ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂ ದ ಇಂದಿನ ವಾಚನ 4:23-31
ಪೇತ್ರ ಮತ್ತು ಯೊವಾನ್ನ ಬಂಧನದಿಂದ ಬಿಡುಗಡೆ ಹೊಂದಿದ ಮೇಲೆ ವಿಶ್ವಾಸಿಗಳಿಗೆ ಭೇಟಿಯಿತ್ತರು. ಮುಖ್ಯ ಯಾಜಕರು ಹಾಗೂ ಪ್ರಜಾಪ್ರಮುಖರು ತಮಗೆ ಹೇಳಿದ್ದನ್ನು ಅವರಿಗೆ ವರದಿಮಾಡಿದರು. ಈ ಸಮಾಚಾರವನ್ನು ಕೇಳಿದ ಕೂಡಲೇ ಭಕ್ತಾದಿಗಳು ಏಕಕಂಠದಿಂದ ದೇವರನ್ನು ಪ್ರಾರ್ಥಿಸುತ್ತಾ ಹೀಗೆಂದರು: " ಪ್ರಭೂ, ಇಹಪರಗಳನ್ನೂ ಸಮುದ್ರ ಸಾಗರಗಳನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದವರು ನೀವೇ. ಸರ್ವೇಶ್ವರನಿಗೂ ಆತ ಅಭಿಷೇಕಿಸಿದವನಿಗೂ ವಿರುದ್ಧ 'ಅನ್ಯಧರ್ಮಿಯರೇಕೆ ರೋಷಭರಿತರಾದರು? ಜನರೇಕೆ ವ್ಯರ್ಥ ಒಳಸಂಚು ಹೂಡಿದರು? ಲೋಕಾಧಿಪತಿಗಳೇಕೆ ಸನ್ನದ್ಧರಾದರು? ಜನನಾಯಕರೇಕೆ ಸಮಾಲೋಚಿಸಿದರು? " ಎಂದು ನಮ್ಮ ಪಿತಾಮಹ ಹಾಗೂ ನಿಮ್ಮ ದಾಸನಾದ ದಾವೀದನ ಬಾಯಿಂದ ನುಡಿಸಿದಿರಿ. ಅಂತೆಯೇ, ನಿಮ್ಮ ಪರಮ ಪೂಜ್ಯ ದಾಸ ಯೇಸುವಿನ ವಿರುದ್ಧ ಹೆರೋದನು ಮತ್ತು ಪೊಂತ್ಸಿಯುಸ್ ಪಿಲಾತನು ಅನ್ಯಧರ್ಮದವರೊಡನೆ ಹಾಗೂ ಇಸ್ರಯೇಲಿನ ಜನರೊಡನೆ ಸೇರಿ ಈ ಪಟ್ಟಣದಲ್ಲೇ ಸಮಾಲೋಚನೆ ಮಾಡಿದರು. ನೀವು ಸಂಯೋಜಿಸಿದ್ದು ಹಾಗೂ ಸಂಕಲ್ಪಿಸಿದ್ದು ಈಡೇರುವಂತೆ ಅವರು ಹೀಗೆ ವರ್ತಿಸಿದರು. ಪ್ರಭೂ, ಇಗೋ, ಇವರು ನಮ್ಮನ್ನು ಬೆದರಿಸುತ್ತಿದ್ದಾರೆ; ನಿಮ್ಮ ಸಂದೇಶವನ್ನು ಧೈರ್ಯವಾಗಿ ಸಾರಲು ಶರಣರಾದ ನಮಗೆ ನೆರವು ನೀಡಿರಿ. ಸ್ವಸ್ಥಪಡಿಸುವ ನಿಮ್ಮ ಅಮೃತ ಹಸ್ತವನ್ನು ಚಾಚಿರಿ; ನಿಮ್ಮ ಪರಮ ಪೂಜ್ಯ ದಾಸ ಯೇಸುವಿನ ನಾಮದಲ್ಲಿ ಅದ್ಬುತಗಳೂ ಸೂಚಕ ಕಾರ್ಯಗಳೂ ಜರಗುವಂತಾಗಲಿ. "ಹೀಗೆ ಪ್ರಾರ್ಥನೆಮಾಡಿದಾಗ ಅವರು ನೆರೆದಿದ್ದ ಸ್ಥಳ ಕಂಪಿಸಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು. ದೇವರ ಶುಭಸಂದೇಶವನ್ನು ಧೈರ್ಯವಾಗಿ ಸಾರತೊಡಗಿದರು.
ಕೀರ್ತನೆ: 2:1-2,3-9. v. 12
ಶ್ಲೋಕ: ದೇವರನ್ನು ಆಶ್ರಯಿಸುವವರಿಗೆ ಸೌಭಾಗ್ಯ, ಸಂತೋಷ.
ದೊಂಬಿಯೇಳುವುದೇತಕೆ ಅನ್ಯ ದೇಶವಿದೇಶಗಳು?
ಕುತಂತ್ರ ಹೂಡುವುದೇಕೆ ಅನ್ಯ ಜಾತಿಜನಾಂಗಗಳು?
ದೇವನಿಗೂ, ಅವನಭಿಷಿಕ್ತನಿಗೂ ವಿರುದ್ದವಾಗಿ|
ಅವರೆಮಗೆ ತೊಡಿಸಿಹ ಬೇಡಿಗಳನು ಮುರಿಯೋಣ ಎನ್ನುತಿಹರು|
ಅವರೆಮಗೆ ಹಾಕಿದ ಬಂಧನಗಳನು ಹರಿಯೋಣ ಎನ್ನುತಿಹರು||
ಪರದಲಿ ಆಸೀನನಾಗಿಹ ಪ್ರಭು ನಗುವನಿದಕೆ|
ಗುರಿಮಾಡದಿರನು ಇವರೆಲ್ಲರನು ಪರಿಹಾಸ್ಯಕ್ಕೆ|
ಅನಂತರ ಸಿಡಿದೆದ್ದು ಹೀಗೆಂದು ನುಡಿವನು: ನಾ ನೇಮಿಸಿದ ಅರಸನನ್ನೇ ಸ್ಥಾಪಿಸಿಹೆನು
ಸಿಯೋನ್ ಶ್ರೀ ಶಿಖರದಿಂದಲೇ ಅವನನು ಇರಿಸಿಹೆನು|
ಈ ಪರಿ ಕೆರಳಿ ಕಳವಳಗೊಳಿಸುವನು ಅವರನು||
ಕೇಳಿರೀ, ದೈವಾಜ್ಞೆಯನು, ಆತನು ಎನಗಿಂತೆಂದನು|
ಈ ದಿನ ನಾ ನಿನ್ನ ಹಡೆದಿಹನು: ನೀನೆನಗೆ ಮಗನು||
ಕೇಳಿದೆಯಾಕೆಂದರೆ ನಿನಗಧೀನಮಾಡುವೆನು ರಾಷ್ಟ್ರಗಳನು|
ಕೊಡುವೆನು ನಿನಗೆ ಸ್ವಾಸ್ಥ್ಯವಾಗಿ ಜಗದ ಆದ್ಯಂತ್ಯವನು||
ನೀ ಬಡಿದು ಹಾಕುವೆ ಕಬ್ಬಿಣದ ಗದೆಯಿಂದವರನು|
ನೀ ಒಡೆದು ಹಾಕುವೆ ಮಣ್ಣಿನ ಮಡಕೆಯಂತವರನು||
ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ!
ನೀವು ಯೇಸು ಕ್ರಿಸ್ತರೊಂದಿಗೆ ಪುನರುತ್ಥಾನ ಹೊಂದಿರುವುದಾದರೆ, ಸ್ವರ್ಗೀಯ ವಿಷಯಗಳ ಕಡೆಗೆ ಗಮನಕೊಡಿ. ಕ್ರಿಸ್ತ ಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಅಸೀನರಾಗಿದ್ದಾರೆ.
ಅಲ್ಲೆಲೂಯ!
ಶುಭಸಂದೇಶ: ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 3;1-8
ಆ ಕಾಲದಲ್ಲಿ ನಿಕೊದೇಮನೆಂಬ ಫರಿಸಾಯನೊಬ್ಬನಿದ್ಧನು. ಅವನು ಯೆಹೂದ್ಯರ ನಾಯಕರಲ್ಲಿ ಒಬ್ಬನು. ಒಂದು ರಾತ್ರಿ ಅವನು ಯೇಸುವಿನ ಬಳಿಗೆ ಬಂದು, "ಗುರುದೇವಾ, ತಾವು ದೇವರಿಂದ ಬಂದ ಬೋಧಕರೆಂದು ನಾವು ಬಲ್ಲೆವು. ದೇವರು ತನ್ನೊಡನೆ ಇಲ್ಲದ ಹೊರತು ಯಾರಿಂದಲೂ ತಾವು ಮಾಡುವ ಸೂಚಕ ಕಾರ್ಯಗಳನ್ನು ಮಾಡಲು ಆಗದು, " ಎಂದು ಹೇಳಿದನು. ಆಗ ಯೇಸು, "ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ: ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ಸಾಮ್ರಾಜ್ಯವನ್ನು ಸೇರಲಾರ, "ಎಂದು ಹೇಳಿದರು. ಅದಕ್ಕೆ ನಿಕೊದೇಮನು, ವಯಸ್ಸಾದ ಒಬ್ಬನು ಹೊಸದಾಗಿ ಹುಟ್ಟುವುದಾದರು ಹೇಗೆ? ತಾಯಿಯ ಗರ್ಭವನ್ನು ಮತ್ತೊಮ್ಮೆ ಹೊಕ್ಕು ಅವನು ಹುಟ್ಟಲು ಸಾಧ್ಯವೇ? "ಎಂದು ಕೇಳಿದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ: ನೀರಿನಿಂದಲೂ ಪವಿತ್ರಾತ್ಮನಿಂದಲೂ ಹುಟ್ಟಿದ ಹೊರತು ಯಾವನೂ ದೇವರ ರಾಜ್ಯವನ್ನು ಪ್ರವೇಶಿಸಲಾರನು. ಶರೀರದಿಂದ ಹುಟ್ಟಿದ್ದು ಶರೀರಮಯ, ದೇವರಿಂದ ಹುಟ್ಟಿದ್ದು ದೈವಮಯ. ನೀವು ಹೊಸ ಜನ್ಮ ಪಡೆಯಬೇಕೆಂದು ನಾನು ಹೇಳಿದ್ದನ್ನು ಕೇಳಿ ಬೆರಗಾಗಬೇಕಿಲ್ಲ. ಗಾಳಿ ತನಗೆ ತೋಚಿದ ಕಡೆ ಬೀಸುತ್ತದೆ. ಅದರ ಸದ್ದು ನಿನಗೆ ಕೇಳಿಸುತ್ತದೆ; ಆದರೆ ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ನಿನಗೆ ತಿಳಿಯದು. ದೇವರ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನೂ ಅದರಂತೆಯೇ, " ಎಂದು ಹೇಳಿದರು.
No comments:
Post a Comment