಲನೆಯ ವಾಚನ: ಆದಿಕಾಂಡದಿಂದ ಇಂದಿನ ವಾಚನ 17:3-9

ಅಬ್ರಹಾಮನು ಅಡ್ಡಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದನು. ದೇವರು ಅವನಿಗೆ, " ನಾನು ನಿನಗೆ ವಾಗ್ಧಾನ ಮಾಡಿ ಹೇಳುತ್ತೇನೆ: ನೀನು ಅನೇಕ ರಾಷ್ಟ್ರಗಳಿಗೆ ಮೂಲಪುರುಷನಾಗುವೆ. ಇನ್ನು ಮುಂದೆ ನಿನಗೆ 'ಅಬ್ರಾಮ' ಎಂಬ ಹೆಸರಿರುವುದಿಲ್ಲ. ನಿನ್ನನ್ನು ನಾನು ಅನೇಕಾನೇಕ ರಾಷ್ಟ್ರಗಳಿಗೆ ಮೂಲ ಪುರುಷನನ್ನಾಗಿ ನೇಮಿಸುವುದರಿಂದ ನಿನಗೆ 'ಅಬ್ರಹಾಮ' ಎಂಬ ಹೆಸರಿರುವುದು. ನಿನ್ನನ್ನು ಅತ್ಯಂತ ಫಲದಾಯಕ ಪುರುಷನನ್ನಾಗಿ ಮಾಡುತ್ತೇನೆ. ನಿನ್ನಿಂದ ರಾಷ್ಟ್ರಗಳೂ ರಾಜರುಗಳೂ ಉತ್ಪತ್ತಿಯಾಗುವರು. ನಿನಗೂ ನಿನ್ನ ಸಂತತಿಗೂ ನಾನು ದೇವರಾಗಿರುತ್ತೇನೆ. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ಚಿರ ಒಡಂಬಡಿಕೆಯಾಗಿ ಸ್ಥಿರಪಡಿಸುತ್ತೇನೆ. ನೀನು ಪ್ರವಾಸವಾಗಿರುವ ಈ ಕಾನಾನ್ ನಾಡೆಲ್ಲವನ್ನು ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾದ ಸೊತ್ತಾಗಿ ಕೊಡುತ್ತೇನೆ. ನಾನು ನಿಮ್ಮ ಕುಲದೇವರಾಗಿರುತ್ತೇನೆ. " ಇದಲ್ಲದೆ ದೇವರು ಅಬ್ರಹಾಮನಿಗೆ ಹೀಗೆಂದು ಹೇಳಿದರು: " ನೀನು ಕೂಡ ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು. ನೀನು ಮಾತ್ರವಲ್ಲ, ನಿನ್ನ ಸಂತತಿಯವರೂ ತಲತಲಾಂತರಕ್ಕೂ ಅದನ್ನು ಕೈಗೊಂಡು ನಡೆಯಬೇಕು."

ಕೀರ್ತನೆ 105:4,6,5,7,8-9,V.8
ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು |

ಅರಸಿರಿ ಪ್ರಭುವನೂ ಆತನ ಶಕ್ತಿಯನೂ|
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು||
ನೆನೆಯಿರಿ ಆತನದ್ಭುತಗಳನು; ಮಹತ್ಕಾರ್ಯಗಳನು|
ಆತನ ವದನ ವಿಧಿಸಿದಾ ಆ ನ್ಯಾಯನಿರ್ಣಯಗಳನು.||

ಆತನ ದಾಸ ಅಬ್ರಹಾಮನ ಸಂತತಿಯವರೇ|
ಆತನಾರಿಸಿಕೊಂಡ ಯಕೋಬನ ವಂಶದವರೇ||
ಪ್ರಭು ನಮ್ಮ ದೇವರೆಂಬುದು ಶ್ರುತ|
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ.||

ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು|
ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು||
ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು|
ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು.||

ಘೋಷಣೆ ಯೊವಾನ್ನ 6:63,68
ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ ಸ್ತೋತ್ರವು, ಮಹಿಮೆಯೂ ಸಲ್ಲಲಿ!
ನಿಮ್ಮ ಮಾತುಗಳು ಪ್ರಭೂ, ಆತ್ಮ ಮತ್ತು ಜೀವವಾಗಿವೆ, ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ,,
ದೇವರ ವಾಕ್ಯವಾದ ಪ್ರಭು ಯೇಸುವೇ ನಿಮಗೆ ಸದಾ ಸ್ತೋತ್ರವು, ಮಹಿಮೆಯೂ ಸಲ್ಲಲಿ!

ಶುಭಸಂದೇಶ: ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 8:51-59

ಆ ಕಾಲದಲ್ಲಿ ಯೇಸು ಯೆಹೂದ್ಯರಿಗೆ: "ನನ್ನ ಮಾತಿಗೆ ಶರಣಾಗಿ ನಡೆಯುವವನು ನಿತ್ಯಮರಣಕ್ಕೆ ತುತ್ತಾಗನು, ' ಎಂದು ಸತ್ಯವಾಗಿ ನಿಮಗೆ ಹೇಳುತ್ತೇನೆ, " ಎಂದರು. " ನೀನು ದೆವ್ವಹಿಡಿದವನೆಂದು ಈಗ ನಮಗೆ ಸ್ಪಷ್ಟವಾಯಿತು. ಅಬ್ರಹಾಮನು ಸತ್ತುಹೋದನು; ಪ್ರವಾದಿಗಳೂ ಸತ್ತುಹೋದರು. ಆದರೂ ನೀನು, 'ನನ್ನ ಮಾತಿಗೆ ಶರಣಾಗಿ ನಡೆಯುವವನು ಎಂದೆಂದಿಗೂ ಸಾವಿಗೆ ತುತ್ತಾಗನು, ' ಎಂದು ಹೇಳುತ್ತಿರುವೆ; ನಮ್ಮ ತಂದೆ ಅಬ್ರಹಾಮನಿಗಿಂತಲೂ ನೀನು ಶ್ರೇಷ್ಠನೊ? ಆತನೂ ಸಾವಿಗೀಡಾದನು, ಪ್ರವಾದಿಗಳೂ ಸಾವಿಗೆ ಈಡಾಗಿರುವರು; ನೀನು ಯಾರೆಂದು ನಿನ್ನ ಎಣಿಕೆ? " ಎಂದು ಆ ಯೆಹೂದ್ಯ ಅಧಿಕಾರಿಗಳು ಕೇಳಿದರು. ಯೇಸು ಪ್ರತ್ಯುತ್ತರವಾಗಿ, " ನನ್ನ ಘನತೆ ಗೌರವವನ್ನು ನಾನೇ ಸಾರಹೊರಟರೆ ಅದಕ್ಕೆ ಬೆಲೆಯಿರದು. ನನ್ನ ಘನತೆ ಗೌರವವನ್ನು ಸಾರುವವರಾದರೋ ನನ್ನ ಪಿತನು. ಆ ಪಿತನನ್ನು ಕುರಿತೇ ' ಅವರು ನಮ್ಮ ದೇವರು' ಎಂದು ನೀವು ಹೇಳಿಕೊಳ್ಳುತ್ತೀರಿ. ಆದರೆ ಅವರ ಅರಿವು ನಿಮಗಿಲ್ಲ ; ನನಗಿದೆ. ಅವರ ಅರಿವು ನನಗಿಲ್ಲವೆಂದು ನಾನು ಹೇಳಿದೆಯಾದರೆ ನಿಮ್ಮಂತೆ ನಾನೂ ಸುಳ್ಳುಗಾರನಾಗುತ್ತೇನೆ. ಅವರ ಅರಿವು ನನಗಿದೆ. ಅವರ ಮಾತನ್ನು ನಾನು ಪಾಲಿಸುತ್ತೇನೆ. ನಿಮ್ಮ ತಂದೆ ಅಬ್ರಹಾಮನು ನನ್ನ ದಿನವನ್ನು ತಾನು ಕಾಣುವನೆಂದು ಹಿಗ್ಗಿದನು. ಆತನು ಅದನ್ನು ಕಂಡೂ ಆಯಿತು; ಹಿಗ್ಗಿಯೂ ಆಯಿತು, " ಎಂದು ಉತ್ತರಕೊಟ್ಟರು. ಯೆಹೂದ್ಯರು, " ನಿನಗಿನ್ನೂ ಐವತ್ತು ವರ್ಷವಾಗಿಲ್ಲ; ನೀನು ಅಬ್ರಹಾಮನನ್ನು ನೋಡಿದ್ದೀಯಾ? " ಎಂದರು. ಯೇಸು ಅವರಿಗೆ, "ಅಬ್ರಹಾಮನು ಹುಟ್ಟುವುದಕ್ಕೆ ಮೊದಲಿನಿಂದಲೂ ನಾನಿದ್ದೇನೆ, " ಎಂದು ಮರುನುಡಿದರು. ಇದನ್ನು ಕೇಳಿದ್ದೇ ಆ ಯೆಹೂದ್ಯರು ಯೇಸುವಿನತ್ತ ಬೀರಲು ಕಲ್ಲುಗಳನ್ನು ಎತ್ತಿಕೊಂಡರು. ಯೇಸುವಾದರೋ ಮರೆಯಾಗಿ ಮಹಾದೇವಾಲಯದಿಂದ ಹೊರಟು ಹೋದರು.

1 comment: