ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.05.25

ಮೊದಲನೆಯ ವಾಚನ: ಆದಿಕಾಂಡದಿಂದ ಇಂದಿನ ವಾಚನ 1:26-2:3

ದೇವರು, "ನಮ್ಮಂತೆಯೇ ಇರುವ ಹಾಗೂ ನಮ್ಮನ್ನು ಹೋಲುವ ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ- ಚಿಕ್ಕ ಸಾಕುಪ್ರಾಣಿ ಹಾಗೂ ಕಾಡು ಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ, "ಎಂದರು. ಹೀಗೆ ದೇವರು: ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ. ಅವರನ್ನು ದೇವರು ಆಶೀರ್ವದಿಸಿ, "ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿ ಕೊಳ್ಳಿರಿ; ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ. ಇನ್ನೂ ಭೂಮಿಯಲ್ಲಿರುವ ಎಲ್ಲ ತರದ ದವಸ ಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ " ಎಂದು ಹೇಳಿದರು. ಹಾಗೆಯೇ ಆಯಿತು. ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಪರಲೋಕ - ಭೂಲೋಕಗಳೂ ಅವುಗಳಲ್ಲಿ ಇರುವ ಸಮಸ್ತವೂ ಹೀಗೆ ನಿರ್ಮಿತವಾದವು. ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು. ಆ ಏಳನೆಯ ದಿನವು ಪರಿಶುದ್ದವಾಗಿರಲಿ ಎಂದು ಆಶೀರ್ವದಿಸಿದರು. ತಮ್ಮ ಸೃಷ್ಟಿಕಾರ್ಯವನ್ನೆಲ್ಲಾ ಮುಗಿಸಿ, ಆ ದಿನದಂದು ವಿಶ್ರಮಿಸಿಕೊಂಡ ಕಾರಣ ಹಾಗೆ ಮಾಡಿದರು.

ಕೀರ್ತನೆ 90:2,3-4,12-13,14,17
ಶ್ಲೋಕ: ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ, ಓ ಪ್ರಭೂ!

ಬೆಟ್ಟಗಳು ಹುಟ್ಟುವುದಕ್ಕೆ ಮುಂಚಿನಿಂದ|
ಭೂದೇಶಗಳು ಆಗುವುದಕ್ಕೆ ಮೊದಲಿನಿಂದ|
ನೀನೆಮಗೆ ದೇವರು ಯುಗಯುಗಗಳಿಂದ||

ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ|
"ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ" ಎನ್ನುತಿಹೆ||
ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ|
ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ||

ಜೀವನಾವಧಿಯನು ಲೆಕ್ಕಿಸುವುದನ್ನು ನಮಗೆ ಕಲಿಸು|
ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು||
ಪ್ರಭೂ, ತಿರುಗಿ ಬಾ, ಕೋಪವೆಷ್ಟರ ತನಕ|
ನಿನ್ನ ಸೇವಕರ ಮೇಲಿರಲಿ ಮರುಕ||

ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ|
ಹರ್ಷಿಸಿ ಆನಂದಿಸುವೆವು ಆಗ ದಿನದಾದ್ಯಂತ||
ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಭಕ್ತರಿಗೆ|
ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ||

ಘೋಷಣೆ (ಕೀರ್ತನೆ 68:20)
ಅಲ್ಲೆಲೂಯ, ಅಲ್ಲೆಲೂಯ!
ನಮ್ಮ ದೇವರು ಜೀವೋದ್ಧಾರಕ ದೇವರು ಹೌದು | ಸಾವಿಂದ ತಪ್ಪಿಸುವ ಶಕ್ತಿ, ಸ್ವಾಮಿ ದೇವರದು||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 13:54-58

ಆ ಕಾಲದಲ್ಲಿ ಯೇಸು ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಬೋಧನೆ ಮಾಡಿದರು. ಅದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, "ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು? ಈ ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ? ಇವನು ಆ ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು? " ಎಂದು ಮಾತನಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು. ಅವರಿಗೆ ಯೇಸು, "ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ದೊರಕದು, "ಎಂದು ಹೇಳಿದರು. ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತ ಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ.

30.04.25 - ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು, ಕಾಯುವನು ಪ್ರಭುವಿನ ದೂತನೇ ಬಂದಿಳಿದು

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ಇಂದಿನ ವಾಚನ 5:17-26


ಪ್ರಧಾನ ಯಾಜಕನೂ ಅವನ ಸಂಗಡವಿದ್ದ ಸ್ಥಳೀಯ ಸದ್ದುಕಾಯರೂ ಪ್ರೇಷಿತರ ಬಗ್ಗೆ ತೀವ್ರ ಅಸೂಯೆಪಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದರು. ಪ್ರೇಷಿತರನ್ನು ಬಂಧಿಸಿ ಊರ ಸೆರೆಯಲ್ಲಿಟ್ಟರು. ಆ ರಾತ್ರಿಯೇ ಪ್ರಭುವಿನ ದೂತನೊಬ್ಬನು ಸೆರೆಮನೆಯ ದ್ವಾರಗಳನ್ನು ತೆರೆದು ಪ್ರೇಷಿತರನ್ನು ಹೊರಕ್ಕೆ ತಂದನು. " ಹೋಗಿರಿ, ಮಹಾದೇವಾಲಯದಲ್ಲಿ ನಿಂತು ಈ ನವ ಜೀವದ ಬಗ್ಗೆ ಜನರಿಗೆ ಬೋಧಿಸಿರಿ, " ಎಂದನು. ಅದರಂತೆ ಪ್ರೇಷಿತರು ಮುಂಜಾವದಲ್ಲೇ ದೇವಾಲಯವನ್ನು ಪ್ರವೇಶಿಸಿ ಬೋಧಿಸಲಾರಂಭಿಸಿದರು. ಇತ್ತ ಪ್ರಧಾನ ಯಾಜಕನೂ ಅವನ ಸಂಗಡಿಗರೂ ಜೊತೆಗೂಡಿ ಯೆಹೂದ್ಯ ಪ್ರಮುಖರನ್ನೊಳಗೊಂಡ ಶ್ರೇಷ್ಠ ನ್ಯಾಯಸಭೆಯನ್ನು ಕರೆದರು. ಅನಂತರ ಪ್ರೇಷಿತರನ್ನು ಆ ಸಭೆಯ ಮುಂದೆ ಕರೆತರುವಂತೆ ಸೆರೆಮನೆಯ ಅಧಿಕಾರಿಗಳಿಗೆ ಆಜ್ಞೆಯಿತ್ತರು. ಈ ಅಧಿಕಾರಿಗಳು ಸೆರೆಮನೆಗೆ ಬಂದಾಗ ಅಲ್ಲಿ ಪ್ರೇಷಿತರನ್ನು ಕಾಣಲಿಲ್ಲ. ಹಿಂದಿರುಗಿ ಹೋಗಿ ನ್ಯಾಯಸಭೆಗೆ ಈ ವಿಷಯವನ್ನು ವರದಿಮಾಡಿದರು: " ನಾವು ಸೆರೆಮನೆಗೆ ಹೋದಾಗ ಅದಕ್ಕೆ ಹಾಕಿದ್ದ ಬೀಗಮುದ್ರೆಯೇನೋ ಭದ್ರವಾಗಿತ್ತು. ಪಹರೆಯವರು ದ್ವಾರದಲ್ಲಿ ಕಾವಲಿದ್ದರು. ಆದರೆ ದ್ವಾರವನ್ನು ತೆರೆದು ನೋಡಿದಾಗ ಒಳಗೆ ಯಾರನ್ನೂ ನಾವು ಕಾಣಲಿಲ್ಲ, " ಎಂದು ತಿಳಿಸಿದರು. ದೇವಾಲಯದ ದಳಪತಿ ಮತ್ತು ಮುಖ್ಯಯಾಜಕರು ಇದನ್ನು ಕೇಳಿ, ಇದರಿಂದೇನಾಗುವುದೋ ಎಂದು ಕಳವಳಗೊಂಡರು. ಅಷ್ಟರಲ್ಲಿ ಒಬ್ಬನು ಅಲ್ಲಿಗೆ ಬಂದು, " ಇಗೋ, ನೀವು ಸೆರೆಮನೆಯಲ್ಲಿಟ್ಟವರು ದೇವಾಲಯದಲ್ಲಿ ನಿಂತು ಜನರಿಗೆ ಭೂಧಿಸುತ್ತಿದ್ದಾರೆ, " ಎಂದನು. ಆಗ ಆ ದಳಪತಿ ಅಧಿಕಾರಿಗಳೊಡನೆ ಹೋಗಿ ಪ್ರೇಷಿತರನ್ನು ಕರೆದುಕೊಂಡು ಬಂದನು. ಜನರು ತಮ್ಮ ಮೇಲೆ ಕಲ್ಲುತೂರಬಹುದೆಂಬ ಭಯದಿಂದ ಪ್ರೇಷಿತರ ಮೇಲೆ ಅವರು ಯಾವ ಬಲಪ್ರಯೋಗವನ್ನೂ ಮಾಡಲಿಲ್ಲ.

ಕೀರ್ತನೆ: 34:1-8, v.6
ಶ್ಲೋಕ: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು |

ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು|
ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು||
ಪ್ರಭುವಿನಲ್ಲಿದೆ ನನ್ನ ಮನದಭಿಮಾನ|
ದೀನರಿದನು ಕೇಳಿ, ಪಡಯಲಿ ಸುಮ್ಮಾನ||

ಬನ್ನಿ, ಕೊಂಡಾಡುವ ಪ್ರಭು ದೇವನನು|
ಘನಪಡಿಸೋಣ ಅವನ ಶ್ರೀನಾಮವನು||
ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು|
ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು||

ಆತನತ್ತ ತಿರುಗಿದ ಮುಖ ಅರಳುವುದು|
ಲಜ್ಜೆಯಿಂದೆಂದಿಗು ಕುಂದಿಹೋಗದು||
ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು|
ಸರ್ವಾಪತ್ತಿನಿಂದವನು ಮುಕ್ತಗೊಂಡನು||

ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು|
ಕಾಯುವನು ಪ್ರಭುವಿನ ದೂತನೇ ಬಂದಿಳಿದು||
ಸವಿದು ನೋಡು ಪ್ರಭುವಿನ ಮಾಧುರ್ಯವನು|
ಆತನನು ಆಶ್ರಯಿಸಿಕೊಂಡವನು ಧನ್ಯನು||

ಘೋಷಣೆ: ಯೊವಾನ್ನ 3:16
ಅಲ್ಲೆಲೂಯ, ಅಲ್ಲೆಲೂಯ!

ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ದಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ||

ಶುಭಸಂದೇಶ: ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 3:16-21


ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: " ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು. ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆಂದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ. ಆ ತೀರ್ಪು ಏನೆಂದರೆ: ಜ್ಯೋತಿ ಜಗತ್ತಿಗೆ ಬಂದಿದು; ಮಾನವರಾದರೋ ತಮ್ಮ ದುಷ್ಕೃತ್ಯಗಳಿಂದಾಗಿ ಆ ಜ್ಯೋತಿಗೆ ಬದಲು ಅಂಧಕಾರವನ್ನೇ ಅವಲಂಭಿಸಿದರು. ಕೇಡನ್ನು ಮಾಡುವವನಿಗೆ ಬೆಳಕೆಂದರೆ ಆಗದು. ತನ್ನ ದುಷ್ಕ್ರತ್ಯಗಳು ಬಯಲಾಗಬಾರದೆಂದು ಅವನು ಬೆಳಕಿನ ಬಳಿಗೆ ಸುಳಿಯುವುದೂ ಇಲ್ಲ, ಸತ್ಯಸಂಧನಾದರೋ ಬೆಳಕಿನ ಬಳಿಗೆ ಬರುತ್ತಾನೆ. ತಾನು ಮಾಡುವುದು ದೇವರು ಮೆಚ್ಚುವುದನ್ನೇ ಎಂಬುದನ್ನು ತೋರ್ಪಡಿಸುತ್ತಾನೆ."

29.04.25 - ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ಇಂದಿನ ವಾಚನ 4:32-37



ಭಕ್ತವಿಶ್ವಾಸಿಗಳು ಒಗ್ಗಟ್ಟಿನಿಂದಲೂ ಒಮ್ಮನಸ್ಸಿನಿಂದಲೂ ಬಾಳುತ್ತಿದ್ದರು. ಯಾರೂ ತಮ್ಮ ಸೊತ್ತನ್ನು ತನ್ನದೇ ಎಂದು ಭಾವಿಸದೆ ಹುದುವಾಗಿ ಹಂಚಿಕೊಳ್ಳುತ್ತಿದ್ದರು. ಪ್ರೇಷಿತರು ಪ್ರಭು ಯೇಸುವಿನ ಪುನರುತ್ಥಾನಕ್ಕೆ ಬಹು ಸಾಮರ್ಥ್ಯದಿಂದ ಸಾಕ್ಷಿಕೊಡುತ್ತಿದ್ದರು. ಜನರು ಅವರೆಲ್ಲರನ್ನು ಗೌರವದಿಂದ ಕಾಣುತ್ತಿದ್ದರು. ಅವರಲ್ಲಿ ಕೊರತೆಯಿದ್ದವರು ಒಬ್ಬರೂ ಇರಲಿಲ್ಲ. ಕಾರಣ - ಹೊಲಗದ್ದೆ, ಮನೆಮಾರು ಇದ್ದವರೆಲ್ಲರೂ ಅವುಗಳನ್ನು ವಿಕ್ರಯಿಸಿ ಬಂದ ಹಣವನ್ನು ತಂದು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸುತ್ತಿದ್ದರು. ಇವರು ಅದನ್ನು ಪ್ರತಿಯೊಬ್ಬರಿಗೂ ಅವರವರ ಅವಶ್ಯಕತೆಗೆ ತಕ್ಕಂತೆ ಹಂಚುತ್ತಿದ್ದರು.
ಜೋಸೆಫ್ ಎಂಬ ಲೇವಿಯನು ಅವರ ಸಂಗಡ ಇದ್ದನು. ಇವನ ಹುಟ್ಟೂರು ಸೈಪ್ರಸ್. ಇವನಿಗೆ 'ಬಾರ್ನಬ' (ಎಂದರೆ ಪ್ರೋತ್ಸಾಹಪುತ್ರ) ಎಂದು ಪ್ರೇಷಿತರು ಹೆಸರಿಟ್ಟಿದ್ದರು. ಇವನು ತನ್ನ ಜಮೀನನ್ನು ಮಾರಿ ಬಂದ ಹಣವನ್ನು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸಿದನು.

ಕೀರ್ತನೆ: 93:1-2, 5.v.1.
ಶ್ಲೋಕ: ವಹಿಸಿಹನು ಪ್ರಭು ರಾಜ್ಯಾಧಿಕಾರವನು|ಧರಿಸಿಹನು ಘನತೆಯ ವಸ್ತ್ರಲಾಂಛನವನು||

ವಹಿಸಿಹನು ಪ್ರಭು ರಾಜ್ಯಾಧಿಕಾರವನು|
ಧರಿಸಿಹನು ಘನತೆಯ ವಸ್ತ್ರಲಾಂಛನವನು|
ತೊಟ್ಟಿಹನು ಶೌರ್ಯವೆಂಬ ನಡುಕಟ್ಟನು||

ಸ್ಥಿರಪಡಿಸಿಹನು ಕದಲದಂತೆ ಜಗವನು|
ನಿನ್ನ ಸಿಂಹಾಸನ ಸ್ಥಿರ ಆದಿಯಿಂದ|
ನೀನಿರುವೆ ಪ್ರಭೂ ಅನಾದಿಯಿಂದ||

ನಿನ್ನ ಆಜ್ಞೆಗಳು ಪ್ರಭು ಸುಸ್ಥಿರ |
ನಿನ್ನ ಆಲಯಕೆ ಪವಿತ್ರತೆ ಅರ್ಹ|
ಯುಗಯುಗಾಂತರಕೂ ಅದು ಅರ್ಹ||

ಘೋಷಣೆ: ಪ್ರಕಟನೆ 1:5
ಅಲ್ಲೆಲೂಯ, ಅಲ್ಲೆಲೂಯ!

ಪ್ರಭು ಕ್ರಿಸ್ತರೇ, ನೀವೇ ನಂಬಲರ್ಹವಾದ ಸಾಕ್ಷಿಯೂ, ಮೃತ್ಯುವಿನಿಂದ ಪುನರುತ್ಥಾನ ಹೊಂದಿದವರಲ್ಲಿ ಪ್ರಪ್ರಥಮರೂ, ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದಿಂದ ನಮ್ಮ ಪಾಪಗಳನ್ನು ತೊಳೆದವರೂ ಆಗಿದ್ದೀರಿ.

ಶುಭಸಂದೇಶ: ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 3:7-15


ಆ ಕಾಲದಲ್ಲಿ ಯೇಸು ನಿಕೊದೇಮನಿಗೆ ಹೀಗೆಂದರು: " ನೀವು ಹೊಸಜನ್ಮ ಪಡೆಯಬೇಕೆಂದು ನಾನು ಹೇಳಿದ್ದನ್ನು ಕೇಳಿ ಬೆರಗಾಗಬೇಕಿಲ್ಲ. ಗಾಳಿ ತನಗೆ ತೋಚಿದ ಕಡೆ ಬೀಸುತ್ತದೆ, ಅದರ ಸದ್ದು ನಿನಗೆ ಕೇಳಿಸುತ್ತದೆ; ಆದರೆ ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ನಿನಗೆ ತಿಳಿಯದು. ದೇವರ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನೂ ಅದರಂತೆಯೇ, ಎಂದು ಹೇಳಿದರು. ಅದಕ್ಕೆ ನಿಕೊದೇಮನು, " ಇದೆಲ್ಲಾ ಹೇಗೆ ಸಾಧ್ಯ? " ಎಂದು ಕೇಳಿದನು. ಆಗ ಯೇಸು, " ಇಸ್ರಯೇಲಿನ ಹೆಸರಾಂತ ಬೋಧಕನಾದ ನಿನಗೆ ಇದು ಅರ್ಥವಾಗಲಿಲ್ಲವೆ? ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ ಕೇಳು: ನಮಗೆ ತಿಳಿದುದನ್ನೆ ಕುರಿತು ನಾವು ಮಾತನಾಡುತ್ತೇವೆ; ನಾವು ಕಂಡದ್ದನ್ನು ಕುರಿತು ಸಾಕ್ಷಿನೀಡುತ್ತೇವೆ. ಆದರೂ ನಮ್ಮ ಸಾಕ್ಷ್ಯವನ್ನು ನೀವು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಬೋಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಾಗಲೇ ನಿಮಗೆ ವಿಶ್ವಾಸವಿಲ್ಲವೆಂದ ಮೇಲೆ, ಸ್ವರ್ಗಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಲ್ಲಿ ನೀವು ವಿಶ್ವಾಸಿಸುವುದು ಉಂಟೆ ? ಸ್ವರ್ಗಲೋಕದಿಂದಲೇ ಇಳಿದು ಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ. ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು, " ಎಂದರು.

28.04.25

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂ ದ ಇಂದಿನ ವಾಚನ 4:23-31

ಪೇತ್ರ ಮತ್ತು ಯೊವಾನ್ನ ಬಂಧನದಿಂದ ಬಿಡುಗಡೆ ಹೊಂದಿದ ಮೇಲೆ ವಿಶ್ವಾಸಿಗಳಿಗೆ ಭೇಟಿಯಿತ್ತರು. ಮುಖ್ಯ ಯಾಜಕರು ಹಾಗೂ ಪ್ರಜಾಪ್ರಮುಖರು ತಮಗೆ ಹೇಳಿದ್ದನ್ನು ಅವರಿಗೆ ವರದಿಮಾಡಿದರು. ಈ ಸಮಾಚಾರವನ್ನು ಕೇಳಿದ ಕೂಡಲೇ ಭಕ್ತಾದಿಗಳು ಏಕಕಂಠದಿಂದ ದೇವರನ್ನು ಪ್ರಾರ್ಥಿಸುತ್ತಾ ಹೀಗೆಂದರು: " ಪ್ರಭೂ, ಇಹಪರಗಳನ್ನೂ ಸಮುದ್ರ ಸಾಗರಗಳನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದವರು ನೀವೇ. ಸರ್ವೇಶ್ವರನಿಗೂ ಆತ ಅಭಿಷೇಕಿಸಿದವನಿಗೂ ವಿರುದ್ಧ 'ಅನ್ಯಧರ್ಮಿಯರೇಕೆ ರೋಷಭರಿತರಾದರು? ಜನರೇಕೆ ವ್ಯರ್ಥ ಒಳಸಂಚು ಹೂಡಿದರು? ಲೋಕಾಧಿಪತಿಗಳೇಕೆ ಸನ್ನದ್ಧರಾದರು? ಜನನಾಯಕರೇಕೆ ಸಮಾಲೋಚಿಸಿದರು? " ಎಂದು ನಮ್ಮ ಪಿತಾಮಹ ಹಾಗೂ ನಿಮ್ಮ ದಾಸನಾದ ದಾವೀದನ ಬಾಯಿಂದ ನುಡಿಸಿದಿರಿ. ಅಂತೆಯೇ, ನಿಮ್ಮ ಪರಮ ಪೂಜ್ಯ ದಾಸ ಯೇಸುವಿನ ವಿರುದ್ಧ ಹೆರೋದನು ಮತ್ತು ಪೊಂತ್ಸಿಯುಸ್ ಪಿಲಾತನು ಅನ್ಯಧರ್ಮದವರೊಡನೆ ಹಾಗೂ ಇಸ್ರಯೇಲಿನ ಜನರೊಡನೆ ಸೇರಿ ಈ ಪಟ್ಟಣದಲ್ಲೇ ಸಮಾಲೋಚನೆ ಮಾಡಿದರು. ನೀವು ಸಂಯೋಜಿಸಿದ್ದು ಹಾಗೂ ಸಂಕಲ್ಪಿಸಿದ್ದು ಈಡೇರುವಂತೆ ಅವರು ಹೀಗೆ ವರ್ತಿಸಿದರು. ಪ್ರಭೂ, ಇಗೋ, ಇವರು ನಮ್ಮನ್ನು ಬೆದರಿಸುತ್ತಿದ್ದಾರೆ; ನಿಮ್ಮ ಸಂದೇಶವನ್ನು ಧೈರ್ಯವಾಗಿ ಸಾರಲು ಶರಣರಾದ ನಮಗೆ ನೆರವು ನೀಡಿರಿ. ಸ್ವಸ್ಥಪಡಿಸುವ ನಿಮ್ಮ ಅಮೃತ ಹಸ್ತವನ್ನು ಚಾಚಿರಿ; ನಿಮ್ಮ ಪರಮ ಪೂಜ್ಯ ದಾಸ ಯೇಸುವಿನ ನಾಮದಲ್ಲಿ ಅದ್ಬುತಗಳೂ ಸೂಚಕ ಕಾರ್ಯಗಳೂ ಜರಗುವಂತಾಗಲಿ. "ಹೀಗೆ ಪ್ರಾರ್ಥನೆಮಾಡಿದಾಗ ಅವರು ನೆರೆದಿದ್ದ ಸ್ಥಳ ಕಂಪಿಸಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು. ದೇವರ ಶುಭಸಂದೇಶವನ್ನು ಧೈರ್ಯವಾಗಿ ಸಾರತೊಡಗಿದರು.

ಕೀರ್ತನೆ: 2:1-2,3-9. v. 12
ಶ್ಲೋಕ: ದೇವರನ್ನು ಆಶ್ರಯಿಸುವವರಿಗೆ ಸೌಭಾಗ್ಯ, ಸಂತೋಷ.

ದೊಂಬಿಯೇಳುವುದೇತಕೆ ಅನ್ಯ ದೇಶವಿದೇಶಗಳು?
ಕುತಂತ್ರ ಹೂಡುವುದೇಕೆ ಅನ್ಯ ಜಾತಿಜನಾಂಗಗಳು?
ದೇವನಿಗೂ, ಅವನಭಿಷಿಕ್ತನಿಗೂ ವಿರುದ್ದವಾಗಿ|
ಅವರೆಮಗೆ ತೊಡಿಸಿಹ ಬೇಡಿಗಳನು ಮುರಿಯೋಣ ಎನ್ನುತಿಹರು|
ಅವರೆಮಗೆ ಹಾಕಿದ ಬಂಧನಗಳನು ಹರಿಯೋಣ ಎನ್ನುತಿಹರು||

ಪರದಲಿ ಆಸೀನನಾಗಿಹ ಪ್ರಭು ನಗುವನಿದಕೆ|
ಗುರಿಮಾಡದಿರನು ಇವರೆಲ್ಲರನು ಪರಿಹಾಸ್ಯಕ್ಕೆ|
ಅನಂತರ ಸಿಡಿದೆದ್ದು ಹೀಗೆಂದು ನುಡಿವನು: ನಾ ನೇಮಿಸಿದ ಅರಸನನ್ನೇ ಸ್ಥಾಪಿಸಿಹೆನು
ಸಿಯೋನ್ ಶ್ರೀ ಶಿಖರದಿಂದಲೇ ಅವನನು ಇರಿಸಿಹೆನು|
ಈ ಪರಿ ಕೆರಳಿ ಕಳವಳಗೊಳಿಸುವನು ಅವರನು||

ಕೇಳಿರೀ, ದೈವಾಜ್ಞೆಯನು, ಆತನು ಎನಗಿಂತೆಂದನು|
ಈ ದಿನ ನಾ ನಿನ್ನ ಹಡೆದಿಹನು: ನೀನೆನಗೆ ಮಗನು||
ಕೇಳಿದೆಯಾಕೆಂದರೆ ನಿನಗಧೀನಮಾಡುವೆನು ರಾಷ್ಟ್ರಗಳನು|
ಕೊಡುವೆನು ನಿನಗೆ ಸ್ವಾಸ್ಥ್ಯವಾಗಿ ಜಗದ ಆದ್ಯಂತ್ಯವನು||
ನೀ ಬಡಿದು ಹಾಕುವೆ ಕಬ್ಬಿಣದ ಗದೆಯಿಂದವರನು|
ನೀ ಒಡೆದು ಹಾಕುವೆ ಮಣ್ಣಿನ ಮಡಕೆಯಂತವರನು||

ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ!
ನೀವು ಯೇಸು ಕ್ರಿಸ್ತರೊಂದಿಗೆ ಪುನರುತ್ಥಾನ ಹೊಂದಿರುವುದಾದರೆ, ಸ್ವರ್ಗೀಯ ವಿಷಯಗಳ ಕಡೆಗೆ ಗಮನಕೊಡಿ. ಕ್ರಿಸ್ತ ಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಅಸೀನರಾಗಿದ್ದಾರೆ.

ಅಲ್ಲೆಲೂಯ!

ಶುಭಸಂದೇಶ: ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 3;1-8

ಆ ಕಾಲದಲ್ಲಿ ನಿಕೊದೇಮನೆಂಬ ಫರಿಸಾಯನೊಬ್ಬನಿದ್ಧನು. ಅವನು ಯೆಹೂದ್ಯರ ನಾಯಕರಲ್ಲಿ ಒಬ್ಬನು. ಒಂದು ರಾತ್ರಿ ಅವನು ಯೇಸುವಿನ ಬಳಿಗೆ ಬಂದು, "ಗುರುದೇವಾ, ತಾವು ದೇವರಿಂದ ಬಂದ ಬೋಧಕರೆಂದು ನಾವು ಬಲ್ಲೆವು. ದೇವರು ತನ್ನೊಡನೆ ಇಲ್ಲದ ಹೊರತು ಯಾರಿಂದಲೂ ತಾವು ಮಾಡುವ ಸೂಚಕ ಕಾರ್ಯಗಳನ್ನು ಮಾಡಲು ಆಗದು, " ಎಂದು ಹೇಳಿದನು. ಆಗ ಯೇಸು, "ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ: ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ಸಾಮ್ರಾಜ್ಯವನ್ನು ಸೇರಲಾರ, "ಎಂದು ಹೇಳಿದರು. ಅದಕ್ಕೆ ನಿಕೊದೇಮನು, ವಯಸ್ಸಾದ ಒಬ್ಬನು ಹೊಸದಾಗಿ ಹುಟ್ಟುವುದಾದರು ಹೇಗೆ? ತಾಯಿಯ ಗರ್ಭವನ್ನು ಮತ್ತೊಮ್ಮೆ ಹೊಕ್ಕು ಅವನು ಹುಟ್ಟಲು ಸಾಧ್ಯವೇ? "ಎಂದು ಕೇಳಿದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ: ನೀರಿನಿಂದಲೂ ಪವಿತ್ರಾತ್ಮನಿಂದಲೂ ಹುಟ್ಟಿದ ಹೊರತು ಯಾವನೂ ದೇವರ ರಾಜ್ಯವನ್ನು ಪ್ರವೇಶಿಸಲಾರನು. ಶರೀರದಿಂದ ಹುಟ್ಟಿದ್ದು ಶರೀರಮಯ, ದೇವರಿಂದ ಹುಟ್ಟಿದ್ದು ದೈವಮಯ. ನೀವು ಹೊಸ ಜನ್ಮ ಪಡೆಯಬೇಕೆಂದು ನಾನು ಹೇಳಿದ್ದನ್ನು ಕೇಳಿ ಬೆರಗಾಗಬೇಕಿಲ್ಲ. ಗಾಳಿ ತನಗೆ ತೋಚಿದ ಕಡೆ ಬೀಸುತ್ತದೆ. ಅದರ ಸದ್ದು ನಿನಗೆ ಕೇಳಿಸುತ್ತದೆ; ಆದರೆ ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ನಿನಗೆ ತಿಳಿಯದು. ದೇವರ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನೂ ಅದರಂತೆಯೇ, " ಎಂದು ಹೇಳಿದರು.

27.04.25

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ಇಂದಿನ ವಾಚನ: 5:12-16

ಜನರೆಲ್ಲರ ಕಣ್ಮುಂದೆ ಅನೇಕ ಅದ್ಭುತ ಕಾರ್ಯಗಳೂ ಸೂಚಕಕಾರ್ಯಗಳೂ ಪ್ರೇಷಿತರ ಮುಖಾಂತರ ನಡೆಯುತ್ತಿದ್ದವು. ಭಕ್ತವಿಶ್ವಾಸಿಗಳೆಲ್ಲರೂ ಸೊಲೊಮೋನನ ಮಂಟಪದಲ್ಲಿ ಸಭೆ ಸೇರುತ್ತಿದ್ದರು. ಹೊರಗಿನವರು ಅವರನ್ನು ಬಹಳವಾಗಿ ಹೊಗಳುತ್ತಿದ್ದರೂ ಅವರ ಸಂಗಡ ಸೇರಲು ಯಾರಿಗೂ ಧೈರ್ಯವಿರಲಿಲ್ಲ. ಆದರೂ ಪ್ರಭುವನ್ನು ವಿಶ್ವಾಸಿಸುತ್ತಿದ್ದ ಸ್ತ್ರೀಪುರುಷರ ಸಂಖ್ಯೆ ಅಧಿಕವಾಗುತ್ತಾ ಬಂದಿತು. ಪೇತ್ರನು ಹಾದುಹೋಗುವಾಗ ಆತನ ನೆರಳಾದರೂ ಕೆಲವರ ಮೇಲೆ ಬೀಳಲೆಂದು ಜನರು ರೋಗಿಗಳನ್ನು ಹಾಸಿಗೆ ಅಥವಾ ಡೋಲಿಗಳ ಸಮೇತ ಹೊತ್ತು ತಂದು ಹಾದಿಗಳಲ್ಲಿ ಮಲಗಿಸುತ್ತಿದ್ದರು. ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದಲೂ ರೋಗಿಗಳನ್ನು ಮತ್ತು ಪಿಶಾಚಿಪೀಡಿತರನ್ನು ಜನರು ತರುತ್ತಿದ್ದರು; ಎಲರೂ ಸ್ವಸ್ಥರಾಗುತ್ತಿದ್ದರು.

ಕೀರ್ತನೆ 118:2-4,22-27 v. 1
ಶ್ಲೋಕ: ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ.

ಸಾರಲಿ ಇಸ್ರಯೇಲಿನ ಜನತೆ, ಆತನ ಪ್ರೀತಿ ಶಾಶ್ವತ ಎಂದೇ|
ಸಾರಲಿ ಆರೋನನ ವಂಶಲತೆ ಆತನ ಪ್ರೀತಿ ಶಾಶ್ವತ ಎಂದೇ|
ಸಾರಲಿ ಆತನ ಭಕ್ತರ ಪಂಥ, ಆತನ ಪ್ರೀತಿ ಶಾಶ್ವತ ಅಂಥ||

ಮನೆ ಕಟ್ಟುವವರು ಮೂಲೆಗೆಸೆದ ಕಲ್ಲು ಆಯಿತು ನೋಡು ಮುಖ್ಯವಾದ ಮೂಲೆಗಲ್ಲು|
ಪ್ರಭುವಿನಿಂದಲೇ ಆದ ಈ ಕಾರ್ಯ, ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ|
ಪ್ರಭುವೇ ನಿಯೋಜಿಸಿದ ದಿನವಿದು, ಹರ್ಷಿಸಿ ಆನಂದಿಸೋಣ ಇಂದು||

ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು, ಸುಕ್ಷೇಮ ನೀಡು ಪ್ರಭೂ ಕರುಣೆಯಿಟ್ಟು|
ಪ್ರಭುವಿನ ನಾಮದಲ್ಲಿ ಬರುವವನಿಗೆ ಜಯಮಂಗಳ||
ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ|
ಪ್ರಭುವೇ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು||

ಎರಡನೆಯ ವಾಚನ: ಪ್ರಕಟನಾ ಗ್ರಂಥದಿಂದ ಇಂದಿನ ಎರಡನೆಯ ವಾಚನ: 1:9-13,17-19

ನಾನು ಯೊವಾನ್ನ, ನಿಮ್ಮ ಸಹೋದರ; ಕ್ರಿಸ್ತಯೇಸುವಿನಲ್ಲಿ ದೇವರ ಸಾಮ್ರಾಜ್ಯಕ್ಕೆ ಸೇರಿರುವವರಿಗೆ ಬಂದೊದಗುವ ಕಷ್ಟಸಂಕಟಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವುದರಲ್ಲಿ ನಿಮ್ಮ ಪಾಲುಗಾರ. ದೇವರ ವಾಕ್ಯವನ್ನು ಸಾರಿದುದರಿಂದಲೂ ಕ್ರಿಸ್ತೇಸುವಿಗೆ ಸಾಕ್ಷಿ ನೀಡಿದುದರಿಂದಲೂ ನಾನು ಪತ್ಮೋಸ್ ದ್ವೀಪ ವಾಸವನ್ನು ಅನುಭವಿಸಬೇಕಾಯಿತು. ಪ್ರಭುವಿನ ದಿನದಂದು ನಾನು ದೇವರಾತ್ಮ ವಶನಾದೆ. ಆಗ ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು ತುತ್ತೂರಿಯ ನಾದದಂತಿತ್ತು. ಅದು ಹೀಗೆಂದು ನುಡಿಯಿತು: "ನೀನು ಕಾಣುತ್ತಿರುವುದನ್ನು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲಿದೆಲ್ಪಿಯ ಮತ್ತು ಲವೋದಿಕೀಯ ಎಂಬ ಪಟ್ಟಣಗಳಲ್ಲಿರುವ ಏಳು ಸಭೆಗಳಿಗೆ ಕಳುಹಿಸು. ನನ್ನ ಸಂಗಡ ಮಾತನಾಡುತ್ತಿರುವ ಈ ಶಬ್ದ ಯಾರದೆಂದು ನೋಡಲು ನಾನು ಹಿಂದಕ್ಕೆ ತಿರುಗಿದೆ. ಹಾಗೆ ತಿರುಗಿದಾಗ, ಏಳು ಚಿನ್ನದ ದೀಪಸ್ತಂಭಗಳನ್ನು ಕಂಡೆ. ಆ ದೀಪಸ್ತಂಭಗಳ ನಡುವೆ 'ನರಪುತ್ರ' ನಂಥ ಒಬ್ಬ ವ್ಯಕ್ತಿಯಿದ್ದರು. ಅವರು ನಿಲುವಂಗಿಯನ್ನು ತೊಟ್ಟಿದ್ದರು. ಅದು ಅವರ ಪಾದಗಳನ್ನು ಮುಟ್ಟುವಷ್ಟು ನೀಳವಾಗಿತ್ತು. ಅಲ್ಲದೆ, ಚಿನ್ನದ ಎದೆಪಟ್ಟಿಯನ್ನು ಕಟ್ಟಿಕೊಂಡಿದ್ದರು. ನಾನು ಅವರನ್ನು ಕಂಡಾಗ, ಸತ್ತವನಂತಾದೆ. ಅವರ ಪಾದಗಳ ಮುಂದೆ ಬಿದ್ದೆ. ಅವರು ತಮ್ಮ ಬಲಗೈಯನ್ನು ನನ್ನ ಮೇಲಿಟ್ಟು, "ಭಯಪಡಬೇಡ, ನಾನೇ ಮೊದಲನೆಯವನೂ ಕಡೆಯವನೂ ಸದಾ ಜೀವಿಸುವವನೂ ಆಗಿದ್ದೇನೆ. ಮರಣಹೊಂದಿದೆ ನಿಜ. ಆದರೆ ಇಗೋ ನೋಡು, ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. ಮೃತ್ಯುವಿನ ಮತ್ತು ಮೃತ್ಯುಲೋಕದ ಬೀಗದ ಕೈಗಳು ನನ್ನಲ್ಲಿವೆ. ಆದುದರಿಂದ ನೀನು ಕಂಡ ಘಟನೆಗಳನ್ನು ಅಂದರೆ, ಈಗ ನಡೆಯುತ್ತಿರುವ ಘಟನೆಗಳನ್ನೂ ಮುಂದೆ ಸಂಭವಿಸಲಿರುವ ಘಟನೆಗಳನ್ನೂ ಕುರಿತು ಬರೆ, " ಎಂದರು.

ಘೋಷಣೆ
ಯೊವಾನ್ನ 20:29 ಅಲ್ಲೆಲೂಯ, ಅಲ್ಲೆಲೂಯ!
ನನ್ನನ್ನು ಕಂಡದ್ದರಿಂದ ತಾನೇ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು.
ಅಲ್ಲೆಲೂಯ!

ಶುಭಸಂದೇಶ: ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 20:19-31

ಅದೇ ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ನಡುವೆ ನಿಂತರು. "ನಿಮಗೆ ಶಾಂತಿ! " ಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಯನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು. ಯೇಸು ಪುನಃ, "ನಿಮಗೆ ಶಾಂತಿ. ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ, "ಎಂದರು. ಅನಂತರ ಅವರ ಮೇಲೆ ಉಸಿರೂದಿ, "ಪವಿತ್ರಾತ್ಮರನ್ನು ಸ್ವೀಕರಿಸಿರಿ. ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು. ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು, "ಎಂದು ನುಡಿದರು. ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು, ಯೇಸುಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು, "ನಾವು ಪ್ರಭುವನ್ನು ನೋಡಿದೆವು, " ಎಂದು ಹೇಳಿದರು. ಅದಕ್ಕೆ ಅವನು, "ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು. ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ, "ಎಂದುಬಿಟ್ಟನು. ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನೂ ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು, "ನಿಮಗೆ ಶಾಂತಿ "ಎಂದರು. ಆಮೇಲೆ ತೋಮನಿಗೆ, "ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು. ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು, "ಎಂದು ಹೇಳಿದರು. ಆಗ ತೋಮನು, "ನನ್ನ ಪ್ರಭುವೇ, ನನ್ನ ದೇವರೇ, "ಎಂದನು. ಯೇಸು ಅವನಿಗೆ "ನನ್ನನ್ನು ಕಂಡದ್ದರಿಂದ ತಾನೇ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು, "ಎಂದು ಹೇಳಿದರು. ಯೇಸು ತಮ್ಮ ಶಿಷ್ಯರ ಕಣ್ಮುಂದೆ ಮಾಡಿದ ಸೂಚಕ ಕಾರ್ಯಗಳು ಇನ್ನೂ ಎಷ್ಟೋ ಇವೆ. ಅವನ್ನು ಈ ಪುಸ್ತಕದಲ್ಲಿ ಬರೆದಿಲ್ಲ. ಇಲ್ಲಿ ಬರೆದವುಗಳ ಉದ್ದೇಶ ಇಷ್ಟೇ; ಯೇಸು, ದೇವರ ಪುತ್ರ ಹಾಗು ಲೋಕೋದ್ಧಾರಕ ಎಂದು ನೀವು ವಿಶ್ವಾಸಿಸಬೇಕು; ವಿಶ್ವಾಸಿಸಿ ಅವರ ಹೆಸರಿನಲ್ಲಿ ಸಜ್ಜೀವವನ್ನು ಪಡೆಯಬೇಕು.

26.04.25 - "ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4:13-21



ಅವಿದ್ಯಾವಂತರು ಹಾಗೂ ಜನ ಸಾಮಾನ್ಯರು ಆಗಿದ್ದರೂ, ಇವರು ಇಷ್ಟು ಧೈರ್ಯಶಾಲಿಗಳಾಗಿರುವುದನ್ನು ಕಂಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸಂಗಡಿಗರೆಂದು ಇವರ ಗುರುತುಹಚ್ಚಿದರು. ಗುಣಹೊಂದಿದ್ದ ಆ ಮನುಷ್ಯನು ಪೇತ್ರ ಮತ್ತು ಯೊವಾನ್ನರ ಜೊತೆ ನಿಂತಿರುವುದನ್ನು ಕಂಡು ನಿರುತ್ತರರಾದರು. ಸಭಾಕೂಟದಿಂದ ಪ್ರೇಷಿತರನ್ನು ಹೊರಗೆ ಕಳುಹಿಸಿ ತಮ್ಮೊಳಗೇ ಚರ್ಚಿಸಲಾರಂಭಿಸಿದರು: ಇವರನ್ನು ಏನು ಮಾಡೋಣ? ಇವರು ಮಾಡಿರುವ ಅಪರೂಪ ಅದ್ಭುತ ಜೆರುಸಲೇಮಿನ ಸರ್ವರಿಗೂ ತಿಳಿದು ಹೋಗಿದೆ. ಅದನ್ನು ಅಲ್ಲಗಳೆಯುವಂತಿಲ್ಲ. ಆದರೂ, ಈ ಸಮಾಚಾರ ಜನರಲ್ಲಿ ಮತ್ತಷ್ಟು ಹರಡದಂತೆ ಇನ್ನು ಮೇಲೆ ಯಾರ ಬಳಿಯಲ್ಲೂ ಯೇಸುವಿನ ಹೆಸರೆತ್ತದಂತೆ ಇವರಿಗೆ ಎಚ್ಚರಿಕೆ ಕೊಡೋಣ,” ಎಂದುಕೊಂಡರು. ಅನಂತರ ಪ್ರೇಷಿತರನ್ನು ಒಳಕ್ಕೆ ಕರೆದು, “ಇನ್ನು ಮುಂದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಬೋಧಿಸಕೂಡದು,” ಎಂದು ಕಟ್ಟಪ್ಪಣೆ ಮಾಡಿದರು. ಆಗ ಪೇತ್ರ ಮತ್ತು ಯೊವಾನ್ನರು, “ನಾವು ದೇವರಿಗೆ ವಿಧೇಯರಾಗಬೇಕೋ? ನಿಮಗೆ ವಿಧೇಯರಾಗಬೇಕೋ? ದೇವರ ದೃಷ್ಟಿಯಲ್ಲಿ ಯಾವುದು ಸರಿ? ನೀವೇ ನಿರ್ಣಯಿಸಿರಿ. ನಾವಂತೂ ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ ವಿಷಯವನ್ನು ಕುರಿತು ಮೌನದಿಂದಿರಲಾಗದು,” ಎಂದು ಬದಲು ನುಡಿದರು. ನಡೆದ ಅದ್ಭುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. ಇದನ್ನು ಅರಿತ ಆ ಸಭಾಸದಸ್ಯರಿಗೆ ಪ್ರೇಷಿತರನ್ನು ಶಿಕ್ಷಿಸುವ ಮಾರ್ಗ ತೋಚದೆ ಹೋಯಿತು. ಆದುದರಿಂದ ಅವರನ್ನು ಇನ್ನೂ ಅಧಿಕವಾಗಿ ಎಚ್ಚರಿಸಿ ಕಳುಹಿಸಿಬಿಟ್ಟರು.

ಕೀರ್ತನೆ: 118:1, 14-15, 16-18, 19-21

ಶ್ಲೋಕ: ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ

ಪ್ರಭುವೇ ನನಗೆ ಬಲವುಧೈರ್ಯವು I
ಆತನಿಂದಲೇ ನನಗೆ ಉದ್ಧಾರವು II
ಜಯಘೋಷಹರ್ಷಸುನಾದ ಸಜ್ಜನರ ಬಿಡಾರದಿಂದ I
ಪರಾಕ್ರಮಪ್ರದರ್ಶನ ಪ್ರಭುವಿನ ಬಲಗೈಯಿಂದ II

ವಿಜಯಸಾಧನ ಪ್ರಭುವಿನಾ ಬಲಗೈಯಿಂದ I
ಪರಾಕ್ರಮಪ್ರದರ್ಶನವೂ ಅದರಿಂದ” II
ಸಾಯೆನುಜೀವದಿಂದಿರುವೆನು ನಾನು I
ಪ್ರಭುವಿನ ಕಾರ್ಯಗಳನು ಸಾರುವೆನು II
ಗುರಿಪಡಿಸಿಹನು ಎನ್ನನು ಪ್ರಭು ಕಠಿಣ ಶಿಕ್ಷೆಗೆ I
ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ I

ತೆರೆಯಿರಿ ಎನಗೆ ನೀತಿದ್ವಾರಗಳನು I
ಒಳನುಗ್ಗಿ ಹೊಗಳುವೆನು ಪ್ರಭುವನು II
ಇದುವೇ ದ್ವಾರ ಪ್ರಭುವಿನ ಮಂದಿರಕೆ I
ಇದುವೇ ಪ್ರವೇಶಮಾರ್ಗ ಸಜ್ಜನರಿಗೆ II
ಸದುತ್ತರ ಪಾಲಿಸಿದ ಪ್ರಭೂನಿನಗೆ ವಂದನೆ I

ಉದ್ಧಾರ ಮಾಡಿದೆನಿನಗೆ ಕೃತಜ್ಞತಾವಂದನೆ II

ಶುಭಸಂದೇಶ: ಮಾರ್ಕ 16:9-15


ಭಾನುವಾರ ಮುಂಜಾನೆ ಪುನರುತ್ಥಾನ ಹೊಂದಿದ ಯೇಸುಸ್ವಾಮಿ, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡರು. ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆಯಿಂದಲೇ. ಈಕೆ ಹೋಗಿ ತಾನು ಕಂಡದ್ದನ್ನು ಯೇಸುವಿನ ಸಂಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಾ ಕುಳಿತಿದ್ದರು. ಆದರೆ ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನಂಬಲೇ ಇಲ್ಲ. ತರುವಾಯ, ಹಳ್ಳಿಯೊಂದಕ್ಕೆ ಪ್ರಯಾಣ ಮಾಡುತ್ತಿದ್ದ ತಮ್ಮ ಇಬ್ಬರು ಶಿಷ್ಯರಿಗೆ ಯೇಸುಸ್ವಾಮಿ ಇನ್ನೊಂದು ರೀತಿಯಲ್ಲಿ ಕಾಣಿಸಿಕೊಂಡರು. ಇವರಿಬ್ಬರೂ ಹಿಂದಿರುಗಿ ಬಂದು, ಮಿಕ್ಕ ಶಿಷ್ಯರಿಗೆ ಇದನ್ನು ತಿಳಿಸಿದರು. ಆದರೆ ಅದನ್ನು ಅವರು ನಂಬದೆ ಹೋದರು. ಅನಂತರ, ಹನ್ನೊಂದು ಮಂದಿ ಶಿಷ್ಯರು ಊಟ ಮಾಡುತ್ತಿದ್ದಾಗ ಯೇಸುಸ್ವಾಮಿ ಪ್ರತ್ಯಕ್ಷರಾದರು. ತಾವು ಪುನರುತ್ಥಾನ ಹೊಂದಿದ ಮೇಲೆ, ತಮ್ಮನ್ನು ಕಂಡವರ ಮಾತನ್ನು ಅವರು ನಂಬದಿದ್ದ ಕಾರಣ ಅವರ ಅವಿಶ್ವಾಸವನ್ನೂ ಹೃದಯ ಕಾಠಿಣ್ಯವನ್ನೂ ಯೇಸು ಖಂಡಿಸಿದರು. ಬಳಿಕ ಅವರಿಗೆ, ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ", ಎಂದರು.

25.04.25 - "ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿದನು"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4:1-12



ಪೇತ್ರ ಮತ್ತು ಯೊವಾನ್ನ ಜನರನ್ನು ಉದ್ದೇಶಿಸಿ ಇನ್ನೂ ಮಾತನಾಡುತ್ತಿದ್ದರು. ಆಗ ಯಾಜಕರೂ ಮಹಾದೇವಾಲಯದ ದಳಪತಿಗಳೂ ಸದ್ದುಕಾಯರೂ ಅಲ್ಲಿಗೆ ಬಂದರು. ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಮೃತರಾದ ಎಲ್ಲರೂ ಪುನರುತ್ಥಾನ ಹೊಂದುವರು ಎಂದು ಈ ಇಬ್ಬರು ಪ್ರೇಷಿತರು ಬೋಧಿಸುತ್ತಿದ್ದರು. ಇದನ್ನು ಕೇಳಿ ಸಿಟ್ಟುಗೊಂಡಿದ್ದ ಅವರು ಪೇತ್ರ, ಯೊವಾನ್ನರನ್ನು ಬಂಧಿಸಿದರು. ಆಗಲೇ ಹೊತ್ತು ವಿೂರಿದ್ದರಿಂದ ಮಾರನೆಯ ದಿನದವರೆಗೆ ಅವರನ್ನು ಸೆರೆಮನೆಯಲ್ಲಿಟ್ಟರು. ಆದರೆ ಪ್ರೇಷಿತರ ಬೋಧನೆಯನ್ನು ಕೇಳಿದ ಅನೇಕರು ವಿಶ್ವಾಸಿಗಳಾದರು. ಭಕ್ತವಿಶ್ವಾಸಿಗಳ ಸಂಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು. ಮಾರನೆಯ ದಿನ ಯೆಹೂದ್ಯ ಅಧಿಕಾರಿಗಳೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಜೆರುಸಲೇಮಿನಲ್ಲಿ ಸಭೆ ಸೇರಿದರು. ಪ್ರಧಾನ ಯಾಜಕ ಅನ್ನಾ ಹಾಗೂ ಕಾಯಫ, ಯೊವಾನ್ನ, ಅಲೆಕ್ಸಾಂಡರ್ ಮತ್ತು ಪ್ರಧಾನ ಯಾಜಕನ ಕುಟುಂಬದವರು ಆ ಸಭೆಯಲ್ಲಿ ಹಾಜರಿದ್ದರು. ಪ್ರೇಷಿತರನ್ನು ಸಭೆಯ ಮುಂದೆ ನಿಲ್ಲಿಸಿ, “ಇದೆಲ್ಲವನ್ನು ನೀವು ಯಾರ ಹೆಸರಿನಲ್ಲಿ ಮತ್ತು ಯಾವ ಅಧಿಕಾರದಿಂದ ಮಾಡಿದಿರಿ?” ಎಂದು ಪ್ರಶ್ನಿಸಿದರು. ಪೇತ್ರನು ಪವಿತ್ರಾತ್ಮಭರಿತನಾಗಿ ಹೀಗೆಂದು ಉತ್ತರಕೊಟ್ಟನು: “ಜನರ ಅಧಿಕಾರಿಗಳೇ, ಪ್ರಮುಖರೇ, ನಾವು ಒಬ್ಬ ಕುಂಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆಂದು ನೀವು ನಮ್ಮನ್ನು ಇಂದು ಪ್ರಶ್ನಿಸುತ್ತಿರುವಿರಿ. ನಿಮಗೂ ಇಸ್ರಯೇಲಿನ ಎಲ್ಲಾ ಜನರಿಗೂ ಈ ವಿಷಯ ತಿಳಿದಿರಲಿ: ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿಂದಲೇ ಈ ಮನುಷ್ಯನು ಪೂರ್ಣ ಗುಣಹೊಂದಿ ನಿಮ್ಮ ಮುಂದೆ ನಿಂತಿದ್ದಾನೆ. ನೀವು ಶಿಲುಬೆಗೇರಿಸಿ ಕೊಂದದ್ದು ಈ ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ. ‘ಮನೆಕಟ್ಟುವವರಾದ ನೀವು ಬೇಡವೆಂದು ಮೂಲೆಗೆಸೆದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು’ ಎಂದು ಬರೆದಿರುವುದು ಇವರನ್ನು ಕುರಿತೇ. ಇವರಿಂದಲ್ಲದೆ ಬೇರಾರಿಂದಲೂ ನಮಗೆ ಜೀವೋದ್ಧಾರವಿಲ್ಲ. ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆ ಯಾವ ನಾಮದಿಂದಲೂ ನಾವು ಜೀವೋದ್ಧಾರ ಹೊಂದುವಂತಿಲ್ಲ.”

ಕೀರ್ತನೆ: 118:1-2, 4, 22-24, 25-27
ಶ್ಲೋಕ: ಮನೆಕಟ್ಟುವವರು ಮೂಲೆಗೆಸೆದ ಕಲ್ಲು, ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು

ಮನೆಕಟ್ಟುವವರು ಮೂಲೆಗೆಸೆದ ಕಲ್ಲು I
ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು II
ಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ I
ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ II

ಸಾರಲಿ ಇಸ್ರಯೇಲಿನ ಜನತೆ I
‘ಆತನ ಪ್ರೀತಿ ಶಾಶ್ವತ’ ಎಂದೆ II
ಸಾರಲಿ ಆತನ ಭಕ್ತರ ಪಂಥ I
ಆತನ ಪ್ರೀತಿ ಶಾಶ್ವತ ಅಂಥ II

ಮನೆಕಟ್ಟುವವರು ಮೂಲೆಗೆಸೆದ ಕಲ್ಲು I
ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು II
ಪ್ರಭುವಿನಿಂದಲೆ ಆದ ಈ ಕಾರ್ಯ I
ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! II

ಪ್ರಭುವೇ ನಿಯೋಜಿಸಿದ ದಿನವಿದು I
ಹರ್ಷಿಸಿ ಆನಂದಿಸೋಣ ಇಂದು II
ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು I
ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು II

ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ I
ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ II
ಪ್ರಭುವೆ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು I
ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ, ಹಿಡಿದು ರೆಂಬೆಗಳನು II

ಶುಭಸಂದೇಶ: ಯೊವಾನ್ನ 21:1-14


ತರುವಾಯ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊಂಡರು. ಅದು ಹೀಗೆ ನಡೆಯಿತು: ಸಿಮೋನ ಪೇತ್ರನು, ದಿದುಮನೆಂಬ ತೋಮನು, ಗಲಿಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. ಆಗ ಸಿಮೋನ ಪೇತ್ರನು, “ನಾನು ಮೀನು ಹಿಡಿಯಲು ಹೋಗುತ್ತೇನೆ,” ಎಂದನು. ಮಿಕ್ಕವರು, “ನಾವೂ ನಿನ್ನೊಡನೆ ಬರುತ್ತೇವೆ,” ಎಂದರು. ಅವರೆಲ್ಲರೂ ಹೊರಟು ದೋಣಿಯನ್ನು ಹತ್ತಿದರು. ಆ ರಾತ್ರಿಯೆಲ್ಲಾ ಅವರಿಗೆ ಒಂದು ವಿೂನೂ ಸಿಗಲಿಲ್ಲ. ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರು ಯೇಸು ಎಂದು ಶಿಷ್ಯರಿಗೆ ಹೊಳೆಯಲಿಲ್ಲ. ಯೇಸು ಅವರಿಗೆ, “ಮಕ್ಕಳೇ, ಊಟಕ್ಕೆ ಏನಾದರೂ ಸಿಕ್ಕಿತೇ?” ಎಂದು ಕೇಳಿದರು. “ಏನೂ ಇಲ್ಲ,” ಎಂದರು ಅವರು. “ದೋಣಿಯ ಬಲಗಡೆಗೆ ಬಲೆ ಬೀಸಿರಿ; ವಿೂನುಗಳು ಸಿಗುತ್ತವೆ,” ಎಂದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ವಿೂನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು. ಆಗ ಯೇಸುವಿನ ಆಪ್ತಶಿಷ್ಯನು ಪೇತ್ರನಿಗೆ, “ಅವರೇ ಪ್ರಭು” ಎಂದನು. ಪ್ರಭುವೆಂದು ಕೇಳಿದ್ದೇ ತಡ, ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿದನು. ಮಿಕ್ಕ ಶಿಷ್ಯರು ವಿೂನು ತುಂಬಿದ್ದ ಬಲೆಯನ್ನು ಎಳೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿದ್ದ ದಡಕ್ಕೆ ದೋಣಿಯಲ್ಲೇ ಬಂದರು. ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆಂಕಿ ಮಾಡಲಾಗಿತ್ತು. ಕೆಂಡದ ಮೇಲೆ ವಿೂನುಗಳಿದ್ದವು. ರೊಟ್ಟಿಯೂ ಅಲ್ಲಿತ್ತು. ಯೇಸು ಅವರಿಗೆ, “ನೀವು ಈಗ ತಾನೇ ಹಿಡಿದ ವಿೂನುಗಳಲ್ಲಿ ಕೆಲವನ್ನು ತನ್ನಿ,” ಎಂದು ಹೇಳಿದರು. ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳೆದು ತಂದನು. ಬಲೆಯ ತುಂಬ ದೊಡ್ಡ ವಿೂನುಗಳು - ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ವಿೂನುಗಳಿದ್ದರೂ ಬಲೆಯು ಹರಿದಿರಲಿಲ್ಲ. ಯೇಸು ಅವರಿಗೆ, “ಬಂದು ಊಟಮಾಡಿ,” ಎಂದು ಅವರನ್ನು ಕರೆದರು. ಅವರು ಪ್ರಭುವೆಂದು ಅರಿತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, “ನೀವು ಯಾರು?” ಎಂದು ಕೇಳುವಷ್ಟು ಧೈರ್ಯ ಇರಲಿಲ್ಲ. ಯೇಸು ಹತ್ತಿರಕ್ಕೆ ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟರು; ಹಾಗೆಯೇ ವಿೂನನ್ನೂ ಕೊಟ್ಟರು. ಯೇಸು ಸತ್ತು ಜೀವಂತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ. 

24.04.25 - “ಏಕೆ ಕಳವಳಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸಂಶಯವೇಕೆ?"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 3:11-26


‘ಸೊಲೊಮೋನನ ಮಂಟಪ’ದಲ್ಲಿ ಪೇತ್ರ ಮತ್ತು ಯೊವಾನ್ನರ ಜೊತೆ ಆ ಭಿಕ್ಷುಕನು ಇನ್ನೂ ನಿಂತಿದ್ದನು. ಆಶ್ಚರ್ಯಭರಿತರಾದ ಜನರು ಅಲ್ಲಿಗೆ ಓಡಿಬಂದರು. ಇದನ್ನು ನೋಡಿ ಪೇತ್ರನು ಇಂತೆಂದನು: “ಇಸ್ರಯೇಲಿನ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮನ್ನೇಕೆ ಎವೆಯಿಕ್ಕದೆ ನೋಡುತ್ತಿದ್ದೀರಿ? ನಮ್ಮ ಸ್ವಂತ ಶಕ್ತಿಯಿಂದಾಗಲೀ ಭಕ್ತಿಯಿಂದಾಗಲೀ, ಈ ಮನುಷ್ಯನು ನಡೆಯುವಂತೆ ನಾವು ಮಾಡಿದೆವೆಂದು ಭಾವಿಸುತ್ತೀರೋ? ಪಿತಾಮಹ ಅಬ್ರಹಾಮ, ಇಸಾಕ ಮತ್ತು ಯಕೋಬರ ದೇವರು, ಅಂದರೆ ನಮ್ಮ ಪೂರ್ವಜರ ದೇವರು, ತಮ್ಮ ದಾಸ ಯೇಸುವಿನ ಮಹಿಮೆಯನ್ನು ಬೆಳಗಿಸಿದ್ದಾರೆ. ನೀವಾದರೋ ಅವರನ್ನು ಅಧಿಕಾರಿಗಳ ಕೈಗೊಪ್ಪಿಸಿದಿರಿ. ರಾಜ್ಯಪಾಲ ಪಿಲಾತನು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದಾಗ ಕೂಡ ಅವನ ಸಮ್ಮುಖದಲ್ಲೇ ಅವರನ್ನು ಧಿಕ್ಕರಿಸಿದಿರಿ. ಯೇಸು ಪುನೀತರು ಹಾಗೂ ಸತ್ಯಸ್ವರೂಪರು. ಆದರೂ ನೀವು ಅವರನ್ನು ನಿರಾಕರಿಸಿ, ಒಬ್ಬ ಕೊಲೆಗಡುಕನನ್ನೇ ನಿಮಗೆ ಬಿಟ್ಟುಕೊಡುವಂತೆ ಪಿಲಾತನನ್ನು ಬೇಡಿಕೊಂಡಿರಿ. ಜೀವದೊಡೆಯನನ್ನು ನೀವು ಕೊಂದುಹಾಕಿದಿರಿ; ದೇವರು ಅವರನ್ನು ಪುನರುತ್ಥಾನಗೊಳಿಸಿದರು. ಇದಕ್ಕೆ ನಾವೇ ಸಾಕ್ಷಿಗಳು. ನಿಮ್ಮ ಕಣ್ಣೆದುರಿಗಿರುವ ಈ ಮನುಷ್ಯನು ಯಾರೆಂದು ನಿಮಗೆ ಗೊತ್ತಿದೆ. ಯೇಸುವಿನ ನಾಮದಿಂದಲೇ, ಆ ನಾಮದ ಮೇಲಿಟ್ಟ ವಿಶ್ವಾಸದಿಂದಲೇ, ಈತನು ಶಕ್ತಿಪಡೆದಿದ್ದಾನೆ. ಯೇಸುವಿನಲ್ಲಿಟ್ಟ ಆ ವಿಶ್ವಾಸವೇ ಈತನಿಗೆ, ನೀವೇ ನೋಡುವಂತೆ, ಸಂಪೂರ್ಣ ಆರೋಗ್ಯವನ್ನು ದಯಪಾಲಿಸಿದೆ. “ಸಹೋದರರೇ, ನೀವೂ ನಿಮ್ಮ ಅಧಿಕಾರಿಗಳೂ ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನಾನು ಬಲ್ಲೆ. ಕ್ರಿಸ್ತಯೇಸು ಯಾತನೆಯನ್ನು ಅನುಭವಿಸಬೇಕೆಂದು ದೇವರು ಪ್ರವಾದಿಗಳೆಲ್ಲರ ಮುಖಾಂತರ ಆಗಲೇ ಮುಂತಿಳಿಸಿದ್ದರು. ಆ ಪ್ರವಾದನೆಗಳನ್ನು ಈಗ ನೆರವೇರಿಸಿದ್ದಾರೆ. ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿರಿ. ಅವರು ನಿಮ್ಮ ಪಾಪಗಳನ್ನು ಪರಿಹರಿಸುವರು.
20 : ಸರ್ವೇಶ್ವರನ ಸಾನ್ನಿಧ್ಯ ಸೌಭಾಗ್ಯವು ನಿಮ್ಮದಾಗುವುದು; ನಿಮಗೋಸ್ಕರ ನೇಮಿತರಾದ ಉದ್ಧಾರಕ ಯೇಸುವನ್ನು ಕಳುಹಿಸುವರು. ಸಮಸ್ತವನ್ನೂ ಪುನರ್‍ಸ್ಥಾಪನೆಗೊಳಿಸುವವರೆಗೆ ಕ್ರಿಸ್ತಯೇಸು ಸ್ವರ್ಗದಲ್ಲಿಯೇ ಇರಬೇಕಾಗಿದೆ. ಇದನ್ನು ದೇವರು ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲಕ್ಕೆ ಹಿಂದೆಯೇ ಪ್ರಕಟಿಸಿದ್ದಾರೆ. ‘ಸರ್ವೇಶ್ವರನಾದ ದೇವರು ನನ್ನನ್ನು ಕಳುಹಿಸಿದಂತೆಯೇ ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವರು. ಆತನು ನಿಮ್ಮ ಸ್ವಂತ ಜನಾಂಗದವನಾಗಿರುವನು. ಆತನು ಹೇಳುವುದನ್ನೆಲ್ಲಾ ನೀವು ಕೇಳಬೇಕು. ಆ ಪ್ರವಾದಿಗೆ ಕಿವಿಗೊಡದವನು ದೇವಜನರಿಂದ ದೂರವಾಗಿ ನಾಶವಾಗುತ್ತಾನೆ,’ ಎಂದು ಮೋಶೆ ಹೇಳಿದ್ದಾನೆ. ಸಮುವೇಲನೂ ಅವನ ನಂತರ ಬಂದ ಎಲ್ಲ ಪ್ರವಾದಿಗಳೂ ಈ ದಿನಗಳಲ್ಲಿ ನಡೆಯುತ್ತಿರುವುದನ್ನು ದೈವದತ್ತವಾಗಿ ಸಾರಿದ್ದಾರೆ. ದೇವರು ಪ್ರವಾದಿಗಳ ಮುಖಾಂತರ ಮಾಡಿದ ವಾಗ್ದಾನಗಳಿಗೂ ನಿಮ್ಮ ಪೂರ್ವಜರೊಂದಿಗೆ ಮಾಡಿದ ಒಡಂಬಡಿಕೆಗೂ ನೀವು ಉತ್ತರಾಧಿಕಾರಿಗಳು; ಪೂರ್ವಜ ಅಬ್ರಹಾಮನಿಗೆ, ‘ನಿನ್ನ ಸಂತತಿಯ ಮುಖಾಂತರ ವಿಶ್ವದ ಎಲ್ಲಾ ಜನಾಂಗಗಳು ಧನ್ಯರಾಗುವರು’ ಎಂದಿದ್ದಾರೆ ದೇವರು. ಅಂತೆಯೇ, ಅವರು ತಮ್ಮ ದಾಸನನ್ನು ಎಬ್ಬಿಸಿದ್ದಾರೆ. ನಿಮ್ಮೆಲ್ಲರನ್ನು ದುರ್ಮಾರ್ಗದಿಂದ ದೂರಮಾಡಿ ಧನ್ಯರಾಗಿಸಲು ಅವರನ್ನು ಮೊತ್ತಮೊದಲು ನಿಮ್ಮಲ್ಲಿಗೆ ಕಳುಹಿಸಿದ್ದಾರೆ.”

ಕೀರ್ತನೆ: 8:2, 5, 6-7, 8-9
ಶ್ಲೋಕ: ಪ್ರಭೂ, ಓ ನಮ್ಮ ಪ್ರಭೂ, ಎನಿತು ಮಹಿಮಾನ್ವಿತ,
ಹರಡಿವೆ ನಿನ್ನ ಸಿರಿನಾಮ ಜಗದಾದ್ಯಂತ

ಪ್ರಭು, ಓ ನಮ್ಮ ಪ್ರಭು, ಎನಿತು ಮಹಿಮಾನ್ವಿತ I
ಹರಡಿವೆ ನಿನ್ನ ಸಿರಿನಾಮ ಜಗದಾದ್ಯಂತ I
ಪ್ರಭು, ಓ ನಮ್ಮ ಪ್ರಭು, ಎನಿತು ಮಹಿಮಾನ್ವಿತ I
ಹರಡಿವೆ ನಿನ್ನ ಸಿರಿನಾಮ ಜಗದಾದ್ಯಂತ I

ಇಂತಿರಲು, ಮನುಜನು ಎಷ್ಟರವನು ನೀನವನನು ಲಕ್ಷಿಸಲು? I
ಏತರದವನು ನರಮಾನವನು ನೀನವನನು ಪರಾಮರಿಸಲು? II
ಆದರೆ ದೇವದೂತರಿಗಿಂತ ಕಿಂಚಿತ್ತೆ ಕೀಳಾಗಿಸಿದೆ ಮನುಜನನು I
ಮುಡಿಸಿದೆ ಮುಕುಟವಾಗವನಿಗೆ ಘನಮಾನವನು, ಸಿರಿಹಿರಿಮೆಯನು II

ಒಡೆಯನಾಗಿಸಿದೆ ನಿನ್ನಯ ಕರಕೃತಿಗಳಿಗೆ I
ಒಳಪಡಿಸಿದೆ ಸಕಲವನು ಅವನ ಪಾದದಡಿಗೆ II
ಕುರಿಗಳನು, ಕರುಗಳನು, ಕಾಡುಮೃಗಗಳನು I
ಗರಿಗಳನು, ಮೀನುಗಳನು, ಜಲಚರಗಳನು I
ಕರಗತ ಮಾಡಿದೆ ನೀ ಅವನಿಗೆಲ್ಲವನು II

ಶುಭಸಂದೇಶ: ಲೂಕ: 24:35-48


ಆಗ ಶಿಷ್ಯರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತುಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿಮಾಡಿದರು. ಅವರು ವರದಿಮಾಡುತ್ತಿದ್ದಂತೆ ಯೇಸುಸ್ವಾಮಿಯೇ ಅವರ ಮಧ್ಯೆ ಪ್ರತ್ಯಕ್ಷವಾಗಿ ನಿಂತು, ‘ನಿಮಗೆ ಶಾಂತಿ,’ ಎಂದರು. ಅವರೆಲ್ಲರೂ ಚಕಿತರಾಗಿ, ದಿಗಿಲುಗೊಂಡು, ತಾವು ಕಾಣುತ್ತಿರುವುದು ಭೂತವೆಂದು ಭಾವಿಸಿದರು. ಆಗ ಯೇಸು, “ಏಕೆ ಕಳವಳಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸಂಶಯವೇಕೆ? ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿ, ನಾನೇ ಅಲ್ಲವೇ? ನನ್ನನ್ನು ಮುಟ್ಟಿ ನೋಡಿರಿ, ನೀವು ನನ್ನಲ್ಲಿ ಕಾಣುವಂತೆ, ಮಾಂಸ ಮತ್ತು ಎಲುಬು ಭೂತಕ್ಕೆ ಇರುವುದಿಲ್ಲ,” ಎಂದರು. ಇಂತೆಂದ ಮೇಲೆ ತಮ್ಮ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದರು. ಶಿಷ್ಯರು ಇನ್ನೂ ನಂಬದೆ, ಆನಂದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, “ನಿಮ್ಮಲ್ಲಿ ತಿನ್ನಲು ಏನಾದರೂ ಇದೆಯೇ?” ಎಂದು ಕೇಳಿದರು. ಹುರಿದ ವಿೂನಿನ ತುಂಡು ಒಂದನ್ನು ಶಿಷ್ಯರು ಕೊಟ್ಟರು. ಯೇಸು ಅದನ್ನು ತೆಗೆದುಕೊಂಡು ಅವರ ಎದುರಿಗೇ ತಿಂದರು. ಅಂತಿಮ ಸಂದೇಶ ತರುವಾಯ ಯೇಸುಸ್ವಾಮಿ, “ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರಂಥದಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲಾ ನೆರವೇರಲೇಬೇಕಾಗಿತ್ತು,” ಎಂದರು. ಆಮೇಲೆ, ಪವಿತ್ರ ಗ್ರಂಥವನ್ನು ಅವರು ಅರ್ಥಮಾಡಿಕೊಳ್ಳುವಂತೆ ಅವರ ಬುದ್ಧಿಯನ್ನು ವಿಕಾಸಗೊಳಿಸಿದರು. ಅನಂತರ, “ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿತ್ತು; ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ, ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆಂತಲೂ ಈ ಸಂದೇಶವನ್ನು ಜೆರುಸಲೇಮಿನಿಂದ ಮೊದಲ್ಗೊಂಡು ಎಲ್ಲಾ ಜನಾಂಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆಂತಲೂ ಮೊದಲೇ ಲಿಖಿತವಾಗಿತ್ತು. ಇದಕ್ಕೆಲ್ಲಾ ನೀವೇ ಸಾಕ್ಷಿಗಳು, ಎಂದು ಹೇಳಿದರು.

23.04.25 - “ಪ್ರಭು ಜೀವಂತರಾಗಿ ಎದ್ದಿರುವುದು ನಿಜ ! ಅವರು ಸಿಮೋನನಿಗೆ ಕಾಣಿಸಿಕೊಂಡರು”

  ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 3:1-10



ಒಂದು ದಿನ ಮಧ್ಯಾಹ್ನ ಮೂರು ಗಂಟೆಯ ಸಮಯ. ಅದು ಪ್ರಾರ್ಥನಾವೇಳೆ, ಪೇತ್ರ ಮತ್ತು ಯೊವಾನ್ನ ಮಹಾದೇವಾಲಯಕ್ಕೆ ಹೋದರು. ‘ಸುಂದರ ದ್ವಾರ’ ಎಂದು ಕರೆಯಲಾದ ಬಾಗಿಲ ಬಳಿ ಹುಟ್ಟು ಕುಂಟನೊಬ್ಬ ಇದ್ದನು. ಅವನನ್ನು ಪ್ರತಿ ದಿನ ಹೊತ್ತು ತಂದು ಈ ದ್ವಾರದ ಬಳಿ ಬಿಡಲಾಗುತ್ತಿತ್ತು. ಅವನು ದೇವಾಲಯಕ್ಕೆ ಬರುತ್ತಿದ್ದ ಜನರಿಂದ ಭಿಕ್ಷೆ ಬೇಡುತ್ತಿದ್ದನು. ಪೇತ್ರ ಮತ್ತು ಯೊವಾನ್ನ ದೇವಾಲಯದೊಳಗೆ ಹೋಗುತ್ತಿರುವುದನ್ನು ಅವನು ಕಂಡನು. ತನಗೆ ಏನಾದರೂ ಭಿಕ್ಷೆ ಕೊಡಬೇಕೆಂದು ಬೇಡಿದನು. ಅವರು ಕುಂಟನನ್ನು ತದೇಕ ದೃಷ್ಟಿಯಿಂದ ಈಕ್ಷಿಸಿದರು. ಪೇತ್ರನು, “ಎಲ್ಲಿ, ನಮ್ಮನ್ನು ನೋಡು,” ಎಂದನು. ಕುಂಟನು ಅವರಿಂದ ಭಿಕ್ಷೆಯನ್ನು ಅಪೇಕ್ಷಿಸುತ್ತಾ ಅವರನ್ನೇ ನೋಡಿದನು. ಆದರೆ ಪೇತ್ರನು, “ಹಣ ಕಾಸೇನೂ ನನ್ನಲ್ಲಿಲ್ಲ, ನನ್ನಲ್ಲಿ ಇರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಆಜ್ಞಾಪಿಸುತ್ತೇನೆ, ಎದ್ದು ನಡೆ” ಎನ್ನುತ್ತಾ, ಅವನ ಬಲಗೈಯನ್ನು ಹಿಡಿದು ನಿಲ್ಲಲು ಸಹಾಯ ಮಾಡಿದನು. ಆ ಕ್ಷಣವೇ ಕುಂಟನ ಅಂಗಾಲು ಮುಂಗಾಲುಗಳು ಬಲಗೊಂಡವು. ಅವನು ಜಿಗಿದುನಿಂತು ಅತ್ತಿತ್ತ ನಡೆದಾಡಲು ಪ್ರಾರಂಭಿಸಿದನು. ಅನಂತರ ಅವನು ಕುಣಿಯುತ್ತಾ ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಅವರೊಡನೆಯೇ ದೇವಾಲಯದೊಳಗೆ ಹೋದನು. ಅವನು ಹೀಗೆ ನಡೆಯುವುದನ್ನೂ ದೇವರನ್ನು ಕೊಂಡಾಡುವುದನ್ನೂ ಜನಸಮೂಹ ನೋಡಿತು. ದೇವಾಲಯದ ಸುಂದರ ದ್ವಾರದ ಬಳಿ ಕುಳಿತು ಭಿಕ್ಷೆ ಬೇಡುತ್ತಿದ್ದವನು ಇವನೇ ಎಂದು ಜನರು ಗುರುತು ಹಚ್ಚಿದರು. ಅವನಿಗೆ ಸಂಭವಿಸಿದ್ದನ್ನು ಕಂಡು ಬೆಕ್ಕಸಬೆರಗಾದರು.



ಕೀರ್ತನೆ: 105:1-2, 3-4, 6-7, 8-9
ಶ್ಲೋಕ: ಹೆಮ್ಮೆಪಡಿ, ನೆನೆದಾತನ ಶ್ರೀನಾಮ, ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ

ಹೆಮ್ಮೆಪಡಿ, ನೆನೆದಾತನ ಶ್ರೀನಾಮ I
ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II
ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು I
ಮಾಡಿರಿ ಆತನ ನಾಮಸ್ಮರಣೆಯನು I
ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II

ಹಾಡಿ ಪಾಡಿ ಹೊಗಳಿರಿ ಪ್ರಭುವನು I
ಧ್ಯಾನಿಸಿ ನೀವು ಆತನ ಪವಾಡಗಳನು II
ಹೆಮ್ಮೆಪಡಿ, ನೆನೆದಾತನ ಶ್ರೀನಾಮ I
ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II

ಅರಸಿರಿ ಪ್ರಭುವನೂ ಆತನ ಶಕ್ತಿಯನೂ I
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II
ಆತನ ದಾಸ ಅಬ್ರಹಾಮನ ಸಂತತಿಯವರೇ I
ಆತನಾರಿಸಿಕೊಂಡ ಯಕೋಬನ ವಂಶದವರೇ II

ಪ್ರಭು ನಮ್ಮ ದೇವನೆಂಬುದು ಶ್ರುತ I
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ II
ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I
ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II

ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I
ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು II

ಶುಭಸಂದೇಶ: ಲೂಕ: 24:13-35


ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊಂದು ಕಿಲೋಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎಂಬ ಗ್ರಾಮಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆ ಮಾಡುತ್ತಾ ನಡೆಯುತ್ತಿದ್ದರು. ಹೀಗೆ ಮಾತನಾಡಿಕೊಂಡು ಚರ್ಚೆ ಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು. ಆದರೆ ಇವರಾರೆಂದು ಅವರು ಗುರುತು ಹಚ್ಚಲಿಲ್ಲ. ಕಾರಣ - ಶಿಷ್ಯರಿಗೆ ಕಣ್ಣು ಕಟ್ಟಿದಂತಾಗಿತ್ತು. “ನೀವು ತರ್ಕ ಮಾಡಿಕೊಂಡು ಹೋಗುತ್ತಿರುವಿರಲ್ಲಾ, ಏನು ವಿಷಯ?” ಎಂದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿ ನಿಂತರು. ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, “ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನಗೊಬ್ಬನಿಗೇ ಅವು ತಿಳಿಯದೆ?” ಎಂದನು. “ಏನು ನಡೆಯಿತು?” ಎಂದು ಯೇಸು ಪುನಃ ಕೇಳಿದಾಗ ಆ ಶಿಷ್ಯರಿಬ್ಬರು, “ಇವು ನಜರೇತಿನ ಯೇಸುವಿಗೆ ಸಂಭವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗೂ ಸಕಲ ಮಾನವರ ದೃಷ್ಟಿಯಲ್ಲಿ ಪ್ರವಾದಿಯಾಗಿದ್ದರು. ನಮ್ಮ ಮುಖ್ಯ ಯಾಜಕರು ಮತ್ತು ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು. ಇಸ್ರಯೇಲನ್ನು ಬಿಡುಗಡೆ ಮಾಡುವ ಉದ್ಧಾರಕ ಅವರೇ ಎಂದು ನಾವು ನಂಬಿಕೊಂಡಿದ್ದೆವು. ಇಷ್ಟು ಮಾತ್ರವಲ್ಲ, ಇದೆಲ್ಲಾ ಸಂಭವಿಸಿ ಇಂದಿಗೆ ಮೂರುದಿನಗಳು ಆಗಿವೆ. ಆದರೂ ನಮ್ಮಲ್ಲಿ ಕೆಲವು ಮಂದಿ ಮಹಿಳೆಯರು ಮುಂಜಾನೆ ಸಮಾಧಿಯ ಬಳಿಗೆ ಹೋಗಿದ್ದರು. ಅಲ್ಲಿ ಯೇಸುವಿನ ಪಾರ್ಥಿವ ಶರೀರವನ್ನು ಕಾಣಲಿಲ್ಲ. ಹಿಂದಿರುಗಿ ಬಂದು, ‘ನಮಗೆ ದೇವದೂತರು ಪ್ರತ್ಯಕ್ಷರಾದರು; ಇವರು ಯೇಸುಸ್ವಾಮಿ ಸಜೀವದಿಂದ ಇದ್ದಾರೆಂದು ನಮಗೆ ತಿಳಿಸಿದರು,’ ಎಂದು ಹೇಳಿ ನಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡಿದರು. ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ,” ಎಂದರು. ಆಗ ಯೇಸು, “ಎಂಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು! ಕ್ರಿಸ್ತನು ಇಂತಹ ಸಂಕಷ್ಟಗಳನ್ನು ಅನುಭವಿಸಿ ತನ್ನ ಮಹಿಮಾ ಸಿದ್ದಿಯನ್ನು ಪಡೆಯಬೇಕಾಗಿತ್ತು ಅಲ್ಲವೇ?” ಎಂದರು. ಅನಂತರ, ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರ ಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು. ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮುಂದಕ್ಕೆ ಸಾಗುವವರಂತೆ ಕಂಡಿತು. ಆಗ ಶಿಷ್ಯರು, “ಸಂಜೆಯಾಯಿತು, ಕತ್ತಲಾಗುತ್ತ ಬಂದಿತು; ಬಂದು ನಮ್ಮೊಡನೆ ತಂಗಿರಿ,” ಎಂದು ಒತ್ತಾಯಪಡಿಸಿದರು. ಯೇಸು ಅವರೊಡನೆ ತಂಗಲು ಹೋದರು. ಅವರ ಸಂಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು. ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತು ಹಚ್ಚಿದರು. ಆಗ ಯೇಸು ಅವರಿಂದ ಅದೃಶ್ಯರಾದರು. ಶಿಷ್ಯರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ, “ದಾರಿಯಲ್ಲಿ ಇವರು ನಮ್ಮ ಸಂಗಡ ಮಾತನಾಡುತ್ತಾ ಪವಿತ್ರ ಗ್ರಂಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿಂದ ಕುದಿಯುತ್ತಾ ಇತ್ತಲ್ಲವೇ?” ಎಂದುಕೊಂಡರು. ಒಡನೇ ಅವರು ಅಲ್ಲಿಂದ ಎದ್ದು ಜೆರುಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡಿಗರೂ ಒಟ್ಟುಗೂಡಿದ್ದರು. “ಪ್ರಭು ಜೀವಂತರಾಗಿ ಎದ್ದಿರುವುದು ನಿಜ ! ಅವರು ಸಿಮೋನನಿಗೆ ಕಾಣಿಸಿಕೊಂಡರು,” ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು. ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತು ಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿ ಮಾಡಿದರು

22.04.25

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:36-41



ಪೇತ್ರನು ಜನಸಮೂಹವನ್ನು ಉದ್ದೇಶಿಸಿ ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: “ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸಂದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಈ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ.” ಇದನ್ನು ಕೇಳಿದ ಆ ಜನರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, “ಸಹೋದರರೇ, ಈಗ ನಾವು ಮಾಡಬೇಕಾದುದು ಏನು?” ಎಂದು ಕೇಳಿದರು. ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿ ಒಬ್ಬನೂ ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿಂದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊಂದುವಿರಿ. ಈ ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಗೂ ದೂರ ಇರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಆಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ,” ಎಂದನು. ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿಮಾಡಿದನು. ‘ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿ,’ ಎಂದು ಎಚ್ಚರಿಸಿದನು. ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅಂದೇ ಸುಮಾರು ಮೂರು ಸಾವಿರ ಜನರು ಸಭೆಯನ್ನು ಸೇರಿಕೊಂಡರು.

ಕೀರ್ತನೆ: 33:4-5, 18-19, 20, 22
ಶ್ಲೋಕ: ಅಚಲ ಪ್ರೀತಿಯಿಂದ ಪ್ರಭು ಜಗವನು ತುಂಬಿಹನು

ಸತ್ಯಸಂಧನು, ನ್ಯಾಯಪ್ರಿಯನು ಆತನು I
ಅಚಲಪ್ರೀತಿಯಿಂದ ಜಗವನು ತುಂಬಿಹನು II
ಸತ್ಯವಾದುದು ಆತನ ಪವಿತ್ರ ವಾಕ್ಯ I
ಸ್ತುತ್ಯವಾದುದು ಆತನ ಪುನೀತ ಕಾರ್ಯ II

ಸತ್ಯಸಂಧನು, ನ್ಯಾಯಪ್ರಿಯನು ಆತನು I
ಅಚಲಪ್ರೀತಿಯಿಂದ ಜಗವನು ತುಂಬಿಹನು II
ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು I
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು II

ತಪ್ಪಿಸುವನವನು ಪ್ರಾಣವನು ಮರಣದಿಂದ I
ಉಳಿಸುವನು ಜೀವವನು ಕ್ಷಾಮಡಾಮರದಿಂದ II
ಕಾದಿದೆ ಎನ್ನ ಮನ ಪ್ರಭುವಿಗಾಗಿ I
ಆತನಿಹನು ಎನಗೆ ಗುರಾಣಿಯಾಗಿ II

ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ I
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ II

ಶುಭಸಂದೇಶ: ಯೊವಾನ್ನ 20:11-18

ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನು ಅಲ್ಲಿ ಕಂಡಳು. ಯೇಸುವಿನ ಪಾರ್ಥಿವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತಿದ್ದರು. ಅವರು ಆಕೆಯನ್ನು, “ಏಕಮ್ಮಾ ಅಳುತ್ತಿರುವೆ?” ಎಂದು ಕೇಳಿದರು. “ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಎಲ್ಲಿ ಇಟ್ಟಿದ್ದಾರೋ ತಿಳಿಯದು,” ಎಂದಳು. ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ. ಯೇಸು, “ಏಕಮ್ಮಾ ಅಳುತ್ತಿರುವೇ? ಏನನ್ನು ಹುಡುಕುತ್ತಿರುವೇ?” ಎಂದು ಕೇಳಿದಾಗಲೂ ಮರಿಯಳು ಅವರು ತೋಟಗಾರನೆಂದು ಭಾವಿಸಿ, “ಅಯ್ಯಾ, ನೀವೇನಾದರೂ ಅವರನ್ನು ಕೊಂಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ; ನಾನು ತೆಗೆದುಕೊಂಡು ಹೋಗುತ್ತೇನೆ,” ಎಂದು ಹೇಳಿದಳು. ಆಗ ಯೇಸು, “ಮರಿಯಾ” ಎಂದು ಹೆಸರಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ, “ರಬ್ಬೂನಿ” ಎಂದಳು. (ಯೆಹೂದ್ಯರ ಭಾಷೆಯಲ್ಲಿ ಹಾಗೆಂದರೆ “ಗುರುದೇವಾ” ಎಂದರ್ಥ). ಯೇಸು ಆಕೆಗೆ, “ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ ಹೋಗುತ್ತೇನೆಂದು ತಿಳಿಸು,” ಎಂದು ಹೇಳಿದರು. ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, “ನಾನು ಪ್ರಭುವನ್ನು ಕಂಡೆ. ಅವರು ಹೀಗೆಲ್ಲಾ ಹೇಳಿದರು,” ಎಂದು ತಿಳಿಸಿದಳು.

21.04.25 - "ತಟ್ಟನೆ, ಯೇಸುವೇ ಅವರನ್ನು ಎದುರುಗೊಂಡು, “ನಿಮಗೆ ಶುಭವಾಗಲಿ!” ಎಂದರು"

 ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:14, 22-33



ಪೇತ್ರನು ಇತರ ಹನ್ನೊಂದು ಮಂದಿ ಪ್ರೇಷಿತರೊಡನೆ ಎದ್ದುನಿಂತು, ಜನ ಸಮೂಹವನ್ನು ಉದ್ದೇಶಿಸಿ, ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: “ಯೆಹೂದ್ಯ ಸ್ವಜನರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ. ಈ ಘಟನೆಯ ಅರ್ಥ ನಿಮಗೆ ಮನದಟ್ಟಾಗಲಿ. “ಇಸ್ರಯೇಲ್ ಬಾಂಧವರೇ, ನನ್ನ ಮಾತುಗಳನ್ನು ಆಲಿಸಿರಿ. ನಜರೇತಿನ ಯೇಸುಸ್ವಾಮಿ ದೈವನಿಯಮಿತ ವ್ಯಕ್ತಿ ಎಂಬುದನ್ನು ದೇವರೇ ಅವರ ಮುಖಾಂತರ ನಡೆಸಿದ ಅದ್ಭುತ ಕಾರ್ಯಗಳಿಂದ, ಮಹತ್ಕಾರ್ಯಗಳಿಂದ ಹಾಗೂ ಸೂಚಕಕಾರ್ಯಗಳಿಂದ ನಿಮಗೆ ಸ್ಪಷ್ಟಪಡಿಸಲಾಗಿದೆ. ಇದು ನಿಮಗೆ ತಿಳಿದಿರುವ ವಿಷಯ. ದೇವರು ತಮ್ಮ ಸ್ಥಿರಸಂಕಲ್ಪದಲ್ಲಿ ಹಾಗೂ ಭವಿಷ್ಯತ್ ಜ್ಞಾನದಲ್ಲಿ ಯೇಸು ನಿಮ್ಮ ವಶವಾಗಬೇಕೆಂದು ಈ ಮೊದಲೇ ನಿರ್ಧರಿಸಿದ್ದರು. ನೀವು ಅವರನ್ನು ಪರಕೀಯರ ಕೈಗೊಪ್ಪಿಸಿ, ಶಿಲುಬೆಗೆ ಹಾಕಿಸಿ, ಕೊಲ್ಲಿಸಿದಿರಿ. ಆದರೆ ದೇವರು ಅವರನ್ನು ಮೃತ್ಯುಶೂಲೆಯಿಂದ ಬಿಡಿಸಿ ಎಬ್ಬಿಸಿದರು. ಕಾರಣ - ಅವರನ್ನು ಬಂಧಿಸಿಡುವುದು ಮೃತ್ಯುವಿಗೆ ಅಸಾಧ್ಯವಾಗಿತ್ತು. ಅವರನ್ನು ಕುರಿತು ದಾವೀದನು ಹೀಗೆಂದಿದ್ದಾನೆ: ‘ಪ್ರಭು ಇಹನು ಎನ್ನ ಕಣ್ಮುಂದೆ ಸತತ ನಾ ಹೆದರದಂತೆ ಆತನಿಹನು ಎನ್ನ ಹತ್ತಿರ. ಇದಕಾರಣ ಹರ್ಷಿಸಿತು ಎನ್ನ ಹೃದಯ ತುಳುಕಿತು ಸಂತಸ ಎನ್ನ ನಾಲಗೆಯಿಂದ. ನಂಬಿ ನಿರೀಕ್ಷೆಯಿಂದಿರುವುದು ಎನ್ನ ಮತ್ರ್ಯದೇಹ. ಏಕೆನೆ, ದೂಡಲಾರೆ ಪಾತಾಳಕ್ಕೆ ನೀನೆನ್ನ ಜೀವಾತ್ಮವನು, ಕೊಳೆಯಬಿಡಲಾರೆ ನೀನೊಲಿದಾತನನು. ಅಮರ ಜೀವಮಾರ್ಗವನೆನಗೆ ತೋರ್ಪಡಿಸಿದೆ ನಿನ್ನ ಶ್ರೀ ಸಾನ್ನಿಧ್ಯ ಸಂತಸದಿಂದೆನ್ನ ಭರಿತನಾಗಿಸುವೆ.’ “ಪ್ರಿಯ ಸಹೋದರರೇ, ಪಿತಾಮಹ ದಾವೀದರಸನ ವಿಷಯದಲ್ಲಿ ನಾನು ನಿಮಗೆ ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ಆತನು ಮೃತನಾದನು; ಆತನನ್ನು ಸಮಾಧಿಮಾಡಲಾಯಿತು. ನಿಮಗೆಲ್ಲರಿಗೆ ತಿಳಿದಿರುವಂತೆ ಆತನ ಸಮಾಧಿ ನಮ್ಮ ಮಧ್ಯೆ ಇಂದಿನವರೆಗೂ ಇದೆ. ಆತನೊಬ್ಬ ಪ್ರವಾದಿಯೂ ಆಗಿದ್ದ. ತನ್ನ ಸಂತತಿಯಲ್ಲೇ ಒಬ್ಬನನ್ನು ಅರಸನನ್ನಾಗಿ ಮಾಡುವುದಾಗಿ ದೇವರು ಮಾಡಿದ್ದ ವಾಗ್ದಾನವನ್ನು ಆತನು ಮರೆತಿರಲಿಲ್ಲ. ಹೀಗಿರುವಲ್ಲಿ ಕ್ರಿಸ್ತಯೇಸುವಿನ ಪುನರುತ್ಥಾನವನ್ನು ಮುಂಚಿತವಾಗಿ ಅರಿತು ಅದರ ವಿಷಯವಾಗಿ ಹೀಗೆಂದು ಪ್ರವಾದನೆ ಮಾಡಿದ: ‘ಆತನನನ್ನು ಪಾತಾಳಕ್ಕೆ ದೂಡಲಿಲ್ಲ; ದೇಹ ಕೊಳೆತುಹೋಗಲು ಬಿಡಲಿಲ್ಲ.’ ಈ ಯೇಸುವನ್ನೇ ದೇವರು ಪುನರುತ್ಥಾನಗೊಳಿಸಿದ್ದಾರೆ; ಈ ಘಟನೆಗೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಯೇಸು, ದೇವರ ಬಲಪಾಶ್ರ್ವಕ್ಕೆ ಆರೋಹಿತರಾದರು. ಅವರು ತಮ್ಮ ಪಿತ ವಾಗ್ದಾನ ಮಾಡಿದ ಪವಿತ್ರಾತ್ಮ ಅವರನ್ನು ಪಡೆದು, ನಮ್ಮ ಮೇಲೆ ಸುರಿಸಿದ ಆ ವರವನ್ನೇ ನೀವು ಈಗ ನೋಡುತ್ತಿರುವುದು ಹಾಗೂ ಕೇಳುತ್ತಿರುವುದು.

ಕೀರ್ತನೆ: 16:1-2, 5, 7-8, 9-10, 11
ಶ್ಲೋಕ: ನೀಡು ದೇವಾ ರಕ್ಷಣೆಯನು, ನಾ ನಿನಗೆ ಶರಣಾಗತನು

ನೀಡು ದೇವಾ ರಕ್ಷಣೆಯನು / ನಾ ನಿನಗೆ ಶರಣಾಗತನು //
“ನೀನೇ ನನ್ನೊಡೆಯ”ನೆಂದು ನಾ ನುಡಿದೆ /
ನಿನ್ನ ಹೊರತು ನನಗಿಲ್ಲ ಒಳಿತು” ಎಂದೆ //

ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ /
ನಿನ್ನ ಕೈಯಲ್ಲಿದೆ ಪ್ರಭುನನ್ನ ವಿಮೆ //
ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆಮಾರ್ಗದರ್ಶಕ /
ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ //

ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ /
ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ? //

ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ /
ಆನಂದಗೊಂಡಿದೆ ಮನಸುರಕ್ಷಿತವಿದೆ ಕಾಯ //
ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ /
ಬಿಟ್ಟುಕೊಡುವುದಿಲ್ಲ ನಿನ್ನ ಈ ಭಕ್ತನನು ಪಾತಾಳಕೆ //

ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು /
ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು /
ನಿನ್ನ ಬಲಗೈ ನೀಡುವುದು ನಿತ್ಯ ಭಾಗ್ಯವನು //

ಶುಭಸಂದೇಶ: ಮತ್ತಾಯ 28:8-15


ಮಹಿಳೆಯರು ಭಯಮಿಶ್ರಿತ ಆನಂದದಿಂದ ಸಮಾಧಿಯನ್ನು ಬಿಟ್ಟು ಕೂಡಲೇ ಹೊರಟರು. ಶಿಷ್ಯರಿಗೆ ಈ ಸಮಾಚಾರವನ್ನು ಮುಟ್ಟಿಸಲು ಧಾವಿಸಿದರು. ತಟ್ಟನೆ, ಯೇಸುವೇ ಅವರನ್ನು ಎದುರುಗೊಂಡು, “ನಿಮಗೆ ಶುಭವಾಗಲಿ!” ಎಂದರು. ಆ ಮಹಿಳೆಯರು ಹತ್ತಿರಕ್ಕೆ ಬಂದು, ಅವರ ಪಾದಕ್ಕೆರಗಿ ಪೂಜಿಸಿದರು. ಆಗ ಯೇಸು ಅವರಿಗೆ, “ಭಯಪಡಬೇಡಿ, ನನ್ನ ಸೋದರರ ಬಳಿಗೆ ಹೋಗಿ ಅವರು ಗಲಿಲೇಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ತಿಳಿಸಿರಿ,” ಎಂದು ಹೇಳಿದರು. ಇತ್ತ ಆ ಮಹಿಳೆಯರು ಹೋಗುತ್ತಿದ್ದಂತೆ, ಅತ್ತ ಕಾವಲುಗಾರರಲ್ಲಿ ಕೆಲವರು ನಗರಕ್ಕೆ ಬಂದು ನಡೆದ ಸಂಗತಿಯನ್ನೆಲ್ಲಾ ಮುಖ್ಯಯಾಜಕರಿಗೆ ವರದಿ ಮಾಡಿದರು. ಇವರು ಪ್ರಮುಖರೊಂದಿಗೆ ಸಭೆಸೇರಿ ಒಂದು ಸಂಚುಹೂಡಿದರು. ಸೈನಿಕರಿಗೆ ಭಾರಿ ಲಂಚಕೊಟ್ಟು, “ಅವನ ಶಿಷ್ಯರು ರಾತ್ರಿ ವೇಳೆಯಲ್ಲಿ ಬಂದು, ನಾವು ನಿದ್ರೆಮಾಡುತ್ತಿದ್ದಾಗ ಅವನನ್ನು ಕದ್ದುಕೊಂಡು ಹೋದರೆಂದು ಜನರಿಗೆ ಹೇಳಿರಿ; ಈ ಸುದ್ಧಿ ರಾಜ್ಯಪಾಲನ ಕಿವಿಗೆ ಬಿದ್ದರೆ, ನಾವು ಅವರನ್ನು ಸಮಾಧಾನ ಪಡಿಸುತ್ತೇವೆ; ನಿಮಗೇನೂ ಆಗದಂತೆ ನೋಡಿಕೊಳ್ಳುತ್ತೇವೆ,” ಎಂದು ಹೇಳಿದರು. ಸೈನಿಕರು ಲಂಚವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟಂತೆಯೇ ಮಾಡಿದರು. ಈ ಕಟ್ಟುಕತೆ ಯೆಹೂದ್ಯರಲ್ಲಿ ಹಬ್ಬಿ ಇಂದಿನವರೆಗೂ ಪ್ರಚಲಿತವಾಗಿದೆ.

20.04.25 - “ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ,”

 



ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು 10:34, 37-43

ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ. ಈ ವಿಷಯ ನನಗೆ ಈಗ ಮನದಟ್ಟಾಗಿದೆ. ಇತ್ತೀಚೆಗೆ ಜುದೇಯ ನಾಡಿನಾದ್ಯಂತ ನಡೆದ ಘಟನೆಗಳು ನಿಮಗೆ ತಿಳಿದೇ ಇರಬೇಕು. ಇವು ನಜರೇತಿನ ಯೇಸುವಿಗೆ ಸಂಬಂಧಪಟ್ಟ ವಿಷಯಗಳು. ಸ್ನಾನದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಯೊವಾನ್ನನು ಬೋಧಿಸಿದ ನಂತರ, ಯೇಸು ತಮ್ಮ ಸೇವಾವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರಂಭಿಸಿದರು. ಅವರು ಪವಿತ್ರಾತ್ಮರಿಂದಲೂ ದೈವಶಕ್ತಿಯಿಂದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದರಿಂದ ಅವರು ಎಲ್ಲೆಡೆಯಲ್ಲೂ ಒಳಿತನ್ನು ಮಾಡುತ್ತಾ, ಚಿಪೀಡಿತರಾದವರನ್ನು ಸ್ವಸ್ಥಪಡಿಸುತ್ತಾ ಸಂಚರಿಸಿದರು. ಅವರು ಯೆಹೂದ್ಯರ ಹಳ್ಳಿ ಪಳ್ಳಿಗಳಲ್ಲೂ ಜೆರುಸಲೇಮಿನಲ್ಲೂ ಎಸಗಿದ ಸಕಲ ಕಾರ್ಯಗಳಿಗೆ ನಾವು ಸಾಕ್ಷಿಗಳು. ಯೆಹೂದ್ಯರು ಆ ಯೇಸುವನ್ನು ಶಿಲುಬೆ ಮರಕ್ಕೆ ನೇತುಹಾಕಿ ಕೊಂದರು. ಆದರೆ ದೇವರು ಅವರನ್ನು ಮೂರನೆಯ ದಿನ ಪುನರುತ್ಥಾನಗೊಳಿಸಿ ಪ್ರತ್ಯಕ್ಷರಾಗುವಂತೆ ಮಾಡಿದರು. ಅವರು ಕಾಣಿಸಿಕೊಂಡದ್ದು ಎಲ್ಲಾ ಜನರಿಗೆ ಅಲ್ಲ; ದೇವರಿಂದ ಸಾಕ್ಷಿಗಳಾಗಿ ಆಯ್ಕೆಯಾಗಿದ್ದ ನಮಗೆ. ಅವರು ಪುನರುತ್ಥಾನ ಹೊಂದಿದ ನಂತರ ಅವರೊಡನೆಯೇ ಊಟ ಮಾಡಿದವರು ನಾವು. ಮಾನವರಿಗೆ ಶುಭಸಂದೇಶವನ್ನು ಬೋಧಿಸುವಂತೆಯೂ ಜೀವಂತರಿಗೂ ಹಾಗೂ ಮೃತರಿಗೂ ದೇವರೇ ಅವರನ್ನು ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದಾರೆಂದು ರುಜುವಾತುಪಡಿಸುವಂತೆಯೂ ನಮಗೆ ಆಜ್ಞಾಪಿಸಿದ್ದಾರೆ. ಎಲ್ಲಾ ಪ್ರವಾದಿಗಳು ಅವರನ್ನು ಕುರಿತೇ ಸಾಕ್ಷಿ ನೀಡಿದ್ದಾರೆ; ಅವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನೂ ಅವರ ನಾಮದ ಶಕ್ತಿಯಿಂದ ಪಾಪಕ್ಷಮೆಯನ್ನು ಪಡೆಯುವನೆಂದು ಪ್ರವಾದನೆಮಾಡಿದ್ದಾರೆ.”

ಕೀರ್ತನೆ: 118:1-2, 16-17, 22-23ಶ್ಲೋಕ: ಪ್ರಭುವೇ, ನಿಯೋಜಿಸಿದ ದಿನವಿದು, ಹರ್ಷಿಸಿ ಆನಂದಿಸೋಣ ಇಂದು

ಎರಡನೇ ವಾಚನ: ಕೊಲೊಸ್ಸೆಯರಿಗೆ 3:1-4

ಸಹೋದರರೇ, ನೀವು ಯೇಸುಕ್ರಿಸ್ತರೊಂದಿಗೆ ಪುನರುತ್ಥಾನ ಹೊಂದಿರುವುದಾದರೆ ಸ್ವರ್ಗೀಯ ವಿಷಯಗಳ ಕಡೆಗೆ ಗಮನಕೊಡಿ. ಕ್ರಿಸ್ತಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ. ನೀವು ಕ್ರಿಸ್ತಯೇಸುವಿನೊಂದಿಗೆ ಮರಣ ಹೊಂದಿರುವುದರಿಂದ ಅವರೊಂದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ. ನಿಮ್ಮ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಲಿ. ಕ್ರಿಸ್ತಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವೂ ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊಂದಿಗೆ ಪ್ರತ್ಯಕ್ಷರಾಗುವಿರಿ.

ಶುಭಸಂದೇಶ: ಯೊವಾನ್ನ 20:1-9


ಅಂದು ಭಾನುವಾರ, ಮುಂಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದಳು. ಸಮಾಧಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿಂದ ತೆಗೆದುಹಾಕಿರುವುದನ್ನು ಕಂಡಳು. ಆಗ ಆಕೆ ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿ ಬಂದು, “ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ,” ಎಂದು ಹೇಳಿದಳು. ಇದನ್ನು ಕೇಳಿ ಪೇತ್ರನೂ ಇನ್ನೊಬ್ಬ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು. ಇಬ್ಬರೂ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಸಮಾಧಿಯನ್ನು ಮೊದಲು ತಲುಪಿದನು. ಅವನು ಬಗ್ಗಿ ನೋಡಿದಾಗ ಅಲ್ಲಿ ನಾರುಬಟ್ಟೆಗಳು ಬಿದ್ದಿರುವುದು ಕಾಣಿಸಿತು. ಆದರೆ ಅವನು ಒಳಗೆ ನುಗ್ಗಲಿಲ್ಲ. ಅವನ ಹಿಂದೆಯೇ ಸಿಮೋನ ಪೇತ್ರನು ಬಂದು ನೆಟ್ಟಗೆ ಸಮಾಧಿಯೊಳಗೆ ನುಗ್ಗಿದನು; ಅಲ್ಲಿ ನಾರುಮಡಿಗಳು ಬಿದ್ದಿರುವುದನ್ನು ಕಂಡನು. ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ, ಆ ನಾರುಮಡಿಗಳೊಡನೆ ಇರದೆ, ಅದನ್ನು ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕಂಡನು. ಸಮಾಧಿಯನ್ನು ಮೊದಲು ತಲುಪಿದ್ದ ಇನ್ನೊಬ್ಬ ಶಿಷ್ಯನೂ ಆಮೇಲೆ ಒಳಗೆ ನುಗ್ಗಿ ನೋಡಿದನು; ನೋಡಿ ನಂಬಿದನು. ಯೇಸು ಸತ್ತ ಮೇಲೆ ಮರಳಿ ಜೀವಂತರಾಗಿ ಎದ್ದುಬರಬೇಕು, ಎಂಬ ಪವಿತ್ರಗ್ರಂಥದ ವಾಕ್ಯ ಅವರಿಗೆ ಅದುವರೆಗೆ ಅರ್ಥವಾಗಿರಲಿಲ್ಲ.

19.04.25 - "ಅವರು ಇಲ್ಲಿಲ್ಲ; ಅವರೇ ಹೇಳಿದಂತೆ ಪುನರುತ್ಥಾನ ಹೊಂದಿದ್ದಾರೆ. ಬನ್ನಿ, ಅವರನ್ನಿಟ್ಟಿದ್ದ ಸ್ಥಳವನ್ನು ನೋಡಿ"

 ಮೊದಲನೇ ವಾಚನ: ಆದಿಕಾಂಡ 1:1-2:2 (1:1, 26-31)


ಆದಿಯಲ್ಲಿ ದೇವರು ಪರಲೋಕ - ಭೂಲೋಕವನ್ನು ಸೃಷ್ಟಿಮಾಡಿದರು. ಅದಾದನಂತರ ದೇವರು, “ನಮ್ಮಂತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ವಿೂನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ - ಚಿಕ್ಕ ಸಾಕುಪ್ರಾಣಿ ಹಾಗು ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ,” ಎಂದರು. ಹೀಗೆ ದೇವರು: ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ. ಅವರನ್ನು ದೇವರು ಆಶೀರ್ವದಿಸಿ, “ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿ ಕೊಳ್ಳಿರಿ; ಸಮುದ್ರದ ವಿೂನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ. ಇನ್ನೂ, ಭೂಮಿಯಲ್ಲಿರುವ ಎಲ್ಲ ತರದ ದವಸ ಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ - ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿ ಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ,” ಎಂದು ಹೇಳಿದರು. ಹಾಗೆಯೇ ಆಯಿತು. ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನ ಆಯಿತು.

ಎರಡನೇ ವಾಚನ: ಆದಿಕಾಂಡ 22:1-1 8 (22:1-2, 9, 10-13, 15-18)


ಈ ಘಟನೆಗಳಾದ ಬಳಿಕ ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕೋಸ್ಕರ, “ಅಬ್ರಹಾಮನೇ,” ಎಂದು ಕರೆದರು. ಅವನು “ಇಗೋ, ಸಿದ್ಧನಿದ್ದೇನೆ” ಎಂದನು. ಆಗ ದೇವರು, “ನಿನಗೆ ಒಬ್ಬನೇ ಒಬ್ಬನೂ ಮುದ್ದು ಮಗನೂ ಆದ ಇಸಾಕನನ್ನು ಕರೆದುಕೊಂಡು ಮೊರೀಯ ಪ್ರಾಂತಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನ ಬಲಿಯಾಗಿ ಅರ್ಪಿಸು” ಎಂದರು. ದೇವರು ಹೇಳಿದ ಸ್ಥಳಕ್ಕೆ ಬಂದು ಸೇರಿದಾಗ ಅಬ್ರಹಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿದ. ಕಟ್ಟಿಗೆಯನ್ನು ಅದರ ಮೇಲೆ ಒಟ್ಟಿ, ಮಗ ಇಸಾಕನ ಕೈಕಾಲುಗಳನ್ನು ಬಿಗಿದು, ಕಟ್ಟಿಗೆಗಳ ಮೇಲೆ ಅವನನ್ನು ಕೆಡವಿದ. ಬಳಿಕ ಮಗನನ್ನು ವಧಿಸಲು ಕೈಚಾಚಿ ಕತ್ತಿಯನ್ನು ಎತ್ತಿದ. ಆದರೆ ಸರ್ವೇಶ್ವರನ ದೂತನು ಆಕಾಶದಿಂದ, “ಅಬ್ರಹಾಮನೇ, ಹೇ ಅಬ್ರಹಾಮನೇ” ಎಂದು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ ಸಿದ್ಧನಿದ್ದೇನೆ” ಎಂದ. ದೂತನು ಅವನಿಗೆ, “ಹುಡುಗನ ಮೇಲೆ ಕೈಯೆತ್ತಬೇಡ; ಅವನಿಗೆ ಯಾವ ಹಾನಿಯನ್ನೂ ಮಾಡಬೇಡ; ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಬಲಿಕೊಡಲು ಹಿಂತೆಗೆಯಲಿಲ್ಲ; ಎಂತಲೇ, ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ನನಗೆ ಚೆನ್ನಾಗಿ ಗೊತ್ತಾಯಿತು,” ಎಂದು ಹೇಳಿದನು. ಅಬ್ರಹಾಮನು ಕಣ್ಣೆತ್ತಿನೋಡಿದ. ತನ್ನ ಹಿಂದುಗಡೆ ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿಕೊಂಡಿತ್ತು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಅದನ್ನು ದಹನಬಲಿಯನ್ನಾಗಿ ಅರ್ಪಿಸಿದ. “ಬೆಟ್ಟದ ಮೇಲೆ ಸರ್ವೇಶ್ವರಸ್ವಾಮಿಯೇ ಒದಗಿಸುತ್ತಾರೆ” ಎಂಬ ಹೇಳಿಕೆ ಇಂದಿಗೂ ರೂಢಿಯಲ್ಲಿದೆ. ಸರ್ವೇಶ್ವರಸ್ವಾಮಿಯ ದೂತನು ಆಕಾಶದಿಂದ ಮತ್ತೊಮ್ಮೆ ಅಬ್ರಹಾಮನನ್ನು ಕರೆದು, “ಸರ್ವೇಶ್ವರನ ವಾಕ್ಯವನ್ನು ಕೇಳು: ನೀನು ನಿನ್ನ ಒಬ್ಬನೇ ಮಗನನ್ನು ಬಲಿಕೊಡಲು ಹಿಂತೆಗೆಯದೆ ಹೋದುದರಿಂದ ನಾನು ನಿನ್ನನ್ನು ತಪ್ಪದೆ ಆಶೀರ್ವದಿಸುತ್ತೇನೆ; ನಿನ್ನ ಸಂತತಿಯನ್ನು ಹೆಚ್ಚಿಸಿಯೇ ಹೆಚ್ಚಿಸುತ್ತೇನೆ; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದ ಮರಳಿನಂತೆಯೂ ಅಸಂಖ್ಯವಾಗಿ ಮಾಡುತ್ತೇನೆ. ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನ ಪಡಿಸಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿಂದ ವಿಶ್ವದ ಎಲ್ಲ ರಾಷ್ಟ್ರಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು ಎಂಬುದಾಗಿ ಸರ್ವೇಶ್ವರನೇ ಆಣೆಯಿಟ್ಟು ಹೇಳಿದ್ದಾರೆ,” ಎಂದನು.

ಮೂರನೇ ವಾಚನ: ವಿಮೋಚನಾಕಾಂಡ 14:15-15:1


ಆಗ ಸರ್ವೇಶ್ವರ: “ನೀನೇಕೆ ನನಗೆ ಮೊರೆಯಿಡುತ್ತಿರುವೆ? ಮುಂದಕ್ಕೆ ಹೊರಡಬೇಕೆಂದು ಇಸ್ರಯೇಲರಿಗೆ ಹೇಳು. ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಚಾಚಿ ಅದನ್ನು ವಿಭಾಗಿಸು; ಆಗ ಇಸ್ರಯೇಲರು ಸಮುದ್ರದ ಮಧ್ಯೆ ಒಣಗಿದ ನೆಲದ ಮೇಲೆ ನಡೆದುಹೋಗುವರು. ನಾನು ಈಜಿಪ್ಟಿನವರ ಹೃದಯಗಳನ್ನು ಕಠಿಣಪಡಿಸುವೆನು; ಎಂದೇ ಅವರು ಇವರ ಹಿಂದೆ ಸಮುದ್ರದೊಳಕ್ಕೆ ಹೋಗುವರು. ಆಗ ನಾನು ಫರೋಹನನ್ನು, ಅವನ ಸಮಸ್ತ ಸೈನ್ಯವನ್ನು, ರಥಗಳನ್ನು ಹಾಗು ರಾಹುತರನ್ನು ಸೋಲಿಸಿ ಪ್ರಖ್ಯಾತಿ ಹೊಂದಿದ ನಂತರ ನಾನೇ ಸರ್ವೇಶ್ವರ ಎಂಬುದನ್ನು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು ಮೋಶೆಗೆ. ಇಸ್ರಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ಸ್ಥಳ ಬದಲಾಯಿಸಿ ಅವರ ಹಿಂದಕ್ಕೆ ಬಂದನು. ಅವರ ಮುಂಭಾಗದಲ್ಲಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು. ಆ ಮೇಘಸ್ತಂಭವು ಈಜಿಪ್ಟಿನವರ ಪಡೆಗೂ ಇಸ್ರಯೇಲರ ಪಡೆಗೂ ನಡುವೆ ಬಂದು ಈಜಿಪ್ಟಿನವರಿಗೆ ಕತ್ತಲೆಯನ್ನು ಉಂಟುಮಾಡಿತು; ಇಸ್ರಯೇಲರಿಗೆ ರಾತ್ರಿಯನ್ನು ಬೆಳಕಾಗಿಸಿತು. ಈ ಕಾರಣ ಆ ರಾತ್ರಿಯೆಲ್ಲಾ ಒಂದು ಪಡೆಯವರು ಇನ್ನೊಂದು ಪಡೆಯವರ ಬಳಿಗೆ ಬರಲಾಗಲಿಲ್ಲ. ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ ಸರ್ವೇಶ್ವರಸ್ವಾಮಿ ಆ ರಾತ್ರಿಯೆಲ್ಲಾ ಪೂರ್ವದಿಕ್ಕಿನಿಂದ ಬಲವಾದ ಬಿರುಗಾಳಿ ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದುಕಡೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದರು. ನೀರು ಇಬ್ಭಾಗವಾಯಿತು. ಇಸ್ರಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತು. ಈಜಿಪ್ಟಿನವರು, ಅಂದರೆ ಫರೋಹನ ಕುದುರೆಗಳು, ರಥಗಳು, ರಾಹುತರು ಇಸ್ರಯೇಲರನ್ನು ಬೆನ್ನಟ್ಟಿ ಬಂದು ಅವರ ಹಿಂದೆಯೇ ಸಮುದ್ರದೊಳಗೆ ಹೋದರು. ಬೆಳಗಿನ ಜಾವದಲ್ಲಿ ಸರ್ವೇಶ್ವರ ಆ ಅಗ್ನಿಸ್ತಂಭದಿಂದ ಈಜಿಪ್ಟಿನವರ ದಂಡಿನ ಕಡೆಗೆ ನೋಡಿ ಅದನ್ನು ಗಲಿಬಿಲಿ ಮಾಡಿದರು. ಸರ್ವೇಶ್ವರ ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದರಿಂದ ಈಜಿಪ್ಟಿನವರು ಬಹುಕಷ್ಟದಿಂದ ಅವುಗಳನ್ನು ಸಾಗಿಸಿಕೊಂಡು ಹೋದರು. ಆಗ ಈಜಿಪ್ಟಿನವರು, “ನಾವು ಇಸ್ರಯೇಲರ ಮುಂದೆ ಗೆಲ್ಲಲಾರೆವು, ಓಡಿಹೋಗೋಣ ಬನ್ನಿ; ಸರ್ವೇಶ್ವರನು ಅವರ ಪರವಾಗಿ, ನಮಗೆ ವಿರುದ್ಧವಾಗಿ ಯುದ್ಧ ಮಾಡುತ್ತಿದ್ದಾನೆ,” ಎಂದುಕೊಂಡರು. ಅಷ್ಟರಲ್ಲಿ ಸರ್ವೇಶ್ವರ, “ಸಮುದ್ರದ ಮೇಲೆ ನಿನ್ನ ಕೈಚಾಚು; ಆಗ ಅದರ ನೀರು ಮೊದಲಿನಂತೆ ಬಂದು ಈಜಿಪ್ಟಿನವರನ್ನೂ ಅವರ ರಥಗಳನ್ನೂ ರಾಹುತರನ್ನೂ ಮುಳುಗಿಸುವುದು,” ಎಂದು ಮೋಶೆಗೆ ಹೇಳಿದರು. ಅಂತೆಯೇ ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಈಜಿಪ್ಟಿನವರು ಓಡಿ ಹೋಗತ್ತಾ ಅದಕ್ಕೆ ಎದುರಾಗಿಯೇ ಬಂದರು. ಹೀಗೆ ಸರ್ವೇಶ್ವರ ಈಜಿಪ್ಟಿನವರನ್ನು ಸಮುದ್ರದೊಳಗೆ ಕೆಡವಿಬಿಟ್ಟರು. ನೀರು ಮೊದಲಿನಂತೆ ಬಂದು ಆ ರಥಗಳನ್ನು, ರಾಹುತರನ್ನು ಹಾಗು ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನು ಮುಳುಗಿಸಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ. ಇಸ್ರಯೇಲರಾದರೋ, ಸಮುದ್ರದೊಳಗೆ ಒಣ ನೆಲದಲ್ಲೇ ನಡೆದುಹೋದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತ್ತು. ಆ ದಿನ ಸರ್ವೇಶ್ವರಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಈಜಿಪ್ಟಿನವರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಯೇಲರು ಕಂಡರು. ಸರ್ವೇಶ್ವರ ಈಜಿಪ್ಟಿನವರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಯೇಲರು ನೋಡಿ ಸರ್ವೇಶ್ವರನಿಗೆ ಭಯಪಟ್ಟು ಅವರಲ್ಲೂ ಅವರ ದಾಸ ಮೋಶೆಯಲ್ಲೂ ನಂಬಿಕೆಯಿಟ್ಟರು. ಆಗ ಮೋಶೆ ಮತ್ತು ಇಸ್ರಯೇಲರು ಸರ್ವೇಶ್ವರಸ್ವಾಮಿಗೆ ಸ್ತೋತ್ರವಾಗಿ ಈ ಕೀರ್ತನೆಯನ್ನು ಹಾಡಿದರು: “ಮಾಡೋಣ ಸರ್ವೇಶ್ವರನ ಗುಣಗಾನ ಮಹೋನ್ನತ ಆತ ಗಳಿಸಿದ ವಿಜಯ! ಕುದುರೆಗಳನು, ರಾಹುತರನು ಕಡಲಲ್ಲಿ ಕೆಡವಿ ನಾಶಮಾಡಿಹನು.

ನಾಲ್ಕನೇ ವಾಚನ: ಯೆಶಾಯ 54:5-14

ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ. ಗಂಡಬಿಟ್ಟು ಮನನೊಂದಿರುವ ಪತ್ನಿ ನೀನು ಹೌದು, ತ್ಯಜಿಸಲಾದ ಯೌವನದ ಪತ್ನಿ ನೀನು. ಸರ್ವೇಶ್ವರ ಕನಿಕರಿಸಿ ಕರೆದಿಹನು ನಿನ್ನನು. ಆ ನಿನ್ನ ದೇವರ ನುಡಿಯಿದು: "ಬಿಟ್ಟಿದ್ದೆನು ನಿನ್ನನು ಕ್ಷಣಮಾತ್ರ ಪ್ರೀತಿಯಿಂದ ಸೇರಿಸಿಕೊಳ್ಳುವೆ ಹತ್ತಿರ. ತಟ್ಟನೆ ಉಕ್ಕು ಹರಿಯುವ ಕೋಪದಿಂದ ಕ್ಷಣಮಾತ್ರ ಮುಖಮರೆಸಿಕೊಂಡೆ ನಿನ್ನಿಂದ ಕರುಣಿಸುವೆನು ನಿನ್ನನು ಶಾಶ್ವತ ಕೃಪೆಯಿಂದ.” ಇಂತೆನ್ನುತಿಹನು ನಿನ್ನ ಉದ್ಧಾರಕ ಸರ್ವೇಶ್ವರ. “ಶಪಥಮಾಡಿದೆ ನಾನು ನೋಹನ ದಿನದಂದು: ಜಲಪ್ರಳಯವು ಭೂಮಿಯನು ಇನ್ನು ಮುಳುಗಿಸದೆಂದು. ಶಪಥಮಾಡುವೆ ಈಗ ‘ಕೋಪಮಾಡೆನು’ ಎಂದು ‘ಇನ್ನು ನಿನ್ನನು ಗದರಿಸೆನು’ ಎಂದು. ಬಿರುಕುಬಿಟ್ಟಾವು ಬೆಟ್ಟಗಳು, ಕದಲಿಯಾವು ಗುಡ್ಡಗಳು, ನನ್ನ ಅಚಲ ಪ್ರೀತಿಯಾದರೊ ಬಿಟ್ಟುಹೋಗದು ನಿನ್ನನು. ಶಾಂತಿಸಮಾಧಾನದ ನನ್ನೀ ಒಪ್ಪಂದವು ಕದಲದು. ನಿನ್ನ ಮೇಲೆ ಕರುಣೆಯಿಟ್ಟಿರುವ ಸರ್ವೇಶ್ವರನ ನುಡಿಯಿದು.” ಜೆರುಸಲೇಮಿನ ಭವ್ಯ ಭವಿಷ್ಯ “ಶೋಷಣೆಗೆ, ಬಿರುಗಾಳಿಗೆ, ನಿರ್ಗತಿಗೆ ಗುರಿಯಾದವಳೇ, ನಿರ್ಮಿಸುವೆ ನಿನ್ನನು ವಜ್ರವೈಡೂರ್ಯಗಳಿಂದ ಅಸ್ತಿವಾರ ಹಾಕುವೆ ನಿನಗೆ ನೀಲಮಣಿ ಗಳಿಂದ. ನಿರ್ಮಿಸುವೆ ನಿನ್ನ ಗೋಪುರಗಳನು ಮಾಣಿಕ್ಯಗಳಿಂದ ನಿನ್ನ ಪೌಳಿಗೋಡೆಯನು ಅನಘ್ರ್ಯ ರತ್ನಗಳಿಂದ. ನಿನ್ನ ಮಕ್ಕಳು ಶಿಕ್ಷಿತರಾಗುವರು ನನ್ನಿಂದ ಸಮೃದ್ಧವಾಗಿ ಬಾಳುವರು ಅವರು ಸುಖಶಾಂತಿಯಿಂದ. ನ್ಯಾಯನೀತಿ ನಿನಗಾಧಾರ; ದೂರವಿರುವುದು ಹಿಂಸಾಚಾರ. ಭಯಭೀತಿಗೆ ದೂರ, ಅವು ಬಾರವು ನಿನ್ನ ಹತ್ತಿರ.

ಐದನೇ ವಾಚನ: ಯೆಶಾಯ 55:1-11

ಎಲೈ ಬಾಯಾರಿದ ಜನರೇ, ನೀರಿನ ಬಳಿಗೆ ಬನ್ನಿ ಹಣವಿಲ್ಲದವರೇ ಬನ್ನಿ, ಅನ್ನವನ್ನು ತೆಗೆದು ಕೊಂಡು ತಿನ್ನಿ. ಹಾಲನು, ದ್ರಾಕ್ಷಾರಸವನು ಕ್ರಯವಿಲ್ಲದೆ ಕೊಂಡುಕೊಳ್ಳಿ. ಆಹಾರವಲ್ಲದ್ದಕ್ಕೆ ಹಣವನು ವ್ಯಯಮಾಡುವುದೇಕೆ? ತೃಪ್ತಿ ತರದ ಪದಾರ್ಥಕ್ಕೆ ನಿಮ್ಮ ದುಡಿತದ ವೆಚ್ಚವೇಕೆ? ಕಿವಿಗೊಡಿ ನನಗೆ, ಒಳಿತನ್ನು ತಿಂದು ಆನಂದಪಡಿ ಆ ಮೃಷ್ಟಾನ್ನವನುಂಡು. ಕಿವಿಯನ್ನಿತ್ತ ತಿರುಗಿಸಿ ಬನ್ನಿ ನನ್ನ ಬಳಿಗೆ, ಬದುಕಿಬಾಳುವಿರಿ ನೀವು ಕಿವಿಗೊಟ್ಟರೆನಗೆ. ದಾವೀದನಿಗೆ ವಾಗ್ದಾನವಿತ್ತ ವರವ ಈವೆ ನಿಮಗೆ ಮಾಡಿಕೊಳ್ಳುವೆ-ಚಿರವಾದ ಒಡಂಬಡಿಕೆಯನು ನಿಮ್ಮೊಂದಿಗೆ. ನೇಮಿಸಿರುವೆ ಆತನನು ಜನಗಳಿಗೆ ಸಾಕ್ಷಿಯನ್ನಾಗಿ ಜನಾಂಗಗಳಿಗೆ ನಾಯಕನನ್ನಾಗಿ, ಅಧಿಪತಿಯನ್ನಾಗಿ. ಎಲೈ ಇಸ್ರಯೇಲೇ, ನಿನ್ನ ದೇವರಾದ ಸರ್ವೇಶ್ವರನಿಗೋಸ್ಕರ ನಿನ್ನ ಮಹಿಮೆಪಡಿಸಿದ ಇಸ್ರಯೇಲಿನ ಪರಮಪಾವನನಿಗೋಸ್ಕರ ನೀ ಕರೆಗೊಡುವೆ ನಿನಗೆ ಗೊತ್ತಿಲ್ಲದ ಜನಾಂಗಕೆ. ಆಗ ಅಪರಿಚಿತರೂ ಓಡಿಬರುವರು ನಿನ್ನಾಶ್ರಯಕೆ. ಅರಸಿರಿ ಸರ್ವೇಶ್ವರನನು ಆತ ದೊರಕುವ ವೇಳೆಯಲಿ ವಿನಂತಿಸಿರಿ ಆತನಿರುವಾಗಲೆ ಸಮೀಪದಲಿ. ಬಿಟ್ಟುಬಿಡಲಿ ದುಷ್ಟನು ತನ್ನ ದುರ್ಮಾರ್ಗವನು ತೊರೆದುಬಿಡಲಿ ದುರುಳನು ದುರಾಲೋಚನೆಗಳನು. ಹಿಂದಿರುಗಿ ಬರಲಿ ಸರ್ವೇಶ್ವರನ ಬಳಿಗೆ ಕರುಣೆ ತೋರುವನು ಆತನು ಅವನಿಗೆ.  ಪಡೆಯಲಿ ಅವನು ನಮ್ಮ ದೇವರಿಂದ ಕ್ಷಮಿಸುವನಾತನು ಮಹಾಕೃಪೆಯಿಂದ. “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಂಥಲ್ಲ ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಂಥಲ್ಲ” ಎಂದಿಹನು ಸರ್ವೇಶ್ವರ. “ಎಷ್ಟೋ ಉನ್ನತ ಆಕಾಶವು ಭೂಮಿಯಿಂದ ಅಷ್ಟೂ ಉನ್ನತ ನನ್ನ ಮಾರ್ಗ ನಿಮ್ಮ ಮಾರ್ಗಗಳಿಗಿಂತ, ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತ. ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.

ಆರನೇ ವಾಚನ: ಬಾರೂಕ 3:9-15, 32-4:4

ಇಸ್ರಯೇಲೇ, ಜೀವದಾಯಕ ಆಜ್ಞೆಗಳನ್ನು ಕೇಳು, ಸುಜ್ಞಾನವನ್ನು ಕಲಿತುಕೊ ಕಿವಿಗೊಟ್ಟು. ಇಸ್ರಯೇಲೇ, ಇದು ಸಂಭವಿಸಿದ್ದು ಹೇಗೆ? ನಿನ್ನ ಶತ್ರುಗಳ ದೇಶದೊಳಕ್ಕೆ ನೀನು ಬಂದುದು ಹೇಗೆ? ಪರದೇಶದಲ್ಲಿ ನೀನು ಮುಪ್ಪಾದುದು ಹೇಗೆ? ಸತ್ತವರಂತೆ ನೀನು ಹೊಲೆಯಾದುದು ಹೇಗೆ? ಪಾತಾಳಲೋಕ ಸೇರಿದವರಂತೆ ನೀನು ಪರಿಗಣಿತನಾದುದು ಹೇಗೆ? ಸುಜ್ಞಾನದ ಬುಗ್ಗೆಯನ್ನೇ ನೀ ಮರೆತು ಬಿಟ್ಟಿರುವೆ. ದೇವರ ಮಾರ್ಗದಲ್ಲಿ ನೀನು ನಡೆದಿದ್ದರೆ ನಿರಂತರ ಶಾಂತಿಸಮಾಧಾನದಿಂದ ವಾಸಿಸುತ್ತಿದ್ದೆ. ಸುಜ್ಞಾನವೆಲ್ಲಿದೆ, ಶಕ್ತಿಯೆಲ್ಲಿದೆ, ವಿವೇಕವೆಲ್ಲಿದೆ ಎಂಬುದನ್ನು ಕಲಿ; ಆಗ ಕಂಡುಕೊಳ್ಳುವೆ ದೀರ್ಘಾಯುಸ್ಸು ಮತ್ತು ಜೀವ ಎಲ್ಲಿವೆಯೆಂದು ದಾರಿತೋರುವ ಬೆಳಕು ಮತ್ತು ಶಾಂತಿ ಎಲ್ಲಿವೆಯೆಂದು. ಸುಜ್ಞಾನದ ನೆಲೆಯನ್ನು ಕಂಡು ಹಿಡಿದಿರುವವರಾರು? ಅದರ ನಿಧಿಗೃಹವನ್ನು ಪ್ರವೇಶಿಸಿರುವವರಾರು? ಆದರೆ ಸುಜ್ಞಾನವನ್ನು ಬಲ್ಲ ಸರ್ವಜ್ಞನೊಬ್ಬನಿದ್ದಾನೆ. ಆತ ತನ್ನ ಸ್ವಂತ ಬುದ್ಧಿವಿವೇಕದಿಂದ ಅದನ್ನು ತಿಳಿದಿದ್ದಾನೆ. ಜಗತ್ತನ್ನು ಚಿರಕಾಲ ಸ್ಥಿರವಾಗಿರಿಸಿದವನು ಆತನೆ ನಾಲ್ಕು ಕಾಲಿನ ಪಶುಪ್ರಾಣಿಗಳಿಂದ ಅದನ್ನು ತುಂಬಿಸಿದವನು ಆತನೆ. ಆತ ಬೆಳಕನ್ನು ಕಳುಹಿಸುತ್ತಾನೆ – ಅದು ಬರುತ್ತದೆ ಹಿಂದಕ್ಕೆ ಕರೆದಾಗ ಭಯದಿಂದ ಹಿಂದಿರುಗುತ್ತದೆ. ತಾರೆಗಳು ನಿಯಮಿತ ಸ್ಥಳದಲ್ಲಿ ಸಂತಸದಿಂದ ಮಿನುಗುತ್ತವೆ ಆತ ಕರೆದಾಗ “ಇಗೋ ಇಲ್ಲಿದ್ದೇವೆ,” ಎಂದು ಹೇಳುತ್ತವೆ, ತಮ್ಮನ್ನು ಸೃಷ್ಟಿಸಿದಾತನ ಆನಂದಕ್ಕಾಗಿ ಅವು ಹೊಳೆಯುತ್ತವೆ. ಆತನೇ ನಮ್ಮ ದೇವರು; ಯಾರೂ ಇಲ್ಲ ಆತನಿಗೆ ಸಮಾನರು. ಜ್ಞಾನದ ಇಡೀ ಮಾರ್ಗವನ್ನು ಅರಿತಿದ್ದಾರೆ ಆ ದೇವರು. ತಮ್ಮ ದಾಸ ಯಕೋಬನಿಗೂ ತಮ್ಮ ಪ್ರಿಯ ಇಸ್ರಯೇಲರಿಗೂಹಿಂದಿರುಗುತ್ತದೆ. ಅನಂತರವೇ ಸುಜ್ಞಾನ ಧರೆಯ ಮೇಲೆ ಕಾಣಿಸಿಕೊಂಡಿತು, ಮಾನವರ ಮಧ್ಯೆ ಅದು ವಾಸಮಾಡಿತು. ಜ್ಞಾನವೇ ದೈವಾಜ್ಞೆಗಳ ಗ್ರಂಥ ಸದಾಕಾಲಕ್ಕೂ ಸ್ಥಿರವಾದ ಧರ್ಮಶಾಸ್ತ್ರ. ಪಡೆಯುವರು ಸಜೀವ ಅದನ್ನು ಪ್ರಾಮಾಣಿಕವಾಗಿ ಪಾಲಿಸುವವರು; ಅದನ್ನು ಬಿಟ್ಟುಬಿಡುವವರು ಸಾಯುವರು. ಇಸ್ರಯೇಲೇ, ಹಿಂದಿರುಗಿ ಬಾ, ಸುಜ್ಞಾನವನ್ನು ಸ್ವೀಕರಿಸು, ಅದರ ಪ್ರಕಾಶದಲ್ಲಿ ಬೆಳಕಿನತ್ತ ಪ್ರವರ್ಧಿಸು. ನಿನ್ನ ಗೌರವವನ್ನು ಇನ್ನೊಬ್ಬನಿಗೆ ಸಲ್ಲಗೊಡಬೇಡ ನಿನ್ನ ಸೌಲಭ್ಯಗಳನ್ನು ಅನ್ಯಜನರಿಗೆ ಬಿಟ್ಟುಬಿಡಬೇಡ. ಇಸ್ರಯೇಲೇ, ನಾವು ಧನ್ಯರು ! ದೇವರಿಗೆ ಪ್ರಿಯವಾದುದು ನಮಗೆ ಬಯಲಾಗಿರುವುದು. ಜೆರುಸಲೇಮಿನ ವಿಲಾಪ ಹಾಗು ಸಾಂತ್ವನ

ಏಳನೇ ವಾಚನ: ಯೆಜೆಕಿಯೇಲ 36:16-17, 18-26

ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು “ನರಪುತ್ರನೇ, ಇಸ್ರಯೇಲ್ ವಂಶದವರು ಸ್ವದೇಶದಲ್ಲಿ ವಾಸಿಸುತ್ತಿದ್ದಾಗ ತಮ್ಮ ದುರ್ಮಾರ್ಗ ದುರಾಚಾರಗಳಿಂದ ಅದನ್ನು ಅಶುದ್ಧಗೊಳಿಸಿದರು. ಅವರ ನಡತೆ ಮುಟ್ಟಿನ ಹೊಲಸಿನಂತೆ ನನಗೆ ಅಸಹ್ಯವಾಗಿತ್ತು. ಅವರು ನಾಡಿನ ಮೇಲೆ ರಕ್ತವನ್ನು ಸುರಿಸಿ, ತಮ್ಮ ವಿಗ್ರಹಗಳಿಂದ ಅದನ್ನು ಹೊಲೆಗೈದಕಾರಣ ನಾನು ಅವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿವೆನು; ಜನಾಂಗಗಳೊಳಗೆ ಅವರನ್ನು ಚದರಿಸುವೆನು; ದೇಶಗಳಿಗೆ ತೂರಿಬಿಟ್ಟು, ಅವರ ದುರ್ಮಾರ್ಗ ದುರಾಚಾರಗಳಿಗೆ ಸರಿಯಾಗಿ ದಂಡಿಸಿದೆನು. ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ, ‘ಓಹೋ, ಇವರು ಸರ್ವೇಶ್ವರನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ’ ಎಂದೆನಿಸಿಕೊಂಡರು. ನನ್ನ ಪರಿಶುದ್ಧನಾಮಕ್ಕೆ ಅಪಕೀರ್ತಿಯನ್ನು ತಂದರು. ಇಸ್ರಯೇಲ್ ವಂಶದವರು ಜನಾಂಗಗಳೊಳಗೆ ಸೇರಿ, ಅಲ್ಲಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧ ನಾಮವನ್ನು ಕುರಿತು, ನಾನು ಮರುಗಿದೆನು. “ಆದಕಾರಣ - ನೀನು ಇಸ್ರಯೇಲ್ ವಂಶದವರಿಗೆ ಹೀಗೆ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಇಸ್ರಯೇಲ್ ವಂಶದವರೇ, ನಿಮ್ಮ ನಿಮಿತ್ತವಲ್ಲ, ನೀವು ಜನಾಂಗಗಳೊಳಗೆ ಸೇರಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧನಾಮದ ನಿಮಿತ್ತವೆ, ಈ ರಕ್ಷಣಾ ಕಾರ್ಯವನ್ನು ಮಾಡುತ್ತೇನೆ. ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಶ್ರೀನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು. ಹೀಗೆ ನಾನು ಅವುಗಳ ಕಣ್ಣೆದುರಿಗೆ, ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಗ ನಾನೇ ಸರ್ವೇಶ್ವರ ಎಂದು ಅವುಗಳಿಗೆ ನಿಶ್ಚಿತವಾಗುವುದು. ಇದು ಸರ್ವೇಶ್ವರನಾದ ದೇವರ ನುಡಿ. ನಾನು ನಿಮ್ಮನ್ನು ಜನಾಂಗಗಳಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡುವೆನು. ನಾನು ನಿಮ್ಮ ಮೇಲೆ ನಿರ್ಮಲೋದಕವನ್ನು ಪ್ರೋಕ್ಷಿಸುವೆನು, ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು. ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನನ್ನ ಸ್ವಭಾವವನ್ನು ಹುಟ್ಟಿಸುವೆನು. ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು. ನನ್ನ ಆತ್ಮವನ್ನು ನಿಮ್ಮಲ್ಲಿ ನೆಲೆಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಗೊಂಡು ಆಚರಿಸುವಿರಿ. ನಾನು ನಿಮ್ಮ ಪಿತೃಗಳಿಗೆ ಅನುಗ್ರಹಿಸಿದ ನಾಡಿನಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.

ಮೊದಲನೇ ವಾಚನ: ರೋಮನರಿಗೆ 6:3-11

ಕ್ರಿಸ್ತಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ? ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸ ಜೀವವನ್ನು ಹೊಂದಿ ಬಾಳುತ್ತೇವೆ. ಅವರು ಮರಣ ಹೊಂದಿದಂತೆ ನಾವೂ ಅವರೊಂದಿಗೆ ಐಕ್ಯವಾಗಿ ಮರಣವನ್ನು ಹೊಂದುತ್ತೇವೆ. ಅಂತೆಯೇ, ಅವರು ಪುನರುತ್ಥಾನ ಆದಂತೆ ನಾವೂ ಅವರೊಡನೆ ಐಕ್ಯವಾಗಿ ಪುನರುತ್ಥಾನ ಹೊಂದುತ್ತೇವೆ. ನಮಗೆ ತಿಳಿದಿರುವಂತೆ ಪಾಪಾಧೀನವಾದ ನಮ್ಮ ಸ್ವಭಾವವು ನಾಶವಾಗುವಂತೆಯೂ ಇನ್ನು ಮುಂದೆ ನಾವು ಪಾಪಕ್ಕೆ ದಾಸರಾಗಿರದಂತೆಯೂ ಯೇಸುಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವನ್ನು ಶಿಲುಬೆಗೆ ಜಡಿಯಲಾಗಿದೆ. ಹೀಗೆ ಸತ್ತವನು ಪಾಪಬಂಧದಿಂದ ಬಿಡುಗಡೆ ಹೊಂದಿದವನು. ಕ್ರಿಸ್ತ ಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ. ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ. ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ. ಅಂತೆಯೇ ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ದೇವರಿಗಾಗಿ ಮಾತ್ರ ಯೇಸುಕ್ರಿಸ್ತರಲ್ಲಿ ಜೀವಿಸುವವರೆಂದೂ ಪರಿಗಣಿಸಿರಿ.

ಕೀರ್ತನೆ: 104:1-2, 5-6, 10, 12-14, 24, 35
ಶ್ಲೋಕ: ನೀ ಉಸಿರನ್ನೂದಲು ಹೊಸದಾಗುವುವು ಪುನಶ್ಚೇತನಗೊಳ್ಳುವುದು ಜಗವೆಲ್ಲವು

ಶುಭಸಂದೇಶ: ಮಾರ್ಕ 16: 1-7


ಸಬ್ಬತ್‍ದಿನ ಕಳೆದದ್ದೇ ಮಗ್ದಲದ ಮರಿಯಳು, ಯಕೋಬನ ತಾಯಿ ಮರಿಯಳು ಮತ್ತು ಸಲೋಮೆ ಯೇಸುವಿನ ಪಾರ್ಥಿವ ಶರೀರಕ್ಕೆ ಲೇಪಿಸಲೆಂದು ಸುಗಂಧ ದ್ರವ್ಯಗಳನ್ನು ಕೊಂಡುಕೊಂಡರು. ಭಾನುವಾರ ಮುಂಜಾನೆ ಬೇಗನೆ ಹೊರಟು ಸೂರ್ಯೋದಯ ಸಮಯಕ್ಕೆ ಸಮಾಧಿಯನ್ನು ತಲುಪಿದರು. “ಸಮಾಧಿಯ ದ್ವಾರಕ್ಕೆ ಮುಚ್ಚಿರುವ ಕಲ್ಲನ್ನು ನಮಗೆ ಉರುಳಿಸಿ ಕೊಡುವವರು ಯಾರು?” ಎಂದು ಅವರು ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಏಕೆಂದರೆ, ಆ ಕಲ್ಲು ಬಹಳ ದೊಡ್ಡದಾಗಿತ್ತು. ತಲೆಯೆತ್ತಿ ನೋಡಿದಾಗ, ಕಲ್ಲು ಪಕ್ಕದಲ್ಲಿ ಬಿದ್ದಿರುವುದನ್ನು ಕಂಡರು. ಸಮಾಧಿಯೊಳಕ್ಕೆ ಪ್ರವೇಶಿಸಿ ನೋಡುವಾಗ, ಬಿಳಿಯ ಬಟ್ಟೆ ಧರಿಸಿದ್ದ ಯುವಕನೊಬ್ಬನು ಅಲ್ಲಿ ಬಲಗಡೆ ಕುಳಿತಿರುವುದನ್ನು ಕಂಡು, ಅವರು ಬೆಚ್ಚಿಬಿದ್ದರು. ಆತನು, “ಭಯಪಡಬೇಡಿ, ಶಿಲುಬೆಗೇರಿಸಿದ್ದ ನಜರೇತಿನ ಯೇಸುವನ್ನು ನೀವು ಹುಡುಕುತ್ತಾ ಇದ್ದೀರೆಂದು ನನಗೆ ತಿಳಿದಿದೆ. ಅವರು ಇಲ್ಲಿಲ್ಲ, ಪುನರುತ್ಥಾನ ಹೊಂದಿದ್ದಾರೆ. ನೋಡಿ, ಇದೇ ಅವರನ್ನು ಇಟ್ಟ ಸ್ಥಳ. ಈಗ ನೀವು ಹೋಗಿ, ಪೇತ್ರನಿಗೂ ಮಿಕ್ಕ ಶಿಷ್ಯರಿಗೂ, ‘ಯೇಸು ನಿಮಗೆ ಮೊದಲೇ ತಿಳಿಸಿದಂತೆ, ನಿಮಗಿಂತ ಮುಂಚಿತವಾಗಿ ಗಲಿಲೇಯಕ್ಕೆ ಹೋಗುವರು. ಅವರನ್ನು ಅಲ್ಲೇ ಕಾಣುವಿರಿ,’ ಎಂದು ತಿಳಿಸಿರಿ,” ಎಂದನು.