ಮೊದಲನೆಯ ವಾಚನ: ರೋಮನರಿಗೆ 12:5-16
ಸಹೋದರರೇ, ನಾವು ಅನೇಕ ಮಂದಿ ಇದ್ದರೂ ಕ್ರಿಸ್ತ ಯೇಸುವಿನಲ್ಲಿ ನಾವೆಲ್ಲರೂ ಒಂದೇ ದೇಹವಾಗಿದ್ದೇವೆ. ಒಬ್ಬರಿಗೊಬ್ಬರು ದೇಹದ ವಿವಿಧ ಅಂಗಗಳಂತೆ ಹೊಂದಿಕೊಂಡಿದ್ದೇವೆ. ದೇವರು ಅನುಗ್ರಹಿಸಿರುವ ಪ್ರಕಾರ ನಾವು ಬೇರೆ ಬೇರೆ ವರಗಳನ್ನು ಹೊಂದಿದ್ದೇವೆ. ನಾವು ಹೊಂದಿರುವ ವರವು ಪ್ರವಾದನೆಯ ವರವಾಗಿದ್ದರೆ ನಮ್ಮ ವಿಶ್ವಾಸಕ್ಕೆ ಅನುಗುಣವಾಗಿ ಅದನ್ನು ಉಪಯೋಗಿಸಬೇಕು ಸೇವಕನು ಸೇವೆಯಲ್ಲಿಯೂ ಬೋಧಕನು ಬೋಧಿಸುವುದರಲ್ಲಿಯೂ ಉಪದೇಶಕನು ಉಪದೇಶಿಸುವುದರಲ್ಲಿಯೂ ನಿರತನಾಗಿರಲಿ. ದಾನಮಾಡುವವನು ಧಾರಾಳವಾಗಿ ದಾನ ಮಾಡಲಿ. ಅಧಿಕಾರ ನಡೆಸುವವನು ನಿಷ್ಠೆಯಿಂದ ನಡೆಸಲಿ. ಕರುಣಾಪೂರಿತ ಕಾರ್ಯಗಳನ್ನು ಕೈಗೊಳ್ಳುವವನು ಹರ್ಷಚಿತ್ತನಾಗಿರಲಿ. ನಿಮ್ಮ ಪ್ರೀತಿ ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿರಿ. ಒಳ್ಳೆಯದನ್ನು ಕೈಬಿಡದಿರಿ. ಸೋದರಭಾವನೆಯಿಂದ ಒಬ್ಬರನೊಬ್ಬರು ಹೃತ್ಪೂರ್ವಕವಾಗಿ ಪ್ರೀತಿಸಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. ಪ್ರಭುವಿನ ಸೇವೆಯಲ್ಲಿ ಆಲಸಿಗಳಾಗದೆ ಅತ್ಯಾಸಕ್ತರಾಗಿರಿ. ನಂಬಿಕೆ ನಿರೀಕ್ಷೆಯನ್ನು ಹೊಂದಿರುವ ನೀವು ಉಲ್ಲಾಸದಿಂದಿರಿ. ಸಂಕಟ ಬಂದಾಗ ಸಹನೆಯಿಂದಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. ಕೊರತೆಯಲ್ಲಿರುವ ದೇವಜನರಿಗೆ ನೆರವು ನೀಡಿರಿ. ಅತಿಥಿಸತ್ಕಾರದಲ್ಲಿ ತತ್ಪರರಾಗಿರಿ. ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ. ಹೌದು, ಶಪಿಸದೆ ಆಶೀರ್ವದಿಸಿರಿ. ಸಂತೋಷಪಡುವವರೊಂದಿಗೆ ಸಂತೋಷಪಡಿರಿ; ದುಃಖಿಸುವವರೊಡನೆ ದುಃಖಿಸಿರಿ. ನಿಮ್ಮನಿಮ್ಮಲ್ಲಿ ಸಾಮರಸ್ಯವಿರಲಿ. ದೊಡ್ಡಸ್ತಿಕೆಯಿಂದ ವರ್ತಿಸಬೇಡಿ. ದೀನದಲಿತರೊಡನೆ ಗೆಳೆತನ ಬೆಳೆಸಿರಿ. ನೀವೇ ಜಾಣರೆಂದು ಭಾವಿಸದಿರಿ.
ಕೀರ್ತನೆ: 131:1,2,3.V.2
ಶ್ಲೋಕ: ಎಂದೇ ನನ್ನಾತ್ಮ ಸಮಾಧಾನದಿಂದಿದೆ |
ಹಮ್ಮಿಲ್ಲ ಪ್ರಭೂ, ನನ್ನೆದೆಯೊಳು|
ನನಗಿಲ್ಲ ಸೊಕ್ಕಿನ ಕಣ್ಣುಗಳು||
ಶಕ್ತಿಮೀರಿದ ಕಾರ್ಯಕ್ಕೆ ನಾ ಕೈ ಹಾಕಿಲ್ಲ|
ಅಸಾಧ್ಯವಾದುದನು ನಾ ಕೈಗೊಂಡಿಲ್ಲ||
ಎಂದೇ ನನ್ನಾತ್ಮ ಸಮಾಧಾನದಿಂದಿದೆ|
ಮೌನದಿಂದಿದೆ ತಾಯ್ಮಡಿಲ ಕೂಸಂತೆ||
ನೆಮ್ಮದಿಯಿಂದಿದೆ ತಾಯ್ಮಡಿಲ ಕೂಸಂತೆ|
ಇಸ್ರಾಯೇಲೇ, ಪ್ರಭುವಿನಲಿ ನಂಬಿಕೆಯಿಂದಿರು|
ಇಂದಿಗೂ ಎಂದೆಂದಿಗೂ ಭರವಸೆಯಿಂದಿರು||
ಘೋಷಣೆ 1ಥೆಸ್ಸ. 2:13
ಅಲ್ಲೆಲೂಯ, ಅಲ್ಲೆಲೂಯ!
ದೇವರ ಸಂದೇಶವನ್ನು ಮನುಷ್ಯರ ಮಾತುಗಳೆಂದು ಪರಿಗಣಿಸದೆ | ದೇವರ ವಾಕ್ಯವೆಂದೇ ಅರಿತು ಅಂಗೀಕರಿಸಿರಿ ||
ಅಲ್ಲೆಲೂಯ!
ಶುಭಸಂದೇಶ: ಲೂಕ 14:15-24
ಆ ಕಾಲದಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಯೇಸು ಹೇಳಿದ್ದನ್ನು ಕೇಳಿ, "ದೇವರ ಸಾಮ್ರಾಜ್ಯದ ಔತಣದಲ್ಲಿ ಭಾಗಿಯಾಗುವವನು ಎಷ್ಟೋ ಧನ್ಯನು ! " ಎಂದನು. ಯೇಸು ಅವನಿಗೆ ಈ ಸಾಮತಿ ಹೇಳಿದರು: "ಒಬ್ಬಾತ ಒಂದು ದೊಡ್ಡ ಔತಣವನ್ನೇರ್ಪಡಿಸಿ ಅನೇಕ ಜನರಿಗೆ ಆಹ್ವಾನವಿತ್ತ. ಊಟಕ್ಕೆ ವೇಳೆಯಾದಾಗ, 'ಈಗ ಎಲ್ಲಾ ಸಿದ್ದವಾಗಿದೆ ಬನ್ನಿ' ಎಂದು ಹೇಳಿ ಆಹ್ವಾನಿತರನ್ನು ಕರೆದುತರಲು ಸೇವಕರನ್ನು ಕಳಿಸಿದ. ಆದರೆ ಆಹ್ವಾನಿತರೆಲ್ಲರೂ ಒಬ್ಬರಾದ ಮೇಲೊಬ್ಬರು 'ಕ್ಷಮಿಸಬೇಕು' ಎಂದು ಹೇಳಲಾರಂಭಿಸಿದರು. ಒಬ್ಬ, 'ಕ್ಷಮಿಸಬೇಕು, ಒಂದು ಹೊಲ ಕೊಂಡುಕೊಂಡಿದ್ದೇನೆ, ಅಲ್ಲಿಗೆ ಹೋಗಿ ನೋಡಬೇಕಾಗಿದೆ, 'ಎಂದ. ಇಇನ್ನೊಬ್ಬ, 'ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಬೇಕು, ' ಎಂದ. ಮತ್ತೊಬ್ಬ, 'ನನಗೆ ಈಗ ತಾನೆ ಮದುವೆಯಾಗಿದೆ, ಬರುವುದಕ್ಕೆ ಆಗುವುದಿಲ್ಲ, ' ಎಂದನು. ಆ ಸೇವಕನು ಬಂದು ಯಜಮಾನನಿಗೆ ಹಾಗೆಯೇ ವರದಿ ಮಾಡಿದ. ಇದನ್ನು ಕೇಳಿ ಯಜಮಾನನಿಗೆ ರೋಷಬಂದಿತು. ಅವನು ಸೇವಕನಿಗೆ, 'ಪಟ್ಟಣದ ಹಾದಿಬೀದಿಗಳಿಗೂ ಸಂದುಗೊಂದುಗಳಿಗೂ ಹೋಗಿ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆದುಕೊಂಡು ಬಾ, ' ಎಂದು. ಆಜ್ಞೆಮಾಡಿದ. ಸೇವಕನು ಬಂದು, 'ಸ್ವಾಮಿ, ನಿಮ್ಮ ಆಜ್ಞೆಯಂತೆ ಮಾಡಿದ್ದಾಯಿತು; ಆದರೆ ಇನ್ನೂ ಸ್ಥಳವಿದೆ, ' ಎಂದು ಹೇಳಿದ. ಅದಕ್ಕೆ ಯಜಮಾನ 'ಹಾಗದರೆ ಹಳ್ಳಿಹಾದಿಗಳಿಗೂ ಎಲ್ಲೆ ಬೇಲಿಗಳವರೆಗೂ ಹೋಗಿ ಕಂಡಕಂಡವರನ್ನು ಒತ್ತಾಯಮಾಡಿ ಕರೆದುಕೊಂಡು ಬಾ. ನನ್ನ ಮನೆ ತುಂಬಿಹೋಗಲಿ. ಆದರೆ ಮೊದಲು ಆಹ್ವಾನಿತರಾದವರಲ್ಲಿ ಒಬ್ಬನೂ ನಾನು ಮಾಡಿಸಿದ ಅಡುಗೆಯ ರುಚಿ ನೋಡಬಾರದು ! ' ಎಂದು ಸ್ಪಷ್ಟಪಡಿಸಿದ."
No comments:
Post a Comment