ಮೊದಲನೇ ವಾಚನ: ಜ್ಞಾನ ಗ್ರಂಥ 6:1-11
ಅರಸುಗಳೇ, ಕೇಳಿ ತಿಳಿದುಕೊಳ್ಳಿ; ಜಗದ ನ್ಯಾಯಮೂರ್ತಿಗಳೇ, ಅರ್ಥಮಾಡಿಕೊಳ್ಳಿ; ಬಹು ಜನಗಳ ಮೇಲೆ ದೊರೆತನ ಮಾಡುವವರೇ, ಆಲಿಸಿ, ಅನೇಕ ರಾಷ್ಪ್ರಗಳ ಮೇಲೆ ಹೆಚ್ಚಳಪಡುವವರೆ, ಕಿವಿಗೊಡಿ: ನಿಮಗೆ ಒಡೆತನ ದೊರೆತದ್ದು ಸರ್ವೇಶ್ವರನಿಂದ, ನಿಮ್ಮ ಪ್ರಭುತ್ವ ಬಂದುದು ಆ ಮಹೋನ್ನತನಿಂದ ನಿಮ್ಮ ಕಾರ್ಯಗಳನ್ನು ಶೋಧಿಸುವವನು ಆತನೇ, ನಿಮ್ಮ ಸಂಕಲ್ಪಗಳನ್ನು ಪರಿಶೀಲಿಸುವವನು ಆತನೇ, ಆತನ ರಾಜ್ಯದ ರಾಯಭಾರಿಗಳು ನೀವೆಲ್ಲ: ಸರಿಯಾಗಿ ನೀವು ನ್ಯಾಯ ತೀರಿಸಲಿಲ್ಲ, ಆತನ ಆಜ್ಞೆಗಳನ್ನು ಪರಿಪಾಲಿಸಲಿಲ್ಲ ಆ ದೇವರ ಸಂಕಲ್ಪದಂತೆ ನಡೆದುಕೊಳ್ಳಲಿಲ್ಲ. ಆತ ನಿಮ್ಮ ಮೇಲೆರಗುವನು ತ್ವರೆಯಾಗಿ, ಭೀಕರವಾಗಿ ಉನ್ನತ ಸ್ಥಾನದಲ್ಲಿರುವ ನಿಮಗೆ ತೀರ್ಪಿಡುವನು ಕ್ರೂರವಾಗಿ. ದೀನರಿಗೆ ದಯಾಪೂರಿತ ಕ್ಷಮೆ ದೊರಕಬಹುದು ಬಲಾಢ್ಯರಿಗಾದರೋ ಕಠಿಣ ಪರಿಕ್ಷೆ ಕಾದಿರುವುದು. ಸರ್ವರಿಗೂ ದೊರೆಯಾದ ಸರ್ವೇಶ್ವರ ಮುಖ ದಾಕ್ಷಿಣ್ಯ ತೋರುವವನಲ್ಲ ದೊಡ್ಡಸ್ತಿಕೆಯನ್ನು ಗಮನಿಸುವವನಲ್ಲ ಹಿರಿದು ಕಿರಿದುಗಳೆರಡನ್ನು ಮಾಡಿದಾತ, ಎಲ್ಲರನ್ನು ಸಮನಾಗಿ ನೋಡಿಕೊಳ್ಳಬಲ್ಲ. ಆದರೂ ಬಲವಂತರಿಗಾಗುವ ಪರೀಕ್ಷೆ ಇರುವುದು ಕಠಿಣತರವಾಗಿಯೇ. ಎಂದೇ ಅರಸುಕುಮಾರರೇ, ನನ್ನೀ ಬೋಧನೆಗಳೆಲ್ಲ ನಿಮಗಾಗಿಯೇ; ಸುಜ್ಞಾನಿಗಳಾಗಿ, ನೀವು ಸನ್ಮಾರ್ಗ ಬಿಡಬಾರದೆಂದೇ ಇದ ನುಡಿದಿರುವೆ. ಶುದ್ಧಾಚಾರಗಳನ್ನು ಶ್ರದ್ಧೆಯಿಂದ ಪಾಲಿಸಿದರೆ ಪರಿಶುದ್ಧರಾಗುವರು ಅವುಗಳಲ್ಲಿ ಸುಶಿಕ್ಷಿತರಾದವರು ಸರಿಯಾಗಿ ಉತ್ತರಿಸಬಲ್ಲರು. ಆದುದರಿಂದ ನನ್ನೀ ನುಡಿಗಳನು ಬಯಸಿರಿ, ಅವುಗಳಿಗಾಗಿ ಹಂಬಲಿಸಿರಿ; ಆಗ ಸುರಕ್ಷಿತರಾಗುವಿರಿ.
ಕೀರ್ತನೆ: 82:3-4, 6-7
ಶ್ಲೋಕ: ಎದ್ದೇಳು ದೇವಾ, ಸ್ಥಾಪಿಸು ನ್ಯಾಯವನು ಧರೆಯೊಳು
ಶುಭಸಂದೇಶ: ಲೂಕ 17:11-19
ಯೇಸುಸ್ವಾಮಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಸಮಾರಿಯ ಹಾಗೂ ಗಲಿಲೇಯ ಗಡಿಗಳ ನಡುವೆ ಹಾದು ಹೋಗುತ್ತಿದ್ದರು. ಒಂದು ಗ್ರಾಮವನ್ನು ಸಮೀಪಿಸಿದಾಗ ಕುಷ್ಟ ರೋಗದಿಂದ ನರಳುತ್ತಿದ್ದ ಹತ್ತು ಮಂದಿ ಅವರಿಗೆ ಎದುರಾಗಿ ಬಂದರು. ದೂರದಲ್ಲೇ ನಿಂತು, "ಯೇಸುವೇ, ಗುರುವೇ, ನಮ್ಮ ಮೇಲೆ ಕರುಣೆಯಿಡಿ," ಎಂದು ಕೂಗಿ ಕೇಳಿಕೊಂಡರು, ಯೇಸು ಅವರನ್ನು ನೋಡಿ, "ನೀವು ಯಾಜಕರ ಬಳಿಗೆ ಹೋಗಿರಿ. ಅವರು ನಿಮ್ಮನ್ನು ಪರೀಕ್ಷಿಸಲಿ," ಎಂದರು. ಅಂತೆಯೇ, ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣ ಹೊಂದಿದರು. ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನ್ನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು. ಯೇಸುವಿನ ಪಾದಕ್ಕೆ ಸಾಷ್ಟಾಂಗವೆರಗಿ ಕೃತಜ್ಞತೆಯನ್ನು ಸಲ್ಲಿಸಿದನು. ಇವನೋ ಸಮಾರಿಯದವನು! ಆಗ ಯೇಸು, "ಹತ್ತುಮಂದಿ ಗುಣ ಹೊಂದಿದರಲ್ಲವೆ? ಮಿಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನ ಹೊರತು ಬೇರಾರೂ ಬರಲಿಲ್ಲವೇ?" ಎಂದರು. ಆನಂತರ ಆ ಸಮಾರಿಯದವನಿಗೆ, "ಎದ್ದು ಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ ," ಎಂದು ಹೇಳಿದರು.
🌹🌹🙏🙏🙏🙏🙏🌹🌹
ReplyDelete