ಮೊದಲನೆಯ ವಾಚನ: ರೋಮನರಿಗೆ: 11:29-36
ಸಹೋದರರೇ, ದೇವರು ತಾವೇ ನೀಡುವ ವರಗಳನ್ನಾಗಲಿ, ಕೊಡುವ ಕರೆಯನ್ನಾಗಲಿ ಹಿಂತೆಗೆದುಕೊಳ್ಳುವವರಲ್ಲ. ಇಸ್ರಾಯೇಲರಲ್ಲದ ನೀವು ಹಿಂದೊಮ್ಮೆ ದೇವರಿಗೆ ಅವಿಧೇಯರಾಗಿದ್ದಿರಿ. ಆದರೆ ಈಗ ಇಸ್ರಯೇಲರ ಅವಿಧೇಯತೆಯ ನಿಮಿತ್ತ ದೇವರ ದಯೆಯನ್ನು ಹೊಂದಿದ್ದೀರಿ. ಅದೇ ಪ್ರಕಾರ ಅವರು ಈಗ ಅವಿಧೇಯರಾಗಿದ್ದರೂ ನೀವು ಹೊಂದಿದ ಕರುಣೆಯ ನಿಮಿತ್ತ ಅವರು ಕರುಣೆಯನ್ನು ಹೊಂದುವರು. ಏಕೆಂದರೆ, ಸರ್ವರೂ ತಮ್ಮ ಕರುಣೆಯನ್ನು ಸವಿಯುವಂತೆ ದೇವರು ಎಲ್ಲರನ್ನು ಅವಿಧೇಯತೆ ಎಂಬ ಬಂಧನಕ್ಕೆ ಒಳಪಡಿಸಿದ್ದಾರೆ. ದೇವರ ಸಿರಿಸಂಪತ್ತು, ಜ್ಞಾನವಿಜ್ಞಾನ ಎಷ್ಟು ಅಗಾಧ! ಪರಿಶೋಧನೆಗೂ ನಿಲುಕದ ಅವರ ನಿರ್ಣಯ ಎಷ್ಟು ಅಗಮ್ಯ! ಅವರ ನಿಯೋಜನೆಗಳು ಗ್ರಹಿಕೆಗೂ ಎಷ್ಟು ಅಸಾಧ್ಯ! " ಪ್ರಭುವಿನ ಮನಸ್ಸನ್ನು ಅರಿತವರಾರು? ಅವರಿಗೆ ಉಪದೇಶಿಸುವವರಾರು? ಮೊದಲೇ ಅವರ ಬಳಿ ಕೊಟ್ಟಿಟ್ಟವರಾರು? ಹೀಗೆ ಅವರಿಂದ ಪ್ರತಿಫಲ ಪಡೆದವರಾರು? " ಸಮಸ್ತವೂ ಉಂಟಾಗುವುದು ಅವರಿಂದಲೇ ; ಮುಂದುವರೆಯುವುದೂ ಅವರ ಮುಖಾಂತರವೇ; ಇರುವುದೂ ಅವರಿಗೋಸ್ಕರವೇ. ಆ ಪ್ರಭುವಿಗೆ ಯುಗಯುಗಾಂತರಕ್ಕೂ ಸ್ತುತಿಸ್ತೋತ್ರ ಸಲ್ಲಲಿ, ಆಮೆನ್.
ಕೀರ್ತನೆ: 69:30-31,33-34,36-37
ಶ್ಲೋಕ: ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ |
ದೇವಾ, ನಾ ನೊಂದು ಬೆಂದಿಹೆನಯ್ಯಾ|
ಉದ್ಧರಿಸಿ ನನ್ನನ್ನು ಕಾಪಾಡಯ್ಯಾ||
ಸಂಕೀರ್ತಿಸುವೆನು ದೇವರ ಶ್ರೀನಾಮವನು|
ಕೃತಜ್ಞತೆಯಿಂದಾತನನು ಕೊಂಡಾಡುವೆನು||
ಇದನರಿತು ದೀನದಲಿತರು ಆನಂದಗೊಳ್ಳಲಿ|
ದೇವನನು ಅರಸುವವರು ಪುನಶ್ಚೇತನಗೊಳ್ಳಲಿ||
ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು|
ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು||
ರಕ್ಷಿಸುವನು ದೇವನು ಆ ಸಿಯೋನ್ ಪಟ್ಟಣವನು|
ಕಟ್ಟಿಸುವನು ಹೆಹೂದ ನಾಡಿನ ನಗರಗಳನು|
ಸ್ವಂತವಾಗಿರಿಸಿಕೊಂಡರು ಆತನ ಪ್ರಜೆ ಅದನು||
ಅವರ ವಂಶಜರೇ ಬಾಧ್ಯಸ್ಥರಾಗುವರದಕೆ|
ದೇವರ ನಾಮಪ್ರಿಯರೇ ನಿವಾಸಿಗಳು ಅದಕೆ||
ಘೋಷಣೆ ಕೊಲೊಸ್ಸೆಯರಿಗೆ 3:16,17
ಅಲ್ಲೆಲೂಯ, ಅಲ್ಲೆಲೂಯ!
ಕ್ರಿಸ್ತ ಯೇಸುವಿನ ವಾಕ್ಯ ನಿಮ್ಮಲ್ಲಿ ನೆಲಸಿ ಸಮೃದ್ದಿಯಾಗಿ ಬೆಳೆಯಲಿ | ಕೃತಜ್ಞತೆಯುಳ್ಳವರಾಗಿ ಹೃದಯಾಂತರಾಳದಿಂದ ದೇವರಿಗೆ ಹಾಡಿರಿ ||
ಅಲ್ಲೆಲೂಯ!
ಶುಭಸಂದೇಶ: ಲೂಕ 14:12-14
ಆ ಕಾಲದಲ್ಲಿ ತಮ್ಮನ್ನು ಊಟಕ್ಕೆ ಆಮಂತ್ರಿಸಿದವನನ್ನು ನೋಡಿ ಯೇಸು, "ನೀನು ಊಟ ಅಥವಾ ಔತನವನ್ನು ಏರ್ಪಡಿಸುವಾಗ ನಿನ್ನ ಸ್ನೇಹಿತರನ್ನಾಗಲಿ, ಸೋದರರನ್ನಾಗಲಿ, ಬಂಧುಬಳಗದವರನ್ನಾಗಲಿ, ಧನಿಕರಾದ ನೆರೆಯವರನ್ನಾಗಲಿ ಕರೆಯಬೇಡ. ಏಕೆಂದರೆ, ಅವರು ನಿನ್ನನ್ನು ಪ್ರತಿಯಾಗಿ ಕರೆದು ಮುಯ್ಯಿತೀರಿಸಿ ಬಿಡಬಹುದು. ಆದ್ದರಿಂದ ಔತಣವನ್ನು ಏರ್ಪಡಿಸುವಾಗ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂತವರನ್ನು ಕರೆ; ಆಗ ನೀನು ಧನ್ಯನಾಗುವೆ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲು ಇಲ್ಲದವರು. ಸತ್ಪುರುಷರು ಪುನರುತ್ಥಾನ ಹೊಂದುವಾಗ ದೇವರೇ ನಿನಗೆ ಸಲ್ಲಬೇಕಾದುದನ್ನು ಸಲ್ಲಿಸುವರು," ಎಂದರು.
No comments:
Post a Comment